ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 16
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
Anthropology ವಿಭಾಗದಲ್ಲಿ ಭಾರತೀಯ ಪರಂಪರೆಯನ್ನು ಹುಟ್ಟುಹಾಕಿದವರು ನಿರ್ಮಲ ಕುಮಾರ ಬೋಸ್. ಅವರು ಬ್ರಿಟಿಷ್ Anthropologists ಅನುಸರಿಸುತ್ತಿದ್ದ ವರ್ಣನಾತ್ಮಕ ವಿಧಾನವನ್ನು ಕೈಬಿಟ್ಟರು. pragmatic prescriptive ನ ಆಧಾರದ ಮೇಲೆ ವ್ಯಾಪಕ ಕ್ಷೇತ್ರಕಾರ್ಯವನ್ನು ಮಾಡುವ ಅಗತ್ಯವಿದೆ ಎಂಬುದನ್ನು ಪ್ರತಿಪಾದಿಸಿದರು. ಭಾರತೀಯ ಕ್ಲಾಸಿಕಲ್ ಪಠ್ಯಗಳಲ್ಲಿ ಕಂಡುಬರುವ ಸಮಾಜದ ಪರಿಕಲ್ಪನೆ ಮತ್ತು ಕ್ಷೇತ್ರಕಾರ್ಯದಿಂದ ರೂಪುಗೊಳ್ಳುವ ಸಮಾಜದ ಪರಿಕಲ್ಪನೆಗಳು ಪರಸ್ಪರ ತಾಳೆಯಾಗುವುದಿಲ್ಲವಾದರೂ 19ನೇ ಶತಮಾನದ ಮಧ್ಯ ಭಾಗದಿಂದ ಭಾರತ ಜಾಗತಿಕ ಅರ್ಥವ್ಯವಸ್ಥೆಗೆ ಹೆಚ್ಚು ಹೆಚ್ಚಾಗಿ ಒಳಡುತ್ತಿರುವುದರಿಂದ ಮೊದಲಿನ ಸಮಾಜ ವ್ಯವಸ್ಥೆ ದಿಕ್ಕು ಬದಲಾಯಿಸುತ್ತಿದೆ ಎಂದು ವಾದಿಸಿದರು.
Anthropology ಮತ್ತು ಸಂಸ್ಕೃತಿಗಳ ಬಗೆಗೆ ಜಾಗತಿಕ ನಿಲುವೊಂದನ್ನು ಅಭಿವೃದ್ಧಿಪಡಿಸಿ “Cultural Anthropology” ಎಂಬ ಕೃತಿಯನ್ನು 1929ರಲ್ಲಿ ಪ್ರಕಟಿಸಿದರು. “Canons of Orissa Architecture” ಎಂಬ ವಿಭಿನ್ನ ಕೃತಿಯನ್ನು 1932ರಲ್ಲಿ ಪ್ರಕಟಿಸಿದರು. ಇದೇ ರೀತಿ “The structure of Indian Society, “Some aspects of caste in Bengal”, “Peasant life in India”, “Calcutta – A social surveyʼ, “Anthropology and some Indian problems” ಮುಂತಾದ 30 ಕೃತಿಗಳನ್ನು ಪ್ರಕಟಿಸಿದರು. ಜನಸಾಮಾನ್ಯರಿಗಾಗಿ ಮತ್ತು ವಿದ್ವಾಂಸರಿಗಾಗಿ 700ಕ್ಕೂ ಹೆಚ್ಚು ಲೇಖನಗಳನ್ನು ಬರೆದರು. ಇದರ ನಡುವೆ “Man in India” ಎಂಬ ಪತ್ರಿಕೆಯ ಸಂಪಾದಕರಾಗಿ, “Anthropological Survey of India” ಮತ್ತು “Asiatic Society” ಯ ನಿರ್ದೇಶಕರಾಗಿಯೂ ಕೆಲಸಮಾಡಿದರು.
ಮಾನವ ಮಾಪನ (Anthrepometry) ಅಧ್ಯಯನವನ್ನು ಭಾರತದಲ್ಲಿ ಗಂಭೀರವಾಗಿ ಮಾಡಿದವರು ಪ್ರಶಾಂತ ಚಂದ್ರ ಮಹಾಲನೋಬಿಸ್. ಲಂಡನ್ನಿನ “ಬಯೋಮೆಟ್ರಿಕ್ ಜರ್ನಲ್” ನಿಂದ ಪ್ರಭಾವಿತರಾದ ಇವರು ಪವನ ಶಾಸ್ತ್ರ (Meteorology), Anthropology ಗಳಲ್ಲಿ ಲೆಕ್ಕಶಾಸ್ತ್ರದ ಪ್ರಯೋಜನವನ್ನು ಕಂಡುಕೊಂಡರು. 1930ರಲ್ಲಿ ಮಹಾಲನೋಬಿಸ್ ಜನಾಂಗೀಯ ಪ್ರತಿರೂಪವನ್ನು ಅಧ್ಯಯನ ಮಾಡಲು Mahalanobis ಎಂಬ ಹೊಸ ಮಾಪನವನ್ನು (ಮೆಟ್ರಿಕ್) ಕಂಡುಕೊಂಡು ಪ್ರಪ್ರಥಮವಾಗಿ ಬಳಸಿದರು. ಇದರ ಸಹಾಯದಿಂದ ಕಲ್ಕತ್ತೆಯ ಆಂಗ್ಲೊ ಇಂಡಿಯನ್ನರ anthropo measurement ಗಳನ್ನು ಪಡೆದರು. ಈ ಮಾಹಿತಿಯನ್ನು ಬಳಸಿ ಯೂರೋಪಿಯನ್ನರು ಮತ್ತು ಭಾರತೀಯರ ನಡುವಿನ ವೈವಾಹಿಕ ಸಂಬಂಧದ ಸಾಧ್ಯತೆಯನ್ನು ವಿಶ್ಲೇಷಣೆ ಮಾಡಿದರು. ಆ ಸಾಧ್ಯತೆಯ ಹಿಂದೆ ಇರುವ ಅಂಶಗಳನ್ನು ಗುರುತಿಸಿ ಒಂದು ಲೇಖನವನ್ನು ಪ್ರಕಟಿಸಿದರು. ಇದು ಆಂತ್ರೊಪೊಮೆಟ್ರಿಕ್ ಅಧ್ಯಯನದ ಪ್ರಪ್ರಥಮ ವೈಜ್ಞಾನಿಕ ಲೇಖನ ಎಂದು ಪರಿಗಣಿತವಾಗಿದೆ.
1931ರಲ್ಲಿ ಪ್ರಮಥನಾಥ ಬ್ಯಾನರ್ಜಿ, ನಿಖಿಲ್ ರಂಜನ್ ಸೇನ್, ಆರ್. ಎನ್.ಮುಖರ್ಜಿ ಯವರೊಂದಿಗೆ ಕೂಡಿಕೊಂಡು ಮೊಟ್ಟ ಮೊದಲಿಗೆ “ಸಂಖ್ಯಾಶಾಸ್ತ್ರೀಯ (Statistical) ಪ್ರಯೋಗಾಲಯ”ವನ್ನು ಸ್ಥಾಪಿಸಿದರು. ಅನಂತರ “ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ”ನ್ನು ಪ್ರೆಸಿಡೆನ್ಸಿ ಕಾಲೇಜಿನ ಭೌತಶಾಸ್ತ್ರ ವಿಭಾಗದಡಿಯಲ್ಲಿ ಸ್ಥಾಪಿಸಿದರು. ಇದು ಎಸ್. ಎಸ್. ಬೋಸ್, ಜೆ.ಎಂ. ಸೇನಗುಪ್ತ, ಆರ್.ಸಿ. ಬೋಸ್, ಎಸ್. ಎನ್. ರಾಯ್, ಆರ್. ಸಿ. ಬೋಸ್ ಮುಂತಾದವರ ಯುಗಪ್ರವರ್ತಕ ಕಾರ್ಯಯೋಜನೆಗಳಿಂದ ಅಭಿವೃದ್ಧಿಗೊಂಡಿತು. ಇದು 1933ರಲ್ಲಿ ಬಯೋಮೆಟ್ರಿಕ್ ಪತ್ರಿಕೆಯ ಮಾದರಿಯಲ್ಲಿ “ಸಾಂಖ್ಯ” ಎಂಬ ಪತ್ರಿಕೆಯನ್ನು ಆರಂಭಿಸಿತು. 1938ರಲ್ಲಿ ತರಬೇತಿ ವಿಭಾಗ ಈ ಸಂಸ್ಥೆಗೆ ಸೇರ್ಪಡೆಗೊಂಡಿತು. ಇಲ್ಲಿ ತರಬೇತಿ ಪಡೆದ ಅನೇಕರು ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕ ಮತ್ತಿತರ ದೇಶಗಳಲ್ಲಿ ಉದ್ಯೋಗವನ್ನು ಪಡೆದರು. 1959ರಲ್ಲಿ ಇದು ಡೀಮ್ಡ್ ವಿಶ್ವವಿದ್ಯಾನಿಲಯ ಆಯಿತು.
ಇವರು “ಮಲ್ಟಿ ವೇರಿಯೇಟ್ ಡಿಸ್ಟೆನ್ಸ್ ಮೆಸ(ಷ)ರ್ (measure)” ನ್ನು ಬಳಸಿ ಜನಸಮುದಾಯಗಳ ವಿಶೇಷತೆಗಳನ್ನು ಮತ್ತು ಅವುಗಳ ಒಗ್ಗೂಡುವಿಕೆಯನ್ನು ತುಲನೆಮಾಡುವ ಮಾರ್ಗವನ್ನು ಕಂಡುಕೊಂಡರು. ಈ ಮಾಪನವು ಈಗ ಮಹಾಲನೋಬಿಸ್ ಡಿಸ್ಟೆನ್ಸ್ ಎಂದು ಪ್ರಸಿದ್ಧವಾಗಿದೆ. ಇದು ಮಲ್ಟಿಪಲ್ ಆಯಾಮಗಳ ಅಳತೆಯನ್ನು ಆಧರಿಸಿದ ವಿಭಾಗೀಕರಣದಿಂದ ಒಂದು ಸಂಗತಿಯು ಎಷ್ಟು ದೂರ ಸರಿಯುತ್ತದೆ ಎಂಬುದನ್ನು ಸೂಚಿಸುತ್ತದೆ. ಇದನ್ನು ಈಗ ಕ್ಲಸ್ಟರ್ ಅನಾಲಿಸಿಸ್ ಮತ್ತು ಕ್ಲಾಸಿಫಿಕೇಷನ್ ಗಳಿಗೆ ಬಳಸುತ್ತಾರೆ. ಶಾರೀರಿಕ ಮಾನವಶಾಸ್ತ್ರ (ಫಿಸಿಕಲ್ ಆಂತ್ರೊಪಾಲಜಿ) ದಲ್ಲಿ ಆಸಕ್ತಿ ವಹಿಸಿ ತಲೆಬುರುಡೆಗಳನ್ನು ಕರಾರುವಾಕ್ಕಾಗಿ ಅಳೆಯುವ ಒಂದು ಉಪಕರಣವನ್ನು ಮಹಾಲನೋಬಿಸ್ ಕಂಡುಹಿಡಿದರು. ಅದನ್ನು Profilo scope ಎಂದು ಕರೆಯುತ್ತಾರೆ.
ಇವರು ದೊಡ್ಡ ಪ್ರಮಾಣದ ಸ್ಯಾಂಪಲ್ ಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಪೈಲಟ್ ಸರ್ವೆ ಎಂಬ ಪರಿಕಲ್ಪನೆಯನ್ನು ನಿರೂಪಿಸಿದರು. ಇದನ್ನು 1937 ಮತ್ತು 1944ರ ನಡುವಿನ ಅವಧಿಯಲ್ಲಿ “ಕನ್ಸ್ಯೂಮರ್ ವೆಚ್ಚ, ಚಹ ಕುಡಿಯುವ ಚಟ, ಸಾರ್ವಜನಿಕ ಮತಾಭಿಪ್ರಾಯ, ಎಕರೆಯೊಂದರಲ್ಲಿ ಪಡೆಯುವ ಬೆಳೆ, ಸಸ್ಯಗಳಿಗೆ ಬರುವ ರೋಗ” ಇವುಗಳ ಸರ್ವೇಕ್ಷಣೆ ಮಾಡಲು ಬಳಸಿದರು. ಅದುವರೆವಿಗೂ ಯಾವ ದೇಶದಲ್ಲೂ ಇಂಥ ಯಶಸ್ವಿ ತಂತ್ರವನ್ನು ಹೆಚ್ಚು ಕರಾರುವಾಕ್ಕಾಗಿ ವಾಸ್ತವತೆಯನ್ನು ಕಂಡುಕೊಳ್ಳುವ ಪ್ರಕ್ರಿಯೆಯಾಗಿ ಬಳಸಿಲ್ಲ ಎನ್ನುವ ಪಂಡಿತ-ಪ್ರಶಂಸೆಗೆ ದೇಶ ವಿದೇಶಗಳಲ್ಲಿ ಪಾತ್ರರಾದರು.
4 ಮೀಟರ್ ವೃತ್ತಾಕಾರದಲ್ಲಿ ಬೆಳೆಯನ್ನು ಕತ್ತರಿಸಿ ಬೆಳೆ ಒಟ್ಟಾರೆ ಎಷ್ಟು ಬಂದಿದೆ ಎಂಬುದನ್ನು ಅಳತೆಮಾಡುವ ವಿಧಾನವನ್ನು ಪರಿಚಯಿಸಿದರು. ಮುಂದೆ ಇವರು ಸ್ವತಂತ್ರ ಭಾರತದ ಯೋಜನಾ ಆಯೋಗದ ಸಕ್ರಿಯ ಸದಸ್ಯರಾಗಿ ಭಾರತವನ್ನು ಪಬ್ಲಿಕ್ ಮತ್ತು ಪ್ರೈವೇಟ್ ಸೆಕ್ಟರ್ಗಳೆರಡನ್ನೂ ಒಳಗೊಳ್ಳುವ ಕೈಗಾರಿಕಾ ದೇಶವನ್ನಾಗಿ ರೂಪಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇವರು ತಮ್ಮ ವಿಶಿಷ್ಟ ಅಧ್ಯಯನದ ಕಾರಣದಿಂದಾಗಿ 1935ರಲ್ಲಿ “ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್”, “ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ”; 1945ರಲ್ಲಿ ರಾಯಲ್ ಸೊಸೈಟಿ ಲಂಡನ್, 1951ರಲ್ಲಿ “ಎಕನಾಮಿಕ್ ಸೊಸೈಟಿ ಯುನೈಟೆಡ್ ಸ್ಟೇಟ್ಸ್”, 1954ರಲ್ಲಿ “ರಾಯಲ್ ಸ್ಟಾಟಿಸ್ಟಿಕಲ್ ಸೊಸೈಟಿ ಯುನೈಟೆಡ್ ಕಿಂಗ್ ಡಮ್”, 1961ರಲ್ಲಿ “ಅಮೆರಿಕನ್ ಸ್ಟಾಟಿಸ್ಟಿಕಲ್ ಅಸೋಸಿಯೇಷನ್” ಗಳ ಫೆಲೋ ಆಗಿ ಮಾನ್ಯರಾದರು.
ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=36268
(ಮುಂದುವರಿಯುವುದು)
-ಪದ್ಮಿನಿ ಹೆಗಡೆ
ಎಂದಿನಂತೆ… ಮಾಹಿತಿಪೂರ್ಣ…ಲೇಖನ… ಓದಿಸಿಕೊಂಡು…ಹೋಗುತ್ತಿದೆ…ಧನ್ಯವಾದಗಳು ಮೇಡಂ
Informative