‘ಹೂಗಳು’ ಸೃಷ್ಟಿಯ ಸುಂದರ ಚಿತ್ತಾರಗಳು.

Share Button

ಪ್ರಕೃತಿಯ ಸೃಷ್ಟಿಯಲ್ಲಿ ಒಂದು ಸುಂದರ ವೈಶಿಷ್ಟ್ಯವೆಂದರೆ ಬಣ್ಣಬಣ್ಣದ ಹೂಗಳು. ಅದಕ್ಕೇನೋ ಕನ್ನಡ ಚಲನಚಿತ್ರಗೀತೆಯೊಂದರಲ್ಲಿ ಮೊದಲ ಸಾಲುಗಳು ‘ಹೂವೂ ಚೆಲುವೆಲ್ಲಾ ನಂದೆಂದಿತು. ಹೆಣ್ಣೂ ಹೂವ ಮುಡಿದು ಚೆಲುವೇ ತಾನೆಂದಿತೂ’. ಹೂವಿನ ಸೌಂದರ್ಯಕ್ಕೆ ಮಾರುಹೋಗದವರಾರು. ಅದನ್ನು ಮುಡಿದು ಹೆಣ್ಣಿನ ಚೆಲುವು ಹೆಚ್ಚಾಗುವುದು. ಅಂದಿನಿಂದಲೇ ಹೂವು, ಹೆಣ್ಣಿನ ಸಂಬಂಧ ಪ್ರಾರಂಭವಿರಬೇಕು. ಶುಭ್ರ ಆಕಾಶದಲ್ಲಿ ಸಾವಿರಾರು ನಕ್ಷತ್ರಗಳು ಮಿನುಗುಟ್ಟುತ್ತಿರುವುದನ್ನು ನೋಡಿದರೆ ಆನಂದವಾಗುವುದು. ಅದರಂತೆಯೇ ಭೂಮಿಯೆಲ್ಲಾ ತನ್ನ ಮೈಮೇಲೆ ಹಸಿರುಟ್ಟು ಕಂಗೊಳಿಸುತ್ತಿರುವಾಗ ಅದರ ಗಿಡ ಮರಗಳಲ್ಲಿ ಸಾವಿರಾರು ಹೂಗಳು ವಸಂತಕಾಲದಲ್ಲಿ ಅರಳಿ ನಿಂತರೆ ಆನಂದವಾಗುತ್ತದೆ. ಇದೊಂದು ವೈಚಿತ್ರ್ಯವೆನ್ನಿಸುತ್ತದೆ. ಏಕೆಂದರೆ ಹೂಗಳು ಒಂದೇ ರೀತಿಯ ಬಣ್ಣ, ಆಕಾರ, ವಾಸನೆ ಹೊಂದಿರುವುದಿಲ್ಲ. ಸಸ್ಯ ವಿಜ್ಞಾನಿಗಳು ಗಿಡದಲ್ಲಿ ಕಾಯಿ, ಹಣ್ಣು ಮೂಡುವ ಮೊದಲ ಹಂತವೇ ಹೂಗಳು ಎನ್ನುತ್ತಾರೆ. ನೋಟಕ್ಕೆ ಹೂಗಳು ಮೋಹಕವಾಗಿರುವಂತೆಯೇ ವಿವಿಧ ಬಗೆಯ ಸುಗಂಧಗಳನ್ನೂ ಹೊಂದಿರುತ್ತವೆ. ಕೆಲವು ಹೂಗಳು ವಾಸನಾರಹಿತವಾಗಿಯೂ ಇರುತ್ತವೆ. ಆದರೆ ಮನಕ್ಕೆ ಮುದ ನೀಡುವುದರಲ್ಲಿ ಏನೂ ವ್ಯತ್ಯಾಸವಾಗಲಾರದು. ಹೂಗಳಿಂದ ಮಕರಂದವನ್ನು ಸಂಗ್ರಹಿಸಲು ದುಂಬಿಗಳ ಹಿಂಡೇ ಇಲ್ಲಿಗೆ ಲಗ್ಗೆಯಿಡುತ್ತವೆ. ಇವು ಹೀರಿದ ಮಧುವನ್ನು ಜೇನುಹುಟ್ಟಿನಲ್ಲಿ ಸಂಗ್ರಹ ಮಾಡಿಡುತ್ತವೆ. ಅದನ್ನು ನಾವು ಕದ್ದು ಅನೇಕ ರೀತಿಯಲ್ಲಿ ಸವಿಯಲು ಬಳಸುತ್ತೇವೆ. ಆಯುರ್ವೇದ, ಯುನಾನಿ ವೈದ್ಯಕೀಯ ಪದ್ಧತಿಗಳಲ್ಲಿ ಜೇನಿನ ಉಪಯೋಗ ಅನೇಕ ಔಷಧಗಳ ರೂಪದಲ್ಲಿ ಬಳಕೆಯಾಗುತ್ತದೆ.

ಹೂಗಳಲ್ಲಿ ನೂರೆಂಟು ವಿಧಗಳಿವೆ. ನಮ್ಮಲ್ಲಿ ಬಳಕೆಯಾಗುವ ಪರಿಚಿತ ಹೂಗಳೆಂದರೆ ಮಲ್ಲಿಗೆ, ಜಾಜಿ, ಸಂಪಿಗೆ, ಸೇವಂತಿಗೆ, ಕಾಕಡ, ಸುಗಂಧರಾಜ, ಕನಕಾಂಬರ, ಗುಲಾಬಿ, ಚೆಂಡುಹೂ, ಕಣಗಿಲೆ, ಢೇರಾ, ಕರ್ಣಕುಂಡಲ, ತುಂಬೆ, ಕೇದಿಗೆ, ಬಿಂದಿಗೆಹೂ, ಸೂರ್ಯಕಾಂತಿ, ದಾಸವಾಳ, ಪಾರಿಜಾತ, ಬ್ರಹ್ಮಕಮಲ, ಶಿವಲಿಂಗಪುಷ್ಪ, ಎಕ್ಕದಹೂ, ಬೋಗನವಿಲ್ಲ, ಬಾಳೆಹೂ, ಬೇವಿನಹೂ, ನುಗ್ಗೆಹೂ, ತಂಗಡಿಹೂ, ಮುಂತಾದವು. ಇವುಗಳಲ್ಲಿ ಬಹುಪಾಲು ಹೂಗಳನ್ನು ನಾವು ದೇವರ ಪೂಜೆ, ಅಲಂಕಾರಕ್ಕೆ, ಕೆಲವನ್ನು ಕಟ್ಟಿ ಹೆರಳಲ್ಲಿ ಮುಡಿದುಕೊಳ್ಳಲು ಬಳಸುವುದುಂಟು. ಕೆಲವು ಹೂಗಳು ಮುಂದೆ ಕಾಯಿ, ಹಣ್ಣು ತರಕಾರಿಗಳಾಗಿ ಮಾರ್ಪಡುತ್ತವೆ. ದೇವಾಲಯಗಳಲ್ಲಿ, ಮನೆಗಳಲ್ಲಿ ಮಾಲೆಗಳಾಗಿ ಕಟ್ಟಿ, ಹಾಗೂ ಬಿಡಿಹೂಗಳಾಗಿ ದೇವರಿಗೆ ಅಲಂಕಾರ ಮಾಡಲು ಬಳಸುತ್ತೇವೆ. ಹೆಣ್ಣುಮಕ್ಕಳು ತಮ್ಮ ಮುಡಿಯಲ್ಲೂ ಮುಡಿಯುತ್ತಾರೆ. ವಿವಾಹ ಮಹೋತ್ಸವದ ಸಂದರ್ಭದಲ್ಲಿ ವಧೂವರರಿಗೆ ಕೊರಳನ್ನಲಂಕರಿಸಲು ಅಲಂಕಾರಿಕ ಮಾಲೆಗಳನ್ನು ಬಲಸಲಾಗುತ್ತದೆ. ವಿವಾಹ ಮಂಟಪದ ಅಲಂಕಾರವನ್ನೂ ವೈವಿಧ್ಯಮಯವಾಗಿ ಕುಶಲ ಕಲೆಗಾರರಿಂದ ಹೂ, ಬಳ್ಳಿಗಳಿಂದ ಮಾಡಿಸುತ್ತಾರೆ. ಈಗಿನ ಕಾಲದಲ್ಲಂತೂ ಕಲ್ಯಾಣ ಮಂಟಪದ ಮುಂದಿನ ತೋರಣದಿಂದ ಪ್ರಾರಂಭವಾಗಿ ಉದ್ದಕ್ಕೂ ಸಾಗಿ ವೇದಿಕೆಯಮೇಲಿನ ವರೆಗೂ, ಹಾಗೂ ವಧೂವರರು ಆಸೀನರಾಗುವ ಪೀಠಗಳ ಹಿನ್ನೆಲೆಯಲ್ಲಿಯೂ ಹೂಗಳ ಅಲಂಕಾರವನ್ನು ನುರಿತ ಹೂಗಾರರಿಂದ (ಫ್ಲೋರಿಸ್ಟ್) ಮಾಡಿಸಿರುತ್ತಾರೆ. ಅವರುಗಳು ನಮ್ಮ ಜೇಬಿನ ಶಕ್ತ್ಯಾನುಸಾರ ಈ ರಂಗಸಜ್ಜಿಕೆಯನ್ನು ತಯಾರಿಸಿ ಕೊಡುತ್ತಾರೆ. ನನಗೆ ಕೆಲವು ವೈಭವಯುತ ಮದುವೆಗಳಲ್ಲಿ ಇಂತಹ ಚಂದದ ಹೂವಿನಲಂಕಾರಕ್ಕೆ ಲಕ್ಷಾಂತರ ರುಪಾಯಿಗಳನ್ನು ವೆಚ್ಚ ಮಾಡುತ್ತಾರೆಂದು ತಿಳಿದು ಆಶ್ಚರ್ಯವಾಯಿತು.

ಕಾರ್ಯಕ್ರಮಗಳಲ್ಲಿ ಪ್ರತಿಷ್ಠಿತರನ್ನು ಸ್ವಾಗತಿಸಲು, ಆರತಕ್ಷತೆಯಲ್ಲಿ ವಧೂವರರಿಗೆ ಶುಭಕೋರಲು, ಹುಟ್ಟುಹಬ್ಬ, ಗೃಹಪ್ರವೇಶ, ಷಷ್ಟ್ಯಬ್ಧಿ ಸಮಾರಂಭ, ಮುಂತಾದ ಸಾಂಪ್ರದಾಯಕ ಸಮಾರಂಭಗಳಲ್ಲಿ ಮುಖ್ಯರಾದವರನ್ನು ಅಭಿನಂದಿಸಲು ತರಹೇವಾರಿ ಹೂಗಳನ್ನು ಅಂದವಾಗಿ ಕಟ್ಟಿದ ಹೂಗುಚ್ಛ (ಬೊಕೆ) ಗಳನ್ನು ನೀಡಿ ಶುಭಾಶಯ ಹೇಳುವುದು ರೂಢಿಯಾಗಿದೆ. ಈ ಪದ್ಧತಿ ಅನುಕರಣ ಯವಾದುದು. ಆದರೆ ಇದರ ಉಪಯೋಗ ನಂತರ ಏನಾಗುತ್ತದೆಯೆಂದು ಪರಾಮರ್ಶಿಸಿದರೆ ಬಹಳ ವಿಷಾದವಾಗುತ್ತದೆ. ಹೂಗುಚ್ಛಗಳು ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಸ್ವೀಕಾರ ಮಾಡಿದ ವ್ಯಕ್ತಿಗಳಿಗೆ ಅದರ ಅಂದಚಂದಗಳನ್ನು ಕ್ಷಣಕಾಲ ವೀಕ್ಷಿಸಿ ಸಂತಸ ಪಡುವಷ್ಟು ಕಾಲಾವಕಾಶ ಇರುವುದಿಲ್ಲ. ಕೊಟ್ಟಾಗ ಒಂದು ಕೃತಕ ನಗೆತೋರಿ ಹೂಗುಚ್ಛವನ್ನು ಅವರ ಹಿಂದಿರುವ ವ್ಯಕ್ತಿಯೊಬ್ಬರಿಗೆ ವರ್ಗಾಯಿಸುತ್ತಾರೆ. ಅವರು ಅವುಗಳನ್ನು ಕೋಣೆಯ ಮೂಲೆಯೊಂದರಲ್ಲಿ ಒಟ್ಟುತ್ತಾರೆ. ಮಾರನೆಯ ದಿನ ಅವೆಲ್ಲವೂ ಕಸದ ರಾಶಿಯಲ್ಲಿ ಸೇರಿಹೋಗುತ್ತವೆ. ಶುಭಾಶಯ ಕೋರುವವರು ಸ್ವೀಕರಿಸುವರೊಂದಿಗೆ ಒಂದು ಭಾವಚಿತ್ರ ಕ್ಲಿಕ್ಕಿಸುವವರೆಗೆ ಮಾತ್ರ ಇವುಗಳ ಉಪಯೋಗ. ಇದಕ್ಕಾಗಿ ಹಣಕೊಟ್ಟು ಹೂಗುಚ್ಛ ಕೊಂಡು ಶುಭಾಶಯ ಹೇಳುವುದು ಎಷ್ಟು ಕೃತಕವೆನ್ನಿಸಿ ಇದರ ಆವಶ್ಯಕತೆಯಿದೆಯೇ? ಎಂದು ಎಷ್ಟೋ ಬಾರಿ ಆಲೋಚಿಸಿದ್ದುಂಟು.

ಆದರೆ ಇಲ್ಲಿ ಮತ್ತೊಂದು ಮಹತ್ವದ ಸಂಗತಿಯಿದೆ. ಹೂಗಳನ್ನು ತರಹೇವಾರಿ ಮಾಲೆಗಳಾಗಿ, ದಂಡೆಗಳಾಗಿ ಕಟ್ಟುವ, ಹೂಗುಚ್ಛಗಳನ್ನು ತಯಾರಿಸಿವ ನೂರಾರು ಜನರ ಜೀವನೋಪಾಯ ಇಲ್ಲಿ ಅಡಗಿದೆ. ಮಂಟಪ, ವೇದಿಕೆ, ತೋರಣಗಳನ್ನು ಅಲಂಕಾರಿಕವಾಗಿ ಸಜ್ಜುಗೊಳಿಸುವ ಏಜೆನ್ಸಿಗಳೇ ಕೆಲಸಮಾಡುತ್ತಿವೆ. ಅವರ ಬಳಿಯಲ್ಲಿನ ಕರ್ಮಚಾರಿಗಳು ಇದರಿಂದಾಗಿಯೇ ಬದುಕುತ್ತಾರೆ, ವಧೂವರರ ಕೊರಳಿನಲ್ಲಿ ಹಾಕಿಕೊಳ್ಳುವ ಮಾಲೆಗಳನ್ನು ಆ ದಿನ ಆರತಕ್ಷತೆಗೆ ಅವರು ತೊಡುವ ಉಡುಪಿಗೆ ಮ್ಯಾಚ್ ಆಗುವ ವರ್ಣದ ಹೂಗಳ ಪಕಳೆಗಳಿಂದಲೇ ಸೂಕ್ಷ್ಮವಾಗಿ ಪೋಣ ಸಿ ತಯಾರಿಸಿಕೊಡುತ್ತಾರಂತೆ. ಇವೆಲ್ಲವೂ ವೀಡಿಯೋ, ಫೋಟೊಗಳಲ್ಲಿ ಸುಂದರವಾಗಿ ಮೂಡಬೇಕು. ಇದಕ್ಕಾಗಿ ಹೂಗಾರರು ಪಡುವ ಶ್ರಮಕ್ಕೆ ಬೆಲೆ ಸಲ್ಲಬೇಕಲ್ಲವೇ. ಆದ್ದರಿಂದ ಇದು ಅನಾವಶ್ಯಕ ವೆಚ್ಚವೆನ್ನಿಸಿದರೂ ನಾವೇ ಆರಿಸಿಕೊಂಡ ಆಚರಣೆಯಾಗಿದೆ, ಅನಿವಾರ್ಯವಾಗಿದೆ.

ಬಹಳ ಹಿಂದೆ ಮನೆಗಳಲ್ಲಿ ಹೆಣ್ಣುಮಕ್ಕಳೇ ಬಿಡಿಹೂಗಳಿಂದ ಮಾಲೆ, ದಂಡೆಗಳನ್ನು ತಯಾರಿಸುತ್ತಿದ್ದರು. ಇದರಿಂದಲೇ ಪೂಜೆ, ಅಲಂಕಾರ, ಆಚರಣೆಗಳಿಗೆ ಸಹಾಯಕವಾಗಿತ್ತು. ವಧುವಿನ ಅಲಂಕಾರಕ್ಕಾಗಿ ದುಂಡು ಮಲ್ಲಿಗೆಯ ಮೊಗ್ಗಿನಿಂದ ಮೊಗ್ಗಿನ ಜಡೆ ಹೆಣೆಯುತ್ತಿದ್ದರು. ಇದು ಸಾಕಷ್ಟು ಶ್ರಮ, ಕಾಲ ಬಯಸುತ್ತಿತ್ತು. ಆದರೆ ಈಗ ಮಾರುಕಟ್ಟೆಯಲ್ಲಿ ಹೆಣೆದು ಸಿದ್ಧವಾದ ಜಡೆಯೇ ಸಿಗುತ್ತದೆ. ಅದನ್ನು ತಂದು ವಧುವಿನ ಕೂದಲಿಗೆ ಜೋಡಿಸಿ ಪಿನ್ ಹಾಕಿ ತಕ್ಷಣಕ್ಕೆ ಮೊಗ್ಗಿನ ಅಲಂಕಾರ ಮಾಡಬಹುದು. ಹೆಣ್ಣುಮಕ್ಕಳೂ ತರಹೇವಾರಿ ಹೂಗಳ ದಂಡೆಗಳನ್ನು ಓರಣವಾಗಿ ಮುಡಿದು ತಮ್ಮ ಅಲಂಕಾರವನ್ನು ಮಾಡಿಕೊಳ್ಳುತ್ತಿದ್ದರು. ಈಗ ಕಾಲವೂ ಬದಲಾಗಿ, ರೂಢಿಯೂ ಬದಲಾಗಿದೆ. ಕೂದಲನ್ನು ಹಾಗೇಯೇ ಹಾರುತ್ತಿರುವಂತೆ ಬಿಡುವುದು, ಕೆಲವರು ಅದನ್ನು ಕತ್ತರಿಸಿ ಬಾಬ್ಕಟ್, ಷೋಲ್ಡರ್‌ಕಟ್ ಮಾಡಿಕೊಳ್ಳುವುದೇ ಫ್ಯಾಷನ್ ಆಗಿದೆ. ಇನ್ನು ಹೂವನ್ನು ದಂಡೆಕಟ್ಟಿ ಮುಡಿಯುವುದೆಲ್ಲಿಗೆ? ಇನ್ನೂ ದೇವಾಲಯಗಳಲ್ಲಿ ಮಾತ್ರ ಎಂದಿನಂತೆಯೇ ಹೂಗಳಿಂದ ಅಲಂಕಾರ ಮಾಡುವುದು ಮುಂದುವರಿದಿದೆ. ಸ್ವಾಮಿಗೆ ಪೂಜೆಯೆಲ್ಲಾ ಮುಗಿದು ಮಹಾಮಂಗಳಾರತಿ ಮಾಡುವವೇಳೆಗೆ ವೀಕ್ಷಿಸಿದರೆ ಭಕ್ತಗಣಕ್ಕೆ ಹೂವಿನ ಅಲಂಕಾರದ ಸೊಬಗು ಕಣ್ಮನ ಸೆಳೆಯುತ್ತದೆ.

ಹೂಗಳ ಆಕರ್ಷಣೆಯು ಮನುಷ್ಯರಾದಿಯಾಗಿ ಪುರಾಣದ ವ್ಯಕ್ತಿಗಳನ್ನೂ ಬಿಟ್ಟಿಲ್ಲ. ಈ ಅಂಶ ಪುರಾಣಪ್ರಸಂಗಗಳಲ್ಲಿ ಕಂಡುಬರುತ್ತದೆ. ಅತ್ಯಂತ ಸೂಕ್ಷ್ಮ ಪ್ರವೃತ್ತಿಯ ಆದರೆ ವಿಶಿಷ್ಠ ಸುಗಂಧಭರಿತ ಪಾರಿಜಾತದ ಕೆಲವು ಹೂಗಳನ್ನು ಶ್ರೀಕೃಷ್ನನು ದೇವಲೋಕದಿಂದ ತಂದು ತನ್ನ ಪಟ್ಟದರಸಿ ರುಕ್ಮಿಣ ಗೆ ಕೊಟ್ಟನಂತೆ. ಆಕೆ ಪ್ರಸನ್ನಳಾದಳು, ಆದರೆ ಆತನ ಪ್ರೀತಿಪಾತ್ರಳಾದ ಇನ್ನೊಬ್ಬ ಪತ್ನಿ ಸತ್ಯಭಾಮೆಗೆ ಇದರಿಂದ ಅಸಮಾಧಾನವಾಗಿ ಸಿಟ್ಟಾದಳಂತೆ. ಅವಳನ್ನು ಸಮಾಧಾನ ಪಡಿಸಲು ಶ್ರೀಕೃಷ್ಣನಿಗೆ ಸಾಕುಬೇಕಾಯಿತಂತೆ. ಕೊನೆಗೆ ಪಾರಿಜಾತದ ವೃಕ್ಷವನ್ನೇ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟಮೇಲೆ ಆಕೆಯು ಪ್ರಸನ್ನಳಾದಳಂತೆ.

ಮಹಾಭಾರತದ ಇನ್ನೊಂದು ಪ್ರಸಂಗದಲ್ಲಿ ಅರಣ್ಯವಾಸದಲ್ಲಿದ್ದ ಪಾಂಡವರ ಪತ್ನಿ ದ್ರೌಪದಿಯು ಹೊರಗೆಲ್ಲೋ ಸುತ್ತಾಡುತ್ತಿರುವಾಗ ಗಾಳಿಯಲ್ಲಿ ಅತ್ಯಂತ ಮನೋಹರವಾದ ಹೂವಿನ ಪರಿಮಳವೊಂದು ತೇಲಿಬಂತು. ಆಕೆ ಅದನ್ನು ಆಘ್ರಾಣ ಸಿ ಇಷ್ಟಪಟ್ಟು ಆ ಹೂಗಳನ್ನು ತನಗೆ ತಂದುಕೊಡೆಂದು ತನ್ನ ಪತಿ ಭೀಮಸೇನನನ್ನು ಕೋರಿದಳಂತೆ. ರಾಜ್ಯಕೋಶವೆಲ್ಲವನ್ನೂ ಕಳೆದುಕೊಂಡು ನಾಡಾಡಿಗಳಂತೆ ಅರಣ್ಯದಲ್ಲಿ ವಾಸಮಾಡುತ್ತಿರುವಾಗ ಯಕಶ್ಚಿತ್ ಒಂದು ಹೂವಿನ ಪರಿಮಳದ ವ್ಯಾಮೋಹವೇ ಎಂದು ನಮಗನ್ನಿಸಬಹುದು. ಆದರೆ ಹೂಗಳ ಆಕರ್ಷಣೆ ಅಂಥಹುದು. ಭೀಮಸೇನನು ಅದಕ್ಕಾಗಿ ಅನೇಕ ಯೋಜನೆಗಳಷ್ಟು ನಡೆದು ದಾರಿಯಲ್ಲಿ ಹನುಮಂತನನ್ನು ಭೇಟಿಮಾಡಿ ಅಲ್ಲಿ ನಡೆದ ಘಟನೆಯಲ್ಲಿ ಅವನ ಗರ್ವಭಂಗವಾಯಿತು. ನಂತರ ಅವನು ತನ್ನ ಸೋದರನೆಂಬುದು ತಿಳಿದು ಅವನಿಂದಲೇ ಸೌಗಂಧಿಕಾ ಪುಷ್ಪ ಇರುವ ಜಾಗವನ್ನು ತಿಳಿಯುತ್ತಾನೆ. ಹೂಗಳಿದ್ದ ಕೊಳಕ್ಕೆ ಕಾವಲಿದ್ದವರೊಡನೆ ಕಾದಾಡಿ ಅಂತೂ ಹಲವು ಪುಷ್ಪಗಳನ್ನು ದ್ರೌಪದಿಗೆ ತಂದುಕೊಟ್ಟನಂತೆ.

ಸೌಗಂಧಿಕಾ ಪುಷ್ಪ

ಕವಿಗಳು ಸೌಂದರ್ಯೊಪಾಸಕರು. ಭಾವನಾಜೀವಿಗಳು, ತಮ್ಮ ಕಲ್ಪನಾಲೋಕದಲ್ಲಿ ವಿಹರಿಸುತ್ತಾ ಪ್ರಕೃತಿಯನ್ನೂ ಒಳಗೊಂಡಂತೆ ಎಲ್ಲ ಸುಂದರ ವಸ್ತುಗಳನ್ನು ವಣ ಸಿದ್ದಾರೆ. ಹೂಗಳಂತೂ ಅವರ ಕಾವ್ಯ, ಕವಿತೆಗಳಲ್ಲಿ ಮುಖ್ಯ ಪಾತ್ರವಾಗಿವೆ. ರಾಷ್ಟ್ರಕವಿ ಕುವೆಂಪುರವರು ತಮ್ಮ ಮನೆಯಂಗಳದಲ್ಲಿ ಅರಳಿದ್ದ ಹೀರೆಯಹೂವನ್ನೇ ಕುರಿತ ಒಂದು ಪದ್ಯವನ್ನು ರಚಿಸಿದ್ದಾರೆ. ಬಾಲ್ಯದಲ್ಲಿ ಇದನ್ನು ಓದಿದ ನೆನಪು. ಗೆಳೆಯರು ಆಡಲು ಯಾರೂ ಇಲ್ಲ. ಅಂಗಳದಲ್ಲಿಯ ಹೀರೆಯ ಹೂವೇ ನಿನ್ನನೆ ನೋಡುವೆನು, ನಿನ್ನೊಡನಾಡುವೆನು ಎಂದು ಮುಂದುವರೆಯುತ್ತದೆ. ಹೂಗಳ ಸೌಂದರ್ಯವಿರಲಿ, ಸ್ತ್ರೀ ಸೌಂದರ್ಯ ವರ್ಣನೆಯಲ್ಲಿ ಕವಿಗಳು ಹೂಗಳ ಹಿರಿಮೆಗಳನ್ನು ಉಪಮೆಗಳನ್ನಾಗಿ ಬಳಸಿರುವುದುಂಟು. ಸಂಪಿಗೆಯಂತಹ ನಾಸಿಕವುಳ್ಳವಳು, ಕಮಲದಂತೆ ಕಣ್ಣುಳ್ಳವಳು, ಕಮಲದಂತೆ ಮುಖವುಳ್ಳವಳು, ಏಳು ಮಲ್ಲಿಗೆಯಂತೆ ಸುಕೋಮಲವಾದವಳು, ಎಂದು ಮುಂತಾಗಿ ವಣ ಸಿರುವುದುಂಟು.

ಹೂಗಳನ್ನು ಅಲಂಕಾರಿಕ ಕಾರ್ಯಗಳಿಗಲ್ಲದೆ ಇನ್ನೂ ಬೇರೆ ಉದ್ದೇಶಗಳಿಗೂ ಬಳಸುತ್ತಾರೆ. ಮುಖ್ಯವಾಗಿ ಸುವಾಸನಾಯುಕ್ತ ಹೂಗಳಿಂದ ಸುಗಂಧ ದ್ರವ್ಯಗಳ ತಯಾರಿಕೆ, ಅತ್ತರುಗಳನ್ನು ತಯಾರಿಸುವ ಕೆಲಸವನ್ನು ವಂಶಪಾರಂಪರ್ಯವಾಗಿ ಮುಂದುವರಿಸಿಕೊಂಡು ಬಂದಿರುವ ಅನೇಕ ಕುಟುಂಬಗಳು ಈಗಲೂ ಇವೆ. ಇತ್ತೀಚೆಗೆ ರಾಸಾಯನಿಕ ವಸ್ತುಗಳಿಂದ ಸುಗಂಧದ್ರವ್ಯಗಳನ್ನು ತಯಾರಿಸುವವರೆಗೆ ಇವುಗಳ ಉಪಯೋಗವೇ ಪ್ರಮುಖವಾಗಿತ್ತು. ಮೊಘಲ್ ದೊರೆಗಳ ಕಾಲದಲ್ಲಿ ಇಂತಹ ತಯಾರಕರಿಗೆ ತುಂಬ ಪ್ರೋತ್ಸಾಹವಿತ್ತು. ರಾಣ ವಾಸದವರು ಸ್ನಾನಗೃಹದಲ್ಲಿ ಗುಲಾಬಿಯಂತಹ ಸುಗಂಧಭರಿತ ಹೂಗಳ ಪಕಳೆಗಳನ್ನು ನೀರಿಗೆ ಹಾಕಿ ಸ್ನಾನ ಮಾಡುತ್ತಿದ್ದರಂತೆ. ಗುಲ್ಕನ್ ತಯಾರಿಕೆಯಲ್ಲಿ ಗುಲಾಬಿ ಹೂ ಮತ್ತು ಜೇನುತುಪ್ಪದ ಉಪಯೋಗ ಮಾಡುತ್ತಾರೆ.

ನಮ್ಮ ಹಳ್ಳಿಯಲ್ಲಿ ಹಿರಿಯರು ಕೆಲವು ಮನೆಮದ್ದುಗಳ ತಯಾರಿಕೆಯಲ್ಲಿ ಕೆಲವು ಹೂಗಳನ್ನು ಬಳಸುತ್ತಿದ್ದರು. ಬಿಳಿಯ ದಾಸವಾಳದ ಹೂಗಳನ್ನು ಒಣಗಿಸಿ ಪುಡಿಮಾಡಿ ಅದನ್ನು ತೆಳುವಾದ ಬಟ್ಟೆಯಲ್ಲಿ ಶೋಧಿಸಿ ಅದಕ್ಕೆ ಕಲ್ನಾರು, ಬೂರಾಸಕ್ಕರೆಗಳನ್ನು ಒಂದು ಗೊತ್ತಾದ ಪ್ರಮಾಣದಲ್ಲಿ ಬೆರೆಸಿಡುತ್ತಿದ್ದರು. ಇದನ್ನು ಸ್ತ್ರೀಯರು ಮಾಸಿಕ ಋತುಸ್ರಾವದ ಸಮಯದಲ್ಲಿ ಅನುಭವಿಸುವ ನೋವು ನಿವಾರಣೆಗೆ ಕೊಡುತ್ತಿದ್ದರು.

ತಲೆಹೊಟ್ಟು ನಿವಾರಣೆಗೆ ಎಲ್ಲರೀತಿಯ ದಾಸವಾಳದ ಹೂಗಳನ್ನು ಒಣಗಿಸಿ ಪುಡಿಮಾಡಿ, ಇದರ ಜೊತೆಗೆ ಮೆಂತ್ಯದ ಪುಡಿ ಸೇರಿಸಿ ತಲೆಸ್ನಾನ ಮಾಡುವಾಗ ಶಾಂಪೂವಿನಂತೆ ಬಳಸಲು ಹೇಳುತ್ತಿದ್ದರು. ಇದು ಈಗಿನ ಹೆಡ್ ಅಂಡ್ ಷೋಲ್ಡರ್ ಶಾಂಪೂವಿಗಿಂತ ಚೆನ್ನಾಗಿ ಕೆಲಸ ಮಾಡುತ್ತಿತ್ತು.

ತಂಗಡಿಯ ಹೂಗಳನ್ನು ಸಂಗ್ರಹಿಸಿ ಪಕಳೆಗಳನ್ನು ಒಣಗಿಸಿ ಪುಡಿಮಾಡುತ್ತಿದ್ದರು. ಇದಕ್ಕೆ ಒಣಶುಂಠಿ, ಕಾಳುಮೆಣಸು, ಬಜೆಯನ್ನೂ ಪುಡಿಮಾಡಿ ಬೆರೆಸುತ್ತಿದ್ದರು. ಬಾಣಂತಿಯರಿಗೆ ಇದರಿಂದ ತಯಾರಿಸಿದ ಟೀನಂತಹ ಪೇಯವನ್ನು ಕುಡಿಯಲು ಕೊಡುತ್ತಿದ್ದರು. ಶೀತಕಾಲದಲ್ಲಿ ಬಾಣಂತಿಗೆ ಇದು ಥಂಡಿಯಾಗದಂತೆ ದೇಹವನ್ನು ಕಾಪಾಡುತ್ತಿತ್ತು.

ತಂಗಡಿಯ ಹೂಗಳು

ನಂಜಬಟ್ಟಲು(ನಂದಿಬಟ್ಟಲು) ಹೂಗಳಿಂದ ಹಸುವಿನ ಬೆಣ್ಣೆ ಉಪಯೋಗಿಸಿ ಕಣ ಗೆ ತಂಪುಕೊಡುವಂತಹ ಕಾಡಿಗೆಯನ್ನು ತಯಾರಿಸುತ್ತಿದ್ದರು. ಇದು ಇಂದಿನ ದುಬಾರಿ ಕಾಜಲ್ ಗಿಂತ ಒಳ್ಳೆಯ ಪರಿಣಾಮ ನೀಡುತ್ತಿತ್ತು.

ನಾಚಿಕೆ ಮುಳ್ಳಿನ ಹೂಗಳನ್ನು ಆರಿಸಿ ಒಣಗಿಸಿ ಅದಕ್ಕೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಗುಳಿಗೆಗಳನ್ನು ತಯಾರಿಸುತ್ತಿದ್ದರು. ಸ್ತ್ರೀಯರ ಮುಟ್ಟಿನ ಅವಧಿ ಅನಿರ್ದಿಷ್ಟವಾಗಿದ್ದವರಿಗೆ ಈ ತೊಂದರೆ ನಿವಾರಣೆಗಾಗಿ ಈ ಗುಳಿಗೆಗಳನ್ನು ನೀಡುತ್ತಿದ್ದರು.

ಈಗ ಫುಡ್ ಪಾಯಿಸನ್ ಆದಾಗ ತಕ್ಷಣ ಡಾಕ್ಟರುಗಳ ಬಳಿಗೆ ಓಡುತ್ತೇವೆ. ಹಾಗೇನಾದರೂ ನಿಜವಾಗಿ ಆಗಿದೆಯೇ ಎಂದು ಕಂಡುಹಿಡಿಯಲು ನಮ್ಮ ಹಿರಿಯರು ಒಂದು ಉಪಾಯ ಮಾಡುತ್ತಿದ್ದರು. ನುಗ್ಗೆಹೂಗಳನ್ನು ಅರೆದು ರಸತೆಗೆದು ಆ ರಸವನ್ನು ರೋಗಿಯ ಅಂಗೈಯನ್ನು ಬಟ್ಟಲಿನಾಕಾರದಲ್ಲಿ ಹಿಡಿಸಿ ಅದಕ್ಕೆ ಸುರಿಯುತ್ತಿದ್ದರು. ಆಹಾರದಲ್ಲಿ ವ್ಯತ್ಯಾಸವಾಗಿದ್ದರೆ ಆ ರಸ ಕ್ಷಣಗಳಲ್ಲಿ ಕಪ್ಪುಬಣ್ಣಕ್ಕೆ ಬದಲಾಗುತ್ತಿತ್ತು. ಆಗ ರೋಗಿಗೆ ಓವಿನಕಾಳು (ಅಜವಾನ) ಜೀರಿಗೆ, ಹಸಿಶುಂಟಿ, ಬೆಲ್ಲ ಇವುಗಳನ್ನು ನಿಗದಿಯಾದ ಪ್ರಮಾಣದಲ್ಲಿ ಕುಟ್ಟಿ ಕಷಾಯವಾಗಿ ಅಥವಾ ಗುಳಿಗೆಗಳಾಗಿ ಸೇವಿಸಲು ಹೇಳುತ್ತಿದ್ದರು. ಇವೆಲ್ಲವನ್ನೂ ನಮ್ಮ ಅಜ್ಜ ಮಾಡಿಕೊಡುತ್ತಿದ್ದುದನ್ನು ನಾನು ನೋಡಿದ್ದೆ.

ಹೂಗಳ ಅಲಂಕಾರವನ್ನು ನಮ್ಮೂರಿನ ದಸರಾ ಸಮಯದ ಫಲಪುಷ್ಪ ಪ್ರದರ್ಶನದಲ್ಲಿ ಪ್ರತಿವರ್ಷ ಕಾಣಬಹುದು. ತರಹೇವಾರಿ ಹೂಗಳನ್ನು ಜೋಡಿಸಿಡುವುದು ಒಂದು ತೆರನಾದರೆ, ಹೂಗಳಿಂದಲೇ ಆನೆ, ಅಂಬಾರಿ, ಗಾಜಿನಮನೆ, ದೇವಸ್ಥಾನ ಹೀಗೆ ವಿವಿಧ ರೂಪಗಳನ್ನು ತಯಾರಿಸಿ ಕಣ ಗೆ ಹಬ್ಬವಾಗುವಂತೆ ಪ್ರದರ್ಶನ ಮಾಡುತ್ತಾರೆ. ಇದೇ ರೀತಿ ಬೆಂಗಳೂರಿನ ಲಾಲ್‌ಬಾಗ್ ತೋಟದಲ್ಲಿಯೂ ವರ್ಷಕ್ಕೊಂದು ಬಾರಿ ಪುಷ್ಪ ಪ್ರದರ್ಶನ ಏರ್ಪಡಿಸುತ್ತಾರೆ. ಇದಕ್ಕೆ ಪ್ರವೇಶ ಧನವನ್ನಿಟ್ಟರೂ ಜನಸಂದಣ ಮೇರೆವರಿಯುತ್ತದೆ.

ಕೇರಳ ರಾಜ್ಯದ ಜನರು ತಮ್ಮ ವಿಶೇಷ ಹಬ್ಬವಾದ ಓಣಂ ನಲ್ಲಿ ಅಲಂಕಾರಿಕವಾದ ಅದ್ಭುತ ವೃತ್ತಾಕಾರದ ಬೃಹತ್ ರಂಗವಲ್ಲಿಗಳನ್ನು ವರ್ಣಮಯವಾದ ಹೂಗಳ ಪಕಳೆಗಳಿಂದಲೇ ಮಾಡಿ ಬಲೀಂದ್ರನ ಸ್ವಾಗತ ಮಾಡುತ್ತಾರೆ. ಇದನ್ನು ಹಲವಾರು ಜನರು ಸೇರಿಯೂ ಮಾಡುವುದುಂಟು. ನೋಡಲಿಕ್ಕೆ ಬಹಳ ಸುಂದರವಾಗಿರುತ್ತದೆ.

ಇತ್ತೀಚೆಗೆ ಕಾಣುತ್ತಿರುವ ವಿಚಿತ್ರ ಆಚರಣೆಯೊಂದರ ಬಗ್ಗೆ ಹೇಳಲೇಬೇಕಾಗಿದೆ. ರಾಜಕೀಯ ಧುರೀಣರುಗಳು, ಸಿನಿಮಾ ನಟರುಗಳು ತಮ್ಮ ಹುಟ್ಟು ಹಬ್ಬಗಳನ್ನು ಆಚರಿಸಿಕೊಳ್ಳುವ ಬಗ್ಗೆ ವೃತ್ತಪತ್ರಿಕೆಗಳ ಜಾಹೀರಾತುಗಳಲ್ಲಿ, ಮಾಧ್ಯಮ ವಾಹಿನಿಗಳಲ್ಲಿ ಭಯಂಕರವಾಗಿ ಪ್ರಚಾರವಾಗುತ್ತವೆ. ಅವರ ಅಭಿಮಾನಿಗಳು, ಮತ್ತು ಹಿಂಬಾಲಕರುಗಳು ಹೆಬ್ಬಾವಿನ ಗಾತ್ರಕ್ಕಿಂತಲೂ ದೊಡ್ಡದಾದ ತರಹೇವಾರಿ ಹೂವಿನ ಹಾರಗಳನ್ನು ಅವರಿಗೆ ತೊಡಿಸುತ್ತಿರುವ ಚಿತ್ರಗಳನ್ನು ನೋಡಿದಾಗ ಅಚ್ಚರಿಯಾಗುತ್ತದೆ. ಹಾರವನ್ನೇನಾದರೂ ನೇರವಾಗಿ ಹಾಕಿಬಿಟ್ಟರೆ ಅವರು ಕೊರಳು ಮುರಿಯುವಂತಿರುತ್ತದೆ. ಅದಕ್ಕೋಸ್ಕರ ಅಭಿಮಾನಿಗಳು ಕೆಲವರು ಅದನ್ನು ಎರಡೂ ಬದಿಯಲ್ಲಿ ಹಿಡಿದುಕೊಂಡು ನಾಯಕನ,/ ಧುರೀಣನ ಕೊರಳನ್ನು ಅಲಂಕರಿಸಿರುವಂತೆ ಫೋಟೋ ತೆಗೆದಿರುತ್ತಾರೆ. ಇದಂತೂ ಹುಚ್ಚಾಟದ ಪರಮಾವಧಿ. ಏಕೆಂದರೆ ಮಾರನೆಯ ದಿನ ಆ ಹೂಗಳು ಎಲ್ಲಿರುತ್ತವೆಯೋ ಗೊತ್ತಿಲ್ಲ. ಆ ಅಭಿಮಾನಿಗಳು ಧುರೀಣರಿಗೆ/ನಾಯಕರಿಗೆ ನೆನಪಿರುವ ಸಾಧ್ಯತೆಗಳು ಇಲ್ಲ. ಅಂತೂ ಹೂವಿನ ಮಾರಾಟಮಾಡಿದವರಿಗೆ ಒಳ್ಳೆಯ ವ್ಯಾಪಾರ. ನನಗೆ ಹೂವಿಗೆ ಬಂದ ದುಸ್ಥಿತಿಯ ಬಗ್ಗೆ ತುಂಬ ಮರುಕ.

ಹೂಗಳ ಆಯುಸ್ಸು ಅತ್ಯಲ್ಪಕಾಲ ಮಾತ್ರ. ಆದರೆ ಇದರ ಉಪಯೋಗ ಅಪಾರ. ಮಗು ಹುಟ್ಟಿದಾಗ ತೊಟ್ಟಿಲ ಶಾಸ್ತ್ರದಿಂದ ಪ್ರಾರಂಭವಾಗಿ ಜೀವನದುದ್ದಕ್ಕೂ ಅನೇಕ ಸಂದರ್ಭಗಳಲ್ಲಿ ಇದರ ಉಪಯೋಗವಾಗುತ್ತಲೇ ಇರುತ್ತದೆ. ಅಂತಿಮವಾಗಿ ವ್ಯಕ್ತಿಯು ಅಳಿದಾಗ ಅವನ ಸಮಾಧಿಯನ್ನೂ ಹೂಗಳು ಅಲಂಕರಿಸುತ್ತವೆ. ಹೂಗಳನ್ನು ವೈವಿಧ್ಯಮಯವಾಗಿ ಬಳಕೆ ಮಾಡುವ ನಾವು ಅದರಿಂದ ಕಲಿಯಬೇಕಾದ ಪಾಠವೊಂದಿದೆ. ಅದನ್ನು ನಮ್ಮ ದಾರ್ಶನಿಕ ಕವಿಗಳಾದ ಡಾ. ಡಿ.ವಿ.ಜಿ., ಯವರು ವನಸುಮ ಎಂಬ ಪದ್ಯವೊಂದರಲ್ಲಿ ಮೂಡಿಸಿದ್ದಾರೆ. ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸೊ ಗುರುವೆ ಹೇ ದೇವಾ ಎಂದು ಪ್ರಾರ್ಥಿಸುತ್ತಾರೆ. ಏಕೆಂದರೆ ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ ಸೌರಭವ ಸೂಸಿ, ತಾನೆಲೆಯ ಪಿಂತಿರ್ದು, ಅಭಿಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ ಎಂದು ಅದರ ನಿಸ್ವಾರ್ಥ ಜೀವನದ ಮಾದರಿಯನ್ನು ನಮಗೆ ತೋರಿದ್ದಾರೆ. ನಮ್ಮ ಹಣ, ಅಂತಸ್ತು, ಅಧಿಕಾರ, ಹಮ್ಮು, ಹಿರಿಮೆಗಳ ಆಟಾಟೋಪವನ್ನು ತೊರೆದು ವಿನೀತರಾಗಿ ನಾವೂ ನಾಲ್ಕು ಜನರಿಗೆ ಉಪಯುಕ್ತವಾಗುವಂತೆ ಸರಳ ಸ್ವಭಾವವನ್ನು ನಮಗೆ ಕರುಣ ಸೆಂದು ಭಗವಂತನನ್ನು ಪ್ರಾರ್ಥಿಸೋಣ. ಇಂತಹ ಶ್ರೇಷ್ಠ ಮಾದರಿಯ ಮೇಲ್ಪಂಕ್ತಿಯನ್ನು ನಮ್ಮ ಮುಂದಿರಿಸಿದ ಪ್ರಕೃತಿಯ ಸುಂದರ ಸೃಷ್ಠಿ ಚಮತ್ಕಾರವಾದ ಹೂಗಳಿಗೂ ನಮ್ಮ ವಂದನೆಗಳು ಸಲ್ಲಲೇಬೇಕು.

ಬಿ.ಆರ್.ನಾಗರತ್ನ, ಮೈಸೂರು

18 Responses

  1. ಮಹೇಶ್ವರಿ ಯು says:

    ಸಮೃದ್ಧ ವಿವರ ಗಳನ್ನು ಒಳಗೊಂಡ ಒಳ್ಳೆಯ ಬರಹ.

  2. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಮೇಡಂ

  3. ನಯನ ಬಜಕೂಡ್ಲು says:

    ಬಣ್ಣ ಬಣ್ಣದ ಹೂಗಳ ಉಲ್ಲೇಖ ಮನಸಿನಲ್ಲಿ ಒಂದು ಸುಂದರ ಜಗತ್ತನ್ನೇ ಸೃಷ್ಟಿಸುತ್ತದೆ ಓದುವಾಗ. ಇವತ್ತು ಸಭೆ ಸಮಾರಂಭಗಳಲ್ಲಿ ಅತಿಥಿ ಗಳನ್ನು ಸ್ವಾಗತಿಸಲು ನಿಜವಾದ ಹೂ ಗಳಿಗಿಂತ ಪ್ಲಾಸ್ಟಿಕ್ ಹೂಗಳನ್ನು ಬಳಸುವುದು ಹೆಚ್ಚಾಗಿದೆ. ಸೊಗಸಾಗಿದೆ ಲೇಖನ .

  4. sudha says:

    Very nice nagarathna. good information.

  5. Anonymous says:

    ಹೂವಿನ ಬಗ್ಗೆ ಸುದೀರ್ಘ ಲೇಖನ .ಉತ್ತಮ ಮಾಹಿತಿಗಳು. ತುಂಬಾ ಇಷ್ಟವಾಯಿತು .

    ಸುಜಾತಾ ರವೀಶ್

  6. Padma Anand says:

    ಹೂಗಳ ಕುರಿತಾದ ಸುದೀರ್ಘ, ಸಮೃದ್ದ ಮಾಹಿತಿಗಳುಳ್ಳ ಲೇಖನ ಹೂವಿನ ಎಲ್ಲಾ ಆಯಾಮಗಳನ್ನೂ ಪರಿಚಯಿಸುತ್ತಿರುವಂತೆ ಇದೆ. ಚಂದದ ಸುಂದರ, ಲೇಖನಕ್ಕಾಗಿ ಅಭಿನಂದನೆಗಳು.

  7. ನಾಗರತ್ನ ಬಿ. ಅರ್. says:

    ನನ್ನ ಲೇಖನ ಓದಿ ಸೊಗಸಾಗಿ ಪ್ರತಿಕ್ರಿಯಿಸಿದ ಸಾಹಿತ್ಯ ಸಹೃದಯರಿಗೆ ಹೃತ್ಪೂರ್ವಕ ಧನ್ಯವಾದಗಳು.

  8. ಶಂಕರಿ ಶರ್ಮ says:

    ಅನೇಕ ಹೂವುಗಳು ತಮ್ಮ ಸೌಂದರ್ಯದೊಂದಿಗೆ, ಔಷಧಿಗಳಿಗೂ ಉಪಯೋಗಿಸಲ್ಪಡುವ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡಿರುವಿರಿ.
    ಹೂವಿನಂತೆಯೇ ಸುಂದರ ಲೇಖನ ಬಹಳ ಚೆನ್ನಾಗಿದೆ.. ನಾಗರತ್ನ ಮೇಡಂ… ಧನ್ಯವಾದಗಳು.

  9. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಶಂಕರಿಶರ್ಮ ಮೇಡಂ.

  10. Hema says:

    ವಿಭಿನ್ನ ಹೂವುಗಳ ವಿವಿಧ ಉಪಯೋಗಗಳ ಬಗ್ಗೆ ಬಹಳ ಸೊಗಸಾಗಿ ತಿಳಿಸಿದ್ದೀರಿ. ಧನ್ಯವಾದಗಳು

  11. Samatha.R says:

    ದೇವರು ಹೂಗಳ ಮೂಲಕ ನಗುತ್ತಾನಂತೆ….ನಿಮ್ಮ ಬರಹ ಹೂಗಳ ಹಾಗೆಯೇ ಸುಂದರ…ಎಷ್ಟೊಂದು ವಿಷಯಗಳ ಬಗ್ಗೆ ತಿಳಿದು ಕೊಂಡಂತಾಯಿತು..

  12. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಪ್ರಿಯ ಗೆಳತಿ ಹೇಮಾ ಮೇಡಂ

  13. ವಿದ್ಯಾ says:

    ಹೂವಿನಷ್ಟೇ ಸೊಗಸಾದ ಚೆಂದದ ಬರಹ

  14. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಪ್ರಿಯ ಗೆಳತಿ ಹೇಮಾ

  15. ಹೂವುಗಳ ಕುರಿತು, ಅದರ ವಿವಿಧ ಪ್ರಯೋಜನಗಳು ಮಂತಾಧವುಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕೊಟ್ಟಿದ್ದೀರ, ನಿಮಗೆ

  16. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಸೋದರಿ ವಿದ್ಯಾ

  17. padmini says:

    ಸುದೀರ್ಘ, ಸಮೃದ್ದ ಮಾಹಿತಿಗಳುಳ್ಳ ಲೇಖನ

  18. ನಾಗರತ್ನ ಬಿ. ಅರ್. says:

    ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿದ ಸಮತಾ ‌‌‌ವಿದ್ಯಾ ಹಾಗೂ ಪದ್ಮಿನಿ ಮೇಡಂ ಅವರುಗಳಿಗೆ ನನ್ನ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: