ನೆನಪಿನ ಬಾವಿಯಿಂದ ಬಾವಿಯ ಬಗ್ಗೆ….
‘ಸುರಹೊನ್ನೆ’ಯಲ್ಲಿ, ಬಾವಿಯ ಬಗ್ಗೆ ಇರುವ ನೆನಪುಗಳನ್ನು ಹಂಚಿಕೊಳ್ಳಬಹುದು ಅನ್ನುವ ಥೀಮ್ ನೀಡಿದಾಗ ಆ ಬಗ್ಗೆ ಬರೆಯದೇ ಹೇಗಿರಲಿ? ನೆನಪಿನ ಬಾವಿಯಾಳಕ್ಕೆ ಹೋದಷ್ಟೂ, ಮೊಗೆದಷ್ಟೂ ನೆನಪುಗಳು ಮತ್ತೆ ಮತ್ತೆ ಬರುತ್ತಿವೆ. ಈಗಿನ ಪೀಳಿಗೆಯವರಿಗೆ “ನಮ್ಮ ಪಾಲಿಗೆ ಇಂತಹ ದಿನಗಳಿದ್ದವು” ಅಂತ ತಿಳಿಸುವುದಕ್ಕಾದರೂ ಬಾವಿಯ ಜೊತೆಗಿನ ಒಡನಾಟವನ್ನು ಹಂಚಿಕೊಳ್ಳಬೇಕೆನಿಸಿತು. ತಂಪಾದ ಶುಭ್ರ ಸಿಹಿ ನೀರಿನ ಬಾವಿ. ಮಣ್ಣಿನ ಬಾವಿ ಕಟ್ಟೆ. ಬಾವಿಯ ಇಕ್ಕೆಲಗಳಲ್ಲಿ ಬೆಳೆದ ಗೋಸಂಪಿಗೆಯ ಮರದ ಗೆಲ್ಲುಗಳ ನಡುವೆ ಹಾಕಿದ ಗಟ್ಟಿಯಾದ ಉದ್ದದ ಮರದ ದಡೆಗೆ ಸಿಕ್ಕಿಸಿದ ರಾಟೆ. ರಾಟೆಯ ಮೇಲಿರುವ ತೆಂಗಿನ ನಾರಿನಿಂದ ಮಾಡಿದ ಕುಣಿಕೆ ಹಾಕಿದ ಹುರಿಹಗ್ಗ. ನೀರು ಸೇದಿ ಕೆಂಪಗಾದ ಕೈಗಳು. ಕೆಲವೊಮ್ಮೆ ಬೊಬ್ಬೆ ಎದ್ದಿದ್ದೂ ಉಂಟು. ರಾಟೆ ಕೀರಲು ಸದ್ದು ಮಾಡಿದಾಗ, ಅದಕ್ಕೆ ತೆಂಗಿನೆಣ್ಣೆ ಬಿಟ್ಟು ಘರ್ಷಣೆ ಕಡಿಮೆ ಮಾಡುವುದು…ಬಹುಶಃ ಇವೆಲ್ಲಾ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬರ ಅನುಭವ…
ನನಗಾಗ ಏಳು ವರ್ಷ ನಡೆಯುತ್ತಿತ್ತು. “ಅಕ್ಕನಿಗೊಂದು ಸಣ್ಣ ಕೊಡಪಾನ ತರಬೇಕು” ಅಂತ ಒಂದೇ ಸವನೆ ಅಪ್ಪನ ಬಳಿ ಅಮ್ಮನ ವರಾತ ನಡೆಯುತ್ತಿತ್ತು. [ಮೊದಲೆಲ್ಲಾ ಮನೆಯ ಹಿರಿ ಮಗಳನ್ನು ಅಕ್ಕ ಎಂದೂ, ಹಿರಿ ಮಗನನ್ನು ಅಣ್ಣ ಎಂದೂ ಸಂಬೋಧಿಸುತ್ತಿದ್ದರು. ಹಾಗಾಗಿ, ಅಪ್ಪ, ಅಮ್ಮ, ತಮ್ಮಂದಿರಿಗೆ, ತಂಗಿಯಂದಿರಿಗೆ ನಾನು ಅಕ್ಕನೇ ಆಗಿದ್ದೆ]. ಪೇಟೆಗೆ ಹೋದಾಗ ಒಂದು ಸಣ್ಣ ಕೊಡಪಾನ ತಂದೇ ಬಿಟ್ಟರು ಅಪ್ಪ. ಅಲ್ಲಿಂದ ಶುರುವಾಯಿತು ಬಾವಿಯ ಜೊತೆ ನನ್ನ ಒಡನಾಟ. ಕೊಡಪಾನವನ್ನು ಬಾವಿ ಹಗ್ಗದ ಕುಣಿಕೆಗೆ ಸಿಕ್ಕಿಸಿ, ನಿಧಾನವಾಗಿ ಹಗ್ಗ ಇಳಿಬಿಟ್ಟು, ನಂತರ ಹಗ್ಗವನ್ನು ಮೆಲ್ಲನೆ ಜಗ್ಗಿ ಕೊಡಪಾನ ತುಂಬಿಸಿ ಅನಂತರ ನೀರು ತುಂಬಿದ ಕೊಡಪಾನವನ್ನು ಜಾಗ್ರತೆಯಿಂದ ಮೇಲೆಳೆದು, ಕೈ ಮುಂದೆ ಮಾಡಿ, ಕೊಡಪಾನದ ಬಾಯಿ ಹಿಡಿದು, ಬಾವಿಕಟ್ಟೆಯ ಮೇಲಿರಿಸಿ, ಕುಣಿಕೆ ಬಿಚ್ಚಿ, ನೀರು ತುಂಬಿದ ಕೊಡವನ್ನು ಸೊಂಟದ ಎಡಭಾಗದ ಮೇಲಿಟ್ಟು ನಡೆಯುತ್ತಿದ್ದ ಆ ದಿನಗಳನ್ನು ಮರೆಯಲುಂಟೇ?
ಬೇಸಿಗೆಕಾಲ ಹೊರತುಪಡಿಸಿ, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಮನೆಯೆದುರೇ ಸ್ವಲ್ಪ ದೂರದಲ್ಲಿದ್ದ ತೋಡಿನ ಬಳಿ ಹೋಗುತ್ತಿದ್ದೆವು. ಹಾಗಾಗಿ, ಮನೆಯ ಅಡುಗೆಗೆ, ದನಗಳಿಗೆ ಅಕ್ಕಚ್ಚು ಕೊಡಲು ಹಾಗೂ ಬಚ್ಚಲುಮನೆಯ ಹಂಡೆ ತುಂಬಲು ಮಾತ್ರ ಬಾವಿಯಿಂದ ನೀರು ಸೇದಬೇಕಿತ್ತು. ಆದರೆ ಬೇಸಿಗೆ ಬಂತೆಂದರೆ ಎಲ್ಲ ಕೆಲಸಗಳಿಗೂ ಬಾವಿಯ ನೀರೇ ಬೇಕಿತ್ತು. ಕಡಿಮೆಯೆಂದರೂ ಐವತ್ತರಿಂದ ಅರುವತ್ತು ಕೊಡ ನೀರು ಸೇದುವುದು ಪ್ರತಿದಿನದ ಕೆಲಸವಾಗಿತ್ತು. ಮಧ್ಯಾಹ್ಞದ ಹೊತ್ತಿಗೆ ನೀರು ಕುಡಿಯಲೆಂದು ಮೇಯಲು ಹೋದ ನಮ್ಮ ಮನೆಯ ದನಗಳಲ್ಲದೆ, ಬೇರೆಯವರ ದನಗಳು ಬಂದರೂ, ದನಗಳು ಕುಡಿಯಲೆಂದೇ ಇಟ್ಟಿದ್ದ ಬಾನಿ ಖಾಲಿಯಾಗದಂತೆ ನೋಡಿಕೊಳ್ಳುತ್ತಿದ್ದೆವು. ಹೆಚ್ಚಾಗಿ ಸಂಜೆಯ ಹೊತ್ತಿನಲ್ಲಿ ಬಾವಿಯಿಂದ ನೀರು ಸೇದಿ, ಮನೆಯ ಸುತ್ತಮುತ್ತಲಿದ್ದ ಮಲ್ಲಿಗೆ, ಸೇವಂತಿಗೆ, ಅಬ್ಬಲ್ಲಿಗೆ, ನಂದಿಬಟ್ಟಲು,… ಮುಂತಾದ ಹೂವಿನ ಗಿಡಗಳ ಜೊತೆ ಮಾತನಾಡುತ್ತಾ ಅವುಗಳ ಬುಡಕ್ಕೆ ಹಾಗೆಯೇ ತೆಂಗಿನ ಗಿಡಗಳಿಗೆ ನೀರು ಹಾಕುತ್ತಿದ್ದ ನೆನಪುಗಳು ಇಂದಿಗೂ ಹಸಿರು. ನನಗಿನ್ನೂ ಸರಿಯಾಗಿ ನೆನಪಿದೆ. ಬೇರೆಯವರ ಮನೆಗೆ ಹೋದಾಗ ಅಲ್ಲಿಯ ಬಾವಿ ಎಷ್ಟು ಆಳ ಇದೆಯೆಂದೂ ನೋಡುವುದು ಕೂಡ ಬಹಳ ಇಷ್ಟದ ಕೆಲಸವಾಗಿತ್ತು.
ಪ್ರಥಮ ಪಿಯುಸಿ ವಿದ್ಯಾಭ್ಯಾಸ ಪಡೆಯುತ್ತಿರುವ ಸಂದರ್ಭ. ಅಲ್ಲಿಯ ತನಕ ಕನ್ನಡ ಮಾಧ್ಯಮದಲ್ಲಿ ಓದಿದ್ದ ನನಗೆ, ಆಂಗ್ಲ ಭಾಷೆಯಲ್ಲಿಯೇ ಎಲ್ಲಾ ವಿಷಯಗಳನ್ನು ಕಲಿಯುವುದು ಕಷ್ಟವಾಗಿತ್ತು. ಅದಕ್ಕೋಸ್ಕರ, ಪಠ್ಯ ವಿಷಯಗಳನ್ನು ಮನನ ಮಾಡಿಕೊಳ್ಳುವುದು ಅಗತ್ಯವಾಗಿತ್ತು. ಯಾವುದೋ ತತ್ವದ ಪ್ರತಿಪಾದನೆಯ ಹಂತಗಳನ್ನು ಬಾಯಿಪಾಠ ಮಾಡದಿದ್ದರೆ, ಪರೀಕ್ಷೆಯಲ್ಲಿ ಬರೆಯುವುದು ಕಷ್ಟವಾಗುತ್ತಿತ್ತು. ಹಾಗಾಗಿ, ಬಾವಿಯಿಂದ ಕೈಗಳು ನೀರು ಎಳೆಯುವ ಸಮಯದಲ್ಲೂ ಬಾಯಿಪಾಠ ನಡೆಯುತ್ತಿತ್ತು. ಹಾಡಲು ಗೊತ್ತಿದ್ದರೂ ಸಂಕೋಚ, ಹಿಂಜರಿಕೆಗಳೇ ಕಾರಣವಾಗಿ ಹೊರಗೆಲ್ಲೂ ಹಾಡದ ನಾನು ಬಾವಿಯಿಂದ ನೀರು ಸೇದುವ ಸಂದರ್ಭ ಮನ ಬಂದಂತೆ ಹಾಡುತ್ತಿದ್ದೆ. ಹಾಗಾಗಿ ಬಾವಿಯೇನಾದರೂ ಮನುಷ್ಯ ರೂಪದಲ್ಲಿ ಇದ್ದಿದ್ದರೆ, ಅದೆಷ್ಟು ಹಾಡುಗಳನ್ನು, ರಸಾಯನಶಾಸ್ತ್ರ, ಭೌತಶಾಸ್ತ್ರದ ತತ್ವಗಳನ್ನು ಹೇಳುತ್ತಿತ್ತೋ ಏನೋ ಅಂತ ನನಗೆ ಅನಿಸಿದ್ದೂ ಉಂಟು.
ಒಂದು ದಿನ ನನ್ನ ಪ್ರಾಥಮಿಕ ಶಾಲೆಯ ಸಹಪಾಠಿ “ನೀನು ಯಾವ ಪ್ರಾಣಿಯದ್ದಾದರೂ, ಮೂತ್ರ ಕುಡಿದಿದ್ದೀಯಾ?”ಅಂತ ಕೇಳಿದ ಪಶ್ನೆಗೆ “ಇಲ್ಲ” ಎಂದು ಮುಗ್ಧವಾಗಿ ಉತ್ತರಿಸಿದ್ದೆ. “ನೀನು ಬಾವಿ ನೀರು ಕುಡಿಯುವುದಿಲ್ವಾ? ಅದರಲ್ಲಿ ಕಪ್ಪೆಯ ಮೂತ್ರ, ಮೀನಿನ ಮೂತ್ರ ಎಲ್ಲಾ ಇರುತ್ತದೆ” ಅಂದಿದ್ದಳು ದೊಡ್ಡ ವಿಜ್ಞಾನಿಯ ಹಾಗೆ. ಬಾವಿ ಎಂದ ಮೇಲೆ ಬಾವಿನೀರಿನಲ್ಲಿ ಕಪ್ಪೆ, ಮೀನುಗಳು ಇರುವುದು ಸಹಜ ತಾನೇ? “ಹೌದಲ್ವಾ? ಆ ಬಗ್ಗೆ ನಾನು ಆಲೋಚಿಸಿಯೇ ಇರಲಿಲ್ಲ” ಅನ್ನುವುದು ಆ ದಿನ ನನಗೆ ಗೊತ್ತಾಯಿತು. ಕೆಲವೊಮ್ಮೆ ನೀರು ಸೇದುವಾಗ,ಕೊಡಪಾನದಲ್ಲಿ ಕಪ್ಪೆ ಏನಾದರೂ ಬಂದರೆ ಅದನ್ನು ಬಾವಿಗೆ ವಾಪಸ್ ಬಿಡುತ್ತಿದ್ದ ನೆನಪು. ಮುಂದೊಂದು ದಿನ ಶಾಲೆಯಲ್ಲಿ ಶಿಕ್ಷಕರು “ಬಾವಿ ಒಳಗಿನ ಕಪ್ಪೆ” ಮತ್ತು “ಸಮುದ್ರದ ಕಪ್ಪೆ” ನಡುವೆ ನಡೆದ ಸಂಭಾಷಣೆಯನ್ನು ವಿವರಿಸಿ, “ಮಕ್ಕಳೇ, ನಾವು ಯಾವಾಗಲೂ ಬಾವಿಯೊಳಗಿನ ಕಪ್ಪೆಯಂತೆ ಇರಬಾರದು. ನಾವು ತಿಳಿದುಕೊಂಡಿರುವುದೇ ಸರಿ ಅಂತ ಯಾವಾಗಲೂ ತಿಳಿಯಬಾರದು. ಪ್ರಪಂಚ ವಿಶಾಲವಾಗಿದೆ. ನೀವು ಜಾಸ್ತಿ ಜಾಸ್ತಿ ಪುಸ್ತಕ ಓದಿದರೆ ನಿಮಗೆ ಪ್ರಪಂಚದ ಆಗುಹೋಗುಗಳ ಬಗ್ಗೆ ತಿಳಿಯುತ್ತದೆ” ಅನ್ನುವ ಜೀವನಪಾಠ ಹೇಳಿದ್ದು ನೆನಪಿಗೆ ಬರುತ್ತಿದೆ.ಕೆಲವೊಮ್ಮೆ ಕೊಡಪಾನದ ಬಾಯಿಗೆ ಕುಣಿಕೆ ಬಿಗಿದದ್ದು ಸರಿಯಾಗದೆ ಅಥವಾ ನೀರು ಎಳೆಯುವ ಹಗ್ಗದ ತುದಿ ಕೈ ತಪ್ಪಿಯೋ ಕೊಡಪಾನ ಬಾವಿಯೊಳಗೆ ಬಿದ್ದಾಗ ಬೈಸಿಕೊಂಡ ನೆನಪೂ ಇದೆ. ಮತ್ತೆ ಆ ಕೊಡಪಾನ ಬಾವಿಯಿಂದ ತೆಗೆಯಬೇಕಿದ್ದರೆ, ಬೇಸಿಗೆ ಕಾಲಕ್ಕೆ ಕಾಯಬೇಕಾಗಿತ್ತು. ಬೇಸಿಗೆ ತೀವ್ರವಾದಾಗ ಬಾವಿಯಲ್ಲಿ ನೀರು ಕಡಿಮೆಯಾದಾಗ ಬಾವಿಯ ಕೆಸರು ತೆಗೆಯುವ ಕೆಲಸದಲ್ಲಿ ಅಪ್ಪನಿಗೆ ನೆರವಾಗುತ್ತಿದ್ದೆವು. ಬಿದಿರಿನ ಏಣಿ (ತುಳುವಿನಲ್ಲಿ ಕೇರ್ಪು ಅನ್ನುವರು) ಬಳಸಿ ಅಪ್ಪ ಬಾವಿಗಿಳಿದು ಕೆಸರು ತೆಗೆದು ಹೆಡಿಗೆಗೆ ತುಂಬಿಸಿ ಕೊಡುತ್ತಿದ್ದರು. ನಾವು ಮಕ್ಕಳು ಜೊತೆಗೂಡಿ ಅದನ್ನು ಕಷ್ಟಪಟ್ಟು ಎಳೆಯುತ್ತಿದ್ದೆವು. ಬಾವಿ ಶುಚಿಗೊಳಿಸಿದ ನಂತರ ಆಗಾಗ ಬಾವಿಗೆ ಇಣುಕಿ, ಎಷ್ಟು ನೀರಾಯಿತು ಅನ್ನುವುದನ್ನು ಪರೀಕ್ಷಿಸುತ್ತಿದ್ದೆವು. ಕೆಲವೊಮ್ಮೆ ಕಡಿಮೆ ನೀರಿನಲ್ಲಿ ಎಲ್ಲಾ ಕೆಲಸಗಳನ್ನು ಮುಗಿಸುವ ಅನಿವಾರ್ಯತೆ ಇದ್ದುದರಿಂದ, ನೀರಿನ ಮಿತ ಬಳಕೆ ಮಾಡುವ ರೂಢಿ ಸಣ್ಣಂದಿನಿಂದಲೇ ಅಭ್ಯಾಸ ಆಗಿಬಿಟ್ಟಿದೆ. ನೀರು ವೃಥಾ ಪೋಲಾಗುವುದರನ್ನು ಕಂಡರಂತೂ ಮನಸ್ಸಿಗೆ ಅತೀವ ನೋವಾಗುತ್ತದೆ.
ಜೀವಜಲ ಒದಗಿಸುವ ಬಾವಿಗೆ ಮಹತ್ವಪೂರ್ಣ ಹಾಗೂ ಪವಿತ್ರ ಸ್ಥಾನ. ಸ್ನಾನಕ್ಕೂ, ದೇವರ ಅಭಿಷೇಕಕ್ಕೂ ಬಾವಿ ನೀರೇ ಬೇಕು. “ಗಂಗೇ ಚ ಯಮುನೆ ಚೈವ ಗೋದಾವರೀ ಸರಸ್ವತೀ| ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು” ಅನ್ನುವ ಶ್ಲೋಕದಂತೆ ಬಾವಿಯ ನೀರಿನಲ್ಲಿಯೇ ಸಕಲ ಜಲದೇವತೆಗಳನ್ನು ಕಾಣುವ ಅದ್ಭುತ ಪರಿಕಲ್ಪನೆ. ದೀಪಾವಳಿಯ ಸಮಯದಲ್ಲಿ ಬಾವಿಕಟ್ಟೆಯ ಮೇಲೆ ದೀಪವಿಟ್ಟು ನಮಸ್ಕರಿಸುತ್ತಿದ್ದ ನೆನಪು!
4೦ ವರ್ಷದ ಹಿಂದೆ, ನಾವಿದ್ದ ಮುಳಿಹುಲ್ಲಿನ ಮನೆ ಹಳೆಯದಾಯಿತೆಂದು ಹೊಸ ಮನೆ ಕಟ್ಟಿಸಿದ್ದರು ಅಪ್ಪ. ಆ ಹೊಸಮನೆಯ ವಾಸ್ತುವಿಗನುಗುಣವಾಗಿ, ಮನೆಯ ಬಳಿಯೇ ಬಾವಿಯೊಂದನ್ನು ತೋಡಲಾರಂಭಿಸಿದ್ದರು ಅಪ್ಪ. ಸುಮಾರು ಎರಡು ಕೋಲು (1 ಕೋಲು ಅಂದರೆ ಬಹುಶಃ ಒಂದು ಮೀಟರ್, ಹಿಂದೆಲ್ಲಾ ಬಾವಿಯ ಆಳವನ್ನು ಕೋಲು ಅಳತೆಯಲ್ಲಿ ಅಳೆಯುತ್ತಿದ್ದರು) ಆಳದಷ್ಟು ಮಣ್ಣನ್ನು ಅವರೇ ತೆಗೆದಿದ್ದರು. ಮಳೆಗಾಲದಲ್ಲಿ ಎರಡು ಕೋಲಿನಷ್ಟು ಆಳದ ಬಾವಿ ಪೂರ್ತಿಯಾಗಿ ನೀರು ಹೊರಗೆ ಹರಿಯುತ್ತಿತ್ತು. ನಂತರ ಅದೇ ಬಾವಿ ಪೂರ್ಣಪ್ರಮಾಣದ ಬಾವಿಯಾಗಿ ಬದಲಾಯಿತು. ಮಳೆಗಾಲ ಬಂತೆಂದರೆ ಬಾವಿ ತುಂಬಿ ಹರಿಯುವ ದಿನಕ್ಕೆ ಕಾದು ಸಂಭ್ರಮಿಸುತ್ತಿದ್ದ ನೆನಪು. ಆಗ ನೀರು ಹೊರಹೋಗಲೆಂದು ಬಾವಿಕಟ್ಟೆಯಲ್ಲಿ ಒಂದು ದೊಡ್ಡ ತೂತು ಇತ್ತು. ಆ ಬಾವಿಯ ನೀರು ಸ್ವಲ್ಪ ಬಿಸಿ ಇರುತ್ತಿತ್ತು. ಬಹುಶಃ ಗಂಧಕದ ಅಂಶ ಇದ್ದಿರಲೂಬಹುದು. ಆ ಬಾವಿಯ ಕೆಳಗಿನ ಮಣ್ಣು ಸಡಿಲವಾಗಿದ್ದು, ಆಗಾಗ ಮಣ್ಣು ಜಾರಿ ಬೀಳುತ್ತಿದ್ದುದನ್ನು ಕಣ್ಣಾರೆ ಕಂಡ ನೆನಪು ಈಗಲೂ ಇದೆ (ಕಾಲಕ್ರಮೇಣ ಕಲ್ಲು ಕಟ್ಟಿ, ರಿಂಗ್ ಹಾಕಿ ಬಾವಿಯನ್ನು ಭದ್ರಪಡಿಸಲಾಯಿತು).
ಕಾಲಕ್ರಮೇಣ ಕೊಳವೆ ಬಾವಿ ತೋಡಿದ ನಂತರ, ಬಾಲ್ಯದ ಬದುಕಿನೊಂದಿಗೆ ಹಾಸುಹೊಕ್ಕಾಗಿದ್ದ ಬಾವಿಯನ್ನು ಮುಚ್ಚಿದರೂ, ಆ ಬಾವಿಯ ಜೊತೆಗಿರುವ ನೆನಪಿನ ಬಾವಿ ಇನ್ನೂ ತುಂಬಿಯೇ ಇದೆ. ಆಗ ಕಟ್ಟಿದ್ದ (4೦ ವರ್ಷದ ಹಿಂದೆ) ಹೊಸಮನೆಯೂ ಹಳೆಯದಾಗಿ, ಈಗ ಆ ಜಾಗದಲ್ಲಿ ತಾರಸಿ ಮನೆ ಬಂದಿದೆ. ಕೊಳವೆ ಬಾವಿ, ಟ್ಯಾಂಕ್, ಮನೆಯ ಎಲ್ಲಾ ಕಡೆ ನಳ್ಳಿ ನೀರಿನ ಸಂಪರ್ಕ ಇದ್ದರೂ, ಅಪ್ಪ ತೋಡಿದ ಬಾವಿಯ ಉಪಯೋಗ ಈಗಲೂ ಇದೆ. ದೇವರ ಪೂಜೆಗೂ, ಅಡುಗೆಗೂ ಬಾವಿಯ ನೀರನ್ನು ಸೇದಿ ತರುವ ಪರಿಪಾಠ ಈಗಲೂ ಮುಂದುವರಿದಿದೆ.
ಹ್ಞಾಂ, ಲೇಖನ ಮುಗಿಸುವ ಮೊದಲು ಇನ್ನೊಂದು ಅನುಭವ ಹಂಚಿಕೊಳ್ಳಲೇ ಬೇಕು…….
ನನಗಿನ್ನೂ ಚೆನ್ನಾಗಿ ನೆನಪಿದೆ. ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸದ ಸಂದರ್ಭದಲ್ಲಿ ಮಹಿಳಾ ಹಾಸ್ಟೆಲಿನಲ್ಲಿ ಒಂದು ಬಾರಿ, ಪಂಪ್ ಹಾಳಾಗಿ ಕೆಲವು ದಿನ ನಳ್ಳಿಯಲ್ಲಿ ನೀರು ಬಾರದಿದ್ದಾಗ, ತುಂಬಾ ಜನರು ಮನೆಗೆ ತೆರಳಿದ್ದರು. ಹಾಸ್ಟೆಲ್ ಆವರಣದಲ್ಲಿದ್ದ ಆಳವಾದ ಬಾವಿಯಿಂದ ನೀರು ಸೇದಲು ಗೊತ್ತಿದ್ದವರು ಕೈ ಜೋಡಿಸಿದ್ದೆವು. ನಾವು ನೀರು ಸೇದುವುದನ್ನು ಕಂಡು ಹಲವರು ಕಣ್ಣರಳಿಸಿದ್ದರು. ಹತ್ತಿರ ಬಂದು “ಪ್ಲೀಸ್, ನನಗೂ ಒಂದು ಕೊಡ ನೀರು ಸೇದಿ ಕೊಡಬಹುದೇ?” ಅಂತ ಕೇಳಿದಾಗ ಇಲ್ಲವೆನ್ನದೆ ನೀರೆಳೆದು ಕೊಟ್ಟ ನೆನಪು ಇನ್ನೂ ಹಸಿಯಾಗಿದೆ.
ಡಾ. ಕೃಷ್ಣಪ್ರಭ ಎಂ, ಮಂಗಳೂರು
ಚಂದದ ಬಾವಿಯ ನೆನಪಿನಲೇಖನ.ಪ್ರಭಾ
ಮೆಚ್ಚುಗೆಗೆ ಧನ್ಯವಾದಗಳು ಅಕ್ಕ
ಸೊಗಸಾದ ನಿರೂಪಣೆ.
ಧನ್ಯವಾದಗಳು ಮೇಡಂ
ಆಹಾ..ಬಾವಿಯ ಆಳದಿಂದ ಮೊಗೆದ ಸಿಹಿ ನೀರಿನ ನೆನಪುಗಳು ತುಂಬಾ ಚೆನ್ನಾಗಿ ಮನ ತುಂಬಿತು..ಓದುತ್ತಿದ್ದಂತೆ ನಾನೇ ಕೊಡಪಾನ ಹಿಡಿದು ನೀರು ಸೇದುವಂತೆ ಎನಿಸಿತು..ಸುಂದರ ನಿರೂಪಣೆ
ಚಂದದ ಪ್ರತಿಕ್ರಿಯೆಗೆ ಪ್ರೀತಿಯ ನಮನಗಳು
ಮೊಗೆದಷ್ಟೂ ಜಲ ಅಗೆದಷ್ಟೂ ಅರ್ಥ ಎನ್ನುವಂತೆ ಇದೆ ನಿಮ್ಮ ಲೇಖನ ಧನ್ಯವಾದಗಳು ಮೇಡಂ.
ತುಂಬು ಹೃದಯದ ಧನ್ಯವಾದಗಳು ಮೇಡಂ
ಬಹಳ ಸುಂದರ ನೆನಪು
ಮೆಚ್ಚುಗೆಗೆ ಧನ್ಯವಾದಗಳು ನಯನಾ
ನೆನಪಿನಾಳದಿಂದ ಮೊಗೆದು ತೆಗೆದಿರುವ ಬಾವಿಯ ಅನುಭವ ಸಾರ ಚೆನ್ನಾಗಿದೆ
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಸರ್
ಬಾವಿಯ ಕುರಿತ ತಾವು ಬರೆದಿರುವ ಲೇಖನ, ಹಳ್ಳಿಯ ಜೀವನ ಹಾಗೂ ಗ್ರಾಮ್ಯ ಬದುಕಿನೊಂದಿಗೆ ಇರುನ ಅನನ್ಯ ಸಂಬಂಧವನ್ನು ಅರಿವು ಮೂಡಿಸುತ್ತಿದೆ. ಆ ಮೂಲಕ, ಬೆಳೆದು ಬಂದ ಬಗೆ ಯ ಅರಿವು ಮೂಡಿಸಿ, ನಮ್ಮನ್ನೂ ಬಾಲ್ಯದ ಜೀವನದತ್ತ ಪಕ್ಷಿನೋಟವ ಬೀರುವಂತೆ ಮಾಡಿದ್ದಕ್ಕೆ ಧನ್ಯವಾದಗಳು! ಜೀವನಾನುಭವವೇ, ತಮ್ಮ ಲೇಖನವನ್ನು ಸತ್ವಪೂರ್ಣ ವಾಗಿರಿಸಿದೆ. …… ಅನುಭವವು ಸವಿಯೋ ಅಲ್ಲವೋ, ಆದರೆ, ಅದರ ನೆನಪು, ಎಂದೆಂದೂ ಸವಿಯೇ !
ಆಹಾ….ಚಂದದ ಪ್ರತಿಕ್ರಿಯೆ..ಲೇಖನ ಬರೆದದ್ದು ಸಾರ್ಥಕವಾಯಿತು ಅನ್ನಿಸಿತು…ಧನ್ಯವಾದಗಳು ಸಂತೋಷ್ ಅವರಿಗೆ
ಚೆಂದದಸೊಗಸಾದ ನೆನಪುಗಳನ್ನು ಮೆಲುಕು ಹಾಕಿಸುವಂತಹ ಎಲ್ಲವೂ ಸುಂದರವಾದ ಬರಹಗಳು
ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು
ನೆನಪಿನ ಬಾವಿಯಿಂದ ಮೊಗೆದಷ್ಟೂ ಉಕ್ಕುವ ಒರತೆಯಿದು..ಸೊಗಸಾದ ಬರಹ.
ನೆನಪಿನ ಬಾವಿಯಾಳಕ್ಕೆ ಇಳಿಯುವಂತೆ ಮಾಡಿದ ನಿಮಗೆ ಅನಂತ ಧನ್ಯವಾದಗಳು
ತಮ್ಮ ಬಾವಿಯ ಕಥೆ ನಮ್ಮೆಲ್ಲರದೂ ಹೌದೆನ್ನಿಸುತ್ತದೆ.. ಬಾವಿಯ ಚಂದದ ಬರಹ.
ನಿಮ್ಮ ಅಭಿಪ್ರಾಯ ಸರಿ…ಮೆಚ್ಚುಗೆಗೆ ಧನ್ಯವಾದಗಳು
ಚೆನ್ನಾಗಿ ಮೂಡಿ ಬಂದಿದೆ ಮೇಡಂ.
ಮೆಚ್ಚುಗೆಗೆ ಧನ್ಯವಾದಗಳು ಸರ್
……..ಸೊಗಸಾದ ಲೇಖನ. ಆಗಿನ ಅನುಭವಗಳು ಕಲಿಸಿರೋ ಪಾಠಗಳು ಜೀವನದುದ್ದಕ್ಕೂ ಸಹಾಯಕಾರಿ. ಧನ್ಯವಾದಗಳು.
ನಿಮ್ಮ ಮಾತು ನಿಜ. ಅದೆಷ್ಟೋ ಜೀವನಪಾಠಗಳನ್ನು ಬಾಲ್ಯದ ದಿನಗಳು ಕಲಿಸಿದ್ದವು
ಸುಂದರ ಬರಹ ಮ್ಯಾಂಮ್
ಬಹಳಾ ಅರ್ಥಪೂರ್ಣವಾದ ಲೇಖನ ಮಾಮ್….. ಹಳ್ಳಿಯ ಬಾವಿ ಕಟ್ಟೆಯ ಸೊಗಡಿನೊಂದಿಗೆ ಸಂಪಿಗೆ ಮರ…. ಹುರಿಹಗ್ಗ…. ಬಿದಿರಿನ ಏಣಿ…ಕೋಲಿನ ಅಳತೆ…… ಅಷ್ಟೇ ಅಲ್ಲದೆ ಪ್ರಯೊಂದಕ್ಕೂ ವೈಜ್ಞಾನಿಕವಾದ ಕಾರಣವನ್ನೂ ಕೊಡುತ್ತಾ ಬಂದಿರಿ…. ಒಂದು ಬಂಡೆ ಹೇಗೆ ಪೆಟ್ಟು ತಿಂದು ಶಿಲೆಯಾಗುವುದೋ ಅಂತೆಯೇ ನೀವು ಬಾಲ್ಯದಲ್ಲಿ ಪಟ್ಟ ಕಷ್ಟಗಳ ಪೆಟ್ಟು ನಿಮ್ಮಂನಿಂದು ಅನುಭವಗಳ ಸುಂದರ ಶಿಲೆಯಾಗಿ ಮಾರ್ಪಡಿಸಿದೆ……. ಧನ್ಯವಾದಗಳು ಮಾಮ್