ಕಾದಂಬರಿ: ನೆರಳು…ಕಿರಣ 19
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
“ಹೂ ಮದುವೆಗೆ ಮೊದಲು ನನಗೂ ನಿಮ್ಮಹಾಗೇ ಅನ್ನಿಸಿತ್ತು. ಆದರೀಗ ಇಲ್ಲ. ನೀವುಗಳು ಮದುವೆಯಲ್ಲಿ ಗಮನಿಸಲಿಲ್ಲವೆಂದು ಕಾಣಿಸುತ್ತೆ. ಭಾಗ್ಯಾಳ ಸಹಪಾಠಿಗಳು ಗುಂಪಾಗಿ ಮಂಟಪಕ್ಕೆ ಬಂದಾಗ ನಿಮ್ಮ ಬಾದರಾಯಣ ಸಂಬಂಧದ ದೊಡ್ಡಪ್ಪನವರು “ಇದೇನೋ ಶೀನಾ, ಈ ಹುಡುಗಿಗೆ ಹೆಣ್ಣುಗಂಡು ಭೇದವಿಲ್ಲದೆ ಈಪಾಟಿ ಸ್ನೇಹಿತರಿದ್ದಾರೆ. ನೀನೇನಾದರೂ ಯಾಮಾರಿದರೆ ನಿನ್ನನ್ನೇ ಬುಟ್ಟೀಲಿಟ್ಟುಕೊಂಡು ಸಂತೇಲಿ ಮಾರಿಬಿಡುತ್ತಾಳೆ ನಿನ್ನ ಹೆಂಡತಿ” ಅಂತ ಅಲ್ಲಿಯೇ ನನ್ನ ಕಿವಿಯಲ್ಲಿ ಪಿಸುಗುಟ್ಟಿದರು. ನಾವೇನಾದರೂ ಭಾಗ್ಯಳನ್ನು ಮುಂದಕ್ಕೆ ಓದಲು ಕಾಲೇಜಿಗೆ ಸೇರಿಸಿದರೆ ಕೆಲಸವಿಲ್ಲದೆ ಅಂಡಲೆಯುವ ನನ್ನ ಹಿರಿಯಜ್ಜ, ಅವರೊಬ್ಬರೇ ಸಾಕು ಇಲ್ಲದ ಸುದ್ಧಿಗಳನ್ನು ಸೃಷ್ಟಿಮಾಡುತ್ತಾರೆ. ಮೊದಲೇ ಅವರು ತೋರಿಸಿದ ಹೆಣ್ಣುಗಳನ್ನು ಒಪ್ಪದೆ ಅವರ ಮಾತಿಗೆ ಸೊಪ್ಪು ಹಾಕಲಿಲ್ಲವೆಂಬ ಸಿಟ್ಟು ಮನದಲ್ಲಿದೆ. ಯಾವುದೇ ಸುಳ್ಳನ್ನು ಹತ್ತುಸಾರಿ ಹೇಳಿದ್ದನ್ನೇ ಹೇಳಿದರೆ ಎಂತವರಿಗಾದರೂ ಅನುಮಾನ ಬಂದುಬಿಡುತ್ತೆ. ಇವೆಲ್ಲಾ ನಮಗೆ ಬೇಕಾ?”
“ಅಪ್ಪ, ಅಮ್ಮಾ ಇಲ್ಲಿ ಕೇಳಿ, ಹೇಗಿದ್ದರೂ ಭಾಗ್ಯಳಿಗೆ ಸಂಗೀತದಲ್ಲಿ ಅಭಿರುಚಿಯಿದೆ. ಅದಕ್ಕೆ ತಕ್ಕಂತೆ ಸೀನಿಯರ್ ಪರೀಕ್ಷೆ ಪಾಸಾಗಿದ್ದಾಳೆ. ಮುಂದಿನ ಪರೀಕ್ಷೆ ತೆಗೆದುಕೊಳ್ಳಲಿ, ಅದಕ್ಕೆ ಬೇಕಾದ ಏರ್ಪಾಡು ಮಾಡಿದರಾಯಿತು. ಗುರುಗಳನ್ನು ಮನೆಗೇ ಕರೆಸಿ ಪಾಠ ಹೇಳಿಸಬಹುದು. ತಾನು ಓದಿದ್ದು ಮರೆಯಬಾರದೆನ್ನಿಸಿದರೆ ಹತ್ತಾರು ಮಕ್ಕಳಿಗೆ ಮನೆಯಲ್ಲೇ ಪಾಠ ಹೇಳಲಿ. ಇನ್ನಾವುದರಲ್ಲಿಯಾದರೂ ಮನೆಯಲ್ಲಿದ್ದೇ ಕಲಿಯುವುದಾದರೆ ಕಲಿಯಲಿ. ಆದರೆ ಕಾಲೇಜಿಗೆ ಹೋಗುವುದು ಬೇಡವೆಂದೆನ್ನಿತು. ಅವಳ ಮುಂದೆ ನೀವೂ ಇದನ್ನೇ ಹೇಳಬೇಕು. ಅವಳು ಹಿರಿಯರ ಮಾತಿಗೆ ಬೆಲೆ ಕೊಡುತ್ತಾಳೆ. ಆ ನಂಬಿಕೆ ನನಗಿದೆ” ಎಂದು ಹೇಳಿ ಅಲ್ಲಿ ನಿಲ್ಲದೆ ಮನೆಯೊಳಕ್ಕೆ ನಡೆದ ಶ್ರೀನಿವಾಸ.
ತನಗನ್ನಿಸಿದ್ದನ್ನು ಬಡಬಡನೆ ಒದರಿ ತಮಗೂ ಒತ್ತಡ ಹೇರಿ ಮನೆಯೊಳಕ್ಕೆ ಹೋದ ಮಗನನ್ನು ನೋಡಿದ ಸೀತಮ್ಮ “ಏನ್ರೀ, ಈ ನನ್ನ ಮಗ ಎಲ್ಲಾ ಜಾಣ, ತುಸ ಕೋಣಾಂತ ಅಂದುಕೊಂಡಿದ್ದೆವು. ನಮಗೆ ಮಾತನಾಡಲಿಕ್ಕೂ ಬಿಡದೆ ಹೇಳಿ ಹೋದನಲ್ಲ. ಎಲ್ಲಾ ನಿಮ್ಮ ಮುತ್ತಾತನ ಗುಣವೇ. ಪಾಪ ಆ ಹುಡುಗಿಗೆ ಓದಲು ತುಂಬ ಆಸಕ್ತಿಯಿದೆ. ಅವಳನ್ನು ಹೆತ್ತವರು ನಿಸ್ಸಹಾಯಕರೆಂದಿದ್ದರು ಕೇಶವಯ್ಯ. ಈಗ ನಾವೂ ಅಷ್ಟೇ ಮಗನ ಅಭಿಪ್ರಾಯದ ವಿರುದ್ಧ ಹೋಗಲಾರೆವು. ತೀರಾ ಬುದ್ಧಿ ಹೇಳಲು ಹೋದರೆ..”
ಸೀತಮ್ಮನ ಮಾತನ್ನು ಅರ್ಧದಲ್ಲೇ ತಡೆದು ಜೋಯಿಸರು “ಬೇಡ, ಬೇಡ ಸೀತೂ ಮನೆಯಲ್ಲಿ ಕುಳಿತು ಏನಾದರೂ ಮಾಡಬಹುದೆಂದಿದ್ದಾನಲ್ಲಾ, ಸದ್ಯಕ್ಕೆ ಜಗ್ಗಾಟ ಬೇಡ, ಅ ಮೇಲೆ ನೊಡೋಣ. ನಾನು ಸ್ವಲ್ಪ ಹೊತ್ತು ಮಲಗುತ್ತೇನೆ” ಎಂದು ಎದ್ದು ಮನೆಯೊಳಕ್ಕೆ ನಡೆದರು.
“ನಮ್ಮ ಕಾಲದಲ್ಲಿ ನಮ್ಮ ತವರಿನವರು ಶಾಲೆಗಳ ಅನುಕೂಲವಿದ್ದಷ್ಟು ಓದಿಸಿದರು. ಈಗ ಎಲ್ಲವೂ ಇದೆ, ನಮಗೂ ಮನಸ್ಸಿದೆ, ಆದರೆ ಆಕೆಯ ಕೈಹಿಡಿದವನ ಮನಸ್ಸಿನಲ್ಲಿ ಇಲ್ಲಸಲ್ಲದ ಯೋಚನೆ, ಸಂಕುಚಿತ ಮನೋಭಾವ, ಹುಡುಗಿಯ ಹಣೆಬರಹ, ಓದುವ ಆಸೆ ವ್ಯಕ್ತಪಡಿಸಿದರೆ ನಿರಾಸೆ ಆಗುವುದು ಖಂಡಿತ.” ಎಂದುಕೊಂಡು ಜೋಯಿಸರ ಹಿಂದೆಯೇ ಹೆಜ್ಜೆ ಹಾಕಿದರು ಸೀತಮ್ಮ.
ಇತ್ತ ಭಾಗ್ಯಳ ತವರಿನಲ್ಲಿ ಮದುವೆಯ ಗದ್ದಲ, ನೆಂಟರಿಷ್ಟರೆಲ್ಲ ಖಾಲಿಯಾದ ನಂತರ ಲಕ್ಷ್ಮೀ ಅಸ್ತವ್ಯಸ್ತವಾಗಿದ್ದ ಮನೆಯನ್ನು ಒಂದು ಹಂತಕ್ಕೆ ಶುಚಿಮಾಡುವುದರಲ್ಲಿ ನಿರತಳಾಗಿದ್ದಳು.
“ಲಕ್ಷ್ಮಿ ಎಲ್ಲಿದ್ದೀಯೆ?” ಎಂದು ಕೂಗಿದ ಭಟ್ಟರಿಗೆ “ನಾನು ರೂಮಿನಲ್ಲಿದ್ದೇನೆ ಬನ್ನಿ. ಬಸವ ಹೋಗಿ ಆಯಿತೇ? ಮುಂಭಾಗಿಲನ್ನು ಮುಚ್ಚಿ ಬನ್ನಿ” ಎಂದಳು ಲಕ್ಷ್ಮಿ. ಹರಡಿದ್ದ ವಸ್ತುಗಳನ್ನು ಎತ್ತಿಡುವುದರಲ್ಲಿ ನಿರತಳಾಗಿದ್ದ ಲಕ್ಷ್ಮಿಯನ್ನು ಕಂಡು “ಸಮಾರಂಭಕ್ಕೆ ಮೊದಲು ತಯಾರಿ, ಮುಗಿದ ಮೇಲೆ ರಿಪೇರಿ. ನಿನ್ನ ಕೆಲಸವಿನ್ನೂ ಮುಗಿದಿಲ್ಲವೇ?” ಎಂದು ಕೇಳಿದರು ಭಟ್ಟರು.
“ಬಿಡಿ ಇದೆಲ್ಲಾ ಯಾವ ಮಹಾ, ಸದ್ಯ ಯಾವುದೇ ಲೋಪವಿಲ್ಲದೆ ಮಗಳ ಮದುವೆ ಮುಗಿಯಿತಲ್ಲಾ ಅಷ್ಟು ಸಾಕು” ಎಂದುತ್ತರಿಸಿದಳು ಲಕ್ಷ್ಮಿ.
“ಹೌದು ನೀನೇಳುವುದು ನಿಜ, ಎಲ್ಲರ ಸಹಕಾರದಿಂದ ಹೆಚ್ಚಿನ ಆತಂಕ, ಧಾವಂತಗಳಿಲ್ಲದೆ ಎಲ್ಲವೂ ಸುಸೂತ್ರವಾಯಿತು. ನಮ್ಮ ಮಗಳು ಅವರ ಮನೆಗೆ ಹೊಂದಿಕೊಂಡು ಬದುಕು ನಡೆಸಿದರೆ ನಾವು ಮಾಡಿದ್ದಕ್ಕೂ ಸಾರ್ಥಕ.” ಎಂದು ದನಿಗೂಡಿಸಿದರು ಭಟ್ಟರು.
“ಅದರಲ್ಲಿ ಎರಡು ಮಾತಿಲ್ಲ, ಹೊಂದಿಕೊಳ್ಳುತ್ತಾಳೆ. ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ ಸಹಕಾರ ಸಿಕ್ಕಿತು. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಚಿಕ್ಕಮ್ಮಂದಿರು ತಮ್ಮ ಎಂದಿನ ವರಸೆ ಬಿಟ್ಟು ನಗುನಗುತ್ತ ಎಲ್ಲರೊಡನೆ ಬೆರೆತು, ಎಲ್ಲ ಕಾರ್ಯಗಳಲ್ಲಿ ಕೈಜೋಡಿಸಿ ತಮ್ಮ ಹಿರಿತನದ ಸ್ಥಾನಮಾನಕ್ಕೆ ತಕ್ಕಂತೆ ನಡೆದುಕೊಂಡರು. ಅದು ನನಗೆ ಈಗಲೂ ಕನಸೋ, ನನಸೋ ಎಂಬಂತಾಗಿದೆ. ದೇವತಾಕಾರ್ಯದ ದಿನವೇ ನಾನು ನಿರೀಕ್ಷಿಸದ ಉಡುಗೊರೆಗಳನ್ನು ಭಾಗ್ಯಳಿಗೆ ಕೊಟ್ಟರು. ಒಂದುಜೊತೆ ಓಲೆ, ಉಂಗುರ, ರೇಷ್ಮೆಸೀರೆ, ಜೊತೆಗೆ ನಾವವರಿಗೆ ಕೊಟ್ಟ ಉಡುಗೊರೆಗಳನ್ನು ವಿಶ್ವಾಸದಿಂದ ಸ್ವೀಕರಿಸಿದ್ದು ತುಂಬ ಅಚ್ಚರಿ ಉಂಟು ಮಾಡಿತು.” ಎಂದಳು ಲಕ್ಷ್ಮಿ.
“ಹೂ..ಗಂಡುಮಕ್ಕಳು ತಾಕೀತು ಮಾಡಿದ್ದರೋ ಅಥವಾ ದೇವರೇ ಅವರಿಗೆ ಬುದ್ಧಿನೀಡಿದನೋ ಗೊತ್ತಿಲ್ಲ. ಒಟ್ಟಿನಲ್ಲಿ ತಮ್ಮ ಘನತೆಯನ್ನು ಹೆಚ್ಚಿಸಿಕೊಂಡರು. ಜೊತೆಗೆ ಎಲ್ಲರೆದುರಿಗೆ ನಮ್ಮ ಮರ್ಯಾದೆಯನ್ನೂ ಕಾಪಾಡಿದರು. ಇದೇನು ಪಕ್ಕದಲ್ಲಿರುವುದು ಮೂಟೆ, ಬಿಚ್ಚೇಯಿಲ್ಲಾ, ಜೊತೆಗೆ ಪಕ್ಕದಲ್ಲಿರುವ ಚಿಕ್ಕಚೀಲ” ಎಂದು ಕೇಳಿದರು ಭಟ್ಟರು.
“ಓ ಅದಾ ಭಾಗ್ಯಳಿಗೆ ಮದುವೆಯಲ್ಲಿ ಬಂದಿರುವ ಉಡುಗೊರೆಗಳು. ಇಕೋ ನೋಡಿ ಇಲ್ಲೂ ಕೆಲವಿವೆ” ಎಂದಳು ಲಕ್ಷ್ಮಿ.
“ಇವುಗಳನ್ನು ಇನ್ನೂ ತೆಗೆದೇ ಇಲ್ಲವೇ?” ಕೇಳಿದರು ಭಟ್ಟರು.
“ಇಲ್ಲ, ನೆನ್ನೆಯವರೆಗೆ ನೆಂಟರಿದ್ದರಲ್ಲಾ, ಅವರುಗಳ ಮುಂದೆ ಏಕೆಂದು ತೆರೆಯಲಿಲ್ಲ. ಇನ್ನೊಂದೆರಡು ದಿನದಲ್ಲಿ ಭಾಗ್ಯಳೇ ಬರುತ್ತಾಳಲ್ಲಾ ಅಷ್ಟರಲ್ಲಿ ತೆಗೆದು ಕೊಟ್ಟವರ ಹೆಸರುಗಳನ್ನು ಬರೆದುಕೊಂಡು ಇಟ್ಟರೆ ಯಾವುದು ಬೇಕೋ ಅದನ್ನು ತೆಗೆದುಕೊಂಡು ಹೋಗಲಿ. ಉಳಿದವನ್ನು ಒಂದುಕಡೆ ಇಡುತ್ತೇನೆ. ಬಹಳಷ್ಟು ಜನ ಹಣವನ್ನೇ ಕೊಟ್ಟಿದ್ದಾರೆ. ಚಿಕ್ಕಚೀಲವೆಂದಿರಲ್ಲಾ ಅದರಲ್ಲಿ ನಾನೇ ಭಾವನಾಳಿಗೆ ಹೇಳಿ ಅವನ್ನು ಇಡಿಸಿದ್ದೆ. ತೆಗೆದು ನೋಡಿ ಅವಳ ಅಕೌಂಟಿಗೆ ಹಾಕಿಕೊಳ್ಳಲು ಹೇಳಬೇಕು.” ಎಂದಳು ಲಕ್ಷ್ಮಿ.
“ಎಲ್ಲವೂ ಸರಿ, ಆದರೆ ಉಡುಗೊರೆ ಕೊಟ್ಟವರ ಹೆಸರುಗಳನ್ನೇಕೆ ಬರೆದುಕೊಳ್ಳುವುದು? ನನಗರ್ಥವಾಗಲಿಲ್ಲ. ತಪ್ಪು ತಿಳಿಯಬೇಡ, ನಾನಿದುವರೆಗೆ ಇಂತಹದನ್ನು ನೋಡಿರಲಿಲ್ಲ. ಅದಕ್ಕೇ ಕೇಳಿದೆ” ಎಂದರು ಭಟ್ಟರು,
“ಹೂಂ ಅದು ನಿಮಗೆ ಹೇಗೆ ಗೊತ್ತಾಗಬೇಕು, ಎಲ್ಲವನ್ನೂ ನಿಮ್ಮ ಹಿರಿಯರೇ ನಿಭಾಯಿಸುತ್ತಿದ್ದರು. ನಾನು ಇದನ್ನು ಕಂಡಿದ್ದೇನೆ. ಅವರುಗಳ ಹೆಸರನ್ನು ನೋಡಿ ಅವರು ಕೊಟ್ಟ ಉಡುಗೊರೆಯಿಂದ ಅವರ ಜಾಯಮಾನವನ್ನು ಅಳತೆಮಾಡುವುದಕ್ಕಲ್ಲ. ಮುಂದೆ ಯಾವಾಗಲಾದರೂ ಅವರುಗಳ ಮನೆಯಲ್ಲಿ ಶುಭ ಸಮಾರಂಭಗಳು ನಡೆದಾಗ , ನಾವು ಹಾಜರಾದಾಗ ನಮ್ಮ ಶಕ್ತ್ಯಾನುಸಾರ ಒಂದು ಉಡುಗೊರೆಯನ್ನು ನೀಡಬೇಕೆಂಬ ಕಾರಣಕ್ಕಾಗಿ ಅವರ ಹೆಸರನ್ನು ಗುರುತಿಸುವುದು. ಅರ್ಥವಾಯಿತೇ?” ಎಂದು ಕೇಳಿದಳು ಲಕ್ಷ್ಮಿ.
“ಈಗೇನು ಇವುಗಳ ಪಟ್ಟಿ ಮಾಡಿಕೊಡಲೇನು. ನೀನು ಒಂದೊಂದಾಗಿ ಹೇಳು ನಾನು ಬರೆಯುತ್ತೇನೆ” ಎಂದರು ಭಟ್ಟರು. ಅದಕ್ಕಾಗಿ ಸಿದ್ಧಮಾಡಿಟ್ಟುಕೊಂಡಿದ್ದ ಪೇಪರ್ ಮತ್ತು ಪೆನ್ನನ್ನು ಅವರ ಕೈಗೆ ಕೊಟ್ಟಳು. ಹೀಗೆ ದಂಪತಿಗಳಿಬ್ಬರೂ ನೆರವಾಗುತ್ತಾ ಎಲ್ಲವನ್ನೂ ಮುಗಿಸಿ ಎತ್ತಿಡಬೇಕೆನ್ನುವಷ್ಟರಲ್ಲಿ ಹೊರಗಡೆಯಿಂದ “ಭಟ್ಟರೇ, ಲಕ್ಷ್ಮಮ್ಮಾ” ಎಂಬ ಕರೆ ಕೇಳಿಸಿತು.
“ಅರೆ ! ಬಸವಾ ಮತ್ತೆ ಬಂದನಾ ಹೇಗೆ? ಅಲ್ಲಾ ಇವತ್ತು ನಿನ್ನ ಹೆಸರೂ ಸೇರಿಸಿ ಕರೆಯುತ್ತಿದ್ದಾನಲ್ಲಾ” ಎಂದರು ಭಟ್ಟರು.
“ರೀ..ಇದು ಬಸವನ ಧ್ವನಿಯಲ್ಲಾ, ನಮ್ಮ ಭಾಗ್ಯಳ ಸ್ಕೂಲಿನ ಮೇಷ್ಟ್ರು ಗಂಗಾಧರಪ್ಪನವರ ಧ್ವನಿ. ಅದೇನು ವಿಷಯ ಕೇಳೋಣ ಬನ್ನಿ” ಎಂದು ಭಟ್ಟರಿಗಿಂತ ಮುಂಚೆ ನಡೆದಳು ಲಕ್ಷ್ಮೀ. ಹಿಂದೆಯೇ ಭಟ್ಟರು.
ಬಾಗಿಲು ತೆರೆದ ಲಕ್ಷ್ಮಿ “ನಮಸ್ಕಾರ ಮೇಷ್ಟ್ರಿಗೆ, ಈ ಸಂಜೆ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ತಾವು?” ಎಂದಳು.
“ಹೂ ನಮಸ್ಕಾರ ತಾಯಿ, ಭಟ್ಟರಿಲ್ಲವೇ” ಎಂದರು.
“ಇದ್ದೀನಿ ಇದ್ದೀನಿ, ಬನ್ನಿ ಸರ್, ಒಳಗೆ” ಎಂದು ಅವರನ್ನು ಆಹ್ವಾನಿಸಿದರು ಭಟ್ಟರು.
“ಮಗಳನ್ನು ಮದುವೆ ಮಾಡಿ ಕಳುಹಿಸಿದ್ದಾಯಿತೆನ್ನುವ ಖುಷಿಯಲ್ಲಿ ಅವಳ ಪರೀಕ್ಷೆಯ ಫಲಿತಾಂಶದ ಕಡೆ ಗಮನವೇ ಇದ್ದಂತಿಲ್ಲ ದಂಪತಿಗಳಿಗೆ” ಎಂದರು ಗಂಗಾಧರಪ್ಪ.
“ಇಲ್ಲದೇ ಏನು, ಇದೆ ಸಾರ್ ವಾರದೊಳಗೆ ಎಸ್.ಎಸ್.ಎಲ್.ಸಿ., ಫಲಿತಾಂಶ ಪ್ರಕಟವಾಗುತ್ತದೆಂದು ರೇಡಿಯೋದಲ್ಲಿ ಪ್ರಸಾರವಾದ ವಾರ್ತೆಯಲ್ಲಿ ಕೇಳಿದ್ದೆ. ಇಷ್ಟರಲ್ಲೇ ಬರಬಹುದು. ಈಗ ನೀವು ಬಂದಿದ್ದು ಅದನ್ನು ನೆನಪು ಮಾಡಲಿಕ್ಕೇನು?” ಎಂದು ಕೇಳಿದಳು ಲಕ್ಷ್ಮಿ.
“ನೆನಪು ಮಾಡಲಿಕ್ಕಲ್ಲಮ್ಮಾ, ಫಲಿತಾಂಶವನ್ನು ತಿಳಿಸೋಕೆ ಬಂದಿದ್ದೇನೆ. ಅಂದರೆ ನಾಳೆ ಫಲಿತಾಂಶ ಪೇಪರಿನಲ್ಲಿ ಬರುತ್ತೆ. ಆದರೆ ಇವತ್ತು ನಮ್ಮ ಶಾಲೆಗೆ ಫಲಿತಾಂಶದ ಪಟ್ಟಿಯನ್ನು ಕಳುಹಿಸಿದ್ದಾರೆ. ಇಷ್ಟುಹೊತ್ತೂ ಅದನ್ನೆಲ್ಲ ಒಂದು ಕ್ರಮವಾಗಿಸಿ ನಾಳೆ ನಮ್ಮ ಶಾಲೆಯ ನೋಟೀಸ್ ಬೋರ್ಡಿನಲ್ಲಿ ಹಾಕಲು ಏರ್ಪಾಡು ಮಾಡಿ ಬಂದೆ. ಹಾಗೇ ಬರುತ್ತಾ ನಿಮಗೆ ತಿಳಿಸೇ ಹೋಗಬೇಕೆಂದು ಮನೆಗೆ ಬಂದೆ. ನನ್ನ ಪ್ರಿಯ ಶಿಷ್ಯೆ ಭಾಗ್ಯ ಶಾಲೆಗೇ ಮೊದಲಿಗಳಾಗಿ ಬಂದಿದ್ದಾಳೆ. ಅಷ್ಟೇ ಅಲ್ಲ, ರಾಜ್ಯಮಟ್ಟದಲ್ಲಿ ಎರಡನೆಯ ರ್‍ಯಾಂಕ್ ಗಿಟ್ಟಿಸಿಕೊಂಡಿದ್ದಾಳೆ. ನೋಡಿ ಆಕೆಗೆ ಬಂದಿರುವ ಅಂಕಗಳನ್ನು. ಬರೆದುಕೊಂಡು ಬಂದಿದ್ದೇನೆ.” ಎಂದು ಆ ಪಟ್ಟಿಯನ್ನು ಭಟ್ಟರಿಗೆ ಕೊಟ್ಟರು. ಅದನ್ನೋದಿದ ದಂಪತಿಗಳಿಗೆ ಹಿಡಿಸಲಾರದಷ್ಟು ಹಿಗ್ಗಾಯಿತು. ಅಂತೂ ಅವಳ ಪ್ರಯತ್ನಕ್ಕೆ ಒಳ್ಳೆಯ ಪ್ರತಿಫಲ ಸಿಕ್ಕಿದೆ.” ಎಂದರು.
“ಅದಿರಲಿ, ಫಲಿತಾಂಶ ತಿಳಿಸಿ ಇದನ್ನು ತೋರಿಸಿ ನಿಮ್ಮ ಬೀಗರಿಗೆ. ಭಾಗ್ಯಳ ವಿದ್ಯಾಭ್ಯಾಸ ಮುಂದುವರೆಸಲು ಹೇಳಲೇ? ನಿಮ್ಮ ಅನುಮತಿಯ ಮೇರೆಗೆ” ಎಂದು ಕೇಳಿದರು ಮಾಸ್ತರರು.
“ಬೇಡಿ ಮೇಷ್ಟರೇ, ಅವಳು ನಮ್ಮ ಮಗಳೇ ಆದರೂ ಈಗವಳು ಪರರ ಸೊತ್ತು. ನಾವು ಮಾಡಲಿಕ್ಕಾಗದ್ದನ್ನು ಅವರಿಗೆ ಮಾಡಿ ಎಂದು ಒತ್ತಾಯಿಸುವುದು ಯಾವ ನ್ಯಾಯ. ಅವರ ಇಷ್ಟಾನಿಷ್ಟಗಳು ಹೇಗಿರುತ್ತವೋ ಏನೋ, ಈಗವಳು ವಿವಾಹಿತ ಹುಡುಗಿ, ಅದೂ ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದವಳು” ಎಂದಳು ಲಕ್ಷ್ಮಿ.
“ಹೂ ನೀವು ಹೇಳುವುದೂ ಸರೀನೇ, ಅದ್ಯಾವಾಗ ನಮ್ಮ ಜನಗಳು ಬುದ್ಧಿ ಕಲಿಯುತ್ತಾರೋ. ಇಷ್ಟೆಲ್ಲ ಅನುಕೂಲತೆ ಬಂದಿದ್ದರೂ ಇನ್ನೂ ಹೇಣ್ಣುಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸುವುದಕ್ಕೆ ಹಿಂದೆಮುಂದೆ ನೋಡುತ್ತಾರೆ. ಆಯಿತು, ನಾನಿನ್ನು ಬರುತ್ತೇನೆ” ಎಂದರು ಗಂಗಾಧರಪ್ಪನವರು.
“ಒಳ್ಳೆಯ ಸಿಹಿಸುದ್ಧಿ ತಂದಿದ್ದೀರಿ, ಒಂದೇ ನಿಮಿಷ ಬಂದೆ” ಎಂದು ಒಳಗೆ ಹೋದ ಲಕ್ಷ್ಮಿ ನೆಂಟರಿಷ್ಟರು ಹೋಗುವಾಗ ಬರಿಕೈಯಲ್ಲಿ ಕಳುಹಿಸಬಾರದೆಂದು ಮಾವ ರಾಮಣ್ಣನವರು ತಮ್ಮ ಕಡೆಯಿಂದ ಮಾಡಿಸಿದ್ದ ತಿನಿಸುಗಳಾದ ಚಕ್ಕುಲಿ, ಕರ್ಜಿಕಾಯಿ, ಕಜ್ಜಾಯ, ಪುರಿಉಂಡೆ, ಜೊತೆಗೊಂದು ತಾಂಬೂಲವನ್ನಿಟ್ಟು ಚೀಲಕ್ಕೆ ಹಾಕಿ ಮೇಷ್ಟ್ರ ಕೈಗೆ ಕೊಟ್ಟು ಕೈ ಮುಗಿದಳು” ಅವರನ್ನು ಕಳುಹಿಸಿ ಒಳಬಂದರು ದಂಪತಿಗಳು. “ಲಕ್ಷ್ಮೀ ನಾನೇ ಒಂದು ಹೆಜ್ಜೆ ಬೀಗರ ಮನೆಗೆ ಹೋಗಿ ಅವರಿಗೆ ಭಾಗ್ಯಳ ಫಲಿತಾಂಶ ತಿಳಿಸಿ ಮಾರ್ಕ್ಸ್‌ಕಾರ್ಡ್ ತೋರಿಸಿ ಬರಲೇ?” ಎಂದು ಕೇಳಿದರು ಭಟ್ಟರು.
“ಬೇಡಿ, ನಾಳೆ ಪೇಪರಿನಲ್ಲಿ ಬರುತ್ತದೆ. ನೋಡಿಕೊಳ್ಳುತ್ತಾರೆ. ಹೆಣ್ಣು ಕೊಟ್ಟಿದ್ದೇವೆಂದು ಅವರಲ್ಲಿಗೆ ಅಡಿಗಡಿಗೆ ಹೋಗಬಾರದು. ಹೇಗಿದ್ದರೂ ಬರುತ್ತಾಳಲ್ಲ..ನಾಳೆಯೇ ಬರಬಹುದು..” ಎಂದಳು ಲಕ್ಷ್ಮಿ.
“ನನಗೆ ಫಲಿತಾಂಶ ತಿಳಿದ ಆನಂದದಲ್ಲಿ ಹೋಗಿ ಹೇಳಿಬಿಡೋಣವೆಂದು ಅನ್ನಿಸಿತು. ಹೋಗಲಿ ಬಿಡು, ಎಷ್ಟೊಂದು ಮಾರ್ಕ್ಸ್ ತೆಗೆದಿದ್ದಾಳೆ ನೋಡು, ರ್‍ಯಾಂಕ್ ಬರುತ್ತಾಳೆಂದುಕೊಂಡಿರಲಿಲ್ಲ. ನನಗೇನೋ ಬೀಗರು ಇದನ್ನೆಲ್ಲ ನೋಡಿ ಭಾಗ್ಯಳನ್ನು ಹೊಗಳಿ ಮುಂದಕ್ಕೆ ಓದಿಸಬಹುದೇನೋ ಅನ್ನಿಸುತ್ತೆ. ಏಕೆಂದರೆ ಮದುವೆಯ ಸಂದರ್ಭದಲ್ಲಿ ಜವಳಿಯ ಆಯ್ಕೆಯನ್ನು ಅವಳಿಷ್ಟಕ್ಕೆ ಬಿಟ್ಟಿದ್ದರು. ಹಾಗೇ ಇದನ್ನು ನೋಡಿ ಉತ್ತೇಜನ ಕೊಡಬಹುದೇನೋ? ಹಾಗೆ ಅವಳಿಗೆ ಅವಕಾಶ ದೊರಕಲಿ ಎಂದು ಬಯಸುತ್ತೇನೆ” ಎಂದರು ಭಟ್ಟರು.
“ನನ್ನ ಹಾರೈಕೆಯೂ ಅದೇ. ನಡೆಯಿರಿ ಸ್ನಾನ ಮುಗಿಸಿ ಸಂಧ್ಯಾವಂದನೆ ಮಾಡಿ, ಸ್ವಲ್ಪ ಹೊತ್ತು ನಾವೇ ಭಜನೆ ಮಾಡಿ, ಊಟ ಮುಗಿಸೋಣ. ಬೆಳಗಿನ ಪೂರ್ವ ತಯಾರಿ ಮಾಡಿ ಮಲಗೋಣ.” ಎಂದು ಮಾತಿಗೆ ಇತಿಶ್ರೀ ಹಾಡಿದಳು ಲಕ್ಷ್ಮಿ.
ಮೇಲೆ ತನ್ನ ಅಭಿಲಾಷೆಯೂ ಅದೇ ಎಂದು ಭಟ್ಟರ ಮುಂದೆ ಹೇಳಿದ ಲಕ್ಷ್ಮಿಗೆ ಮನದೊಳಗೆ ಅದೆಲ್ಲಾ ಆಗಿಹೋಗುವುದಲ್ಲ ಎನ್ನಿಸಿತ್ತು. ಕಾರಣ, ಮದುವೆಯಾದ ಹತ್ತು, ಹನ್ನೆರಡು ದಿವಸಗಳಲ್ಲಿ ಶಾಸ್ತ್ರಕ್ಕೆಂದು ಒಂದೆರಡು ಬಾರಿ ಬಂದು ಹೋಗಿದ್ದ ಅಳಿಯನನ್ನು ಗಮನಿದ್ದಳು ಲಕ್ಷ್ಮಿ. ಅಳಿಯನೆಂಬ ಬಿಗುಮಾನವಿಟ್ಟುಕೊಳ್ಳದೆ ಬಾಯ್ತುಂಬ ಮಾತನಾಡಿಸುತ್ತಿದ್ದ, ಇದೇ ಭಾವನೆಯಿಂದ ವಿದ್ಯಾಭ್ಯಾಸದ ಬಗ್ಗೆ ವಿಷಯವೆತ್ತಿದಾಗ ಬೀಗರು ಇದಕ್ಕೆ ಒಪ್ಪಿದರೂ, ಅಳಿಯ ಒಪ್ಪುವುದು ಕಷ್ಟ ಎಂದೆನ್ನಿಸಿತ್ತು. ಪ್ರಾರಂಭದಲ್ಲೇ ಆ ವಿಷಯವನ್ನು ಹೆಚ್ಚು ಜಗ್ಗಾಡಬಾರದು ಎಂದು ಸುಮ್ಮನಾಗಿದ್ದಳು. ಅದನ್ನು ಭಾಗ್ಯಳ ಮುಂದೆ ತೋರ್ಪಡಿಸಿಕೊಂಡಿರಲಿಲ್ಲ. ಆದರೆ ಭಾಗ್ಯಳಿಗೆ “ನೀನು ಆ ಮನೆಯ ಸೊಸೆ, ಹಿರಿಯರ ಜೊತೆಗೆ ನಿನ್ನ ಗಂಡನ ಮಾತುಗಳನ್ನೂ ಗೌರವಿಸುವುದನ್ನು ನೆನಪಿಟ್ಟುಕೋ ಮಗಳೇ” ಎಂದು ಎಚ್ಚರಿಕೆ ಕೊಟ್ಟಿದ್ದಳು. ಈಗ ಮಗಳು ತೆಗೆದಿರುವ ಅಂಕಗಳನ್ನು ನೋಡಿ ಮನಸ್ಸು ಮೌನವಾಗಿ ಕೊರಗಿತು. ಭಗವಂತ ಹೆಣ್ಣಾಗಿ ಏಕೆ ಹುಟ್ಟಿಸುತ್ತಾನೋ, ಅದೂ ನಮ್ಮಂಥ ಸಂಪ್ರದಾಯಸ್ಥ ಕುಟುಂಬದ ಚೌಕಟ್ಟಿನಲ್ಲಿ ಎಂದುಕೊಂಡಳು. ಏನಾಗಬೇಕಾಗಿದೆಯೋ ಅದು ಆಗೇ ಆಗುತ್ತದೆ. ಸುಮ್ಮನೆ ಇಲ್ಲದ ಯೋಚನೆ ಮಾಡುವುದ್ಯಾಕೆ ಎಂದು ತನಗೆ ತಾನೇ ಸಮಾಧಾನ ತಂದುಕೊಂಡಳು.
ಭಟ್ಟರ ಮನೆಯಿಂದ ತಮ್ಮ ಮನೆಯ ದಾರಿ ಹಿಡಿದ ಗಂಗಾಧರಯ್ಯ ಮೇಷ್ಟ್ರಿಗೆ ಮನಸ್ಸು ಪಿಚ್ಚೆನ್ನಿಸಿತು. ಒಡನೆಯೇ ಏನೆಲ್ಲಾ ಸರ್ಕಸ್ ಮಾಡಿ, ತುತ್ತುಮಾಡಿ ತಿನ್ನಿಸಿದ್ದರೂ ಜೀವನಾಂಶ ತೆಗೆದುಕೊಂಡು ಪಾಸಾಗಿದ್ದ ತಮ್ಮ ಮಗನ ನೆನಪು ಕಾಡಿತು. “ಹೂಂ ಹಲ್ಲಿದ್ದವರಿಗೆ ಕಡಲೆಯಿಲ್ಲ, ಕಡಲೆಯಿದ್ದವರಿಗೆ ಹಲ್ಲೇ ಇಲ್ಲ” ಹೀಗೆ ಯೋಚಿಸುತ್ತಾ ಹೋಗುತ್ತಿದ್ದವರನ್ನು ಯಾರೋ ಕರೆದಂತೆ ಕೇಳಿಸಿತು. ತಿರುಗಿ ನೋಡಿದರೆ ಕೇಶವಯ್ಯನವರು. ತಮ್ಮ ಮನೆಯ ಅಂಗಡಿಯ ಮುಂದೆ ನಿಂತಿದ್ದರು.
ಎರಡು ಕುಟುಂಬಕ್ಕೂ ಬಹಳ ಆಪ್ತರಾದ ವ್ಯಕ್ತಿ. ಇವರಿಗೆ ಭಾಗ್ಯಳ ಫಲಿತಾಂಶ ತಿಳಿಸಿ ಇವರ ಮುಖಾಂತರ ಅವಳ ಮಾವನವರಿಗೆ ಹೇಳಿಸಿದರೆ ಎಂದುಕೊಳ್ಳುತ್ತಾ “ನಮಸ್ಕಾರ ಪರೋಹಿತರಿಗೆ” ಎಂದು ಮಾತನಾಡಿಸಿದರು.
ನಾನ್ಯಾವ ಪುರೋಹಿತ ಮೇಷ್ಟ್ರೇ, ಏನೊ ಸಮಯ ಸಂದರ್ಭಕ್ಕೆ ತಕ್ಕಂತೆ ಯಾರಾದರೂ ಅವಕಾಶವಿತ್ತಾಗ ಪೌರೊಹಿತ್ಯ, ಉಳಿದಂತೆ ನಾನೂ ನಿಮ್ಮಹಾಗೇ. ಅದಿರಲಿ, ಎಲ್ಲಿ ಹೋಗಿದ್ದಿರಿ? ಈಗ ಮನೆಕಡೆ ಹೊರಟಿದ್ದಿರಾ?” ಎಂದು ಪ್ರಶ್ನಿಸಿದರು.
ಅವರಿಗೆ ಫಲಿತಾಂಶದ ವಿಷಯ ತಿಳಿಸಿದ ಮೇಷ್ಟ್ರು ಲಕ್ಷ್ಮಮ್ಮ ತಮಗೆ ಹೇಳಿದ್ದನ್ನೂ ತಿಳಿಸಿದರು.
“ಭಾಗ್ಯಳ ಫಲಿತಾಂಶ ಕೇಳಿ ನನಗೆಷ್ಟು ಸಂತೋಷವಾಗಿದೆ ಎಂದರೆ ಪದಗಳಲ್ಲಿ ಹೇಳಲಾಗದು. ಹಾಗೇ ಲಕ್ಷ್ಮಮ್ಮ ಹೇಳಿದ್ದರಲ್ಲೂ ತೂಕವಿದೆ. ತಾಯಿಯ ಕಾಳಜಿಯಿದೆ. ಆದರೆ ಈ ವಿಷಯದಲ್ಲಿ ಮೂಗು ತೂರಿಸುವ ಅಧಿಕಾರ ನನಗಿಲ್ಲ. ಇದರಮೇಲೆ ಆ ಹುಡುಗಿಯ ಅದೃಷ್ಟ ಅಷ್ಟೇ. ಬನ್ನಿ ಮೇಷ್ಟ್ರೇ ಒಳಕ್ಕೆ” ಎಂದು ಕರೆದರು ಕೇಶವಯ್ಯ.
“ಕ್ಷಮಿಸಿ ಇನ್ನೊಮ್ಮೆ ಬರುತ್ತೇನೆ, ಸ್ವಲ್ಪ ಅವಸರವಿದೆ” ಎನ್ನುತ್ತಾ ತಮಗಾದ ನಿರಾಸೆಯನ್ನು ಮನದಲ್ಲೇ ಅಡಗಿಸಿಕೊಳ್ಳುತ್ತಾ ಮನೆಯ ಕಡೆ ಹೆಜ್ಜೆ ಹಾಕಿದರು ಗಂಗಾಧರಯ್ಯ.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35438
–ಬಿ.ಆರ್.ನಾಗರತ್ನ, ಮೈಸೂರು
ಸೊಗಸಾಗಿದೆ.
ಕಾದಂಬರಿ ಸೊಗಸಾಗಿ ಮೂಡಿ ಬರುತ್ತಿದೆ..
ಧನ್ಯವಾದಗಳು ನಯನ ಮೇಡಂ.
ಧನ್ಯವಾದಗಳು ಗೆಳತಿ ಹೇಮಾ..
ಭಾಗ್ಯಳ ವಿದ್ಯಾಭ್ಯಾಸದ ಫಲಿತಾಂಶ ಸಂತಸ ತಂದರೂ ಶ್ರೀನಿವಾಸ ಜೋಯಿಸರ ಸಂಕುಚಿತ ಮನೋಭಾವ ಬೇಸರ ತಂದಿತು. ಪಾತ್ರಗಳ ಗುಣಾವಗುಣಗಳು ಪ್ರಭಾವಶಾಲಿಯಾಗಿ ಕಾದಂಬರಿಯಲ್ಲಿ ಬಿಂಬಿತಗೊಳ್ಳುತ್ತಿವೆ.
ಧನ್ಯವಾದಗಳು ಪದ್ಮಾ ಮೇಡಂ
ಬಹಳ ಆಪ್ತತೆಯನ್ನು ನೀಡುವ, ಸೊಗಸಾದ ನಿರೂಪಣೆಯ ಕಥಾ ಲಹರಿಯು ತುಂಬಾ ಇಷ್ಟವಾಯ್ತು ಮೇಡಂ.
ಧನ್ಯವಾದಗಳು ಶಂಕರಿ ಮೇಡಂ