ಸ್ಕಂದ ಷಷ್ಠಿ

Share Button

ಕಾರ್ತೀಕ ಮಾಸ ಕಳೆದು ಮಾರ್ಗಶಿರ ಮಾಸ ಆರಂಭವಾಯಿತೆಂದರೆ ಮೊದಲ ಆರನೆಯದಿನ ಆಚರಿಸುವ ಹಬ್ಬವೇ ಚಂಪಾ ಷಷ್ಠಿ.

ಶ್ರೀ ಜುಷ್ಟಃ ಪಂಚಮೀಂ ಸ್ಕಂದಸ್ತಸ್ಮಾಚ್ಛ್ರೀ ಪಂಚಮಿ ಸ್ಮೃತಾ / ಷಷ್ಠ್ಯಾಂ ಕೃತಾರ್ಥೊಭೂದ್ಯಸ್ತಸ್ಮಾತ್ ಷಷ್ಠಿ ಮಹಾತಿಥಿಃ//”. ಸ್ಕಂದನು ದೇವಸೇನೆಯನ್ನು ವಿವಾಹಮಾಡಿಕೊಂಡು ಶ್ರೀ ಯೋಗವನ್ನು ಪಡೆದ ದಿವಸ ಶ್ರೀ ಪಂಚಮಿ….ಹಾಗೇ ತಾರಕಾಸುರನನ್ನು ಸಂಹಾರ ಮಾಡಿ ಜಗತ್ತಿಗೆ ಶುಭದಿನವನ್ನು ತಂದು ಕೃತಕೃತ್ಯನಾದ ದಿನ ಈ ಷಷ್ಠಿ. ಆದುದರಿಂದ ಇವೆರಡೂ ಸ್ಕಂದನಿಗೆ ಪ್ರಿಯವಾದ ಮಹಾ ತಿಥಿಗಳು ಎಂದು ಶ್ರೀಮನ್ಮಹಾಭಾರತವು ತಿಳಿಸುತ್ತದೆ.

ಮಾರ್ಗಶಿರ ಮಾಸದ ಶುಕ್ಲಪಕ್ಷದ ಷಷ್ಠಿ ತಿಥಿಯಂದು ಆಚರಿಸಬೇಕಾದ ಹಬ್ಬವಿದು. ಷಷ್ಠಿ ತಿಥಿಗೆ ಅದರ ಹಿಂದಿನ ತಿಥಿ ಪಂಚಮಿಯ ವೇಧೆ ಇದ್ದರೆ ಶ್ರೇಷ್ಠವೇ…”ಕೃಷ್ಣಾಷ್ಟಮೀ ಸ್ಕಂದ ಷಷ್ಠಿ ಶಿವರಾತ್ರಿಶ್ಚತುರ್ದಶಿ / ಏತಾಃ ಪೂರ್ವಯುತಾಃ ಕಾರ್ಯಾಃ ತಿಥ್ಯನ್ತೇ ಪಾರಣಂ ಭವೇತ್ /” ಇದು ಒಂದು ಭೃಗುಮಹರ್ಷಿಗಳ ವಚನ.  ಹಾಗಾಗಿ ಹಿಂದಿನ ತಿಥಿಯ ವೇಧೆಯೇ ಇದಕ್ಕೆ ಪ್ರಶಸ್ತ. ಆ ದಿವಸವಂತೂ ಭಾನುವಾರ ಮತ್ತು ವೈಧೃತಿಯ ಸಂಯೋಗ ಇದ್ದರೆ ಇನ್ನೂ ವಿಶೇಷ. ಆಗ ಈ ಪರ್ವವನ್ನು ಚಂಪಾಷಷ್ಠಿ ಎಂದು ಕರೆಯುವರು.  ಆದರೆ ಚಂಪಾ ಷಷ್ಠಿಗೆ ಪಂಚಮಿಯ ವೇಧೆ ಅಥವಾ ಸಪ್ತಮಿಯ ವೇಧೆ ಎರಡೂ ಕೂಡಾ ಯೋಗವಶದಿಂದ ಆಗಬಹುದು. (ವೈಧೃತಿ ಎಂದರೆ ಪಂಚಾಂಗವು ಹೇಳಲ್ಪಡುವ ಒಂದು ಯೋಗ.)

ಜ್ಞಾನ ಶಕ್ತಿ, ಸ್ಕಂದ, ಅಗ್ನಿಜಾತ, ಸೌರಭೇಯ,ಗಾಂಗೇಯ, ಶರವಣೋದ್ಭವ, ಕಾರ್ತೀಕೇಯ, ಕುಮಾರ, ಷಣ್ಮುಖ, ತಾರಕಾರಿ, ಸೇನಾನೀ, ಗುಹ, ಬ್ರಹ್ಮಚಾರಿ, ದೇಶಿಕ, ಕ್ರೌಂಚಭೇಧನ, ಶಿಖಿವಾಹನ ಮತ್ತು ವೇಲಾಯುಧ ಎಂಬೆಲ್ಲಾ ಸುಬ್ರಹ್ಮಣ್ಯ ಮೂರ್ತಿಬೇಧಗಳನ್ನು ‘ ಶೈವಾಗಮಶೇಖರ’ ಗ್ರಂಥವು ಹೇಳುತ್ತದೆ. (ಶ್ರೀ ಶಂಕರಭಗವತ್ಪಾದರು ಶೈವ, ವೈಷ್ಣವ, ಶಾಕ್ಯ, ಸೌರ, ಗಾಣಾಪತ್ಯ ಮತ್ತು ಸ್ಕಂದ ಎಂಬ ಆರು ದರ್ಶನಗಳನ್ನು ವೈದಿಕ ಭಕ್ತಿದರ್ಶನಗಳೆಂದು ಪುನರುದ್ಧಾರ ಮಾಡಿದರೆಂದು ಹೇಳುತ್ತಾರೆ).

ನಾಗದವರ ರೂಪಿಯಾದ ಸುಬ್ರಹ್ಮಣ್ಯನನ್ನು ಪಂಚಮಿ ಅಥವಾ ಎರಡೂ ದಿನಗಳಲ್ಲಿಯೂ ಆಚರಿಸುವುದುಂಟು.  ಸ್ವಾಮಿಯ ಆವಾಹನೆಮಾಡಿ ಹಾಲಿನಿಂದ ಅಭಿಷೇಕ ಮಾಡಿ, ಪಾಯಸಾದಿಗಳನ್ನು ನೀವೇದನೆಮಾಡಿ, ಅಂದು ಏಕಭುಕ್ತ ಅಥವಾ ಉಪವಾಸವನ್ನು ಆಚರಿಸುತ್ತಾರೆ. ಅಂದು ಬೇಯಿಸಿದ, ಕರಿದ,ಉಪ್ಪು ಹಾಕಿದ  ಪದಾರ್ಥಗಳು ನಿಷಿದ್ಧ. ಏಕೆಂದರೆ ಅಗ್ನಿಯ ಶಾಖದ ಸ್ಪರ್ಶ ನಾಗನಿಗೆ ಆಗದು. ತಂಪಾದ, ಸಿಹಿಯಾದ ನೈವೇದ್ಯ ಇಷ್ಟವಾಗುತ್ತದೆ. ತುಂಬಾ ಮಡಿವಂತಿಕೆಯನ್ನು ಅಪೇಕ್ಷಿಸುವ ಹಬ್ಬ ಇದಾಗಿದೆ. ಅಶುಚಿಯ ಸ್ಪರ್ಶವೂ ಇರಬಾರದು.

ಗಣೇಶನ ಪೂಜಾಕಲ್ಪದಲ್ಲಿ 21 ರ ಸಂಖ್ಯೆಗೆ ವಿಶೇಷವಿದ್ದಂತೆ 6  ಎಂಬ ಸಂಖ್ಯೆಗೂ ಪ್ರಧಾನವಿದೆ.  ಪೂಜಿಸುವ ತಿಥಿ ಷಷ್ಠಿ, ಮುಖವೂ ಆರು,ಶಕ್ತಿಗಳು ಆರು,ಅವುಗಳಲ್ಲಿ ಮುಖ್ಯವಾದ ಶಕ್ತಿಗೆ ಷಷ್ಠಿ,  ಅವನಿಗೆ ಪ್ರಿಯವಾದ ನಾದ ಷಷ್ಠೀನಾದ, (ಅದಕ್ಕೆ ಷಣ್ಮುಖ ಪ್ರಿಯರಾಗ ಎನ್ನುವರು ) ಪೂಜೆಗೆ ಬಳಸುವ ಪತ್ರ, ಪುಷ್ಪ ಮತ್ತು ಅತೈಲಪಕ್ವವಾದ “ಆವಿಯಲ್ಲಿ” ಬೇಯಿಸಿದ ಸಿಹಿಗಡುಬಿನ ನೈವೇದ್ಯ ಆರು ಹೀಗೆ ಆರು ಇಲ್ಲಿ ಪ್ರಧಾನವಾಗಿದ್ದು ಸಿಕ್ಕಿದರೆ ಆರುಮಂದಿ ಬ್ರಹ್ಮಚಾರಿಗಳಾದ ಬಾಲಸುಬ್ರಹ್ಮಣ್ಯ ಸ್ವಾಮಿ ಭಾವದಿಂದ ಪೂಜಿಸಿ ಸಂತೋಷ ಪಡಿಸಬೇಕು. ಅಂದು ಹಾಗೆ ಪೂಜಿಸಲ್ಪಟ್ಟ ಬ್ರಹ್ಮಚಾರಿಗಳು ಏಕಭುಕ್ತ ಮಾಡಬೇಕು. ಅನಂತರ ಪೂಜೆ ಮುಗಿದ ಪಾರಣೆಯಾದಮೇಲೆ ಅಂದೇ ಏಕಭುಕ್ತವಾಗಿ ಪ್ರಸಾದ ಸ್ವೀಕರಿಸಬೇಕು. (ಸಾಮಾನ್ಯವಾಗಿ ಇದು ಎಲ್ಲಾ ಕಲ್ಪಗಳಲ್ಲಿಯು ಸಾಮಾನ್ಯವಾಗಿರುತ್ತದೆ).

ಶಿವನ ಸಂಕಲ್ಪದಿಂದಲೇ ಸ್ಕಂದನು ಮಹಾಸರ್ಪತಾಳಿ ಕುಕ್ಕೆಯಲ್ಲಿ ಯೋಗಾರೂಢನಾದನೆಂದು ಪ್ರತೀತಿ.  ಸ್ಕಂದಮೂರ್ತಿ, ಶೇಷಸರ್ಪ ಮೂರ್ತಿ ಮತ್ತು ವಾಸುಕೀ ಸರ್ಪಮೂರ್ತಿ ಈ ಮೂರು ದೇವರನ್ನು ದೇವಗರ್ಭದಲ್ಲಿ ನೋಡುತ್ತೇವೆ.

ನಾದಕ್ಕೆ ಪರಾದೇವತೆಯಾದ ಸುಬ್ರಹ್ಮಣ್ಯ ಸ್ವಾಮಿಯದೇ ಅಗ್ರ ಸ್ಥಾನ ಎಂಬ ತತ್ವ ಹೊರಹೊಮ್ಮುತ್ತದೆ.  ಘಂಟೆಯನ್ನು ಪ್ರತಿಷ್ಠೆ ಮಾಡುವಾಗ ಅದರ ನಾದದಲ್ಲಿ ಈ ಸ್ವಾಮಿಯನ್ನು ಆವಾಹನೆ ಮಾಡಬೇಕೆಂದು ವೈಖಾನ ಸಾಗಮ ಹೇಳುತ್ತದೆ. ದೇವತೆಗಳನ್ನು ನಮ್ಮ ದೇವರು ನಿಮ್ಮ ದೇವರೆಂದು ವಿಂಗಡಿಸಬಾರದು.  ಎಲ್ಲಾ ದೇವರೂ ಎಲ್ಲರದ್ದು. ನಾವು ಪೂಜೆ ಮಾಡುವುದು ಆಧ್ಯಾತ್ಮಿಕ ಲಾಭಕ್ಕಾಗಿಯೇ ಹೊರತು ಬೌದ್ಧಿಕವಾದ ಕುತೂಹಲ ಪ್ರವೃತ್ತಿಯ ತುರಿಕೆಯನ್ನು ತೀರಿಸಿಕೊಳ್ಳಲು ಅಲ್ಲ. ನಮ್ಮನಮ್ಮಲ್ಲಿಯೇ ಮಡಿವಂತಿಕೆ ಸಲ್ಲದು.

ಸ್ಕಂದನು ನಾಲ್ಕು ಪುರುಷಾರ್ಥಗಳನ್ನು ಅನುಗ್ರಹಿಸಬಲ್ಲ ಪರಾದೇವತೆಯಾದರೂ ಬ್ರಹ್ಮ ಜ್ಞಾನ,ಆಯಸ್ಸು, ಆರೋಗ್ಯ, ಅಪಸ್ಮಾರ, ಕುಷ್ಠ, ಭೂತಪೀಡನೆ, ಸಂತಾನ ಭಾಗ್ಯ, ಪುಷ್ಟಿ,ತುಷ್ಟಿ, ಕೀರ್ತಿ,ಶತೃಭಯ,ಹೀಗೆ ಅನೇಕ ಸಾಲೋಕ್ಯಗಳನ್ನು ವಿಶೇಷವಾಗಿ ಕರುಣಿಸುವನೆಂದು ವಾಲ್ಮೀಕಿ ರಾಮಾಯಣ, ವನಪರ್ವದಲ್ಲಿ ತಿಳಿಸಲಾಗಿದೆ. ಅಲ್ಲದೆ ಶಂಕರಾಚಾರ್ಯರು ಕೂಡ ಸುಬ್ರಹ್ಮಣ್ಯ ಭುಜಂಗದಲ್ಲಿಯೂ ವಿವರಿಸಿದ್ದಾರೆ.

ಕಾರ್ತಿಕೇಯನು ಯಾರ ಮನೆದೇವರಾಗಿರುವನೋ ಅವರು ವಿಶೇಷವಾಗಿ ಆಚರಿಸುವರು.

ಸ್ಕಂದನು ತಾರಕಾಸುರನೊಡನೆ ಯುದ್ಧಮಾಡಿದಾಗ ಆ ಅಸುರನು ಭಗವಂತನಿಗೆ ಹೆದರಿ ತಲೆತಪ್ಪಿಸಿಕೊಳ್ಳಲು ಕೀಟದ ರೂಪವನ್ನು ತಾಳಿ ಹುತ್ತವನ್ನು ಹೊಕ್ಕನು.  ಅವನನ್ನು ಹಿಡಿಯಲು ಕುಮಾರನು ಸರ್ಪರೂಪವನ್ನು ತಾಳಿ ಹುತ್ತದೊಳಗೆ ಹೋಗಲು, ಆ ಅಸುರನು ಗತ್ಯಂತರವಿಲ್ಲದೆ ಹೊರಗೆ ಓಡಿಬಂದು ಅಸುರರೂಪದಲ್ಲಿಯೇ ದೇವನನ್ನು ಎದುರಿಸಿ ಯುದ್ಧದಲ್ಲಿ ಹತನಾದನು ಎಂಬುದೊಂದು ಕಥೆಯಾದರೆ…….

ಪ್ರಣವದ ಅರ್ಥಕೇಳಿ ಬ್ರಹ್ಮ ದೇವರಿಗೆ ಅಪಮಾನ ಮಾಡಿದ್ದರಿಂದ ಕುಪಿತನಾದ ಶಿವನು ಆತನಿಗೆ ಸರ್ಪವಾಗುವಂತೆ ಶಾಪವಿತ್ತನು.  ಆ ಶಾಪವನ್ನು ಶಿರಸಾವಹಿಸಿ ಕುಮಾರನು ಕೈಲಾಸದಿಂದ ವಲ್ಮೀಕಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಅಲ್ಲಿ ಗುಹೆಯಲ್ಲಿ ಅಡಗಿಕೊಂಡು ‘ಗುಹ’ ಎನಿಸಿಕೊಂಡನು. ಅಲ್ಲಿಗೆ ತಕ್ಷಕ,ವಾಸುಕಿಯರು ಬಂದು ಆಶ್ರಯಬೇಡಲು ಸ್ವಾಮಿಯು ಅವರನ್ನು ತನ್ನಲ್ಲಿ ಐಕ್ಯಮಾಡಿಕೊಂಡು ತನಗೆ ಸಲ್ಲಿಸುವ ಪೂಜೆಯಿಂದ ಅವರೂ ಪ್ರೀತರಾಗಲಿ ಎಂದು ಆಶಿಸಿ ತಾನೂ ಮಹಾಸರ್ಪವಾಗಿ ಬಿಲದ್ವಾರದಲ್ಲಿ ಪ್ರವೇಶ ಮಾಡಿ ಯೋಗರೂಢನಾಗುತ್ತಾನೆ.  ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ಕಂದ ಮೂರ್ತಿ,ಶೇಷಸರ್ಪಮೂರ್ತಿ ಮತ್ತು ವಾಸುಕೀ ಸರ್ಪಮೂರ್ತಿಗಳನ್ನು ದೇವರ ಗರ್ಭಗುಡಿಯಲ್ಲಿ ನೋಡಬಹುದು.  ಹೀಗೆ ಕಥೆಗಳು ನಮಗೆ ಅನೇಕ ಉಪನಿಷತ್ ಗಳಲ್ಲಿ ಕಾಣಸಿಗುತ್ತವೆ.

      “ತತ್ಪುರುಷಾಯ ವಿದ್ಮಹೇ ಮಹಾಸೇನಾಯ ಧೀಮಹೀ  ತನ್ನಃಷಣ್ಮುಖಃ ಪ್ರಚೋದಯಾತ್…..

-ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ

4 Responses

  1. ಉತ್ತಮ ಮಾಹಿತಿಯನ್ನುಳ್ಳ ಲೇಖನ ಅಭಿನಂದನೆಗಳು ಗೆಳತಿ ಭಾಗ್ಯಲಕ್ಷ್ಮಿ

  2. ನಯನ ಬಜಕೂಡ್ಲು says:

    Nice

  3. ಶಂಕರಿ ಶರ್ಮ says:

    ಸುಬ್ರಹ್ಮಣ್ಯ ಷಷ್ಠಿಯ ಕುರಿತು ಬಹಳಷ್ಟು ವಿವರಗಳುಳ್ಳ ಲೇಖನವು ಸಕಾಲಿಕವೂ ಹೌದು…ಧನ್ಯವಾದಗಳು ಮೇಡಂ.

  4. Padma Anand says:

    ಲೇಖನ ವಿವರವಾದ ಮಾಹಿತಿ ನೀಡಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: