ಸೀಮೋಲ್ಲಂಘನ ಮತ್ತು ಸೊಯ್ರಾಬಾಯಿ

Share Button

ಮಾಚ್ ತಿಂಗಳು ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ತಿಂಗಳು. ಪ್ರತ್ತೇಕವಾಗಿ ಮಹಿಳಾ ದಿನಾಚರಣೆ ಎಂದು ಭಾವಿಸದೆ ಭಾರತೀಯ ಮಹಿಳೆಯರು ತಮ್ಮ ಘನ ಅಸ್ತಿತ್ವವನ್ನು ತಮ್ಮದೇ ಆದ ರೀತಿಯಲ್ಲಿ ಎತ್ತಿಹಿಡಿಯುತ್ತಲೇ ಇದ್ದಾರೆ. ಅಂಥ ಸ್ತ್ರೀರತ್ನಗಳಲ್ಲಿ ಮಹಾರಾಷ್ಟ್ರದ ದಲಿತ ಮಹಿಳೆ ಸೊಯ್ರಾಬಾಯಿ. ಅವಳ ಸಾಧನೆಯನ್ನು ಗೌರವಿಸಿದ ಆ ಕಾಲದ ಸಮಾಜ ಅವಳಿಗೆ ಕ್ರಿಶ್ಚಿಯನ್ನರಲ್ಲಿ ಇರುವ ಪದ್ಧತಿಯಂತೆ ಸಂತ ಪದವಿಯನ್ನು ಕೊಟ್ಟು ಸೊಯ್ರಾಬಾಯಿಯನ್ನು ಮರ್ಯಾದಿಸಿದೆ. ಇದು ಅದ್ಭುತವಾದದ್ದು. ಮನುಷ್ಯತ್ವ ತನ್ನ ಘನತೆಯನ್ನು ತಾನೇ ಎತ್ತಿ ಹಿಡಿದ ಪತಾಕೆ!

ಸೀಮೋಲ್ಲಂಘನ ಎಂಬುದು ವ್ಯಾಪಕವಾದ ಅರ್ಥವುಳ್ಳ ಒಂದು ಪರಿಕಲ್ಪನೆ. ದಸರೆಯ ಸಂದರ್ಭದಲ್ಲಿ ಸೀಮೆಯನ್ನು ಉಲ್ಲಂಘಿಸುವುದು ಎಂಬರ್ಥದ ಸೀಮೋಲ್ಲಂಘನದ ಸೂಚಕವಾಗಿ ಬೀಜಗಳನ್ನು ಮೊಳಕೆಯೊಡೆಸುವ ಕ್ರಿಯಾಚರಣೆ ಇದೆ. ಸೀಮೋಲ್ಲಂಘನೆಯ ಸೂಚ್ಯಾರ್ಥ ಸೃಜನಶೀಲತೆ ಎಂದು. ಸೃಜನಶೀಲತೆಯ ಒಂದು ಮುಖ ಸಂಕುಚಿತ ಮನೋಭಾವವನ್ನು ಕಳೆದುಕೊಳ್ಳುವುದು, ತನ್ನ ವಿರೋಧಿ ಪರಿಸರವನ್ನು ಹಿತದ ಭಾವವನ್ನಾಗಿ ರೂಪಾಂತರಿಸಿಕೊಳ್ಳುವುದು. ಇಂತಹ ವ್ಯಕ್ತಿತ್ವದವಳು ಸಂತ ಸೊಯ್ರಾಬಾಯಿ.

ಸೊಯ್ರಾಬಾಯಿ 14 ನೇ ಶತಮಾನದ ಮಹಾರಾಷ್ಟ್ರದ ಮಹರ್ ಪಂಗಡಕ್ಕೆ ಸೇರಿದವಳು. ಈಕೆಯ ಗುರು ಆಕೆಯ ಗಂಡ ಚೋಕಮೇಲ(ಳ). ಇವರು ವಾರಕರಿ ಸಂಪ್ರದಾಯಕ್ಕೆ ಸೇರಿದವರು. ಈ ಸಂಪ್ರದಾಯದವರು ಪ್ರತಿವರ್ಷ ಪಂಡರಾಪುರಕ್ಕೆ ಕಾಲ್ನಡಿಗೆಯಲ್ಲಿ ಯಾತ್ರೆ ಹೋಗುತ್ತಾರೆ. ಹಾಗೆ ಹೋಗುವಾಗ ದೈವಭಕ್ತಿಯ ಭಜನೆಗಳನ್ನು ಹಾಡಿಕೊಳ್ಳುತ್ತಾರೆ. ಸೊಯ್ರಾಬಾಯಿ ಮತ್ತು ಚೋಕಮೇಲ(ಳ) ಪಂಡರಾಪುರದಲ್ಲಿ ದೇವಸ್ಥಾನದ ಹೊರಗೆ ಭಕ್ತಿಯಿಂದ ಭಜನೆ ಮಾಡುತ್ತಾ ಕುಣಿಯುತ್ತಿದ್ದರು ಅದನ್ನೂ ಒಪ್ಪಿಕೊಳ್ಳಲಾಗದ ಸಂಪ್ರದಾಯವಾದಿಗಳಿಂದ ತೊಂದರೆಗೆ ಒಳಗಾಗುತ್ತಿದ್ದರು. ಆದರೂ ಅವರು ತಮ್ಮ ದೈವಶ್ರದ್ಧೆಯನ್ನು ಕಳೆದುಕೊಳ್ಳಲಿಲ್ಲ, ಮನಶ್ಶಾಂತಿಯನ್ನೂ ಕಳೆದುಕೊಳ್ಳಲಿಲ್ಲ.

ಸೊಯ್ರಾಬಾಯಿ ಯಾತ್ರೆಗೆ ಹೋಗುವ ಸಂದರ್ಭದಲ್ಲಿ ಹಾಡಿಕೊಂಡ ರಚನೆಗಳು ಅಭಂಗಗಳ ಪ್ರಕಾರಕ್ಕೆ ಸೇರಿದವುಗಳಾಗಿವೆ. ಆಕೆ ಸಾಕಷ್ಟು ಸಾಹಿತ್ಯ ರಚನೆ ಮಾಡಿದ್ದರೂ ಕೇವಲ 62 ಅಭಂಗಗಳು ಮಾತ್ರ ದೊರೆತಿವೆ. ಆಕೆ ತನ್ನ ಅಭಂಗಗಳಲ್ಲಿ ತನ್ನನ್ನು ಚೋಕಮೇಲನ ಮಹರಿ ಎಂದು ಕರೆದುಕೊಳ್ಳುತ್ತಾಳೆ. ಅದು ಆಕೆಯ ಅಭಂಗಗಳನ್ನು ಗುರುತಿಸಲು ಸಹಕಾರಿಯಾಗುವ ಅಂಕಿತನಾಮವೂ ಆಗಿದೆ. ಸೊಯ್ರಾಬಾಯಿ ತನ್ನ ಅಭಂಗಗಳಲ್ಲಿ ದೇವರು ದಲಿತರನ್ನು ಮರೆತು ಅವರ ಜೀವನವನ್ನು ಕಷ್ಟಕರ ಮಾಡಿದ್ದಾನೆ ಎಂದು ಆಕ್ಷೇಪಿಸಿದ್ದಾಳೆ. ಅಸ್ಪೃಷ್ಯತೆಯ ಬಗ್ಗೆ ತನ್ನ ತಕರಾರನ್ನು ಎತ್ತಿದ್ದಾಳೆ. ಆದರೂ ಆಕೆಯ ದೈವಭಕ್ತಿಗೆ ಯಾವ ಭಂಗವೂ ಇರಲಿಲ್ಲ. ಆಕೆ ತನ್ನ ಅಭಂಗಗಳಲ್ಲಿ ತನ್ನ ಅಚಲವಾದ ದೈವಭಕ್ತಿಯನ್ನೂ ವರ್ಣಿಸಿದ್ದಾಳೆ.

ಸಂತ ಸೊಯ್ರಾಬಾಯಿ. PC: Internet

ಸೊಯ್ರಾಬಾಯಿಯ ದೈವಭಕ್ತಿಯ ಹಿನ್ನೆಲೆಯಲ್ಲಿ ಆತ್ಮ ಸತ್ಯ, ದೇಹ ಮಿಥ್ಯ ಎನ್ನುವ ಅಧ್ಯಾತ್ಮಿಕ ನಿಲುವು ಇದೆ. ಸಾಮಾಜಿಕ ರೂಢಿ ಪದ್ಧತಿಗಳ ಇತಿಮಿತಿಗಳ ಸ್ಪಷ್ಟ ಕಲ್ಪನೆ ಇದೆ. ನಿಜಭಕ್ತಿಯೇ ಅಂತಿಮವಾಗಿ ಮರ್ಯಾದಿತವಾಗುವುದು ಎಂಬ ಬಲವಾದ ನಂಬಿಕೆ ಇದೆ. ಇದಕ್ಕೆ ಪೂರಕವಾಗಿದ್ದದ್ದು ಅವಳ ಕಾಲದಲ್ಲಿ ಪ್ರಚಲಿತವಾಗಿದ್ದ ವಾರಕರಿ ಸಂಪ್ರದಾಯವೇ. ಅದನ್ನು ಒಪ್ಪಿಕೊಂಡವರಿಗೆ ಜಾತಿ ಕುಲ ಇತ್ಯಾದಿ ಯಾವ ಭೇದಭಾವಗಳೂ ಇರುತ್ತಿರಲಿಲ್ಲ.

ಆತ್ಮ ನಿತ್ಯ ಸತ್ಯ, ದೇಹ ತಾತ್ಕಾಲಿಕ ಸತ್ಯ; ಆತ್ಮ ಪರಮಾತ್ಮರ ನಡುವೆ ಯಾವ ಭಿನ್ನತೆಯೂ ಇಲ್ಲ ಎಂದು ನಂಬಿದ್ದ ಸೊಯ್ರಾಬಾಯಿಯ ಸೀಮೋಲ್ಲಂಘನ ವಿಶಿಷ್ಟವಾದದ್ದು. ಸಾಮಾಜಿಕ ವ್ಯವಸ್ಥೆಯಲ್ಲಿ ಇರುವ ಅಸ್ಪೃಶ್ಯತಾ ಮನೋಭಾವದ ಹಿಂದೆ ಇರುವುದು ನಾನು ನೀನು ಬೇರೆ ಬೇರೆ, ನಿನ್ನೊಂದಿಗೆ ನಾನು ಬೆರೆಯಲು ಸಾಧ್ಯವಿಲ್ಲ, ನಾನು ಶ್ರೇಷ್ಠ ನೀನು ಕನಿಷ್ಟ ಎನ್ನುವ ಪ್ರತ್ಯೇಕತಾ ಮನೋಭಾವ. ವಾಸ್ತವವಾಗಿ ಪ್ರತ್ಯೇಕತೆಯ ಆಧಾರ ವೈವಿಧ್ಯತೆ. ಬಣ್ಣದಲ್ಲಿ, ಆಕೃತಿಯಲ್ಲಿ, ದೈಹಿಕ ಮಾನಸಿಕ ಸಾಮರ್ಥ್ಯಗಳೇ ಮೊದಲಾದವುಗಳಲ್ಲಿ ಇರುವ ವಿಭಿನ್ನತೆ. ಆದರೆ ಅವೆಲ್ಲಾ ತಾತ್ಕಾಲಿಕ. ಬದುಕಿನ ಕೊನೆಯಲ್ಲಿ ಏನೂ ಉಳಿಯುವುದಿಲ್ಲ. ಇದನ್ನು ಭಾವಿಸಿ ಸೊಯ್ರಾ ಅಸ್ಪೃಶ್ಯತೆಯ ಹಿಂದಿನ ನಿಕೃಷ್ಟ ಮನೋಭಾವದ ಹಿಂಸೆಯನ್ನು ಮೀರುತ್ತಾಳೆ. ಅದನ್ನು ಅಭಿವ್ಯಕ್ತ ಪಡಿಸುವ ಆಕೆಯ ಅಭಂಗದ ಭಾವಾನುವಾದದ ಶೀರ್ಷಿಕೆ ‘ನಾನು-ನೀನು’:

‘ನಾನು ನೀನು’
ಪಂಡರೀ,
ನನ್ನದು ನಿನ್ನದು ಒಂದೇ ಬಣ್ಣ
ಬಣ್ಣಗಳನ್ನೆಲ್ಲ ನುಂಗಿದ ಕಪ್ಪು ಕಪ್ಪು|
ನನಗೂ ಆಕಾರವಿಲ್ಲ ನಿನಗೂ ಆಕಾರವಿಲ್ಲ
ನಿರಾಕಾರ|
ಇಲ್ಲವಾಗುತ್ತದೆ ದೇಹ
ಶಾಂತವಾಗುತ್ತವೆ ದೇಹಭಾವಗಳು|
ಇಬ್ಬರ ನೋಟ ಒಂದೇ
ನಾನು ನಿನ್ನ ನೋಡುವೆ
ನೀನು ನನ್ನ ನೋಡುವೆ|
ಸೋಯ್ರಾ ಹೇಳುತ್ತಾಳೆ ನೋಡುವವರು ಯಾರು
ನೋಡುವುದಾದರೂ ಏನನ್ನು!


ಕೆಲವರು ಒಬ್ಬರು ಇನ್ನೊಬ್ಬರನ್ನು ಮುಟ್ಟಿದರೆ ಮೈಲಿಗೆ ಆಗುತ್ತದೆ ಎನ್ನುವುದು ಅಸ್ಪೃಶ್ಯಾಚರಣೆಗೆ ಕೊಟ್ಟುಕೊಳ್ಳುವ ಒಂದು ಕಾರಣ. ಅವರು ಮೈಲಿಗೆಯಾದರೆ ದೇಹವನ್ನು ಹೊರಗೆ ತೊಳೆದು ಅಥವಾ ಕೆಲವು ಕ್ರಿಯಾಚರಣೆ ಮಾಡಿ ಶುದ್ಧರಾದೆವು ಎನ್ನುತ್ತಾರೆ. ಹಾಗೆ ಮಾಡದೇ ಇರುವವರು ಅಶುದ್ಧರು, ಅವರೂ ಅಸ್ಪೃಶ್ಯರು ಎನ್ನುತ್ತಾರೆ. ದೇಹದ ಮೂಲಕ ಆಗುವ ಮೈಲಿಗೆಯನ್ನು ಸೋಯ್ರಾ ಗಮನಿಸುವ ರೀತಿ ವಿಭಿನ್ನ. ಆ ವಿಭಿನ್ನತೆಯಲ್ಲಿಯೇ ಅವಳ ಸೀಮೋಲ್ಲಂಘನೆ ಇದೆ. ಯಾವುದೇ ವ್ಯಕ್ತಿ ಹುಟ್ಟುವುದೇ ಮಲಿನ ರಕ್ತದಲ್ಲಿ ಅದ್ದಿದ ಹಾಗೆ. ಎಲ್ಲರ ದೇಹದಲ್ಲೂ ದೇಹಕ್ಕೆ ಬೇಡದ ಕಶ್ಮಲಗಳು ಇದ್ದೇ ಇರುತ್ತವೆ. ಒಳ್ಳೆಯ ಭಾವನೆ, ಚಿಂತನೆ, ಕೆಲಸ ಸಾಧ್ಯ ಆಗುವುದೂ ದೇಹದ ಮೂಲಕವೇ. ದೇಹ ಬೇರೆ ಆತ್ಮ ಬೇರೆ. ದೇಹದ ಮಲಿನತೆ ದೇಹಕ್ಕೆ ಅಂಟಿಕೊಂಡು ಇರುತ್ತದೆಯೇ ವಿನಾ ದೇಹದ ಕಶ್ಮಲ ಆತ್ಮಕ್ಕೆ ತಾಗುವುದೇ ಇಲ್ಲ. ಹೀಗೆ ವಿವೇಚಿಸುವ ಸೊಯ್ರಾಬಾಯಿ ಮಡಿ-ಮೈಲಿಗೆಯ ಭಾವದ ಅಸ್ಪೃಶ್ಯತೆಯ ಸೀಮೋಲ್ಲಂಘನ ಮಾಡುತ್ತಾಳೆ. ಅದನ್ನು ಅಭಿವ್ಯಕ್ತ ಪಡಿಸುವ ಅಭಂಗದ ಭಾವಾನುವಾದದ ಶೀರ್ಷಿಕೆ ‘ಕಶ್ಮಲ-ನಿರ್ಮಲ‘.

ಕಶ್ಮಲ-ನಿರ್ಮಲ
ಅವರು ಹೇಳುತ್ತಾರೆ ದೇಹ ಕೊಳಕು ಆತ್ಮ ನಿಷ್ಕಳಂಕ
ಹುಟ್ಟಿದೆ ಕೊಳಕು ದೇಹದೊಂದಿಗೇ
ಯಾವ ವಿಧಿವಿಧಾನ ಅದ ಸ್ವಚ್ಛಗೊಳಿಸಬಲ್ಲುದು?
ಕೊಳಕು ಒಳಗಿನದು
ದೈವಿಕಭಾವವೂ ಒಳಗಿನದು
ಚೋಕನ ಮಹರಿ ಹೇಳುತ್ತಾಳೆ
ಆಯ್ಕೆ ನಿನ್ನದು
ಹೇಗೆ ಭಾವಿಸುವೆಯೋ ಹಾಗೆ


ಸಾವು ನೋವುಗಳನ್ನು ಭಾವಿಸಿ ಒದ್ದಾಡಿಕೊಳ್ಳುವುದು ಎಲ್ಲರಿಗೂ ಸಹಜ. ಬೇರೆಯವರ ಸಾವು, ನೋವುಗಳನ್ನು ಅರ್ಥೈಸುವವರು ಸಾವು ಎಂದರೆ ಹಳೆಯ ಬಟ್ಟೆಯನ್ನು ಬಿಸುಡಿ ಹೊಸ ಬಟ್ಟೆಯನ್ನು ಧರಿಸುವುದು ಅಷ್ಟೇ! ನೋವು ಎನ್ನುವುದು ಮನಸ್ಸಿಗೆ ಸಂಬಂಧಿಸಿದುದು, ಅದಕ್ಕೆ ಸತ್ಯದ ಬೆಲೆ ಇಲ್ಲ ಎಂದು ಸಾವು ನೋವಿಗೆ ಒದ್ದಾಡುವವರನ್ನು ಕಂಡು ಮರುಕದ ನಗು ಬೀರುತ್ತಾರೆ. ಅದು ಅವರಿಗೇ ಸಂಬಂಧಿಸಿದ ವೈಯಕ್ತಿಕ ಸಂಗತಿ ಆಗಿದ್ದಾಗ ಅದಕ್ಕೆ ವಿಪರೀತ ಬೆಲೆ ಕೊಡುತ್ತಾರೆ. ದುರ್ಬಲರು ಹೀಗೆಲ್ಲಾ ಯಾವ ವ್ಯಾಖ್ಯಾನವನ್ನು ಮಾಡದೆಯೇ ಎಲ್ಲವನ್ನೂ ನುಂಗಿಕೊಂಡು ನಗುತ್ತಿರುತ್ತಾರೆ. ಸತ್ಯ ಸುಳ್ಳಿನ ಜಿಜ್ಞಾಸೆ ಮಾಡುವವರಾಗಲೀ, ಯಾವುದನ್ನೂ ಪ್ರಶ್ನಿಸದೆ ವಿವೇಚಿಸದೆ ಬದುಕುವವರಾಗಲೀ, ನೋವು ಸಂಕಟ ಪೀಡೆಗಳಿಂದ ಸುಮ್ಮನೆ ನಲುಗುವವರಾಗಲೀ ಮರಣದ ಸಮಯದಲ್ಲಿ ದೇವರನ್ನು ನೆನೆಯುವುದೇ ಇಲ್ಲ ಎಂದು ಆಶ್ಚರ್ಯಪಡುತ್ತಾ ರೂಢಿಗತವಾಗಿ ಬದುಕುವುದರ ಸೀಮೋಲ್ಲಂಘನ ಮಾಡುತ್ತಾಳೆ ಸೊಯ್ರಾ. ಇದನ್ನು ಹೇಳುವ ಅಭಂಗದ ಭಾವಾನುವಾದದ ತಲೆಬರಹ ‘ಮರೆಸುವ ನಗೆ‘:

ಮರೆಸುವ ನಗೆ!
ಎಷ್ಟೊಂದು ಸಾವು ಎಷ್ಟೊಂದು ಅಳು!
ಮರೆಸುವ ನಗೆಯಾಡುವರು
ಅದಾರು!
ನೋಡಿದೆ ಅಚ್ಚರಿಗೊಂಡು
ಸುಳ್ಳಿಗಾಗಿ ಒದ್ದಾಡುವುದೇಕೆ!
ಸತ್ಯ ಯಾವುದು
ಯಾರು ಉಳಿದಿದ್ದಾರೆ,
ಯಾರು ಹೊರಟಿದ್ದಾರೆ
ಎಲ್ಲರ ವಿಧಿಯೂ ಒಂದೇ?
ಮರಣವೆ, ದುಃಖವೆ
ನಿರ್ಯೋಚನೆಯ ನಗುವೆ
ಸೊಯ್ರಾ ಹೇಳುತ್ತಾಳೆ: ಇದು ವಿಚಿತ್ರ
ಅವರಲ್ಲಿ ಯಾರೊಬ್ಬರೂ ದೇವರ ನೆನೆಯಲಿಲ್ಲ!


ತಪ್ಪದೇ ಪ್ರತಿವರ್ಷ ಪಂಡರಾಪುರಕ್ಕೆ ಕಾಲ್ನಡಿಗೆಯಲ್ಲಿ ಯಾತ್ರೆ ಹೋಗುತ್ತಿದ್ದ ಸೊಯ್ರಾಬಾಯಿ ಮತ್ತು ಚೋಖಮೇಲ ಅವರಿಗೆ ದೇವಾಲಯದೊಳಕ್ಕೆ ಪ್ರವೇಶ ಇರುತ್ತಿರಲಿಲ್ಲ. ಅದರಿಂದ ಅವರಿಗೆ ಬಹಳ ದುಃಖ ಆಗುತ್ತಿತ್ತು. ಇದನ್ನು ನೋಡಿ ನೋಡಿ ಗರ್ಭಗುಡಿಯಲ್ಲಿ ಇದ್ದ ವಿಠೋಬನಿಗೂ ದುಃಖ ಆಯಿತು. ಅವನು ಸೀದಾ ಅವರ ಗುಡಿಸಲಿಗೇ ಹೋದ. ಅವನ ಜೊತೆಯಲ್ಲಿ ಅವರ ಗುಡಿಸಲನ್ನು ತಳಿರು ತೋರಣಗಳಿಂದ ಅಲಂಕರಿಸುವವರು, ಮನೆಯ ಮುಂದೆ ರಂಗೋಲಿ ಹಾಕುವವರು, ಬಗೆ ಬಗೆಯ ಭಕ್ಷ್ಯಭೋಜ್ಯಗಳಿಂದ ವಿಠೋಬನಿಗೆ ಮತ್ತು ಊರ ಸಮಸ್ತ ಜನರಿಗೆ ಸಂತರ್ಪಣೆ ಏರ್ಪಡಿಸುವವರು. ಎಲ್ಲರೂ ಬಂದರು. ಸೊಯ್ರಾ ಧನ್ಯತೆಯಿಂದ ಚೋಕಮೇಲನಿಗೆ, ಪಂಡರಿಗೆ ಆರತಿ ಬೆಳಗಿದಳು. ಈ ಅಭಂಗದ ಭಾವಾನುವಾದದ ರೀತಿ ಹೀಗಿದೆ:

ಚೋಖ-ಪಂಡರಿ
ಬರಗೊಡಲಿಲ್ಲ ದೇವಳದೊಳಗೆ
ತಡೆದರು ಝಂಕಿಸಿ ಸೊಯ್ರ
ಚೋಖರನು
ನಿಲಗೊಡಲಿಲ್ಲ ಬಾಗಿಲ ಬಳಿಯೂ ಅವರನು
ನಡೆದ ಪಂಡರಿ ಸೊಯ್ರ ಚೋಖರೆಡೆಗೆ
ಬಾಗಿಲ ಕಾಯ್ದರು ಸಿದ್ಧಿ ವೃದ್ಧಿಯರು
ತೂಗಿದವು ತಳಿರು ತೋರಣ ಧ್ವಜಗಳು
ಅರಳಿತು ಬಣ್ಣ ಬಣ್ಣದ ರಂಗೋಲಿ
ಆಯಿತು ದೇವತೆಗಳ ಹರ್ಷವೃಷ್ಟಿ
ನೆರೆಯಿತು ಸರ್ವರ ದಂಡು
ಮೇಲುಂಡು ತಣಿದರು ಸಂತೃಪ್ತಿಗೊಂಡು
ವಿಷ್ಣುಸ್ತುತಿ ಮೊಳಗಿತು
ಜನಸಮೂಹ ತಲೆಬಾಗಿತು
ಬೆಳಗಿದಳು ಆರತಿಯ ಸೊಯ್ರ
ಚೋಖ ಪಂಡರಿಗೆ!


ಇದು ವಿಠೋಬನ ನೇರ ದರ್ಶನವನ್ನು ತನ್ನ ಮನೆಯಲ್ಲಿಯೇ ಪಡೆಯುವ ಸೊಯ್ರಾಬಾಯಿಯ ಸೀಮೋಲ್ಲಂಘನದ ಪರಾಕಾಷ್ಠೆ!

-ಪದ್ಮಿನಿ ಹೆಗಡೆ

9 Responses

  1. ಸೀಮೋಲಂಘನಸೊಯ್ರಾಬಾಯಿ ಪರಿಚಯ..ಮಾರ್ಚ್ ತಿಂಗಳಲ್ಲಿ ಬಂದಿರುವುದು ಸೂಕ್ತ ವಾಗಿದೆ…ಅವರನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು ಪದ್ಮಿನಿ ಮೇಡಂ.

  2. ಮಂಜುರಾಜ್ ಮೈಸೂರು (H N Manjuraj) says:

    ಸೊಯ್ರಾಬಾಯಿಯ ಬಗ್ಗೆ ಗೊತ್ತಿರಲಿಲ್ಲ. ಈ ಬರೆಹದಿಂದ ಅರಿವು ಆಯಿತು. ಪರಿಚಯಿಸಿದ ಪದ್ಮಿನಿ ಹೆಗಡೆ ಅವರಿಗೆ ಧನ್ಯವಾದಗಳು. ಸುರಹೊನ್ನೆಯೂ ಇವರಿಂದಲೇ ನನಗೆ ಪರಿಚಯವಾದದ್ದು. ತುಂಬ ಖುಷಿಯಾಯಿತು.

    ಒಳಿತನ್ನು ಮತ್ತು ಅದರ ಬೆಳಕನ್ನು ಹಂಚುವ ಈ ಕಾಯಕಕೆ ಶುಭವಾಗಲಿ. ವಂದನೆಗಳು.

  3. ನಯನ ಬಜಕೂಡ್ಲು says:

    Nice one

  4. ಎಂ. ಕುಸುಮ says:

    ಸೋಯ್ರಾಬಾಯಿ, ಆಧುನಿಕ ಮೀರಾಬಾಯಿಯಂತೆ ಕಂಡರು. ಬಹಳ ಉನ್ನತ ವ್ಯಕ್ತಿತ್ವ

  5. Padmini Hegde says:

    ಲೇಖನ ಓದಿ ಹೃದಯ ತುಂಬಿ ಸ್ಪಂದಿಸಿದ ಬಿ. ಆರ್. ನಾಗರತ್ನ ಮೇಡಂ ಅವರಿಗೆ, ಮಂಜರಾಜ್‌ ಮೈಸೂರು, ಸರ್ ಅವರಿಗೆ, ನಯನ ಬಜಕೂಡ್ಲು ಮೇಡಂಗೆ, ಎಂ.ಕುಸುಮ ಮೇಡಂಗೆ‌, ಲೇಖನವನ್ನು ಪ್ರೀತಿಯಿಂದ ಪ್ರಕಟಿಸಿದ ಹೇಮಮಾಲಾ ಮೇಡಂ ಅವರಿಗೆ, ಅನಾಮಿಕ ಓದುಗರಿಗೆ ಹೃತ್ಪೂರ್ವಕ ಧನ್ಯವಾದಗಳು!
    ಪದ್ಮಿನಿ ಹೆಗಡೆ

  6. ಶಂಕರಿ ಶರ್ಮ says:

    .ಪರಮಜ್ಞಾನಿಯಾದ ಸೋಯ್ರಾಬಾಯಿಯ ಬಗ್ಗೆ ತಿಳಿದು ಬಹಳ ಸಂತಸವೆನಿಸಿತು. ಮೀರಾಬಾಯಿಯಂತೆ ತನ್ನನ್ನು ತಾನು ಪರಮಾತ್ಮನಿಗೆ ಅರ್ಪಿಸಿಕೊಂಡ ಬಗೆ ನಿಜಕ್ಕೂ ವಂದನೀಯ. ಸೊಗಸಾದ ಮಾಹಿತಿಹೊತ್ತ ಲೇಖನ…ಧನ್ಯವಾದಗಳು ಮೇಡಂ.

  7. SHARANABASAVEHA K M says:

    ಎಷ್ಟೊಂದು ಉದಾತ್ತ ಚಿಂತನೆ…….. ಎಂತಹ ಮಹಿಳಾ‌ಮಣಿ‌ ಇವರು ತಮಗಾಗುವ ಅವಮಾನದ ಆಕ್ರೋಶ ವ್ಯಕ್ತಪಡಿಸಿದ್ದು ಅವನಗೆ ಭಕ್ತಿ ತೋರುವುದರ ಮೂಲಕ. ಅತ್ಯುತ್ತಮ ಬರಹ. ಧನ್ಯವಾದಗಳು ಪದ್ಮಿನಿ ಮೇಡಂ

  8. Padma Anand says:

    ಮಹಿಳಾ ದಿನಾಚರಣೆಯ ಸಂದರ್ಭೋಚಿತ ಲೇಖನ. ಸೋಯ್ರಾಬಾಯಿಯ ಜೀವನಗಾತೆ ಸುಂದರವಾಗಿ ಮೂಡಿಬಂದಿದೆ.

  9. Padmini Hegde says:

    ಶರಣಬಸವೇಶ್ವರ. ಕೆ. ಎಂ.ಸರ್‌ ಅವರ, ಶಂಕರಿ ಶರ್ಮ ಮೇಡಂ ಅವರ, ಪದ್ಮ ಆನಂದ್‌ ಮೇಡಂ ಅವರ ಸಹೃದಯ ಸ್ಪಂದನೆಗೆ ಹೃತ್ಪೂರ್ವಕ ಧನ್ಯವಾದಗಳು!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: