ಮಿಯಾವಾಕಿ – ಒಂದು ಅದ್ಭುತ ವಾಸ್ತವಿಕತೆ

Share Button

ಜಗತ್ತಿನಲ್ಲಿ ಈಗ ಅತಿಯಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಮಾಲಿನ್ಯ, ತಾಪಮಾನ ಏರಿಕೆ, ಜಲದ ಕೊರತೆ ಇತ್ಯಾದಿ. ಇವೆಲ್ಲವೂ ಮಾನವ ನಿರ್ಮಿತ ಸಮಸ್ಯೆಗಳೆಂದರೆ ಅತಿಶಯೋಕ್ತಿ ಎನಿಸದು. ಕೈಗಾರಿಕಾ ಕ್ರಾಂತಿಯಾದಾಗಲಿಂದ ಜಾಗತಿಕ ತಾಪಮಾನ ಒಂದು ಡಿಗ್ರಿ ಸೆಲೇಶಿಯಸ್‌ನಷ್ಟು ಹೆಚ್ಚಾಗಿದೆ. ತಜ್ಞರ ಪ್ರಕಾರ 2040ರ ವೇಳೆಗೆ ಇದು 1.5 ಡಿಗ್ರಿ ಸೆಲೇಶಿಯಸ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ. ಇದು ನಿಜಕ್ಕೂ ಆಘಾತಕಾರಿ. ಇತ್ತೀಚೆಗೆ ವಿಶ್ವಸಂಸ್ಥೆ 117 ದೇಶಗಳ 6000 ನಗರಗಳಲ್ಲಿ ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಿದ್ದಾರೆ. ಅದರ ಪ್ರಕಾರ ಪ್ರಪಂಚದಲ್ಲಿ ಶೇಕಡ 99 ಮಂದಿ ಅತೀ ಹೆಚ್ಚು ಮಾಲಿನ್ಯಕರ ಗಾಳಿಯನ್ನು ಉಸಿರಾಡುತ್ತಿದ್ದಾರೆ. ವಾಯುಮಾಲಿನ್ಯದಿಂದ ಪ್ರತಿವರ್ಷ ಕನಿಷ್ಟ 70 ಲಕ್ಷ ಮಂದಿ ಅಕಾಲಿಕವಾಗಿ ಬಲಿಯಾಗುತ್ತಿದ್ದಾರೆ. ಉತ್ತಮ ಗುಣಮಟ್ಟದ ಗಾಳಿಯಲ್ಲಿ ಘನಮೀಟರ್‌ಗೆ 2.5 ಮೈಕ್ರಾನ್ ಗಾತ್ರದ ಕಣಗಳನ್ನು ಆಧರಿಸಿ ಅದರ ಸಂಖ್ಯೆ 50 ರಷ್ಟಿದ್ದರೆ ಗಾಳಿಯ ಗುಣಮಟ್ಟ ಉತ್ತಮ ಎನ್ನಲಾಗಿದೆ. 401 ರಿಂದ 500 ರವರೆಗೆ ಇದ್ದರೆ ಅತೀ ಅಪಾಯಕಾರಿ. ಅಧ್ಯಯನ ನಡೆಸಿದ 6000 ನಗರಗಳಲ್ಲಿ ಇದು 500 ಕ್ಕೂ ಹೆಚ್ಚಿರುವುದು ನಿಜಕ್ಕೂ ಕಳವಳಕಾರಿ. ಈ ವಾಯುಮಾಲಿನ್ಯವನ್ನು ನಿಯಂತ್ರಿಸಲು ಏಕೈಕ ಮಾರ್ಗವೆಂದರೆ ಅರಣ್ಯೀಕರಣದಿಂದ ಮಾತ್ರ ಸಾಧ್ಯ ಎನ್ನಲಾಗಿದೆ. ಆದ್ದರಿಂದ ಹೆಚ್ಚು-ಹೆಚ್ಚು ಮರ-ಗಿಡಗಳನ್ನು ಬೆಳಸುವುದರಿಂದ ವಾಯು ಮಾಲಿನ್ಯ ನಿಯಂತ್ರಸಬೇಕಾಗಿದೆ.

ಈ ಮೇಲಿನ ಪೀಠಿಕೆಯ ನಂತರ ನಮ್ಮ ಅರಣ್ಯದ ವಿಷಯಕ್ಕೆ ಬಂದರೆ ಅದು ನಿಜಕ್ಕೂ ಕಳವಳಕಾರಿ. ಅರಣ್ಯ ನಾಶಕ್ಕೆ ನಗರೀಕರಣ, ಅರಣ್ಯ ಒತ್ತುವರಿ, ರಾಜಮಾರ್ಗಕ್ಕೆ ಮರಗಳ ಮಾರಣಹೋಮ, ಮರಗಳ ಕಳ್ಳಸಾಗಾಣಿಕೆ, ಪ್ರಕೃತಿ ವಿಕೋಪದಿಂದ ಅರಣ್ಯನಾಶ, ಕಿಡಿಗೇಡಿಗಳಿಂದ ಅಗ್ನಿಸ್ಪರ್ಶ ಇತ್ಯಾದಿಗಳು. ಈ ಕಾರಣಗಳಿಂದ ಅರಣ್ಯಗಳ ಸಂಪತ್ತು ದಿನೇ ದಿನೇ ನಶಿಸಿ ಹೋಗುತ್ತಿರುವುದು ನಿಜಕ್ಕೂ ಕಳವಳ ಹಾಗೂ ಆತಂಕಕಾರಿ ಸಂಗತಿಯಾಗಿದೆ.

ಅರಣ್ಯಗಳ ಉಳಿವಿಗೆ ಶತಮಾನಗಳಿಂದ ಹಲವಾರು ಪ್ರಯತ್ನಗಳು ನಡೆಯುತ್ತಲೇ ಇದೆ. ಪ್ರಸಿದ್ಧ ‘ಚಿಪ್ಕೋ’ ಆಂದೋಲನ (ಮರವನ್ನು ತಬ್ಬುವಿಕೆ) ಮಹಿಳೆಯರಿಂದ ಪ್ರಾರಂಭವಾಗಿದ್ದು ದೇಶಾದ್ಯಂತ ಒಂದು ಪ್ರಬಲವಾದ ಚಳುವಳಿಯಾಗಿ ಏರ್ಪಟ್ಟು ಅರಣ್ಯಗಳ ಬಗ್ಗೆ ಒಂದು ನಿಜವಾದ ಆಸಕ್ತಿ ಜನರಲ್ಲಿ ಮೂಡುವಂತಾಯಿತು. ಇದಲ್ಲದೆ ಬಹಳ ಹಿಂದಿನಿಂದ ಅರಣ್ಯಗಳ ಉಳಿಕೆಗೆ ಹಾಗೂ ಪ್ರಸರಣಕ್ಕೆ ಹಲವಾರು ಪ್ರಯತ್ನಗಳು ನಡೆದಿದೆ. ಬಿಷ್ನೊಯ್, ಭಿಲ್ ಹಾಗೂ ಸ್ವಧ್ಯಾಯಸಿಗಳೆಂಬ ಗ್ರಾಮೀಣ ಸಮಾಜದವರು ತಮ್ಮ ಸ್ಥಳೀಯ ಪರಿಸರವ್ಯೂಹ (Eco system), ನೀರಿನ ಒರತೆಗಳು, ಸಸ್ಯ ಹಾಗೂ ಪ್ರಾಣಿಸಂಪತ್ತುಗಳ (Flora & Fauna)ಗಳ ಉಳಿವನ್ನು ತಮ್ಮ ದಿನ ನಿತ್ಯದ ಒಂದು ಕಾಯಕವನ್ನಾಗಿಸಿ ವೃದ್ಧಿಗೆ ಪ್ರಾಧಾನ್ಯಕೊಡುತ್ತಿದ್ದರು. ಸ್ವಧ್ಯಾಯಸಿಗಳು ಹಲವಾರು ವೃಕ್ಷ ಮಂದಿರ (Tree temple)ಗಳನ್ನು ಹಾಗೂ ನೀರಿನ ಉಳಿವಿಗಾಗಿ ಮತ್ತು ಮಳೆ ಕೊಯ್ಲಿಗಾಗಿ ಸತತ ಪ್ರಯತ್ನಿಸುತ್ತಿದ್ದಾರೆ. ಭಿಲ್ ಸಮಾಜದವರು ತಮ್ಮ ಎಲ್ಲಾ ಶಾಸ್ತ್ರವಿಧಿಗಳನ್ನು ತೋಪು ಅಥವಾ ಅಡವಿಗಳಲ್ಲಿ ಮಾಡಿ ಪ್ರಕೃತಿಗೆ ಭಕ್ತಿ ಸಲ್ಲಿಸುತ್ತಾರೆ. ಇವರ್‍ಯಾರು ವೃಕ್ಷಗಳನ್ನು ಧ್ವಂಸಮಾಡುವ ಕ್ರಿಯೆಗೆ ಹೋಗುವುದಿಲ್ಲ. ಹೀಗೆ ಹಲವಾರು ವರ್ಗದವರು ಪ್ರಕೃತಿಗೆ, ಅರಣ್ಯಕ್ಕೆ, ಜಲ ರಕ್ಷಣೆಗೆ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಇವರೆಲ್ಲ ವೃಕ್ಷವನ್ನು ಪೂಜಿಸುವವರೇ ವಿನಹ ಯಾರು ವೃಕ್ಷಗಳನ್ನು ಕಡಿಯುವ, ನಾಶಮಾಡುವ ಗೋಜಿಗೆ ಹೋಗುವುದಿಲ್ಲ.

ದಕ್ಷಿಣ ಭಾರತದ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಶತಮಾನಗಳಿಂದ ಪ್ರತಿ ಊರಿನಲ್ಲೂ, ಗ್ರಾಮದಲ್ಲೂ ನಿರ್ದಿಷ್ಟ ಜಾಗವನ್ನೂ ಮರಬೆಳಸಿ ‘ದೇವರಕಾಡು‘ ಎಂದು ನಾಮಕರಣ ಮಾಡಿದ್ದಾರೆ. ಇದು ಹಲವಾರು ಎಕರೆಗಳಿರಬಹುದು. ಆಶ್ಚರ್ಯವೆಂದರೆ ಇಂದಿಗೂ ಯಾರೂ ಒಂದು ಒಣಗಿದ ಕಡ್ಡಿಯನ್ನೂ ಸಹ ಈ ಅರಣ್ಯದಲ್ಲಿ ತೆಗೆಯಲಾರರು. ಇದಕ್ಕೆ ಭಯ ಹಾಗೂ ಭಕ್ತಿ ಕಾರಣ ಇರಬಹುದು. ಇದೇ ಪದ್ಧತಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿದೆ. ಇದಕ್ಕೆ ‘ನಾಗಬನ‘ ಎನ್ನುತ್ತಾರೆ. ಈ ಸ್ಥಳದ ಜಾಗದಲ್ಲಿ ದಟ್ಟವಾದ ಅರಣ್ಯವಿದ್ದು ಯಾರೂ ಇದರ ನಾಶಕ್ಕೆ ಕೈ ಹಾಕಿಲ್ಲ. ಇದಕ್ಕೂ ಭಯ ಹಾಗೂ ಭಕ್ತಿ ಕಾರಣವಿರಬಹುದು. ಆದರೆ ಈ ತರಹದ ಪರಿಸರ ಪ್ರಜ್ಞೆ ದೇಶದ ಕೇವಲ ಕೆಲವು ಭಾಗಗಳಿಗೆ ಮಾತ್ರ ಸೀಮಿತವಾಗಿದ್ದು, ಕೇವಲ ಆ ಜಾಗಗಳಲ್ಲಿ ಮಾತ್ರ ವಾತಾವರಣ ತಿಳಿಯಾಗಿರುತ್ತದೆ. ಇದು ದೇಶದ ಎಲ್ಲಾ ಭಾಗಗಳಲ್ಲೂ ಉಂಟಾದರೆ ನಿಜವಾದ ಒಂದು ವಾತಾವರಣದ ಬದಲಾವಣೆ ಸಾಧ್ಯ. ಇದರ ಒಂದು ಪ್ರಯತ್ನವೇ ‘ಮಿಯಾವಾಕಿ’ ಎಂಬ ಕಲ್ಪನೆ ಮತ್ತು ವಾಸ್ತವಿಕತೆ. ನಗರೀಕರಣ, ಉದ್ಯಮೀಕರಣ ಹಾಗೂ ರಾಜಮಾರ್ಗ ((Highways)ಗಳ ನಿರ್ಮಾಣದಿಂದ ಮರಗಳ ಮಾರಣಹೋಮ ದಿನನಿತ್ಯ ನಡೆಯುತ್ತಿದೆ. ಇದನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸುವ ಒಂದು ನವೀನ ವಿಧಾನವೇ ‘ಮಿಯಾವಾಕಿ’ ನಗರ ಅರಣ್ಯ ಕಲ್ಪನೆ ಮತ್ತು ವಾಸ್ತವಿಕತೆ.

ಜಪಾನಿನ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರದ ಪ್ರಾಧ್ಯಾಪಕ ಅಖಿರ ಮಿಯಾವಾಕಿ. ಇವರು ಕಾಡಿನಲ್ಲಿ ಹೋಗುತ್ತಿದ್ದಾಗ ಬಹಳ ಒತ್ತೊತ್ತಾಗಿ ಬೆಳೆದಿರುವ ಮರಗಳನ್ನು ನೋಡಿ ವಿಸ್ಮಿತರಾದರು. ಇಂಥಹ ಕಾಡಿನಲ್ಲಿ ಈ ರೀತಿ ಬೆಳೆಯಬೇಕಾದರೆ ನಗರಗಳಲ್ಲಿ ಏಕೆ ಪ್ರಯತ್ನಿಸಬಾರದು ಎಂಬ ಒಂದು ಅದ್ಭುತ ಆಲೋಚನೆ ಅವರಿಗೆ ಬಂತು. ನಗರಗಳಲ್ಲಿರುವ ‘Black Spot’ ಅನ್ನು ‘Green Spot’ ಆಗಿ ಪರಿವರ್ತಿಸುವ ಒಂದು ಆಲೋಚನೆ ಅವರಿಗೆ ಬಂದಿತು. ಇದರ ಪರಿಣಾಮ ಜಪಾನಿನ ಹಲವಾರು ಕಡೆ ಇದನ್ನು ಪ್ರಯೋಗಿಸಿ ಲಕ್ಷಾಂತರ ಮರ ಬೆಳೆಸಿದ್ದಾರೆ.

ಜಪಾನಿನ ಸಸ್ಯಶಾಸ್ತ್ರದ ಪ್ರಾಧ್ಯಾಪಕ ಅಖಿರ ಮಿಯಾವಾಕಿ

ಕರ್ನಾಟಕದಲ್ಲಿ ಈ ಪ್ರಯೋಗವನ್ನು ಮಂಗಳೂರಿನ ರಾಮಕೃಷ್ಣ ಮಿಶನ್ ನವರು ಮಾಡಿದ್ದಾರೆ. 2019 ರಲ್ಲಿ ಈ ಪ್ರಯೋಗ ಪ್ರಾರಂಭವಾಗಿದೆ. ನಗರದ ಮಧ್ಯಭಾಗದಲ್ಲಿ ಅರ್ಧದಿಂದ ಒಂದು ಎಕರೆ ಜಾಗದಲ್ಲಿ ಈ ಪ್ರಯೋಗ ಮಾಡಲಾಗಿದೆ. ಮೊದಲ ಪ್ರಯೋಗ 18 ಸೆಂಟ್ ಜಾಗದಲ್ಲಿ ೪೦೦ ಮರಗಳ ಸಸಿ ನೆಟ್ಟು ಈಗ ಅದು ನಗರ ಮಧ್ಯಭಾಗದಲ್ಲಿ ಅರಣ್ಯದಂತಾಗಿದೆ. ಪ್ರತಿನಗರಗಳಲ್ಲಿ ಕಾಲು ಎಕರೆಯಿಂದ ಒಂದು ಎಕರೆ ಜಾಗವಿದ್ದರೆ ಈ ‘ಮಿಯಾವಾಕಿ’ ಅರಣ್ಯಗಳನ್ನು ಧಾರಾಳವಾಗಿ ಯಶಸ್ವಿಯಾಗಿ ಮಾಡಬಹುದು. ಒಂದು ಅಂದಾಜಿನಂತೆ ಒಂದು ಎಕರೆಗೆ ಸುಮಾರು 4000 ಮರಗಳನ್ನು ನೆಡಬಹುದು. ನಿತ್ಯ ಹರಿದ್ವರ್ಣ ಕಾಡಾಗಿ ಮಾರ್ಪಡಿಸಬಹುದು.
ಈ ಅರಣ್ಯಗಳಲ್ಲಿ ಸ್ಥಳೀಯವಾಗಿ ಬೆಳೆಯುವ ಯಾವುದೇ ವೃಕ್ಷಗಳನ್ನು ನೆಡಬಹುದು. ಸಾಮಾನ್ಯವಾಗಿ ಶ್ರೀಗಂಧ, ರೆಂಜೆ, ಚಂಪಕ, ಚಿಕ್ಕು, ಮಾವು, ಅಶೋಕ, ತೇಗ, ಬೇವು, ಜಾಮೂನ್, ಪೀಪಲ್ ಸಸಿಗಳನ್ನು ನೆಡಬಹುದು. ಶೇಕಡ 30 ರಿಂದ 40 ರಷ್ಟು ಹಣ್ಣು ಮರಗಳಿದ್ದರೆ ಪಶುಪಕ್ಷಿಗಳಿಗೆ ಉತ್ತಮ ಆಹಾರವಾಗುತ್ತದೆ. ಹೂ-ಗಿಡಗಳಿದ್ದರೆ ದುಂಬಿ, ಚಿಟ್ಟೆ, ಇರುವೆಗಳ ವಾಸಸ್ಥಾನವಾಗಲಿದೆ. ಮಂಗಳೂರಿನ ‘ಮಿಯಾವಾಕಿ’ ನಗರ ಅರಣ್ಯದಲ್ಲಿ 65 ಬಗೆಯ ಗಿಡಗಳು ಮರವಾಗಿ 20 ಕ್ಕೂ ಅಧಿಕ ಪಕ್ಷಿಗಳ ತಾಣವಾಗಿದೆ ಎಂದರೆ ಆಶ್ಚರ್ಯವಲ್ಲವೇ?

ಗಿಡಮರಗಳ ಸಸಿಗಳನ್ನು ನೆಡುವಾಗ ಬೃಹತ್, ಮಧ್ಯಮ ಹಾಗೂ ಸಣ್ಣ ಪ್ರಭೇದಗಳನ್ನು ಆರಿಸಿದರೆ ಅರಣ್ಯ ದಟ್ಟವಾಗಿ ಬಹಳಬೇಗ ರೂಪುಗೊಳ್ಳುತ್ತದೆ. ಮಂಗಳೂರಿನಲ್ಲಿ ರಾಮಕೃಷ್ನ ಮಿಶನ್‌ನವರು ನೂರಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿ ‘ಮಿಯಾವಾಕಿ’ ನಗರ ಅರಣ್ಯವನ್ನು ಮಾಡಿ ಒಂದು ಲಕ್ಷಕ್ಕೂ ಅಧಿಕ ಮರಗಳನ್ನು ಬೆಳೆಸುವ ಗುರು ಹೊಂದಿದ್ದಾರೆ. ಸ್ಥಳೀಯ ಸಸ್ಯ ಪ್ರಭೇದಗಳು ಶೀಘ್ರ ಅರಣ್ಯಕ್ಕೆ ನಾಂದಿಯಾಗುತ್ತದೆ. ‘ಮಿಯಾವಾಕಿ’ ಕೇವಲ ಸರ್ಕಾರದ ಅಥವ ನಗರ ಪಾಲಿಕೆಯ ಜಾಗದಲ್ಲಿ ಮಾಡಬಹುದಾದ ಕಾರ್ಯವಲ್ಲ. ಪ್ರತಿಮನೆಯಲ್ಲೂ ಕೇವಲ 2-3 ಸೆಂಟ್ ಜಾಗವಿದ್ದರೆ ಈ ಅರಣ್ಯವನ್ನು ಬೆಳೆಸಬಹುದು ಉದಾಹರಣೆಗೆ ಕೇವಲ 5 ಸೆಂಟ್ ಜಾಗದಲ್ಲಿ 250 ಮರಗಳನ್ನು ಬೆಳೆಸಿದ ಉದಾಹರಣಗಳಿವೆ.

ಭಾರತದ ಹಲವಾರು ಕಡೆ ‘ಮಿಯಾವಾಕಿ’ ನಗರ ಅರಣ್ಯದ ಒಂದು ಪ್ರಯೋಗ ನಡೆದಿದೆ. ಮಹಾರಾಷ್ಟ್ರದ ನವಮುಂಬಯಿನಲ್ಲಿ 42 ಎಕರೆ ಜಾಗದಲ್ಲಿ ‘ನಿಸರ್ಗ ಉದ್ಯಾನ’ ಎಂಬ ಒಂದು ಸುಂದರ ಅರಣ್ಯ ಸೃಷ್ಟಿಸಲಾಗಿದೆ. ಈ ಜಾಗ ಮೊದಲು ಕಸದ ತೊಟ್ಟಿಯಾಗಿತ್ತು ಎನ್ನುವುದು ಉಲ್ಲೇಖಾರ್ಹ. ಇಲ್ಲಿ 40,000 ಸಸಿಗಳನ್ನು 60 ಪ್ರಭೇದಗಳಿಂದ ಆರಿಸಿ ನೆಡಲಾಗಿದೆ. ‘ಮಿಯಾವಾಕಿ’ ವಿಧಾನ ಸುಮಾರು ವಿಶ್ವದ ಜಪಾನ್‌ನಿಂದ ದಕ್ಷಿಣ ಪೂರ್ವ ಏಷ್ಯಾ, ಬ್ರೆಜಿಲ್ ಹಾಗೂ ಭಾರತದಲ್ಲಿ 1500 ಕ್ಕೂ ಮಿಕ್ಕಿ ನಗರಾರಣ್ಯವನ್ನು ಹೊಂದಿದೆ ಎಂದರೆ ಆಶ್ಚರ್ಯವಲ್ಲವೇ? ಅಲ್ಲದೆ ಭಾರತದ ಕೇರಳದ ತಿರುವನಂತಪುರ, ತಮಿಳುನಾಡಿನ ಚೆನೈ, ತಿರುನಲ್ವೇಲಿ, ತಿರುಚಿ ಹಾಗೂ ಆಂಧ್ರದ ಹೈದರಾಬಾದ್‌ನಲ್ಲೂ ಅಲ್ಲದೆ ತೆಲಂಗಾಣ, ಉತ್ತರ ಪ್ರದೇಶಗಳಲ್ಲೂ ಕೂಡ ‘ಮಿಯಾವಾಕಿ’ ನಗರಾರಣ್ಯ ತಲೆಯೆತ್ತಿದೆ.
‘ಮಿಯಾವಾಕಿ’ ಅರಣ್ಯಕ್ಕೆ ತಗಲುವ ಖರ್ಚು ಅತೀ ಕಡಿಮೆ. ಒಮ್ಮೆ ಗುಂಡಿತೋಡಿ ಒಳ್ಳೆಯ ಮಣ್ಣು, ಗೊಬ್ಬರ ಹಾಕಿ ಮರಗಳ ಸಸಿ ನೆಟ್ಟರೆ ಆಯಿತು. ಸುಮಾರು ಒಂದು ಚದರ ಮೀಟರ್‌ಗೆ ನಾಲ್ಕು ಸಸಿ ನೆಡಬಹುದು. ಹನಿ ನೀರಾವರಿ ಮಾಡಿದರೆ ಅರಣ್ಯ ಬಹುಬೇಗ ಬೆಳೆಯುತ್ತದೆ. ಸುಮಾರು ಮೂರು ವರ್ಷಗಳ ಕಾಲ ಇದರ ಆರೈಕೆಯಾದರೆ ಮುಂದಿನ 25 ವರ್ಷ ಏನೂ ಮಾಡಬೇಕಿಲ್ಲ. ಮರಗಳನ್ನು ಕಡಿದು ಮಾರಿದರೆ ಲಾಭದಾಯಕ ಮತ್ತು ಆ ಸ್ಥಳದಲ್ಲಿ ಹೊಸ ಮರದ ಸಸಿ ನೆಡಬಹುದು.

‘ಮಿಯಾವಾಕಿ’ಯಿಂದ ಅಂತರ್ಜಲ ಏರಿಕೆಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಜೀವ ವೈವಿಧ್ಯ, ಜೈವಿಕ ವೈವಿಧ್ಯತೆ, ಪರಿಸರ ವೈವಿಧ್ಯತೆ ಎಲ್ಲವೂ ಈ ನಗರ ಅರಣ್ಯಗಳಿಂದ ಲಭ್ಯ. ಮರಗಳ ಉದುರಿದ ಎಲೆಗಳೇ ಅದಕ್ಕೆ ಗೊಬ್ಬರವಾದೀತು. ನಗರ ಪ್ರದೇಶದ ಬರಡು ಭೂಮಿಯನ್ನು ಸುಂದರ ಸ್ವಚ್ಛ ಅರಣ್ಯವಾಗಿಸಲು ‘ಮಿಯಾವಾಕಿ’ ಒಂದು ಫಲೋತ್ಪಾದಕ ವಿಧಾನ.

‘ಮಿಯಾವಾಕಿ’ ವಿಧಾನಕ್ಕೆ ನಾಲ್ಕು ಸೂತ್ರಗಳಿವೆ. ಜಾಗದ ಆಯ್ಕೆ, ಗಿಡ, ಮರಗಳ ಆಯ್ಕೆ, ನೀರಿನ ಸೌಲಭ್ಯ, ಹನಿ ನೀರಾವರಿ ಹೆಚ್ಚು ಸೂಕ್ತ. ಗೊಬ್ಬರ ಹಾಗೂ ಸ್ವಲ್ಪ ಕಾಲದ ನಿರ್ವಹಣೆ ಇದಿಷ್ಟನ್ನೂ ಒಂದು ಗೂಡಿಸಿದರೆ ನಗರ ಮಧ್ಯ ಭಾಗದಲ್ಲಿ ಸುಂದರ ಅರಣ್ಯ ಕಲ್ಪನೆ ನನಸಾದೀತು. ಭಾರತ ಎಲ್ಲಾ ನಗರಗಳಲ್ಲೂ ಈ ‘ಮಿಯಾವಾಕಿ’ ನಗರ ಅರಣ್ಯಗಳನ್ನೂ ಪ್ರಾರಂಭಿಸಿದರೆ ಹಲವಾರು ಕೋಟಿ ಮರಗಳನ್ನು ಬೆಳೆಸಿ ಪರಿಸರದ ಈಗಿನ ಹಾಗೂ ಮುಂದಿನ ದುರಂತಗಳನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಬಹುದು. ಆಯಾ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುವ ಹಣ್ಣಿನ, ಹೂವಿನ, ವಾಣಿಜ್ಯ, ಪರಿಸರಸ್ನೇಹಿ ಬೃಹತ್ ಮರಗಳನ್ನು ನೆಡಬಹುದು.

ಮಿಯಾವಾಕಿ ನಗರ ಅರಣ್ಯದಿಂದ ಉಪಯೋಗಗಳು ಹಲವಾರು. ‘ಕಾರ್ಬನ್ ಪ್ರಿಂಟ್ಸ್’ ನಗರ ವಾತಾವರಣದಲ್ಲಿ ಅತ್ಯಧಿಕ. ಇದನ್ನು ಕಡಿಮೆ ಮಾಡಬಹುದು. ಸಾವಿರಾರು ಪಕ್ಷಿ ಸಂಕುಲಕ್ಕೆ ಆಶ್ರಯ ನೀಡಿದಂತಾಗುತ್ತದೆ. ‘ಮಿಯಾವಾಕಿ’ ಜೈವಿಕ ವೈವಿಧ್ಯತೆ, ಪರಿಸರ ವೈವಿಧ್ಯತೆ, ಅನುವಂಶಿಕ ವೈವಿಧತೆಗಳ ಬಲವರ್ಧನೆಗೆ ಸಹಕಾರಿ. ಭೌಗೋಳಿಕ ಜೋಡಣೆ (GEO TAGGING) ನಿಂದ ಮರಗಳ ಬಗ್ಗೆ ಹೆಚ್ಚು ತಿಳಿಯಬಹುದು. ಪ್ರತಿ ಮರಗಳಿಗೆ ವೈಜ್ಞಾನಿಕ ಹಾಗೂ ಸಾಮಾನ್ಯ ಹೆಸರುಗಳನ್ನು ಮರಕ್ಕೆ ಅಂಟಿಸುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಹೆಚ್ಚಿನ ಉಪಯೋಗವಾಗಬಹುದು.

‘ಮಿಯಾವಾಕಿ’ ಅರಣ್ಯಗಳಿಂದ ಭೂಮಿಯನ್ನು ಬೆಚ್ಚಗಿಡುವ ಇಂಗಾಲದ ಡೈ‌ಆಕ್ಸೈಡ್, ಕಾಡು ಪ್ರಾಣಿಗಳ ಉಳಿವು ಕೂಡ ಸಾಧ್ಯ. ಅಲ್ಲದೆ ನೂರಾರು ಜನರಿಗೆ ಉದ್ಯೋಗ ಲಭಿಸುವುದು ಇದರ ಇನ್ನೊಂದು ಪ್ರಮುಖ ಉಪಯೋಗ.

ಭಾರತದಂತಹ ವಿಶಾಲವಾದ ದೇಶದಲ್ಲಿ ಈ ‘ಮಿಯಾವಾಕಿ’ ನಗರ ಅರಣ್ಯದ ವಾಸ್ತವಿಕತೆ ಸುಲಭದ ಮಾತಲ್ಲ. ಇದಕ್ಕೆ ಉತ್ತಮ ಪರಿಹಾರ ಒಂದು ರಾಜಕೀಯ ನಿಷ್ಠೆ ಹಾಗೂ ಸಂಕಲ್ಪ. ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ನಗರ, ಪಟ್ಟಣ, ಗ್ರಾಮದ ಮಿತಿಯಲ್ಲಿ ಇಂತಿಷ್ಟು ‘ಮಿಯಾವಾಕಿ’ ನಗರ ಅರಣ್ಯವನ್ನು ಕಡ್ಡಾಯಗೊಳಿಸಿದರೆ ಈ ಕಾರ್ಯ ಬಹಳ ಸುಗಮ. ಇದಕ್ಕೆ ಕಾನೂನಿನ ಒಂದು ಚೌಕಟ್ಟು ಇದ್ದರೆ ಇವುಗಳನ್ನು ಜಾರಿಗೊಳಿಸುವುದು ಬಹಳ ಸುಲಭ.

ಒಟ್ಟಿನಲ್ಲಿ ‘ಮಿಯಾವಾಕಿ’ ನಗರ ಅರಣ್ಯ ಒಂದು ಕಲ್ಪನೆ (Concept)ಯನ್ನೂ ವಾಸ್ತವಿಕತೆ (Reality) ಆಗಿ ನಮ್ಮ ಭಾರತದಲ್ಲಿ ನೋಡುವ ಭಾಗ್ಯ ಬೇಗ ಬರಲಿ ಎಂದು ಆಶಿಸೋಣವೇ?

-ಕೆ.ರಮೇಶ್, ಮೈಸೂರು

9 Responses

  1. ಉತ್ತಮ ಗುಣಮಟ್ಟದ ಲೇಖನಕೊಟ್ಟಿದಕ್ಕಾಗಿ ಧನ್ಯವಾದಗಳು ಸಾರ್.

  2. ನಯನ ಬಜಕೂಡ್ಲು says:

    ಮಾಹಿತಿಪೂರ್ಣ

  3. ಮಿಯವಾಗಿ ಅರಣ್ಯದ ಬಗ್ಗೆ ಬಂದಿರುವ ಬರಹ ಸೊಗಸಾಗಿದೆ ಇಂತಹ ಅರಣ್ಯಗಳು ನಮ್ಮಲ್ಲೂ ಬೇಗನೆ ಬರಲಿ ಎಂದು ಆಶಿಸು ವ

  4. Padmini Hegde says:

    ಗಮನಾರ್ಹ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: