ವಂಶನಾಮದ ಸ್ವಾರಸ್ಯಗಳು
ನಿಮ್ಮ ವಂಶನಾಮ ಅಂದರೆ ಅಡ್ಡಹೆಸರು ಏನು? ಬ್ಯಾಂಕಿನಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಉತ್ತರ ಕರ್ಣಾಟಕದ ಮಿತ್ರರೊಬ್ಬರು ನನ್ನನ್ನು ಒಮ್ಮೆ ಕೇಳಿದರು.. “ಹಾಗೆ ಯಾವುದೂ ಇಲ್ಲ ನಮಗೆ ಬರೀ ಆದ್ಯಕ್ಷರ (ಇನಿಷಿಯಲ್) ಅಷ್ಟೆ.”ಎಂದೆ.
“ಬಹಳ ವಿಚಿತ್ರ”ಎಂದರು ಅವರು.
“ವಿಚಿತ್ರವೇನು ಬಂತು.ಅದು ನಮ್ಮ ಕಡೆಯ ಪದ್ಧತಿ ಅಷ್ಟೆ” ಎಂದೆ ಸ್ವಲ್ಪ ಕಟುವಾಗಿ..
ನನ್ನ ದನಿಯ ಗಡುಸು ಕೇಳಿ ಅವರಿಗೆ ಗಾಭರಿಯಾಗಿ ಸುಮ್ಮನಾದರು.
ಹಾಗಾದರೆ ವಂಶನಾಮ ಇರಲೇಬೇಕೆ? ಅಂದರೆ ಮೊದಲ ಹೆಸರಿಗೆ ಮರ್ಯಾದೆ ಬೇಡವೆ ಎಂದು ಹಲವಾರು ಬಾರಿ ನಾನು ಚಿಂತಿಸಿದ್ದಿದೆ.ನನ್ನ ಮಾಧ್ಯಮಿಕ ಶಾಲೆ ಸಹಪಾಠಿ ಸತ್ಯನಾರಾಯಣ ಜೋಶಿಯನ್ನು ನಾವು ಜೋಶಿ ಎಂದೇ ಕರೆಯುತ್ತಿದ್ದವು. ಮೊದಲ ಸಾರಿ ಅವನ ಮನೆಗೆ ಹೋದಾಗ ಬಾಲ್ಯದ ಅಭ್ಯಾಸದಂತೆ ಮನೆಯ ಗೇಟ್ ಹತ್ತಿರ ನಿಂತು “ಜೋಶಿ” ಎಂದು ಅರಚಿದೆ. ಮನೆಯ ಒಳಗೆ ಹೋಗಿ ವಿಚಾರಿಸುವ ಅಭ್ಯಾಸವೇ ಆಗೆಲ್ಲಿತ್ತು ನಮ್ಮಂಥ ಬಾಲಕರಿಗೆ? ಮನೆ ಬಾಗಿಲು ತೆರೆದ ಹಿರಿಯರೊಬ್ಬರು ”ಈ ಮನೆಯಲ್ಲಿ ಐದು ಜನ ಜೋಶಿಗಳಿದ್ದೇವೆ. ನಿನಗೆ ಯಾರು ಬೇಕು.?”ಎಂದು ತಮಾಷೆ ಮಾಡಿ ನೀನು ನಮ್ಮ ಸತ್ತಿಯನ್ನು ಹುಡುಕಿ ಬಂದಿದ್ದೀಯಾ ಅಲ್ಲವೆ ಬಾ ಒಳಗೆ “ಎಂದು ಕರೆದರು.
ಯಶವಂತ ಚಿತ್ತಾಲರ ಕತೆಯಲ್ಲಿ ಮುಂಬಯಿ ಮಹಾನಗರದಲ್ಲಿ ಒಂದೇ ಮನೆಯಲ್ಲಿದ್ದ ಮೂರು ಜನ ಅಣ್ಣತಮ್ಮಂದಿರ ಹೆಸರೂ ಎಸ್ ವಿ ಕುಲಕರ್ಣಿ (ಸುಭಾಷ, ಸುರೇಶ, ಸುಧಾಕರ ಮೊದಲ ಹೆಸರುಗಳು).ರೈಲ್ವೆ ಪೋಲೀಸನೊಬ್ಬ ಬಂದು ಎಸ್ ವಿ ಕುಲಕರ್ಣಿ ರೈಲು ಅಪಘಾತದಲ್ಲಿ ಮಡಿದಿದ್ದಾರೆ.ಯಾರಾದರೂ ನನ್ನ ಜತೆ ಮೋರ್ಗ್ ಗೆ ಬನ್ನಿ ಶವ ಗುರುತಿಸಲು ಎನ್ನುವುದು, ಮನೆಯವರಲ್ಲಿ ಅದು ಉಂಟು ಮಾಡುವ ತಲ್ಲಣ, ಆತಂಕ ಕೊನೆಯಲ್ಲಿ ಸತ್ತವನು ಇವರಾರೂ ಅಲ್ಲದೆ ಸುಧಾಕರನಿಂದ ರೈಲ್ವೆ ಪಾಸು ಎರವಲು ಪಡೆದಿದ್ದ ರಾಮಕೃಷ್ಣ ಎಂಬ ರಹಸ್ಯ ಸ್ಫೋಟವಾಗುವುದು ಅಡ್ಡಹೆಸರಿನ ಅವಾಂತರಕ್ಕೊಂದು ಸೊಗಸಾದ ಉದಾಹರಣೆ.
ನಾನೂ ಕೊನೆಗೊಮ್ಮೆ ಮಿತ್ರನೊಬ್ಬನ ಕಾಟ ತಡೆಯಲಾರದೆ ಫೇಸ್ ಬುಕ್ ಖಾತೆ ತೆರೆಯಲು ತೀರ್ಮಾನಿಸಿದೆ.
“ಪೆದ್ದು ಪೆದ್ದಾಗಿ ಕೆ ಎನ್ ಮಹಾಬಲ ಅಂತ ನಿನ್ನ ಸಾಚಾ ಹೆಸರು ಕೊಡಬೇಡ. ಸ್ವಲ್ಪ ನಖರಾ ಇರಲಿ. ನನ್ನ ಹಾಗೆ ಊರ ಹೆಸರು ಮೊದಲು ಅಥವಾ ಕೊನೆಯಲ್ಲಿ ಹಾಕಿಕೋ”ಎಂದು ಕೃಷ್ಣನು ಅರ್ಜುನನಿಗೆ ಉಪದೇಶಿಸುವ ರೀತಿ ಅ ಮಿತ್ರ ಎಚ್ಚರಿಸಿದ. ಹಾಗಾಗಿ ‘ಮಹಾಬಲ ಕಿಕ್ಕೇರಿ’ ಎಂದಿಟ್ಟುಕೊಂಡೆ.ಅಪರಿಚಿತರು ಪ್ರತಿಕ್ರಿಯಿಸುವಾಗ “ಎಮ್ ಕೆ ಅವರೇ ”ಎಂದಷ್ಟೇ ಬರೆಯತೊಡಗಿದರು. ಅಂತೂ ಹೀಗೂ ನನ್ನ ಹೆಸರು ವಿರೂಪಗೊಳ್ಳತೊಡಗಿತು.
ವಂಶನಾಮ ಇಲ್ಲದಿದ್ದರೆ ಉ ಕ ದಲ್ಲಿ ಇರಲು ಸಾಧ್ಯವಿಲ್ಲ. ಚನ್ನಪಟ್ಟಣದ ಹತ್ತಿರದ ಮಳೂರಿನ ಅಪ್ರಮೇಯ ಶ್ರೀನಿವಾಸ ಅಯ್ಯಂಗಾರ್ ಅವರು ಉನ್ನತ ಪೋಲೀಸ್ ಅಧಿಕಾರಿಯಾಗಿ ಬೆಳಗಾವಿಗೆ ಹೋದರು. ಅಲ್ಲಿಂದ ವಾಪಸು ಬರುವಾಗ ಅವರು ಎ ಎಸ್ ಮಳೂರ್ ಕರ್ ಆಗಿಬಿಟ್ಟಿದ್ದರು.
ಮೈಸೂರಿನ ಎಂ ಎಸ್ ನಾಗರಾಜ್ ಎನ್ನುವವರು ಧಾರವಾಡಕ್ಕೆ ಮಾಸ್ತರರಾಗಿ ಹೋದರು. ವಂಶನಾಮ ಇಲ್ಲದೆ ಇರಲಾದೀತೆ? ನೀವು ಇನ್ನು ಮುಂದೆ ಎನ್ ಮೈಸೂರು ಎಂದಷ್ಟೆ ಹೇಳುವುದರ ಜತೆಗೆ ಹಾಗೇ ಕರೆಯಲಾರಂಭಿಸಿದರು ಕೂಡ . ಮೈಸೂರಿನ ಯಾರೋ ಸ್ನೇಹಿತರು ಅವರನ್ನು ಭೇಟಿಯಾಗಲು ಹೋಗಿ ನಾಗರಾಜ್ ಇದ್ದಾರಾ ಎಂದು ಕೇಳಿದಾಗ ಸಾಕಷ್ಟು ವಿಚಾರಣೆಯಾದ ಮೇಲೆ “ಓ ನಿಮಗೆ ಎನ್‌ಎಸ್ ಮೈಸೂರು ಬೇಕಲ್ಲೇನ್ರಿ?” ಎಂದು ನಾಗರಾಜ್ ಹತ್ತಿರ ಕಳಿಸಿದರು.ಎಂತಹ ಅಚಾತುರ್ಯ!?ವಂಶನಾಮದ ಹಾವಳಿ ಮೊದಲ ಹೆಸರಿಗೇ ಗ್ರಹಣ ಹಿಡಿಸಿತಲ್ಲ!
ನಾನು ನಮ್ಮ ಬ್ಯಾಂಕಿನ ಬನಶಂಕರಿ ಎರಡನೇ ಹಂತದ ಶಾಖೆಯಲ್ಲಿದ್ದಾಗ ಹೊಸದಾಗಿ ಖಾತೆ ತೆರೆದವರೊಬ್ಬರು ತಮ್ಮ ಹೆಸರನ್ನು ಅನಿಲ್ ಸಾಲಗಾಮೆ ಎಂದು ಬರೆದಿದ್ದರು.ಸಾಲಗಾಮೆ ಹೆಸರು ಕೇಳಿದಾಕ್ಷಣ ನನ್ನ ಮನಸ್ಸು ಜಾಗೃತವಾಯಿತು ಕನ್ನಡ ವಿಮರ್ಶಕ ಹೆಗ್ಗಡೆ ಎಂದು ವಿಖ್ಯಾತರಾದ ವಿದ್ವಾಂಸ ಎಸ್ ವಿ ರಂಗಣ್ಣ ಅವರ ಹುಟ್ಟಿದೂರೂ ಸಾಲಗಾಮೆ ಅಲ್ಲವೆ?.ಈ ಬಗ್ಗೆ ಅವರಿಗೆ ಕೇಳಿದಾಗ ”ಅವರಾರೋ ಗೊತ್ತಿಲ್ಲ. ನಮ್ಮ ತಾತನಿಗೆ ತಿಳಿದಿದ್ದರೋ ಏನೋ? ನಾವು ಅಮೆರಿಕಾದಲ್ಲಿ ಇರುವುದು. ನಮಗೆ ವಂಶನಾಮ ಇಲ್ಲದ್ದರಿಂದ ಅಲ್ಲಿ ಊರ ಹೆಸರೇ ನಮಗೆ ವಂಶನಾಮವಾಗಿದೆ” ಎಂದರು.
ಹೌದು ಮಳವಳ್ಳಿ,ತಿಪಟೂರು, ಗುಬ್ಬಿ, ಹೊಸಕೋಟೆಗಳು ಇಂದು ಬರಿಯ ಊರುಗಳಲ್ಲ ;ಹಳೇ ಮೈಸೂರಿಗರ
ವಂಶನಾಮಗಳೇ ಆಗಿಬಿಟ್ಟಿವೆ.
ಅಷ್ಟಕ್ಕೂ ಹಾಸ್ಯ ಮಾಡಲು ಇದು ಯಾವ ದೊಡ್ಡ ವಿಷಯ?ಗೊರೂರು ರಾಮಸ್ವಾಮಿ ಅಯ್ಯಂಗಾರರು ಗೊರೂರು ಎಂದು., ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮಾಸ್ತಿ ಎಂದು ಹೃಸ್ವವಾಗಿ ಊರ ಹೆಸರಿನಿಂದಲೇ ಜಗದ್ವಿಖ್ಯಾತರಾಗಲಿಲ್ಲವೆ ಚಿಟ್ಟಾಣಿ,ಜಲವಳ್ಳಿ ಇಂಥ ಯಕ್ಷಪ್ರತಿಭೆಗಳು ತಂತಮ್ಮ ನಿಜನಾಮಧೇಯವನ್ನೇ ಮರೆಯಾಗಿಸಿಲ್ಲವೇಎನ್ನಬಹುದೇನೋ ನೀವು.ನಿಮ್ಮ ಮಾತೂ ನಿಜವೇ ಬಿಡಿ.
ಮದ್ದೂರಿನಿಂದ ರಾಮಾಶಾಸ್ತ್ರಿ ಎನ್ನುವವರು ಪೌರೋಹಿತ್ಯ ವೃತ್ತಿ ನಡೆಸಲು ರಾಮೇಶ್ವರಕ್ಕೆ ವಲಸೆಯಾದರು. ನಾವು ಯಾವುದೋ ಪೂಜಾ ಕಾರ್ಯನಿಮಿತ್ತ ಅವರ ಮನೆಗೆ ತಿರುಚ್ಚಿಯಿಂದ ಹೊರಟಾಗ ದೇವಕೋಟೆ ಬಳಿ ಬಸ್ ಕೆಟ್ಟು ನಿಂತು ಬೇರೊಂದು ಬಸ್ ಹಿಡಿದು ರಾಮೇಶ್ವರಕ್ಕೆ ಹೋದಾಗ ರಾತ್ರಿ ಹನ್ನೆರಡು ಗಂಟೆಯಾಗಿತ್ತು ಬಸ್ ಸ್ಟಾಂಡಿನಲ್ಲಿದ್ದ ಆಟೋದವರನ್ನು ರಾಮಾಶಾಸ್ತ್ರಿಯವರ ಮನೆಗೆ ಬಿಡಿ ಎಂದು ನಮಗೆ ಬಂದ ತಮಿಳಿನಲ್ಲಿ ಕೇಳಿದಾಗ ಅವರಿಗೊಂದಿಷ್ಟೂ ಅರ್ಥವಾಗಲಿಲ್ಲ. ಕೊನೆಗೆ ಸಾಕಷ್ಟು ಚರ್ಚೆಯಾದ ನಂತರ ಅವರಲ್ಲೊಬ್ಬ “ಓ ಮದ್ದೂರವರ್ ವೀಡು”ಎಂದು
ಜ್ಞಾನೋದಯವಾದನಂತೆ ಉದ್ಗರಿಸಿ ಅವರ ಮನೆಯತ್ತ ಕರೆದೊಯ್ದ.ಮದ್ದೂರಿನಿಂದ ಹೋದ ಕಾರಣಮಾತ್ರಕ್ಕೆ ಶಾಸ್ತ್ರಿಗಳು “ಮದ್ದೂರವರ್” ಎಂಬ ವಿಭಿನ್ನ ಅಭಿದಾನವನ್ನು ಪಡೆದಿದ್ದರು.
ನಾನು ಹಿಂದೆ ಸುಮಾರು ಮುನ್ನೂರು ಜನ ಸಿಬ್ಬಂದಿಗಳಿದ್ದ ನಮ್ಮ ಬ್ಯಾಂಕಿನ ಸೇಂಟ್ ಮಾರ್ಕ್ಸ್ ರಸ್ತೆ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಉತ್ತರ ಕರ್ನಾಟಕದ ಹಾಗೂ ಕರಾವಳಿ ಭಾಗದ ಹಲವಾರು ಜನರೂ ಕೆಲಸ ಮಾಡುತ್ತಿದ್ದರು. ಅಂದು ಶನಿವಾರ ಮಧ್ಯಾಹ್ನ ಮೂರುಗಂಟೆ. ಆಗ ಶನಿವಾರ ಅರ್ಧ ದಿನ ರಜೆ ಇದ್ದುದರಿಂದ ಹೆಚ್ಚಿನವರು ಹೊರಟುಹೋಗಿದ್ದರು. ನಾನು ಮತ್ತು ನನ್ನ ಸ್ನೇಹಿತ ಪ್ರಸನ್ನ ಟೇಬಲ್ ಟೆನ್ನಿಸ್ ಆಡಿಕೊಂಡು ಬಂದು ನಾವೂ ಮನೆಯತ್ತ ಹೊರಟಿದ್ದೆವು.ಒಬ್ಬ ಅವಸವರಸವಾಗಿ ಬಂದು “ಮೇಲಿನಮನಿ ಇದ್ದಾರೇನ್ರಿ?”
ಅದಕ್ಕೆ ಮನೆಗೆ ಹೋಗಿರಬಹುದು ಎಂದೆ. ”ಹಿತ್ತಲಮನಿ ಇದ್ದಾರೇನ್ರಿ?” ಮತ್ತೆ ಪ್ರಶ್ನಿಸಿದ ಆ ಆಗುಂತುಕ.”ಇಲ್ಲ,ಅವರು ಇಲ್ಲಿಂದ ವರ್ಗವಾಗಿ ಹಾವೇರಿಗೆ ಹೋಗಿದ್ದಾರೆ” ಎಂದೆ.”ಹೋಗಲಿ ಕೆಳಗಿನಮನಿ ಇದ್ದಾರೇನ್ರಿ”ಎಂದು ಮತ್ತೆ ಪ್ರಶ್ನಿಸಿದ ಬಂದಾತ.
ನನ್ನ ಮಿತ್ರ ಪ್ರಸನ್ನನಿಗೆ ಸ್ವಲ್ಪ ತಮಾಷೆ ಮಾಡಬೇಕಿನಿಸಿ”ಅಂತೂ ನೀವು ಯಾವುದಾದರೂ “ಮನಿ”ಭೇಟಿ ಮಾಡೇ ಮನಿಗೆ ಹೋಗ್ಬೇಕಂತ ಶಪಥ ಮಾಡಿ ಬಂದಿರೋ ಹಾಗಿದೆ”ಎಂದ. ಬಂದಾತ ಕಸಿವಿಸಿಯಾಗಿ “ಹಾಗೆ ಚ್ಯಾಷ್ಟಿ ಮಾಡಬೇಡ್ರೀ. ಆ ಮೂವರೂ ನಮ್ಮ ದೋಸ್ತ ಇದ್ದಾರೆ”.ಎಂದು ಬೇಸರದಿಂದ ನುಡಿದ. ಅವನನ್ನು ಸಮಾಧಾನ ಮಾಡಿ ಕಳಿಸಲು ಸಾಕುಬೇಕಾಯಿತು.
ಅಂತೂ ವಂಶನಾಮ ಇದ್ದವರು ಇಲ್ಲದವರಿಗೆ,ಇಲ್ಲದವರು ಇದ್ದವರಿಗೆ ತಮಾಷೆ ಮಾಡುವುದು ನಿರಂತರವಾಗಿ ನಡೆದೇ ಇದೆಯಲ್ಲವೆ?
–ಕೆ ಎನ್ ಮಹಾಬಲ
ಉತ್ತಮ ಬರಹ. ಧನ್ಯವಾದಗಳು
ವಂಶನಾಮಾವಳಿಯ ಪದ್ದತಿ ಪಜೀತಿಯನ್ನು ತಮ್ಮ ಅನುಭವದ ಬುತ್ತಿ ಯಿಂದ ತೆಗೆದು ನವಿರಾದ ಹಾಸ್ಯ ಲೇಪನದೊಂದಿಗೆ ಬರೆದಿರುವ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ಸಾರ್.
ತುಂಬಾ ಚೆನ್ನಾಗಿದೆ ಸರ್ ಲೇಖನ
ಧನ್ಯವಾದಗಳು
ಧನ್ಯವಾದಗಳು
ಇಂತಹ ಸಮಸ್ಯೆ ನನಗೂ ಎದುರಾಯ್ತು ಸರ್ .. ನಮ್ಮ ದಕ್ಷಿಣಕನ್ನಡದಲ್ಲಿ ವೃತ್ತಿ ಸಮಯದಲ್ಲಿ ಸಾಮಾನ್ಯವಾಗಿ ಸರಿಯಾದ ಪೂರ್ತಿ ಹೆಸರೇ ನೀಡಲ್ಪಡುತ್ತದೆ. ಆದರೆ ನಮ್ಮ ಆಫೀಸಿನಲ್ಲಿದ್ದ ಕೆಲವು ಉತ್ತರಕನ್ನಡದ ಸಹೋದ್ಯೋಗಿಗಳ ಸರಿಯಾದ ನನಗೆ ತಿಳಿದುದೇ ತುಂಬಾ ವರುಷಗಳ ಬಳಿಕ! ಕೆ.ವಿ.ಭಟ್, ಎನ್. ವಿ. ಭಟ್, ಆರ್.ವಿ.ಜೋಶಿ ಇತ್ಯಾದಿಗಳು ಅವರ ನಾಮಧೇಯಗಳಾಗಿದ್ದವು. ಸೊಗಸಾದ ಲೇಖನ…ಧನ್ಯವಾದಗಳು ಸರ್.
ಹಾಸ್ಯ ಲೇಪನದ ಲೇಖನ ಚೆನ್ನಾಗಿದೆ
ವಂಶಾವಳಿಯ ಹಾವಳಿಯ ನವಿರು ಹಾಸ್ಯದ ಲೇಖನ ಸೊಗಸಾಗಿದೆ
ವಂಶಾವಳಿಯ ಲೇಖನ ಓದಿ ಖುಷಿ ಆಯ್ತು ಧನ್ಯವಾದಗಳು ಸರ್
ಸರ್ ಅಡ್ಹ ಹೆಸರಿನ ಅವಾಂತರ ಚೆನ್ನಾಗಿದೆ.. ನಮ್ಮಲ್ಲಿ ಹುಚ್ಚೂರಾಯರು- ಆಂಜನೇಯನ ಹೆಸರು- ಅಂತಾ ಇದ್ದರು. ಕೀಟಲೆ ತಾಳಲಾರದೆ ಹೆಚ್. ರಾಯರು ಆದರು.