ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 15
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
“ಎಕ್ಸ್-ರೇ ಸ್ಪೆಕ್ಟ್ರೊಸ್ಕೊಪಿ” ಯ ಥಿಯರಿ ಮತ್ತು ಪ್ರಯೋಗ ಎರಡನ್ನೂ ಕರತಲಾಮಲಕ ಮಾಡಿಕೊಡಿದ್ದ ವಿದು ಭೂಷಣ ರೇ “ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ” ಮತ್ತು ಕಲ್ಕತ್ತ ವಿಶ್ವವಿದ್ಯಾನಿಲಯಗಳಲ್ಲಿ 1921ರಲ್ಲಿ ಭೌತಶಾಸ್ತ್ರದ ಅಧ್ಯಾಪಕರಾದರು. 1922ರಲ್ಲಿ ಸಿವಿ.ರಾಮನ್ ಅವರ ನೇತೃತ್ವದಲ್ಲಿ ವಾತಾವರಣದಲ್ಲಿ ಬೆಳಕಿನ ಚದುರುವಿಕೆ ಎಂಬುದರ ಬಗ್ಗೆ ಸಂಶೋಧನೆ ಮಾಡಿ ಡಾಕ್ಟೊರೇಟ್ ಪದವಿಯನ್ನು ಪಡೆದರು. 1923ರಲ್ಲಿ ಎರಡು ವರ್ಷ ರಜೆ ಪಡೆದು ಯೂರೋಪಿಗೆ ಹೋದರು. Manne Sieghahn ಅವರೊಂದಿಗೆ ಎಕ್ಸ್-ರೇ ಸ್ಪೆಕ್ಟ್ರೊಸ್ಕೊಪಿಗೆ ಸಂಬಂಧಿಸಿದಂತೆ ಪ್ರಯೋಗಗಳನ್ನು ಕೆಲಕಾಲ ಮಾಡಿದರು. ನೈಲ್ ಬೋರ್ ಅವರೊಂದಿಗೆ ಅಧ್ಯಯನ ಮಾಡಿ ಥಿಯರಿಟಿಕಲ್ ವರ್ಕ್ ಮಾಡಿದರು. ಜರ್ಮನಿ, ಇಟೆಲಿಗಳಲ್ಲಿಯ ಪ್ರಯೋಗಾಲಯಗಳನ್ನೆಲ್ಲಾ ವಿವರವಾಗಿ ಪರಿಶೀಲಿಸಿದರು. ಭಾರತಕ್ಕೆ ಬಂದಮೇಲೆ ಅಂಥ ಪ್ರಯೋಗಾಲಯವನ್ನು ತಾನೂ ಸ್ಥಾಪಿಸಬೇಕೆಂದು ಯೋಚಿಸಿದರು. ಇದಕ್ಕೆ ವಿಶ್ವವಿದ್ಯಾನಿಲಯವು ಹಣಕಾಸಿನ ಸಹಾಯವನ್ನು ಒದಗಿಸಬೇಕೆಂದು ಶಿಫಾರಸು ಮಾಡಿ ನೀಲ್ ಬೋರ್ ವಿಶ್ವವಿದ್ಯಾನಿಲಯಕ್ಕೆ ಪತ್ರ ಬರೆದಿದ್ದರು. ಅದರಲ್ಲಿ ಇಂಥ ಕಾರ್ಯವನ್ನು ನಿರ್ವಹಿಸುವುದಕ್ಕೆ ಪ್ರಸ್ತುತ ಲಭ್ಯವಿರುವ ಎಲ್ಲಾ ಜ್ಞಾನವನ್ನು ಕರತಲಾಮಲಕ ಮಾಡಿಕೊಂಡು ವಿಧು ಭೂಷಣ್ ರೇ ಅಸಾಧಾರಣವಾದ ಅರ್ಹತೆಯನ್ನು ಪಡೆದಿರುವರು ಎಂದು ಶ್ಲಾಘಿಸಿದ್ದರು.
1927-28ರಲ್ಲಿ ಅಂಥ ಪ್ರಯೋಗಾಲಯವನ್ನುಸ್ಥಾಪಿಸಿದ ವಿಧು ಭೂಷಣ ರೇ “ಎಕ್ಸ್-ರೇ ಸ್ಪೆಕ್ಟ್ರೊಸ್ಕೊಪಿ” ಮತ್ತು ಪವನಶಾಸ್ತ್ರದ ಬಗ್ಗೆಯೂ ಅಧ್ಯಯನ ಮಾಡಿದರು. ಭಾರತದಲ್ಲಿ ಪ್ರಪ್ರಥಮವಾಗಿ ಸ್ಥಾಪಿತವಾದ ಈ ಪ್ರಯೋಗಾಲಯ ಆರ್.ಸಿ. ಮಜುಮದಾರರಂಥ ಯುವ ವಿಜ್ಞಾನಿಗಳಿಗೆ ತರಬೇತಿ ಕೇಂದ್ರ ಆಯಿತು. ಇವರು ಇಂದಿಗೂ ಪ್ರಸ್ತುತ ಆಗಿರುವ ಸಿದ್ಧಾಂತಗಳನ್ನು ವರ್ಣವೈವಿಧ್ಯತೆಯ ಮೋಡಗಳ ಬಗ್ಗೆ, ವಾತಾವರಣದಲ್ಲಿ ಚದುರಿರುವ ಬೆಳಕು ಮತ್ತು ಬೆಳಕಿನ ಪ್ರಭಾಮಂಡಲದ ಬಗ್ಗೆ, ಗ್ರಹಣದ ಸಂದರ್ಭದಲ್ಲಿ ಸೂರ್ಯನ ಸುತ್ತ ಕಾಣುವ ಕೊರೊನಾದ ಬಗ್ಗೆ ಮಂಡಿಸಿದ್ದಾರೆ. ರಾಮನ್ ಎಫೆಕ್ಟ್ ನ ಶೋಧದ ನಂತರ ಇದರ ಸದೃಶ ಪರಿಣಾಮಗಳನ್ನು ಗುರುತಿಸಲು ಅಮೆರಿಕನ್, ಜರ್ಮನ್ ವಿಜ್ಞಾನಿಗಳಿಗೆ ಅಸಾಧ್ಯವಾದ ಕಾಲದಲ್ಲಿ 1930ರಲ್ಲಿ ಎಕ್ಸ್-ರೇ ನಲ್ಲಿ ಅಂಥ ಸದೃಶ ಪರಿಣಾಮಗಳನ್ನು ಕಂಡ ಇವರ ಪ್ರಾಯೋಗಿಕ ಫಲಿತಾಂಶವನ್ನು 1937ರಲ್ಲಿ ಆರ್ನಾಲ್ಡ್ ಸೋಮರ್ ಫೆಲ್ಡ್ ದೃಢೀಕರಿಸಿ ಮತ್ತಷ್ಟು ಸಮರ್ಥನೆಗಳನ್ನು ಒದಗಿಸಿದುದು ಇವರ ಕೀರ್ತಿಯನ್ನು ಹೆಚ್ಚಿಸಿದೆ.
ಸಿ.ವಿ. ರಾಮನ್ ನಂತರ ಹೆಚ್ಚು ಸಮರ್ಥವಾದ ಪ್ರಯೋಗಾಲಯವನ್ನು ಮೊಟ್ಟಮೊದಲಿಗೆ ಸ್ಥಾಪಿಸಿದ ಮತ್ತು ಅಲ್ಲಿ ಭಾರತೀಯ ವಿಜ್ಞಾನಿಗಳು ಪ್ರಾಯೋಗಿಕ ಸಂಶೋಧನೆಗಳನ್ನು ಯಶಸ್ವಿಯಾಗಿ ಮಾಡಲು ಅವಕಾಶ ಕಲ್ಪಿಸಿದ ಹಾಗೂ ಭಾರತೀಯ ವಿಜ್ಞಾನಿಗಳಿಗೆ ಯೂರೋಪಿಯನ್ ವಿಜ್ಞಾನಿಗಳೊಂದಿಗೆ ಪರಿಣಾಮಕಾರಿ ಸಂಪರ್ಕ ಸೇತುವೆಯನ್ನು ರೂಪಿಸಿದ ಕೀರ್ತಿ ಬಿಧುಭೂಷಣ ರೇ ಮತ್ತು ಅವರ ಸಹ ವಿಜ್ಞಾನಿಗಳವರದು. ಜನಸಮುದಾಯದಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು 1935ರಲ್ಲಿ ಆರಂಭವಾದ “ಇಂಡಿಯನ್ ಸೈನ್ಸ್ ನ್ಯೂಸ್ ಅಸೋಸಿಯೇಷನ್” ನ ಸ್ಥಾಪಕರಲ್ಲಿ ಒಬ್ಬರಾದ ವಿಧು ಭೂಷಣ ರೇ 15 ವರ್ಷಗಳ ಕಾಲ ಜಾಗತಿಕ ಪ್ರತಿಷ್ಠಿತ ನೇಚರ್ ಮುಂತಾದ ಪತ್ರಿಕೆಗಳಲ್ಲಿ ತಮ್ಮ ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದರು. ಭಾರತದ “ಕಲ್ಚರ್ ಅಂಡ್ ಸೈನ್ಸ್” ಪತ್ರಿಕೆಯನ್ನು ಮುನ್ನಡೆಸಿದರು. ಈ ಅಸೋಸಿಯೇಷನ್ ಮತ್ತು ಪತ್ರಿಕೆ ಈಗಲೂ ಕಾರ್ಯನಿರತವಾಗಿವೆ.
ಭಾರತದಲ್ಲಿಯೇ ಗಣಿತಶಾಸ್ತ್ರ, ರಸಾಯನಶಾಸ್ತ್ರಗಳೆರಡರಲ್ಲೂ ಆನರ್ಸ್ ಪದವಿಯನ್ನು, ಉನ್ನತ ಮಟ್ಟದ ರಸಾಯನಶಾಸ್ತ್ರದ ಅಧ್ಯಯನದೊಂದಿಗೆ ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿಯನ್ನು, ಮೆಡಿಸಿನ್ ಮತ್ತು ಸರ್ಜರಿ ಎರಡರಲ್ಲೂ ಪ್ರಥಮ ಸ್ಥಾನದಲ್ಲಿ ಎಂ.ಬಿ. ಪದವಿಯನ್ನು, ಆನಂತರ ಎಂ.ಡಿ. ಪದವಿ, ಡಾಕ್ಟೊರೇಟ್ ಪದವಿಗಳೆರಡನ್ನೂ ಪಡೆದವರು ಉಪೇಂದ್ರನಾಥ ಬ್ರಹ್ಮಚಾರಿ. ಇವರ ಡಾಕ್ಟೊರೇಟ್ ಪ್ರೌಢ ಪ್ರಬಂಧ “Studies in Haemolysis”. ಇವರು 1922ರಲ್ಲಿ “Leishmaniasis” ಎಂಬ ರೋಗದ ಹೊಸ ರೂಪದ ಪ್ರಾಣಾಂತಿಕ ರೋಗವನ್ನು ಮೊಟ್ಟ ಮೊದಲಿಗೆ ಪತ್ತೆ ಹಚ್ಚಿದರು. ಇದನ್ನು ಅವರು “Dermal Leishmaniasis” ಎಂದು ಕರೆದರು. ಇದನ್ನು ಈಗ “Post-Kal-azar Dermal Leishmaniasis” ಎಂದು ಕರೆಯುತ್ತಾರೆ.
ಬ್ರಹ್ಮಚಾರಿ ಅವರು Kala-azar ಗೆ ರಾಮಬಾಣವಾಗಿ “Urea-Stibamine (Carbostibamide)” ಎಂಬ ಸಿಂಥೆಸಿಸ್ ಅನ್ನು ಬಳಸಿ ಯಶಸ್ವಿಯಾದರು. ಇವರ ಈ ಶೋಧಕ್ಕಾಗಿ ನೋಬೆಲ್ ಪಾರಿತೋಷಕ ನೀಡಬೇಕೆಂದು ನೋಬೆಲ್ ಪಾರಿತೋಷಕ ಸಮಿತಿಗೆ ಇವರ ಹೆಸರನ್ನು 1924 ಮತ್ತು 1934ರಲ್ಲಿ ಎರಡು ಬಾರಿ ಕಳುಹಿಸಿದರು ಎನ್ನುವುದು ಮತ್ತು ಲಂಡನ್ನಿನ ಬೀದಿಯೊಂದಕ್ಕೆ ಇವರ ಹೆಸರನ್ನು ಇಟ್ಟಿದ್ದಾರೆ ಎನ್ನುವುದು ಅವರ ವೈದ್ಯಕೀಯ ಪ್ರಾವೀಣ್ಯತೆಯ ಹೆಗ್ಗುರುತು.
ಇವರ ಸಂಶೋಧನಾತ್ಮಕ ಕೃತಿಗಳು – Studies in Haemolysis (1909), Kala-Azar: Its treatment (1917), Treatise on Kala-Azar (1928), Campaign against Kala-Azar in India, (1937), Progress of Medical research work in India during last 25 years (1938), Gleanings from Researchers Vol 1 (1940), Vol 2 (1941), Infantile Biliary Cirrhosis in India”.
ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=36111
(ಮುಂದುವರಿಯುವುದು)
-ಪದ್ಮಿನಿ ಹೆಗಡೆ
ಪದ್ಮಿನಿ.ಮೇಡಂ ಅವರ…ಮಾಹಿತಿ ಪುರ್ಣ… ಲೇಖನ.. ಓದಿಸಿಕೊಂಡು…ಹೋಗುತ್ತಿದೆ..ಧನ್ಯವಾದಗಳು..
Nice
ಎಂದಿನಂತೆ ಸೊಗಸಾದ ಮಾಹಿತಿಪೂರ್ಣ ಲೇಖನ.
ಆಸಕ್ತಿಯಿಂದ ಓದಿ ಸೊಗಸಾದ ಪ್ರತಿಕ್ರಿಯೆ ಕೊಡುವ ಬಿ.ಆರ್. ನಾಗರತ್ನ ಮೇಡಂ, ನಯನ ಬಜಕೂಡ್ಲು ಮೇಡಂ, ಶಂಕರಿ ಶರ್ಮ ಮೇಡಂ ಅವರಿಗೆ ಮತ್ತು ಅನಾಮಿಕ ಓದುಗ ಮಿತ್ರರಿಗೆ ಧನ್ಯವಾದಗಳು.