ಸತ್ಯದ ಸತ್ಯಗಳು
ಬೆಳಗು ಆಯಿತು, ದೂರದಿಂದ ಕಿವಿಯ ಮೇಲೆ ಸುಶ್ರಾವ್ಯವಾದ ಧ್ವನಿಯಲ್ಲಿ ‘ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ನಮಃ‘ ಬಿತ್ತು. ಮನ ಪುಳಕಿತವಾಯಿತು. ಗುರುರಾಯರ ನೆನಪು ಬೆಳಿಗ್ಗೆದ್ದ ಕೂಡಲೇ ಆದದ್ದು ಸಂತೋಷ ನೀಡಿತು. ಇದರಲ್ಲಿರುವ ‘ಸತ್ಯ’ ಎನ್ನುವ ಪದ ಮನಸ್ಸನ್ನು ಆವರಿಸಿತು. ಇಡೀ ದಿನ ಮನಸ್ಸು ಈ ಪದವನ್ನೇ ಮೆಲುಕು ಹಾಕಿತು. ಸತ್ಯ ಎಂದರೆ ಏನು? ಸತ್ಯವೆಂದರೆ ನಿಜ. ಸತ್ಯವೆಂದರೆ ಸುಳ್ಳಲ್ಲ. ಅದು ವಾಸ್ತವ ಮತ್ತು ಪ್ರಾಮಾಣಿಕತೆ. ಹೀಗೆಲ್ಲಾ ನಾವು ಹೇಳುತ್ತಾ ಹೋಗಬಹುದು. ಆಂಗ್ಲಭಾಷೆಯಲ್ಲಿ ‘ಟ್ರೂಥ್’ ಎನ್ನುತ್ತಾರೆ. ಸತ್ಯದ ಪ್ರಭಾವ ಪ್ರತಿಯೊಬ್ಬರ ಮೇಲೂ ಇರುತ್ತದೆ. ಸತ್ಯ ನುಡಿಯುವವರು ಒಳ್ಳೆಯವರು ಎನ್ನುವ ನಂಬಿಕೆಯಿದೆ. ಇದರ ವಿರುದ್ಧ ಪದ ಸುಳ್ಳು ಅಥವಾ ಮಿಥ್ಯೆ.
ಸತ್ಯದ ವಿಶಿಷ್ಟತೆಗಳೇನು? ನಮ್ಮ ಪುರಾಣಗಳಲ್ಲಿ, ಪುಣ್ಯಕಥೆಗಳಲ್ಲಿ ಮತ್ತು ಸಾಹಿತ್ಯದಲ್ಲಿ ಸತ್ಯದ ಬಗ್ಗೆ ಕಥೆಗಳಿವೆ. ಸತ್ಯ ಹರಿಶ್ಚಂದ್ರನ ಕಥೆಯನ್ನು ಕೇಳದೆ ಇರುವವರು ಯಾರು? ಅವನ ಕಷ್ಟಗಳನ್ನು ಕೇಳಿ ಕಣ್ಣೀರಿಡದೆ ಇರಲು ಸಾಧ್ಯವೇ? ಆದರೂ ಸತ್ಯವನ್ನೇ ಪರಿಪಾಲಿಸಿದ ಹರಿಶ್ಚಂದ್ರನ ಗುಣವನ್ನು ಮತ್ತು ಮಾನಸಿಕ ದೃಢತೆಯನ್ನು ನಾವು ಮೆಚ್ಚಿಕೊಳ್ಳದೇ ಇರಲು ಸಾಧ್ಯವೇ ಇಲ್ಲ. ಇನ್ನೊಂದು ಪ್ರಸಂಗ ಶಿವನ ಎತ್ತರ ಮತ್ತು ಸುಳ್ಳು ಹೇಳಿದ ಕೇದಗೆಯ ಹೂವು. ಸುಳ್ಳು ಹೇಳಿದ್ದರಿಂದ ಈ ಹೂವನ್ನು ಶಿವನಿಗೆ ಪೂಜೆ ಮಾಡುವುದಿಲ್ಲ. ಪುಣ್ಯಕೋಟಿಯ ಕಥೆಯಲ್ಲಿ ಬರುವ ‘ಸತ್ಯವೇ ನಮ್ಮ ತಾಯಿ ತಂದೆ…..’ ಇದನ್ನು ಗುಣುಗುಣಿಸದೇ ಇರುವವರು ಯಾರೂ ಇಲ್ಲ. ಹಾಗಾದರೆ ಮೊದಲಿನಿಂದ ಸತ್ಯಕ್ಕೆ ಅಗಾಧವಾದ ಬೆಲೆಯಿದೆ ಎಂದಾಯಿತು. ಸತ್ಯ ಯಾವತ್ತೂ, ಯಾವಾಗಲೂ ಬದಲಾಗದೆ ಒಂದೇ ಆಗಿರುತ್ತದೆ. ಆದರೆ ಸುಳ್ಳಿಗೆ ಅನೇಕ ವಿಧಗಳೂ ಮತ್ತು ಬದಲಾವಣೆಗಳೂ ಇರುತ್ತವೆ. ಸತ್ಯಕ್ಕೆ ಒಂದೇ ದಾರಿ, ಸುಳ್ಳಿಗೆ ಹಲವಾರು ದಾರಿಗಳು.
ಎಲ್ಲರೂ ಯಾವಾಗಲೂ ಸತ್ಯವನ್ನೇ ನುಡಿಯುತ್ತಾರೆಯೇ? ಇದು ಬಹಳ ಕಷ್ಟಕರ. ಇಂದಿನ ಕಾಲದಲ್ಲಂತೂ ಯಾರನ್ನೂ ನಂಬುವ ಹಾಗೇ ಇಲ್ಲ. ಎಲ್ಲ ವಿಷಯಗಳಲ್ಲಿಯೂ ಸುಳ್ಳು ಹಾಸುಹೊಕ್ಕಾಗಿರುತ್ತದೆ. ಇದೊಂದು ರೀತಿಯ ವಾಯು ಮಾಲಿನ್ಯದಂತೆ ಎಲ್ಲಾ ಕಡೆಗೂ ಸಲೀಸಾಗಿ ಹರಡುತ್ತದೆ. ಪ್ರಾಮಾಣಿಕತೆಯಿಂದ ಇರುವವರನ್ನು ‘ಸತ್ಯಹರಿಶ್ಚಂದ್ರ’ ಎಂದು ಗೇಲಿ ಮಾಡುತ್ತಾರೆ. ಎಂತಹ ಪರಿಸ್ಥಿತಿ ನೋಡಿ! ಈಗಿನ ಕಾಲದಲ್ಲಿ ‘ದುಡ್ಡೇ ದೊಡ್ಡಪ್ಪ’ನ ಜೊತೆಗೆ ‘ಸುಳ್ಳೇ ದೊಡ್ಡಪ್ಪ‘ ಕೂಡ ಆಗಿದೆ. ಕೆಲವು ಕಡೆ ಯಾರಿಗೂ ತೊಂದರೆಯಾಗದಂತೆ ಕೆಲವರು ಸುಳ್ಳುಗಳನ್ನು ಹೇಳುತ್ತಾರೆ. ಇದನ್ನು ಬಿಳೀಸುಳ್ಳು ಎನ್ನುತ್ತಾರೆ. ಕಪ್ಪುಸುಳ್ಳು ಕೂಡ ಇದೆಯೇನೋ ಗೊತ್ತಿಲ್ಲ, ಕಪ್ಪು ಎಳ್ಳಿರುವುದು ಮಾತ್ರ ಕಂಡಿದ್ದೇನೆ.
ನಮ್ಮ ಕಾಲಮಾನದಲ್ಲಿ ಕೆಲವೇ ಕೆಲವು ವ್ಯಕ್ತಿಗಳು ಸತ್ಯ ನುಡಿಯುತ್ತಿದ್ದವರು. ಮಹಾತ್ಮ ಗಾಂಧೀಜಿಯವರು, ಈ ವಿಷಯದಲ್ಲಿ ಪ್ರಾತಃಸ್ಮರಣೀಯರು. ಅವರ ಆತ್ಮಕಥೆಯ ಹೆಸರೇ ‘ಸತ್ಯದೊಂದಿಗೆ ನನ್ನ ಪ್ರಯೋಗಗಳು’ ಅಂದರೆ “My experiments with truth”.
ಸತ್ಯ ಮತ್ತು ಧರ್ಮ ಇವೆರಡೂ ಜೊತೆಯಾಗಿ ಇರುತ್ತವೆ. ಸುಳ್ಳಿನಲ್ಲಿ ಧರ್ಮವನ್ನು ಕಾಣಲಾಗುವುದಿಲ್ಲ. ಸತ್ಯ ನುಡಿಯುವವರ ನಡೆ ನುಡಿ ನೇರವಾಗಿರುತ್ತದೆ. ನಿಷ್ಠುರವಾಗಿಯೂ ಇರಬಹುದು.
ನಮ್ಮ ಮನಸ್ಸಿನಲ್ಲಿ ಇನ್ನೊಂದು ಪ್ರಶ್ನೆ ಏಳಬಹುದು. ಸತ್ಯವನ್ನೇ ನುಡಿದರೆ ಯಾವಾಗಲೂ ಒಳ್ಳೆಯದಾಗುತ್ತದೆಯೇ? ಒಬ್ಬ ರೋಗಿ ಕಾಯಿಲೆಯಿಂದ ನರಳುತ್ತಿರಬಹುದು. ಸಾವು ಬಂದರೂ ಬರಬಹುದು ಎನ್ನುವ ಸ್ಥಿತಿಯಲ್ಲಿರಬಹುದು. ಆದರೆ ವೈದ್ಯರು ಆ ರೋಗಿಗೆ ಪ್ರತಿದಿನವೂ ಕಾಯಿಲೆ ವಾಸಿಯಾಗುತ್ತದೆಂದು ಭರವಸೆ ನೀಡಿ, ಚಿಕಿತ್ಸೆ ಕೊಟ್ಟಾಗ, ರೋಗಿ ಗುಣಹೊಂದುತ್ತಾನೆ. ಇಲ್ಲಿ ವೈದ್ಯರು ಕಾಯಿಲೆಯ ಗಂಭೀರತೆಯ ಬಗ್ಗೆ ನಿಜ ಹೇಳಿ ರೋಗಿಯನ್ನು ಗಾಬರಿ ಪಡಿಸಿದರೆ, ಖಂಡಿತ ಅದು ವಾಸಿಯಾಗುವುದಿಲ್ಲ. ಆದರೆ ಇದು ಇನ್ನೆಲ್ಲಿಯೂ ಸುಳ್ಳು ಹೇಳಲು ಪ್ರೇರಣೆ ನೀಡಬಾರದು. ಇಲ್ಲಿ ಮಾತ್ರ ಸರಿಯಾಗಬಹುದು.
ಸಂಸ್ಕೃತದಲ್ಲಿ ಒಂದು ಒಳ್ಳೆಯ ಸುಭಾಷಿತ ಇದೆ.
ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್
ನ ಬ್ರೂಯಾತ್ ಸತ್ಯಮಪ್ರಿಯಂ |
ಪ್ರಿಯಂ ಚ ನಾನೃತಂ ಬ್ರೂಯಾತ್
ಏಷ ಧರ್ಮಃ ಸನಾತನಃ |
ಇದರ ಅರ್ಥ ಹೀಗಿದೆ :
ಸತ್ಯವನ್ನೇ ಹೇಳಬೇಕು. ಪ್ರೀತಿಯನ್ನುಂಟುಮಾಡುವ ಮಾತನ್ನೇ ಹೇಳಬೇಕು. ಆದರೆ ಪ್ರಿಯವಲ್ಲದ ಸತ್ಯವನ್ನಾಗಲಿ, ಪ್ರಿಯವಾದ ಸುಳ್ಳನ್ನಾಗಲಿ ಹೇಳಬಾರದು. ಇದು ಬಹಳ ಕಾಲದಿಂದ ಬಂದ ಸಂಪ್ರದಾಯ.
ಕಹಿಯಾಗಿರುವ ಸತ್ಯವನ್ನು ಹೇಳದೇ ಇರುವುದೇ ಒಳ್ಳೆಯದು. ಇಲ್ಲದಿದ್ದಲ್ಲಿ ಹೇಳಿದವರಿಗೂ ಕೇಳಿದವರಿಗೂ ಮುಜುಗರ ತಪ್ಪಿದ್ದಲ್ಲ. ಮನಸ್ಸಿಗೂ ನೋವಾಗಬಹುದು. ಸತ್ಯದ ಬಗ್ಗೆ ಒಂದು ಹೋಲಿಕೆಯನ್ನು ಓದಿದ ನೆನಪು. ಅದೇನೆಂದರೆ ಸತ್ಯ ಒಂದು ಶಸ್ತ್ರ ಚಿಕಿತ್ಸೆಯಂತೆ ಇದರಿಂದ ನೋವಾಗುತ್ತದೆ ನಿಜ. ಆದರೆ ರೋಗವನ್ನು ತೆಗೆದುಹಾಕಿ ವಾಸಿಮಾಡುತ್ತದೆ. ಸುಳ್ಳು ಒಂದು ನೋವು ನಿವಾರಕದಂತೆ. ತಕ್ಷಣಕ್ಕೆ ಸಮಾಧಾನ ನೀಡುತ್ತದೆ. ಆದರೆ ಪರಿಹಾರ ಕೊಡದೆ ಕೇವಲ ಅಡ್ಡಪರಿಣಾಮಗಳೇ ಇರುತ್ತವೆ.
ನಮ್ಮ ತಂದೆಯವರು, ಯಾವಾಗಲಾದರೂ ಸತ್ಯದ ಹಿನ್ನೆಡೆಯಾದಾಗ ಒಂದು ಮಾತನ್ನು ಹೇಳುತ್ತಿದ್ದರು. ‘‘God sees the truth but waits” ಅಂದರೆ ದೇವರು ಸತ್ಯವನ್ನು ಕಂಡರೂ ಸ್ವಲ್ಪ ಕಾದು ನೋಡುತ್ತಾನೆ’ ಎಂದು. ಇದು ರಷ್ಯಾದ ಪ್ರಸಿದ್ಧ ಕತೆಗಾರ ಲಿಯೋ ಟಾಲ್‌ಸ್ಟಾಯ್‌ನ ಮಾತುಗಳು. ತನ್ನ ಒಂದು ಕತೆಗೆ ಇದೇ ಶೀರ್ಷಿಕೆಯನ್ನು ನೀಡಿದ್ದಾನೆ ಟಾಲ್‌ಸ್ಟಾಯ್. ಇಲ್ಲಿ ಕಥಾನಾಯಕನಿಗೆ ಅವನ ತಪ್ಪಿಲ್ಲದಿದ್ದರೂ, ಆಪಾದನೆ ಬಂದು ಜೈಲು ಶಿಕ್ಷೆಯಾಗುತ್ತದೆ. ಆದರೆ ಸ್ವಲ್ಪಕಾಲದ ನಂತರ ಸತ್ಯ ತಿಳಿದು ಬಿಡುಗಡೆಯಾಗುತ್ತದೆ.
ಒಟ್ಟಿನಲ್ಲಿ ಸತ್ಯದ ಹಾದಿ ಮುಳ್ಳಿನ ಹಾದಿ, ಆದರೆ ಶ್ರೇಯಸ್ಸಿನ ಹಾದಿ. ಈ ಹಾದಿಯಲ್ಲಿ ನಡೆಯುವುದು ಒಳ್ಳೆಯದಲ್ಲವೇ? ಎಂದಿಗೂ ಕಡೆಗೆ ಸತ್ಯವೇ ಗೆಲ್ಲುತ್ತದೆ. ‘ಸತ್ಯಮೇವ ಜಯತೇ’!
-ಡಾ.ಎಸ್.ಸುಧಾ
ಸತ್ಯದ ಬಗ್ಗೆ ಲೇಖನ ಮೆಲಕುಹಾಕುವಂತಿದೆ..ಸುಧಾ
ಮೇಡಂ.. ಧನ್ಯವಾದಗಳು
Thanks nagarathna
ನಿಜವಾದ ವಿಷಯ
Thanks Nirmala
ಮಾಹಿತಿಪೂರ್ಣ ಹಾಗೂ ಆಕರ್ಷಕ ಲೇಖನ.
Thanks nayana
ನಾನು ಸುಳ್ಳು ಹೇಳಬೇಕು ಅಂದ್ರೆ ಬಹಳ ಕಷ್ಟ ಪಡ್ತೀನಿ ಸುಧಾ ಅದಕ್ಕೆ ನಾನು ಖಂಡಿತ ವ್ವಾಡಿ ಲೋಕ ವಿರೋಧಿ.
ಸತ್ಯ, ಧರ್ಮಗಳ ಕುರಿತಾದ ಈ ರೀತಿಯ ಲೇಖನಗಳನ್ನು ಆಗಾಗ್ಗೆ ಓದುತ್ತಿದ್ದರೆ, ಮನದಲ್ಲಿ ಮೂಡಬಹುದಾದ ಅಂಕೆ ಶಂಕೆಗಳನ್ನು ದೂರಗೊಳಿಸಿ ಸತ್ಯದ ಪಥದಲ್ಲಿ ನಡೆಯಲು ಮನವನ್ನು ಪ್ರೇರೇಪಿಸುತ್ತವೆ. ಒಳ್ಳೆಯ ಲೇಖನಕ್ಕಾಗಿ ಅಭಿನಂದನೆಗಳು.
ಸತ್ಯವಾಗಿಯೂ ಸತ್ಯಾಸತ್ಯದ ಬಗ್ಗೆ ತಾವು ಬರೆದ ಲೇಖನ ಸೊಗಸಾಗಿದೆ ಮೇಡಂ