ಕಾದಂಬರಿ: ನೆರಳು…ಕಿರಣ 25
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
“ಓ ಹೌದೇ ! ಮಹಡಿ ಮೇಲಿರುವ ಹೊರಾಂಗಣ ಪ್ರಶಸ್ಥವಾಗಿದೆ. ಗಾಳಿ ಬೆಳಕು ಯಥೇಚ್ಛವಾಗಿ ಬರುತ್ತದೆ. ಸುತ್ತಲೂ ಗೋಡೆಯಮೇಲೆ ಚಜ್ಜಾ ಇರುವುದರಿಂದ ಮಳೆಗಾಲದಲ್ಲೂ ತೊಂದರೆಯಾಗದು. ಕೆಳಮನೆಯಲ್ಲಿ ಯಾರೇ ಬಂದರೂ ತೊಂದರೆಯಾಗುವುದಿಲ್ಲ.”ಎಂದರು ಜೋಯಿಸರು. ಶ್ರೀನಿವಾಸನಿಗೂ ಅದೇ ಸಮ್ಮತವಾಯಿತು. ಇನ್ನು ಪ್ರರಂಭಿಸುವ ದಿನ “ನಾಳಿದ್ದು ಸೋಮವಾರ, ಒಳ್ಳೆಯದು. ಅವತ್ತು ಪ್ರಾರಂಭಿಸಿದರೆ ಮಂಗಳವಾರವೂ ಮುಂದುವರೆಸಬಹುದು. ದ್ವಿತೀಯವಿಘ್ನವೂ ಆಗುವುದು ಬೇಡ.” ಎಂದನು ಶ್ರೀನಿವಾಸ. “ಇಂದು ಸಂಜೆ ನಾನು ಅವರ ಮನೆಗೆ ಹೋಗಿ ವಿಷಯ ತಿಳಿಸಿ ಬರುತ್ತೇನೆ. ಆಗಬಹುದೇ ಮಾತಾಶ್ರೀ” ಎಂದು ಕೇಳಿದನು.
ಸೀತಮ್ಮ ಮಗನ ಮಾತುಗಳನ್ನು ಕೇಳಿ ಪ್ರೀತಿಯಿಂದ ಅವನ ಕೆನ್ನೆ ಹಿಂಡಿದರು. ಎಂದಿನಂತೆ ಸಂಜೆಯ ಸಂಧ್ಯಾವಂದನೆ ಮಾಡಲು ಸ್ನಾನ ಮುಗಿಸಿ ಬಂದ ಜೋಯಿಸರು “ಇದೇನು ಸೀತೂ, ನಮ್ಮ ಹಿತ್ತಲಿಗೆ ಹೊಸಕಳೆ ಬಂದುಬಿಟ್ಟಿದೆ. ನೆಲವೆಲ್ಲವೂ ಮಟ್ಟಸವಾಗಿದೆ. ತಿಪ್ಪೆಯ ಎತ್ತರ ಕಾಣುತ್ತಿಲ್ಲ. ಪಕ್ಕದ ಮನೆಯ ಭೀಮೇಶನಿಗೆ ಹುರುಪು ಬಂದಂತಿದೆ. ಏಕೆ ಜಮೀನಿನ ಕೆಲಸ ಇರಲಿಲ್ಲವಂತೇನು?” ಎಂದು ಕೇಳಿದರು.
“ಅವೆಲ್ಲಾ ಕೆಲಸಗಳನ್ನು ಮಾಡಿದ್ದೇನೋ ಭೀಮೇಶನೇ. ಆದರೆ ಮಾಡಿಸಿದ್ದು ನಮ್ಮ ಸೊಸೆ ಭಾಗ್ಯ. ಅವಳ ಕ್ಯತೋಟದ ಕಲ್ಪನೆ. ಗೊಬ್ಬರದ ಗುಂಡಿಯ ವ್ಯವಸ್ಥೆಯನ್ನು ವಿವರಿಸಿದರು.’ ಸೀತಮ್ಮ.
ಇದೆಲ್ಲ ಕೇಳಿದ ಜೊಯಿಸರು ಮನದಲ್ಲೇ ಈ ಹುಡುಗಿ ಜಾಣೆಯಷ್ಟೇ ಅಲ್ಲ. ಎಲ್ಲದರಲ್ಲೂ ಉತ್ಸಾಹಿ. ತನ್ನದೆನ್ನುವ ಮಮಕಾರವಿದೆ. ಮನೆ, ಮನೆತನ ಎರಡನ್ನೂ ಚೆನ್ನಾಗಿ ನಿಭಾಯಿಸುವ ಛಾತಿಯಿದೆ. ಭಗವಂತ ನಿನ್ನ ಕೃಪೆ ಅನಂತ. ಈ ನಮ್ಮ ಮನೆಯ ಮಹಾಲಕ್ಷ್ಮಿಯ ಮನನೋಯದಂತೆ, ಅವಳು ಸಾಧನೆಯ ಶಿಖರವೇರುವಂತೆ ಆಶೀರ್ವದಿಸಪ್ಪಾ ಎಂದು ಕೇಳಿಕೊಳ್ಳುತ್ತಾ ಪೂಜಾಗೃಹವನ್ನು ಹೊಕ್ಕರು.
ಅಂದು ರಾತ್ರಿಯಲ್ಲಿ ಶ್ರೀನಿವಾಸ “ಭಾಗ್ಯಾ ನೀನು ಜಾಣೆ, ಗುಣವಂತೆ ಎನ್ನುವುದು ಗೊತ್ತು. ಆದರೆ ಅವುಗಳಲ್ಲಿ ನನಗೆ ಬಹಳ ಹಿಡಿಸಿದ ಒಂದು ಗುಣವಿದೆ.” ಎಂದನು.
“ಅದೇನಪ್ಪಾ ನಿಮಗೆ ಅಷ್ಟೊಂದು ಹಿಡಿಸಿದ್ದು?” ಕೇಳಿದಳು ಭಾಗ್ಯ.
“ಯಾವುದೇ ವಿಚಾರವನ್ನಾಗಲೀ, ಸಂಗತಿಯನ್ನಾಗಲೀ, ಪದೇ ಪದೇ, ಕೆದಕಿ ಕೆದಕಿ ಹಿಂಸೆ ಕೊಡದೇ ಇರುವುದು. ಏಕೆಂದರೆ ನೀನು ಸಂಗೀತ ಕಲಿಕೆಯನ್ನು ಮುಂದುವರೆಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದೆ. ಅದಕ್ಕೆ ಮನೆಯಲ್ಲಿ ಅಪ್ಪ, ಅಮ್ಮ, ನಾನು ಒಪ್ಪಿಗೆಯನ್ನು ಸೂಚಿಸಿದ್ದೆವು. ಅದಕ್ಕಾಗಿ ಮುಂದಿನ ಏರ್ಪಾಡನ್ನು ಮಾಡಿಕೊಡುತ್ತೇವೆಂದು ಭರವಸೆ ನೀಡಿದ್ದೆವು. ಆದರೆ ಅದನ್ನು ಕೂಡಲೆ ಕಾರ್ಯರೂಪಕ್ಕೆ ತರದೇ ಮೂರು ತಿಂಗಳಾಗುತ್ತಾ ಬಂದರೂ ಅದರ ಬಗ್ಗೆ ನೀನು ಚಕಾರವೆತ್ತದೆ ಕೆಲಸಕಾರ್ಯಗಳಲ್ಲಿ ಮುಳುಗಿದ್ದೀಯೆ. ನಮ್ಮನ್ನು ಹಂಗಿಸಲಿಲ್ಲ. ಅತ್ತೆಯ ಮನೆಗೆ ಹೋಗಿದ್ದಾಗಲೂ ಅವರ ಪ್ರಶ್ನೆಗೆ ಗುರುಗಳನ್ನು ಹುಡುಕುತ್ತಿದ್ದಾರೆ ಎಂದುತ್ತರ ನೀಡಿ ಸಿಕ್ಕಿದ ತಕ್ಷಣ ಪ್ರಾರಂಭಿಸುತ್ತಾರೆ. ಪ್ರಾರಂಭವಾದರೆ ಹೆಚ್ಚು ಸಾರಿ ಅಲ್ಲಿಗೆ ಬರಲಾಗುವುದಿಲ್ಲ ಎಂದು ಹೇಳಿದೆಯೇ ಹೊರತು ನಮ್ಮನ್ನು ದೂಷಿಸಲಿಲ್ಲ.” ಎಂದನು.
“ಹೂಂ ತಾಳಿದವನು ಬಾಳಿಯಾನು ಎಂಬ ಗಾದೆಮಾತಿನ ಅರ್ಥ ತಿಳಿದು ಸುಮ್ಮನಾಗಿದ್ದೆ. ನೀವೆಲ್ಲ ಒಪ್ಪಿರುವುದೇ ನನ್ನ ಪುಣ್ಯ. ಇನ್ನು ನಾನು ಮಧ್ಯೆ ಏಕೆ ಬಾಯಿ ಹಾಕಲಿ ಎಂದಕೊಂಡಳು ಮನಸ್ಸಿನಲ್ಲಿಯೇ”
“ಏಕೆ ಮೌನಿಯಾದೆ ಬೇಸರವೇ?” ಎಂದ ಶ್ರೀನಿವಾಸ.
“ಇಲ್ಲಪ್ಪಾ ಹೇಗಿದ್ದರೂ ಮಾತುಕೊಟ್ಟಿದ್ದೀರಿ, ಅದೂ ಹಿರಿಯರ ಸಮ್ಮುಖದಲ್ಲಿ. ಅವರೂ ಇದ್ದಾರಲ್ಲಾ. ಖಂಡಿತ ನಡೆಸಿಕೊಡುತ್ತೀರಿ ಎಂಬ ಭರವಸೆ ನನಗಿತ್ತು. ನಿಧಾನವೇ ಪ್ರದಾನ ಕೇಳಿಲ್ಲವೇ. ಎಲ್ಲ ರೀತಿಯಲ್ಲೂ ನೋಡಿ ಮಾಡುತ್ತೀರಿ ಎಂದು ಸುಮ್ಮನಿದ್ದೆ” ಎಂದಳು ಭಾಗ್ಯ.
“ಹೂ ಮಾತಿನಲ್ಲಿ ಜಾಣೆ ಬಿಡು. ಅದಿರಲಿ ಗೌರಿಯಮ್ಮನ ಬಗ್ಗೆ ಒಂದೆರಡು ವಿಚಾರಗಳನ್ನು ನಿನಗೆ ತಿಳಿಸುತ್ತೇನೆ ಕೇಳು. ಅವರು ಬಹಳ ಕಟ್ಟುನಿಟ್ಟಿನ ಹೆಂಗಸು. ವೈಯಕ್ತಿಕ ವಿಚಾರಗಳನ್ನು ಅವರಾಗಿಯೇ ಏನಾದರೂ ಹೇಳಿದರೆ ಸರಿ, ನೀನಾಗಿ ಯಾವುದನ್ನೂ ಕೆದಕಲು ಹೋಗಬೇಡ. ಬದುಕಿನಲ್ಲಿ ಬಹಳ ನೋವುಂಡಜೀವ. ಆದರೆ ಸಂಗೀತ ಜ್ಞಾನದಲ್ಲಿ ದೈತ್ಯ ಪ್ರತಿಭೆ. ಅದರಲ್ಲಿ ಎರಡು ಮಾತಿಲ್ಲ. ಆಸೆಯಿಂದ, ಶ್ರದ್ಧೆಯಿಟ್ಟು ಕಲಿಯುತ್ತಾರೆಂದು ತಿಳಿದರೆ ಅಂಥಹವರಿಗೆ ತಾವು ಕಲಿತಿದ್ದನ್ನೆಲ್ಲಾ ಧಾರೆಯೆರೆಯುತ್ತಾರೆ. ನಿಷ್ಕಪಟ ವ್ಯಕ್ತಿತ್ವ. ವಿದ್ಯೆಗೆ ಅವiರ್ಯಾದೆ ಮಾಡುತ್ತಿದ್ದಾರೆಂದು ಗೊತ್ತಾದರೆ ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತಾರೆ. ಅಂತಹವರ ಸಂಪರ್ಕವನ್ನೂ ಕಡಿದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಯೋಗಾಭ್ಯಾಸ ಕಲಿತಿದ್ದಾರೆ. ದಿನನಿತ್ಯ ಅದನ್ನು ಮುಂದುವರೆಸಿದ್ದಾರೆ. ನಿನಗೂ ಪ್ರಾಣಾಯಾಮ, ಧ್ಯಾನ ಪಾಠಗಳನ್ನು ಹೇಳಿಕೊಡಬಹುದು. ಸಂಗೀತಕ್ಕೆ ಅವು ಸಹಾಯಕವಾಗುತ್ತವೆಂಬ ಕಾರಣಗಳಿಂದ. ಗಮನವಿಟ್ಟು ಕಲಿತುಕೋ” ಎಂದು ಹೇಳಿದ ಶ್ರೀನಿವಾಸ.
ಇವೆಲ್ಲವನ್ನು ಇಷ್ಟು ಸ್ಪಷ್ಟವಾಗಿ ನಾಣಜ್ಜ ಹೇಳದಿದ್ದರೂ ತನಗೆ ತಿಳಿದಂತೆ ಹೇಳಿದ್ದು ಬಾಗ್ಯಳ ನೆನಪಿನಲ್ಲಿದ್ದರೂ ಗಂಡನ ಮುಂದೆ ಹೇಳಲು ಹೋಗಲಿಲ್ಲ. ಅದರಿಂದ ಅವರನ್ನು ತಪ್ಪು ತಿಳಿದಾರೆಂದು ಭಾವಿಸಿ ಈಗಲೇ ಹೊಸದಾಗಿ ಕೇಳಿದಂತೆ ನಡೆದುಕೊಂಡು “ಆಯಿತು ಪತಿದೇವರೇ, ಇನ್ನು ಮಲಗೋಣವೇ” ಎಂದು ನಾಟಕೀಯವಾಗಿ ಹೇಳಿದಳು ಭಾಗ್ಯ.
ಅವಳ ಮಾತಿಗೆ ನಕ್ಕ ಶ್ರೀನಿವಾಸ ದೀಪವನ್ನು ಆರಿಸಿದ.
ನಿಗದಿಪಡಿಸಿದ ದಿನದಂದು ಪೂಜೆಮಾಡಿ ಸಂಗೀತ ತರಗತಿಗೆ ಚಾಲನೆ ನೀಡಿದರು ಗೌರಿಯಮ್ಮ. ಎರಡು ದಿನಗಳು ಪಾಠಮಾಡಿದ ನಂತರ ಮೂರನೆಯ ದಿನದಿಂದ ಶ್ರೀನಿವಾಸ ಹೇಳಿದಂತೆ ಪ್ರಾಣಾಯಾಮ, ಓಂಕಾರೋಚ್ಛಾರ, ಧ್ಯಾನ ಇವುಗಳನ್ನು ಮಾಡಿ ತೋರಿಸಿ ಅವನ್ನೂ ಅಭ್ಯಾಸ ಮಾಡಬೇಕೆಂದು ಹೇಳಿದರು.
ಭಾಗ್ಯ “ಮೇಡಂ, ನನ್ನ ಹಿಂದಿನ ಪಾಠದ ಗುರುಗಳಾದ ವಿದುಷಿ ಅನ್ನಪೂರ್ಣಮ್ಮನವರು ನನಗೆ ಅವನ್ನು ಕಲಿಸಿಕೊಟ್ಟಿದ್ದರು. ನಾನು ಅಂದಿನಿಂದಲೂ ಅವುಗಳನ್ನು ಬಿಡದೆ ಅಭ್ಯಾಸ ಮಾಡುತ್ತಿದ್ದೇನೆ. ಈಗಲೂ ತರಗತಿಗೆ ಬರುವ ಮೊದಲು ಅಭ್ಯಾಸ ಮಾಡಿ ಸಿದ್ಧಳಾಗಿರುತ್ತೇನೆ” ಎಂದು ಹೇಳಿದಳು.
ಗೌರಿಯಮ್ಮ “ಭಲೇ ಹುಡುಗಿ ಚುರುಕಾಗಿದ್ದಾಳೆ.” ಎಂದುಕೊಂಡರು. ದಿನಗಳೆದಂತೆ ಅವಳ ಇಚ್ಛಾಶಕ್ತಿ ಅವರಿಗೆ ಮೆಚ್ಚುಗೆಯಾಯಿತು. ಪ್ರತಿದಿನದ ಪಾಠದ ಅವಧಿಯನ್ನು ತಾವೇ ಹೆಚ್ಚು ಮಾಡಿದರು. ಹೀಗೇ ಅವ್ಯಾಹತವಾಗಿ ಸಂಗೀತ ಕಲಿಕೆ ಮುಂದುವರೆಯುತ್ತಿತ್ತು. ಜೊತೆಜೊತೆಯಲ್ಲಿ ಭಾಗ್ಯಳ ತೋಟಗಾರಿಕೆ, ಮನೆಯ ಕೆಲಸಕಾರ್ಯಗಳು, ತವರಿಗೆ ಆಗಾಗ ಹೋಗಿ ಬರುವುದು, ವಿಶೇಷ ದಿನಗಳಲ್ಲಿ ಅವರನ್ನು ತಮ್ಮ ಮನೆಗೆ ಆಹ್ವಾನಿಸುವುದು ನಡೆದಿತ್ತು.
ಈ ಮಧ್ಯದಲ್ಲಿ ಭಾವನಾ ಎಸ್.ಎಸ್.ಎಲ್.ಸಿ., ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದಳು. ಮುಂದಕ್ಕೆ ಓದುವ ಆಸಕ್ತಿ ತೋರಲಿಲ್ಲ. ಅವಳ ಮದುವೆ ಮಾಡುವ ವಿಚಾರವನ್ನು ಕುಟುಂಬಕ್ಕೆ ಆಪ್ತರಾದ ಕೇಶವಯ್ಯನವರಲ್ಲಿ ಪ್ರಸ್ತಾಪಿಸಿದರು ಭಟ್ಟರು ಮತ್ತು ಲಕ್ಷ್ಮಿ.
“ಭಟ್ಟರೇ, ಲಕ್ಷ್ಮಿಯಮ್ಮ ನೀವೇನೂ ತಿಳಿದುಕೊಳ್ಳದಿದ್ದರೆ ನನ್ನದೊಂದು ಕೋರಿಕೆ, ಇಷ್ಟವಾದರೆ ಹೂಂ ಅನ್ನಿ, ಇಲ್ಲವಾದರೆ ದಾಕ್ಷಿಣ್ಯವೇನಿಲ್ಲ.”
“ಅದೇನು ಕೇಶವಣ್ಣ, ನಿಮ್ಮ ಬಾಯಿಂದ ಇಂತಹ ಮಾತು. ಛೇ..ನೀವು ನಮ್ಮನ್ನು ಹೀಗೆ ಮಾಡಿ ಎಂದು ಅಪ್ಪಣೆ ಮಾಡುವಷ್ಟು ಅಧಿಕಾರ ನಿಮಗಿದೆ. ಅಂತಹುದರಲ್ಲಿ ಹೀಗೆಲ್ಲ ಹೇಳಿ ನಮ್ಮನ್ನು ಚಿಕ್ಕವರನ್ನಾಗಿ ಮಾಡಬೇಡಿ, ಅದೇನು ಹೇಳಿ” ಎಂದಳು ಲಕ್ಷ್ಮಿ.
“ಏನಿಲ್ಲಾ ನಿಮ್ಮ ಎರಡನೆಯ ಮಗಳು ಭಾವನಾಳನ್ನು ನಮ್ಮ ಮನೆಗೆ ಸೊಸೆಯನ್ನಾಗಿ ಮಾಡಿಕೊಳ್ಳಬೇಕೆಂಬುದು ನಮ್ಮ ಆಸೆ. ಇದಕ್ಕೆ ನನ್ನ ಹೆತ್ತಮ್ಮನದ್ದೇ ಬೆಂಬಲ. ಹೇಗಿದ್ದರೂ ನನ್ನ ಮಗಳು ಶಾಂತಾಳ ವಿವಾಹ ನಿಶ್ಚಯವಾಗಿದೆ. ನಮ್ಮ ಸುಬ್ಬೂಗೂ ನೋಡಿಬಿಟ್ಟರೆ ಒಟ್ಟಿಗೇ ಸ್ವಲ್ಪ ಅಂತರದಲ್ಲಿ ಮುಗಿಸಬೇಕೆಂದಾಗ ನಮ್ಮಮ್ಮ ಈ ಪ್ರಸ್ತಾಪವನ್ನು ಮುಂದಿಟ್ಟರು. ಸುಬ್ಬುವಿಗೂ ಇಷ್ಟವಿದೆ. ಜಾತಕ ನನ್ನ ಹತ್ತಿರವೇ ಬರೆಸಿದ್ದಲ್ಲವೇ. ಇತ್ತು ನೋಡಿದ್ದೇನೆ. ಹೊಂದಾಣಿಕೆ ಆಗುತ್ತದೆ. ಭಾವನಾಳನ್ನು ಒಂದು ಮಾತು ಕೇಳಿ. ಅದಕ್ಕೂ ಮೊದಲು ನೀವು ದಂಪತಿಗಳಿಗೆ ಸಮ್ಮತಿಯಿದೆಯೇ ಎಂಬುದು ನನ್ನ ಕೋರಿಕೆ.” ಎಂದರು ಕೇಶವಯ್ಯ.
ಅದನ್ನು ಕೇಳಿದ ಭಟ್ಟರು ದಂಪತಿಗಳ ಮುಖ ಆನಂದದಿಂದ ಅರಳಿದ್ದನ್ನು ಅಲ್ಲಿಯೇ ಇದ್ದ ರಾಧಮ್ಮ, ಗೋದುಬಾಯಿ ನೋಡಿದರು. ಏನು ಹೇಳುತ್ತಾರೆಂಬ ಕಾತುರದಿಂದ ಅವರ ಕಡೆ ದಿಟ್ಟಿಸಿದರು.
ಸ್ವಲ್ಪವೂ ತಡಮಾಡದೆ ಲಕ್ಷ್ಮಿ ಭಟ್ಟರ ಕಡೆ ಸನ್ನೆ ಮಾಡುತ್ತ “ಕೇಶವಣ್ಣಾ ಇದಕ್ಕಿಂತ ಸಿಹಿಸುದ್ಧಿ ನಮಗಿನ್ನಾವುದಿದೆ. ಮನಸ್ಸಿನಲ್ಲಿತ್ತು ಆದರೆ ಕೇಳಲು ಧೈರ್ಯಸಾಲದೆ ಬಚ್ಚಿಟ್ಟುಕೊಂಡಿದ್ದೆವು. ಈ ವಿಚಾರವನ್ನು ಹೇಗಾದರೂ ಹೊರತರಬೇಕೆಂಬುದೇ ನನ್ನ ಇಚ್ಛೆಯಾಗಿತ್ತು. ಅಂದರೆ ನಮ್ಮ ಮಗಳಿಗೊಂದು ಸಂಬಂಧ ಹುಡುಕಲು ನಿಮಗೆ ಹೇಳಿದಾಗ ನಿಮ್ಮ ಅಭಿಪ್ರಾಯ ತಿಳಿಯುತ್ತದೆಂಬ ದೂರದ ಆಲೋಚನೆಯಿತ್ತು. ಈಗ ನಮಗೆಷ್ಟು ಸಂತೋಷವಾಗಿದೆ ಎಂದರೆ ಹೇಳಲಿಕ್ಕಾಗದು. ‘ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ’ ಎನ್ನುವ ಹಾಗಾಯಿತು. ಹೇಳಿ ಯಾವಾಗ ನಿಶ್ಚಿತಾರ್ಥ ಇಟ್ಟುಕೊಳ್ಳೋಣ ಎಂದರು ಇಬ್ಬರೂ ಒಕ್ಕೊರಲಿನಿಂದ. ಹಾಗೇ ಭಾವನಾ ನಿಮ್ಮ ಮನೆಗೆ ಬರುವುದಕ್ಕೆ ಏನಾದರೊಂದು ನೆಪ ಹುಡುಕುತ್ತಲೇ ಇರುತ್ತಾಳೆ. ಈ ವಿಷಯದ ಬಗ್ಗೆ ನಮ್ಮ ಭಾಗ್ಯ ಎಷ್ಟೋ ಸಾರಿ ತಮಾಷೆ ಮಾಡಿ ಗೋಳು ಹೊಯ್ದುಕೊಳ್ಳುತ್ತಿದ್ದದ್ದು ಉಂಟು. ಅಂಥಹುದರಲ್ಲಿ ನಿಮ್ಮ ಮನೆಗೇ ಸೊಸೆಯಾಗಿ ಹೋಗುತ್ತೀಯಾ ಎಂದರೆ ಒಪ್ಪಲಾರಳೇ. ಆದರೂ ಒಂದು ಮಾತು ಕೇಳುತ್ತೇವೆ. ಖಂಡಿತ ನಿರಾಕರಿಸಲಾರಳು” ಎಂದರು.
ಅವರಿಬ್ಬರ ಇಂಗಿತವನ್ನು ಅರಿತ ಮನೆಯವರೆಲ್ಲರಿಗೂ ಆನಂದವಾಯಿತು. ವಿಶೇಷವಾಗಿ ತನ್ನ ಗೆಳತಿಯೇ ಅತ್ತಿಗೆಯಾಗಿ ಬರುತ್ತಾಳೆಂದು ಶಾಂತಾಳಿಗೆ, ತಾನು ಬಯಸಿದ ಹುಡುಗಿಯೇ ಬಾಳಸಂಗಾತಿಯಾಗುವಳೆಂದು ಸುಬ್ಬುವಿಗೆ ಸಂತಸ. ಈ ಸುದ್ಧಿ ಭಾಗ್ಯಳಿಗೆ ತಲುಪಿದಾಗ ಅವಳಿಗೇನೂ ಅಚ್ಚರಿಯಾಗಲಿಲ್ಲ. ಅವಳ ಮನಸ್ಸಿನ ಮೂಲೆಯಲ್ಲಿ ಹೀಗೇ ಆಗಬಹುದೆಂದು ತಿಳಿದಿತ್ತು. ಆದರೆ ಕುಟುಂಬದ ಹಿರಿತಲೆಯೇ ಇವರಿಬ್ಬರ ವಿವಾಹಕ್ಕೆ ಮುತುವರ್ಜಿ ತೋರಿಸಿದ್ದು ಅಚ್ಚರಿಯೆನ್ನಿಸಿತು.
ಈ ಮದುವೆಯನ್ನೂ ಜೋಯಿಸರು ತಮ್ಮ ಮುತ್ತಾತನವರು ಕಟ್ಟಿಸಿದ ಛತ್ರದಲ್ಲಿಯೇ ಏರ್ಪಾಡು ಮಾಡಿಸಿ ಓಡಾಡಿದ್ದಂತೂ ಎಲ್ಲರಿಗೂ ಸಂತೋಷವನ್ನುಂಟುಮಾಡಿತು. ಭಟ್ಟರಿಗಂತೂ ಭಾಗ್ಯಳ ವಿವಾಹ ಸಂದರ್ಭದಲ್ಲಿ ತಾವು ಹೇಳಿದಂತೆ ನಡೆದಿದ್ದು ಹೆಚ್ಚಿನ ಹಿಗ್ಗು ತಂದಿತು. ಹಾಗೆಯೇ ತನ್ನ ಇನ್ನಿಬ್ಬರು ಮಕ್ಕಳಿಗೂ ಅವರ ಮದುವೆಗಳು ಅಲ್ಲಿಯೇ ನಡೆಯುವಂತೆ ಕರುಣಿಸಪ್ಪಾ ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿದರು. ಇದರಿಂದ ಭಟ್ಟರಿಗೆ ಲಕ್ಷ್ಮಿಗೆ ತಮ್ಮ ಬೀಗರು, ಮತ್ತು ಅಳಿಯನ ಮೇಲೆ ಮತ್ತಷ್ಟು ಅಕ್ಕರೆ, ಅಭಿಮಾನಗಳು ಹೆಚ್ಚಾದವು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35742
–ಬಿ.ಆರ್.ನಾಗರತ್ನ, ಮೈಸೂರು
ಸೊಗಸಾದ ಕಾದಂಬರಿ. ಗೃಹಿಣಿಯಾದವಳು ತನ್ನ ಬದುಕಲ್ಲಿ ಅಳವಡಿಸಿಕೊಳ್ಳಬಹುದಾದಂತಹ ಹಲವಾರು ಒಳ್ಳೆಯ ವಿಚಾರಗಳು ಗಮನಕ್ಕೆ ಬರುತ್ತದೆ ಕಥೆಯಲ್ಲಿ.
ಧನ್ಯವಾದಗಳು ನಯನ ಮೇಡಂ.
ಪ್ರತಿಭಾವಂತೆ ಭಾಗ್ಯಳ ಪಾತ್ರ ಇಷ್ಟವಾಯ್ತು. ಎಲ್ಲಾ ಕಂತುಗಳೂ ಚೆನ್ನಾಗಿವೆ.
ಧನ್ಯವಾದಗಳು ಶಂಕರಿ ಮೇಡಂ
ಒಂದು ಸಭ್ಯ ಸಾಂಪ್ರದಾಯಕ ಮಧ್ಯಮವರ್ಗದ ಕುಟುಂಬದ ಆಗು ಹೋಗುಗಳೆಲ್ಲವೂ ಒಂದೊಳ್ಳೆಯ ಚೌಕಟ್ಟಿನಲ್ಲಿ ಮೂಡಿ ಬರುತ್ತಿದೆ.
ಧನ್ಯವಾದಗಳು…
ಪದ್ಮಾ ಮೇಡಂ.