ಅಸಹಾಯಕ ಹೆಣ್ಣಿನ ಅಂತರಂಗದ ತುಮುಲ. ”ಮಾಧವಿ”. ಲೇ: ಅನುಪಮಾ ನಿರಂಜನ.
ಸಾರ್ವಜನಿಕ ಜೀವನದ ಪರಿಚಯ ಇವರಿಗೆ ಧಾರಾಳವಾಗಿದ್ದು ಅಂತಹ ವಿಷಯಗಳನ್ನು ವಸ್ತುವಾಗಿಟ್ಟುಕೊಂಡು ಕಾದಂಬರಿಗಳನ್ನು ಬರೆದವರು ಅನುಪಮಾ ನಿರಂಜನ. ಇವರ ಬರಹಗಳಲ್ಲಿ ಸಾಕಷ್ಟು ವೈಚಾರಿಕತೆಯಿದೆ. ಮಧ್ಯಮವರ್ಗದ ಜನರ ಕಷ್ಟಸುಖಗಳನ್ನು ಚಿತ್ರಿಸುವ ಹಲವಾರು ಆಕರ್ಷಕ ಕಾದಂಬರಿಗಳನ್ನು ರಚಿಸಿದ್ದಾರೆ. ಇವರು ವೃತ್ತಿಯಿಂದ ವೈದ್ಯರಾಗಿದ್ದು ಸ್ತ್ರೀಯರ ಮತ್ತು ಮಕ್ಕಳ ಆರೋಗ್ಯ ಸಲಹೆಯ ಮಹತ್ವದ ಕೃತಿಗಳನ್ನು ಬರೆದಿದ್ದಾರೆ. ಅಲ್ಲದೆ ಮಕ್ಕಳಿಗಾಗಿ ನೀತಿಬೋಧಕವಾದ ‘ದಿನಕ್ಕೊಂದು ಕತೆ’ ಮಾಲಿಕೆಯಲ್ಲಿ ಹನ್ನೆರಡೂ ಮಾಸಗಳ ಶೀರ್ಷಿಕೆಹೊತ್ತ ಕಥಾಗುಚ್ಛಗಳ ನ್ನು ಹೊರತಂದಿದ್ದಾರೆ. ಪ್ರಸ್ತುತ ಕಾದಂಬರಿ ‘‘ಮಾಧವಿ’‘ ಪೌರಾಣಿಕ ಹಿನ್ನೆಲೆಯಾಧಾರಿತ ಪ್ರಸಂಗವೊಂದರಿಂದ ಸ್ಫೂರ್ತಿಗೊಂಡದ್ದಾಗಿದೆ. ಅಲ್ಲದೆ ಇದಕ್ಕೆ ಪ್ರೇರಣೆ ಇರಾವತಿ ಕರ್ವೆಯವರು ಬರೆದಿರುವ ”ಯುಗಾಂತ” ಕೃತಿಯೆಂದು ಹೇಳಿಕೊಂಡಿದ್ದಾರೆ. ಇದು ಅನುಪಮಾರವರ ಸ್ತ್ರೀಪರವಾದ ನಿಲುವಿಗೆ ಸಾಕ್ಷಿಯಾಗಿದೆ.
‘ಮಾಧವಿ’ ಕಾದಂಬರಿ:
ಮಹಾಭಾರತದಲ್ಲಿ ಬರುವ ಒಂದು ಉಪಕಥೆಯ ಪ್ರಸಂಗವು ಇಲ್ಲಿ ಕಥಾವಸ್ತುವಾಗಿದೆ. ವಿಶ್ವಾಮಿತ್ರ ಮಹರ್ಷಿಗಳ ಬಳಿಯಲ್ಲಿ ವೇದಾಧ್ಯಯನ ಮಾಡಿದ ಗಾಲವನೆಂಬ ಶಿಷ್ಯ ತನ್ನ ಶಿಕ್ಷಣವನ್ನು ತೃಪ್ತಿಕರವಾಗಿ ಪೂರೈಸಿದಾಗ ತನ್ನ ವಿದ್ಯಾಗುರುಗಳಿಗೆ ಗುರುದಕ್ಷಿಣೆಯನ್ನು ಸಲ್ಲಿಸಿದ ಪ್ರಸಂಗ. ಗಾಲವ ಆಶ್ರಮದಿಂದ ಹೊರಡುವ ಮುನ್ನ ಗುರುಗಳ ಅಶೀರ್ವಾದವನ್ನು ಪಡೆಯುತ್ತಾನೆ. ಅವರಿಬ್ಬರ ನಡುವೆ ಆ ಸಂದರ್ಭದಲ್ಲಿ ಸಹಜವಾಗಿ ನಡೆಯುವ ಸಂಭಾಷಣೆಯಲ್ಲಿ ಗಾಲವ ತಾನು ಸಲ್ಲಿಸಬೇಕಾದ ಗುರುದಕ್ಷಿಣೆಯ ಪ್ರಸ್ತಾಪ ಮುಂದಿಡುತ್ತಾನೆ. ಅವನು ಸಮಾಧಾನಕರವಾಗಿ ಶಿಷ್ಯವೃತ್ತಿಯನ್ನು ಪೂರೈಸಿದ್ದಕ್ಕಾಗಿ ವಿಶ್ವಾಮಿತ್ರರಿಗೆ ಅವನ ಮೇಲೆ ಮೆಚ್ಚುಗೆಯಿರುತ್ತದೆ. ಹಾಗಾಗಿ ಅವರು ಆತನಿಗೆ ”ನಿನ್ನ ವಿದ್ಯಾಭ್ಯಾಸ ಕಾಲದಲ್ಲಿ ನಿನ್ನ ಶುಶ್ರೂಷೆಯಿಂದ ನಾನು ಸಂತುಷ್ಟನಾಗಿದ್ದೇನೆ. ನನಗೆ ಬೇರೆ ಯಾವ ದಕ್ಷಿಣೆಯೂ ಅಗತ್ಯವಿಲ್ಲ ಗಾಲವ” ಎನ್ನುತ್ತಾರೆ. ಅಷ್ಟಕ್ಕೆ ಗಾಲವ ಸುಮ್ಮನಾಗಿದ್ದರೆ ಮುಂದಿನ ಅನಾವಶ್ಯಕ ಪ್ರಸಂಗ ನಡೆಯುತ್ತಿರಲಿಲ್ಲ. ಆತ ಮತ್ತೂ ಮುಂದುವರೆದು ”ಹಿರಿಯರು ಗುರುದಕ್ಷಿಣೆ ಕೊಟ್ಟ ಹೊರತು ವಿದ್ಯೆ ಸಿದ್ಧಿಯಾಗದೆನ್ನುತ್ತಾರೆ” ಎಂದಾಗಲೂ ಅವರು ”ಅದು ಗುರುದಕ್ಷಿಣೆ ಕೊಡಲು ಶಕ್ತಿಯಿರುವಂಥವರಿಗೆ ಅನ್ವಯಿಸುತ್ತದೆ. ನಿನಗಲ್ಲ” ಎನ್ನುತ್ತಾರೆ. ಗಾಲವ ಹಠಮಾಡಿ ಏನನ್ನು ಕೊಡಬೇಕು ತಿಳಿಸಿ ಎಂದಾಗ ವಿಶ್ವಾಮಿತ್ರರಿಗೆ ಸಿಟ್ಟು ಬರುತ್ತದೆ. ಅವನಿಗೆ ಬುದ್ಧಿ ಕಲಿಸಲೆಂದೇ ಅವನಿಂದ ಸಾಧ್ಯವಾಗದಂತಹ ‘‘ಮೈಯೆಲ್ಲ ಬೆಳ್ಳಗೂ ಒಂದುಕಿವಿ ಮಾತ್ರ ಕಪ್ಪಾಗಿರುವಂತಹ ಎಂಟುನೂರು ಕುದುರೆಗಳನ್ನು ತಂದೊಪ್ಪಿಸು” ಎಂದು ಆಜ್ಞಾಪಿಸಿತ್ತಾರೆ.
ಆಗಿನ ಕಾಲದಲ್ಲಿ ಋಷಿಗಳ ಗುರುಕುಲದಲ್ಲಿ ರಾಜಪುತ್ರರು, ಗಣ್ಯರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಬಿಡುತ್ತಿದ್ದುದುಂಟು. ಅಂತಹ ವಿದ್ಯಾರ್ಥಿಗಳು ಪೂರ್ಣ ಶಿಕ್ಷಣ ಮುಗಿಸಿದಾಗ ಅವರ ಪೋಷಕರಾದ ರಾಜರು, ಪ್ರತಿಷ್ಠಿತರು ಗುರುಗಳಿಗೆ ದಕ್ಷಿಣೆಯಾಗಿ ಧನಧಾನ್ಯರಾಶಿಗಳನ್ನು, ಅಪಾರ ಸಂಖ್ಯೆಯ ಗೋವುಗಳನ್ನು, ಅಗತ್ಯದ ವಸ್ತುಗಳನ್ನು ಗುರುಗಳಿಗೆ ನೀಡುವುದು ವಾಡಿಕೆಯಾಗಿತ್ತು. ಇದನ್ನು ಗಮನದಲ್ಲಿಟ್ಟೊಂಡೇ ವಿಶ್ವಾಮಿತ್ರರು ನಿರ್ಧನನಾದ ಗಾಲವನಿಂದ ಏನನ್ನೂ ಬೇಡಿರಲಿಲ್ಲ. ಅದನ್ನು ಅರ್ಥಮಾಡಿಕೊಳ್ಳದ ಗಾಲವ ತಾನಾಗಿಯೇ ಬೆಟ್ಟವನ್ನು ಮೈಮೇಲೆ ಎಳೆದುಕೊಂಡಂತಾಯಿತು.
ವೇದಾಧ್ಯಯನವೊಂದೇ ಗಾಲವನ ಸಂಪತ್ತು. ಆದ್ದರಿಂದ ಗುರುಗಳ ಬೇಡಿಕೆಯನ್ನು ಪೂರೈಸಬೇಕಾದರೆ ಅದನ್ನು ಯಾರಾದರೂ ರಾಜಮಹಾರಾಜರಿಂದ ಬೇಡಿ ಪಡೆಯಬೇಕಾದದ್ದು ಅನಿವಾರ್ಯವಾಯಿತು. ರಾಜರುಗಳು ಬ್ರಾಹ್ಮಣ ಸಂನ್ಯಾಸಿ ಬಂದು ಬೇಡಿದಾಗ ಇಲ್ಲವೆನ್ನದೆ ನೀಡುತ್ತಿದ್ದುದು ಅಂದಿನ ರಿವಾಜು. ಚಂದ್ರವಂಶದ ಪ್ರಸಿದ್ಧನಾದ ರಾಜ ಯಯಾತಿಯ ಬಳಿ ಗಾಲವನು ತನ್ನ ವೃತ್ತಾಂತವನ್ನು ಹೇಳಿಕೊಂಡು ಅವನನ್ನು ತನ್ನ ಗುರುದಕ್ಷಿಣೆಗೆ ನೆರವಾಗುವಂತೆ ಕೋರಿದಾಗ ನಡೆದದ್ದೇ ಬೇರೆ. ಆತ ಕುದುರೆಗಳನ್ನೋ, ಇಲ್ಲವಾದರೆ ಅವನ್ನು ಬೇರೆಯವರಿಂದ ಕೊಂಡುಕೊಳ್ಳಲು ಅಪಾರ ಧನರಾಶಿಯನ್ನೋ ಕೊಡಬಹುದಿತ್ತು. ಆದರೆ ಅವನ ಬೊಕ್ಕಸ ಯಾಗ, ಇಷ್ಟಿಗಳಿಂದ ಬರಿದಾಗಿದೆಯೆಂದು ತಿಳಿಸಿದನು. ಆದರೆ ಅದಕ್ಕೆ ಬದಲಾಗಿ ಯೌವನಕ್ಕೆ ಕಾಲಿಟ್ಟಿದ್ದ ತನ್ನ ಮಗಳು ‘‘ಮಾಧವಿ’‘ಯನ್ನು ಗಾಲವನಿಗೆ ದಾನವಾಗಿ ನೀಡುತ್ತಾನೆ. ದೇವ, ಗಂಧರ್ವ, ಅಪ್ಸರೆಯರಿಗಿಂತ ಮಿಗಿಲಾದ ಅವಳನ್ನು ಯಾರಾದರೂ ಸಂಪದ್ಭರಿತ ರಾಜ್ಯದ ರಾಜನಿಗೆ ಕೊಟ್ಟು ಗುರುದಕ್ಷಿಣೆಗೆ ಬೇಕಾದುದನ್ನು ಕನ್ಯಾಶುಲ್ಕವಾಗಿ ಅವನಿಂದ ದೊರಕಿಸಿಕೊಳ್ಳುವಂತೆ ಸಲಹೆ ನೀಡಿದನು.
ಇದೇ ”ಮಾಧವಿ” ಕಾದಂಬರಿಯ ಮೂಲ ವಸ್ತು. ಮಹಾಭಾರತ ಕಾಲಕ್ಕಿಂತ ಶತಮಾನಗಳ ಹಿಂದೆ ನಡೆದಿರಬಹುದಾದ ಈ ಪ್ರಸಂಗ ಅಂದಿನ ಸಾಮಾಜಿಕ ಸ್ಥಿತಿಗತಿಗಳಲ್ಲಿ ಮಹಿಳೆಯರ ಸ್ಥಾನಮಾನಕ್ಕೆ ಹಿಡಿವ ಕೈಗನ್ನಡಿಯಾಗಿದೆ. ವೇದಗಳ ಕಾಲದಲ್ಲಿ ಸ್ತ್ರೀ ಪುರುಷರ ಸ್ಥಾನಮಾನಗಳಲ್ಲಿ ವ್ಯತ್ಯಾಸವಿಲ್ಲವೆಂದು ತಿಳಿದುಬರುತ್ತದೆ. ನಂತರ ಬಂದ ಕುಟುಂಬ ವ್ಯವಸ್ಥೆಯಲ್ಲೂ ಮಾತೃತ್ವ ಪ್ರಧಾನವಾದ ಆಚರಣೆಗಳಿದ್ದವು. ಕ್ರಮೇಣ ಸಮಾಜದಲ್ಲಿ ಆಸ್ತಿಸಂಚಯವೇ ಮುಖ್ಯ ಅಂಶವಾಗುತ್ತಾ ಅದರ ಒಡೆತನ, ರಕ್ಷಣೆಗಳಿಗಾಗಿ ಪುರುಷಪ್ರಧಾನ ವ್ಯವಸ್ಥೆ ಜಾರಿಗೆ ಬಂದಿರಬಹುದು. ಈ ಬದಲಾವಣೆಯಾಗಲು ಶತಮಾನಗಳೇ ಬೇಕಾಗಿರಬಹುದು. ವರ್ಣಾಶ್ರಮ ಪಾಲನೆ ಜಾರಿಯಾದಾಗ ಕ್ಷತ್ರಿಯ, ಬ್ರಾಹ್ಮಣ ಪುರುಷರು ಇಡೀ ಸಮಾಜವನ್ನು ತಮ್ಮ ಹತೋಟಿಯೊಳಗೆ ತೆಗೆದುಕೊಂಡಿದ್ದಾರೆ. ಅನುಕೂಲಕ್ಕೆ ತಕ್ಕಂತೆ ಎಲ್ಲ ನಿಯಮಗಳು, ಶಾಸ್ತ್ರಗಳನ್ನು ರಚಿಸಲಾಯಿತು. ಇವೆಲ್ಲ ಕಟ್ಟುನಿಟ್ಟಾಗಿ ಆಚರಣೆಗೆ ಬಂದವು. ಕ್ಷತ್ರಿಯನಾದ ರಾಜನು ರಾಜ್ಯದ ಎಲ್ಲ ವಸ್ತು, ವ್ಯಕ್ತಿ, ಸಂಪತ್ತಿಗೆ ಒಡೆಯನಾಗಿದ್ದಾನೆ. ಆತನಿಗೆ ಎದುರಾಡುವವರು ಯಾರೂ ಇಲ್ಲ. ಹಾಗೆ ಉದ್ಧಟತನ ತೋರಿದವರಿಗೆ ಘೋರಶಿಕ್ಷೆ. ಇವನಿಗೆ ಮಾರ್ಗದರ್ಶನ ನೀಡಲು ಸಾಸ್ತ್ರಕೋವಿದರಾದ ಬ್ರಾಹ್ಮಣ ಪಂಡಿತರಿದ್ದರು. ಹೀಗಾಗಿ ರಾಜರು ಯಾರನ್ನು ಬೇಕಾದರೂ ಬಯಸಬಹುದಾಗಿತ್ತು ಮತ್ತು ತನ್ನ ಆಡಳಿತದಲ್ಲಿರುವ ಯಾರನ್ನು ಬೇಕಾದರೂ ದಾನಮಾಡಬಹುದಾಗಿತ್ತು. ಈ ಕ್ರೂರ ನೀತಿಯಿಂದಾಗಿ ರಾಜ ಯಯಾತಿ ತನ್ನ ಸ್ವಂತ ಮಗಳನ್ನು ಅಶ್ವ, ಆನೆ, ರಥ, ಗೋವುಗಳಂತೆ ಗಾಲವನಿಗೆ ದಾನಮಾಡುತ್ತಾನೆ. ಇದನ್ನು ಪ್ರತಿಭಟಿಸುವ ದೈರ್ಯ ಯಾರಿಗೂ ಇರಲಿಲ್ಲ. ಆಜ್ಞಾಧಾರಕಳಂತೆ ತಲೆಬಗ್ಗಿಸಿ ಮಾಧವಿ ಗಾಲವನ ಹಿಂದೆ ಹಿಂಬಾಲಿಸಿ ಹೋದಳು.
ಮುಂದಿನದೆಲ್ಲ ಗಾಲವನು ಅವಳನ್ನು ಹರ್ಯಶ್ವ, ದಿವೋದಾಸ, ಉಶೀನರರೆಂಬ ಮಹಾರಾಜರಿಗೆ ವಿಕ್ರಯಿಸಿ ಕನ್ಯಾಶುಲ್ಕವಾಗಿ ಅವರು ಕೊಟ್ಟಷ್ಟು ಬಿಳಿಕುದುರೆಗಳನ್ನು ಪಡೆಯುತ್ತಾನೆ. ಅವಳನ್ನು ಪಡೆದುಕೊಂಡ ರಾಜರು ಒಂದುವರ್ಷ ಕಾಲ ಅವಳನ್ನು ಉಪಪತ್ನಿಯಂತೆ ಭೋಗಿಸಿ ಅವಳಿಂದ ಒಬ್ಬ ಪುತ್ರನನ್ನು ಪಡೆದು ನಂತರ ನಿಬಂಧನೆಯಂತೆ ಗಾಲವನಿಗೆ ಹಿಂದಿರುಗಿಸುತ್ತಾರೆ. ಇಷ್ಟೆಲ್ಲ ಪಡಿಪಾಟಲು ಬಿದ್ದರೂ ಅವನು ಸಂಗ್ರಹಿಲಾಗಿದ್ದು ಆರುನೂರು ಕುದುರೆಗಳನ್ನಷ್ಟೇ. ಬೇರೆ ಉಪಾಯಕಾಣದೆ ಮಾಧವಿಯನ್ನು ಗುರು ವಿಶ್ವಾಮಿತ್ರರ ಬಳಿಗೇ ಕರೆತಂದು ಅವರಿಗೊಪ್ಪಿಸುತ್ತಾನೆ. ಅಲ್ಲಿಯವರೆಗೆ ನಡೆದದ್ದನ್ನು ವಿವರಿಸುತ್ತಾನೆ. ಉಳಿದ ಇನ್ನೂರು ಕುದುರೆಗಳಿಗೆ ಬದಲಾಗಿ ಮಾಧವಿ ಅವರ ಬಳಿ ಭಗವತಿಯಂತೆ ಒಂದು ವರ್ಷಕಾಲ ಸೇವೆಮಾಡಿ ಅವರಿಗೆ ಒಬ್ಬ ಪುತ್ರನನ್ನು ಹೆತ್ತುಕೊಡಬೇಕೆಂಬುದೇ ನಿಬಂಧನೆ. ವಿಶ್ವಾಮಿತ್ರರು ಬ್ರಹ್ಮರ್ಷಿಗಳು, ಜಿತೇಂದ್ರಿಯರೆಂದು ಹೆಸರು ಪಡೆದವರಾದರೂ ಮಾಧವಿಯ ವಿಚಾರದಲ್ಲಿ ರಾಜರಿಗಿಂತ ವಿಭಿನ್ನರಾಗಿ ವರ್ತಿಸುವುದಿಲ್ಲ. ಅವರು ಹೇಳುವ ಮಾತು ‘‘ನಾನು ಕೋರಿದ ಎಂಟುನೂರು ಅಶ್ವಗಳಿಗೆ ಬದಲಾಗಿ ಮೊದಲೇ ಮಾಧವಿಯನ್ನು ಕರೆತಂದು ನನಗೊಪ್ಪಿಸಿದ್ದರೆ ಇವಳನ್ನು ಜೀವಮಾನ ಪರ್ಯಂತ ಭೋಗಿಸಿ ಜಗತ್ತಿಗೆ ಶ್ರೇಷ್ಠರಾದ ನಾಲ್ವರು ಪುತ್ರರನ್ನು ಪಡೆಯುತ್ತಿದ್ದೆ’‘. ರಾಜನಾಗಲೀ, ಋಷಿಯಾಗಲೀ ಹೆಣ್ಣನ್ನು ಬೋಗದ ವಸ್ತು, ಹೆರುವ ಯಂತ್ರ, ಅವಳ ಸೌಂದರ್ಯವಿರುವುದೇ ಪುರುಷರ ಕಾಮೋತ್ತೇಜನಕ್ಕಾಗಿ ಎಂಬುದನ್ನು ಇದು ಸಾರುತ್ತದೆ. ಅವಳಿಗೆ ಒಂದು ಸ್ವತಂತ್ರ ವ್ಯಕ್ತಿತ್ವವೇ ಇಲ್ಲವೆಂಬುದನ್ನು ತೋರುತ್ತದೆ. ಒಂದುವರ್ಷ ಅವಳೊಡನೆ ಬಲವಂತವಾಗಿ ಸುಖಿಸಿ ಪುತ್ರ ಜನನಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ನಂತರ ಗಾಲವನ ಗುರುದಕ್ಷಿಣೆಯು ಪೂರ್ಣವಾಗಿ ಸಂದಾಯವಾದಂತೆ ಎಂದು ಭಾವಿಸುತ್ತಾರೆ.
ಅಂತಿಮವಾಗಿ ಗಾಲವ ದಾನವಾಗಿ ಪಡೆದ ಮಾಧವಿಯ ಮೂಲಕ ಗುರುದಕ್ಷಿಣೆಯನ್ನು ಸಂದಾಯ ಮಾಡಿ ಮುಕ್ತನಾಗುತ್ತಾನೆ. ಆಕೆಯನ್ನು ಯಯಾತಿ ಮಹಾರಾಜನ ಆಸ್ಥಾನಕ್ಕೆ ಕರೆತಂದು ಅವನಿಗೊಪ್ಪಿಸಿ ನಿರಾಳವಾಗಿ ಹೊರಡುತ್ತಾನೆ. ಗಾಲವನಿಗೆ ತನ್ನ ಗುರುಗಳಿಗೆ ದಕ್ಷಿಣೆಯನ್ನು ಸಲ್ಲಿಸುವುದೊಂದೇ ಗುರಿಯಾಗಿದ್ದು ಮಧವಿಯ ಬಗ್ಗೆ ಅವನಿಗೆ ಯಾವ ಪಶ್ಚಾತ್ತಾಪವೂ ಆಗುವುದಿಲ್ಲ. ಅದೇ ಇಲ್ಲಿನ ವಿಪರ್ಯಾಸ. ಮಾಧವಿ ತನ್ನದಲ್ಲದ ಕಾರಣಕ್ಕಾಗಿ ಐದುವರ್ಷಗಳಲ್ಲಿ ಅನುಭವಿಸಿದ ಶೋಷಣೆಗಳಿಂದ ಭಂಗಪಟ್ಟು ಸಿಡಿದೇಳುತ್ತಾಳೆ. ಯಯಾತಿ ತನ್ನ ಮಗಳಿಗೆ ವಿವಾಹಮಾಡಿಬಿಟ್ಟರೆ ತನ್ನ ಕರ್ತವ್ಯ ಮುಗಿದಂತೆ ಎಂದು ತಿಳಿದು ಆಕೆಗೊಂದು ಸ್ವಯಂವರವನ್ನು ಏರ್ಪಾಡುಮಾಡುತ್ತಾನೆ. ಆದರೆ ತೀರ್ಮಾನ ತೆಗೆದುಕೊಳ್ಳಬೇಕಾದ ಮಾಧವಿ ಅಲ್ಲಿ ನೆರೆದಿದ್ದ ಯಾವುದೇ ರಾಜರಿಗೆ ವರಮಾಲೆ ಹಾಕದೇ ಹಿಂದಿನ ವರ್ಷಗಳಲ್ಲಿ ತನಗೊದಗಿದ ಅವಸ್ಥೆಯನ್ನು ಎಲ್ಲರೆದುರಿಗೆ ಬಹಿರಂಗಪಡಿಸಿ ಅರಮನೆಯನ್ನು ತ್ಯಜಿಸಿ ಒಬ್ಬಂಟಿಯಾಗಿ ನಡೆಯುತ್ತಾ ಅರಣ್ಯವನ್ನು ಪ್ರವೇಶಿಸುತ್ತಾಳೆ. ಇದು ಅವಳು ತೋರಿದ ಪ್ರತಿಭಟನೆಯ ರೀತಿ. ಅಸಹಾಯಕಳಾದ ಹೆಣ್ಣು ಭದ್ರವಾದ ಕಟ್ಟುಪಾಡುಗಳ ವ್ಯವಸ್ಥೆಯೆದುರು ಇನ್ನೇನು ಮಾಡಲು ಸಾಧ್ಯವಿತ್ತು.
ಆದರೆ ಉಳಿಯುವುದೊಂದೇ ಪ್ರಶ್ನೆ. ಇದರಿಂದಾಗಿ ವ್ಯವಸ್ಥೆಯೇನಾದರೂ ಬದಲಾಯಿತೇ? ಖಂಡಿತಾ ಇಲ್ಲ. ಶತಮಾನದ ನಂತರ ಯಯಾತಿಯ ವಂಶಜರೇ ಆದ ಕೌರವರ ತುಂಬಿದ ರಾಜಸಭೆಯಲ್ಲಿ ಪಂಡವರ ಪತ್ನಿ ಪಾಂಚಾಲಿಯ ವಸ್ತ್ರಾಪಹರಣ ಮಾಡಿದಾಗ ಅಲ್ಲಿದ್ದ ವಯೊವೃದ್ಧರು, ಜ್ಞಾನವೃದ್ಧರೂ, ನ್ಯಾಯನೀಡಬೇಕಾದ ಮಹಾರಾಜ ದೃತರಾಷ್ಟ್ರನೇ ಆಗಲಿ ಅವಳ ನೆರವಿಗೆ ಬರಲಿಲ್ಲ.
ಇದು ನಮ್ಮ ಮಹಾಕಾವ್ಯದ ಕಥಾನಕ. ಆಗಿನ ಜನಜೀವನದ ಒಳನೋಟವನ್ನು ಅನಾವರಣಗೊಳಿಸುತ್ತದೆ. ಈಗ ನಾವು ಬಹಳ ಮುಂದುವರೆದವರು, ಚಿಂತನಶೀಲರಾಗಿದ್ದೇವೆ. ಸಮಾಜದಲ್ಲಿ ಸ್ತ್ರಿ ಪುರುಷರ ಸಮಾನತೆಯನ್ನು ಬಹುಮಟ್ಟಿಗೆ ಸಾಧಿಸಿದ್ದೇವೆ. ಈಗಲೂ ಮಹಿಳೆಯರ ಮೇಲಿನ ದೌರ್ಜನ್ಯಗಳು ವಿರಳವಾದರೂ ನಡೆಯುತ್ತಿರುವ ಸುದ್ಧಿಗಳನ್ನು ಓದುತ್ತಿರುತ್ತೇವೆ. ಇನ್ನೂ ಸಮಾಜದಲ್ಲಿ ಸುಧಾರಣೆಯಾಗಬೇಕಾಗಿದೆ. ಮಾಧವಿ ಕಾದಂಬರಿ ಈ ದೆಸೆಯಲ್ಲಿ ಸಮಾಜದ ಕಣ್ತೆರೆಸುವ ಒಂದು ಪ್ರಯತ್ನವಾಗಿದೆಯೆನ್ನಬಹುದು.
-ಬಿ.ಆರ್.ನಾಗರತ್ನ
ತುಂಬಾ ಚೆನ್ನಾಗಿದೆ ಪುಸ್ತಕ ಪರಿಚಯ, ಕುತೂಹಲ ಮೂಡಿಸುವಂತಿದೆ.
ಸೊಗಸಾದ ವಿವರಣೆ. ಬಹಳ ವರ್ಷಗಳ ಹಿಂದೆ ‘ಮಾಧವಿ’ ಪುಸ್ತಕವನ್ನು ಓದಿದ್ದೆ..ನೆನಪಿಸಿದ್ದಕ್ಕೆ ಧನ್ಯವಾದಗಳು
ಧನ್ಯವಾದಗಳು ಪ್ರಿಯ ಗೆಳತಿ ಯರೇ
ಹೆಣ್ಣಿನ ಅಂತರಂಗದ ತುಮುಲಗಳನ್ನು ಸಮರ್ಥವಾಗಿ ಹಿಡಿದಿಟ್ಟ ಕಾದಂಬರಿ ಮಾಧವಿಯ ವಿಮರ್ಶಾತ್ಮಕ ಪರಿಚಯ ಲೇಖನ ಇಷ್ಟವಾಯ್ತು..ಧನ್ಯವಾದಗಳು.
ಹಿಂದೆ ಓದಿದ್ದ, ಅತ್ಯಂತ ಕಾಡುವ “ಮಾಧವಿ” ಪಾತ್ರದ ಸೊಗಸಾದ ವಿಶ್ಲೇಷಣೆ. ಸ್ವಯಂವರದ ಸಮಯದಲ್ಲಿ ಸಿಡಿದೆದ್ದ ಮಾಧವಿ, ಗಾಲವನೊಂದಿಗೆ ತಂದೆ ಕಳುಹಿಸುವಾಗಲೇ ಸಿಡಿದೆದ್ದಿದರೆ ಚಂದಿತ್ತು
ಧನ್ಯವಾದಗಳು ಸಾಹಿತ್ಯ ಸಹೃದಯರಿಗೆ.