ಕಾದಂಬರಿ: ನೆರಳು…ಕಿರಣ 18
–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..
ಸುಶ್ರಾವ್ಯವಾದ ಗಾನಮಾಧುರ್ಯದಿಂದ ಎಚ್ಚೆತ್ತ ಭಾಗ್ಯ ಸುತ್ತಲೂ ಕಣ್ಣು ಹಾಯಿಸಿದಳು. ಓ ! ನಾನೀಗ ಇರುವುದು ಅತ್ತೆಯ ಮನೆಯಲ್ಲಿ, ಮನೆತುಂಬಿಸಿಕೊಳ್ಳುವ ಕಾರ್ಯ, ಆ ಮನೆಯಿಂದ ಈ ಮನೆಗೆ ಉಡುಕೆ ನಡೆದದ್ದು, ನೆನ್ನೆ ನಡೆದ ಸತ್ಯನಾರಾಯಣಪೂಜೆ, ರಾತ್ರಿಯ ಸಜ್ಜೆಮನೆ, ಎಲ್ಲವೂ ದುತ್ತನೆ ಕಣ್ಮುಂದೆ ನಿಂತವು. ಎಲ್ಲಾ ಕಾರ್ಯಕ್ರಮಗಳಿಂದ ಆಯಾಸಗೊಂಡಿದ್ದ ಅವಳಿಗೆ ಯಾವಾಗ ನಿದ್ರೆ ಹತ್ತಿತೋ ತಿಳಿಯದೆ ಗಲಿಬಿಲಿಗೊಂಡಳು.
ಅಯ್ಯೋ ಎಷ್ಟು ಹೊತ್ತು ಮಲಗಿಬಿಟ್ಟೆ ಎಂದು ಪಕ್ಕಕ್ಕೆ ತಿರುಗಿದಳು. ಗಂಡನು ಮಲಗಿದ್ದ ಜಾಗ ಖಾಲಿಯಾಗಿತ್ತು. ನನಗೆ ಹೊಸಜಾಗ, ಹೊಸ ಪರಿಸರ, ಹೋಗಲಿ ಇವರು ಏಳುವಾಗ ಒಂದು ಸಣ್ಣ ಸುಳಿವು ಕೊಟ್ಟಿದ್ದರೆ ಆಗುತ್ತಿರಲಿಲ್ಲವೇ, ಸದ್ದಿಲ್ಲದೆ ಎದ್ದು ಹೋಗಿದ್ದಾರೆ. ಛೇ.ಅವರನ್ನೇಕೆ ಆಕ್ಷೇಪಿಸಬೇಕು, ಮೈಮೇಲೆ ಪ್ರಜ್ಞೆಯಿಲ್ಲದಂತೆ ಮಲಗಿದ್ದವಳು ನಾನು. ಈಗ ಹೇಗೆ ಕೆಳಗಿಳಿದು ಹೋಗುವುದು. ಇದೋ ಮಹಡಿಯ ಮೇಲಿರುವ ರೂಮು. ಇಲ್ಲಿ ಸ್ನಾನದ ಮನೆ ಇದೆಯೋ ಇಲ್ಲವೋ ಗೊತ್ತಿಲ್ಲವಲ್ಲಾ. ಎರಡು ಮೂರು ದಿನಗಳಿಂದ ಬರೀ ಓಡಾಟವೇ ಆಗಿ ಮನೆಯನ್ನು ಪೂರ್ತಿಯಾಗಿ ನೋಡೇಯಿಲ್ಲ. ನನ್ನ ಬಟ್ಟೆಬರೆ ಇರುವ ಪೆಟ್ಟಿಗೆಯನ್ನು ಭಾವನಾಳ ಹತ್ತಿರ ಕೊಟ್ಟಿದ್ದೆ. ಅವಳನ್ನು ಕೇಳಿ ತೆಗೆದುಕೋ ಎಂದಿದ್ದರು ಅಮ್ಮ. ಅವಳನ್ನಾಗಲೀ ಹೇಗೆ ಕೂಗುವುದು? ಕೆಳಗೆ ನೆಂಟರಿಷ್ಟರೆಲ್ಲಾ ತುಂಬಿದ್ದಾರೆ. ಎಂದುಕೊಳ್ಳುತ್ತಾ ಹಾಸಿಗೆಯಿಂದೆದ್ದು ಅಲ್ಲಿದ್ದ ಕಿಟಕಿಯಿಂದ ಹೊರಗೆ ನೋಟ ಹರಿಸಿದಳು.
ಅಲ್ಲಿ ಕಂಡಿದ್ದೇನು, ಬಿಚ್ಚಿಲ್ಲದ ಚಪ್ಪರದಡಿಯಲ್ಲಿ ಜಮಖಾನ ಹಾಸಿಕೊಂಡು ಕುಳಿತಿದ್ದ ಮಾವನವರು. ಅಲ್ಲೇ ಅವರ ಅಕ್ಕಪಕ್ಕದಲ್ಲಿ , ಸುತ್ತಮುತ್ತೆಲ್ಲ ನೆಂಟರು, ಮಕ್ಕಳು ಕುಳಿತಿದ್ದರು. ಭಾವನಾ ತನ್ನ ಚಿಕ್ಕ ತಂಗಿಯರೊಡಗೂಡಿ ಅಲ್ಲಿಯೇ ಕುಳಿತಿದ್ದಾಳೆ. ಆ ಗುಂಪಿನಲ್ಲಿ ಹಿರಿಯರೊಬ್ಬರು ತಂಬೂರಿ ಮೀಟುತ್ತಾ ಹಾಡುತ್ತಿರುವುದು ಕಂಡಿತು. ಅಲ್ಲಿಯೇ ಸ್ವಲ್ಪ ದೂರದಲ್ಲಿ ಚಪ್ಪರದ ಕಂಬವೊಂದನ್ನು ಒರಗಿಕೊಂಡು ನಿಂತಿದ್ದ ಗಂಡನನ್ನು ನೋಡಿದಳು ಭಾಗ್ಯ. ಅವರನ್ನೇ ಸನ್ನೆ ಮಾಡಿ ಕರೆದರೆ, ಯಾರಾದರೂ ನೋಡಿಬಿಟ್ಟರೆ, ಅದಿರಲಿ ಆ ಪುಣ್ಯಾತ್ಮ ಇತ್ತ ತಿರುಗಿ ನೋಡಿದರೆ ತಾನೇ. ಕಣ್ಮುಚ್ಚಿಕೊಂಡು ಹಾಡಿನ ಮಾಧುರ್ಯವನ್ನು ಆಸ್ವಾದಿಸುತ್ತಿದ್ದಾರೆ. ಏನು ಮಾಡಲಿ ಎಂದುಕೊಳ್ಳುವಷ್ಟರಲ್ಲಿ ಯಾರೋ ಮೆಟ್ಟಲು ಹತ್ತಿ ಬರುತ್ತಿರುವ ಅದ್ದಾಯಿತು. ತಕ್ಷಣವೇ ಕಿಟಕಿಯ ಪಕ್ಕ ಬಿಟ್ಟು ಅಸ್ತವ್ಯಸ್ತವಾಗಿದ್ದ ಉಡುಪನ್ನು, ತಲೆಗೂದಲನ್ನು ಸರಿಪಡಿಸಿಕೊಳ್ಳುತ್ತಾ ಮೈತುಂಬ ಸೆರಗು ಹೊದ್ದು ಬಾಗಿಲಬಳಿ ಬಂದಳು ಭಾಗ್ಯ.
ಹೊರಗಡೆಯಿಂದ ಮೆಲುದನಿಯಲ್ಲಿ ತನ್ನ ಹೆಸರನ್ನು ಕರೆದಂತಾಯಿತು. ಮೆಲ್ಲಗೆ ಬಾಗಿಲ ಕಿಂಡಿಯಿಂದ ನೋಡಿದಳು. ಅತ್ತೆಯ ಅತ್ತಿಗೆಯ ಮಗಳು ಉಷಾ. ಅವಳ ಪರಿಚಯ ನೆನ್ನೆಮೊನ್ನೆಯದಾದರೂ ಏಕೋ ಒಂದು ರೀತಿಯ ಆಪ್ತತೆಯುಂಟಾಗಿತ್ತು. ತಡಮಾಡದೇ ಬಾಗಿಲನ್ನು ವಿಶಾಲವಾಗಿ ತೆರೆದಳು. ಹಾಗೇ “ಕ್ಷಮಿಸಿ, ಎಚ್ಚರವಾಗಲಿಲ್ಲ.” ಎಂದಳು ಭಾಗ್ಯ.
“ಪರವಾಗಿಲ್ಲ ಬಾ ನನಗೆಲ್ಲಾ ಅರ್ಥವಾಗುತ್ತದೆ. ಅವರುಗಳೆಲ್ಲ ಹೊರಗೆ ಹೋಗಲಿ ಎಂದು ಕಾಯುತ್ತಿದ್ದೆ. ಬಾ..ಬಾ..ನಿನ್ನ ಅಪ್ಪಣೆಯಿಲ್ಲದೆ ನಿನ್ನ ತಂಗಿ ಭಾವನಾಳ ಬಳಿಯಿದ್ದ ಪೆಟ್ಟಿಗೆಯಿಂದ ನಿನ್ನ ಬಟ್ಟೆಗಳನ್ನು ತೆಗೆದಿರಿಸಿದ್ದೇನೆ.” ಎಂದರು.
ಸದ್ಯ ಬಚಾವಾದೆ ಬಡಜೀವವೇ, ಎಂದುಕೊಂಡು ದುಡದುಡನೆ ಅವರನ್ನು ಹಿಂಬಾಲಿಸಿದಳು ಭಾಗ್ಯ. ಅವರ ನಿರ್ದೇಶನದಂತೆ ಪ್ರಾತಃವಿಧಿ, ಸ್ನಾನವನ್ನು ಮುಗಿಸಿ ಬಂದಾಗ ಮತ್ತೆ ಅವರೇ ಎದುರಾದರು. “ಹೋಗು ದೇವರಿಗೆ ಒಂದು ನಮಸ್ಕಾರ ಮಾಡಿ ಬಾ” ಎಂದರು.
ವಿಶಾಲವಾದ ದೇವರಮನೆ. ಎದುರಿನಲ್ಲಿ ಅಗಲವಾದ ಎರಡು ಹಂತ, ಮಧ್ಯದಲ್ಲಿ ಎತ್ತರವಾದ ಪೀಠ. ಅದರಮೇಲೆ ಇಟ್ಟ ಸಾಲಿಗ್ರಾಮಪೆಟ್ಟಿಗೆ, ಅದರ ಅಕ್ಕಪಕ್ಕ ಚಿಕ್ಕದಾದ ದೀಪಗಳು ಉರಿಯುತ್ತಿದ್ದವು. ಕೆಳಹಂತದಲ್ಲಿ ಇಕ್ಕೆಲಗಳಲ್ಲಿ ಒಂದುಕಡೆ ವೆಂಕಟರಮಣನ ಫೋಟೋ, ಮತ್ತೊಂದು ಕಡೆ ಶೇಷಶಯನನ ಫೋಟೋ. ಅಲ್ಲಿ ಸ್ವಲ್ಪ ಎತ್ತರವಾದ ದೀಪಗಳು ಉರಿಯುತ್ತಿದ್ದವು. ಅದರ ಕೆಳಗಿನ ಹಂತದಲ್ಲಿ ಒಂದು ತಟ್ಟೆಯಲ್ಲಿ ಉದ್ಧರಣೆ, ಪಂಚಪಾತ್ರೆ, ನೀರುತುಂಬಿದ ಚೊಂಬು, ಪಕ್ಕದಲ್ಲಿ ಹೂವಿನ ಬುಟ್ಟಿ, ಆರತಿ ತಟ್ಟೆ, ಮಂಗಳಾರತಿ ಮಾಡುವ ಹಲಾರತಿ, ಜೋಡಿಗಂಟೆ, ಇವುಗಳಲ್ಲಿ ಹಲಾರತಿ, ಜೋಡಿಗಂಟೆ ಬಿಟ್ಟು ಉಳಿದ ವಸ್ತುಗಳೆಲ್ಲಾ ಬೆಳ್ಳಿಯವಾಗಿದ್ದವು.
ಆ ಕಟ್ಟೆಯಲ್ಲಿಯೆ ಹೊಂದಿಕೊಂಡಂತೆ ವಿಶಾಲವಾದೊಂದು ಗೂಡಿತ್ತು. ಅದಕ್ಕೊಂದು ಬಾಗಿಲಿತ್ತು. ಕುತೂಹಲದಿಂದ ಬಗ್ಗಿ ನೋಡಿದಳು ಭಾಗ್ಯ. ಅಲ್ಲಿ ಪೂಜಾ ಸಾಮಗ್ರಿಗಳನ್ನು ಜೋಡಿಸಿಟ್ಟಿದ್ದರು. ಹಾಗೇ ಒಂದುಮೂಲೆಯಲ್ಲಿ ಗಂಧ ತೇಯುವ ಸಾಣೆಕಲ್ಲು, ಗಂಧದ ಕೊರಡು ಅವಳ ಗಮನ ಸೆಳೆಯಿತು. ಅದು ಅವರ ಮನೆಯಲ್ಲೂ ಇತ್ತು. ಆದರೆ ಇದು ಬಹಳ ದೊಡ್ಡದು. ಪ್ರತಿದಿನ ಪೂಜೆಗೆ ಎಷ್ಟು ಗಂಧ ಬೇಕೋ ಏನೋ. ಹಾಗೆ ನೋಡಿದರೆ ಇಲ್ಲಿ ತಮ್ಮ ಮನೆಯಲ್ಲಿದ್ದಂತೆ ವಿಪರೀತ ಸಂಖ್ಯೆಯಲ್ಲಿ ದೇವರುಗಳ ಫೋಟೊಗಳಾಗಲೀ, ವಿಗ್ರಹಗಳಾಗಲೀ ಇರಲಿಲ್ಲ. ಹೂ ! ಏನೋ ಅವ್ವಯ್ಯಾ ರಂಗೋಲಿ ನೋಡಲೇ ಇಲ್ಲವಲ್ಲ. ನವಿರಾದ ಎಳೆಯಲ್ಲಿ ಚೆನ್ನಾಗಿ ಬಿಡಿಸಿದ್ದಾರೆ. ಬಹುಶಃ ಅತ್ತೆಯವರೇ ಇರಬೇಕು. ಹೀಗೆ ಒಂದೊಂದನ್ನೇ ಗಮನಿಸಿ ತಾನು ಏನು ಮಾಡಬೇಕೆಂದು ತಿಳಿದುಕೊಳ್ಳಬೇಕು. ಇಷ್ಟು ದಿನಗಳಲ್ಲಿ ಕಂಡಂತೆ ಇಲ್ಲಿಯೂ ಅಮ್ಮನ ಮನೆಯಂತೆ ಲವಲವಿಕೆಯಿಂದಲೇ ಇದೆ. ಯಾರೂ ಬಿಗಿ ಮುಖದವರಲ್ಲ. ಅಥವಾ ಮನೆತುಂಬ ನೆಂಟರಿಷ್ಟರೆಲ್ಲಾ ಇರುವುದರಿಂದ ಹಾಗೋ, ಹೀಗೇ ಯೋಚನಾಲಹರಿ ಹರಿಯುತ್ತಿದ್ದಂತೆ “ಭಾಗ್ಯಾ ಏನು ಮಾಡುತ್ತಿದ್ದೀಯ ತಾಯಿ” ಎಂದು ಕೂಗುತ್ತಾ ಬಂದ ಅತ್ತೆಯವರು ಸೀತಮ್ಮನವರ ಧ್ವನಿ ಕೇಳಿ ಬೆಚ್ಚಿಬಿದ್ದು ಅವರ ಕಡೆಗೆ ತಿರುಗುತ್ತಾ “ಏನಿಲ್ಲಾ ಅತ್ತೇ, ಹಾಗೇ ನೋಡುತ್ತಿದ್ದೆ. ಈ ಗಂಧದ ಕಲ್ಲು, ಕೊರಡು ಎಲ್ಲವನ್ನೂ” ಎಂದಳು.
ಓ.. ಅದಾ, ತಲೆಮಾರಿನಿಂದ ಬಂದದ್ದು, ಒಂದು ಕಾಲಕ್ಕೆ ಈ ಮನೆಯಲ್ಲಿ ಕೋಣೆಯತುಂಬ ದೇವರುಗಳ ಪಟಗಳು, ವಿಗ್ರಹಗಳು ಲೆಕ್ಕವಿಲ್ಲದಷ್ಟಿದ್ದವಂತೆ. ಅಷ್ಟೇ ಏಕೆ, ನಾನು ಬಂದಾಗಲೂ ಸಾಕಷ್ಟಿದ್ದವು. ಅವುಗಳಿಗೆಲ್ಲ ಸಾಕಾಗುವಷ್ಟು ಗಂಧ ತೇಯಲು, ಪೂಜೆಗೆ ಅಣಿಮಾಡಲು ಬಂದ ಮಾಣಿಯೇ ಈಗಿರುವ ನಾರಾಯಣಪ್ಪ. ಹೆಂಗಸರ ಗೊಣಗಾಟ ಕೇಳಲಾರದೆ ಅವನನ್ನು ಕರೆತಂದರಂತೆ. ನಮ್ಮ ಮಾವನವರು ದೈವಾಧೀನರಾದ ಮೇಲೆ ನಿಮ್ಮ ಮಾವ ಅವುಗಳಿಗೆಲ್ಲಾ ಬೇರೆ ರೀತಿಯ ಮೋಕ್ಷ ಕೊಡಿಸಿ ಇಷ್ಟಕ್ಕೆ ತಂದಿದ್ದಾರೆ. ನಿಮ್ಮ ಮಾವ ಸ್ವಲ್ಪ ಆಧುನಿಕ ಮನೋಭಾವದವರು, ಅಂದರೆ ಅತಿಯಾದ ತೋರಿಕೆಯ ಪೂಜೆಗೆ ವಿರುದ್ಧ. ನಮ್ಮ ಆತ್ಮ ಶುದ್ಧವಾಗಿಟ್ಟುಕೊಂಡು ಇತರರಿಗೆ ನೋವುಕೊಡದೆ ಬದುಕು ನಡೆಸಬೇಕೆಂಬುದೇ ಅವರ ನಿಲುವು. ಹೂಂ, ಈಗಿನ್ನೂ ಮನೆಗೆ ಕಾಲಿಟ್ಟಿದ್ದೀಯೇ, ನಿಧಾನವಾಗಿ ಎಲ್ಲವನ್ನೂ ತಿಳಿದುಕೊಳ್ಳುವಿಯಂತೆ ಬಾ. ಏನು ಕುಡಿಯುತ್ತೀ? ಕಾಫೀನೋ, ಹಾಲೋ” ಎಂದರು.
“ನನಗೇನೂ ಬೇಡ ಅತ್ತೆ,” ಎಂದಳು ಭಾಗ್ಯ.
“ಏಕೆ, ಉಪವಾಸ ಮಾಡುತ್ತೀ? ಊಟ ಲೇಟಾಗುತ್ತೆ ಮಹಾರಾಣಿ” ಎಂದು ಛೇಡಿಸುತ್ತಾ ಅಲ್ಲಿಗೆ ಬಂದ ಗಂಡ ಶ್ರೀನಿವಾಸನನ್ನು ನೋಡಿದಳು ಭಾಗ್ಯ. ಅವನ ಮುಖದಲ್ಲಿ ತುಂಟನಗುವಿತ್ತು.
“ ಅಲ್ಲಿದ್ದವನು ಯಾವ ಮಾಯದಲ್ಲಿ ಇಲ್ಲಿಗೆ ತೂರಿದೆಯೋ ಮಗರಾಯ? ಬಾಮ್ಮಾ ನೀನೂ” ಎಂದು ಅವಳ ಕೈಹಿಡಿದು ಅಡುಗೆ ಮನೆಯತ್ತ ಹೆಜ್ಜೆ ಹಾಕಿದರು ಸೀತಮ್ಮ.
ಅಡುಗೆ ಕೆಲಸದಲ್ಲಿದ್ದ ನಾರಾಣಪ್ಪ ಅವರಿಬ್ಬರ ಆಗಮನ ಕಂಡು “ ಬನ್ನಿ, ಚಿಕ್ಕಮ್ಮನೋರೇ, ನಿಮಗಾಗಿ ಕಷಾಯ ತಯಾರಿಸಿದ್ದೇನೆ.” ಎಂದು ಒಂದು ಲೋಟಕ್ಕೆ ಬಗ್ಗಿಸಿ ಕೊಟ್ಟ.
“ಅರೇ, ಅವಳು ಕಷಾಯ ಕುಡಿಯುತ್ತಾಳೆಂದು ನಿನಗೆ ಹೇಗೆ ಗೊತ್ತು? ಈ ವಾರದಲ್ಲಿ ಎಂದಾದರೂ ನಿನಗೆ ಹೇಳಿದ್ದಳೇ?” ಎಂದು ಕೇಳಿದರು ಸೀತಮ್ಮ.
“ಛೇ..ಪಾಪ ಇವತ್ತು ಅವರು ಅಡುಗೆಮನೆಗೆ ಕಾಲಿಟ್ಟಿರುವುದು. ಆವತ್ತು ನಾನವರ ಮನೆಗೆ ಹೋಗಿದ್ದಾಗ ಕಾಫಿ, ಟೀ, ಕಷಾಯ ಏನು ಕುಡಿಯುತ್ತೀರಾ ಎಂದು ಕೇಳಿದ್ದರು. ಅದರ ನೆನಪಿನಿಂದ ಮಾಡಿದ್ದೆ ಅಷ್ಟೇ” ಎಂದರು ನಾರಾಣಪ್ಪ.
“ಹಾಗಿದ್ದರೆ ನಾಣಜ್ಜ, ನಿಮಗೆ ಕಷಾಯಕ್ಕೊಂದು ಕಂಪನಿ ಸಿಕ್ಕಂತಾಯಿತು.” ಎಂದು ನಗುತ್ತಾ ಬಂದ ಶ್ರೀನಿವಾಸನನ್ನು ಕಂಡು ಸೀತಮ್ಮ “ಏನೋ ನಿನ್ನ ಕಿರಿಕಿರಿ, ಸುಮ್ಮನೆ ಆ ಹುಡುಗಿಯನ್ನೇಕೆ ಗೋಳು ಹುಯ್ದುಕೊಳ್ಳುತ್ತೀ” ಎಂದರು.
“ ನಾನ್ಯಾಕೆ ಗೋಳು ಹೊಯ್ದುಕೊಳ್ಳಲಿ, ನಾನು ಬಂದದ್ದು ಹೊರಗೆ ನಡೆಯುತ್ತಿರುವ ಸಂಗೀತ ಕಚೇರಿಗೆ ನಿಮ್ಮ ಸೊಸೆಮುದ್ದನ್ನು ಕರೆದುಕೊಂಡು ಬರಲು ನನ್ನ ಪಿತಾಶ್ರೀಯವರು ಅಪ್ಪಣೆ ಮಾಡಿದ್ದರಿಂದ ಬಂದೆ ಅಷ್ಟೇ” ಎಂದು ಹೇಳಿದ ಶ್ರೀನಿವಾಸ.
“ಅವಳನ್ನು ನಾನೇ ಕರೆದುಕೊಂಡು ಬರುತ್ತೇನೆ. ನೀನು ಹೋಗು” ಎಂದು ಮಗನಿಗೆ ಹೇಳಿ “ಭಾಗ್ಯಾ ನೀನು ಕಷಾಯ ಕುಡಿದು ಹಾಲಿನಲ್ಲಿರುವ ಎಡಭಾಗದ ರೂಮಿಗೆ ಬಾ” ಎಂದು ಸೊಸೆಗೆ ಹೇಳಿ ಅಡುಗೆ ಮನೆಯಿಂದ ಹೊರ ನಡೆದರು ಸೀತಮ್ಮ.
ಅವರೆಲ್ಲ ಹೋದಮೇಲೆ ಭಾಗ್ಯ ಕಷಾಯ ಕುಡಿಯುತ್ತಾ ನಾರಾಣಪ್ಪನನ್ನು “ನಿಮ್ಮನ್ನು ನಾನು ಏನಂತ ಕರೆಯಲಿ?” ಎಂದು ಕೇಳಿದಳು.
“ಹಾ ಯಜಮಾನರು ನಾಣಿ ಎನ್ನುತ್ತಾರೆ. ಯಜಮಾನ್ತಿ ಬಾಯಿತುಂಬ ನಾರಾಣಪ್ಪಾ ಎನ್ನುತ್ತಾರೆ. ಚಿಕ್ಕೆಜಮಾನರು ನಾಣಜ್ಜ ಎನ್ನುತ್ತಾರೆ. ಅದರಲ್ಲಿ ನಿಮಗೆ ಯಾವುದು ಇಷ್ಟವೋ ಹಾಗೆ ಕರೆಯಿರಿ. ನನಗೇನೂ ಬೇಸರವಿಲ್ಲ.” ಎಂದ ನಾರಾಣಪ್ಪ.
“ಸರಿ ಹಾಗಾದರೆ ನಾನೂ ನಾಣಜ್ಜ ಎಂದೇ ಕರೆಯುತ್ತೇನೆ.” ಎಂದು ಖಾಲಿಯಾದ ಲೋಟವನ್ನು ಅಲ್ಲೇ ಇದ್ದ ಕೈಬಚ್ಚಲಲ್ಲಿಡಬಹುದಾ ಎಂದು ಕೇಳಿ ಅಲ್ಲಿಟ್ಟು ಅತ್ತೆಯವರು ಹೇಳಿದಂತೆ ಹಾಲಿನಲ್ಲಿದ್ದ ರೂಮಿಗೆ ಹೋದಳು ಭಾಗ್ಯ.
ಸೊಸೆಯು ಒಳಬಂದದ್ದನ್ನು ಕಂಡ ಸೀತಮ್ಮ “ಬಂದೆಯಾ..ಬಾ” ಎಂದು ತಾವೇ ಮುಂದಾಗಿ ತಲೆಗೆ ಸುತ್ತಿಕೊಂಡಿದ್ದ ಬಟ್ಟೆಯನ್ನು ತೆಗೆದು ಕೂದಲನ್ನು ಮತ್ತೊಮ್ಮೆ ಒರೆಸಿ, ಅಕ್ಕಪಕ್ಕದಿಂದ ಒಂದಿಷ್ಟು ಕೂದಲನ್ನು ತೆಗೆದು ಮಧ್ಯದಲ್ಲಿನ ಒಂದಿಷ್ಟು ಕೂದಲನ್ನು ಹಿಡಿದು ಸಣ್ಣದಾಗಿ ಜಡೆ ಹೆಣೆದು ಅದಕ್ಕೊಂದು ಚೂರು ಹೂ ಮುಡಿಸಿದರು. “ಕೂದಲು ಒಣಗಲಿ ಹಾಗೇ ಬಿಡು, ನೋಡಲ್ಲಿ ಎದುರಿಗೆ ಕುಂಕುಮದ ಭರಣಿಯಿದೆ. ಇಟ್ಟುಕೋ, ಪೌಡರ್ ಬೇಕಾದರೆ ಹಾಕಿಕೋ, ರೆಡಿಯಾಗು ಹೊರಗೆ ನಡೆಯುತ್ತಿರುವ ಸಮ್ಮೇಳನಕ್ಕೆ ಸೇರಿಕೊಳ್ಳೋಣ” ಎಂದರು.
“ಅತ್ತೆ ಅಡುಗೆ ಕೆಲಸ” ಎಂದಳು ಬಾಗ್ಯ.
“ಅದನ್ನೆಲ್ಲ ನಮ್ಮ ಭಟ್ಟರು ನೋಡಿಕೊಳ್ಳುತ್ತಾರೆ. ಅದೆ ಭಾಗ್ಯ ನಾರಾಣಪ್ಪ. ಅವರಿಗೇನೇನು ಮಾಡಬೇಕೆಂದು ನಿರ್ದೇಶನ ಕೊಟ್ಟಾಗಿದೆ. ಅವರಿಗೆ ಬೇಕಾದ ಸರಂಜಾಮನ್ನೆಲ್ಲ ಒದಗಿಸಲಾಗಿದೆ. ಸಹಾಯವನ್ನೂ ಮಾಡಲಾಗಿದೆ. ಎಲ್ಲ ಸಿದ್ಧವಾದಮೇಲೆ ಕರೆಯುತ್ತಾರೆ. ಬಾ..ಬಾ..ನಿಮ್ಮ ಮಾವ ಮತ್ತೆ ಕರೆ ಕಳುಹಿಸಿಬಿಟ್ಟಾರು” ಎಂದರು. ವಿಧಿಯಿಲ್ಲದೆ ಅವರ ಜೊತೆಯಲ್ಲಿ ಹೆಜ್ಜೆ ಹಾಕಿದಳು ಭಾಗ್ಯ.
ಮಡದಿಯ ಜೊತೆಯಲ್ಲಿ ಆಗಮಿಸಿದ ಸೊಸೆಯನ್ನು ನೋಡಿ ಜೋಯಿಸರು “ಬಾಮ್ಮಾ ಭಾಗ್ಯಮ್ಮ, ಎಲ್ಲರೂ ನಿನ್ನ ಹಾದಿಯನ್ನೇ ಕಾಯುತ್ತಿದ್ದಾರೆ. ಹೊಟ್ಟೆಗೇನಾದರೂ ತೆಗೆದುಕೊಂಡೆಯಾ?” ಎಂದು ಅಕ್ಕರೆಯಿಂದ ವಿಚಾರಿಸಿದರು.
“ಆಯಿತು ಮಾವ, ಕಷಾಯ ಕುಡಿದು ಬಂದೆ” ಎಂದಳು ಮೆಲ್ಲಗೆ.
“ಭಾಗ್ಯಮ್ಮ ಮದುವೆ, ಪೂಜೆ ಇತ್ಯಾದಿ ಕಾರ್ಯಕಲಾಪಗಳ ನಡುವೆ ನಮ್ಮ ಬಂಧುಬಳಗದವರೊಡನೆ ಮಾತನಾಡಿಸಲಾಗಲೀ, ಪರಿಚಯಿಸಲಾಗಲೀ ಆಗಲಿಲ್ಲ. ಕೆಲವರಂತೂ ಮದುವೆ ಮುಗಿಸಿಕೊಂಡು ಹೊರಟು ಹೋಗಿದ್ದಾರೆ. ಇಲ್ಲಿರುವವರನ್ನಷ್ಟೇ ಪರಿಚಯಿಸುತ್ತೇನೆ. ನಾನು ನಮ್ಮಪ್ಪನಿಗೆ ಒಬ್ಬನೇ ಪುತ್ರ. ಇನ್ನು ನನಗೋ ಒಬ್ಬನೇ. ನೋಡಿಲ್ಲಿ ಇಲ್ಲಿರುವ ಹಿರಿಯರು, ಕಿರಿಯರು ನನ್ನಪ್ಪ, ನನ್ನ ತಾತನವರ ಸಂಬಂಧಿಕರು. ಅಂದರೆ ಅವರ ದಾಯಾದಿಗಳು, ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು. ನನ್ನ ಅರ್ಧಾಂಗಿ ಅಂದರೆ ನಿಮ್ಮತ್ತೆಯ ಬಳಗ ನನ್ನದಕ್ಕಿಂತ ಸ್ವಲ್ಪ ದೊಡ್ಡದೆಂದು ಹೇಳಬಹುದು. ಕಾರಣ ಅವಳಿಗೆ ಮೂರುಜನ ಸೋದರರು. ಅವರೆಲ್ಲರ ಮುದ್ದಿನ ತಂಗಿಯೀಕೆ. ಪ್ರೀತಿ, ಒಡನಾಟ ಹಂಚಿಕೊಂಡು ಬೆಳೆದಿದ್ದಾಳೆ. ನೋಡಿಲ್ಲಿ ಇವರೆಲ್ಲ ಅವಳ ಕುಟುಂಬದವರೇ. ಈಗ ಇವರೆಲ್ಲ ನಮ್ಮ ಕುಟುಂಬದವರೇ. ಹಾಸನ, ಟಿ.ನರಸೀಪುರ, ತುಮಕೂರು, ಮೈಸೂರು ಊರುಗಳಲ್ಲಿ ನೆಲೆಸಿದ್ದಾರೆ.” ಎಂದು ಪರಿಚಯಿಸಿದರು.
“ಭಾಗ್ಯಮ್ಮ, ಈ ಪರಿಚಯವೆಲ್ಲಾ ಪಕ್ಕಕ್ಕಿಡು, ದಿನಕಳೆದಂತೆ ತಂತಾನೇ ಆಗುತ್ತೆ. ಇಗ ನಮಗೆಲ್ಲಾ ನೀನು ಒಂದು ದೇವರನಾಮ ಹಾಡಬೇಕು. ನಿನ್ನ ತಂಗಿಯರ ಸಂಗೀತ ಕೇಳಿದ್ದಾಯಿತು. ನಾವುಗಳೂ ಹಾಡಿದ್ದಾಯಿತು. ಈಗ ನಿನ್ನ ಸರದಿ. ಬೇಗಬೇಗ ಏಕೆಂದರೆ ಊಟಮುಗಿಸಿ ನಾವೆಲ್ಲ ಹೊರಡುವ ತಯಾರಿ ಮಾಡಿಕೊಳ್ಳಬೇಕು.” ಎಂದರು ಗುಂಪಿನಲ್ಲಿದ್ದ ಹಿರಿಯರೊಬ್ಬರು.
“ಖಂಡಿತ ಹಾಡುತ್ತೇನೆ, ಆದರೆ ನೀವೆಲ್ಲ ಇವತ್ತೇ ಹೊರಡಬೇಕೇ? ಒನ್ನೊಂದೆರಡು ದಿನ ನಮ್ಮೊಡನೆ ಇರಬಹುದಿತ್ತಲ್ಲಾ” ಎಂದು ಕೇಳಿದಳು ಭಾಗ್ಯ .
“ಭಾಗ್ಯಮ್ಮಾ ನಮ್ಮಗಳಲ್ಲಿ ಬಹುತೇಕರು ನಿಮ್ಮ ಮಾವನವರಂತೆಯೇ ಪೌರೋಹಿತ್ಯ, ಜ್ಯೋತಿಷ್ಯ, ಸಂಗೀತದ ನಂಟು ಬೆಳೆಸಿಕೊಂಡು ಅವುಗಳನ್ನೇ ವೃತ್ತಿಯನ್ನಾಗಿಸಿ ಬದುಕು ನಡೆಸಿಕೊಂಡು ಹೋಗುತ್ತಿರುವವರು. ಈಗ ಮದುವೆ ಲಗ್ನಗಳು, ಗೃಹಪ್ರವೇಶ, ಜಾತ್ರೆ, ಉತ್ಸವಗಳ ಕಾಲ. ಹೋಗಲೇಬೇಕಮ್ಮ. ನೀವೇ ಪುರುಸೊತ್ತು ಮಾಡಿಕೊಂಡು ಒಮ್ಮೆ ನಮ್ಮೂರಿಗೂ ಬನ್ನಿ” ಎಂದರು.
ಹಾಗೆ ಹೇಳಿದ ವ್ಯಕ್ತಿ ತಾನು ಬೆಳಗ್ಗೆ ಕಿಟಕಿಯಿಂದ ನೋಡಿದಾಗ ಕಾಣಿಸಿದವರೇ ಎಂದು ಗೊತ್ತಾಯಿತು. ಅವರ ಮಧುರ ಸಂಗೀತವೇ ತನ್ನನ್ನು ಎಚ್ಚರಗೊಳಿಸಿದ್ದು ಎಂದು ಜ್ಞಾಪಿಸಿಕೊಂಡಳು.
ನಂತರ ನಾರಾಣಪ್ಪನವರು ಅಡುಗೆ ಆಗಿದೆಯೆಂಬ ಸುದ್ಧಿ ಹೇಳುವವರೆಗೂ ಒಬ್ಬರ ನಂತರ ಒಬ್ಬರು ಪೈಪೋಟಿಯಂತೆ ಮತ್ತೆ ಮತ್ತೆ ಹಾಡಿದ್ದೇ ಹಾಡಿದ್ದು.ಇದನ್ನು ಕಂಡ ಭಾಗ್ಯ ಎಂಥಹ ಸದಭಿರುಚಿಯ ಜನರು, ವಿದ್ಯೆಗೆ ಬೆಲೆ ಕೊಡುತ್ತಾರೆಂದುಕೊಂಡಳು.
ಎಲ್ಲರೂ ಊಟಮಗಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ತಂತಮ್ಮ ಊರುಗಳಿಗೆ ಹೊರಟರು. ನೆಂಟರಿಷ್ಟರನ್ನೆಲ್ಲ ಬೀಳ್ಕೊಟ್ಟು ಜೋಯಿಸರು ದಂಪತಿಗಳು ಅಲ್ಲೇ ಚಪ್ಪರದಡಿಯಲ್ಲಿ ಹಾಕಿದ್ದ ಜಮಖಾನೆಯ ಮೇಲೆ ಕುಳಿತು ಮಾತುಕತೆಯಲ್ಲಿ ತೊಡಗಿದರು. ಮನೆಯೊಳಗಿನಿಂದ ಹೊರಬಂದ ಶ್ರೀನಿವಾಸ “ಇದೇನು ಇನ್ನೂ ಇಲ್ಲೇ ಕುಳಿತಿದ್ದೀರಿ, ಬೆಳಗ್ಗೆಲ್ಲಾ ಇಲ್ಲೇ ಸಂಗೀತ ಕಛೇರಿ, ಹರಟೆ ಹೊಡೆದದ್ದು ಸಾಕಾಗಲಿಲ್ಲವೇ?” ಎಂದು ತನ್ನ ಹೆತ್ತವರನ್ನು ಪ್ರಶ್ನಿಸಿದ.
“ಹೂ ಕಣೋ ಶ್ರೀನಿ, ಒಂದು ವಾರದಿಂದ ಗಲಗಲ ಎನ್ನುತ್ತಿದ್ದ ಮನೆಯೀಗ ಭಣಗುಟ್ಟುತ್ತಿದೆ. ಸ್ವಲ್ಪ ಹೊತ್ತು ಇಲ್ಲಿಯೇ ಕಳೆದು ಒಳಕ್ಕೆ ಹೋಗೋಣ ಅಂತ ಕುಳಿತಿದ್ದೀವಿ. ನೀನೇನು ಇಲ್ಲಿಗೆ ಬಂದೆ? ಮಲಗಲಿಲ್ಲವೇ? ಅದೇನು ಕೈಯಲ್ಲಿ ಪೇಪರ್” ಎಂದು ಕೇಳಿದರು.
“ಇವತ್ತಿನ ಪೇಪರ್, ಬೆಳಗಿನಿಂದ ಕೈಗೆ ಸಿಕ್ಕಿರಲಿಲ್ಲ, ಈಗ ಓದಿದೆ.” ಎಂದ ಶ್ರೀನಿವಾಸ.
“ಹೌದೇ..ಬಾ ಕುಳಿತುಕೋ, ಏನಾದರೂ ವಿಶೇಷ ಸಮಾಚಾರವಿದ್ದರೆ ಹೇಳು, ನಾವೂ ಕೆಳುತ್ತೇವೆ” ಎಂದರು ಸೀತಮ್ಮ.
“ಭಾಗ್ಯ, ಭಾವನಾ ಯಾರೂ ಕಾಣಿಸಲಿಲ್ಲ. ಎಲ್ಲಿ ರೂಮಿನಲ್ಲೂ ಕಾಣಿಸಲಿಲ್ಲ” ಎಂದ.
“ಚಿಕ್ಕ ಮಕ್ಕಳಿಬ್ಬರೂ ಪಕ್ಕದ ಮನೆಯ ಮಕ್ಕಳೊಡನೆ ಹಿತ್ತಲಲ್ಲಿಯೋ, ಪಡಸಾಲೆಯಲ್ಲಿಯೋ ಚೌಕಾಭಾರ, ಅಥವಾ ಪಗಡೇನೋ ಆಡುತ್ತಿದ್ದಾರೆ. ಇನ್ನು ಭಾಗ್ಯ, ಭಾವನಾ ಬೇಡವೆಂದರೂ ಕೇಳದೇ ನಾರಾಣಪ್ಪನ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾರೆ. ಮಿಕ್ಕ ಪದಾರ್ಥಗಳನ್ನು ತೆಗೆದು ಪಾತ್ರೆಪಡಗಗಳನ್ನು ತೊಳೆಯಲು ಹಾಕುವುದು, ಹಸು ಮನೆಯವರಿಗೆ ಊಟ ಕೊಡುವುದು, ಹೀಗೆ ಚಿಕ್ಕಪುಟ್ಟ ಕೆಲಸಗಳಿಗೆ ಸಹಾಯಕರಾಗಿ ನಿಂತಿದ್ದಾರೆ. ಕರೆಯಲೇನು?” ಎಂದರು ಸೀತಮ್ಮ.
“ಬೇಡ, ಬೇಡ, ಅವರಲ್ಲೇ ಇರಲಿ, ಈ ದಿನ ಪೇಪರಿನಲ್ಲಿ ನಿಮ್ಮ ಸೊಸೆಗೆ ಸಂಬಂಧಿಸಿದ ಸುದ್ಧಿಯೇ ವಿಶೇಷವಾದದ್ದು” ಎಂದ ಶ್ರೀನಿವಾಸ.
“ಹೌದೇ ! ಏನದು?” ಎಂದು ಕೇಳಿದರು ಜೋಯಿಸರು.
“ಅದೇ ಅಪ್ಪಾ, ಎಸ್.ಎಸ್.ಎಲ್.ಸಿ., ಪರೀಕ್ಷೆಯ ಫಲಿತಾಂಶ ಈ ವಾರದಲ್ಲಿ ಬರುತ್ತೇಂತ ಹಾಕಿದ್ದಾರೆ” ಎಂದು ತಿಳಿಸಿದ.
“ಒಳ್ಳೆಯದಾಯ್ತು, ಶ್ರೀನಿ ನಾವು ಈ ವಿಷಯದ ಬಗ್ಗೆ ನಿನ್ನೊಡನೆ ಪ್ರಸ್ತಾಪ ಮಾಡಬೇಕೆಂದಿದ್ದೆವು” ಎಂದರು ಜೋಯಿಸರು.
“ಭಾಗ್ಯಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ ತಾನೇ?” ಪ್ರಸ್ನಿಸಿದ ಶ್ರೀನಿವಾಸ.
“ಮದುವೆಯಾಗುವ ಮೊದಲು ಕೇಶವಯ್ಯ ಹೇಳಿದ ಮಾತು ನಿನಗೂ ಗೊತ್ತಲ್ಲವಾ, ಪಾಪ ಆ ಮಗೂಗೆ ಮುಂದೆ ಓದಲು ತುಂಬ ಆಸಕ್ತಿಯಿದೆಯಂತೆ. ಅನಿವಾರ್ಯವಾಗಿ ಈ ಮದುವೆಗೆ ಒಪ್ಪಿಗೆ ಇತ್ತಿದ್ದಾಳೆಂದು ಹೇಳಿದ್ದರು. ಪಾಸಾದರೆ ಮುಂದಕ್ಕೆ ಓದಿಸೋಣವೆಂದು ನಮ್ಮ ಅಭಿಪ್ರಾಯ. ಈಗೇನು ಕಾಲ ಬದಲಾಗಿದೆ. ನಮ್ಮಲ್ಲಿಯೂ ಹೆಣ್ಣುಮಕ್ಕಳು ಓದಲು ಮುಂದೆ ಬರುತ್ತಿದ್ದಾರೆ. ಪೋಷಕರೂ ಧೈರ್ಯವಹಿಸುತ್ತಿದ್ದಾರೆ. ನಾವೂ ಏಕಾಗಬಾರದು?” ಎಂದರು ಜೋಯಿಸರು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35406
–ಬಿ.ಆರ್.ನಾಗರತ್ನ, ಮೈಸೂರು
ಬಹಳ ಆಪ್ತ ಅನ್ನಿಸುವ ಸೊಗಸಾದ ಕತೆ.
ಅಂತೂ ಅತ್ತೆಯ ಮನೆಯಲ್ಲಿ ಭಾಗ್ಯಳ ನವಜೀವನದ ಶುಭಾರಂಭವಾಯಿತು. ಸುಂದರ ನಿರೂಪಣೆಯೊಂದಿಗೆ ಅಚ್ಚುಕಟ್ಟಾಗಿ ಕಾದಂಬರಿ ಮುಂದುವರೆಯುತ್ತಿದೆ. ಭಾಗ್ಯ ಮುಂದೆ ಓದುತ್ತಾಳೆಯೇ ತಿಳಿಯಲು ಮುಂದಿನ ವಾರದ ತನಕ ಕಾಯಬೇಕಲ್ಲ!
ಧನ್ಯವಾದಗಳು ನಯನ ಮತ್ತು ಪದ್ಮಾ ಮೇಡಂ
ಬಹಳ ಆಪ್ತತೆಯನ್ನು ನೀಡುವ ಕಥಾ ಲಹರಿಯು ತುಂಬಾ ಇಷ್ಟವಾಯ್ತು ಮೇಡಂ.
ಧನ್ಯವಾದಗಳು ಶಂಕರಿ ಮೇಡಂ