ಸಮಸ್ಯೆಗಳನ್ನು ಆಪ್ತವಾಗಿಸಿಕೊಳ್ಳುವುದು
ಸಮಸ್ಯೆಗಳು ಯಾರಿಗಿಲ್ಲ ಹೇಳಿ? ಎಲ್ಲರಿಗೂ ಅವರದ್ದೇ ಆದ ಸಮಸ್ಯೆಗಳಿರುತ್ತವೆ. ನಮ್ಮ ಸಮಸ್ಯೆಯೇ ಹೆಚ್ಚು ಅನ್ನೋ ಭಾವನೆ.
ಒಂದು ವೇಳೆ, ಎಲ್ಲರಿಗೂ ತಮ್ಮ ತಮ್ಮ ಸಮಸ್ಯೆಗಳನ್ನು ಒಂದು ಟೇಬಲ್ ಮೇಲೆ ಪೇರಿಸಿ ಸಮಸ್ಯೆಗಳನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ನೀಡಿದಲ್ಲಿ, ಸ್ವಲ್ಪ ಸಮಯದಲ್ಲೇ ಎಲ್ಲರೂ ನಮ್ಮ ನಮ್ಮ ಸಮಸ್ಯೆಗಳೇ ಸರಿ ಎಂದು ವಾಪಸ್ ಕೇಳುತ್ತಾರೆ. ಯಾಕೆಂದರೆ, ಬೇರೆಯವರ ಸಮಸ್ಯೆಗಳ ಮುಂದೆ, ನಮ್ಮ ಸಮಸ್ಯೆಗಳು ಏನೇನೂ ಅಲ್ಲವೆನಿಸಿ ಆಪ್ತವಾಗುತ್ತವೆ. ಸಮಸ್ಯೆ ಸಮಸ್ಯೆ ಅಷ್ಟೇ ಅದು ಹೇಗೆ ಆಪ್ತ ಎಂದು ಕೇಳಿದರು ಅಂತ ಅನಿಸುತ್ತಿದೆಯಾ? ಹಾಗಾದರೆ ಈ ಚಿಕ್ಕ ಕಥೆ ಓದಿ……
ಈ ಕಥೆ ನಿಮಗೆಲ್ಲರಿಗೂ ತಿಳಿದಿರಬಹುದು…..
ಮೊದಲ ಬಾರಿಗೆ ಮನೆ ಬಿಟ್ಟು ಹಾಸ್ಟೆಲ್‍ಗೆ ಬಂದ ಯುವತಿ ತನ್ನ ಅಮ್ಮನಿಗೆ ಹಾಸ್ಟೆಲ್ ವಾಸಿಯಾದ ಆರು ತಿಂಗಳ ನಂತರ ಒಂದೂವರೆ ಪುಟದ ಪತ್ರ ಬರೆಯುತ್ತಾಳೆ. ಪತ್ರ ಹೀಗಿದೆ…
ಅಮ್ಮ,,
ದಯವಿಟ್ಟು ನನ್ನ ಕ್ಷಮಿಸು… ಮನೆ ಮಂದಿಯ ಸುರಕ್ಷತಾ ವಲಯದಲ್ಲಿದ್ದಾಗ, ರಾಗ, ತಾಳ ಬದ್ದವಾಗಿದ್ದ ನನ್ನ ಬದುಕೆಂಬ ಹಾಡು ಈಗ ಅಪಸ್ವರ ಹೊರಡಿಸುತ್ತಿದೆ. ಮನೆಯೆಂಬ ಬೆಚ್ಚಗಿನ ಗೂಡಿನಲ್ಲಿ ಸುಸ್ವರವಾಗಿದ್ದ ಬದುಕು, ಇಲ್ಲಿ ಬಂದ ನಂತರ ಸ್ವಾತಂತ್ರ್ಯಕ್ಕೂ ಮತ್ತು ಸ್ವೇಚ್ಛೆಗೂ ವ್ಯತ್ಯಾಸ ಅರಿಯದಾಯಿತು.
ಈ ಸ್ವೇಚ್ಛೆ ಮೊದಲನೇ ತಪ್ಪಾಗಿ ನನ್ನ ರೂಮ್‌ಮೇಟ್ ಬ್ಯಾಗಿನಿಂದ ಹಣ ಅಪಹರಿಸುವಂತೆ ಮಾಡಿತು. ಆ ಹಣದಿಂದ ಗೆಳತಿಯರೊಂದಿಗೆ ಸುತ್ತಾಡಲು ಹೋದ ನಾನು ಸಣ್ಣ ಅಪಘಾತ ಎದುರಿಸುವಂತಾಯಿತು.ಆದರೆ ಅದು ಅದೃಷ್ಠವೇ ಸರಿ ಎಂದು ಭಾವಿಸಲು ಕಾರಣವಾಗಿದ್ದು, ಆಸ್ಪತ್ರೆಯಲ್ಲಿ ನನಗೆ ಪರಿಚಯವಾದ ಯುವ ವೈದ್ಯ ಮತ್ತು ಅವನೊಂದಿಗೆ ಬೆಳೆದ ಪ್ರೇಮ. ಆದರೆ ಇದು ಪ್ರೇಮ, ಪ್ರೀತಿ ದಾಟಿ ಪ್ರಣಯದಾಟವನ್ನೂ ಆಡಿಸಿತು. ಫಲಿತಾಂಶ ಈಗ ನಾನು ಗರ್ಭಿಣಿ. ಈ ವಿಷಯ ಅರಿತ ನನ್ನ ಪ್ರೇಮಿ ಈಗ ಊರು ಬಿಟ್ಟು ಓಡಿ ಹೋಗಿದ್ದಾನೆ. ಇದರಿಂದ ನಿರಾಶಳಾಗಿರುವ ನನಗೆ ಸಾವೊಂದೇ ದಾರಿ. ಆದರೆ ಆ ದಾರಿಯಲ್ಲಿ ಕ್ರಮಿಸುವ ಮುನ್ನ ನಿನ್ನ ನೋಡಲಾಸೆ……ಬರ್ಲಾ ಅಮ್ಮ ಅಲ್ಲಿಗೆ…..ನಿನ್ನ ಬೆಚ್ಚಗಿನ ಮಡಲಿಗೆ…..ಸ್ವೀಕರಿಸುವೆಯಾ ನನ್ನಾ?
ಮೊದಲನೇ ಪುಟದ ಈ ವಿಷಯ ಓದಿದ ತಾಯಿಗೆ ದೊಡ್ಡ ಆಘಾತ….ನನ್ನ ಮುದ್ದು ಮಗಳು ಇಷ್ಟೇಲ್ಲಾ ನಡೆಸಿದಳಾ….ಅಯ್ಯೋ ದೇವರೆ ಈಗ ಏನು ಮಾಡಲಿ ಎಂದು ಅಳುತ್ತಾ ಕುಳಿತಳು. ಒಬ್ಬ ತಾಯಿ ಅಥವಾ ತಂದೆಯ ಸ್ಥಾನದಲ್ಲಿ ನಿಂತು ಯೋಚಿಸಿ ಯಾವ ರೀತಿಯ ಆಘಾತವಾಗಿರಬಹುದು ಆಕೆಗೆ ಎಂದು……ಕಲ್ಪನೆ ಮಾಡಿಕೊಳ್ಳಲೂ ಆಗುವುದಿಲ್ಲ ಅಲ್ವಾ?
ಇರಲಿ ….ಈಗ ಆ ತಾಯಿಯ ಯೋಚನೆ ಅವಳ ಪತ್ರ ಪೂರ್ತಿಯಾಗಿ ಓದಿ ನಂತರ ಮುಂದಿನ ಯೋಜನೆ ಎಂದು ಪುಟ ತಿರುಗಿಸಿದಳು …..
ಅಮ್ಮಾ……..ಹಿಂದಿನ ಪುಟದಲ್ಲಿ ಬರೆದಿರುವುದೆಲ್ಲಾ ಸುಳ್ಳು…….ನಾನು ಏನು ಹೇಳಬೇಕಾಗಿತ್ತೆಂದರೆ, ಈ ಮೊದಲನೇ ಸೆಮಿಸ್ಟರ್ ನಲ್ಲಿ ನಾನು ಎರಡು ಸಬ್ಜೆಕ್ಟ್‌ಗಳಲ್ಲಿ ಅನುತ್ತೀರ್ಣಳಾಗಿದ್ದೀನಿ…..
ಇತಿ ನಿನ್ನ ಮಗಳು……
ಆ ತಾಯಿಗಾದ ನಿರಾಳ ಭಾವ, ಸಂತೋಷ, ಸಂತಸ ವರ್ಣಿಸಲು ಅಸಾಧ್ಯ…..ಮಗಳು ನಪಾಸಾದ ವಿಷಯ ಅವಳಿಗೆ ದೊಡ್ಡದು ಅಂತಾನೇ ಅನಿಸಲಿಲ್ಲ…..ಸದ್ಯ ಆಗ ಹೇಳಿದ್ದೆಲ್ಲಾ ಸುಳ್ಳು….ಪಾಸಾಗದಿದ್ದರೇನು? ಮುಂದಿನ ಬಾರಿ ಬರೆದು ಪಾಸ್ ಮಾಡಿಕೊಳ್ಳಲಿ ಎಂಬ ಯೋಚನೆ ಮಾತ್ರ ಬಂದಿತವಳಿಗೆ. ಬೇರೆಲ್ಲಾ ಹೇಳದೆ, ಮಗಳು ನೇರವಾಗಿ ತಾನು ಅನುತ್ತೀರ್ಣಗೊಂಡ ವಿಷಯ ಮಾತ್ರ ಹೇಳಿದ್ದರೆ ಆ ತಾಯಿ ಇಷ್ಟು ಹಣ ಖರ್ಚು ಮಾಡಿ ಓದಲಿಕ್ಕೆ ಕಳಿಸಿದ ಮಗಳು ಈ ರೀತಿಯಾದಳಾ ಎಂಬ ಕೊರಗಲ್ಲೇ ಇರುತ್ತಿದ್ದಳು ಅಲ್ವಾ? ಈಗ ಅದು ಸಮಸ್ಯೆಯೇ ಅಲ್ಲಾ ಅವಳಿಗೆ.
ಹೌದು….ಬೇರೆಯವರ ಸಮಸ್ಯೆ ಅಥವಾ ಬೇರೆ ದೊಡ್ಡ ಸಮಸ್ಯೆಗಳನ್ನು ಹೋಲಿಸಿಕೊಂಡಾಗ ನಾವು ಎದುರಿಸುತ್ತಿರುವ ಸಮಸ್ಯೆಗಳು ಎಷ್ಟು ಹಗುರ, ಆಪ್ತ ಅಂತನಿಸುತ್ತೆ ಅಲ್ಲವೇ……ಹಾಗನಿಸಲು ನಾವು ಸಮಸ್ಯೆ ಬಂದಾಗ ಈ ರೀತಿ ಬೇರೆ ದೊಡ್ಡ ದೊಡ್ಡ ಸಮಸ್ಯೆಗಳು ಬರಲಿಲ್ಲವಲ್ಲಾ ….ಈ ಸಮಸ್ಯೆ ಮಂಜಿನಂತೆ ಕರಗುತ್ತದೆ ಎಂಬ ಆಶಯದಿಂದಿರಬೇಕು, ಬಂದ ಸಮಸ್ಯೆಗಳನ್ನು ಅಪ್ಪಿಕೊಳ್ಳಬೇಕು…. ಏನಂತೀರಾ?
-ವೈಶಾಲಿ ನರಹರಿ ರಾವ್ , ಮೈಸೂರು.
ನವಿರಾದ ಬರಹವಾದರೂ ಚಿಂತನೆಗೆ ಹಚ್ಚುವ ಕೆಲಸ ಚೆನ್ನಾಗಿ ಮೂಡಿಬಂದಿದೆ ಮೇಡಂ.
ಧನ್ಯವಾದಗಳು ಮೇಡಂ
ಸಮಸ್ಯೆಗಳನ್ನು ನೋಡುವ ರೀತಿಯ ಬಗೆಗಿನ ವಿಶ್ಲೇಷಣೆ ತುಂಬಾ ಸೊಗಸಾಗಿ ಮೂಡಿದೆ ಸುಂದರ ಬರಹ
ಧನ್ಯವಾದಗಳು
ಬಹಳ ಸುಂದರವಾಗಿದೆ. ಸಮಸ್ಯೆಗಳು ಹೇಗೆ ಒಂದರಿಂದ ಒಂದು ದೊಡ್ಡದಾಗಿರುತ್ತವೆ ಮತ್ತು ಅವುಗಳ ಮುಂದೆ ಹಲವಾರು ಬಾರಿ ನಮ್ಮ ಸಮಸ್ಯೆಗಳು ಏನೇನೂ ಅಲ್ಲ ಅನ್ನುವುದನ್ನು ಅರಿತು ನಡೆಯಲು ಸೂಚಿಸುವ ಸಂದೇಶವಿದೆ ಇಲ್ಲಿ.
ಧನ್ಯವಾದಗಳು ಮೇಡಂ
ತುಂಬಾ ಚೆನ್ನಾಗಿದೆ.ದೂರದ ಬೆಟ್ಟ ನುಣ್ಣಗೆ ಅಂದಂತೆ.ಬೇರೆಯವರಿಗೆ ಸಮಸ್ಯೆಗಳೇ ಇಲ್ಲ ಅಂತ ಅಂದ್ಕೊಳ್ತೀವಿ.
ಧನ್ಯವಾದಗಳು
ಸಮಸ್ಯೆಗಳೇ ಹಾಗೆ…ದೊಡ್ಡ ಗೆರೆ..ಸಣ್ಣಗೆರೆ ಇದ್ದ ಹಾಗೆ! ಸೊಗಸಾದ ಲೇಖನ.
ಸುಂದರ, ಸರಳ ಮನೋವೈಜ್ಞಾನಿಕ ಲೇಖನ. ಅಭಿನಂದನೆಗಳು.
ಧನ್ಯವಾದಗಳು
ಸುಂದರ ವಿಶ್ಲೇಷಣೆ!
ಅಭಿನಂದನೆಗಳು
ಉತ್ತಮ ಲೇಖನ….
ಅಭಿನಂದನೆಗಳು
ಹುಡುಗಿಯ ಬುದ್ಧಿವಂತಿಕೆಯೇ.
ಚಂದದ ಬರಹ
ಧನ್ಯವಾದಗಳು
ತುಂಬ ಸೊಗಸಾದ ನಿರೂಪಣೆ ಒಳ್ಳೆಯ ವಿಶ್ಲೇಷಣೆ
ಸುಜಾತಾ ರವೀಶ್
ಎರಡು ರೇಖೆಯ ಹಾಗೆ, ಮೊದಲನೆಯದು ಚಿಕ್ಕದಾಗಿ ಕಾಣಲು ದೊಡ್ಡರೇಖೆಯೊಂದನ್ನು ಗಳೆಯಬೇಕು, ಚೆನ್ನಾಗಿದೆ .