ಬಿಸಿ ಕಾವಲಿಯ ಮುಟ್ಟುವರಿವರು!
ಸರಿಯಾಗಿ 30 ವರ್ಷಗಳ ಹಿಂದಿನ ನೆನಪು. ಸ್ನಾತಕೋತ್ತರ ಪದವಿ ಶಿಕ್ಷಣದ ಸಲುವಾಗಿ ವಿದ್ಯಾರ್ಥಿನಿ ನಿಲಯದಲ್ಲಿ ಸೇರಿಕೊಂಡಿದ್ದೆ. ಅಲ್ಲಿಯ ತನಕ ಮನೆ ಬಿಟ್ಟು, ಮನೆಯೂಟ ಬಿಟ್ಟು ಗೊತ್ತಿಲ್ಲದ ನನಗೆ ಹಾಸ್ಟೆಲ್ ಊಟಕ್ಕೆ ಒಗ್ಗಿಕೊಳ್ಳಲು ಕಷ್ಟ ಆಗಿತ್ತು. ಬೆಳಗ್ಗಿನ ತಿಂಡಿಗೆ ವಾರದಲ್ಲಿ ಎರಡು ದಿನ ದೋಸೆ ಇರುತ್ತಿತ್ತು. ಅದೊಂದು ದಿನ, ಸಮಯಕ್ಕೆ ಸರಿಯಾಗಿ ಊಟದ ಕೊಠಡಿಗೆ ಹೋಗಲಾಗದೆ ಸರತಿಯ ಸಾಲಿನಲ್ಲಿ ನಿಲ್ಲಬೇಕಾಯಿತು. ಹಾಗೆ ನಿಂತಿರುವಾಗ, ದೋಸೆ ತಯಾರಿಸುವವರು ದೋಸೆ ಮಾಡುವ ಹಂಚಿಗೆ ಎಣ್ಣೆ/ನೀರು ಹಾಕಿ, ಹಿಡಿಸೂಡಿಯಿಂದ ಅದನ್ನು ಸವರುವುದನ್ನು ಕಂಡಾಗ ನನ್ನ ಹೊಟ್ಟೆಯೊಳಗೆ ಹೇಳತೀರದ ಸಂಕಟ. ಹಿಡಿಸೂಡಿ ಎಂದರೆ ಕಸ ಗುಡಿಸಲು ಉಪಯೋಗಿಸುವ ವಸ್ತು ಅನ್ನುವ ವಿಷಯ ತಲೆಯೊಳಗೆ ಕುಳಿತಿತ್ತು. ದೊಡ್ಡ ಹಂಚಿನಲ್ಲಿ ದೋಸೆ ಮಾಡುವಾಗ, ಎಣ್ಣೆ ಸವರಲು ತೆಂಗಿನ ಗರಿಗಳ ಕಡ್ಡಿಗಳಿಂದ ಮಾಡಿದ ಹಿಡಿಸೂಡಿ ಉಪಯೋಗಿಸುವ ವಿಷಯ ಕೇಳಿ ಕೂಡಾ ಗೊತ್ತಿರಲಿಲ್ಲ. ಆಗ ನಾನು ಬಾವಿಯೊಳಗಿನ ಕಪ್ಪೆಯೇ. ಈಗ ಆ ವಿಷಯದ ಪ್ರಸ್ತಾವನೆ ಇಲ್ಲಿ ಯಾಕೆ ಬಂತು ಅನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದಲ್ಲವೇ?
ದೋಸೆ ಮಾಡುವಾಗ ಕಾವಲಿಗೆ ಎಣ್ಣೆ ಸವರಲು ಉಪಯೋಗಿಸುವ ವಸ್ತುಗಳ ಬಗ್ಗೆ ನಾನೀಗ ಬರೆಯಹೊರಟಿರುವುದು. ಅಷ್ಟಕ್ಕೂ ದೋಸೆ ಹೊಯ್ಯುವ ಮೊದಲು ಕಾವಲಿಗೆ ಎಣ್ಣೆ ಸವರುವುದು ಯಾಕೆ? ಎಣ್ಣೆ ಸವರದಿದ್ದರೆ ಏನಾಗುತ್ತದೆ? ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ದೋಸೆಯ ಹಿಟ್ಟು ಸರಿಯಾಗಿ ಬಂದಿರದಿದ್ದರೆ, ದೋಸೆ ಕಾವಲಿಯಿಂದ ಏಳಲು ತಕರಾರು ಮಾಡುತ್ತದೆ. ಸಿಹಿದೋಸೆ ಮಾಡಲು ದೋಸೆ ಹಿಟ್ಟಿಗೆ ಬೆಲ್ಲ ಹಾಕಿದ್ದರೆ, ದೋಸೆ ಕಾವಲಿಗೆ ಅಂಟಿಕೊಳ್ಳಬಹುದು. ಕೆಲವೊಮ್ಮೆ ದೋಸೆ ಎಬ್ಬಿಸುವ ಸಟ್ಟುಗ ಸರಿ ಇಲ್ಲದಿದ್ದರೂ ದೋಸೆಯನ್ನು ಕಾವಲಿಯಿಂದ ಬೇರ್ಪಡಿಸುವುದು ತುಂಬಾ ತ್ರಾಸದಾಯಕವಾಗಿರುತ್ತದೆ. ಇಂತಹ ಸಮಸ್ಯೆಗಳಿಗೆ ಉತ್ತರ ರೂಪದಲ್ಲಿ ಬಂದದ್ದೇ ನಾನ್-ಸ್ಟಿಕ್ ತವಾ. ಯಾವ ತಾಪತ್ರಯವೂ ಇಲ್ಲ. ಎಣ್ಣೆ ಸವರಬೇಕಾದ ಅಗತ್ಯವೇ ಇಲ್ಲ. ಆದರೂ ಹೆಚ್ಚಿನವರ ನಾಲಿಗೆಗೆ ನಾನ್-ಸ್ಟಿಕ್ ದೋಸೆ ಅಷ್ಟಾಗಿ ರುಚಿಸುವುದಿಲ್ಲ. ಹಾಗಾಗಿ, ದೋಸೆ ಮಾಡಲು ಹೆಚ್ಚಿನವರು ನೆಚ್ಚಿಕೊಂಡಿರುವುದು ಕಬ್ಬಿಣದ ಕಾವಲಿಯನ್ನೇ ಅನ್ನುವುದು ನನ್ನ ಭಾವನೆ. ಅದು ತಪ್ಪಾಗಿರಲೂ ಬಹುದು.
ನಾನು ಸಣ್ಣವಳಿರುವಾಗ ನಮ್ಮ ಮನೆಯಲ್ಲಿ ಕಬ್ಬಿಣದ ಕಾವಲಿ ಮತ್ತು ಬಳಪದ ಕಾವಲಿ ಇತ್ತು. ಪ್ರತಿ ದಿನ ದೋಸೆ ಮಾಡಲು ಕಬ್ಬಿಣದ ಕಾವಲಿಯೇ ಬಳಕೆಯಾಗುತ್ತಿತ್ತು. ವರ್ಷಕ್ಕೊಂದು ಸಲ ರಾಜಮರ್ಯಾದೆಯೊಡನೆ, ಪ್ರತಿ ಬಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆ ಬಳಪದ ಕಾವಲಿ ಹೊರಗೆ ಬರುತಿತ್ತು. ಸುಮಾರು ಒಂದು ಇಂಚು ದಪ್ಪದ ಆ ಕಾವಲಿ ಬಿಸಿಯಾಗಲು ತುಂಬಾ ಹೊತ್ತು ತೆಗೆದುಕೊಳ್ಳುತ್ತಿತ್ತು. ಒಮ್ಮೆ ಬಿಸಿಯಾದ ನಂತರ ಉರಿಯುವ ಕಟ್ಟಿಗೆ ಮುಗಿದು ಬರಿಯ ಕೆಂಡ ಇದ್ದರೂ ಸಹಾ ಐದಾರು ದೋಸೆ ಮಾಡಬಹುದಾಗಿತ್ತು. ಅದಕ್ಕೆ ಎಣ್ಣೆ ಪಸೆಯ ಅಗತ್ಯವೂ ಕಡಿಮೆ ಇತ್ತು.
ಬಿಸಿ ಕಾವಲಿಗೆ ಎಣ್ಣೆ ಸವರಲು ನಮ್ಮ ಮನೆಯಲ್ಲಿ ಬಾಳೆ ಎಲೆಯ ದಂಡು, ಮೂಂಡಿ ಗಿಡದ ದಂಡು, ಬಾಳೆಗೊನೆಯ ಹಿಂದಿನ ಅಥವಾ ಮುಂದಿನ ದಂಡು, ಇಲ್ಲವೇ ಮಡಚಿ ಕಟ್ಟಿದ ಬಾಳೆ ಎಲೆ ಉಪಯೋಗಿಸುತ್ತಿದ್ದರು. ಕೆಲವೊಮ್ಮೆ ಅಡಿಕೆಮರದ ಹಸಿ ಹಾಳೆಯ ಸಣ್ಣ ತುಂಡೊಂದನ್ನು ಕೂಡಾ ಕಾವಲಿಗೆ ಎಣ್ಣೆ ಸವರಲು ಬಳಸುತ್ತಿದ್ದ ನೆನಪು. ಪ್ರತಿ ಬಾರಿ ದೋಸೆ ಮಾಡುವಾಗಲೂ, ಎಣ್ಣೆ ಸವರಲು ಮೇಲೆ ತಿಳಿಸಿದ ಯಾವುದಾದರೂ ವಸ್ತುವನ್ನು ಸಿದ್ಧ ಮಾಡಿಕೊಳ್ಳಬೇಕಿತ್ತು. ಆದರೆ ಹಳ್ಳಿಯಲ್ಲಿ ಇವೆಲ್ಲವೂ ಯಥೇಚ್ಛವಾಗಿ ಸಿಕ್ಕುವ ಕಾರಣ, ಅದು ಸಮಸ್ಯೆಯೆಂದು ಅನಿಸಿರಲಿಲ್ಲ.
ಪೇಟೆ ಜೀವನ ಶುರುವಾದ ಬಳಕೆ ಎಣ್ಣೆ ಸವರಲು ಈ ವಸ್ತುಗಳು ಕೈಗೆ ಸಿಗದೆ ಇರುವಾಗ ಸಟ್ಟುಗದಿಂದಲೇ ಎಣ್ಣೆ ಸವರಿ ದೋಸೆ ಮಾಡುತ್ತಿದ್ದೆ. ಒಂದು ಸಲ ನಮ್ಮ ಮನೆಗೆ ಬಂದಿದ್ದ ನಮ್ಮವರ ಅಣ್ಣ “ಕಾವಲಿಗೆ ಎಣ್ಣೆ ಸವರಲು ಚೀನಿಕಾಯಿ ತೊಟ್ಟು ಬಳಸಬಹುದಲ್ವಾ?” ಅಂದರು. ಬಳಿಕ “ನೋಡು, ಮುಂದಿನ ಸಲ ಊರಿಗೆ ಹೋಗುವಾಗ ನಿನ್ನ ಅತ್ತೆಯ ಹತ್ತಿರ (ಅವರ ಅಮ್ಮನ ಹತ್ತಿರ) “ಬೆಳೆದ ಚೀನಿಕಾಯಿಯ (ಸಿಹಿ ಕುಂಬಳಕಾಯಿಯ) ತೊಟ್ಟನ್ನು ತೆಗೆದಿಡಿ” ಅಂತ ಹೇಳು ಅನ್ನುವ ಸಲಹೆ ನೀಡಿದರು. ಅವರು ಹೇಳಿದಂತೆ ಅತ್ತೆಯ ಹತ್ತಿರ ಕೇಳಿ ತಂದ ಚೀನಿಕಾಯಿಯ ತೊಟ್ಟು ಸುಮಾರು ಇಪ್ಪತ್ತು ವರ್ಷಗಳಿಂದಲೂ ನನ್ನ ಜೊತೆಯಾಗಿದೆ.
ಕಾವಲಿಗೆ ಎಣ್ಣೆ ಸವರಲು ತೆಂಗಿನಕಾಯಿ ಜುಟ್ಟು, ಅರ್ಧ ಕತ್ತರಿಸಿದ ನೀರುಳ್ಳಿ ಅಥವಾ ಬಟಾಟೆ, ಶುಭ್ರ ಬಿಳಿಯ ಹತ್ತಿಯ ಬಟ್ಟೆ ಬಳಸುವುದನ್ನು ಕಂಡಿದ್ದೇನೆ. ಈಗ ಅಂಗಡಿಗಳಲ್ಲಿಯೂ ಎಣ್ಣೆ ಸವರುವ ಪೋಟ್ಲಿ , ವಿಧ ವಿಧದ ಬ್ರಶ್ಶುಗಳು ಸಿಗುತ್ತವೆ. ವಸ್ತು ಸಣ್ಣದೇ ಇರಬಹುದು, ದೊಡ್ಡದೇ ಇರಬಹುದು. ಆ ವಸ್ತು ಬೇಕೇ ಬೇಕು, ಆದರೆ ದುರ್ಲಭವಾಗುವಾಗ ಅದೇ ವಸ್ತುವಿನ ಬದಲಿ ರೂಪ ಮಾರುಕಟ್ಟೆಗೆ ಬರುತ್ತದೆ. ಇಂತಹ ಬದಲಾವಣೆಗಳು ಸಹಜ ಮತ್ತು ಇಂದಿನ ಅಗತ್ಯವೂ ಸಹಾ. ಈ ಲೇಖನದಲ್ಲಿ ಪ್ರಸ್ತಾಪಿಸದ, ಬಿಸಿ ಕಾವಲಿಗೆ ಎಣ್ಣೆ ಸವರಲು ಬಳಸುವ ಯಾವುದಾದರೂ ವಸ್ತುಗಳು ಗೊತ್ತಿದ್ದರೆ ತಿಳಿಸುವಿರಲ್ಲಾ?
–ಡಾ. ಕೃಷ್ಣಪ್ರಭ ಎಂ, ಮಂಗಳೂರು
ಕಥೆ ತುಂಬಾ ಸೊಗಸಾಗಿದೆ
ಮೆಚ್ಚುಗೆಗೆ ಧನ್ಯವಾದಗಳು
ಅಮ್ಮನ ಕಾಲದಲ್ಲಿ ತೆಂಗಿನ ಜುಟ್ಟು, ಕುಂಬಳದ ತೊಟ್ಟು ಉಪಯೋಗಿಸುತ್ತಿದ್ದಳು. ಲೇಖನ ಚೆನ್ನಾಗಿದೆ
ಮೆಚ್ಚುಗೆಗೆ ಹೃತ್ಪೂರ್ವಕ ಧನ್ಯವಾದಗಳು
ಬಹಳ ಸಣ್ಣ ವಿಷಯ ಆದರೆ ಅದನ್ನು ಬಹಳ ಸುಂದರವಾಗಿ ವಿವರಿಸಿದ್ದೀರಿ. ತುಂಬಾ ಚೆನ್ನಾಗಿದೆ ಬರಹ
ಮೆಚ್ಚುಗೆಗೆ ಧನ್ಯವಾದಗಳು ನಯನ
ಬಹಳ ಚೆನ್ನಾಗಿದೆ ಮೇಡಂ ನೀವು ಹೇಳಿರುವ ಎಲ್ಲಾ ವಸ್ತುಗಳನ್ನು ಬಳಸುವುದನ್ನು ನೋಡಿ ದ್ದೇನೆ ನಾನು ಬಳಸಿದ್ದೇನೆ . ಇತ್ತೀಚೆಗೆ ಕೊಬ್ಬರಿ ಗಿಟುಕನ್ನು ಬಳಸುವುದನ್ನು ನೋಡಿದೆ ಓ ಇದೂ ಒಂದು ಹೊಸ ಪ್ರಯೋಗ ವಿರಬೇಕು ಎಂದು ಕೊಂಡೆ. ಧನ್ಯವಾದಗಳು ಮೇಡಂ.
ಮಾಹಿತಿಗೆ ಮತ್ತು ಮೆಚ್ಚುಗೆಗೆ ಧನ್ಯವಾದಗಳು
Nice, informative
Thank you
ಇಪ್ಪತ್ತು ವರುಷಗಳಾದರೂ ಉಪಯೋಗಿಸುವಂತಿರುವ ಕುಂಬಳದ ತೊಟ್ಟು, ನನಗೂ ಸಂಗ್ರಹಿಸಬೇಕೆನ್ನಿಸಿತು. ಸರಳ ವಸ್ತುವಿನ ಸುಂದರ ನಿರೂಪಣೆ ಸೊಗಸಾಗಿದೆ.
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಮೇಡಂ
ದಿನನಿತ್ಯದ ಸಾಮಾನ್ಯ ವಿಷಯವನ್ನು ಪ್ರಸ್ತುತ ಪಡಿಸಿದ ರೀತಿಯೇ ಬಹಳ ಚಂದ. ನಾನು ಅಡಿಕೆ ಹಾಳೆ ಪ್ರಿಯೆ..ಅದು ನನ್ನ ದೋಸೆ ಸಂಗಾತಿ…
ಚಂದದ ಲೇಖನಕ್ಕೆ ಧನ್ಯವಾದಗಳು.
ಒಮ್ಮಿಂದೊಮ್ಮೆಗೆ ಈ ತರಹ ಬರೆದರೆ ಹೇಗಿರುತ್ತದೆ ಅನ್ನುವ ಆಲೋಚನೆ ಮನಸಿಗೆ ಹೊಳೆಯುತ್ತದೆ…ಮೆಚ್ಚುಗೆಗೆ ಧನ್ಯವಾದಗಳು ಅಕ್ಕ
ಸುಂದರ ಲೇಖನ… ನಮ್ ಕಡೆ ಬದನೇಕಾಯಿ ಚೊಟ್ಟು ಮತ್ತು ಹಿರೇಕಾಯಿ ಚೊಟ್ಟನ್ನು ಬಳಸುತ್ತಾರೆ
ಮಾಹಿತಿಗೆ ಧನ್ಯವಾದಗಳು