ಕಾದಂಬರಿ: ನೆರಳು…ಕಿರಣ 6
–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..
ಹುಡುಗಿಯನ್ನು ನೋಡಿ ಹೊರಟ ಜೋಯಿಸರು ಮತ್ತವರ ಕುಟುಂಬ ನಂಜುಂಡನ ಕಾರಿನಲ್ಲಿ ಕುಳಿತರು. ಕಾರು ಹೊರಡುತ್ತಿದ್ದಂತೆ ಜೋಯಿಸರ ದೊಡ್ಡಪ್ಪನ ಕಾಮೆಂಟರಿ ಪ್ರಾರಂಭವಾಯಿತು. ”ವೆಂಕು, ಸೀತು..ಹುಡುಗಿಯೇನೋ ಸುಂದರವಾಗಿದ್ದಾಳೆ. ಎಸ್.ಎಸ್.ಎಲ್.ಸಿ., ಪರೀಕ್ಷೆ ಬರೆದಿದ್ದಾಳೆ. ಪಾಸೂ ಆಗಬಹುದು. ಇನ್ನು ಕೆಲಸಬೊಗಸೆ ಎಲ್ಲಾದರಲ್ಲೂ ಚುರುಕಿರಬಹುದು. ಆದರೆ ಅವರ ಮನೆಯಲ್ಲಿ ನಾಲ್ಕು ಜನ ಬರೀ ಹೆಣ್ಣುಮಕ್ಕಳೇ. ಏನು ಕೊಟ್ಟಬಿಟ್ಟು ಮಾಡ್ತಾರೆ? ನಾನು ಹೇಳಿದ ಆ ಹುಡುಗಿ, ಅದೇ ತಿಪ್ಪಾಭಟ್ಟರ ಮಗಳು ಗೌರಿ, ಬಣ್ಣ ಸ್ವಲ್ಪ ಕಮ್ಮಿ. ಲಕ್ಷಣವಾಗಿದ್ದಾಳೆ. ಅನುಕೂಲವಂತರ ಮನೆ. ಕೇಶವಯ್ಯ ಹೇಳಿದಂತೆ ಈ ಪೌರೋಹಿತ್ಯ, ಜ್ಯೋತಿಷ್ಯ ಎಷ್ಟು ಕಾಲ ನಿಲ್ಲುತ್ತೆ. ಆ ಮನೆಯಲ್ಲಿ ಹುಡುಗಿಯನ್ನ ಮಾಡಿಕೊಂಡರೆ ಏನಾದರೂ ವ್ಯವಹಾರಕ್ಕೆ ಹಚ್ಚಿಸಿಕೋಬಹುದು. ಅವರುಗಳದ್ದೇ ನೂರಾಎಂಟು ಕಾರುಬಾರುಗಳಿವೆ. ಯೋಚಿಸಿ” ಎಂದರು.
”ದೊಡ್ಡಪ್ಪಾ, ನಾನು ಅವತ್ತೇ ಹೇಳಿದ್ನಲ್ಲಾ, ನಾನು ನನ್ನ ಮಗನನ್ನು ಮಾರಾಟಕ್ಕಿಟ್ಟಿಲ್ಲಾಂತ. ಅಲ್ಲಾ ನಿಮ್ಮ ಮನೆಯಲ್ಲಿದ್ದ ಹೆಣ್ಣುಮಕ್ಕಳಿಗೆ ಏನೇನು ಹೊರಿಸಿ ಕಳುಹಿಸಿದ್ದೀರಿ? ಅವರುಗಳನ್ನು ತಂದುಕೊಂಡವರೂ ಹೀಗೇ ಯೋಚಿಸಿದ್ದರೆ ನಿಮ್ಮ ಮಕ್ಕಳ ಮದುವೆಯಾಗುತ್ತಿತ್ತೇ? ಈಗೇನು ಮೊಮ್ದಕ್ಕಳು ಇದ್ದಾರಲ್ಲಾ, ಎಷ್ಟು ಇಟ್ಟಿದ್ದೀರಿ? ಇನ್ನು ಈ ವಿಚಾರವಾಗಿ ಮಾತನಾಡಲು ನನಗಿಷ್ಟವಿಲ್ಲ. ಮನೆ ಬಂತು. ನಾವು ಇಳೀತೀವಿ. ನಂಜುಂಡ ನಿಮ್ಮನ್ನು ಮನೆಗೆ ತಲುಪಿಸುತ್ತಾನೆ” ಎಂದು ಹೇಳಿ ನಂಜುಂಡನಿಗೆ ಕಾರು ನಿಲ್ಲಿಸಲು ಹೇಳಿ ಎಲ್ಲರಿಗಿಂತ ಮುಂದಾಗಿ ತಾವೇ ಕೆಳಗಿಳಿದು ಹೆಂಡತಿ, ಮಗನನ್ನು ಇಳಿಯಲು ಹೇಳಿ ಮನೆಯತ್ತ ಹೆಜ್ಜೆ ಹಾಕಿದರು ಜೋಯಿಸರು.
”ಹುಂ..ಬದುಕೋ ದಾರಿ ತೋರಿಸ್ತೀನಿ ಅಂದರೆ ನನಗೇ ತಿರುಮಂತ್ರ ಹೇಳ್ತಾನೆ. ಕೊಬ್ಬು, ನಡಿಯಪ್ಪಾ” ಎಂದು ಬಿಮ್ಮನೆ ಕೂತರು ಶೇಷಪ್ಪ. ಕಾರು ಹೊರಡುವವರೆಗೂ ಅಲ್ಲೇ ನಿಂತಿದ್ದ ಅಮ್ಮ ಮಗ ಮನೆಯ ಕಡೆಗೆ ಹೆಜ್ಜೆ ಹಾಕಿದರು. ”ಅಲ್ಲಮ್ಮಾ ಈ ದೊಡ್ಡಪ್ಪಾಂತ ಅಪ್ಪ ಏಕೆ ಅವರನ್ನು ಹಿಂದಿಟ್ಟುಕೊಂಡು ಬರುತ್ತಾರೆ. ಪಿರಿಪಿರಿ ಮನುಷ್ಯ” ಎಂದ ಶ್ರೀನಿವಾಸ.
”ಶ್ರೀನಿ, ಗೊತ್ತಿದ್ದೂ ಕೇಳ್ತೀಯಲ್ಲಾ, ವಿಷಯ ತಿಳಿದುಕೊಂಡು ತಾವೇ ಮೇಲೆಬಿದ್ದು ಬರುತ್ತಾರೆ. ತಮ್ಮ ಮನೆಯ ಕಾವಲೀನೇ ತೂತಾದರೂ ಇನ್ನೊಬ್ಬರ ಮನೆಯ ದೋಸೆಯಲ್ಲಿ ತೂತು ಹುಡುಕುತ್ತಾರೆ. ಅವರ ಜಾಯಮಾನವೇ ಅಂತಹುದು. ಅವರೇನಾದರೂ ಮಾತನಾಡಲಿ ನಿಮ್ಮಪ್ಪ ಅದಕ್ಕೆಲ್ಲ ಸೊಪ್ಪು ಹಾಕುವಂತಹವರಲ್ಲ ಬಾ ”ಎಂದು ಗೇಟನ್ನು ತೆಗೆದು ಮನೆಯೊಳಕ್ಕೆ ಅಡಿಯಿಟ್ಟರು. ಅಲ್ಲೇ ಬಾಗಿಲಲ್ಲೇ ನಿಂತಿದ್ದ ನಾರಾಯಣಪ್ಪ, ”ಸೀತವ್ವಾ, ಶೀನು ಹೇಗಿದ್ದಾಳೆ ಹುಡುಗಿ?” ಎಂದು ಕೇಳಿದ್ದಕ್ಕೆ ಜೋಯಿಸರು ”ಸ್ವಲ್ಪ ಹೊತ್ತು ನನ್ನನ್ನು ನನ್ನಪಾಡಿಗೆ ಬಿಟ್ಟುಬಿಡು ನಾಣಿ” ಎಂದು ತಮ್ಮ ರೂಮಿಗೆ ಹೋಗಿಬಿಟ್ಟರು.
”ಏಕೆ ಅಲ್ಲೇನಾದರೂ ಅಹಿತಕರ ಘಟನೆ ನಡೆಯಿತಾ?” ಎಂದು ಗಾಭರಿಯಿಂದ ಕೇಳಿದರು ನಾರಣಪ್ಪ. ಆತಂಕ ತುಂಬಿದ ಅವರ ಮುಖ ನೋಡಿ ಸೀತಮ್ಮನಿಗೆ ಅಯ್ಯೋ ಎನ್ನಿಸಿತು. ಪಾಪ ಬಂಧುವಲ್ಲ, ಬಳಗವಲ್ಲ, ಯಾರೂ ಇಲ್ಲದ ಅನಾಥ ಹುಡುಗರನ್ನು ಮಾವನವರಿದ್ದಾಗ ಪುಜಾ ಕೆಲಸಗಳಿಗೆ ಸಹಾಯಕ್ಕೆಂದು ಯಾರೋ ತಂದುಬಿಟ್ಟಿದ್ದರಂತೆ. ಈಗ ಮಾವನವರೂ ಇಲ್ಲ. ಆಗ ಬಂದ ಹುಡುಗ ಈಗ ಮನೆಯಲ್ಲೇ ಒಬ್ಬರಾಗಿ ಸೇವೆ ಮಾಡಿಕೊಂಡಿದ್ದಾರೆ. ಇಂಥಾ ಕೆಲಸ ಬರಲ್ಲಾ ಎಂಬ ಮಾತೇ ಇಲ್ಲ. ಅತ್ತೆಯವರಿದ್ದಾಗಲೇ ಅವರಿಗೊಂದು ಮದುವೆಯನ್ನೂ ಮಾಡಿಸಿದ್ದರಂತೆ. ದುರಾದೃಷ್ಟಕ್ಕೆ ಅವರ ಹೆಂಡತಿ ಹೆರಿಗೆಯ ಸಮಯದಲ್ಲಿ ಕಷ್ಟವಾಗಿ ಮಗುವಿನ ಜೊತೆಯಲ್ಲಿಯೇ ದೈವಾಧೀನರಾಗಿಬಿಟ್ಟರಂತೆ. ಆ ನಂತರ ಇವರು ಯಾವ ಗೊಡವೆಯೂ ಬೇಡವೆಂದು ಸುಮ್ಮನಾಗಿಬಿಟ್ಟರಂತೆ. ಅತ್ತೆಯವರ ಬಾಯಿಂದ ಕೇಳಿದ ನೆನಪು. ಮನೆಯ ಒಂದು ರೂಮಿನಲ್ಲಿ ಇವರ ವಾಸ್ತವ್ಯ. ನನ್ನ ಮಗನಂತೂ ಇವರ ಮಡಿಲಲ್ಲೇ ಬೆಳೆದವನು. ಅವನ ಮೇಲೆ ಬಹಳ ಪ್ರೀತಿ ವಾತ್ಸಲ್ಯ. ಮನೆಯವರ ಮೇಲೂ ಅಷ್ಟೇ ಬಹಳ ವಿಶ್ವಾಸ. ಆ ದೊಡ್ಡಪ್ಪನ ಬದಲು ಇವರನ್ನೇ ಕರೆದುಕೊಂಡು ಹೋಗಿದ್ದರೆ ಚೆನ್ನಾಗಿತ್ತು. ಎಂದುಕೊಂಡರು. ಮನಸ್ಸಿನಲ್ಲಿ ಹಾಗೇ ”ಹಾ ! ನಾರಣಪ್ಪಾ ಅಂಥಾ ಗಾಭರಿಯಾಗುವಂಥದ್ದೇನಿಲ್ಲ. ಹುಡುಗಿ ಕೈತೊಳೆದು ಮುಟ್ಟಬೇಕು. ಹಾಗಿದ್ದಾಳೆ. ಅವಳ ಹೆತ್ತವರು ಸಂಭಾವಿತರಂತೆ ಕಾಣುತ್ತಾರೆ. ನಮಗೆಲ್ಲ ಒಪ್ಪಿಗೆಯೇ. ನಿಮ್ಮ ಯಜಮಾನರಿಗೆ ಅವರ ದೊಡ್ಡಪ್ಪನ ವರ್ತನೆಯಿಂದ ಸ್ವಲ್ಪ ಬೇಸರವಾಗಿರಬೇಕು. ಒಂದೈದು ನಿಮಿಷವಾದಮೇಲೆ ತಾವೇ ಎಲ್ಲವನ್ನೂ ಹೇಳುತ್ತಾರೆ. ಯೋಚಿಸಬೇಡಿ” ಎಂದು ಸಮಾಧಾನ ಹೇಳಿದರು. ಸೀತಮ್ಮ.
”ಅಬ್ಬಾ ! ಈಗ ನನಗೆ ನೆಮ್ಮದಿಯಾಯ್ತು. ಅದು ಸರಿ, ದೇವಸ್ಥಾನದ ಪೂಜೆಗೆ ಹೋಗೋಲ್ಲವೇ? ಸ್ನಾನಕ್ಕೆ ನೀರು ಕಾದಿದೆ. ಮನೆಯಲ್ಲಿ ಪೂಜೆಗೆ ಅಣಿ ಮಾಡಿದ್ದೇನೆ ಎಂದರು” ನಾರಾಯಣಪ್ಪ.
”ಸ್ವಲ್ಪ ತಡವಾಗಿ ಹೋಗುತ್ತಾರೆ. ಬಂದ ತಕ್ಷಣ ಸ್ನಾನ ಮಾಡುವುದು ಸರಿಯಲ್ಲವೆಂದು ಯೋಚಿಸಿ ತಡವಾಗುತ್ತದೆಂದು ದೇವಸ್ಥಾನದ ಇನ್ನೊಬ್ಬರು ಅರ್ಚಕರಿದ್ದಾರಲ್ಲ ಅವರಿಗೆ ಹೇಳಿ ಬಂದಿದ್ದಾರಂತೆ. ಹಾಲು ಕರೆದಾಯಿತೇ? ರಾತ್ರಿ ಅಡುಗೆಗೆ ತರಕಾರಿ ಏನು ತಂದಿದ್ದೀರಿ? ..ಶೀನಿ..ನಿನಗೆ ಇನ್ನೊಂದು ಡೋಸ್ ಕಾಫಿ ಬೇಕಾ? ಅಪ್ಪನ ಜೊತೆ ನೀನೂ ದೇವಸ್ಥಾನಕ್ಕೆ ಹೋಗ್ತೀಯಾ?” ಎಂದು ಕೇಳುತ್ತಾ ಬಟ್ಟೆ ಬದಲಾಯಿಸಲು ತಮ್ಮ ರೂಮಿಗೆ ಹೋದರು ಸೀತಮ್ಮ.
ಅಮ್ಮ, ನಾರಾಯಣಪ್ಪ ಅವರವರ ಪಾಡಿಗೆ ಹೋದಮೇಲೆ ಶ್ರೀನಿವಾಸ ತಾನೂ ಬಟ್ಟೆ ಬದಲಾಯಿಸಲು ತನ್ನ ರೂಮಿಗೆ ಹೋದ. ಅಲ್ಲಿ ಅವನು ಉಡುಪು ಬದಲಾಯಿಸುತ್ತಿದ್ದರೂ ಮನಸ್ಸು ನೋಡಿಬಂದಿದ್ದ ಹುಡುಗಿಯ ಹತ್ತಿರ ವಾಲಿತ್ತು. ಅಬ್ಬಾ ! ಎಂಥಹ ರೂಪರಾಶಿ, ಕೇಶುಮಾಮ ಹೇಳಿದ್ದಕ್ಕಿಂತ ಹೆಚ್ಚೇ ಅಂದವಾಗಿದ್ದಾಳೆ. ಬೇರೆ ಹುಡುಗಿಯರಂತೆ ತೀರಾ ಸಂಕೋಚ, ನಾಚಿಕೆ, ಅಂಜಿಕೆಗಳ್ಯಾವುದೂ ಅಷ್ಟಾಗಿ ಕಾಣಲಿಲ್ಲ. ನಮ್ಮಪ್ಪನ ದೊಡ್ಡಪ್ಪ ಅಧಿಕ ಪ್ರಾಸಂಗಿಕತನದ ಪ್ರಶ್ನೆಗಳನ್ನು ಕೇಳಿದಾಗಲೂ ಅಸಹನೆ ತೋರದೆ ಸಹಜವಾದ ಧ್ವನಿಯಲ್ಲೇ ಸಾದಾಸೀದಾ ಉತ್ತರಗಳನ್ನು ಹೇಳಿದಳಲ್ಲ. ಜಾತಕವೂ ಹೊಂದಿದೆ. ಆದರೆ ಅವರುಗಳ ಮನಸ್ಸಿನಲ್ಲಿ ಏನಿದೆಯೋ.. ನಾವುಗಳು ಕಟ್ಟಾ ಸಂಪ್ರದಾಯವಾದಿಗಳೆಂದು ಸುತ್ತಮುತ್ತೆಲ್ಲ ಬಿಂಬಿಸಿರುವುದು ದೊಡ್ಡತಲೆನೊವಾಗಿದೆ. ಪೂಜೆ ಪುನಸ್ಕಾರಗಳನ್ನು ಕಟ್ಟಿನಿಟ್ಟಾಗಿ ಆಚರಿಸುವುದೇ ಒಂದು ಪ್ರಮಾದವೇ? ಮಿಕ್ಕೆಲ್ಲ ವಿಚಾರಗಳಲ್ಲಿ ನಾವು ಇತರರಿಗಿಂತ ಹೆಚ್ಚಿನ ಸಂಭಾವಿತರೇ. ಅದೇಕೆ ಜನ ಅರ್ಥಮಾಡಿಕೊಂಡಿಲ್ಲ. ತಮಗೆ ತೋಚಿದಂತೆ ಪ್ರಚಾರ ..ಛೀ.. ಈ ಮಧ್ಯದಲ್ಲಿ ಈ ದೊಡ್ಡಜ್ಜನ ರಾಜಕೀಯ ಬೇರೆ. ಯಾರ್‍ಯಾರು ಎಷ್ಟು ಕಮೀಷನ್ ಕೊಡುತ್ತೇನೆಂದು ಹೇಳಿದ್ದಾರೋ ಅವರುಗಳ ಮನೆಯ ಮಕ್ಕಳನ್ನು ಹೊಗಳಿದ್ದೇ ಹೊಗಳಿದ್ದು. ಅವರ ಕಾಟ ತಡೆಯಲಾರದೆ ಅಪ್ಪ ಒಂದೆರಡು ಕಡೆ ಭೇಟಿಕೊಟ್ಟಿದ್ದರು. ನನಗಾಗಲೀ, ಅಪ್ಪ ಅಮ್ಮರಿಗಾಗಲೀ ಒಂದೂ ಹಿಡಿಸಿರಲಿಲ್ಲ. ಇವತ್ತಿನದ್ದು ಒಂದು ರೀತಿಯಲ್ಲಿ ಎಲ್ಲರ ಮನಸ್ಸಿಗೆ ಹಿಡಿಸುವಂತಿದೆ. ಕಷ್ಟಸುಖ ಅರಿತವರು, ವಿದ್ಯೆಯೂ ಇದೆ. ಹಾ..ಕೇಶುಮಾಮ ಹೇಳಿದ್ದರು ಆಹುಡುಗಿ ತುಂಬ ಚೆನ್ನಾಗಿ ಓದುತ್ತಾಳೆ. ಅವಳಿಗೆ ಮುಂದೆ ಓದಬೇಕೆಂಬ ಆಸೆಯಿದೆ. ಆದರೆ ಅವಳ ಹೆತ್ತವರಿಗೆ ಜವಾಬ್ದಾರಿಯಕಡೆ ಮನಸ್ಸು. ಹಾಗೆಂದು ಹುಡುಗಿಯು ಹಠ ಹಿಡುಯುವಂಥವಳಲ್ಲ ಎಂದೂ ಸೇರಿಸಿದ್ದರು. ಒಪ್ಪಿದರೆ ಮುಂದೆ ಓದಿಸುವುದು. ಊಹುಂ ಅದೆಲ್ಲಾ ಆಗದ ಮಾತು, ಮನೆಯಲ್ಲೇ ಕುಳಿತು ಕಲಿಯುವಂತಹದ್ದೇನಾದರೂ ಆಸಕ್ತಿಯಿದ್ದರೆ ಕಲಿಯಲಿ. ಅದಕ್ಕೆ ಅನುಕೂಲ ಮಾಡಿಕೊಡಬಹುದು. ಅದೂ ಅಪ್ಪ, ಅಮ್ಮ ಒಪ್ಪಿದರೆ ಮಾತ್ರ. ನೋಡೋಣ ಏನು ತೀರ್ಮಾನಿಸುತ್ತಾರೋ, ನಾನು ಕನಸು ಕಟ್ಟಿಕೊಂಡರೆ ಸಾಕೇ ಎಂದು ಯೋಚನಾಲಹರಿಯಲ್ಲಿ ಮುಳುಗಿದ್ದಂತೆ ಅಪ್ಪನ ಕೂಗು ಕೇಳಿಸಿತು. ಆಲೋಚನೆ ತುಂಡಾಯ್ತು. ಕೆಳಗಿನಿಂದ ಅಪ್ಪ ”ನಾಣೀ, ಶ್ರೀನಿ, ಸೀತೂ ಎಲ್ಲರೂ ಎಲ್ಲಿದ್ದೀರಿ. ಇಲ್ಲಿ ಬನ್ನಿ” ಕೂಗುತ್ತಿದ್ದಂತೆಯೇ ಮಹಡಿಯಿಂದ ತಡಬಡಾಯಿಸಿಕೊಂಡು ಕೆಳಗಿಳಿದು ಬಂದ ಶ್ರಿನಿವಾಸ. ಒಳಗಿನಿಂದ ನಾರಾಯಣಪ್ಪ, ಸೀತಮ್ಮನೂ ಬಂದರು.
ಹಾಲಿನಲ್ಲಿದ್ದ ಜೋಕಾಲಿಯ ಮೇಲೆ ಕುಳಿತಿದ್ದ ಜೋಯಿಸರು ಅದರಿಂದ ಕೆಳಗಿಳಿದು ಅಲ್ಲಿಯೇ ಹಾಸಿದ್ದ ಚಾಪೆಯ ಮೇಲೆ ಕುಳಿತರು. ”ಹಾ ಸೀತು, ಶ್ರೀನಿ ನಿಮ್ಮಿಬ್ಬರಿಗೂ ಹೇಗನ್ನಿಸಿತು? ಹುಡುಗಿ ಒಪ್ಪಿಗೆಯಾಯಿತು ಎಂದರೆ ಕೇಶವಯ್ಯನ ಹತ್ತಿರ ಹೇಳಿ ಆ ದಂಪತಿಗಳನ್ನು ನಮ್ಮ ಮನೆಗೆ ಆಹ್ವಾನಿಸೋಣ. ಅವರೂ ಬರಲಿ ಅವರಿಗೆ ಒಪ್ಪಿತವಾದರೆ ಮಾತುಕತೆ ಮುಗಿಸಿ ಬರುವ ಲಗ್ನದಲ್ಲಿ ಮದುವೆ ಮಾಡಿಯೇ ಬಿಡೋಣ ಏನನ್ನುತ್ತೀರಾ?” ಎಂದು ಕೇಳಿದರು.
”ಅದು ಸರಿ ಯಜಮಾನರೇ, ಹೆಂಡತಿ ಮಗನ ಸಮ್ಮತಿ ಕೇಳಿದಿರಿ, ನಿಮಗೆ ಒಪ್ಪಿಗೆಯೇ?” ಎಂದ ನಾರಣಪ್ಪ.
”ಏ ನನ್ನ ಒಪ್ಪಿಗೆ ಅಲ್ಲೇ ಸೀತೂಗೆ ಗೊತ್ತಾಗಿದೆ ಅಲ್ಲವಾ? ಆ ನನ್ನ ನೆಗ್ಗಿಲುಮುಳ್ಳು ಜೊತೆಯಲ್ಲಿ ಇಲ್ಲದಿದ್ದರೆ, ಛೇ..ಬೆನ್ನುಹತ್ತಿದ ಬೇತಾಳದಂತೆ ಏಕೆ ನನ್ನ ಕಾಡಿಸುತ್ತಾರೋ ಗೊತ್ತಾಗುತ್ತಿಲ್ಲ. ಮನಸ್ಸೆಲ್ಲಾ ಕೆಟ್ಟುಹೋಯೊತು. ನಾಣಿ ನೀನೇ ಬಂದಿದ್ದರೆ ಚೆನ್ನಾಗಿತ್ತು ಕಣೋ” ಎಂದರು ಜೋಯಿಸರು.
”ಒಳ್ಳೆಯ ಮಾತು ಹೇಳಿದಿರಿ, ನಾನು ಅಂಥ ಕಡೆಗೆಲ್ಲಾ… ನೀವೇನೋ ಈ ಮನೆಯಲ್ಲಿ ನನ್ನ ಒಬ್ಬಾಂತ ತಿಳಿದುಕೊಂಡು ಹಾಗೇ ನಡೆದುಕೊಳ್ಳುತ್ತಿದ್ದೀರ. ಆದರೆ ಬೇರೆಯವರು..ದೊಡ್ಡಪ್ಪ ಅವರನ್ನು ಬಿಟ್ಟು ನನ್ನನ್ನು…ಹ..ಹ..ಈಗೇನು ಎಲ್ಲರಿಗೂ ಒಪ್ಪಿಗೆ ಆದಹಾಗೆ ಆಯ್ತು. ಮುಂದೇನು ಮಾಡಬೇಕೋ ಯೋಚಿಸಿ. ಕಾಫಿ ಏನಾದ್ರೂ ಬೇಕೆ? ..ಶೀನು ನಿನಗೆ? ”ಎಂದು ಕೇಳಿದರು ನಾರಣಪ್ಪ.
”ನನಗೇನೂ ಬೇಡ, ಸ್ನಾನ ಮುಗಿಸಿ ಪೂಜೆಮಾಡಿ ದೇವಸ್ಥಾನಕ್ಕೆ ಹೊರಟೆ” ಎಂದು ಹೇಳುತ್ತಾ ಕಾರ್ಯೋನ್ಮುಖರಾಗಲು ಕುಳಿತಲ್ಲಿಂದ ಎದ್ದರು ಜೋಯಿಸರು. ”ನಾನೂ ಬರಬೇಕೇನಪ್ಪಾ?” ಎಂದು ಕೇಳಿದ ಶ್ರೀನಿವಾಸ.
”ಬೇಡ ಶೀನು, ನಾನು ಹೋಗುವಷ್ಟರಲ್ಲೇ ಪೂಜೆ ಪ್ರಾರಂಭವಾಗಿಬಿಟ್ಟಿರುತ್ತೋ ಮುಗಿದಿರುತ್ತೋ ಗೊತ್ತಿಲ್ಲ. ಆ ಭಟ್ಟರ ಪೂಜೆಯನ್ನು ನೋಡಿದ್ದೀಯಲ್ಲ. ಹೋಗಿ ಮಿಕ್ಕದ್ದನ್ನೆಲ್ಲ ನೋಡಿ, ಬೆಳಗ್ಗೆಗೆ ತಯಾರು ಮಾಡಿ ಬರುತ್ತೇನೆ”ಎಂದರು.
ಹೆಂಡತಿ ಮಕ್ಕಳ ಸಮೇತ ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದ ಶಂಭುಭಟ್ಟರಿಗೆ ತಮ್ಮ ಮನೆಯ ತಿರುವಿನಲ್ಲಿ ಬರುವಷ್ಟರಲ್ಲಿ ತಮ್ಮ ಅಂಗಡಿಯ ಮುಂದೆ ಯಾರೋ ಕುಳಿತಿರುವುದು ಕಾಣಿಸಿತು. ”ಲಕ್ಷ್ಮೀ ಯಾರೋ ಬಂದಹಾಗಿದೆ” ಎಂದರು. ದೂರದಿಂದಲೇ ದಿಟ್ಟಿಸಿ ನೋಡಿದ ಲಕ್ಷ್ಮಿ ”ರೀ, ಗಾಳಿಮಾತಿನ ರಾಮಣ್ಣ ಯಾರನ್ನೋ ಕರೆದುಕೊಂಡು ಬಂದಿರುವ ಹಾಗಿದೆ. ಅವನೇನಾದರೂ ಕೇಳಿದರೆ ಕೇಶವಯ್ಯನವರ ಮನೆಯಲ್ಲಿ ಪೂಜೆಯಿತ್ತು, ಕರೆದಿದ್ದರು, ಹೋಗಿದ್ದೆವು ಎಂದು ಹೇಳಿ. ಇನ್ನೇನೂ ಹೇಳಬೇಡಿ. ಇದಿನ್ನೂ ಹಣ್ಣೋ, ಕಾಯೋ ಗೊತ್ತಿಲ್ಲ. ಈ ಮಹಾರಾಯನ ಕಣ್ಣಿಗೆ, ಕಿವಿಗೆ ಯಾವ ವಿಷಯವಾಗಲೀ ತಿಳಿದರೆ ಅದಕ್ಕೆ ರೆಕ್ಕೆಪುಕ್ಕ ಎಲ್ಲ ಶುರುವಾಗುತ್ತೆ. ಸುತ್ತಮುತ್ತೆಲ್ಲ ಹಾರಾಡಿ ನಮ್ಮ ಕಿವಿಗೆ ಬೀಳುವಷ್ಟರಲ್ಲಿ ನಮಗೇ ಆಶ್ಚರ್ಯವಾಗಬೇಕು ಹಾಗೆ ಬದಲಾಗಿರುತ್ತೆ” ಎಂದಳು.
ಹೆಂಡತಿಯ ಮಾತನ್ನು ಕೇಳಿಸಿಕೊಂಡ ಭಟ್ಟರು ”ಹೂ ಅದಕ್ಕೇ ಜನರೆಲ್ಲ ಇವನನ್ನು ಗಾಳಿಮಾತಿನ ರಾಮಣ್ಣ, ಬೂಸಿ ರಾಮಣ್ಣಾಂತ ಕರಿತಾರೆ. ನನಗೂ ಗೊತ್ತಿದೆ. ನೀನೂ ಮಕ್ಕಳೂ ಬೇಗ ತೆಗೆದು ಮೌನವಾಗಿ ಮನೆಯೊಳಕ್ಕೆ ಹೋಗಿ ಅಂಗಡಿಯ ಬೀಗದ ಕೈ ಕಳುಹಿಸು” ಎಂದು ಹೇಳಿ ದಾಪುಗಾಲಾಕುತ್ತಾ ಎಲ್ಲರಿಗಿಂತ ಮುಂಚೆ ಮನೆ ತಲುಪಿದರು.
”ಓ ಭಟ್ಟರು ಸಂಸಾರ ಸಮೇತ ಎಲ್ಲೋ ಹೋಗಿದ್ದ ಹಾಗಿದೆ. ಏನಾದರೂ ಸಮಾರಂಭವಿತ್ತೇ? ಎಲ್ಲಿತ್ತು? ಅಲ್ಲ ಮಾತಿಗೆ ಕೇಳಿದೆ” ಎಂದ ರಾಮಣ್ಣ.
”ಹೂ ಕೇಶವಯ್ಯನವರ ಮನೆಹತ್ತಿರ ಹೋಗಿದ್ದೆವು” ಎಂದರು ಭಟ್ಟರು.
”ಹೂ..ಕೇಶವಯ್ಯನವರ ಮನೆಯಲ್ಲಿ ಅದೂ ಇದೂ ನಡೆಯುತ್ತಲೇ ಇರುತ್ತದೆ. ಯಾರನ್ನು ಕರೆಯದಿದ್ದರೂ ನಿಮಗಂತೂ ಆಹ್ವಾನವಿದ್ದೇ ಇರುತ್ತೆ. ಅಲ್ವಾ ಭಟ್ಟರೇ? ನಾನು ಹೇಳಿದ್ದರಲ್ಲಿ ತಪ್ಪಿದೆಯ?”
”ರಾಮಣ್ಣನವರೇ ಅವರ ಕುಟುಂಬದ ಒಡನಾಟ ಇಂದು ನೆನ್ನೆಯದಲ್ಲ. ಅದು ನಿಮಗೂ ಗೊತ್ತಿರುವ ವಿಷಯಾನೇ. ಅದು ಈಗಲೂ ಹಾಗೇ ಮುಂದುವರೆದಿದೆ. ಏಕೆ ನಿಮಗೇನಾದರೂ ಅದರಿಂದ ತೊಂದರೆಯೇ ಅಥವಾ ನಿಮ್ಮ ತಲೆಯಲ್ಲಿ ಬೇರೆ ಏನಾದರೂ ಆಲೋಚನೆ ಇದೆಯೇ?” ಎಂದು ಖಡಕ್ಕಾಗಿ ಕೇಳಿದರು ಭಟ್ಟರು.
ಅವರ ನೇರ ಮಾತು ರಾಮಣ್ಣನವರ ಬಾಯಿ ಕಟ್ಟಿಹಾಕಿತು. ಮತ್ತೇನಾದರೂ ಮಾತು ಮುಂದುವರಿಸಿದರೆ ಅಖಾಡಕ್ಕಿಳಿಸುವುದು ಖಂಡಿತ. ಜೊತೆಗೆ ಬಂದವರ ಮುಂದೆ ತಮ್ಮ ಮಾನ ಮುಕ್ಕಾಗಬಾರದೆಂದು ”ನೀವು ಹೇಳುವುದೂ ಸರಿ ಭಟ್ಟರೇ. ಆ ವಿಷಯ ಬಿಡಿ, ಇವರು ನಮ್ಮ ಪಕ್ಕದ ಬೀದಿಯಲ್ಲಿರುವ ಮನೆಯನ್ನು ಖರೀದಿ ಮಾಡಿದ್ದಾರೆ. ಅಲ್ಪಸ್ವಲ್ಪ ರಿಪೇರಿ ಇತ್ತು. ಅವೆಲ್ಲವನ್ನೂ ಮುಗಿಸಿ ಸುಣ್ಣಬಣ್ಣ ಮಾಡಿಸಿ ಸಿದ್ಧಗೊಳಿಸಿದ್ದಾರೆ. ಮುಂದಿನವಾರ ಸತ್ಯನಾರಾಯಣಪೂಜೆ ಇಟ್ಟುಕೊಂಡಿದ್ದಾರೆ. ಅವರಿಗೆ ಪಾತ್ರೆಪಡಗದಿಂದ ಹಿಡಿದು ನಿಮ್ಮ ಅಂಗಡಿಯಲ್ಲಿರುವ ಬಹುತೇಕ ಸಾಮಾನುಗಳು ಬಾಡಿಗೆಗೆ ಬೇಕಾಗಿವೆ. ಊರಿಗೆ ಹೊಸಬರು, ಪರದಾಡುತ್ತಿದ್ದರು. ವಿಷಯ ತಿಳಿದ ನಾನು ನಿಮ್ಮ ಹತ್ತಿರ ಸಿಗುತ್ತದೆಂದು ಕರೆತಂದೆ” ಎಂದರು.
”ಹಾಗಾದರೆ ಅಂಗಡಿಯೊಳಕ್ಕೆ ಹೋಗೋಣ, ಬನ್ನಿ ನಿಮಗೇನು ಬೇಕು, ಎಷ್ಟು ಬೇಕು, ಎಷ್ಟು ಹೊತ್ತಿಗೆ ಎಲ್ಲಿಗೆ ತಂದು ಸಿದ್ಧಪಡಿಸಬೇಕೆಂದು ಹೇಳಿ. ವಿಳಾಸ ಕೊಟ್ಟು ಅಡ್ವಾನ್ಸ್ ಕೊಟ್ಟು ಹೋದರೆ ನಾನೆಲ್ಲ ವ್ಯವಸ್ಥೆ ಮಾಡುತ್ತೇನೆ” ಎಂದು ಮಗಳು ತಂದುಕೊಟ್ಟ ಅಂಗಡಿಯ ಬೀಗದಕೈಯಿಂದ ಬೇಗ ತೆಗೆದು ಅವರುಗಳನ್ನು ಒಳಕ್ಕೆ ಆಹ್ವಾನಿಸಿದರು ಭಟ್ಟರು. ತನ್ನ ಗಂಡ ಆ ಗಾಳಿಮಾತಿನ ರಾಮಣ್ಣಂಗೆ ಕೊಟ್ಟ ಉತ್ತರ ಲಕ್ಷ್ಮಿಗೆ ಸಂತಸ ತಂದಿತ್ತು. ಮಗಳ ಕೈಯಲ್ಲಿ ಕೀಲಿಕೈ ಕಳುಹಿಸಿ ತಾನಲ್ಲೇ ನಿಂತಿದ್ದಳು. ಅವರಿಬ್ಬರ ಮಾತುಕತೆ ಎಲ್ಲವೂ ಕೇಳಿಸಿತ್ತು ಪರವಾಗಿಲ್ಲ, ನನ್ನ ಗಂಡ ಸಾಕಷ್ಟು ವ್ಯವಹಾರದಲ್ಲಿ ಸುಧಾರಿಸಿದ್ದಾರೆನ್ನಿಸಿತು. ತೃಪ್ತಿಯಿಂದ ಒಳಕೋಣೆಗೆ ಹೋಗಿ ಬಟ್ಟೆ ಬದಲಾಯಿಸಿ, ಕೈಕಾಲುಮುಖ ತೊಳೆದು ಗಡಿಯಾರದ ಕಡೆ ದೃಷ್ಟಿ ಹರಿಸಿದಳು.
ಆಗಲೇ ಆರು ಗಂಟೆಯ ಮೇಲಾಗಿತ್ತು. ಸಂಜೆ ದೇವರದೀಪ ಹಚ್ಚಬೇಕು, ಎಂದುಕೊಂಡು ದೇವರ ಮನೆ ಹೊಕ್ಕಳು. ಅಲ್ಲಿ ಕಂಡಿದ್ದೇನು ! ದೀಪವನ್ನು ಆಗಲೇ ಹಚ್ಚಿದೆ. ಊದುಬತ್ತಿಯ ಸುವಾಸನೆ ಸುತ್ತಲೂ ಹರಡಿದೆ. ಭಟ್ಟರ ರಾತ್ರಿ ಪೂಜೆಗೆ ಎಲ್ಲವೂ ಅಣಿಯಾಗಿದೆ. ಓಹೋ..ಇದು ಭಾಗ್ಯಳ ಕೆಲಸ, ಮನ ತುಂಬಿ ಬಂತು. ಆಕೆಗೆ ಈಗಲೇ ಮದುವೆ ಇಷ್ಟವಿಲ್ಲವೆಂಬ ಸಂಗತಿ ತಿಳಿಯದ್ದೇನಲ್ಲ. ಆದರೆ ನಿಸ್ಸಹಾಯಕತೆ ಅವಳನ್ನು ಕಟ್ಟಿಹಾಕಿತ್ತು. ಅವಳು ಹೋಗಿಸೇರುವ ಮನೆಯಲ್ಲಾದರೂ ಅವಳಾಸೆಗೆ ನೀರೆರೆಯುವಂತಾಗಲಿ. ಅದು ಸಾಧ್ಯವೇ? ಅಷ್ಟೊಂದು ಸಂಪ್ರದಾಯಬದ್ಧರೆಂದು ಜನ ಹೇಳುತ್ತಾರೆ. ಜೋರು ಜಬರ್‍ದಸ್ತು ಎಂಬ ಮಾತನ್ನೂ ಸೇರಿಸುತ್ತಾರೆ. ಅವರುಗಳನ್ನು ಗಮನಿಸಿದರೆ ಹಾಗೆನಿಸುವುದಿಲ್ಲ. ಸುಸಂಸ್ಕೃತ ಜನ. ಅದ್ಯಾರೋ ಅವರ ಕಡೆಯ ಹಿರಿಯರು ನಡುವೆ ಮೂಗು ತೂರಿಸಿದಾಗ ಎಷ್ಟು ಚೆನ್ನಾಗಿ ಜಾಣ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದರು. ನಮ್ಮ ಹುಡುಗಿ ಒಪ್ಪಿಗೆಯಾದಂತೆ ಅವರ ಮುಖಭಾವದಿಂದ ಕಾಣುತ್ತಿತ್ತು. ಎಲ್ಲರ ಮುಖದಲ್ಲೂ ಆನಂದ, ಸಂತೃಪ್ತಿ ಎದ್ದುಕಾಣುತ್ತಿತ್ತು. ಇನ್ನು ಬೇಡಿಕೆಗಳು..ದೇವರಿಟ್ಟಂತೆ ಆಗುತ್ತದೆ. ಎಂದುಕೊಂಡರು. ಮನಸ್ಸಿನಲ್ಲೇ ದೇವರಿಗೊಂದು ನಮಸ್ಕಾರ ಮಾಡಿ ಕೆಲಸಕಾರ್ಯ ಗಮನಿಸಲು ಅಡುಗೆಮನೆಯ ಕಡೆ ಹೆಜ್ಜೆ ಹಾಕಿದರು.
ಬಂದಿದ್ದವರ ಹತ್ತಿರ ವ್ಯವಹಾರ ಮುಗಿಸಿ ಒಳಗೆ ಬಂದ ಭಟ್ಟರು ”ಲಕ್ಷ್ಮಿ, ತಗೋ ಇದನ್ನು, ಐದುನೂರು ರೂಪಾಯಿ ಇದೆ.” ಎಂದರು. ನಂತರ ಸ್ನಾನ ಸಂಧ್ಯಾವಂದನೆ ಮುಗಿಸಿದರು. ಮಕ್ಕಳ್ಯಾರೂ ಕಾಣಿಸಲಿಲ್ಲ. ಎಲ್ಲಿ ಹೋದರೆನ್ನುತ್ತಾ ಅವರುಗಳ ರೂಮಿನ ಹತ್ತಿರ ಬಂದರು. ಅಲ್ಲಿ ಎಲ್ಲರೂ ಭಾಗ್ಯಳನ್ನು ನೋಡಲು ಬಂದಿದ್ದವರ ಬಗ್ಗೆ ಬಿಸಿಬಿಸಿ ಚರ್ಚೆಯಲ್ಲಿ ತೊಡಗಿದ್ದುದನ್ನು ಕಂಡು ಹಾಗೇ ಅಲ್ಲಿಂದ ಸೀದಾ ಅಡುಗೆ ಮನೆಗೆ ಬಂದರು. ಹೆಜ್ಜೆಯ ಸದ್ದಿನಿಂದಲೇ ಬಂದವರ್‍ಯಾರೆಂದು ಗ್ರಹಿಸಿದ ಲಕ್ಷ್ಮಿ ”ಓ.. ಬಂದಿರಾ, ಪೂಜೆ ಆಯಿತೇ? ಅಡುಗೆಯೂ ಇನ್ನೇನು ಆಯಿತು. ಒಂದೆರಡು ಹಪ್ಪಳ ಸುಡುತ್ತಿದ್ದೇನೆ. ಬೆಳಗಿನ ತೊಗರಿಕಾಳಿನ ಸಾರಿತ್ತಲ್ಲ ಅದಕ್ಕೇ ಅನ್ನ ಮಾಡಿದ್ದೇನೆ. ಮೊಸರಿದೆ, ರಾಧಕ್ಕ ಉಂಡೆ, ಕೋಡುಬಳೆ ಕೊಟ್ಟಿದ್ದಾರೆ. ತೆಗೆದಿಡಲಾ?” ಎಂದು ಕೇಳಿದಳು..
”ನನಗೆ ಅವೆಲ್ಲ ಬೇಡ, ಹುಡುಗರು ಕೇಳಿದರೆ ಕೊಡು. ಅದೆಲ್ಲ ಸರಿ ಕೇಶವಣ್ಣ, ರಾಧಕ್ಕ, ಸುಬ್ಬು ಎಲ್ಲರೂ ನಮಗಾಗಿ ಎಷ್ಟು ಶ್ರಮ ತೆಗೆದುಕೊಂಡಿದ್ದರಲ್ಲ. ಯಾವ ಜನ್ಮದ ಪುಣ್ಯವೋ, ಆ ಮಗು ಶಾಂತಾ ನಮಗಾಗಿ ಬಾಗಿಲಲ್ಲೇ ಕಾಯುತ್ತಾ ನಿಂತಿತ್ತು. ಲಕ್ಷ್ಮೀ, ಜೋಯಿಸರು, ಮಗ, ಮನೆಯವರನ್ನು ನೋಡಿದರೆ ತುಂಬ ಸಾತ್ವಿಕರಂತೆ ಕಾಣಿಸುತ್ತಾರೆ. ಹಿರಿಯರಾಗಿ ಬಂದಿದ್ದರಲ್ಲಾ ಅವರೇ ಸ್ವಲ್ಪ”
ಗಂಡನ ಮಾತಿಗೆ ”ಬಿಡಿ ಕೆಲವರ ಸ್ವಭಾವ ವಿಚಿತ್ರ. ಈಗ ತಾನೇ ಅಂಗಡಿಗೆ ಬಂದುಹೋದರಲ್ಲಾ ಗಾಳಿಮಾತಿನ ರಾಮಣ್ಣ ಹಾಗೇ, ರೀ ಅವರುಗಳು ನಮ್ಮ ಭಾಗ್ಯಳನ್ನು ಒಪ್ಪಿದ್ದಾರೆನ್ನಿಸುತ್ತದೆ. ಅಲ್ವಾ? ನಿಮಗೇನೆನ್ನಿಸುತ್ತೆ?” ಎಂದು ಕೇಳಿದಳು ಲಕ್ಷ್ಮಿ.
”ಹಾ..ಲಕ್ಷ್ಮಿ, ನನಗೂ ಹಾಗೇ ಅನ್ನಿಸುತ್ತಿದೆ, ದೊಡ್ಡ ಮನುಷ್ಯರು, ಒಬ್ಬನೇ ಮಗ, ಏನು ಆಸೆಗಳನ್ನು ಇಟ್ಟುಕೊಂಡಿದ್ದಾರೋ, ಕೇಶವಣ್ಣ ನಾವು ಹೇಳಿದ ಮಾತುಗಳನ್ನು ಅವರುಗಳಿಗೆ ಹೇಳಿದ್ದಾರೋ ಇಲ್ಲವೂ, ಆದರೂ ಲಕ್ಷ್ಮಿ ಒಂದು ವಿಷಯ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ ಕಣೆ” ಎಂದು ಹೇಳಿದರು ಭಟ್ಟರು.
”ಏನು ಅದು ವಿಚಾರ? ನಾನು ತಿಳಿದುಕೊಳ್ಳಬಹುದೇ?” ಎಂದು ಗಂಡನನ್ನು ಪ್ರಶ್ನಿಸಿದಳು.
”ಓಹೋ..ನಿನಗೆ ಹೇಳಲಾರದಂಥದ್ದೇನಲ್ಲ, ಪಾಪ ನಮ್ಮ ಭಾಗ್ಯಳಿಗೆ ಮುಂದೆ ಓದಲು ತುಂಬ ಇಷ್ಟವಿದೆ. ಅದೇ ಉತ್ಸಾಹ ಆಸಕ್ತಿ ಮಿಕ್ಕ ಮಕ್ಕಳಲ್ಲಿಲ್ಲ. ಏನು ಮಾಡುವುದು, ನಮಗೆ ಅವಳ ಆಸೆಯನ್ನು ಪೂರೈಸುವ ಶಕ್ತಿಯಿಲ್ಲ. ಗಟ್ಟಿಮನಸ್ಸಿಂದ ಓದಿಸಿಬಿಡೋಣವೇ ಅಂದರೆ ನಮ್ಮ ಹೊಣೆಗಾರಿಕೆ ಅಡ್ಡಿ ಬರುತ್ತದೆ. ಭಗವಂತನ ಇಚ್ಛೆ, ಋಣಾನುಬಂಧ” ಮಕ್ಕಳ ಆಗಮನದ ಸುಳಿವು ಸಿಕ್ಕಿ ದಂಪತಿಗಳು ಮಾತು ನಿಲ್ಲಿಸಿದರು. ಮಾತಿನ ವರಸೆ ಬದಲಾಯಿಸುತ್ತಾ ”ಅಂದಹಾಗೆ ಲಕ್ಷ್ಮಿ ಸಂಜೆ ಬಂದಿದ್ದರಲ್ಲ ಅವರು ತಮ್ಮ ಮನೆ ಪೂಜೆಗೆ ಚಪ್ಪರ ಹಾಕುವುದರಿಂದ ಹಿಡಿದು ನಮ್ಮ ಅಂಗಡಿಯಲ್ಲಿನ ಸಾಮಾನುಗಳನ್ನು ಬಾಡಿಗೆಗೆ ಪಡೆಯುವುದರ ಜೊತೆಗೆ ವ್ಯವಸ್ಥೆಯವರೆಗೆ ಎಲ್ಲವನ್ನೂ ನನಗೇ ವಹಿಸಿದರು. ನಾನು ಹೇಳಿದ ರೇಟಿಗೆ ಒಂದುಚೂರೂ ಚೌಕಾಶಿ ಮಾಡದೆ ಒಪ್ಪಿಕೊಂಡರು. ಐದುನೂರು ರೂಪಾಯಿ ಮುಂಗಡವನ್ನೂ ಕೊಟ್ಟು ಚೀಟಿ ಬರೆಸಿಕೊಂಡು ಹೋದರು. ಅವರು ಹೋದಮೇಲೆ ನಾನೇ ಬಸವನಿಗೆ ಹೇಳೋಣವೆಂದು ಅಂದುಕೊಳ್ಳುವಷ್ಟರಲ್ಲಿ ಅವನೇ ಅಂಗಡಿಗೆ ಬಂದ. ಹೋದವಾರ ಅವರ ನೆಂಟರ ಕಡೆ ಯಾರಿಗೋ ಪಾತ್ರೆ ಬಾಡಿಗೆಗೆ ಕೊಡಿಸಿದ ಬಾಬತ್ತು ಸ್ವಲ್ಪ ಇತ್ತಲ್ಲ. ಅದನ್ನು ಕೊಡಲು ಬಂದೆ ಎಂದು ಹೇಳಿದ. ಆಗ ನಾನು ಹೊಸ ವಿಷಯವನ್ನು ಹೇಳಿ ವಿಳಾಸವನ್ನು ಕೊಟ್ಟು ಒಪ್ಪಿಸಿದೆ. ಖಂಡಿತ ನನ್ನ ಸಿಬ್ಬಂದಿ ಕರೆದುಕೊಂಡು ಹೋಗಿ ಎಲ್ಲ ವ್ಯವಸ್ಥೆ ಮಾಡಿಕೊಟ್ಟು, ಸಮಾರಂಭವಾದನಂತರ ಮತ್ತೆ ಎಲ್ಲ ಸಾಮಾನುಗಳನ್ನು ನನ್ನ ಲಗೇಜು ಆಟೋದಲ್ಲಿ ಹಿಂದಕ್ಕೆ ತರುವ ಜವಾಬ್ದಾರಿ ನನ್ನದು ಯೋಚಿಸಬೇಡಿ ಎಂದು ಮಾತು ಕೊಟ್ಟುಹೋದ. ಅವನು ತಂದಿದ್ದ ಹಣವನ್ನೇ ಅವನ ಕೆಲಸಕ್ಕಾಗಿ ಮುಂಗಡವೆಂದು ಕೊಟ್ಟು ಕಳುಹಿಸಿದೆ. ಅವನು ನಮ್ಮ ಮನೆಯ ಸಮೀಪವೇ ಇರುವುದು ನಮಗೆ ತುಂಬ ಅನುಕೂಲ ”ಎಂದರು ಭಟ್ಟರು.
ಆಗ ಅಲ್ಲಿಯೇ ಇದ್ದ ಭಾವನಾ ”ಅಮ್ಮಾ, ಅಪ್ಪ ಕೊಟ್ಟ ದುಡ್ಡು, ಚೀಟಿಎಲ್ಲಾ ಅಜ್ಜನ ತಿಜೋರಿಯಲ್ಲಿಟ್ಟಿದ್ದೇನೆ” ಎಂದು ಹೇಳಿ ಊಟಕ್ಕೆ ಸಿದ್ಧ ಪಡಿಸುತ್ತಿದ್ದ ಅಕ್ಕನಿಗೆ ನೆರವು ನೀಡುತ್ತಾ ಚಿಕ್ಕ ತಂಗಿಯರನ್ನು, ಅಪ್ಪನನ್ನು ಕೂಡಲು ಹೇಳಿದಳು.
ಆ ದಿನ ಮಧ್ಯಾನ್ಹದ ಪ್ರಕರಣವನ್ನು ಮಕ್ಕಳು ಮತ್ತೆ ಮಾತನಾಡುತ್ತಾ ”ಅಮ್ಮಾ ಅಕ್ಕನನ್ನು ನೋಡಲು ಬಂದಿದ್ದವರಲ್ಲಿ ಅಜ್ಜನ ತರಹ ಇದ್ದರಲ್ಲ ಅವರು ಯಾವ ಶಾಲೆಯ ಮಾಸ್ತರಾಗಿದ್ದರು? ”ಎಂದು ಕೇಳಿದರು ಚಿಕ್ಕಮಕ್ಕಳಿಬ್ಬರು.
ಅವರ ಮಾತುಗಳನ್ನು ಕೇಳಿದ ಭಟ್ಟರು ”ನೀವು ಶಾಂತಕ್ಕನ ರೂಮಿನಲ್ಲಿದ್ದರಲ್ಲ ಯಾವಾಗ ಅವರನ್ನು ನೋಡಿದಿರಿ? ”ಎಂದು ಪ್ರಶ್ನಿಸಿದರು.
”ಅಮ್ಮಾ. ಅಪ್ಪಾ, ಶಾಂತಕ್ಕನ ರೂಮಿಗೆ ಎರಡು ಬಾಗಿಲುಗಳಿವೆ. ನೀವು ನೋಡಿಲ್ಲ. ಒಂದು ಹಾಲಿಗೆ , ಇನ್ನೊಂದು ಹಿಂದಿನ ಅಂಗಳಕ್ಕೆ. ಅಮ್ಮ ಅಕ್ಕನನ್ನು ಕರೆದುಕೊಂಡು ಹೋದರಲ್ಲ, ಆಗ ನಾವುಗಳು ಸದ್ದಾಗದಂತೆ ಬಂದು ಬಾಗಿಲಲ್ಲಿ ನಿಂತು ಒಬ್ಬರಾದ ಮೇಲೆ ಒಬ್ಬರಂತೆ ನೋಡಿದೆವು. ಗಲಾಟೆ ಮಾಡದೆ ಸ್ವಲ್ಪ ಹೊತ್ತು ಅಲ್ಲೇ ನಿಂತಿದ್ದೆವು. ಆಗ ಅಜ್ಜ ಅಕ್ಕನನ್ನು ಅದೆಷ್ಟೋ ಪ್ರಶ್ನೆಗಳನ್ನು ಕೇಳಿದರಲ್ಲ, ಅವೆಲ್ಲ ಕೇಳಿಸಿಕೊಂಡೆವು. ಆದರೆ ನೀವು ಅವರನ್ನು ಏನೂ ಕೇಳಲೇ ಇಲ್ಲ. ಅದಕ್ಕೇ ಕೇಳಿದೆವು” ಎಂದು ನಕ್ಕರು.
”ಹಾಗೆಲ್ಲ ದೊಡ್ಡವರನ್ನು ಅಣಕಮಾಡಬಾರದು, ಅಕ್ಕ ಹೇಗೆ ಮಾತನಾಡುತ್ತಾಳೆಂದು ಕೇಳುವ ಕುತೂಹಲದಿಂದ ಹಾಗೆ ಪ್ರಶ್ನೆ ಮಾಡಿದ್ದಾರಷ್ಟೇ. ಎಂದು ಸಮಜಾಯಿಷಿ ಕೊಟ್ಟ ಭಟ್ಟರು ಇದೇ ಸೂಕ್ತ ಸಮಯವೆಂದು ತಮ್ಮ ಹಿರೀಮಗಳು ಭಾಗ್ಯಳನ್ನು ”ಭಾಗ್ಯಾ ನಿನಗೇನೆನ್ನಿಸಿತು?” ಎಂದು ಕೇಳಿದರು.
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=34875
(ಮುಂದುವರಿಯುವುದು)
–ಬಿ.ಆರ್,ನಾಗರತ್ನ, ಮೈಸೂರು
Beautiful
ಬಹಳ ಚೆನ್ನಾಗಿ ಹರಿದು ಬರುತ್ತಿರುವ ಸಾಮಾಜಿಕ ಕಥಾನಕ ಓದುಗರ ಮನಗೆದ್ದಿದೆ ಎನ್ನುವುದರಲ್ಲಿ ಸಂಶಯವಿಲ್ಲ…ಧನ್ಯವಾದಗಳು ನಾಗರತ್ನ ಮೇಡಂ.
ಧನ್ಯವಾದಗಳು ನಯನ ಮೇಡಂ
ಧನ್ಯವಾದಗಳು ಶಂಕರಿ ಮೇಡಂ
ಕಾದಂಬರಿ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತಿದೆ.
ಧನ್ಯವಾದಗಳು ಗೆಳತಿ ಪದ್ಮಾ
ಭಟ್ಟರ ವ್ಯವಹಾರ, ಲಕ್ಷ್ಮಿ ಯ ಗೃಹಿಣಿ ಯು ನಡವಳಿಕೆ, ಭಾಗ್ಯ ಮತ್ತು ತಂಗಿಯರ ಸ್ಪಂದಿಸುವ ರೀತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಧನ್ಯವಾದಗಳು ಸಾಹಿತ್ಯ ಸಹ್ರುದಯರಿಗೆ