ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?

Share Button


ಸ್ತ್ರೀ ಪರ ಲೇಖನಗಳನ್ನು ಬರೆದು ಅವಳ ಮೇಲಾಗುತ್ತಿರುವ ದೌರ್ಜನ್ಯ ಅನ್ಯಾಯಗಳ ಬಗ್ಗೆ ಬರೆಯುವಾಗ ಗೆಳತಿ ಮಂಜುಳಾಕುಮಾರಿ ಈ ವಿಷಯದ ಬಗ್ಗೆ ನನ್ನ ಗಮನ ಸೆಳೆದಳು. ಗಂಡು ಮಕ್ಕಳ ಬಗೆಗಿನ ಪಕ್ಷಪಾತ ಭಾವನೆಯಾಗಲಿ ಮನೆಗೆ ಬಂದ ಸೊಸೆಯ ಮೇಲಿನ ಹಿಂಸಾತ್ಮಕ ಪ್ರವೃತ್ತಿಯಾಗಲಿ ಇವೆಲ್ಲವೂ ಮನೆಗಳಲ್ಲಿ ಬೇರೂರುವುದು ಮನೆಯ ವಾತಾವರಣದಿಂದ ತಾನೆ? ಮಕ್ಕಳು ಕೇಳಿ ಓದಿ ತಿಳಿಯುವುದಕ್ಕಿಂತ ನೋಡಿ ಕಲಿಯುವುದು ಹೆಚ್ಚು. ಮನೆಯಲ್ಲಿನ ಇಂತಹುದೇ ಅನ್ಯಾಯ ದೌರ್ಜನ್ಯಗಳನ್ನು ನೋಡಿ ಅದು ಸಹಜ ಎಂಬ ಭಾವ ಮೂಡುವುದು ಮುಂದೆ ಅದೇ ದೌರ್ಜನ್ಯ  ಅಥವಾ ಅವಮಾನ ಮಾಡುವುದಕ್ಕಾಗಲಿ ಪ್ರಚೋದಿಸುವುದು. ಹಾಗಾಗಿ ತಾಯಂದಿರು ಗಂಡು ಹೆಣ್ಣು ಮಕ್ಕಳ ಮಧ್ಯೆ ಭೇದಭಾವ ತೋರದೆ, ಹೆಣ್ಣು ಮಕ್ಕಳನ್ನು ಪ್ರೀತಿಸುವ, ಮರ್ಯಾದೆ ಕೊಡುವ, ಸಮಾನವಾಗಿ ನೋಡುವ ಮನೋಭಾವವನ್ನು ಗಂಡು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ತುಂಬಿದರೆ ಪ್ರಾಯಶಃ ಮುಂದಿನ ತಲೆಮಾರುಗಳಲ್ಲಿ ಆದರೆ ಈ ಪ್ರವೃತ್ತಿ ತೊಲಗಿ ಶಾಂತಿ ನೆಮ್ಮದಿ ನೆಲೆಸಬಹುದು . ಅಷ್ಟಲ್ಲದೆ ಗಾದೆ ಮಾತು ಸುಳ್ಳಾಗುತ್ತದೆಯೇ “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ “ ಎಂದು?

ಗಂಡು ಮಕ್ಕಳಿಗೆ ಮನೆಯ ಕೆಲಸದಲ್ಲಿ ಸಹಕಾರ ನೀಡುವ ತರಬೇತಿ ನೀಡುವುದು ಮತ್ತು  ತಾಯಿ ಸೋದರಿಯರ ನೋವು ದುಃಖಗಳಿಗೆ ಸ್ಪಂದಿಸಿ ಹೆಗಲಾಗುವ ಗುಣವನ್ನು ಬೆಳೆಸಬೇಕು. ಮುಖ್ಯ ಸಂಸಾರದಲ್ಲಿ ಗಂಡು ಮೇಲು ಹೆಣ್ಣು ಕೀಳು, ಹೆಂಡತಿ ಗಂಡನ ಅಡಿಯಾಳು ಎಂಬ ಸರ್ವಾಧಿಕಾರ ಮನೋಭಾವ ಬೆಳೆಯದಂತೆ ತಿದ್ದಬೇಕು . ಅಕಸ್ಮಾತ್ ಮನೆಯಲ್ಲಿ ಅಂತಹುದೇ ಪರಿಸ್ಥಿತಿ ಇದ್ದರೂ ಅದು ತಪ್ಪು ನೀನು ಹಾಗೆ ನಡೆಯಬಾರದು ಎಂಬ ಬುದ್ದಿಮಾತು ನಾಟುವಂತೆ ಹೇಳಬೇಕು . ಹಾಗಾದಾಗ ಮುಂದೆ ಅವರ ಸಂಸಾರದಲ್ಲಿ ಸಾಮರಸ್ಯ ಸೌಹಾರ್ದತೆಗಳು ನೆಲಸುತ್ತವೆ.

ಹೌದು! ಅವಳ ಮಾತು ನಿಜ ಎನಿಸಿತು ಇದುವರೆಗೆ ಆದದ್ದು ಹೇಗಾದರಾಗಲಿ ಮುಂದಿನ ಜನಾಂಗದಲ್ಲಿ ಒಳ್ಳೆಯ ನಡವಳಿಕೆ ಮೂಡಿಸುವ ನಿಟ್ಟಿನಲ್ಲಿ ಇದು ಸಹಾಯಕ . ಹಾಗೆ ನೋಡಿದರೆ ಇಪ್ಪತ್ತೊಂದನೆಯ ಶತಮಾನ ಹೆಣ್ಣುಮಕ್ಕಳಿಗೆ ಆಶಾದಾಯಕವಾಗಿಯೇ ಹೊರಹೊಮ್ಮಿದೆ . ಸಮಾನ ಶಿಕ್ಷಣ ಹಾಗೂ ಉದ್ಯೋಗದ ಅವಕಾಶದಿಂದಾಗಿ ಪರಿಸ್ಥಿತಿ ಸುಧಾರಿಸುತ್ತಿದೆ. ಸಂಸಾರದ ಬಂಡಿಯಲ್ಲಿ ಗಂಡ ಹೆಂಡತಿ ಇಬ್ಬರೂ ಮುಖ್ಯ ಎನ್ನುವ ಭಾವನೆ, ಬಹುತೇಕ ಕುಟುಂಬಗಳಲ್ಲಿ ಈಗಾಗಲೇ ಅಡಿಯಿಟ್ಟಿದೆ . ಇನ್ನು ಸ್ತ್ರೀಯರಿಗಷ್ಟೇ ಸೀಮಿತ ಎಂದಿದ್ದ ಮನೆ ಅಡಿಗೆ ಕೆಲಸಗಳಲ್ಲಿ ಗಂಡಸರು ಭಾಗವಹಿಸಿ ಜವಾಬ್ದಾರಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಚಿಕ್ಕ ಮಕ್ಕಳನ್ನು ಸುಧಾರಿಸುವುದು ಬರೀ ತಾಯಿಯದಷ್ಟೇ ಹೊಣೆ ಎಂದು ಪರಿಭಾವಿಸಿದ್ದು ಈಗ ಬದಲಾಗಿ ತಂದೆಯೂ ಸಹ ಮಕ್ಕಳ ಬೆಳಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾನೆ. ಇದಕ್ಕೆ ನ್ಯೂಕ್ಲಿಯರ್ ಕುಟುಂಬಗಳೂ ಸ್ವಲ್ಪ ಮಟ್ಟಿಗೆ ಕಾರಣವಾಗಿರಬಹುದು.  ಗಂಡೆಂದರೆ ಸರ್ವಶ್ರೇಷ್ಠನೆಂಬ ವ್ಯಸನ ಸ್ವಲ್ಪ ಸ್ವಲ್ಪವಾಗಿ ಕಡಿಮೆಯಾಗುತ್ತಾ ಬಂದಿದ್ದರೂ ಪೂರ್ಣ ಸಮಾನತೆ ಇನ್ನೂ ಗಗನ ಕುಸುಮವಾಗಿಯೇ ಉಳಿದಿದೆ.

PC: Internet

ಆದರೂ ಈಗಿನ ಕಾಲದ ಅಮ್ಮಂದಿರು ತಮ್ಮ ಬದಲಾದ ದೃಷ್ಟಿಕೋನ ಹಾಗೂ ಪ್ರಗತಿಪರ ಧೋರಣೆಗಳಿಂದಾಗಿ ಈ ಗಂಡು ಹೆಣ್ಣು ಮಕ್ಕಳ ತಾರತಮ್ಯವನ್ನು ತೊಡೆದು ಹಾಕುವಲ್ಲಿ ಕ್ರಮೇಣ ಯಶಸ್ಸು ಕಾಣುತ್ತಿದ್ದಾರೆ ಎಂಬುದು ಉತ್ಪ್ರೇಕ್ಷೆಯ ಮಾತೇನಲ್ಲ . ಹಾಗಾಗಿಯೇ “ಹೆಣ್ಣುಮಕ್ಕಳು ಕಲಿತರೆ ಶಾಲೆಯೊಂದು ತೆರೆದಂತೆ” ಎಂಬ ಮಾತು ನಿಜವಾಗುತ್ತಾ ಬರುತ್ತಿದೆ.  ಹೆಚ್ಚಾದ ಶೈಕ್ಷಣಿಕ ಸೌಲಭ್ಯ ಹಾಗೂ ಮಾಧ್ಯಮಕ್ರಾಂತಿ ವನಿತೆಗೆ ತನ್ನ ಹಕ್ಕುಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಕೊಟ್ಟಿದೆ,ತನ್ನ ಅಸ್ಮಿತೆಯ ಅರಿವು ನೀಡಿದೆ ಹಾಗೂ ಅದನ್ನು ಪಡೆದುಕೊಳ್ಳುವ ಛಲ ಛಾತಿ ನೀಡಿವೆ . ಇದೆಲ್ಲದರ ಹಿಂದೆ ಲಕ್ಷಾಂತರ ತಾಯಂದಿರ ಪ್ರಯತ್ನ ಹಾಗೂ ಶ್ರಮಗಳಿವೆ ಎಂಬುದನ್ನು ಮರೆಯಬಾರದು. ಈ ಸರ್ವವ್ಯಾಪಿ ಸಾಮಾಜಿಕ ಕ್ರಾಂತಿ ಹೊಸ ಮನ್ವಂತರಕ್ಕೆ ನಾಂದಿಯಾಗಲಿ ಎಂಬ ಆಶಯ.

-ಸುಜಾತಾ ರವೀಶ್

4 Responses

  1. ನಯನ ಬಜಕೂಡ್ಲು says:

    Nice one

  2. ಗೊತ್ತಿರುವ ಅಂಶಗಳೇ ಆದರೂ ಅದನ್ನು ಲೇಖನ ದಲ್ಲಿ ಅನಾವರಣಗೊಳಿಸಿರುವ ರೀತಿ ಚೆನ್ನಾಗಿ ಮೂಡಿಬಂದಿದೆ ಸೋದರಿ..

  3. Padma Anand says:

    ಸಮಾಜದಲ್ಲಾದ ಬದಲಾವಣೆಗಳನ್ನು ಗುರುತಿಸುತ್ತಾ ಆಶಾಭಾವವದ ಸದಾಶಯವನ್ನು ಬಿಂಬಿಸುವ ಲೇಖನ.

  4. ಶಂಕರಿ ಶರ್ಮ says:

    ಸಾಮಾಜಿಕ ಕ್ರಾಂತಿಯು ನಿಜಾರ್ಥದಲ್ಲಿ; ಮಹಿಳೆಯು ತನ್ನ ಆಂತರಿಕ ಬಲವನ್ನು ಗುರುತಿಸುವಂತಾಗಲಿ… ಅರ್ಥಪೂರ್ಣ ಬರೆಹ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: