ಏಪ್ರಿಲ್ ಫೂಲ್…

Share Button

ಇಂಗ್ಲಿಷ್ ಕ್ಯಾಲೆಂಡರ್ ವರ್ಷದ ಏಪ್ರಿಲ್ ಒಂದನೆಯ ದಿನಾಂಕವನ್ನು ಮೂರ್ಖರ ದಿನವೆಂದು ಕರೆಯುವುದನ್ನು ನಾವೆಲ್ಲರೂ ಕೇಳಿದ್ದೇವೆ. ಪ್ರಪಂಚದ ಅನೇಕ ದೇಶಗಳಲ್ಲಿ ವಿವಿಧ ಜನಾಂಗದವರು ಇದನ್ನು ಆಚರಿಸುತ್ತಾರಂತೆ. ತಮ್ಮ ಪರಿಚಿತರು ಅಥವಾ ಸುತ್ತಮುತ್ತಲಿನ ಆತ್ಮೀಯ ಜನಗಳನ್ನು ಆದಿನ ಬೇಸ್ತು ಬೀಳಿಸಲು ಅನೇಕ ರೀತಿಯ ತಂತ್ರಗಾರಿಕೆಯನ್ನು ಬಳಸಿ ಅವರನ್ನು ಅ ಕ್ಷಣಕ್ಕೆ ಮೂರ್ಖರನ್ನಾಗಿ ಮಾಡಿ ಸಂತೋಷಪಡುತ್ತಾರೆ. ಅವರು ಇವರ ತಂತ್ರಗಾರಿಕೆಯಿಂದ ಬೇಸ್ತು ಬಿದ್ದರೆ ಅವರನ್ನು ಏಪ್ರಿಲ್ ಫೂಲ್ ಎಂದು ಕರೆಯುವುದುಂಟು. ಇದೊಂದು ಸಾಮಾನ್ಯವಾಗಿ ಕಾಲೆಳೆಯುವ ಆಟವಾದರೆ ಸರಿ, ಆಗ ಎಲ್ಲರೂ ಕೆಲವಾರು ಕ್ಷಣಗಳು ಎಲ್ಲರೂ ನಗೆಗಡಲಲ್ಲಿ ಮುಳುಗುವುದೇ ಅಲ್ಲದೆ ಇನ್ನುಳಿದವರನ್ನು ಆ ದಿನ ಸಂಜೆಯೊಳಗೆ ಮತ್ತೇನಾದರೂ ಉಪಾಯಮಾಡಿ ಬೇಸ್ತು ಬೀಳಿಸಲು ಪ್ರಯತ್ನಿಸುವುದುಂಟು. ದಿನವೆಲ್ಲ ಇಂತಹ ಪ್ರಯತ್ನಗಳು ಆರೋಗ್ಯಕರ ಆಟದಂತೆ ಮುಂದುವರೆಯುತ್ತವೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಇಂತಹ ಪ್ರಸಂಗಗಳು ಅತಿರೇಕಕ್ಕೆ ಹೋಗಿ ಕೆಲವು ಅನಾಹುತಗಳಿಗೂ ಕಾರಣವಾಗಬಹುದು. ಆದ್ದರಿಂದ ಅಂತಹ ಅಪಾಯಕರ ತಂತ್ರಗಾರಿಕೆಯ ಪ್ರಯತ್ನಗಳನ್ನು ಮಾಡದಂತೆ ಎಚ್ಚರವಾಗಿರಬೇಕು.

ಏಪ್ರಿಲ್ ಫೂಲ್ ಎಂಬುದು ಹೇಗೆ ಪ್ರಾರಂಭವಾಯಿತು ಎಂಬುದರತ್ತ ಕಣ್ಣು ಹಾಯಿಸೋಣ. 16 ನೆಯ ಶತಮಾನದ ಮಧ್ಯಭಾಗದಲ್ಲಿ ಫ್ರಾನ್ಸ್ ದೇಶದ ರಾಜರಾಗಿದ್ದ 9 ನೆಯ ಲೂಯಿಗಳು ತಮ್ಮ ವಾರ್ಷಿಕ ಕ್ಯಾಲೆಂಡರ್ ಪದ್ಧತಿಯನ್ನು ಗ್ರೆಗೋರಿಯನ್ ಕ್ಯಾಲೆಂಡರ್ ಪದ್ಧತಿಗೆ ಬದಲಾಯಿಸಿ ಜನವರಿ 1 ನೆಯ ದಿನಾಂಕವನ್ನು ವರ್ಷದ ಮೊದಲ ದಿನವಾಗಿ ಪರಿಗಣಿಸಬೇಕೆಂದು ತಮ್ಮ ರಾಜ್ಯದ ಜನತೆಗೆ ಅದೇಶಿಸಿದರು. ಇದಕ್ಕೆ ಮೊದಲು ಏಪ್ರಿಲ್ 1 ನೆಯ ದಿನಾಂಕವನ್ನು ಅವರು ಹೊಸವರ್ಷದ ಮೊದಲನೆಯ ದಿನವಾಗಿಯೂ ಮತ್ತು ಮಾರ್ಚಿ ತಿಂಗಳ 25 ನೆಯ ತಾರೀಕಿನಿಂದ ಪ್ರಾರಂಭವಾಗುವ ವಾರವನ್ನು ಹೊಸವರ್ಷದ ವಾರವೆಂದು ಆಚರಿಸುತ್ತಿದ್ದರು. ಹೊಸ ಬದಲಾವಣೆಯು ರಾಜಾಜ್ಞೆಯಂತೆ ಪಟ್ಟಣಗಳಲ್ಲಿ ಜಾರಿಗೆ ಬಂದರೂ ಇನ್ನೂ ಗ್ರಾಮಾಂತರ ಪ್ರದೇಶಗಳಲ್ಲಿ ಈ ಸುದ್ಧಿ ತಲುಪಿ ಬದಲಾಯಿಸಿದ ಹೊಸ ವರ್ಷಾಚರಣೆ ಜಾರಿಗೆ ಬರಲು ಕೆಲವು ವರ್ಷಗಳೇ ಬೇಕಾಯಿತು. ಕಾರಣ ಜನರು ತಮ್ಮ ಹಳೆಯ ಪದ್ಧತಿಗಳನ್ನು ಬೇಗ ಮರೆಯುವುದಿಲ್ಲ. ಹೀಗೆ ಹಿಂದುಳಿದ ಗ್ರಾಮಾಂತರದ ಜನರು ಇನ್ನೂ ಏಪ್ರಿಲ್ 1 ನೆಯ ದಿನಾಂಕವನ್ನೇ ಹೊಸ ವರ್ಷದ ಆಗಮನವೆಂದು ಆಚರಣೆ ಮಾಡುತ್ತಿದ್ದರು. ಇವರನ್ನು ಕಂಡು ನಗರ ಪ್ರದೇಶದ ಜನರು ಅವರನ್ನು ಏಪ್ರಿಲ್ ಫೂಲ್ಸ್ ಎಂದು ಅಪಹಾಸ್ಯಮಾಡಿ ಆನಂದಿಸುತ್ತಿದ್ದರು.

ಇವರನ್ನು ಹೀಯಾಳಿಸಲೆಂದೇ ಅನೇಕ ರೀತಿಯ ಹಾಸ್ಯ ಪ್ರಸಂಗಗಳನ್ನು ರೂಪಿಸುತ್ತಿದ್ದರು. ಹೀಗೆ ಏಪ್ರಿಲ್ ಮೊದಲ ದಿನ ಫೂಲ್ ಮಾಡುವ ಬಗ್ಗೆ ಸಾವಿರಾರು ಹಾಸ್ಯ ಚಟಾಕಿಗಳು ಹುಟ್ಟಿಕೊಂಡಿವೆ. ಈ ಆಚರಣೆಯು ಆರೋಗ್ಯಕರ ಹಾಸ್ಯಮಯ ಸನ್ನಿವೇಶಗಳನ್ನು ಸೃಷ್ಟಿಸಲು ಪ್ರಪಂಚದ ಇತರ ಹಲವಾರು ದೇಶಗಳಲ್ಲೂ ಪ್ರಚಲಿತವಾಗಿದೆ. ಸ್ಕಾಟ್ಲೆಂಡಿನಲ್ಲಿ ಏಪ್ರಿಲ್ ಮೂರ್ಖರ ದಿನವನ್ನು ಎರಡು ದಿನಗಳ ಕಾಲ ಆಚರಿಸುತ್ತಾರೆ. ಒಟ್ಟಿಗೆ ಒಂದೇಕಡೆ ವಾಸಿಸುವ ಸಹಪಾಠಿಗಳು ತಮ್ಮ ಸ್ನೇಹಿತನನ್ನು ದಿಕ್ಕು ತಪ್ಪಿಸಲು ಅವನ ಗಡಿಯಾರವನ್ನು ಒಂದು ಗಂಟೆ ಹಿಂದಕ್ಕೆ ತಿರುಗಿಸಿ ಇಡುವುದು. ಸ್ನೇಹಿತನ ಉಡುಪಿನ ಬೆನ್ನಮೇಲೆ ನಾನು ಮೂರ್ಖ, ಕಿಕ್ ಮಿ, ಕಿಸ್ ಮಿ ಎಂದು ಬರೆದ ಸ್ಟಿಕರ್ ಅಂಟಿಸಿ ಇತರರು ಅವನನ್ನು ಛೇಡಿಸುವಂತೆ ಮಾಡುವುದು, ಬೆಳಗಿನ ಕಾಫಿಯ ಕಪ್ಪಿನಲ್ಲಿ ಸಕ್ಕರೆಗೆ ಬದಲಾಗಿ ಉಪ್ಪು ಹಾಕಿ ಕೊಡುವುದು, ಅವರ ಊರಿನಿಂದ ಸುಳ್ಳು ಟೆಲಿಗ್ರಾಮ್ ಬಂದಂತೆ ಮಾಡಿ ಮಿತ್ರನನ್ನು ಬೇಸ್ತು ಬೀಳಿಸುವುದು, ಮಿತ್ರರ ಹೆಸರಿಗೆ ಅನಾಮಧೇಯ ಸ್ತ್ರೀಯಿಂದ ಪ್ರೇಮಪತ್ರ ಬರೆದು ಪೇಚಿಕೆ ಸಿಕ್ಕಿಸುವುದು, ಅವರ ದಿನಬಳಕೆಯ ವಸ್ತುಗಳನ್ನು ಆ ದಿನ ಅಡಗಿಸಿಟ್ಟು ದಿನವೆಲ್ಲಾ ವ್ಯರ್ಥ ಹುಡುಕಾಟ ಮಾಡಿಸುವುದು, ಇಂತಹ ಕೆಲವು ಆರೋಗ್ಯಕರ ತಂತ್ರಗಳನ್ನು ಗೆಳೆಯರಕೂಟದಲ್ಲಿ ಉಪಯೋಗಿಸಿ ಅವರನ್ನು ಏಪ್ರಿಲ್ ಫೂಲ್ ಮಾಡುವುದುಸಾಮಾನ್ಯವಾಗಿದೆ.

ಸುದ್ಧಿ ಮಾಧ್ಯಮಗಳೂ ಕೂಡ ಇದೇ ರೀತಿಯ ಕೆಲವು ಉಪಾಯಗಳನ್ನು ಬಳಸಿ ಜನರನ್ನು ಫೂಲ್ ಮಾಡಿದ ಪ್ರಸಂಗಗಳಿವೆ. ಇಂಗ್ಲೆಂಡಿನಲ್ಲಿ ಒಂದು ಡಾಕ್ಯುಮೆಂಟರಿ ಚಿತ್ರ ಪ್ರದರ್ಶನ ಮಾಡಿದರಂತೆ. ಅದರಲ್ಲಿ ತೋಟಗಾರಿಕೆ ಮಾಡುತ್ತಿರುವ ಕೃಷಿಕನೊಬ್ಬನು ಹೊಸದಾಗಿ ಆವಿಷ್ಕರಿಸಿದ ತಂತ್ರಗಾರಿಕೆಯಿಂದ ಗಿಡ ಮರಗಳಿಂದ ನೇರವಾಗಿ ತಿಂಡಿತಿನಿಸುಗಳನ್ನು ಬೆಳೆದು ಅವುಗಳದ್ದೇ ಸುಗ್ಗಿಮಾಡುತ್ತಿರುವಂತೆ ಅಪೂರ್ವವಾದ ಕಾಲ್ಪನಿಕ ದೃಶ್ಯಗಳನ್ನು ತೋರಿಸಿದರಂತೆ. ಕ್ಷಣಕಾಲ ಎಲ್ಲರೂ ಇದೂ ಸಾಧ್ಯವೇ ಎಂದು ತಬ್ಬಿಬ್ಬಾದರಂತೆ.

PC: Internet

ನಮ್ಮ ಮ್ಯಸೂರಿನಲ್ಲಿ ಕೆಲವಾರು ವರ್ಷಗಳ ಹಿಂದೆ ಜಗನ್ಮೋಹನ ಅರಮನೆಯಲ್ಲಿ ಗೊತ್ತುಪಡಿಸಿದ ದಿನಾಂಕದಂದು ಪ್ರಸಿದ್ಧ ನೃತ್ಯ ತಾರೆಯ ಪ್ರದರ್ಶನವೊಂದನ್ನು ಯಾವುದೋ ಒಂದು ಒಳ್ಳೆಯ ಸಹಾಯಾರ್ಥಕ್ಕಾಗಿ ಏರ್ಪಡಿಸಲಾಗಿದೆಯೆಂದು ಹೆಚ್ಚು ಮೊತ್ತದ ಟಿಕೇಟುಗಳನ್ನು ಮುದ್ರಿಸಿ ಸಾವಿರಾರು ಜನರಿಗೆ ಅಬ್ಬರದ ಪ್ರಚಾರದ ಮೂಲಕ ಮಾರಿದ್ದರು. ಗೊತ್ತಾದ ದಿನ ಜಗನ್ಮೋಹನ ಅರಮನೆಯ ಮುಂಭಾಗದಲ್ಲಿ ಟಿಕೇಟು ಕೊಂಡವರ ದೊಡ್ಡ ಗುಂಪೇ ಜಮಾಯಿಸಿತು. ಅಲ್ಲಿ ನ್ರತ್ಯ ಕಾರ್ಯಕ್ರಮದ ಬಗ್ಗೆ ಯಾವುದೇ ಪೋಸ್ಟರಾಗಲೀ, ಪ್ರಚಾರದ ಭಿತ್ತಿ ಚಿತ್ರಗಳಾಗಲೀ ಕಾಣಿಸಲಿಲ್ಲ. ಅನುಮಾನ ಬಂದು ಅರಮನೆಯ ಕಛೇರಿಯಲ್ಲಿ ವಿಚಾರಿಸಿದರು. ಅಲ್ಲಿ ತಿಳಿದು ಬಂದ ಸುದ್ಧಿಯ ಪ್ರಕಾರ ಆದಿನ ಅಲ್ಲಿ ಯಾವ ಪ್ರದರ್ಶನವೂ ಏರ್ಪಾಟಾಗಿರಲಿಲ್ಲ. ಮತ್ತು ಅರಮನೆಯ ಸಭಾಂಗಣವನ್ನು ಯಾರೂ ಬಾಡಿಗೆಗಾಗಿ ಬುಕ್ ಮಾಡಿರಲಿಲ್ಲ. ಟಿಕೆಟ್ ಮಾರಲು ಕಾರಿನಲ್ಲಿ ಸರ್ಕಾರಿ ಕಛೇರಿಗಳಿಗೆ ಬಂದಿದ್ದ ಮಹಾಶಯರ ಸುಳಿವೂ ಇಲ್ಲ. ಆಗ ಅವರೆಲ್ಲರಿಗೆ ಅರಿವಾಗಿದ್ದು ತಾವೆಲ್ಲ ಹಣಕೊಟ್ಟು ಏಪ್ರಿಲ್ ಫೂಲ್ ಗಳಾದೆವೆಂದು. ಅಂತೂ ಆ ಬುದ್ಧಿವಂತ ಮಹಾಶಯ ಸುಲಭವಾಗಿ ದೊಡ್ಡಮೊತ್ತದ ಗಂಟು ಮಾಡಿಕೊಂಡು ಕಾಣೆಯಾಗಿದ್ದ. ಇದು ನನಗೆ ಹೇಗೆ ಗೊತ್ತಾಯಿತೆಂದು ಕೇಳುತ್ತೀರಾ. ಆ ರೀತಿ ಟೋಪಿ ಬಿದ್ದವರಲ್ಲಿ ನಮ್ಮ ಅತ್ತೆಮಾವನವರೂ ಇದ್ದರು. ಅವರಿಗೆ ಟಿಕೆಟ್ ತಂದುಕೊಟ್ಟಿದ್ದವರು ನನ್ನ ಪತಿದೇವರೇ. ಹ್ಹ ಹ್ಹ.

ಬಿ.ಆರ್.ನಾಗರತ್ನ.ಮೈಸೂರು.

11 Responses

  1. Hema says:

    ಹ್ಹಹ್ಹಾ..ಹಣ ಕೊಟ್ಟು ಎಪ್ರಿಲ್ ಫೂಲ್ ಆದವರ ಬಗ್ಗೆ ಮೊದಲ ಬಾರಿ ಕೇಳುತ್ತಿದ್ದೇನೆ.. ನಿರೂಪಣೆ ಎಂದಿನಂತೆ -ಸೂಪರ್.

  2. ಧನ್ಯವಾದಗಳು ಗೆಳತಿ ಹೇಮಾ ಮೇಡಂ

  3. ವಿದ್ಯಾ says:

    ಏಪ್ರಿಲ್ ಬರುವ ಮುಂಚೆಯೇ ನಮ್ಮನ್ನು ನಗೆಸಿದಿರಲ್ಲ,,,,,

  4. ನಯನ ಬಜಕೂಡ್ಲು says:

    ಹ್ಹ ಹ್ಹ ಹ್ಹ, ಇದೊಂದು ರೀತಿ ವಿಭಿನ್ನವಾಗಿದೆ. ಫೂಲ್ ಮಾಡಲು ಹೊಸ ಹೊಸ ಉಪಾಯಗಳನ್ನ ಹುಡುಕುತಿದ್ದೆವು ಸಣ್ಣವರಿರುವಾಗ.

  5. ಧನ್ಯವಾದಗಳು ಸೋದರಿ ವಿದ್ಯಾ

  6. ಧನ್ಯವಾದಗಳು ನಯನ ಮೇಡಂ

  7. Padmini Hegde says:

    ಏಪ್ರಿಲ್‌ ಫೂಲ್‌ ಅಂತ ನಗುವ ಹಾಗೆ ಮಾಡಿದ ಲೇಖನ ಚೆನ್ನಾಗಿದೆ ಮೇಡಂ

  8. ಧನ್ಯವಾದಗಳು ಪದ್ಮಿನಿ ಮೇಡಂ

  9. ಶಂಕರಿ ಶರ್ಮ says:

    ಹಣ ಕೊಟ್ಟು ಫೂಲ್ ಆದುದು ನಿಜಕ್ಕೂ ಶೋಚನೀಯ ಸಂಗತಿ… !! ಲೇಖನ ಚೆನ್ನಾಗಿದೆ ಮೇಡಂ.

  10. ಧನ್ಯವಾದಗಳು ಶಂಕರಿ ಮೇಡಂ

  11. Padma Anand says:

    ಆಚರಣೆ ಹೇಗೆ ಪ್ರಾರಂಭವಾಯಿತೆಂಬ ವಿವರಗಳನ್ನು ನೀಡುತ್ತಲೇ ಏಪ್ರಿಲ್ ಫೂಲ್ ಆದ ಕತೆಯನ್ನು ಲಘು ಹಾಸ್ಯದೊಂದಿಗೆ ತಿಳಿಸಿದ ನಿರೂಪಣೆ ಸೊಗಸಾಗಿದೆ. ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: