ದಾಸ ಪರಂಪರೆ
ಕುಮಾರವ್ಯಾಸನಿಂದ ನಾಗರಸನವರೆಗೆ ಆಗಿಹೋದ ಭಾಗವತ ಕವಿಗಳು ಭಾರತ,ರಾಮಾಯಣ, ಭಾಗವತ ಹಾಗೂ
ಭಗವದ್ಗೀತೆ ಇವನ್ನು ಕನ್ನಡಿಸಿ,ದೇಶಿಯ ಛಂದಸ್ಸಿನಲ್ಲಿ ವೈದಿಕ ಪರಂಪರೆಯ ವಾಙ್ಮಯವನ್ನು ಕನ್ನಡ ನುಡಿಯಲ್ಲಿ ನೀಡಿದ್ದರು.ಇನ್ನು ಇದೇ ಯುಗದಲ್ಲಿ ಅದೇ ಪರಂಪರೆಯ ದಾಸವಾಙ್ಮಯವು ಹಾಡಿನ ರೂಪ ತಾಳಿ ಬಳಕೆ ಮಾತಿಗೆ ಹತ್ತಿರ ಬಂದು,ರಾಶಿರಾಶಿಯಾಗಿ ಬೆಳೆಯಿತು. ಬಸವಯುಗದ ಕೊನೆಯಲ್ಲಿ ನರಹರಿ ತೀರ್ಥರು ದಾಸ ಪರಂಪರೆಯ ಉದಯಕ್ಕೆ ಕಾರಣರಾದರು. ಈ ಪರಂಪರೆಯಲ್ಲಿ ಮೂವರು ಪ್ರಮುಖವಾಗಿ ಗುರುತಿಸಲ್ಪಡುತ್ತಾರೆ ಅವರನ್ನು ದಾಸತ್ರಯರು ಎಂದು ಕರೆಯುತ್ತಾರೆ,ಪುರಂದರದಾಸ,ಕನಕದಾಸ ಹಾಗೂ ವಿಜಯದಾಸ. ಇವರಲ್ಲಿ ದಾಸ ಪರಂಪರೆ ಉಚ್ಛ್ರಾಯ ಸ್ಥಿತಿಯನ್ನು ತಲುಪಿದ್ದು ಪುರಂದರ ಮತ್ತು ಕನಕದಾಸರಿಂದ ಹಾಗಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಭಕ್ತಿ ಪಂಥದಲ್ಲಿ ಈ ಮಹನೀಯರ ಹೆಸರುಗಳು ಚಿರಸ್ಥಾಯಿಯಾಗಿ ಉಳಿದಿವೆ. ವಿಶೇಷವೆಂದರೆ ಪುರಂದರದಾಸ ಮತ್ತು ಕನಕದಾಸ ಇಬ್ಬರೂ
ಕೃಷ್ಣದೇವರಾಯನ ಕಾಲದವರೇ ಇಬ್ಬರೂ ವ್ಯಾಸರಾಯರ ಶಿಷ್ಯರೇ. ವ್ಯಾಸರಾಯರ ಗುರುತ್ವದಲ್ಲಿ ಅರಳಿದ ಸುಂದರ ಪುಷ್ಪಗಳು ಕರ್ನಾಟಕ ಸಂಗೀತದ ಹೂದೋಟದಲ್ಲಿ ತಮ್ಮದೇ ಕಂಪು ನೀಡಿ ಸೊಬಗನ್ನು ಹೆಚ್ಚಿಸಿದವು. ಇಬ್ಬರೂ ಈ ಸಮಾಜವನ್ನು ತಿದ್ದುವ ಕಾಯಕವನ್ನು ತಮ್ಮ ಕೃತಿಗಳ ಮೂಲಕ ಮಾಡಿದರು ಆದ್ದರಿಂದಲೇ ಅವರು ಅಳಿದು ಇಷ್ಟು ವರ್ಷಗಳಾದರೂ ಆ ಮಹನೀಯರನ್ನು ಈಗಲೂ ನಾವು ನೆನಪು ಮಾಡಿಕೊಳ್ಳುತ್ತಿದ್ದೇವೆ.
ನಾವು ಕನಕದಾಸರ ವ್ಯಕ್ತಿತ್ವವನ್ನು ಅವರ ಕೃತಿಗಳ ಮೂಲಕ ಅರಿಯಲು ಪ್ರಯತ್ನ ಮಾಡೋಣ,ರಚನೆಗಳು ರಚನಾಕಾರನ ನಿಲುವು,ದೃಷ್ಟಿಕೋನವನ್ನು ನೀಡುತ್ತವೆ.
ಕನಕದಾಸರು ಭಕ್ತಿಮಾರ್ಗವನ್ನು ಅನುಸರಿಸಿದವರು. ನಮ್ಮ ಭಾವನೆಗಳನ್ನು ಸಂಸ್ಕೃತಿಗೊಳಿಸುವ ಅತ್ಯುನ್ನತ ಮಾರ್ಗವೇ ಭಕ್ತಿ ಮಾರ್ಗ. ಇದು ನಮ್ಮ ಭಾವನೆಗಳಿಗೆ ತರಭೇತಿ ನೀಡಿ ದೇವನಲ್ಲಿ ಅರ್ಪಿಸಿಕೊಳ್ಳುವಂತೆ ಮಾಡುತ್ತದೆ. ಈ ಭಕ್ತಿಯಲ್ಲಿ ಪಂಚಮಹಾಭಾವಗಳು ಕಂಡುಬರುತ್ತವೆ.
ಸಾಖ್ಯ ಭಾವ – ಕೃಷ್ಣನ ಬಗ್ಗೆ ಸುಧಾಮನ ಸ್ನೇಹ
ವಾತ್ಸಲ್ಯ ಭಾವ – ಕೃಷ್ಣನ ಬಗ್ಗೆ ಯಶೋಧಳ ಪ್ರೀತಿ
ಮಧುರ ಭಾವ – ಕೃಷ್ಣ ಮತ್ತು ರಾಧೆಯ ಪ್ರೇಮ
ಶಾಂತ ಭಾವ – ಯುಧಿಷ್ಠರನ ಶ್ರೇಷ್ಠ ಭಾವ
ದಾಸ ಭಾವ – ರಾಮನ ಬಗ್ಗೆ ಹನುಮನ ಭಕ್ತಿ
1)ಪ್ರಮಾಣ – ಅಳತೆ
2)ವಿಪರ್ಯಾಯ – ತಪ್ಪಾಗಿ ತಿಳಿಯುವುದು
3)ವಿಕಲ್ಪ – ತಪ್ಪು ಕಲ್ಪನೆ
4)ನಿದ್ರಾ – ಯಾವುದೇ ರೀತಿಯ ಅನುಭವಗಳು ಇಲ್ಲದಿರುವುದು
5)ವಿಸ್ಮೃತಿ – ಗೋಚರವಿಲ್ಲದಿರುವುದು
ಐದು ಬಗೆಯ ತೊಡಕುಗಳು
1) ಅವಿದ್ಯಾ- ವಿದ್ಯೆ ಇಲ್ಲದಿರುವುದು
2) ಅಸ್ಮಿತ – ಅಹಂ ಭಾವ
3) ರಾಗ – ವಿಪರೀತ ಆಸಕ್ತಿ
4) ದ್ವೇಷ – ಪ್ರೀತಿರಾಹಿತ್ಯ
5) ಅಭಿನಿವೇಶ – ಪ್ರಾಪಂಚಿಕ ಆಸಕ್ತಿ ಇಲ್ಲದಿರುವುದು
ದಾಸರು “ ತಲ್ಲಣಸದಿರು ಕಂಡ್ಯ ತಾಳು ಮನವೆ…..” ಈ ಪದ್ಯದಲ್ಲಿ ಈ ಐದು ಚಿತ್ತ ವೃತ್ತಿಗಳನ್ನು, ಐದು ತೊಡಕುಗಳನ್ನು ನಿವಾರಿಸಲು ಆ ಸರ್ವಶಕ್ತನಾದ ಭಗವಂತನ ಮೊರೆ ಹೋಗಲು ಸೂಚಿಸುತ್ತಾರೆ ಇದರಲ್ಲಿ ದೈವದ ಕೃಪೆಯನ್ನು ಸಾರಲು ಅನೇಕ ದೃಷ್ಟಾಂತಗಳನ್ನು ನೀಡುತ್ತಾರೆ. ಅವರ ಇನ್ನೊಂದು ಪದ್ಯ ” ನೀ ಮಾಯೆಯೊಳಗೂ ನಿನ್ನೊಳು ಮಾಯೆಯೊ…” ಸಕಲವು ನಮ್ಮ ಮನಸ್ಸಿನಲ್ಲಿ ಅಡಗಿದೆ ಎನ್ನುವುದನ್ನು ನಿರೂಪಿಸುತ್ತಾ ಶರಣರ ನುಡಿ ಮನದ ಮುಂದಣ ಆಸೆಯೇ ಮಾಯೆ ಎಂಬುದನ್ನುನೆನಪಿಸುತ್ತಾರೆ.
” ದಾಸದಾಸರ ಮನೆಯ ದಾಸಿಯರ ಮಗ ನಾನು” ಈ ರಚನೆಯಲ್ಲಿ ಎನಗಿಂತ ಕಿರಿಯರಿಲ್ಲ ಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ಭಾವ ಸೂಸುತ್ತಾ ಭಕ್ತಿಯೇ ಶ್ರೇಷ್ಠ ಭಕ್ತನ ಅಂತಸ್ತು ಜಾತಿಯಲ್ಲ ಎನ್ನುವುದನ್ನು ಸಾರುತ್ತದೆ .“ಕುಲ ಕುಲವೆಂದು …” ಇದು ಸಹಾ ಜಾತಿ ಪದ್ದತಿ ವಿರೋಧಿಸಿ ಸಮಾನತೆ ಬಿತ್ತುವ ಕಾರ್ಯ ಮಾಡುತ್ತದೆ.
ನಮಗೆ ಬಹು ಆಯ್ಕೆಗಳು ಎದುರಾದಾಗ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದೇ ದೊಡ್ಡ ಗೊಂದಲ ತರುತ್ತದೆ. ಅದರಲ್ಲೂ ಜೀವನದಲ್ಲಿನ ಆಯ್ಕೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ಯಾವುದನ್ನು ಆರಿಸಿಕೊಳ್ಳಬೇಕು,ಯಾವುದು ಲೇಸು ಎನ್ನುವುದನ್ನು ಕನಕದಾಸರು ಬಹಳ ಸೊಗಸಾಗಿ ಈ ಪದ್ಯದಲ್ಲಿ ವಿವರಿಸಿದ್ದಾರೆ
“ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ
ಸುಜ್ಞಾನಿಗಳ ಕೂಡೆ ಜಗಳವೇ ಲೇಸು
ಒಡನೆ ಹಂಗಿಸುವನೋಗರವನುಂಬುದಕ್ಕಿಂತ
ಕುಡಿನೀರು ಕುಡಿದುಕೊಂಡಿರುವುದೇ ಲೇಸು ಬಿಡದೆ
ಬಾಂಧವರೊಡನೆ ಕಡಿದಾಡುವುದಕಿಂತ
ಅಡವಿಯೊಳಜ್ಞಾತ ವಾಸವೇ ಲೇಸು.”.. ಹೀಗೆ ನಮಗೆ ಉತ್ತಮ
ಆಯ್ಕೆಗಳನ್ನು ನೀಡುತ್ತಾ ಹೋಗುತ್ತಾರೆ.
” ಅಡಿಗೆಯನು ಮಾಡಬೇಕಣ್ಣ
ನಾನೀಗ ಜ್ಞಾನದಡಿಗೆಯನು ಮಾಡಬೇಕಣ್ಣ
ಅಡಿಗೆಯನು ಮಾಡಬೇಕು ಮಡಿಸಬೇಕು
ಮದಗಳನ್ನು ಒಡೆಯನಾಜ್ಞೆಯಿಂದ ಒಳ್ಳೆ ಸಡಗರದಲಿ ಮನೆಯ ಸಾರಿಸಿ…” ಈ ಪದ್ಯವಂತೂ ಮನುಜನ ಜ್ಞಾನದ ಹಸಿವನ್ನು ನೀಗಿಸಿಕೊಳ್ಳಲು ಎಂತಹ ಭಕ್ಷ್ಯ, ತಿನಿಸುಗಳನ್ನು ಮಾಡಬೇಕೆಂದು ತಿಳಿಸುತ್ತದೆ.
ರಾಮ ಧಾನ್ಯ ಚರಿತ್ರೆ – ಕನ್ನಡದಲ್ಲಿ ಅಪರೂಪದ ಸ್ವಕಲ್ಪಿತ ಕಥಾವಸ್ತುಗಳಲ್ಲಿ ಒಂದು. ದೇವನು ಬಡವನ ಕೈವಾರಿ,ಭಕ್ತರ ಪಕ್ಷಪಾತಿ ಎಂಬುದನ್ನು ಸೂಚಿಸುವ ರೀತಿಯಲ್ಲಿ ರಾಗಿ ಮತ್ತು ಭತ್ತಗಳ ನಡುವೆ ವಾದ ನಡೆಯಿಸಿ ಅದರಲ್ಲಿ ರಾಗಿ ಗೆದ್ದಿತೆಂದೂ ಅದಕ್ಕೆ ರಾಮನು “ರಾಘವ” ಎಂಬ ತನ್ನ ಹೆಸರನ್ನಿತ್ತನೆಂದೂ ಕನಕದಾಸರು ಕಲ್ಪಿಸಿ ಜನತಾದೃಷ್ಟಿಯನ್ನು ಇಲ್ಲಿ
ಪ್ರಕಟಗೊಳಿಸುತ್ತಾರೆ.
ನಳ ಚರಿತ್ರೆ – ಸುಪ್ರಸಿದ್ಧ ನಳ ದಮಯಂತಿ ಕತೆ ತುಂಬಾ ಸ್ವಾರಸ್ಯವಾಗಿ ನಿರೂಪಿತವಾಗಿರುವ ಲೌಕಿಕ ಕಾವ್ಯವಾಗಿದ್ದರೂ ಇದರಲ್ಲಿ ಬರುವ “ದೈವವ ನೆನೆವ ಭಕ್ತರಿಗುಂಟೆ ಭಯವೆಲೆ ನೃಪತಿ” ಇಂತಹ ಉಕ್ತಿಗಳು ಕನಕದಾಸರ ಭಕ್ತಿಪರತೆಯನ್ನು ತೋರುತ್ತವೆ.
ಕನಕದಾಸರ ಜೀವನವೇ ಮಹಾಕೃತಿಯಾಗಿತ್ತು, ಅವರ ರಚನೆಗಳಲ್ಲಿ ಅದು ಕಂಡು ಬರುತ್ತದೆ. ಪುರಂದರದಾಸನಂತೆ ಆದರೂ ಅವರಿಗಿಂತ ಕೆಲಮಟ್ಟಿಗೆ ಬೇರೆಯಾಗಿ ಕನಕದಾಸರು ತಮ್ಮ ಜೀವನ ಮತ್ತು ಸಾಹಿತ್ಯ, ಸಂಗೀತದ ಸಿದ್ದಿಗಳಿಂದ ಕನ್ನಡಿಗರಿಗೆ ಬೆಳಕನ್ನು ನೀಡುವ ಸಂಸ್ಕೃತಿ ಪ್ರದೀಪಗಳಲ್ಲಿ ಒಬ್ಬರಾಗಿದ್ದಾರೆ. ಇಂತಹ ಕನಕದಾಸರಿಗೆ ಬಗ್ಗೆ ನನ್ನದೊಂದು ಬರಹ ನಮನ ಈ
ಕೆಳಗಿನಂತೆ ನೀಡಬಹುದು.
ಕಿಟಕಿಯಲಿ ಇಣುಕಿದೆ ಹೊಸ ಬೆಳಕು
ಗುಡುಗು ಮಿಂಚಿನ ತರುವಾಯ
ಸರಸ ಸಲ್ಲಾಪದ ಸಮಯದಲಿ
ಕುಟುಕು ನುಡಿಗಳು ಮೈದಳೆದಿವೆ
ಜಲಜ ಮಿತ್ರನ ಪ್ರಭೆಯನ್ನೇ ಕುಂದಿಸಿವೆ
ಶಕ್ತೀಶ ಕೃಪೆ ತೋರೆಂದು ಬೇಡಿವೆ
ನವವನದಲ್ಲಾಡಿದ ಮನಸ್ಸು ಮರ್ಕಟವಾಗಿ
ನೆಲಪಾಲನೆಯೇ ಸರ್ವಸ್ವ ಗುರಿಯಾದಾಗ
ವಿಕಟಕವಿ ವಿರಚಿತ ಕತೆಯೇ ಸ್ಪುರಿಸಿ
ನರ್ತನಗೈದಿವೆ ಸ್ವಾರ್ಥ ಚಿಂತನೆಗಳು
ಸಮಾಸ ಸಂಧಿಗಳೇ ತಲೆಕೆಳಗಾಗಿ
ರಿಪೇರಿ ಮಾಡದಷ್ಟು ಬದುಕು ಬೆಂಡಾಗಿ
ಮಧ್ಯಮ ನಂಬಿಕೆಗಳೇ ಬುಡ ಮೇಲಾಗಿ
ಕಟಕ ಜಾತಿಯೇ ವಿಜೃಂಭಿಸಿರಲು
ನಮನಗೈದ ಜನರ ಉದ್ಧಾರಕ್ಕೆಂದು
ಗುನುಗುತ್ತಾ ಕೀರ್ತನೆ ಚರಿತ್ರೆಗಳ
ಕನಕ ಬಂದ ದಾಸ ಪರಂಪರೆಯಲಿ
ನಯನವ ತೆರೆಸಲೆಂದು ನಿಂದ ಬಾಗಿಲಲಿ
ಚಮಚ ಅನ್ನವ ತಿಂದು
ತಾಳ ತಂಬೂರಿಯ ಹಿಡಿದು
ರಾಗದಲಿ ಹಾಡುತಾ ಮನೆಮನೆ ತಿರುಗಿ
ಹೊಸಭಾವವ ನೀಡಿದ ಮರುಗಿ
-ಕೆ.ಎಂ ಶರಣಬಸವೇಶ , ಶಿವಮೊಗ್ಗ
ದಾಸಪರಂಪರೆಯಲ್ಲಿ ಕನಕ ದಾಸರ ಕಿರುಪರಿಚಯ..ಅವರ ಕೃತಿ ಗಳಕಡೆ ನೋಟ ಹೊರಳಸುತ್ತಾ ನೀಡಿರುವ ಬರಹ..ಉತ್ತಮ ವಾಗಿದೆ..ಧನ್ಯವಾದಗಳು ಸಾರ್
ಕನಕದಾಸರ ಮತ್ತು ಅವರ ಕೃತಿ ಪರಿಚಯ ಚೆನ್ನಾಗಿದೆ
ದಾಸ ಪರಂಪರೆ ಹಾಗೂ ಕನಕದಾಸರ ಕೃತಿಗಳ ಒಳಗಿನ ಸೂಕ್ಷ್ಮ ಸಂವೇದನಾತ್ಮಕ ಭಕ್ತಿ ಭಾವಗಳ ವಿವರಣೆಯು ಬಹಳ ಚೆನ್ನಾಗಿ ಮೂಡಿಬಂದಿದೆ.
ಕನಕದಾಸರ ಹಾಗೂ ಅವರ ಕೃತಿಗಳ ಪರಿಚಯ ಸುಂದರವಾಗಿ ಮೂಡಿ ಬಂದಿದೆ ವಂದನೆಗಳು
ಅತ್ಯಂತ ಮಾಹಿತಿಪೂರ್ಣ ಪ್ರೌಢ ಲೇಖನ