ಗೈರ ಸಮಜೂತಿ -ಒಂದು ಮಹತ್ವದ ಕಾದಂಬರಿ
ಜೈವಿಕವಾಗಿ ತಮ್ಮ ಒಡಹುಟ್ಟಿದ ಸೋದರಿಯರಿಗೆ ಮತ್ತು ಕನ್ನಡ ಭಾಷೆ ಕಾರಣವಾಗಿ ಒಡಹುಟ್ಟಿದ ಸಂಬಂಧವುಳ್ಳ ಲೇಖಕಿಯರಿಗೆ ಬಾಗಿನವಾಗಿ ಅರ್ಪಿಸಿದ ಬರಹಗಾರನೊಬ್ಬನ ( ಲೇ: ರಾಘವೇಂದ್ರ ಪಾಟೀಲ) ಈ ಕೃತಿ ಹೆಂಗರುಳ ಅಂತ:ಕರಣಕ್ಕೆ, ಒಳತಿಳಿವಿನ ಬೆಳಕಿಗೆ ಪ್ರಾಶಸ್ತ್ಯವನ್ನೀಯುವ ಮಹತ್ವದ ಕಾದಂಬರಿ. ‘ಗೈರಸಮಜೂತಿ’ ಎಂದರೆ ತಪ್ಪು ತಿಳುವಳಿಕೆ. ಈ ತಪ್ಪುತಿಳುವಳಿಕೆ ಮತ್ತು ಅದರ ಪರಿಣಾಮ ಕಾದಂಬರಿಯಲ್ಲಿ ಹಲವು ನೆಲೆಗಳಲ್ಲಿ ಜರಗುತ್ತದೆ.
ಬೆಟಗೇರಿಯ ಶಾಮರಾಯರ ಮಗಳು ಅಂಬಕ್ಕ ಕಾಶಿಗೆ ಹೋಗಿ ಸಂಸ್ಕೃತ ಕಲಿತುಬಂದ ಘನವಿದ್ವಾಂಸ ಐನಾಪುರದ ಶ್ರೀನಿವಾಸ ಆಚಾರ್ಯರನ್ನು ಮದುವೆಯಾಗಿ, ಪತಿ ರೋಗಗ್ರಸ್ತನಾಗಿ ಅಕಾಲಮರಣವನ್ನಪ್ಪಿದ ಹಿನ್ನೆಲೆಯಲ್ಲಿ ಮಡಿಹೆಂಗುಸಾಗಿ ಸವತಿಯರ ಭರ್ತ್ಸನೆ, ಹಂಗಣೆಗಳನ್ನು ಸಹಿಸಲಾರದೆ ಮಗು ವತ್ಸಲಳೊಂದಿಗೆ ತವರನ್ನು ಸೇರುತ್ತಾಳೆ.ಈ ವತ್ಸಲೆ ಅಥವಾ ವಚ್ಚಕ್ಕನ ಕಥಾನಕವೇ ಕಾದಂಬರಿಯ ಮುಖ್ಯ ಎಳೆ.ಸೋದರಮಾವ ಅಚ್ಯುತನೊಂದಿಗೆ ಆಕೆಯದು ಬಾಲ್ಯವಿವಾಹ. ಆಕೆ ದೊಡ್ಡವಳಾಗಿ, ದೂರದ ಪುಣೆಯಲ್ಲಿ ನೌಕರಿ ಮಾಡುತ್ತಿದ್ದ ಗಂಡ ಹಾಗೂ ಬೆಟಗೇರಿ ಮನೆಯಲ್ಲಿ ಅಜ್ಜಿ ಮತ್ತು ಅಮ್ಮನಿಂದ ಗೃಹಿಣೀಧರ್ಮದ ತರಬೇತನ್ನು ಪಡೆಯುತ್ತ ಇದ್ದ ಹೆಂಡತಿ-ಈ ಇಬ್ಬರೂ ಪ್ರಸ್ತದ ನಿರೀಕ್ಷೆಯಲ್ಲಿ ಇರುವಾಗಲೇ ಅಚ್ಯುತ ಗೈರಸಮಜೂತಿಗೆ ಬಲಿಯಾಗಿ ದುರಂತವನ್ನಪ್ಪುವುದು ಕಾದಂಬರಿಯ ಸಂವಿಧಾನದ ಬೆಳವಣಿಗೆಯಲ್ಲಿ ಮಹತ್ವದ ಘಟನೆ. ವಚ್ಚಕ್ಕಳ ಕಾಕ ಸತ್ಯಬೋಧಾಚಾರ್ಯರು ತಾಯಿ ಮತ್ತು ಮಗಳನ್ನು ಐನಾಪುರದ ಮನೆಗೆ ಕರೆಸಿಕೊಂಡು ಆಕೆಗೆ ಮನೆಯಲ್ಲಿಯೇ ಶಿಕ್ಷಣವನ್ನು ಕೊಡಿಸುವ ಸಂಕಲ್ಪವನ್ನು ಮಾಡುವುದು ಎರಡನೆಯ ಮುಖ್ಯ ಬೆಳವಣಿಗೆ. ಆಕೆಗೆ ಕನ್ನಡ ಸಂಸ್ಕೃತ, ವೈದ್ಯಶಾಸ್ತ್ರ, ಆಧ್ಯಾತ್ಮ-ಹೀಗೆ ಲೌಕಿಕದೊಂದಿಗೆ ಅದರಿಂದ ಬೇರೆಯಲ್ಲದ ಅಲೌಕಿಕವನ್ನೂ ಕಲಿಸುವುದು ವಿಶೇಷ ವಿಚಾರ. ಸತ್ಯಬೋಧರ ಅಕ್ಕರೆಯ ಮಾರ್ಗದರ್ಶನದೊಂದಿಗೆ ಆತ್ಮವಿಶ್ವಾಸದ ಸ್ವಂತ ವ್ಯಕ್ತಿತ್ವದ ಪ್ರಭೆಯಲ್ಲಿ ಮುನ್ನಡೆಯುವ ಸಂದರ್ಭದಲ್ಲಿ ‘ಗೈರಸಮಜೂತಿ’ಗೆ ಗಾಂಧೀಜಿಯವರ ಬಲಿಯಾಗಿ ಅದರ ಬೆನ್ನಲ್ಲೇ ಸತ್ಯಬೋಧಾಚಾರ್ಯರೂ ಕೂಡ ಹಲ್ಲೆಗೊಳಗಾಗಿ ದುರಂತವನ್ನಪ್ಪಿದ್ದು ಮತ್ತೊಂದು ಪ್ರಮುಖ ಮಜಲು.ಸತ್ಯಬೋಧರ ಮರಣಾನಂತರ ಐನಾಪುರದ ಮನೆಯಲ್ಲಿ ತಾಯಿ ಮಗಳು ಅನುಭವಿಸುವ ಪರಕೀಯತೆ ಮತ್ತೆ ಅವರು ಬೆಟಗೇರಿಗೆ ಮರಳುವುದಕ್ಕೆ ಕಾರಣವಾಗುತ್ತದೆ. ಐನಾಪುರದಲ್ಲಿ ಬಂಧುವೇ ಆಗಿರುವ ಮದನಮಟ್ಟಿಯ ಶೇಷನ ಕಾಮುಕ ದೃಷ್ಟಿಯಿಂದ ವಚ್ಚಕ್ಕ ಅನುಭವಿಸಿದ ಹಿಂಸೆ ಕೂಡ ಒಂದು ಕಹಿಪ್ರಕರಣವಾಗಿ ಈ ಅದೃಷ್ಟಹೀನರ ಮನದಲ್ಲಿ ಮುದ್ರೆಯನ್ನೊತ್ತಿತು.
ಬೆಟಗೇರಿಯಲ್ಲಿ ತಾನು ಕಲಿತ ವೈದ್ಯಕೀಯಶಾಸ್ತ್ರ, ಸೂಲಗಿತ್ತಿತನದ ತಿಳುವಳಿಕೆಯನ್ನು ಪ್ರಯೋಗ ಮಾಡುವ ಅವಕಾಶ ತಂದೆಯ ಮೂಲಕ ಸಿಕ್ಕಿದರೂ ಮೈದುನ ಮಾಧವನಿಂದ ಎದುರಾಗುವ ಅಡ್ಡಿಗಳು , ಅದರ ಹಿನ್ನೆಲೆ ಮತ್ತು ವಚ್ಚಕ್ಕ ಧೀರೋದಾತ್ತವಾಗಿ ಎದುರಿಸಿ ಗೆಲ್ಲುವ ಬಗೆಗಿನ ಸೂಚನೆ ಕಾದಂಬರಿಕಾರರಿಗೆ ಮಾನವೀಯ ಅಂತ:ಕರಣದ ಶಕ್ತಿಯ ಮೇಲೆ ಇರುವ ಭರವಸೆಗೆ ಸಾಕ್ಷಿಯಾಗುತ್ತದೆ.
ಕೌಟುಂಬಿಕ ಸಂಬಂಧಗಳು ಬದುಕಿನ ದುರ್ಭರ ಗಳಿಗೆಗಳಲ್ಲಿ ಆಸರೆಯಾಗುವಲ್ಲಿ ಹೊರೆಯೆನಿಸದೆ ಬಾಳುವ ಅವಕಾಶವನ್ನೀಯುವುದರಲ್ಲಿ ಅರ್ಥಪೂರ್ಣವಾಗುತ್ತದೆ. ದು:ಖವನ್ನು ಹಂಚಿಕೊಳ್ಳುವುದು, ಸಾಂತ್ವನ ವಾಚಿಕವಾಗಿ, ಸ್ಪರ್ಶದ ಮೂಲಕ ಹಾಗೂ ಕ್ರಿಯೆಯ ಮೂಲಕ- ಈ ಮೂರರಲ್ಲೂ ನಡೆಯಬಹುದು. ಕಾದಂಬರಿ ಈ ಅಂಶಕ್ಕೆ ಒತ್ತನ್ನು ಕೊಟ್ಟಿದೆ. ಸಾವುನೋವಿನ ಪ್ರಸಂಗಗಳಲ್ಲಿ ಅಳುವಿನ ಕಟ್ಟೆಯೊಡೆಯುವ ಸನ್ನಿವೇಶಗಳು ಕಾದಂಬರಿಯಲ್ಲಿ ಧಾರಾಳ. ಹಾಗೆ ನೋಡಿದರೆ ಅಳುವಿಗೆ ಸಂಬಂಧಿಸಿದಂತೆ ಅದನ್ನು ಹೆಣ್ಣುಗುಣವೆಂತಲೂ ಅದನ್ನೊಂದು ದೌರ್ಬಲ್ಯವೆಂದೂ ಭಾವಿಸುವುದು ಹೆಚ್ಚು. ಆದರೆ ಕಾದಂಬರಿಯಲ್ಲಿ ‘ಅದು ಹೆಣ್ಣುಗುಣವೇ ಇರಬಹುದು. ಹಾಗಂತ ಅದರ ಬಗ್ಗೆ ತಾತ್ಸಾರ ಏಕೆ? ಕೀಳರಿಮೆ ಏಕೆ? ಅಳುವಿನ ಮೂಲಕ ಇನ್ನೊಂದು ಜೀವದ ಬಗ್ಗೆ ತೋರುವ ಕಾಳಜಿ, ಅಂತ:ಕರಣ ಬೆಲೆಯುಳ್ಳದು’ -ಎಂಬ ಪ್ರಬಂಧಧ್ವನಿಯು ಮನಮುಟ್ಟುತ್ತದೆ. . ಲೇಖಕರು ಉದ್ದೇಶಪೂರ್ವಕವಾಗಿ ಇದನ್ನು ತಂದಿದ್ದಾರೆನಿಸುತ್ತದೆ.ಗಾಂಧೀಜಿ ಹೆಣ್ಣುಗುಣಗಳ ಸಾಕಾರಮೂರ್ತಿ.ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಸಂಕಲ್ಪದ ಜೊತೆಗೆ ಈ ಗುಣಗಳನ್ನೂ ಆರಾಧಿಸುತ್ತಿದ್ದ ಸತ್ಯಬೋಧಾಚಾರ್ಯರ ಗರಡಿಯಲ್ಲಿ ಪಳಗಿದ ವಚ್ಚಕ್ಕ ಅಂತ:ಕರಣದ ಪ್ರೇರಣೆಯಿಂದ ಜಾತಿಮತ ನೋಡದೆ ಸೇವಾಧರ್ಮಕ್ಕೆ ತನ್ನನ್ನು ಒಪ್ಪಿಸಿಕೊಂಡವಳು. ಮುಸಲ್ಮಾನ ಹೆಣ್ಣುಮಗಳ ಪ್ರಸೂತಿಗೆ ನೆರವಾಗಲು ಇದ್ದ ಅಡೆತಡೆಗಳನ್ನು ಲೆಕ್ಕಿಸದೆ ಆಕೆ ಧಾವಿಸುವುದು ಈ ಅಂತ:ಕರಣದ ಪ್ರೇರಣೆಯಿಂದಲೇ.ವಚ್ಚಕ್ಕನಿಗೆ ಕಠೋಪನಿಷತ್ತಿನ ಸರಳವಿವರಣೆ ಸತ್ಯಬೋಧಾಚಾರ್ಯ ರಿಂದ ಜರಗುವುದು ಹಾಗೂ ಅದಕ್ಕೆ ಪೂರಕವೆಂಬಂತೆ ಶ್ರೀನಿವಾಸಾಚಾರ್ಯರು ಬರೆದ ‘ಜೀವಂತ ಕಠೋಪನಿಷತ್ತು’ ಎಂದು ಬಣ್ಣಿಸಲ್ಪಟ್ಟ ಕುಮಾರಿಲನಾಥವಿಶ್ವಾಸ್ ಅವರ ಜೀವನವೃತ್ತಾಂತವೂ ಅವಳಿಗೆ ಒದಗಿ ತನ್ನ ತಾನು ಅರಿಯುವ ಪ್ರಕ್ರಿಯೆಯಲ್ಲಿ ಅವಳನ್ನು ಮುನ್ನಡೆಸುತ್ತದೆ.ಒಂದು ಉದಾತ್ತಧ್ಯೇಯಕ್ಕೆ ತನ್ನನ್ನು ತಾನು ಸಮರ್ಪಿಸಿಕೊಳ್ಳುವುದಕ್ಕೆ ಅವಳಿಗೆ ಸಾಧ್ಯವಾಗಲು ಬೆಟಗೇರಿ ಮನೆತನದ ಹಿರಿಯೆ ರಾಧಾಕಾಕೂ ಅವರ ಆದರ್ಶದ ಸೇವಾಧರ್ಮದ ಮಾದರಿ ಅವಳಿಗೆ ಸತ್ಯಬೋಧಾಚಾರ್ಯರ ಮೂಲಕ ಹಾಗೂ ತನ್ನ ತಂದೆಯ ಮೂಲಕ ದೊರಕಿದ್ದು ನಿಮಿತ್ತವಾಯಿತು.
ರಾಜಮಹಾರಾಜರು ಮಾತ್ರವಲ್ಲ ಸಾಮಾನ್ಯಜನರ ಬದುಕು ಕೂಡ ಇತಿಹಾಸದ ಒಂದು ಭಾಗವೇ. ಬದುಕಿನಲ್ಲಿ ಎದುರಾದ ಸವಾಲುಗಳನ್ನು ಎದುರಿಸಿದ, ತಮಗಿದ್ದ ಪರಿಮಿತ ಅವಕಾಶದಲ್ಲೂ ಇತರರ ಬದುಕನ್ನು ಸಹನೀಯಗೊಳಿಸಿದ ಅನೇಕ ಮಂದಿ ಚರಿತ್ರೆಯಲ್ಲಿ ದಾಖಲಾಗಲಿಲ್ಲ. ಆದರೆ ಮೌಖಿಕ ಪರಂಪರೆಯಲ್ಲಿ ಅಂಥವರು ತಲೆಮಾರುಗಳ ಕಾಲ ಜೀವಂತವಿರುತ್ತಾರೆ.ಕನ್ನಡದಲ್ಲಿ ಹೀಗೆ ತಲೆಮಾರುಗಳ ಕಥಾನಕವನ್ನು ಕಟ್ಟಿಕೊಡುವ ಮಹತ್ವಾಕಾಂಕ್ಷೆಯ ಇತ್ತೀಚೆಗಿನ ಪ್ರಯತ್ನಗಳು ಸ್ವಪ್ನಸಾರಸ್ವತ,( ಗೋಪಾಲಕೃಷ್ಣ ಪೈ), ವೈವಸ್ವತ( ರೇಖಾ ಕಾಖಂಡಕಿ) ಮೊದಲಾದ ಕಾದಂಬರಿಗಳಲ್ಲಿ ನಡೆದಿದೆ. ಒಂದರ್ಥದಲ್ಲಿ ಅದೇ ಸಾಲಿಗೆ ನಿಲ್ಲುವಂತಹ ಕೃತಿ ‘ಗೈರಸಮಜೂತಿ.’ ಹಿಂಸೆ ಅಥವಾ ದ್ವೇಷದ ಎದುರು ಜೀವ ಪ್ರೀತಿ, ಜೀವಕಾರುಣ್ಯ ಗೆಲ್ಲುವ ಒಂದು ಸಂದೇಶ ಕಾದಂಬರಿಯಲ್ಲಿ ಇದೆ.ಮತ್ತು ಅದು ಸಾಕಷ್ಟು ಶಕ್ತವಾಗಿಯೇ ಪ್ರತಿಪಾದಿತವಾಗಿದೆ.
ಕಾದಂಬರಿಯು ಒಂದಲ್ಲ ಹಲವು ಕತೆಗಳನ್ನು ತನ್ನೊಡಲಲ್ಲಿ ತುಂಬಿಕೊಂಡು ವಿಸ್ತಾರವಾದ ಜೀವನದರ್ಶನವನ್ನು ಮಾಡಿಸುವುದರಲ್ಲಿ ರಾಘೂಕಾಕಾ ಮತ್ತು ರಾಧಾ ಕಾಕುವಿನದೂ ಒಂದು ಪ್ರಮುಖವಾದ ಎಳೆ.ಅಚ್ಯುತನ ದೊಡ್ಡಪ್ಪ ರಾಘೂಕಾಕಾ ಸರಕಾರಿ ನೌಕರಿಯಲ್ಲಿದ್ದವರು ಹಣದ ಆಸೆಗೆ ತನ್ನಮಕ್ಕಳಿಂದ ಅನಾದರಕ್ಕೊಳಗಾದ ಮುದುಕಿಯನ್ನು ವಂಚಿಸಿದ ಪಾಪಪ್ರಜ್ಞೆಯಿಂದ ಅರೆಹುಚ್ಚನಂತಿದ್ದವರು ಅಚ್ಯುತನ ಸಾವಿನ ಆಘಾತದಲ್ಲಿ ಆ ದುರಂತದ ಹೊಣೆಯನ್ನು ತಾನು ಹೊತ್ತುಕೊಂಡು ಮೌನಕ್ಕೆ ಶರಣಾಗುವುದು,ವೈರಾಗ್ಯವನ್ನು ತಾಳುವುದು ಮತ್ತು ಮಕ್ಕಳಿಲ್ಲದ ಹಿನ್ನೆಲೆಯಲ್ಲಿ ತನ್ನ ಆಸ್ತಿಯ ಪಾಲಿನಲ್ಲಿ ಒಂದು ಭಾಗವನ್ನು ವಚ್ಚಕ್ಕನ ಸೇವಾಕಾರ್ಯಗಳಿಗೆ ಮೀಸಲಾಗಿಡುವುದು ಕಾದಂಬರಿ ಸಾರುವ ಮಾನವೀಯ ಮೌಲ್ಯಕ್ಕೆ ಪೂರಕವಾಗಿದೆ.ಪಶ್ಚಾತ್ತಾಪ ಮತ್ತು ಪ್ರಾಯಶ್ಚಿತ್ತಗಳಿಂದ ಪುನೀತರಾಗಿ ಇಹದ ಯಾತ್ರೆಯನ್ನು ಮುಗಿಸುವ ಅವರ ಬದುಕೂ ಅಂತಿಮವಾಗಿ ಮನುಷ್ಯಜೀವನದ ಘನತೆಯನ್ನು ಎತ್ತಿಹಿಡಿಯುತ್ತದೆ.
‘ಗೈರಸಮಜೂತಿ’ ಕಾದಂಬರಿ ಹಲವು ಬಗೆಯ ಓದಿಗೆ ದಕ್ಕುವಂತಹ ಸತ್ವವುಳ್ಳದ್ದು.ಅದರ ಹರಹು ಬೇರೆ ಬೇರೆ ನೆಲೆಗಳಲ್ಲಿ ವಿಶ್ಲೇಷಣೆಯನ್ನು ಬಯಸುವಂಥದ್ದು. ಲೇಖಕರು ತಮ್ಮ ಕಾದಂಬರಿಯನ್ನು ಒಂದು ಆಧುನಿಕ ಪುರಾಣವೆಂದು ಕರೆದದ್ದು ಅರ್ಥಪೂರ್ಣವಾಗಿದೆ.ಕಾದಂಬರಿಯ ಓದಿಗೆ ಪ್ರವೇಶಿಕೆಯಾಗಿ ಲೇಖಕರೇ ಬರೆದ ಮಾತುಗಳು ಹಾಗೆಯೇ ಮುನ್ನುಡಿಯ ರೂಪದಲ್ಲಿ ಆನಂದ ಝಂಜರವಾಡರು ಆಡಿದ ನುಡಿಗಳು, ಅಲ್ಲದೆ ಅನುಬಂಧದಲ್ಲಿ ಕೊಡಲಾದ ಓ ಎಲ್ ನಾಗಭೂಷಣಸ್ವಾಮಿ, ಎಚ್ ಎಸ್ ವೆಂಕಟೇಶಮೂರ್ತಿ, ಹಾಗೂ ಶ್ರೀರಾಮಭಟ್ಟ- ಅವರ ಟಿಪ್ಪಣಿಗಳು ಕಾದಂಬರಿಯ ಅರ್ಥೈಸುವಿಕೆಗೆ ಸಹಕಾರಿಯಾಗುತ್ತವೆ. ಬಾಳಿನಲ್ಲಿ ಮಾಗಿದ ಮತ್ತು ಓದಿನ ಮೂಲಕವಾಗಿ ಜ್ಞಾನಸಂಪನ್ನಗೊಂಡ ಚೇತನದ ಅಭಿವ್ಯಕ್ತಿಯಾಗಿರುವ ಈ ಕಾದಂಬರಿ ಸಾವಧಾನದ ಓದಿಗೆ ಬೆಲೆಯುಳ್ಳ ಸಂಸ್ಕಾರವನ್ನು ನೀಡುತ್ತದೆ.
-ಮಹೇಶ್ವರಿ. ಯು
ಕಾದಂಬರಿಯ ವಿವರ:
ಲೇಖಕರು: ರಾಘವೇಂದ್ರ ಪಾಟೀಲ
ಪ್ರಕಾಶಕರು: ಮನೋಹರ ಗ್ರಂಥಮಾಲೆ , ಧಾರವಾಡ
ಪ್ರಕಟಣೆಯ ವರ್ಷ: 2020
ಬರಹ ಕೃತಿಯನ್ನು ಚೆನ್ನಾಗಿ ಪರಿಚಯಿಸಿದೆ..ಓದುವ ಆಸಕ್ತಿ ಮೂಡಿಸಿದೆ..ಧನ್ಯವಾದಗಳು ಮೇಡಂ
ನಾನೂ ಈ ಕಾದಂಬರಿಯನ್ನು ಓದಿದ್ದೆ ಹೀಗಾಗಿ ಮತ್ತೆ ನೀವು ಅದರ ಬಗ್ಗೆಯೇ ಪರಿಚಯಿಸಿದ್ದು ಅಪ್ಯಾಯಮಾನವಾಗಿತ್ತು..ಅಲ್ಲದೆ ಮತ್ತೊಮ್ಮೆ ಮರೆತ
ಅಂಶಗಳನ್ನು ಮೆಲುಕು ಹಾಕುವಂತೆ ಮಾಡಿದ್ದಕ್ಕೆ ಧನ್ಯವಾದಗಳು ಮೇಡಂ.
ಚೆನ್ನಾಗಿದೆ ಕೃತಿ ಪರಿಚಯ
ವಿಶೇಷವಾದ ಕಾದಂಬರಿಯೊಂದರ ವಿಶ್ಲೇಷಣಾತ್ಮಕ ಪರಿಚಯವು ಬಹಳ ಚೆನ್ನಾಗಿದೆ ಮೇಡಂ… ಧನ್ಯವಾದಗಳು.
ಓದಲು ಕುತೂಹಲ ಹುಟ್ಟಿಸುವಂಥಹ ಆಪ್ತ ಪುಸ್ತಕ ಪರಿಚಯ ವಿವರಣಾತ್ಮಕವಾಗಿದೆ
ಧನ್ಯವಾದಗಳು ಎಲ್ಲರಿಗೂ
ವಿಶಿಷ್ಟವಾದ ಹೆಸರಿನಿಂದ ಗಮನ ಸೆಳೆಯುವ ಕೃತಿಯ ಬಗ್ಗೆ ಸೂಕ್ತವಾದ ಪರಿಚಯ ಓದಿ ಪುಸ್ತಕ ಓದಬೇಕೆನಿಸಿದೆ. ಧನ್ಯವಾದಗಳು.