ಪುಸ್ತಕ ನೋಟ: ಭೂರಮೆ ವಿಲಾಸ

Share Button

ಕಾವ್ಯವು ಚಿತ್ರವು ಸಂಧಿಸಿ ಹೊಸ ಹೊಳಹನ್ನು ಉಣಬಡಿಸುವ”ಭೂರಮೆ ವಿಲಾಸ” ಕವನ ಸಂಕಲನ ಕಗ್ಗೆರೆ ಪ್ರಕಾಶರ ನಾಲ್ಕನೆ ಕವನ ಸಂಕಲನ. ಇಲ್ಲಿರುವ ಉತ್ಕೃಷ್ಟ ಕವಿತೆಗಳಿಗೆ ಮುನ್ನುಡಿ ಬೆನ್ನುಡಿ ಬರೆಯಿಸುವ ಗೋಜಿಗೆ ಹೋಗದೆ ಸಮಚಿತ್ತದಿಂದ ಓದುಗರಿಗೆ ನೀಡಿಬಿಟ್ಟಿದ್ದಾರೆ. ಸರಳ, ನೇರ , ದಿಟ್ಟ, ಪರಿಶುದ್ಧವಾದ ಇಲ್ಲಿನ ಕವಿತೆಗಳೆಲ್ಲದರಲ್ಲು ಒಂದು ನೀತಿಯಿದೆ. ನೀತಿ ಎಂಬುದು ಕವಿತೆಯ ಸೃಷ್ಟಿಯ ಚೌಕಟ್ಟಿಗೆ ಮಾತ್ರ ಸೀಮಿತವಾಗದೆ, ಕವಿಯ ಜೀವನ ದೃಷ್ಟಿಯ ಆದರ್ಶದಲ್ಲು ಅದು ಇದ್ದರೆ ಕವಿಯ ಬದುಕು ಮತ್ತು ಕವಿತೆ ಎರಡೂ ಸಾರ್ಥಕತೆ ಕಾಣುತ್ತದೆ. ಭೂರಮೆ ವಿಲಾಸದಲ್ಲಿ ಕೃತಿ ಮತ್ತು ಕೃತಿಕಾರರ ಕುರಿತು ಇತರರ ಮಾತುಗಳನ್ನು ಓದಿದಾಗ ಅದು ಇಲ್ಲಿ ಸಿದ್ಧಿಸಿದೆ ಎಂದು ಭಾವಿಸುತ್ತೇನೆ.

ಮೂರು ವರ್ಷದ ಮಗು ಸೃಜನಿ ಎಸ್ . ವಿ. ಭೂರಮೆ ವಿಲಾಸದಲ್ಲಿ ಪುಟಾಣಿ ಕಲಾವಿದೆಯಾಗಿ ರೂಪುಗೊಂಡಿದ್ದಾಳೆ‌. ಇಂತಹ ವಿಭಿನ್ನ ಚಿಂತನೆಯೊಂದಿಗೆ  ಪುಸ್ತಕ ಪ್ರಕಟಿಸಿರುವುದು ನಿಜವಾಗಿಯೂ ಶ್ಲಾಘನೀಯ. ಕವಿತೆಗೆ ಹೇಳಿ ಮಾಡಿಸಿದಂತೆ , ಕವಿತೆಗೆ ಬೇಕಾದ ಒಳನೋಟದಂತೆಯೆ  ಅಮೂರ್ತವಾಗಿ ಚಿತ್ರಗಳು ಪಡಿಮೂಡಿ ನಮ್ಮ ಕಲ್ಪನೆಗೆ ಸಿಗುತ್ತಿವೆ. ಕೃತಿಯಲ್ಲಿ ಇಂತಹ ಹೊಸತನ ಮೂಡಿಸಲು, ಯೋಚನೆ , ಯೋಜನೆ ಖಂಡಿತ ಎಲ್ಲರಿಗು ಬರಲಾರದು. ಒಂದು ಕೃತಿಯ ಹಿಂದೆ ಎಷ್ಟೊಂದು ಪರಿಶ್ರಮ ಅಡಗಿರುತ್ತದೆ ಎಂಬುದು ಇಲ್ಲಿ ಮನದಟ್ಟಾಗುತ್ತದೆ. ಇಲ್ಲಿರುವ ಕವಿತೆಗಳಿಗೆ ಮಗುವಿನ ಹೆಸರು ಹೇಳದೆ , ಪ್ರಸಿದ್ಧ ಕಲಾವಿದರ ಹೆಸರು ಹೇಳಿ ಅಭಿಪ್ರಾಯ ಕೇಳಿದರು ನಾವೆಲ್ಲ ಖುಷಿಯಿಂದ ಖಂಡಿತ ಹೌದೆಂದು ಒಪ್ಪುತ್ತಿದ್ದೆವು. ಅಂದರೆ ಅರ್ಥ ಆಗದೆಯು ಕೆಲವು ಪಡಿಮೂಡಿದರು ನಮ್ಮ ಭಾವಕ್ಕೆ ತಕ್ಕಂತೆ ಎಲ್ಲವು ಸರಿಯಿದೆ. ಒಟ್ಟಿನಲ್ಲಿ ಮಗುವಿನ ಚಿತ್ರಗಳು ಕವಿತೆಗಳ ತೂಕವನ್ನು ಇನ್ನು ಹೆಚ್ಚಿಸಿವೆ ಮತ್ತು ಕವಿತೆಗಳು ಇನ್ನು ಹೆಚ್ಚು ಆಪ್ತವಾಗುತ್ತವೆ.

ಕವಿಯಾದವನಿಗೆ ನಿತ್ಯವು ಹಬ್ಬ. ಏನೆ ಜಡತನ , ಬೇಸರವಿದ್ದರು ಉತ್ಸಾಹವನ್ನು ಬಿತ್ತುತ್ತಿರುತ್ತಾರೆ. ನಮ್ಮ ಕವಿಗು ದೀಪಾವಳಿಯಲ್ಲಿ  ಒಂದೊಳ್ಳೆ ಕವಿತೆ, ಒಂದೊಳ್ಳೆ ಮನಸ್ಸು ಇಷ್ಟಿದ್ದರೆ ಸಾಕು‌. ಇಷ್ಟಿದ್ದರೆ ಪ್ರತಿದಿನ ಹಬ್ಬ.ದೀಪಾವಳಿ ದಿನ ಹಬ್ಬಕ್ಕೆ/ ಹೊಸಬಟ್ಟೆ ಭೂರಿ ಭೋಜನ/ ಏನಾಯ್ತು ಇಲ್ಲದಿದ್ದರೆ/ ಚಿಂತೆ ಏಕೆ ಬಡತನ‌ ಕಾಡಿಸಿದರೆ… ಹೀಗೆ ಸಾಗುತ್ತದೆ ಕವಿ ಮನದ  ದೀಪಾವಳಿ . ಪ್ರಕೃತಿಯ ಸೊಬಗನ್ನು ವೈಭವೀಕರಿಸಿ ಹೇಳಿರುವ ಸಾಲುಗಳು ಇಳೆಯ ಸೌಂದರ್ಯವನ್ನು ಇನ್ನು ಇಮ್ಮಡಿಸಿದೆ.

ನಿಶೆಯಲ್ಲಿ ಉಷೆ ಏರುವಳು
ಹಗಲಿನ ಹಸೆಮಣೆಗೆ,
ಬಂಗಾರದ ರಥವೇರಿ
ಆಗಸದಿ ಬರುತ್ತಾನೆ ಸೂರಿ
ನಮ್ಮ ನಡುಮನೆಗೆ

ಇದು ಪ್ರಕೃತಿಯ ಕುರಿತು ಎಷ್ಟೊಂದು ಅರ್ಥಗರ್ಭಿತ ಸಾಲುಗಳೆಂದರೆ , ನಮ್ಮ ನಡುವೆ ಜೀವಂತವಾಗಿರುವ ಪ್ರಕೃತಿಯನ್ನು ನಾವು ಗಮನಿಸಲೆ ಇಲ್ಲವಲ್ಲ ಎಂದೆನಿಸಿಬಿಡುತ್ತದೆ. ಪ್ರಕೃತಿಯ ಸೂಕ್ಷ್ಮ ಚಿತ್ರಣಗಳನ್ನು ಹಲವಾರು ಕವಿತೆಗಳಲ್ಲಿ ಹೇಳಿ ನಮ್ಮನ್ನು ಸೆಳೆಯುತ್ತಾರೆ. ನಿಸರ್ಗದ ಮಡಿಲು ಎಷ್ಟೊಂದು ರಕ್ಷಣ ಭಾವ ಮೂಡಿಸುತ್ತದೆ ಎಂಬುದು ಭೂರಮೆ ವಿಲಾಸದ ಹಲವಾರು ಸಾಲುಗಳಲ್ಲಿ, ಕವಿಯ ಕನಸು ಕಣ್ಣಿನಲ್ಲಿ , ಕಾವ್ಯದ ಬತ್ತಳಿಕೆಯಲ್ಲಿ ಸಾರ್ಥಕತೆ ಪಡೆದುಕೊಂಡಿದೆ.

ತನ್ನ ಕಾವ್ಯ ಸೃಷ್ಠಿಗೆ ಕವಿ ಇಂತದ್ದೆ ಎನ್ನುವ ಸೂತ್ರವನ್ನು ಸಿದ್ಧಪಡಿಸದೆ ಹೊಸ ಹೊಸ ಪ್ರತಿಮೆಗಳ ಜೀವಂತಿಕೆಯ ಸಾಲುಗಳನ್ನು ಹೆಣೆದಿದ್ದಾರೆ. ಕನ್ನಡದ ಕುರಿತ ಅಭಿಮಾನ, ಸಂಬಂಧಗಳ ಬಿಗುಮಾನ , ಕುಟುಂಬ ಪ್ರೀತಿಯ ಅಭಿಮಾನ, ಪ್ರಕೃತಿ ಉಳಿಯಲಿಯೆನ್ನುವ ಅಭಿಯಾನ ಹೀಗೆ ಹಲವಾರು ವಸ್ತುಗಳ ಕವಿತೆಗಳು ಸೃಜನಶೀಲತೆಯಿಂದಹುಟ್ಟಿವೆ. ಪುರಾಣ ಕಥೆಗಳು ಇರುವುದು ನಮ್ಮ ಎಚ್ಚರಿಸಲು/ಕಲಿಯುಗದಲ್ಲಿ ಕಲಿತು ನೆಮ್ಮದಿಯಿಂದ ನಾವು ಬದುಕಲು . ನಿಜ ನಮ್ಮೊಳಗನ್ನು ಎಚ್ಚರಿಸಿ ಕಾಪಿಡುವ ಇಂತಹ ಸಾಲುಗಳು ಕವಿತೆಯ ಮಿಡಿತವನ್ನು ಉಳಿಸಿಕೊಂಡಿವೆ. ಸಣ್ಣ ಸಣ್ಣ ವಿಚಾರಗಳನ್ನು‌ಸೂಕ್ಷ್ಮವಾಗಿ ಅವಲೋಕಿಸಿ ಅದಕ್ಕೊಂದು ಕವಿತೆಯ ರೂಪ ಕೊಡುವಲ್ಲಿ ಕಗ್ಗೆರೆ ಪ್ರಕಾಶರು ಯಶಸ್ವಿಯಾಗಿದ್ದಾರೆ. ಈ ರೂಪ ಕೊಡುವ ಪ್ರಕ್ರಿಯೆಗೆ ಕವಿ ತನ್ನನ್ನು ತಾನು ಅಪಾರ ಶ್ರದ್ಧೆಯಿಂದ ತೊಡಗಿಸಿಕೊಂಡಿದ್ದಾರೆ.

ಕಾಲಚಕ್ರ ಉರುಳುವುದುಂಟು
ನಿನಗು ಒಬ್ಬ ಮಗನುಂಟು
ಆಗ ನೀನು‌ ಅತ್ತೆ ಅವಳು ಸೊಸೆ
ರೊಟ್ಟಿ ಮಗುಚಿ ಹಾಕೋದೆ ಕೂಸೆ

ಹೀಗೆ ಎಲ್ಲವರ ಮನೆಯ ದೋಸೆ ತೂತು ಎಂಬುದನ್ನು ಸಾವಾಕಾಶವಾಗಿ, ಸಮಧಾನಿಯಾಗಿ ಹೇಳಿ ಪ್ರತಿಮನೆಯನ್ನು ಜೊತೆಗೆ ಮನವನ್ನು ಎಚ್ಚರದಿಂದಿರಿಸುವ ಕೆಲಸವಿಲ್ಲಿ ಆಗಿದೆ. ಈ ಎಚ್ಚರಿಸುವ ಗುಣ ಕವಿಯಾದವನಿಗೆ ಸದಾ ಇರಲೇಬೇಕು. ಸಂಬಂಧಗಳ ಕುರಿತ ಎಚ್ಚರ ಸ್ನೇಹವನ್ನು ಇಮ್ಮಡಿಗೊಳಿಸುತ್ತದೆ. ಈಗಿನ ಧಾವಂತದ ಬದುಕಿನ ಸದ್ಯದಲ್ಲಿ ಮನುಷ್ಯರ ನಡುವಿನ ಪ್ರೀತಿ ಎಂಬುದು ಬೂಟಾಟಿಕೆ ಮಾತ್ರವೆ ಆಗಿದೆ. ಎಲ್ಲಿ ಕೆಲಸ ಕಾರ್ಯ ಆಗಬೇಕೋ ಆಗ ಮಾತ್ರವೆ ಮಾತುಕತೆ ಎಂಬುದು ಸ್ಪಷ್ಟ.  ಈ ಕ್ಷಣಿಕ ಪ್ರೀತಿಯ ನಡತೆಯನ್ನು ಪ್ರಶ್ನಿಸುವ ಗುಣ ಇವರ ಕವಿತೆಗಳಲ್ಲಿದೆ. ಪ್ರಾಸಪದಗಳು ಇಲ್ಲಿನ ಕವಿತೆಗಳ ಗಮನೀಯ ಅಂಶವಾಗಿದೆ. ಇದು ಮಕ್ಕಳಿಗು ಕವಿತೆ ಓದುವ ಹಂಬಲವನ್ನು ಹುಟ್ಟು ಹಾಕಿ ಆಕರ್ಷಿಸುತ್ತದೆ. ಹೆಚ್ಚಿನ ಕವಿತೆಗಳು ವಾಸ್ತವಕ್ಕೆ ಹತ್ತಿರವಾಗಿದೆ.

ಕಾದ ಕಬ್ಬಿಣದ ಮೇಲೆ
ಅವನ ಪ್ರತಿ ಸುತ್ತಿಗೆ ಏಟಿಗೆ
ಕುಗ್ಗಿ ಕುಣಿದು ಕಬ್ಬಿಣ ಹದವರಿತು
ಸಿದ್ಧಗೊಳ್ಳುವುದು ಕಸುಬಿಗೆ ಹತಾರ.

ತಾನು ಕಂಡರಿಯದ ನೋವನ್ನು ಹೊಟ್ಟೆ ನೋವು ಕವಿತೆಯಲ್ಲಿ ಬಿಡಿಸಿಟ್ಟ ಪರಿ ನಮ್ಮನ್ನು ಭಾವುಕರನ್ನಾಗಿಸುತ್ತದೆ. ನಮ್ಮದಲ್ಲದ ಗೀತೆಯನ್ನು ಪ್ರತಿಮೆಯಾಗಿಸಿ ಕವಿತೆಯಾಗಿಸುವುದು ಖಂಡಿತ ಸುಲಭದ ಮಾತಲ್ಲ .ತನ್ನದಲ್ಲದ ಅನುಭವವನ್ನು ಕವಿತೆಯಲ್ಲಿ ಹೇಳಿದಾಗ ಅದು ಹೇಳಿಕೆಯಾಗಿಬಿಡುವ ಸಾಧ್ಯತೆಯೆ ಹೆಚ್ಚು. ಆದರೆ ಇಲ್ಲಿನ ಕವಿತೆ ಬರಿಯ ಹೇಳಿಕೆಯಾಗಿ ಉಳಿದಿಲ್ಲ ಬದಲಿಗೆ ತಾನೆ ನೋವುಂಡು ಬರೆದಂತೆ ಅನಿಸುವುದೆ ಕವಿತೆಯ ಸಾರ್ಥಕತೆ. “ಓ ಶಿವನೆ ನಿನ್ನ ಮಡದಿ ಪಾರ್ವತಿಗು ಪ್ರತಿ ತಿಂಗಳು ಇದೆ ಗೋಳು ತಾನೆ ? “ಎಂಬುದಾಗಿ ಹೆಣ್ಣಿನ ಸಾರ್ವಕಾಲಿಕ ನೋವನ್ನು ಎಲ್ಲರಿಗು ಮನಗಾಣಿಸುತ್ತಾರೆ. ಇದು ಬರಿಯ ನೋವಲ್ಲ ಸೃಷ್ಠಿಯ ಸಂಕೇತ ಎಂಬುದು ಪ್ರತಿ ವ್ಯಕ್ತಿಯು ಅರಿತಿರಬೇಕು ಎಂಬ ಸಂಕಲ್ಪ ಕವಿತೆಯಲ್ಲಿದೆ.

ತುಂಬಾ ಸರಳವಾಗಿ , ನೇರವಾಗಿ ,ಅಚ್ಚುಕಟ್ಟಾಗಿ ನೇಯ್ದ ಇಲ್ಲಿನ ಕವಿತೆಗಳು ಅರ್ಥಗರ್ಭಿತವಾಗಿವೆ. ಮನುಷ್ಯ ಪ್ರಕೃತಿಯ ಅವಿಭಾಜ್ಯ ಅಂಗ ಎಂಬುದನ್ನು ಹೆಚ್ಚಿನ ಕವಿತೆಗಳಲ್ಲಿ ಚಿತ್ರಿಸಿದ್ದಾರೆ. ಪ್ರಸ್ತುತ ದಿನಮಾನಸದಲ್ಲಿ ಪ್ರಕೃತಿಯ ಚಿಂತೆಯೆ ಮಾನವನಿಗಿಲ್ಲದೆ ಏನೇನೋ ಅನಾಹುತಗಳನ್ನು ನಮಗೆ ನಾವೆ ಬರಮಾಡಿಕೊಂಡಿದ್ದೇವೆ. ಇದೆಲ್ಲ ತಪ್ಪು ಎಂಬುದರ ಸ್ಥೂಲ ನೋಟಗಳು ಕವಿತೆಯಲ್ಲಿವೆ . ಕವಿ ಮಾತ್ರ ಪ್ರಕೃತಿಯನ್ನುಳಿಸಲು ಹೋರಾಟ ಮಾಡಿದರೆ ಸಾಕಾಗುತ್ತದೆಯೇ?  ನಮಗೆಲ್ಲಾ ಅದರ ಅರಿವನ್ನು ಸಹಜವಾಗಿ ತಿಳಿಹೇಳುವ ಸಾಲುಗಳು ಅಭೂತಪೂರ್ವವಾಗಿದೆ. ಸಂಬಂಧಗಳು ಹದವರಿತು ಉಳಿಯಬೇಕು ಎಂಬ ಆಶಯವಿದೆ. ಲೋಕದ ಒಳಿತನ್ನೆ ಬಯಸುವ ಕವಿಯ ಸಾಲುಗಳು ಅಜರಾಮರವಾಗಲಿ.

-ಸಂಗೀತ ರವಿರಾಜ್ , ಮಡಿಕೇರಿ

5 Responses

  1. ಪುಸ್ತಕ ಪರಿಚಯ ಮಾಡಿಕೊಟ್ಟಿರುವ ರೀತಿ ಚೆನ್ನಾಗಿ ದೆ.ಧನ್ಯವಾದಗಳು ಸರ್

  2. ನಯನ ಬಜಕೂಡ್ಲು says:

    Nice

  3. Padma Anand says:

    ಕವಿತೆಗಳೊಳಗಿನ ಹೂರಣ ಹೆಕ್ಕಿ ತೆಗೆದು ನಮಗೆ ನೀಡಿರುವ ಪರಿ ಭಾವಪೂರ್ಣವಾಗಿದೆ. ಅಭಿನಂದನೆಗಳು.

  4. Mittur Nanajappa Ramprasad says:

    ಕವಿಗಳ ಕಲ್ಪನೆಯಲ್ಲಿ ಕಲ್ಪಿಸುವುದು ಕವಿತೆಗಳು/

    ಕವಿಗಳ ಕಲ್ಪನೆಯಲ್ಲಿ ಕಲ್ಪಿಸುವುದು ಕವಿತೆಗಳು/
    ಬಾಳಿನ ಭವ್ಯತೆಯಲ್ಲಿ ಬೆಳಗುವುದು ಭಾವಗಳು/
    ವಾಸ್ತವಿಕತೆಯಲ್ಲಿ ವ್ಯಕ್ತವಾಗುವುದು ವಿವರಗಳು/
    ಕಬ್ಬಿಗನ ಕಾಲ್ಪನಿಕೆಯಲ್ಲಿ ಕಾಣುವುದು ಕೃತಿಗಳು/

    ಗಮನಿಸುವನು ಕವಿಯು ಪರಿಸರದ ನಿಗೂಢತೆಯ/
    ಯಥಾರ್ಥದಲ್ಲಿ ಅಂತರಾರ್ಥದಲ್ಲಿ ವಿಭಾವನೆಯಲ್ಲಿ/
    ಚತುರತೆಯಲ್ಲಿ ಚಿಂತಿಸುವನು ಬೆರೆಸಿ ಭಾವುಕತೆಯ/
    ವಿಭಜಿಸುವನು ಪರಿಶೀಲಿಸಿ ವೈವಿಧ್ಯ ವಿವೇಚನೆಯಲ್ಲಿ/

    ಪ್ರಕೃತಿಯ ಪ್ರದರ್ಶಿಸುವನು ಪದಗುಚ್ಛಗಳ ಪರಿಪಕ್ವತೆಯಲ್ಲಿ/ /
    ಸಂಬಂಧಗಳ ಸಹಚರ್ಯವ ಸಂವೇದಿಸುವನು ಸೌಮ್ಯದಲ್ಲಿ/
    ಜೀವನದ ನವರಸಗಳ ಕಾರಂಜಿಸುವನು ಕಾವ್ಯಕವಿತೆಗಳಲ್ಲಿ/
    ಬದುಕಿನ ದರ್ಪಣವಾಗುವನು ಕವಿಯು ಮಹೋನ್ನತಿಯಲ್ಲಿ

    ಕಗ್ಗೆರೆ ಪ್ರಕಾಶ್ ಕವಿವರ್ಯರ ಬೂರಮೇ ವಿಲಾಸದ ವಿಮರ್ಶೆನೆಯಲ್ಲಿ /
    ಪರಮಾತ್ಮನ ಆಶೀರ್ವಾದ ತುಂಬಿರುವುದು ಕವಿಯ ಅಂತರಾತ್ಮದಲ್ಲಿ/
    ಕವಿಯ ಜನ್ಮಜಾತ ನೈಪುಣ್ಯತೆಯು ಅರಿವಾಗುವುದು ಅನನ್ಯತೆಯಲ್ಲಿ /
    ಭಗವಂತನ ಕೃಪಾಕಟಾಕ್ಷ ಅವರಿಸುರುವುದು ಕವಿಯ ದೈವಾತ್ಮದಲ್ಲಿ/

  5. . ಶಂಕರಿ ಶರ್ಮ says:

    ಸೊಗಸಾದ ಪುಸ್ತಕ ವಿಮರ್ಶೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: