ಸಣ್ಣ ಕತೆ : ಮಕ್ಕಳೊಂದಿಗ
“ಸಾ…ಬ್ಯಾಂಕ್ನಾಗೆ ಸ್ವಲ್ಪ ಕಾಸು ಮಡಗ್ಬೇಕಿತ್ತು”
ತಲೆ ಎತ್ತಿದೆ, ಪೇಟಧಾರಿ, ಮಾಸಿದ ಬಿಳಿ ಶರ್ಟಿನ ವೃದ್ಧರೊಬ್ಬರು ನಿಂತಿದ್ದರು.
“ಎಷ್ಟು ವರ್ಷಕ್ಕೆ ಇಡ್ತೀರ? ಹತ್ತು ವರ್ಷಕ್ಕೆ ಇಟ್ಟರೆ ಏಳು ಪರ್ಸೆಂಟ್ ಬಡ್ಡಿ ಕೊಡ್ತೀವಿ. ನಿಮಗೆ ಅರವತ್ತು ವರ್ಷದ ಮೇಲೆ ವಯಸ್ಸಾಗಿದೆ ಅಲ್ವಾ, ಇನ್ನೂ ಅರ್ಧ ಪರ್ಸೆಂಟ್ ಜಾಸ್ತಿ ಕೊಡ್ತೀವಿ. ನಿಮ್ಮ ಖಾತೆ ಪಾಸ್ ಪುಸ್ತಕ ಕೊಡಿ”
“ನನ್ನೆಸ್ರಲ್ಲಿ ಅಲ್ಲ ಸಾ..”
“ಮಗನ ಹೆಸ್ರಲ್ಲಾ?”
“ಅಲ್ಲ ಸಾ, ನಮ್ಮ ತಾಯಿ ಹೆಸ್ರಲ್ಲಿ”
ನಾನು, ಬಾಯಿ ದೊಡ್ಡದಾಗಿ ತೆರೆದು “ಆಂ..?” ಅಂದೆ.
“ಅವ್ವ..ಬಾ…”
ಮೂಲೇಲಿ ಕುಳಿತಿದ್ದ ತಾಯಿ ನಿಧಾನವಾಗಿ ಎದ್ದು ನನ್ನ ಬಳಿ ಬಂದರು. ತೆಳುದೇಹದ, ಮುಖದ ತುಂಬ ಸುಕ್ಕು ಗೆರೆಗಳ, ಸ್ವಲ್ಪ ಬಾಗಿದ ನಡುವಿನ ಅಜ್ಜಿ.
ನಗುತ್ತಾ ಹೇಳಿದೆ, “ಅಜ್ಜಿ, ನಿಮ್ಮಗನ ಹೆಸ್ರಲ್ಲೇ ಡಿಪಾಸಿಟ್ಟು ಇಡಿ. ಈ ವಯಸ್ನಲ್ಲೇಕೆ ಬ್ಯಾಂಕಿಗೆ ಬರೋ ಕಷ್ಟ ನಿಮಗೆ”
ಪೇಟಧಾರಿ ಮಗ ತನ್ನ ಬೊಚ್ಚು ಬಾಯಿಯಲ್ಲಿ “ಹಹ..ಹಹ” ಅಂತ ನಕ್ಕರು. ಬಾಯಿಯಲ್ಲಿ ಕೇವಲ ನಾಲ್ಕು ಹಲ್ಲು ಹೊಗೆಸೊಪ್ಪಿನ ಬಣ್ಣದಲ್ಲಿ ಕಂಡಿತು.
“ಬ್ಯಾಡ ಸಾಮಿ, ಮಗ್ನಿಗೆ ತಿಳ್ವಳ್ಕೆ ಕಮ್ಮಿ. ಕಳ್ಕಳೋ ಬುದ್ಧಿಯವ್ನು. ಸುಮ್ಕೆ ನನ್ನ ಹೆಸ್ರಲ್ಲೇ ಮಡ್ಗಿ. ನಾನ್ ದೇವ್ರ ಪಾದ ಸೇರಿದ್ಮೇಲೆ ಇವ್ನಿಗೇ ಸಿಗೋ ಅಂಗೆ ಶರಾ ಬರ್ದುಬಿಡಿ”. ಅಂದರು ಅಜ್ಜಿ. ಅಜ್ಜಿಯ ಹಲ್ಲುಗಳು ಎಲೆಯಡಿಕೆ ಜಗಿದು ಕೆಂಪಾಗಿದ್ದರೂ ಗಟ್ಟಿಮುಟ್ಟಾಗಿದ್ದವು. ಧ್ವನಿಯೂ ಹಾಗೇ.
ಮಗ ಸಹ “ಅಂಗೇ ಮಾಡಿ. ನಮ್ಮವ್ವ ನನ್ನ ನಂಬಾಕಿಲ್ಲ” ಅಂತ ನಗಾಡಿದರು.
ಈ ಇಳಿ ವಯಸ್ಸಿನಲ್ಲಿ ಆ ತಾಯಿ ಮಗನ ಬಗೆಗೆ ವಹಿಸುತ್ತಿರುವ ಮುಚ್ಚಟೆ, ಕಾಳಜಿ ನಂಬಲಾಗುತ್ತಿಲ್ಲ. ಅಮ್ಮನ ಮಾತಿಗೆ ನಾಚಿ ತಲೆ ಕೆರೆದುಕೊಳ್ಳುವ ಹಿರಿವಯಸ್ಸಿನ ಮಗ!
“ಏನು ದುರಭ್ಯಾಸ ಇವ್ರಿಗೆ?” ನಗುತ್ತ ಕುಶಾಲು ಮಾಡಿದೆ.
“ಇವ್ನ ಹಲ್ಲು ನೋಡ್ರಿಯಪ್ಪ. ಹೊಗೆಸಪ್ಪು, ಎಲೆಅಡ್ಕೆ ಜಗ್ದು ಇಂಗಾಗಿದೆ. ಇರೋ ದುಡ್ಡು ಅದ್ಕೇ ಕಳುದ್ಬಿಟ್ಟಾನು. ಮಕ್ಳೊಂದಿಗ. ಅದ್ಕೇ ಈ ಸಲದ್ ಅಡ್ಕೆ ಫಸಲಿನ್ ದುಡ್ಡು ನಿಮ್ ಬ್ಯಾಂಕಲ್ ಮಡಗ್ತೀನಿ. ಜಾಸ್ತಿ ಬಡ್ಡಿ ಬರೋಂಗೆ ಮಾಡಿ” ಅಂದ್ರು ಅಜ್ಜಿ.
“ಆಗ್ಲಿ, ಐದು ವರ್ಷಕ್ಕೆ ಮಾಡಿ. ಎಷ್ಟು ಡಿಪಾಸಿಟ್ಟು?”
ನಿಧಾನಕ್ಕೆ ಅಜ್ಜಿ ತನ್ನ ಎಲೆ ಅಡಿಕೆ ಚೀಲದಿಂದ ದೊಡ್ಡ ನೋಟಿನ ಗಂಟು ತೆಗೆದರು. ಎಲ್ಲ ಚೆಂದದಲ್ಲಿ ಜೋಡಿಸಿದ ಎರಡು ಸಾವಿರ ರೂಪಾಯಿ ನೋಟುಗಳು. ಎಣಿಸಿದೆ ಎರಡು ಲಕ್ಷವಿತ್ತು. ಚಲನ್ ಬರೆದು ಕೊಟ್ಟೆ. ಮಗ ಹಣ ಕಟ್ಟಲು ಅತ್ತ ಕ್ಯಾಶ್ ಕೌಂಟರ್ ಕಡೆ ಹೊರಟರು.
ಅಜ್ಜಿ ನನ್ನ ಕಿವಿಯಲ್ಲಿ “ಇನ್ನೂ ಮೂರು ಲಕ್ಷ ಐತೆ. ನಾಳೆ ನನ್ನ ಮೊಮ್ಮಗನ್ನ ಕರ್ಕೊಂಡು ಬರ್ತೀನಿ. ಅದ್ನೂ ನನ್ನ ಹೆಸ್ರಲ್ಲಿ ಮಡಗಿ, ಮೊಮ್ಮಗನಿಗೆ ಸಿಕ್ಕೊ ಅಂಗೆ ಮಾಡಿ. ಯಾಕಂದ್ರೆ ಅವ್ನೂ ಮಕ್ಳೊಂದಿಗ. ಅವ್ನ ಮಗ್ಳು ಮದುವೇಗ್ ಬಂದವ್ಳೆ. ಮುಂದಿನ್ ವರ್ಷ ಆ ಮರಿಮಗಳ್ದು ಮದ್ವೆ ನೋಡೋ ಆಸೆ. ಒಂದು ವರ್ಷಕ್ಕೆ ಡಿಪಾಸಿಟ್ ಸಾಕು” ಅಂದರು!
ನಾನು ಆಶ್ಚರ್ಯ ತೋರಿಸದೆ, ” ಅಜ್ಜಿ ನಿಮಗೆ ಎಷ್ಟು ವರ್ಷ?” ಕೇಳಿದೆ.
ಅಜ್ಜಿ ಸ್ವಲ್ಪ ನಾಚಿದರು. “ಹೆಂಗಸ್ರ ವಯಸ್ಸು ಕೇಳ್ಬಾರ್ದಲ್ವ” ಅಂತ ಮುಗ್ಧ ನಕ್ಕರು.
ನಾನು ಅಚಾನಕ ಅವರ ಆಧಾರ್ ಕಾರ್ಡ್ ಪರಶೀಲನೆಗೆ ಕುಳಿತೆ!
-ಅನಂತ ರಮೇಶ್
ಚೆನ್ನಾಗಿದೆ ಕಥೆ. ಬದುಕಿಗೆ ವಯಸ್ಸಿನ ಹಂಗಿಲ್ಲ, ಹಂಬಲ ಅನ್ನುವುದು ಎಲ್ಲವನ್ನು ಮೀರಿ ಸಾಗುತ್ತಿರುತ್ತದೆ, ಬದುಕಿನ ಆಸೆಯನ್ನು ಚಿಗುರಿಸುತ್ತಿರುತ್ತದೆ
ವಾವ್… ಹಿರಿಯರ..ಮುಂದಾಲೋಚನೆ…ಬದುಕಿನ..ಬಗ್ಗೆ.. ಇರುವ..ಪ್ರೀತಿಯನ್ನು… ಕಥೆಯ..ಚೌಕಟ್ಟಿನಲ್ಲಿ.. ಕಟ್ಟಿಕೊಟ್ಟಿರುವ..ರೀತಿ..
ಚೆನ್ನಾಗಿ… ಬಂದಿದೆ..ಅಭಿನಂದನೆಗಳು.. ಸಾರ್..
Simply Super!!
ಅಬ್ಬಾ
ಮುದುಕಿಯ ಜೀವನ ಪ್ರೀತಿ ಕಂಡು ಅಚ್ಚರಿಯಾಯಿತು
ಚೆಂದದ ಕಥೆ
ಸರಳ ಕಥೆಯು ಆತ್ಮೀಯವೆನಿಸಿತು… ಸಂಸಾರದ ಮೇಲೆ ಅಜ್ಜಿಗಿರುವ ಕಾಳಜಿಗೆ ಭಲೇ ಎನ್ನಬೇಕು!
ಆತ್ಮೀಯ ಸರಳ ಕಥೆ!
ಕತೆಯನ್ನು ಮೆಚ್ಚಿದವರಿಗೆಲ್ಲ ಧನ್ಯವಾದಗಳು