ಕಳೆದು ಹೋದ ದೃಶ್ಯಗಳು

Share Button

ಈ ಲೇಖನದ ಶೀರ್ಷಿಕೆ ತುಸು ಆಶ್ಚರ್ಯ ತರುವಂಥಹದು. ಕೇವಲ ಮೂವತ್ತು ವರ್ಷಗಳ ಹಿಂದಿನ ಹಲವಾರು ಪದ್ಧತಿಗಳು, ಖಾದ್ಯಗಳು, ಸಾಮಾನುಗಳು, ಆಟಗಳು ಅದೃಶ್ಯವಾಗಿ ಜೀವನ ಬರಡಾಗಿರುವುದು ನಿಜಕ್ಕೂ ಖೇದನೀಯ. ಇವುಗಳ ಒಂದು ಅವಲೋಕನವೇ ಈ ಲೇಖನದ ಉದ್ದೀಶ್ಯ.

ಕೂಡು ಕುಟುಂಬದ ಮೂಲಕ ಪ್ರಾರಂಭಿಸೋಣವೇ? ಹಿಂದೆ ಎಲ್ಲಾ ಕುಟುಂಬಗಳಲ್ಲೂ ತಂದೆ, ತಾಯಿ, ಅಣ್ಣ, ತಮ್ಮ ಸೊಸೆಯಂದಿರು ಎಲ್ಲಾ ಒಟ್ಟಿಗೇ ವಾಸವಿರುತ್ತಿದ್ದರು. ಇದರಿಂದ ಒಂದು ಸಾಮರಸ್ಯವೇರ್ಪಟ್ಟಿತ್ತು. ಕೆಲಸಗಳನ್ನು ಹಂಚಿಕೊಂಡು ಮನೆಯ ಯಜಮಾನನ ನಿರ್ದೇಶನದಂತೆ ಜೀವನ ಸಾಗುತ್ತಿತ್ತು. ಇದರಿಂದ ಹಲವಾರು ಪ್ರಯೋಜನಗಳಿದ್ದವು. ಬಾಡಿಗೆ ಉಳಿತಾಯ, ಪರಸ್ಪರ ಸಹಕಾರ, ಇತ್ಯಾದಿ. ಯಾರಾದರೂ ಕೆಲಸಕ್ಕೆ ಹೋದರೂ ಮಕ್ಕಳ ಪೋಷಣೆಗೆ, ಆರೈಕೆಗೆ ಹಿರಿಯರು ಇರುತ್ತಿದ್ದರು. ಹೀಗಾಗಿ ಈಗಿನಂತೆ ಬೇಬಿಸಿಟ್ಟಿಂಗ್ ಎಂಬ ಕಲ್ಪನೆ ಕೂಡ ಇರಲಿಲ್ಲ. ಈಗ ಇವೆಲ್ಲವೂ ಮಾಯ. ಮನೆಯಲ್ಲಿ ಹಬ್ಬ ಹರಿದಿನ, ಲಗ್ನ, ಮರಣ, ಅನಾರೋಗ್ಯ ಏನಾದರೂ ಎಲ್ಲರೂ ಕೈಜೋಡಿಸಿ ಎಲ್ಲ ಸಮಸ್ಯೆಗೂ ಪರಿಹಾರ ಒದಗಿಸುತ್ತಿದ್ದರು. ಮನೆಯಲ್ಲಿ ಯಾರು ಯಾವ ಯಾತ್ರೆ, ಜಾತ್ರೆ, ಲಗ್ನ ಇತ್ಯಾದಿಗಳಿಗೆ ಹೋದರೂ ಮನೆಯ ವಹಿವಾಟು ಏರುಪೇರಿಲ್ಲದೆ ಸಾಗುತ್ತಿತ್ತು. ಈಗ ಇದನ್ನು ಊಹಿಸಲೂ ಅಸಾಧ್ಯ. ಯಾವ ಸ್ಥಿತಿಗೆ ಬಂದಿದೆಯೆಂದರೆ ಪತಿ ಪತ್ನಿ ಜೊತೆಯಾಗಿದ್ದರೇ ಅದನ್ನು ಕೂಡು ಕುಟುಂಬ ಎಂದು ಕರೆಯಬೇಕಾಗಿದೆ!

ಇನ್ನೂ ಹಳೆಯ ಹಲವಾರು ಪದ್ಧತಿಗಳು ಕಣ್ಮರೆಯಾಗಿವೆ. ಸ್ನಾನಕ್ಕೆ ಹಂಡೆಗಳು, ಸೀಗೆಪುಡಿ, ಕಡಲೆಹಿಟ್ಟು ಎಲ್ಲಾ ಮಾಯವಾಗಿದೆ. ಹಿರಿಯರಿಗೆ ಕಾಲಿಗೆ ನಮಸ್ಕರಿಸುವುದು. ಪೂಜೆ, ಪುನಸ್ಕಾರ ಎಲ್ಲಾ ಬರೀ ನೆನಪಾಗಿದೆ. ಎಲ್ಲದಕ್ಕೂ ಸಮಯವಿಲ್ಲ ಎಂಬ ಒಂದೇ ಮಾತು ಹೊರಬರುತ್ತದೆ. ಸಾಂಪ್ರದಾಯಿಕ ಕಚ್ಚೆಪಂಚೆ, ಜುಟ್ಟು ಎಲ್ಲಾ ಬರೇ ನೆನಪಾಗಿದೆ. ವಿವಾಹ ಪದ್ಧತಿಗಳು ಮೂರರಿಂದ ಐದು ದಿನಗಳವರೆಗೆ ಸಂಭ್ರಮದಿಂದ ನಡೆಯುತ್ತಿದ್ದುದು. ಈಗ ಕೇವಲ ಒಂದು ದಿನಕ್ಕೆ ಸೀಮಿತವಾಗಿದೆ. ವಧುವರರ ಪರೀಕ್ಷೆಗಳಂತೂ ಇಲ್ಲವೇ ಇಲ್ಲ.

ಹಿಂದೆ ಅಜ್ಜ, ಅಜ್ಜಿಯರು ಮಕ್ಕಳಿಗೆ ಕಥೆ ಹೇಳಿ ಅವರ ಬೆಳವಣಿಗೆಗೆ ವಿಕಸನಕ್ಕೆ ಬಹಳ ಸಹಾಯವಾಗುತ್ತಿತ್ತು. ಈಗ ಕಣ್ಮರೆಯಾಗಿದೆ. ಕೈತುತ್ತಿನ ಊಟ ಮುದ ನೀಡುತ್ತಿರುವುದಲ್ಲದೆ ಮಕ್ಕಳಲ್ಲಿ ಸಹಜೀವನ, ಸ್ನೇಹಭಾವ, ಒಗ್ಗಟ್ಟು, ಸಹಾಯ ಮನೋಭಾವ ಇತ್ಯಾದಿ ಒಳ್ಳೆಯ ಗುಣಗಳು ತಾವಾಗಿಯೇ ಬರುತ್ತಿದ್ದವು. ಈಗ ಈ ಪದ್ಧತಿ ಮಾಯವಾಗಿ ಪತಿ ಪತ್ನಿಯರಿಗೆ ಒಂದೇ ಮಗು ಇರುವುದರಿಂದ ಅವುಗಳಲ್ಲಿ ಸ್ವಾರ್ಥಭಾವ, ಅಸೂಯೆ, ಹಠಮಾರಿತನ ಇತ್ಯಾದಿ ಮನಃಸ್ಥಿತಿ ಬಹಳ ಸಾಮಾನ್ಯವಾಗಿ ಕಂಡುಬರುತ್ತದೆ.

ದೇಶೀ ಖಾದ್ಯಗಳು ಬಹುಮಟ್ಟಿಗೆ ಕಣ್ಮರೆಯಾಗಿರುವುದು ಎಲ್ಲರ ಗಮನಕ್ಕೆ ಬಂದಿರಬಹುದು. ಉದಾಹರಣೆಗೆ ನುಚ್ಚಿನುಂಡೆ ಮತ್ತು ಪತ್ರೊಡೆಗಳನ್ನು ನೆನಪಿಸಬಹುದು. ಇದಕ್ಕೆ ಕಾರಣ ವಿದೇಶಿ ಖಾದ್ಯಗಳಾದ ಬರ್ಗರ್, ಪಾಸ್ತಾ, ಪಿಜ್ಜಾ ಇತ್ಯಾದಿ ಖಾದ್ಯಗಳನ್ನು ಹಿರಿಯರು ಅಭ್ಯಾಸ ಮಾಡಿರುವುದರಿಂದ ಮಕ್ಕಳಿಗೂ ಅವುಗಳು ಸ್ವಾಧಿಷ್ಟವೆನಿಸುತ್ತದೆ. ಹಾಗೆಯೇ ಗಾಣದ ಎಣ್ಣೆ, ಕುಟ್ಟಿದ ಅಕ್ಕಿ, ಅವಲಕ್ಕಿ ಎಲ್ಲವೂ ಗತಕಾಲದ ನೆನಪಿಗೆ ಸೇರ್ಪಡೆಯಾಗಿದೆ.

PC: Internet

ತಂದೆ, ತಾಯಿಯಿಂದ ಬೇರ್ಪಡೆಯಾದ ಮಕ್ಕಳು ಅವರನ್ನು ಒಂದು ವೃದ್ಧಾಶ್ರಮದಲ್ಲಿ ಸೇರಿಸಿ ನೆಮ್ಮದಿ ಬಯಸುತ್ತಾರೆ. ಈಗಂತೂ ಊರಿಗೊಂದು ವೃದ್ಧಾಶ್ರಮಗಳಾಗಿ ಅದೇ ದೊಡ್ಡ ವ್ಯವಹಾರವಾಗಿ ಏರ್ಪಟ್ಟಿದೆ. ಇದೊಂದು ನಿಜಕ್ಕೂ ನಿರಾಶಾದಾಯಕ ಬೆಳವಣಿಗೆ. ಇವುಗಳ ಹೆಸರುಗಳಂತೂ ಬಹಳ ಆಕರ್ಷಕವಾಗಿ ಎಂಥವರನ್ನು ಮುಗ್ಧಗೊಳಿಸುವಂತಿದೆ. ಹಲವಾರು ಸಂಸಾರಗಳಲ್ಲಿ ಮನೆಯಲ್ಲಿನ ಅಹಿತಕರ ವಾತಾವರಣದಿಂದಾಗಿ ತಂದೆತಾಯಿಯರೇ ವೃದ್ಧಾಶ್ರಮವನ್ನು ಬಯಸುತ್ತಾರೆ. ಅಲ್ಲೇ ಅವರಿಗೆ ಸಾಂತ್ವನ, ಪ್ರೀತಿ, ಅನುಕೂಲಕರ ಆಹಾರ, ಸಮಯ ಎಲ್ಲಾ ಸಿಗುವುದರಿಂದ ಅವು ಹೆಚ್ಚು ಜನಪ್ರಿಯವಾಗುತ್ತಿದೆ. ಐದಾರು ಮಕ್ಕಳಿರುವ ಹಿರಿಯರು ಕೂಡಾ ವೃದ್ಧಾಶ್ರಮಗಳನ್ನು ಆಶ್ರಯಿಸಿರುವುದು ನಿಜಕ್ಕೂ ಆಶ್ಚರ್ಯಕರ ಹಾಗೂ ಆಘಾತಕಾರಿ ವಿಷಯ. ಇದಕ್ಕೆ ಸದ್ಯದಲ್ಲಿ ಯಾವ ಪರಿಹಾರವೂ ಗೋಚರಿಸುತ್ತಿಲ್ಲ. ಪಾಶ್ಚಾತ್ಯ ಅನುಕರಣಿಯ ಪ್ರತೀಕ ಎನ್ನಬಹುದು.

ಬಾಲ್ಯದ ಆಟಗಳಂತೂ ಪೂರ ನೆಲಕಚ್ಚಿದೆ. ಎಲ್ಲ ಹುಡುಗರೂ ಒಟ್ಟಿಗೇ ಸೇರಿ ಮರಕೋತಿ, ಚಿಣ್ಣಿದಾಂಡು, ಬುಗುರಿ, ಆಡುತ್ತಿದ್ದುದರಿಂದ ಅವರಲ್ಲಿ ಒಳ್ಳೆಯ ಗುಣಗಳು ತಾವಾಗಿಯೇ ಬೆಳೆಯುತ್ತಿದ್ದವು. ಆದರೆ ಈಗ ಕಂಪ್ಯೂಟರ್ ಆಟಗಳು, ಮೊಬೈಲ್ ಆಟಗಳು ಮಕ್ಕಳನ್ನು ಸೋಮಾರಿಯಾಗಿ ಮಾಡುವುದಲ್ಲದೆ ಅವರ ಆರೋಗ್ಯದ ಮೇಲೂ ಪರಿಣಾಮ ಬೀಳುತ್ತಿದೆ. ಹಿಂದಿನ ಹಾಗೂ ಇಂದಿನ ಮಕ್ಕಳನ್ನು ಅವಲೋಕಿಸಿದವರಿಗೆ ವ್ಯತ್ಯಾಸಗಳು ಬಹಳ ಸ್ಪಷ್ಟವಾಗಿ ಗೋಚರಿಸುತ್ತವೆ. ಮನೆ ಮಹಿಳೆಯರಿಗೂ ಅಳಗುಳಿಮಣೆ, ಚೌಕಾಭಾರ ಆಟಗಳು ಆಕರ್ಷಕವಾಗಿದ್ದವು. ಕಂಪ್ಯೂಟರ್ ಹಾಗೂ ಮೊಬೈಲ್‌ನ ಅತ್ಯಧಿಕ ಉಪಯೋಗ/ ದುರುಪಯೋಗಗಳಿಂದ ಎಲ್ಲರ ಜ್ಞಾಪಕಶಕ್ತಿ ಯೋಚನಾಶಕ್ತಿ ಕುಂಠಿತವಾಗುತ್ತಿದೆ. ಹಿಂದೆ ಮನದಲ್ಲೇ ಮಾಡುತ್ತಿದ್ದ ಗುಣಾಕಾರ, ಭಾಗಾಕಾರಗಳಂತೂ ಈಗಿನ ಮಕ್ಕಳಲ್ಲಿ ಸಾಧ್ಯವಾಗುತ್ತಿಲ್ಲ. ಕಾರಣ ಸ್ಪಷ್ಟ. ಎಲ್ಲದಕ್ಕೂ ಗಣಕಯಂತ್ರ ಬೇಕು, ಮೆದುಳಿಗೆ ಕೆಲಸವೇ ಇಲ್ಲ. ಹೀಗಾಗಿ ಮಕ್ಕಳ ಅಭ್ಯುದಯ ಕುಂಠಿತವಾಗಿದೆ.

ಈಗಿನ ಪೀಳಿಗೆಯಲ್ಲಿ ಪುಸ್ತಕ, ಓದುವ ಅಭ್ಯಾಸ ನಶಿಸಿ ಹೋಗಿದೆ ಎನ್ನಬಹುದು. ಹಿಂದೆ ಇದನ್ನು ಒಂದು ಹವ್ಯಾಸ, ಯಜ್ಞದಂತೆ ಪಾಲಿಸುತ್ತಿದ್ದರು. ‘ದೇಶಸುತ್ತು, ಕೋಶ ಓದು’ ಎಂಬ ಗಾದೆಗೆ ಅನುಗುಣವಾಗಿ ಎಲ್ಲರೂ ಯಾವುದಾದರೂ ಒಂದು ಹವ್ಯಾಸವನ್ನು ಬೆಳೆಸಿಕೊಂಡಿದ್ದರು. ಇದರಲ್ಲಿ ಸಾಹಿತ್ಯ, ಜೀವನಚರಿತ್ರೆ, ಕಾದಂಬರಿ ಓದು ಮುಖ್ಯವಾಗಿದ್ದವು. ಈಗ ಇದ್ದರೂ ಕೆಲವರು ಇದನ್ನು ತಂತ್ರಾಂಶಗಳಲ್ಲಿ ಬರುವ ‘ಈ ಪುಸ್ತಕ’ ಅಥವಾ ‘ಕಿಂಡೆಲ್’ ಗಳಲ್ಲಿ ಓದುತ್ತಾರೆ. ಆದರೆ ಮುದ್ರಿತ ಪುಸ್ತಕವನ್ನೋದಿದಷ್ಟು ತೃಪ್ತಿ ಇದರಲ್ಲಿ ನಿಜಕ್ಕೂ ಸಿಗದು. ಇದು ಇಂದಿನ ಪೀಳಿಗೆಯ ಒಂದು ದುರಾದೃಷ್ಟಕರ ಬೆಳವಣಿಗೆ ಎಂದರೆ ತಪ್ಪಾಗಲಾರದು.

ಹಲವು ವರ್ಷಗಳ ಹಿಂದೆ ಪ್ರತಿ ಕುಟುಂಬಕ್ಕೂ ಒಬ್ಬ ವೈದ್ಯರಿದ್ದರು. ಕುಟುಂಬದ ಪ್ರತಿ ಸದಸ್ಯರ ಬಗ್ಗೆ ಆ ವೈದ್ಯರಿಗೆ ಎಲ್ಲಾ ಮಾಹಿತಿ ಇತ್ತು. ವೈದ್ಯರು ಕುಟುಂಬದ ಸದಸ್ಯರ ಅನಾರೋಗ್ಯವಾಗಿದ್ದಾಗ ಅವರ ಮನೆಗೆ ಭೇಟಿಕೊಟ್ಟು ಚಿಕಿತ್ಸೆ ನೀಡಿ, ಅವರು ಪೂರ್ಣ ಗುಣಮುಖರಾಗುವವರೆಗೂ ನಿಗಾ ಇಡುತ್ತಿದ್ದರು. ಈಗ ವೈದ್ಯರು ಮನೆಗೆ ಭೇಟಿ ಕೊಡುವ ಪದ್ಧತಿ ಪೂರ್ತಿ ಮಾಯವಾಗಿದೆ. ದೂರವಾಣಿ ಮೂಲಕ ಸಲಹೆ ಪಡೆದು ಔಷಧಿಗಳನ್ನು ಪಡೆಯುವ ‘ಟೆಲಿಮೆಡಿಸನ್’ ಎಂಬ ಹೊಸ ಪದ್ಧತಿ ಬಹಳ ಜನಪ್ರಿಯವಾಗಿದೆ. ವೈದ್ಯರ ಭೇಟಿಗೆ ಕೆಲವೊಮ್ಮೆ ತಿಂಗಳುಗಟ್ಟಲೇ ಕಾಯುವ ಪರಿಸ್ಥಿತಿ ಉದ್ಭವವಾಗಿದೆ. ವೈದ್ಯರ ಸೇವೆ ಬಹಳ ದುಬಾರಿ ಎನಿಸಿದೆ.

ಕೆಲದಶಕಗಳ ಹಿಂದೆ ನಮ್ಮ ಸ್ನೇಹಿತರು, ಬಂಧುಗಳನ್ನು ಭೇಟಿಯಾಗಲು ಯಾವಾಗ ಬೇಕಾದರೂ ಹೋಗಿ ಬರಬಹುದಾಗಿತ್ತು. ಈಗ ಹಾಗಿಲ್ಲ. ದೂರವಾಣಿಯ ಮೂಲಕ ಅನುಮತಿ ಪಡೆದೇ ಹೋಗಬೇಕು. ಈ ಪದ್ಧತಿ ಪಾಶ್ಚಾತ್ಯ ದೇಶಗಳಲ್ಲಿ ಚಿರಪರಿಚಿತ. ಈಗ ಭಾರತದಲ್ಲೂ ಎಲ್ಲಾ ಕಡೆ ಈ ಪದ್ಧತಿ ಅನಿಷ್ಟಾನಗೊಂಡಿದೆ. ಇದೊಂದು ನಿಜಕ್ಕೂ ಒಂದು ಕಿರಿಕಿರಿ ಎಂದು ಹಿಂದಿನ ಪೀಳಿಗೆಯವರಿಗೆ ಅನಿಸುವುದರಲ್ಲಿ ಸಂದೇಹವೇ ಇಲ್ಲ.

ಹಲವು ದಶಕಗಳ ಹಿಂದೆ ಕಾಗದ ಬರೆಯುವುದು, ಒಂದು ಹವ್ಯಾಸವಾಗಿತ್ತು. ಅಂಚೆಪೇದೆಗೆ ಮನೆಯಲ್ಲಿ ಕಾಯುತ್ತಿದ್ದುದು ಒಂದು ಸಾಮಾನ್ಯ ದೃಶ್ಯವಾಗಿತ್ತು ಮತ್ತು ಕುತೂಹಲಕಾರಿಯಾಗಿತ್ತು. ಹಾಗೆಯೇ ತಂತಿ ಹಾಗೂ ಶುಭಾಶಯಗಳ ವಿಲೇವಾರಿ ಈಗ ಸಂಪೂರ್ಣ ಸ್ಥಗಿತವಾಗಿದೆ. ಇದು ನಿಜಕ್ಕೂ ಒಂದು ಶೋಚನೀಯ ವಿಷಯ. ಅಂಚೆಮೂಲಕ ಬಂದ ಕಾಗದಗಳನ್ನು ಓದುವುದೇ ಒಂದು ವಿಶಿಷ್ಟ ಅನುಭವ. ಇದನ್ನು ಅನುಭವಿಸಿಯೇ ಅರಿಯಬೇಕು. ಈಗ ಏನಿದ್ದರೂ ಮೊಬೈಲ್‌ನಿಂದ ವಾಟ್ಸಪ್, ಇನ್ಸ್ಟಾಗ್ರಾಮ್ ಗಳಿಂದ ಮಾಡಿ ಮುಗಿಸುತ್ತಾರೆ.

ಈಗಿನ ಒಂದು ಬೆಳವಣಿಗೆ ನಿಜಕ್ಕೂ ಆಘಾತಕಾರಿ. ಆಧುನಿಕ ಜೀವನದಲ್ಲಿ ನವವಿವಾಹಿತರು ಒಂದೇ ಮಗು ನೀತಿಯಿಂದ ಹಲವಾರು ಸಮಸ್ಯೆಗಳು ಉದ್ಭವವಾಗುತ್ತಿವೆ. ಪತಿಪತ್ನಿಯರೂ ಹೆಚ್ಚಿನ ಸಂದರ್ಭದಲ್ಲಿ ಕೆಲಸಕ್ಕೆ ಹೋಗುವುದರಿಂದ ಮಗುವನ್ನು ‘ಬೇಬಿ ಸಿಟ್ಟಿಂಗ್’ ಎಂಬ ಅಜ್ಞಾತ ಸ್ಥಳದಲ್ಲಿ ಯಾರದೋ ಸುಪರ್ದಿಗೆ ಬಿಟ್ಟು ಹೋಗುತ್ತಾರೆ. ಇದರಿಂದ ಮಕ್ಕಳಿಗೆ ತಂದೆ ತಾಯಿಯರ ವಾತ್ಸಲ್ಯ, ಒಡನಾಟ, ವಂಚನೆಯಾಗಿ ಅವರ ವರ್ತನೆ, ನಡತೆಗಳಲ್ಲಿ ಬಹಳ ಏರುಪೇರು ಕಾಣುವುದನ್ನು ನೋಡುತ್ತಿದ್ದೇವೆ. ಅಲ್ಲದೆ ಒಂದೇ ಮಗು ಇದ್ದಕಡೆ ಅದು ಬೆಳೆದಾಗ ಅದರಲ್ಲಿ ಸ್ವಾರ್ಥತೆ, ಅಸೂಯೆ, ಹಟಮಾರಿತನ, ಇವುಗಳು ಬಹಳ ಇರುವುದನ್ನು ಕಾಣಬಹುದು. ಹಿಂದೆ ತಂದೆಯ ಭುಜದ ಮೇಲೆ ಮಗು ಜಾತ್ರೆಯನ್ನು ವೀಕ್ಷಿಸಲು ಹೋಗುತ್ತಿರುವ ದೃಶ್ಯ ನಿಜಕ್ಕೂ ರೋಮಾಂಚನಕಾರಿ. ಇವೆಲ್ಲ ಈಗ ಕನಸಿನಂತೆ ಕಾಣುತ್ತದೆ.

ಇನ್ನು ಕಾಲಗರ್ಭದಲ್ಲಿ ಸೇರಿರುವ ಕೆಲವು ವಸ್ತುಗಳು ನಿಜಕ್ಕೂ ಬೇಸರ ತರಿಸುವಂಥದ್ದು. ಗಾಂಧೀಜಿಯವರ ನೆಚ್ಚಿನ ಚರಕ, ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಸ್ವದೇಶಿ ವಸ್ತ್ರದ ಉತ್ಪಾದನೆಗೆ ಈಗ ಕಣ್ಮರೆಯಾಗಿದೆ. ಒಂದು ಕಾಲದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ಕರುಣಿಸಿದ ಟೈಪ್‌ರೈಟರ್, 1955 ರಿಂದ ಪ್ರಸಿದ್ಧಿಯಾಗಿತ್ತು. ಈಗ ಅದನ್ನು ನೋಡುವುದೇ ದುರ್ಲಭ. ರೋಟರಿ ಫೋನ್‌ಗಳು ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿತ್ತು. ಎಲ್ಲಾ ಸಿನಿಮಾಗಳಲ್ಲೂ ಇದನ್ನು ತಿರುಗಿಸುವ ಒಂದು ದೃಶ್ಯ ಇದ್ದೇ ಇರುತ್ತಿತ್ತು. ಈಗ ಹೇಳಹೆಸರಿಲ್ಲದಾಗಿದೆ. ಶಾಲೆಗಳಲ್ಲಿ ಮಕ್ಕಳಿಗೆ ಶಾಯಿಯಿಂದ ಬರೆಸುವ ಪರಿಪಾಠವಿತ್ತು. ಇದರಿಂದ ಅಕ್ಷರಗಳು ದುಂಡಾಗಿ ರೂಪುಗೊಳ್ಳುತ್ತಿತ್ತು. ಸ್ವಾನ್, ಸುಲೇಖ, ಬ್ರಿಲ್ ಎಂಬ ಶಾಯಿಗಳು ಬಹಳ ಪ್ರಸಿದ್ಧಿಯಾಗಿದ್ದವು. ಕ್ರಮೇಣ ಇದು ಅದೃಶ್ಯವಾಗಿ ಈಗ ಬಾಲ್‌ಪೆನ್‌ಗಳದ್ದೇ ಸಾಮ್ರಾಜ್ಯವಾಗಿದೆ. ಮನಸ್ಸಿಗೆ ಬಹಳ ಖೇದ ತರುವಂಥಹ ಒಂದು ವಸ್ತು ಅದೃಶ್ಯವಾದದ್ದು ಎಂದರೆ ರೇಡಿಯೋ ಮತ್ತು ಟ್ರಾನ್ಸಿಸ್ಟರ್. ಬೆಳಗಿನ ಜಾವದ ಸುಪ್ರಭಾತದಿಂದ ರಾತ್ರಿಯ ಬಿನಾಕಾ ಗೀತ್‌ಮಾಲಾ ವರೆಗಿನ ಕಾರ್‍ಯಕ್ರಮಗಳು ನಿಜಕ್ಕೂ ದಿನಪೂರ್ತಿ ಆಹ್ಲಾದ ನೀಡುವಂತಿತ್ತು. ಈಗಲೂ ಇದೆ ಆದರೆ ಅಂದಿನ ಆ ರೇಡಿಯೋವಿನ ಆಕರ್ಷಣೆ ಕಾಣುತ್ತಿಲ್ಲ. ಪಾರ್ಕ್‌ಗಳಲ್ಲೂ ಈ ರೇಡಿಯೋವಿನ ಧ್ವನಿ ಸಂಜೆವೇಳೆ ಮನಕ್ಕೆ ಮುದನೀಡುತ್ತಿತ್ತು. ಹಾಗೆಯೇ ಗ್ರಾಮೋಫೋನ್‌ಗಳು ಈಗ ಕಾಲಗರ್ಭವನ್ನು ಸೇರಿದೆ. ಇವೆಲ್ಲ ಈಗ ನೆನಪು ಮಾತ್ರ.

ಒಟ್ಟಿನಲ್ಲಿ ಕಾಲಗರ್ಭದಲ್ಲಿ ಕಾಣೆಯಾದ ಪದ್ಧತಿಗಳು, ವಸ್ತುಗಳು, ನಮ್ಮ ನೆನಪಿನ ಸುಳಿಯಲ್ಲಿ ಆಗಾಗ್ಗೆ ಬದು ಮುದನೀಡುತ್ತವೆ. ಇವೆಲ್ಲ ಪುನಃ ಒಂದೊಂದಾಗಿ ಬರುವ ದಿನ ದೂರವಿಲ್ಲ ಎನಿಸುತ್ತದೆ. ಉದಾಹರಣೆಗೆ ಈಗಾಗಲೇ ಗಾಣದ ಎಣ್ಣೆ ಮಾರುಕಟ್ಟೆಗೆ ಬಂದಿದೆ ದೇಶೀ ಖಾದ್ಯಗಳ ಖಾನಾವಳಿಗಳು ಒಂದೊಂದು ತಲೆ ಎತ್ತಿವೆ. ಮಕ್ಕಳಿಗೆ ಮೆದುಳಿನ ಬೆಳವಣಿಗೆಗೆ ಅನುಕೂಲಕರವಾದ ಅಬಾಕಸ್, ಬ್ರೈನ್‌ಜಿಮ್ ಎಂಬ ಶಾಲೆಗಳು ಪ್ರಾರಂಭವಾಗಿವೆ. ದಸರಾ ಇನ್ನಿತರ ಗ್ರಾಮೀಣ ಜಾತ್ರೆಗಳಲ್ಲಿ ಗ್ರಾಮೀಣ ಸಾಂಪ್ರದಾಯಿಕ ಆಟಗಳ ಪಂದ್ಯ, ಸ್ಪರ್ಧೆ ಏರ್ಪಡಿಸುತ್ತಿದ್ದಾರೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆ. ಮೊದಲು ಬೈಸಿಕಲ್‌ಗಳು ಬಹಳ ಜನಪ್ರಿಯವಾಗಿತ್ತು. ಮಧ್ಯೆ ಇದರ ಬಳಕೆ ಕಮ್ಮಿಯಾಗಿ ಈಗ ಮತ್ತೆ ಅದು ಪುನಃ ಬಹಳ ಜನಪ್ರಿಯವಾಗತೊಡಗಿದೆ. ನಗರದ ಹಲವಾರು ಕಡೆ ಬೈಸಿಕಲ್‌ಗಳ ನಿಲ್ದಾಣಗಳಾಗಿ ಯುವಕರು ಅದನ್ನು ಬಹಳ ಇಷ್ಟಪಡುತ್ತಿದ್ದಾರೆ ಇದು ನಿಜಕ್ಕೂ ಒಳ್ಳೆಯ ಒಂದು ಸುದ್ದಿ. ಹೀಗೆ ಎಲ್ಲಾ ಪದ್ಧತಿಗಳೂ, ಖಾದ್ಯಗಳೂ, ಆಟಗಳೂ ಪುನಃ ಮರುಸ್ಥಾಪನೆಗೊಳ್ಳಲಿ ಎಂದು ಆಶಿಸೋಣ. ನೀವೇನಂತೀರಿ?

ಕೆ. ರಮೇಶ್

8 Responses

  1. ನಯನ ಬಜಕೂಡ್ಲು says:

    ತಿರುಗಿ ಬರುತಿದೆ ಮತ್ತೆ ಅದೇ ಕಾಲ. ಚೆನ್ನಾಗಿದೆ ಸರ್ ಲೇಖನ

  2. ವಿದ್ಯಾ says:

    ಖಂಡಿತಾ,,,ನೀವು ಬರೆದಿರುವುದು ವಾಸ್ಸವತೆಯ ಕನ್ನಡಿ,
    ಮರಳಿ ಬರಲಿ ಆ ಕಾಲ ಎಂದು ಆಶಿಸುತ್ತೇನೆ

  3. ನಾಗರತ್ನ ಬಿ. ಅರ್. says:

    ಕಳೆದುಹೋದ ದೃಶ್ಯಗಳ ಮಜಲುಗಳನ್ನು ಸುವಿಸ್ತಾರವಾಗಿ ವಿವರಿಸಿರುವ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ ಓದಿಸಿಕೊಂಡು ಹೋಯಿತು ಜೊತೆಗೆ ಮತ್ತೆ ಆ ದೃಶ್ಯ ಗಳು ಮರುಕಳಿಸಬಹುದೆಂಬ ಆಶಾಭಾವನೆ ಹೆಚ್ಚು ಮುದತಂದಿತು.ಧನ್ಯವಾದಗಳು ಸಾರ್

  4. Padma Anand says:

    History repeats, ಅನ್ನುವಂತೆ ನಾವುಗಳು ಕಳೆದುಕೊಂಡಿರುವ ಒಳ್ಳೆಯ ಪದ್ದತಿಯು ಆದಷ್ಟು ಬೇಗ ಹಿಂದಿರುಗಲಿ. ಸುಂದರ ವೈಚಾರಿಕ ಲೇಖನ.

  5. . ಶಂಕರಿ ಶರ್ಮ says:

    ಕಾಲಚಕ್ರ ತಿರುಗಿ, ಒಂದೊಮ್ಮೆ ಪುನ: ಮರಳಿ ಅದೇ ಸ್ಥಾನಕ್ಕೆ ಬರುವಂತೆಯೇ , ಹಳೆಯದು ಹೊಸ ಫ್ಯಾಷನ್ ಆಗಿ ಮರಳಿ ಬರುವುದು ಲೋಕದ ನಿಯಮ… ಬದಲಾವಣೆ ಜಗದ ನಿಯಮ…ಆದರೆ ಅದಕ್ಕೆ ಒಗ್ಗಿಕೊಳ್ಳುವುದು ಮಾತ್ರ ಹಿರಿಯರಿಗೆ ಕಷ್ಟ. ಕೆಲವನ್ನು ಕಳಕೊಂಡ ನೋವಂತೂ ಕಾಡದೆ ಬಿಡದು! ಸೊಗಾಸಾದ ಲೇಖನ ಸರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: