ಜೈ ಬದರಿವಿಶಾಲ್
ಕಳೆದ ಆಗಸ್ಟ್ 2019 ರಲ್ಲಿ ಹರಿದ್ವಾರ, ರಿಷಿಕೇಶ, ಮತ್ತು ಬದರಿ, ಕೇದಾರಗಳನ್ನು ದರ್ಶಿಸಿದೆವು. ಕೇದಾರನಾಥದಿಂದ ಬದರೀನಾಥಕ್ಕೆ ಬೆಳಗಿನ ಉಪಾಹಾರ ಮುಗಿಸಿ ಹೊರಟೆವು. ಹಿಮಾಲಯ ಪರ್ವತಶ್ರೇಣಿ ಬಹಳ ಮನಮೋಹಕ. ಕತ್ತೆತ್ತಿಯೇ ನೋಡಬೇಕು. ಪರ್ವತಗಳ ಮೇಲೆಯೇ ಕೇದಾರನಾಥ ಮತ್ತು ಬದರೀನಾಥದ ದೇವಾಲಯಗಳು ಇರುವುದು. ಪರ್ವತಗಳನ್ನು ಸುತ್ತಿಕೊಂಡು ಹೋಗುವ ಹಾದಿ ಮತ್ತು ರಸ್ತೆಯ ಪಕ್ಕದಲ್ಲೇ ಹರಿಯುವ ನದಿ ನಿಮ್ಮೊಡನೆ ಯಾವಾಗಲೂ ಇರುತ್ತದೆ. ಅದು ಗಂಗೆ ಆಗಿರಬಹುದು ಅಥವಾ ಅವಳನ್ನು ಸೇರುವ ಉಪನದಿಗಳಾದ ಮಂದಾಕಿನಿ, ಭಾಗೀರಥಿ, ಅಲಕನಂದ ಅಥವಾ ಇನ್ಯಾವುದಾದರೂ ಇರಬಹುದು. ಎತ್ತರಕ್ಕೆ ಬೆಳೆದ ಎಲೆ ಉದುರದ ನಿತ್ಯಹರಿದ್ವರ್ಣದ ಕಾಡು ಮತ್ತು ದೇವದಾರು ಮರಗಳು ಮತ್ತು ಇತರ ಕೋನಿಫೆರಸ್ ಮರಗಳು ಕಾಣುತ್ತವೆ. ಹಿಮಾಲಯದ ಶ್ರೇಣಿಗಳು ಸುಂದರ ಹಾಗೆಯೇ ರುದ್ರವಾಗಿಯೂ ಇರುತ್ತವೆ. ಹಿಮಾಲಯದ ಮಡಿಲು ಬಹಳ ವಿಶಿಷ್ಟವಾದ ಅನುಭವವನ್ನು ನೀಡುತ್ತದೆ. ರುದ್ರ ರಮಣೀಯ ಎನ್ನಬಹುದು. ಇಲ್ಲಿನ ಪರ್ವತಗಳಲ್ಲಿ ಭೂಕುಸಿತ ಸಾಮಾನ್ಯ. ರಸ್ತೆಗೆ ಬಂಡೆಕಲ್ಲುಗಳು ಬೀಳುತ್ತವೆ. ಆನೆಗಿಂತ ದೊಡ್ಡದೂ ಇರಬಹುದು ಅಥವಾ ಚಿಕ್ಕ ಕಲ್ಲೂ ಇರಬಹುದು. ಆಗಾಗ ಅಲ್ಲಲ್ಲೇ ದಾರಿ ಬಂದಾಗುತ್ತದೆ. ಆದರೆ ಗಡಿ ಪೋಲೀಸರು ಇವನ್ನು ತೆಗೆದು ದಾರಿ ಮಾಡಿಕೊಡುತ್ತಾರೆ. ಸಾಮಾನ್ಯವಾಗಿ ಯಾರ ಮೇಲೂ ಬೀಳುವುದಿಲ್ಲ. ಅಪರೂಪಕ್ಕೆ ಹಾಗೆ ಆಗಬಹುದು. ಅಲ್ಲಲ್ಲೇ ದಾರಿಯನ್ನು ತೆರವುಗೊಳಿಸಲು ಜೆಸಿಬಿ ಯಂತ್ರಗಳು ಇವೆ.
ನಾವು ಪ್ರಯಾಣಿಸುವ ಎರಡು ಮೂರು ವಾರಗಳ ಹಿಂದೆ ಜೋಷಿಮಠದ ಹತ್ತಿರ ದೊಡ್ಡ ಬೆಟ್ಟ ಕುಸಿದಿತ್ತು. ಒಂದು ವಾಹನದ ಮೇಲೆಯೇ ಕುಸಿದು ಕೆಲವರು ಮೃತಪಟ್ಟಿದ್ದರು. ನಾವು ಅಲ್ಲಿಗೆ ಹೋದ ಸಮಯದಲ್ಲಿ ಆಗಾಗ ಸ್ವಲ್ಪ ಮಳೆ ಬರುತ್ತಿತ್ತು. ಆದ್ದರಿಂದ ಬಂಡೆಗಳು ಕುಸಿಯುವ ಸಂದರ್ಭ ಜಾಸ್ತಿ. ರಸ್ತೆಯನ್ನೇನೂ ರಿಪೇರಿ ಮಾಡಿದ್ದರು. ಆದರೆ ಪ್ರಯಾಣಿಕರನ್ನು ಕೂರಿಸಿಕೊಂಡು ಆ ಸ್ಥಳವನ್ನು ದಾಟುವಂತಿರಲಿಲ್ಲ. ಪೋಲೀಸರು ಪ್ರಯಾಣಿಕರನ್ನು ಇಳಿಸಿ ಖಾಲಿ ವಾಹನವನ್ನು ಆ ತಿರುವಿನಲ್ಲಿ ಹೋಗಲು ಅನುಮತಿ ಕೊಡುತ್ತಿದ್ದರು. ಪ್ರಯಾಣಿಕರು ಕೆಳಗೆ ಇಳಿದು, ರಸ್ತೆಯ ಮಟ್ಟದಿಂದ ಇನ್ನೂ ಕೆಳಗೆ ಇಳಿಯಬೇಕಿತ್ತು. ಸುಮಾರು ಕಾಲು ಕಿಲೋಮೀಟರ್ ಕಲ್ಲು, ಎತ್ತರ ತಗ್ಗುಗಳಿಂದ ಕೂಡಿದ ನೆಲದ ಮೇಲೆ ನಡೆಯಬೇಕಿತ್ತು. ಇದನ್ನು ಹೇಗೋ ನಿಭಾಯಿಸಿದೆವು. ಪಕ್ಕದಲ್ಲಿಯೇ ಅಲಕನಂದಾ ಭೋರ್ಗರೆದು ಧಾವಿಸುತ್ತಿದ್ದಳು. ಹತ್ತಿರದಿಂದ ಅವಳ ರಭಸ, ನದೀಪಾತ್ರದ ಕಲ್ಲು ಬಂಡೆಗಳನ್ನು ನೋಡುವುದು ಒಂದು ರೀತಿಯ ಅಳುಕು ಹುಟ್ಟಿಸಿತ್ತು.
ಸಂಜೆ ಆರುಗಂಟೆ ಸಮಯ. ನಾವು ಇಂತಹ ಪರಿಸ್ಥಿತಿಯನ್ನು ಎದುರು ನೋಡಿರಲಿಲ್ಲ. ಬೆಚ್ಚಗಿನ ಬಟ್ಟೆ ಹಾಕಿರಲಿಲ್ಲ. ಆದ್ದರಿಂದ ಚಳಿ ಎನ್ನಿಸಿತು. ನಾವು ಎಂತಹ ಪರಿಸ್ಥಿತಿಯಲ್ಲಿದ್ದೆವೆಂದರೆ ಹಿಂದೆಯೂ ಹೋಗಲಾರೆವು, ಮುಂದೆಯೂ ಹೋಗಲಾರೆವು ಎನ್ನುವಂತಿತ್ತು. ದೇವರ ಮೇಲೆ ಭಾರ ಹಾಕಿ ಮುಂದೆ ನಡೆದೆವು. ನಾವು ಈಗ ರಸ್ತೆಯಿಂದ ಸುಮಾರು 150-200 ಅಡಿ ಕೆಳಗೆ ಇದ್ದೆವು. ಮುಂದಿನ ದಾರಿಯನ್ನು ನೋಡಿ ಎದೆ ಧಸಕ್ಕೆಂದಿತು. ಇಲ್ಲಿಂದ ಎತ್ತರಕ್ಕೆ ಹತ್ತಬೇಕಿತ್ತು. ಸ್ವಲ್ಪ ಹತ್ತಿದೆ. ನಮ್ಮ ಗುಂಪಿನಲ್ಲಿ ನಾಲ್ಕು ಜನ ನಲವತ್ತನ್ನು ದಾಟದವರು ಅವರಿಗೆ ದೇಹದಲ್ಲಿ ಕಸುವಿತ್ತು. ಇನ್ನು ನಾಲ್ಕು ಜನರಲ್ಲಿ ಒಬ್ಬರು ಎಪ್ಪತ್ತಾರು, ಇನ್ನು ಮೂರು ಮಂದಿ ಎಪ್ಪತ್ತರ ಹತ್ತಿರದವರು. ಇದರಲ್ಲಿ ಇಬ್ಬರು ಹೆಂಗಸರು, ನಾವುಗಳು ಈ ಎತ್ತರದ ನೇರವಾಗಿರುವ ಕಲ್ಲುಮಣ್ಣಿನ ಗೋಡೆಯನ್ನು ಹೇಗೆ ಹತ್ತುವುದು ಎಂದು ಭಯವಾಯಿತು. ಆದರೆ ಭಯಪಟ್ಟು ನಿಂತರೆ ಆಗಬೇಕಲ್ಲ? ಮೈಯೆಲ್ಲಾ ಚಳಿಯಲ್ಲೂ ಬೆವರಿನ ಸ್ನಾನ ಮಾಡಿತು. ‘ನೀರೊಳಗಿರ್ದುಂ ಬೆಮರ್ದನ್ ಉರಗಪತಾಕಂ’ ಎನ್ನುವ ರನ್ನನ ಮಾತುಗಳನ್ನು ನೆನಪುಮಾಡಿಕೊಳ್ಳಬೇಕಿತ್ತು! ದುರ್ಯೋಧನನ್ನು ಕುರಿತು ಹೇಳುವ ಮಾತಿದು. ಆದರೆ ನಮಗೆ ಆಗ ಏನೂ ನೆನಪಾಗಲಿಲ್ಲ. ನಮ್ಮ ಗುಂಪಿನವರು ಹತ್ತಲು ತುಂಬಾ ಸಹಾಯ ಮಾಡುತ್ತಿದ್ದರು. ಅಂತೂ ಸ್ವಲ್ಪ ದೂರ ಹತ್ತಿದೆವು.
ಈಗ ಎದುರಿಗೆ ಕೇವಲ ಒಂದೇ ಆಯ್ಕೆ ಇತ್ತು. ಅದು ಹತ್ತುವುದು, ಇದಕ್ಕೊಂದು ದಪ್ಪ ಹಗ್ಗವನ್ನು ಮರಗಳಿಗೆ ಕಟ್ಟಿ ನೇತುಬಿಟ್ಟಿದ್ದರು. ಹಗ್ಗವನ್ನು ಹಿಡಿದು ನೇರವಾಗಿ ಕಲ್ಲುಬಂಡೆಗಳ ಮೇಲೆ ಕಾಲಿಟ್ಟು ಮೇಲೆ ಹತ್ತಬೇಕು. ಹಿಂದೆ ತಿರುಗಿ ನೋಡಿ ಬಿದ್ದರೆ, ಹಗ್ಗ ಕೈ ತಪ್ಪಿದರೆ, ಕಾಲು ಜಾರಿದರೆ ಕೆಳಗೆ ಬಿದ್ದು ಕೈಕಾಲು ಮುರಿಯುವುದು ಶತಃಸಿದ್ಧ ಎನಿಸಿತು. ಜೀವನದಲ್ಲಿ ಈ ವಯಸ್ಸಿನಲ್ಲಿ ಇದೊಂದು ಪರೀಕ್ಷೆ ಎದುರಾಯಿತು. ನನಗಂತೂ ಸಾಧ್ಯವೇ ಇಲ್ಲ ಎನಿಸಿತು. ಭಗವಂತ ಪಾರುಮಾಡಲು ಅಲ್ಲಿ ಒಬ್ಬ ಹದಿನೈದು ವಯಸ್ಸಿನ (ಅಂದಾಜು) ಹುಡುಗನನ್ನು ಕಳುಹಿಸಿದ್ದ. ಅವನು ಬೆನ್ನಿಗೆ ಚಹಾ ಎಲೆ ಕೀಳುವವರ ಹಾಗೆ ಒಂದು ಬುಟ್ಟಿ ಕಟ್ಟಿಕೊಂಡಿದ್ದ. ಮಾತಾಜೀ ಬನ್ನಿ, ನಾನು ಮೇಲೆ ನಿಮ್ಮನ್ನು ಬುಟ್ಟಿಯಲ್ಲಿ ಒಯ್ಯುತ್ತೇನೆ, ನನಗೆ ಮುನ್ನೂರು ರೂಪಾಯಿ ಕೊಡಿ ಎಂದ. ಮೊದಲು ಏನೂ ಹೇಳದೆ ನಾನೇ ಹತ್ತಲು ಪ್ರಯತ್ನಿಸುತ್ತಲೇ ಇದ್ದೆ. ಆದರೆ ಮೊದಲೇ ಕಾಲಿಗೊಮ್ಮೆ ಮೂಳೆ ಮುರಿತ ಆಗಿತ್ತು. ಆದ್ದರಿಂದ ಭಯ. ಈ ಹುಡುಗ ನಿನ್ನನ್ನು ಮೇಲೆ ತಲುಪಿಸಬಹುದು ಪ್ರಯತ್ನಿಸು, ಧೈರ್ಯಮಾಡು ಎಂದು ಮನಸ್ಸು ಹೇಳಿತು. ಅಂತೆಯೇ ಆ ಬುಟ್ಟಿಯಲ್ಲಿ ಕುಳಿತೆ.
ಹೇಗೆ ಏನು ಎಂದು ನೆನಪಿಲ್ಲ. ಹನುಮಾನ್ ಚಾಲೀಸ ಹೇಳಲು ಪ್ರಾರಂಭಿಸಿದೆ. ಅವನ ಬೆನ್ನಿಗೆ ನನ್ನ ಬೆನ್ನು ನನಗೆ ಮೇಲೆ ಆಕಾಶ ಕಾಣುತ್ತಿತ್ತು ಅಷ್ಟೇ. ಚಾಲೀಸ ಪಠಿಸಿ ಮುಗಿಯುವುದಕ್ಕೂ ಅವನು ರಸ್ತೆಗೆ ಬರುವುದಕ್ಕೂ ಸರಿಹೋಯಿತು. ಬುಟ್ಟಿಯನ್ನು ಕೆಳಗೆ ಇಳಿಸಿದ. ಕ್ಷೇಮವಾಗಿ ಎದ್ದು ನಿಂತೆ. ಇದೊಂದು ಮರೆಯಲಾಗದ ಅನುಭವ. ಆ ಹುಡುಗ ಬರದಿದ್ದರೆ, ನನಗೆ ಊಹಿಸಲೂ ಆಗುತ್ತಿಲ್ಲ. ಭಗವಂತನೇ ಅವನನ್ನು ಕಳುಹಿಸಿದ ಎನ್ನಬೇಕು. ಅವನ ಕಾಲಿಗೆ ನಮಸ್ಕಾರ ಮಾಡಲು ಹೋದಾಗ ಹಿಂದೆ ಸರಿದ. ಆದ್ದರಿಂದ ಸುಖವಾಗಿ ಬಾಳು ಎಂದು ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದೆ. ಪ್ರಕೃತಿಯ ಮುಂದೆ ಇಂತಹ ಘಟನೆಗಳ ಮುಂದೆ ನಾವು ಎಷ್ಟು ಚಿಕ್ಕವರಲ್ಲವೇ? ಮೇಲೊಂದು ಶಕ್ತಿ ಇದ್ದೇ ಇದೆಯಲ್ಲವೇ?
–ಡಾ. ಎಸ್. ಸುಧಾ, ಮೈಸೂರು
ಸುಂದರ ವರ್ಣನೆ.
Thanks geetha
ವಾವ್ ಪ್ರವಾಸ ಕಥನದ ಜೊತೆಗೆ ಒಂದು ಸುಂದರ ಅನುಭವ ಉತ್ತಮ ಮಾಹಿತಿ ಯನೊಳಗೊಂಡ ನಿರೂಪಣೆ ಸೂಗಸಾಗಿ ಮೂಡಿ ಬಂದಿದೆ ಅಭಿನಂದನೆಗಳು ಮೇಡಂ.
Thanks for the appreciation nagarathna
Beautiful
Thanks nayana
ಕೆಲವು ಭಯದ ಸನ್ನಿವೇಷಗಳಿಂದ ದೇವರು ನಮ್ಮನ್ನು ಪಾರು ಮಾಡುತ್ತಾನೆ, ಬದರಿ ಅನುಭವ ಕಥನ ಚೆನ್ನಾಗಿದೆ
Thanks a lot. above us he is there to help
Oh! What a situation, Anyhow you are saved and finished your journey successfully. Very well narrated Sudha. ಓದುತ ಹೋದರೆ ಮೈ ನವಿರೇಳುತದೇ.
Thanks vatsala for stepping in my shoes
Oh! Such a thrilling experience. Very well narrated.
Thanks you very much
ಅದ್ಭುತ ಅನುಭವ..ಸುರಕ್ಷಿತವಾಗಿ ಹೋಗಿ ಬಂದಿರಲ್ಲ.. ಗ್ರೇಟ್ !
by God’s grace. thanks hemamala.
ಸಮಯಕ್ಕೆ ಸರಿಯಾಗಿ ಒದಗುವ ಇಂತಹ ಸಹಾಯವನ್ನು ಜೀವನ ಪರ್ಯಂತ ಮರೆಯಲಾಗದು… ಭಗವಂತನ ಕರುಣೆಗೆ ಎಣೆಯಿಲ್ಲ.! ಸೊಗಸಾದ ಪ್ರವಾಸ ಲೇಖನ..ಧನ್ಯವಾದಗಳು ಮೇಡಂ.
Thanks shankari sharma. dayamaya bhagavantha
……..ಆ ಹುಡುಗ ಆ ಗಳಿಗೆಯಲ್ಲಿ ದೇವದೂತನೇ, ಸರಿ. ಒಳ್ಳೆಯ ಪ್ರವಾಸ ಕಥನ. ಧನ್ಯವಾದಗಳು.
Thanks sir.yes. de vadoothane sari
ಲೇಖನ ಸೊಗಸಾಗಿದೆ, ಆದರೆ ಪರಿಸ್ಥಿತಿ ನೆನೆಸಿಕೊಂಡರೆ ಭಯವಾಗುತ್ತದೆ
ಭಗವಂತನೇ ಕಾಪಾಡಿದ
Thanks meera. god saved us
ಸೊಗಸಾದ ಲೇಖನ