ಅಪ್ಪಅಂದರೆ ಅತೀತ
ಮಾತು ಮಾತಿಗೆ ಅಮ್ಮಾ ಅನ್ನೋ ಅಭ್ಯಾಸ ಹುಟ್ಟಿನಿಂದಲೇ ಬಂದಿದೆ. ಅಮ್ಮಅಡುಗೆ ಮಾಡುತ್ತಿದ್ದರೆ ಕಟ್ಟೆ ಮೇಲೆ ಕೂತು ಹಾಳು ಹರಟೆ ಹೊಡೆಯೋ ಅಭ್ಯಾಸ! ಅಮ್ಮನೂ ಅಷ್ಟೆ ಊರ ಪುರಾಣ, ಸ್ಕೂಲಿನ ವಿಚಾರ, ಮದುವೆ ವಿಚಾರ ಹೀಗೆ ಹೇಳುವ ವಿಕಿಪೀಡಿಯಾ ಅಂದರೂ ತಪ್ಪಿಲ್ಲ .ಇದೆಲ್ಲದರ ನಡುವೆ ‘ಅಪ್ಪ’ ಅನ್ನೋ ಜೀವ ಅಲ್ಲೇ ಸುತ್ತುತ್ತಾ ಇರತ್ತೆ, ಅಮ್ಮಾನೆ ಬೇರೆ ಅಪ್ಪಾನೆ ಬೇರೆ! ಅಮ್ಮನ ಜೊತೆ ಇದ್ದ ಸಲುಗೆ ಅಪ್ಪನ ಮುಂದೆ ಸಲಾಂ ಹೊಡೆಯುತ್ತೆ ಅಂದರೆ ಅಪ್ಪ ವಿಷಯಗಳಿಗೆ ಸೀಮಿತ. ಅಪ್ಪನ ಹತ್ತಿರ ಏನಿದ್ದರೂ ಸ್ಕೂಲ್ ಫೀಸು, ಬುಕ್ಸ್ಗೆ ದುಡ್ಡು, ಸ್ಕೂಲಿನ ಪ್ರವಾಸ ಹೀಗೆ ವಿಷಯಗಳು -ಇದು ಬಹುತೇಕ ಎಲ್ಲರಿಗೂ ಅನ್ವಯವಾಗುವಂತಹದು.
ಸ್ವಲ್ಪ ಬಾಲ್ಯದ ಕಡೆಗೆ ಹಾಗೇ ಹೋಗಿ ಬರೋಣ .ನಾವೆಲ್ಲ ಅಪ್ಪನಿಗೆ ಹತ್ತಿರವಿರುವ ಸಮಯದ ಕಡೆ ಅಪ್ಪಾ ಪೇಟೆ ಕಡೆ ಹೋಗಿ ಬಂದರು ಅಂದರೆ ಕೋಟಿನ ತುಂಬಾ ಪ್ಯಾರಿಸ್ ಚಾಕ್ಲೇಟ್, ಗ್ಲೂಕೋಸ್ ಬಿಸ್ಕತ್ತು ಗ್ಯಾರಂಟಿ. ಅದನ್ನು ಇಸಕೊಳ್ಳೋಕೆ ಅಂತ ಬಸ್ಸ್ಟಾಪ್ ಹತ್ತಿರಕ್ಕೇ ನಮ್ಮ ಓಟ. ಆದರೆ ಅಪ್ಪ ಉಹೂ… ಮನೆಗೆ ಬಂದ ಮೇಲೇನೇ ಎಲ್ಲರನ್ನೂ ಕರೆದು ಒಟ್ಟಿಗೆ ನಿಲ್ಲಿಸಿ ಕೊಡುವಾಗ ಅದೇನೋ ಖುಷಿ! ಸ್ವಲ್ಪ ದೊಡ್ಡವರಾದ ಮೇಲೆ ಪೋಸ್ಟ್ ಆಫೀಸು, ಬ್ಯಾಂಕ್ಗೆ ಹೋಗುವಾಗ ಜೊತೇಲೇ ಕರೆದುಕೊಂಡು ಹೋಗಿ ಫಾರ್ಮ ತುಂಬುವ ರೀತಿ ಹೇಳಿಕೊಟ್ಟಾಗ ಜಗತ್ತನ್ನೇ ಗೆದ್ದಷ್ಟು ಸಂಭ್ರಮ. ಗೆಳೆಯರ ಮುಂದೆಲ್ಲ ಜಂಭಕೊಚ್ಚಿ ಅಪ್ಪನ್ನ ಹೀರೋ ಮಾಡಿದ್ದು ಮಾಡಿದ್ದೇ. ಬಾಲ್ಯದ ಮೂರು ಗಾಲಿ ಸೈಕಲಿಂದ ಎರಡು ಗಾಲಿ ಸೈಕಲ್ ಅಪ್ಪ ಕೊಡಿಸಿದಾಗ ಏರೋಪ್ಲೇನ್ ಹತ್ತಿದಷ್ಟು ಸಂತೋಷ, ಬರೆಯೋದಕ್ಕೆ ಹೀರೋ ಪೆನ್ನು ತಂದುಕೊಟ್ಟ ಸೂಪರ್ ಹೀರೋಅಪ್ಪ! ಬರವಣಿಗೆ ದುಂಡಗಾಗಬೇಕು ಅಂತ ಕಾಪಿರೈಟಿಂಗ್ ಪುಸ್ತಕ ತಂದು ತಿದ್ದಿ ತೀಡಿ ಬರೆಸೋ ಅಪ್ಪ. ದೊಡ್ಡವರಾಗಿ ಕಾಲೇಜು ಮೆಟ್ಟಿಲು ಹತ್ತುವಾಗ ಅಪ್ಪನ ಸಂಭ್ರಮ ಹೇಳತೀರದು. ಎಲ್ಲ ಕಡೆಗೂ ಹೋಗಿ, ತನ್ನ ಗೆಳೆಯರನ್ನೆಲ್ಲ ಕೇಳಿ ಯಾವುದು ಒಳ್ಳೆ ಕಾಲೇಜು ಅಂತ ಅಭಿಪ್ರಾಯ ಸಂಗ್ರಹಣೆ ಮಾಡಿ ಸೇರಿಸೋ ಅಪ್ಪ ಫೀಸಿನ ಬಗ್ಗೆ ಏನೋ ಏರ್ಪಾಡು ಮಾಡಿ ಮುಖದಲ್ಲಿ ನಗೆ ಚೆಲ್ಲುತ್ತಾ ಏನಾದರೂ ದುಡ್ಡು-ಗಿಡ್ಡು ಬೇಕಾದರೆ ಕಾಗದ ಬರಿ, ಗೆಳೆಯರ ಹತ್ತಿರ ಸಾಲ ಮಾಡಬೇಡ, ಆದರೆ ಆ ದುಡ್ಡನ್ನ ಯಾಕೆ ಖರ್ಚು ಮಾಡಿದೆ ಅಂತ ಬರೆದಿಡಬೇಕು ಅಂತ ಕೋಟಿನ ಜೇಬಿಗೆ ಕೈಹಾಕಿ ಪುಟ್ಟ ಬುಕ್ಕನ್ನು ಕೊಟ್ಟಾಗ ಅಪ್ಪನ ಮೇಲೆ ಒಂದು ಕ್ಷಣ ಸಿಟ್ಟು ಬಂದಿದ್ದೂ ಉಂಟು ಏನಪ್ಪಾ ಕೊಡೋ ಕಾಸಿಗೆ ಲೆಕ್ಕ ಬೇರೆ ಅಂತ. ಮನೆಯಲ್ಲಿ ಅಪ್ಪನದೇ ಕೊನೇ ನಿರ್ಧಾರ, ಆಗೆಲ್ಲ ನಮಗೆ ಅಪ್ಪ ಹಿಟ್ಲರ್ ತರಹ! ತನ್ನೆಲ್ಲ ಸಂಪಾದನೆಯನ್ನು ಲೆಕ್ಕಾಚಾರವಾಗಿ ಖರ್ಚು ಮಾಡುವ ಅಪ್ಪ ಹೂಡಿಕೆ ಮಾಡುವುದು ಮರೆಯುತ್ತಿರಲಿಲ್ಲ. ಹುಟ್ಟಿದ ಹಬ್ಬಕ್ಕೆತರಹೇವಾರಿ ಉಡುಗೊರೆ, ಹಬ್ಬಕ್ಕೆ ಹೊಸ ಬಟ್ಟೆ, ದೀಪಾವಳಿಗೆ ಪಟಾಕಿ ಹೀಗೆ ಒಂದೇ-ಎರಡೇ ಎಲ್ಲವನ್ನೂಅಚ್ಚುಕಟ್ಟಾಗಿ ನಿಭಾಯಿಸುವ ಅಪ್ಪಒಂತರಾ ಹಣಕಾಸು ಮಂತ್ರಿ! ಇಷ್ಟರ ಮಧ್ಯೆ ಮನೆಗೆ ಬರೋರು ಹೋಗೋರು ಎಲ್ಲವನ್ನೂ ಸರಿತೂಗಿಸೋ ಅಪ್ಪ ಆಗಿನ ಕಾಲಕ್ಕೆ ಯಾವ ಮ್ಯಾನೇಜ್ಮೆಂಟ್ ಕೋರ್ಸು ಮಾಡದ ದೊಡ್ಡ ಅಡ್ಮಿನ್ಸ್ಟ್ರೇಟರ್!
ಅಪ್ಪನ ಹೆಗಲೇರಿಕುಣಿದ ಬಾಲ್ಯದ ದಿನಗಳು ಕಳೆದು, ಕಾಲೇಜು ಮೆಟ್ಟಿಲು ಹತ್ತಿದ ಮಕ್ಕಳು ಅಪ್ಪನಿಗೆ ಗೆಳೆಯರಂತಾದೆವು. ಕಾಲೇಜಲ್ಲಿ ನಡೆದ ಘಟನೆ ಬಗ್ಗೆ ಕೇಳುತ್ತಾ ತನ್ನ ಓದಿನ ದಿನಗಳ ಬಗ್ಗೆ ಹೇಳುತ್ತಾ ಬಂದ ಅಪ್ಪಆತ್ಮೀಯ ಗೆಳೆಯನಾಗುತ್ತಾನೆ .ಆಗ ಅಮ್ಮಅಡುಗೆ ಮನೆಯಿಂದಲೇ ಅಪ್ಪ-ಮಕ್ಕಳು, ಹೀಗೆ ಹರಟತಾ ಇರ್ತೀರೋ ಊಟಕ್ಕೇನಾದರು ಬರ್ತೀರೋ ಅನ್ನೋವರೆಗೂ ಮುಂದುವರೆಯುತ್ತದೆ. ಕಾಲೇಜು ಮುಗಿದು ಬೆಳೆದು ನಿಂತ ಮಗಳ ಮದುವೆ ಚಿಂತೆ ಅಪ್ಪನಿಗೆ. ಗಂಡೂ ನೋಡಿದ್ದಾಯ್ತು ಅನ್ನೋವಾಗ ಬೀಗರ ಯೋಗ್ಯತೆಗೆ ತಕ್ಕಂತೆ ಮದುವೆ ಮಾಡಬೇಕೆಂಬ ಧಾವಂತ! ಏನನ್ನೂ ಹೊರಗೆ ತೋರಿಸದ ಅಪ್ಪಎಲ್ಲವನ್ನೂ ಅಚ್ಚುಕಟ್ಟಾಗಿ ಹೊಂದಿಸಿದ. ಮಗಳನ್ನ ಗಂಡನ ಮನೆಗೆ ಕಳುಹಿಸುವಾಗ ಅಪ್ಪ ಪುಟ್ಟ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅಳುತ್ತಾನೆ. ಮಗಳು ಗಂಡನ ಮನೆಗೆ ಹೋದಮೇಲೂ ಸಹ ಒಂದೆರಡು ಸಾರಿ ಹೋಗಿ ಅವಳು ಅಲ್ಲಿ ಸುಖವಾಗಿದ್ದಾಳೋ ಇಲ್ಲವೋ ಎಂದು ತಿಳಿದುಕೊಳ್ಳಬಯಸುವ ಅಪ್ಪ ಒಬ್ಬ ಪತ್ತೇದಾರ!
ಹೀಗೆ ಅಪ್ಪನ ಕೆಲಸಗಳು ಸಾಲು ಸಾಲು ಅವನ ಕರ್ತವ್ಯದ ಪರಿ ಅಪಾರ! ಇಂತಹ ಅಪ್ಪಕಠಿಣ ಹೇಗಾಗುತ್ತಾನೆ? ನಾವಿಂದು ಓದು-ಬರಹಕಲಿತಿದ್ದೇವೆ, ಜೀವನದಲ್ಲಿ ಶಿಸ್ತು, ಜಾಣತನ ಕಲಿತಿದ್ದೇವೆ ಎಂದರೆ ಅದು ಅಪ್ಪನ ಉಡುಗೊರೆ. ಯಾವೊಂದು ಕಷ್ಟವನ್ನೂ ಮಕ್ಕಳೆದುರು ಹೇಳಿಕೊಳ್ಳದೆ ತನ್ನೆಲ್ಲ ನೋವನ್ನು ಕೆಲವೊಮ್ಮೆ ಅಮ್ಮನಿಗೂ ಕೂಡ ಹೇಳದೆ ನುಂಗಿಕೊಳ್ಳುವ ಅಪ್ಪನ ಮನಸ್ಥಿತಿ ಹೇಗಿರಬೇಡ … ? ಜೀವನಕ್ಕೊಂದು ಭದ್ರ ಬುನಾದಿಯನ್ನು ಹಾಕಿಕೊಟ್ಟ ಅಪ್ಪ ಎಂದೆಂದಿಗೂ ಸೂಪರ್ ಹೀರೋ. ಅವನ ಪ್ರೀತಿ ಸಾಗರದಷ್ಟು ಆಳ, ಆಕಾಶದಷ್ಟು ಅಗಲ, ಆ ಪ್ರೀತಿಯ ತೋಳಿನಾಸೆರೆಯ ನೆನಪು ಸದಾ ಹಸಿರು.
ಅಪ್ಪಾ! ನೀನು ಇಂದು ನಮ್ಮೊಂದಿಗಿಲ್ಲ ಆದರೆ ನೀನು ಹಾಕಿಕೊಟ್ಟ ಆ ಶಿಸ್ತಿನ ದಾರಿ ನಮಗೆ ಸದಾ ನೀನೇ ಜೊತೆಯಿರುವಂತಿದೆ. ನೀನಂದು ನಮ್ಮನ್ನು ಲೆಕ್ಕಾಚಾರವಾಗಿ ಬೆಳೆಸದೇ ಇದ್ದಿದ್ದಿರೆ ಇಂದು ನಮ್ಮ ಬದುಕು ತನ್ನ ಲೆಕ್ಕವನ್ನೇ ಕಳೆದುಕೊಳ್ಳುತ್ತಿತ್ತು. ತುಳಿದಷ್ಟೂ ಮತ್ತೆ-ಮತ್ತೆ ಬೆಳೆಯುವ ಗರಿಕೆಯ ಹುಲ್ಲಿನಂತಾಗಬೇಕು ಎಂಬ ನಿನ್ನ ಮಾತು ಇನ್ನೂ ನನ್ನ ಕಿವಿಯಲ್ಲಿ ಗುಯ್ಗುಟ್ಟುತ್ತಿದೆ.
ಕರಜೋಡಿಸುವೆ ಅಪ್ಪಾ ನಿನಗೆ
ದೇವರೆಂದಲ್ಲ ಅದಕೂ ಮಿಗಿಲೆನಿಸಿದ್ದಕ್ಕೆ,
ನನಗೆ ಜನ್ಮ ಕೊಟ್ಟವನು ಎಂದಲ್ಲ
ಈ ಜಗವ ನೋಡುವ ಪರಿ ಕಲಿಸಿದ್ದಕ್ಕೆ
ಸುಂದರ ನಾಳೆಗಳ ಕಟ್ಟಿ ಕೊಟ್ಟಿದ್ದಕ್ಕೆ,
ಅಪ್ಪನ ಪ್ರೀತಿಗೆಣೆಯಿಲ್ಲ ಅಪ್ಪಾಎಂದರೆ ‘ಅತೀತ’.
–ಡಾ. ಸುಧಾ ಹೆಚ್.ಎಸ್., ಧಾರವಾಡ.
ಎಲ್ಲರೂ ಅಮ್ಮನ ಬಗ್ಗೆ ಬರೆಯುವಾಗ ಅಪ್ಪನ ಪರಿಚಯ ಮಾಡಿಕೊಟ್ಟಿರುವ ಬಗೆ ಅನನ್ಯ
ವಾವ್ ಅಪ್ಪನ ಬಗ್ಗೆ ಆಪ್ತವಾದ ಬರವಣಿಗೆ.ಅದರೊಂದಿಗೆ ನನಗೂ ಅಪ್ಪನ ನೆನಪು ಮರುಕಳಿಸಲು ಸಹಾಯ ಮಾಡಿ ದ ನಿಮಗೆ ಧನ್ಯವಾದಗಳು ಮೇಡಂ.
ಆಪ್ತ ಬರಹ
ನಮ್ಮಪ್ಪನ ಬಗೆಯೇ ಬರೆದಂತಿದೆ ಮೇಡಂ. ಧನ್ಯವಾದಗಳು.
ಆಪ್ತ ಬರಹ. ಇಷ್ಟವಾಯಿತು.
ಅಪ್ಪನ ಬಗ್ಗೆ ಅಪರೂಪದ ಆಪ್ತ ಬರಹ. ಬಹಳ ಖುಶಿಯಾಯ್ತು….ಎಲ್ಲರನ್ನೂ ಬಾಲ್ಯದತ್ತ ಒಯ್ದಿರಿ..ಧನ್ಯವಾದಗಳು.
ಅಪ್ಪನ ಕುರಿತಾದ ಆಪ್ಯಾಮಾನವಾದ ಲೇಖನ ಮನದಲ್ಲಿ ಬೆಚ್ಚಗೆ ಕುಳಿತಿದ್ದ ಅಪ್ಪನ ನೆನಪುಗಳು ಕಣ್ಣಮುಂದೆ ಬಂದಂತಾಯಿತು