ಜಯವಿರುವವರೆಗೆ ಭಯವಿಲ್ಲ.
ಶ್ರಾವಣ ಮಾಸ ಬರುತ್ತಿದ್ದಂತೆ ಹತ್ತಿರವಾಗುತ್ತಿದ್ದ ಹಬ್ಬಗಳ ಪ್ರಯುಕ್ತ ಮನೆಯನ್ನು ಸ್ವಚ್ಛಮಾಡುವ ಯೋಜನೆ ಹಾಕಿಕೊಂಡೆ. ಮೊದಲು ಮನೆಯ ಒಳಗೆ, ಹೊರಗೆ ಇರುವ ಧೂಳು, ಜೇಡರ ಬಲೆಗಳು, ಮೂಲೆಗಳಲ್ಲಿ ಅಡಗಿಕೊಂಡಿರುವ ಕ್ರಿಮಿಕೀಟಗಳನ್ನು ತೆಗೆದುಬಿಡೋಣವೆಂದು ಪ್ರತಿದಿನವೂ ಒಂದೊಂದೇ ಕೊಠಡಿಯಂತೆ ಕಾರ್ಯಕ್ರಮ ಸಿದ್ಧವಾಯಿತು. ಅದಕ್ಕೆ ಬೇಕಾದ ಧೂಳು ತೆಗೆಯುವ ಗಳವನ್ನಿಟ್ಟಿದ್ದ ಸ್ಟೋರ್ ರೂಮಿನ ಬಾಗಿಲು ತೆಗೆಯುತ್ತದ್ದಂತೆ ಒಳಗಡೆಯಿಂದ ಏನೋ ಸರಸರ, ಪಿಸಪಿಸ ಶಬ್ಧ ಕೇಳಿಬಂತು. ಯಾರಿರಬಹುದು ನನಗೆ ಗೊತ್ತಾಗದಂತೆ ಇಲ್ಲಿ ಬಂದು ಅವಿತಿರುವವರು? ಎಂದು ಆಲೋಚಿಸಿದೆ. ಇತ್ತೀಚೆಗೆ ಕೊರೋನಾ ಮಹಾಮಾರಿ ಜಗತ್ತನ್ನೆಲ್ಲಾ ಆವರಿಸಿಕೊಂಡಮೇಲೆ ಕೆಲಸವಿಲ್ಲದವರ ಸಂಖ್ಯೆ ಬಹಳ ಹೆಚ್ಚಾಗಿದ್ದು ಯಾರಾದರೂ ಮೈಗಳ್ಳರು ಸಿಕ್ಕಿದ್ದೇ ಸಾಕೆಂದು ಕಳವು ಮಾಡಲೂ ಪ್ರಯತ್ನಿಸಬಹುದು. ಆದರೆ ಬೀಗಹಾಕಿದ್ದದ್ದು ಹಾಗೇ ಇದೆ. ಯಾರು ಒಳಬರಲು ಸಾಧ್ಯ. ಹಾಗಿದ್ದಮೇಲೆ ಯಾರಿರಬಹುದು ಎಂದು ಕಿವಿ ನಿಮಿರಿಸಿ ತದೇಕಚಿತ್ತಳಾಗಿ ಆಲಿಸತೊಡಗಿದೆ. ‘ಗೆಳೆಯಾ ಎಮರ್ಜೆನ್ಸಿ ಮೀಟಿಂಗಿಗೆ ಬಾ ಎಂದು ನನಗೆ ಕಾಲ್ ಮಾಡಿದವನು ನೀನೇ. ಅಂತದ್ದರಲ್ಲಿ ನೀನೇನೋ ಕುಡಿದವನಂತೆ ಅಡ್ಡಾದಿಡ್ಡಿಯಾಗಿ ನಡೆಯುತ್ತಾ ಬರುತ್ತಿದ್ದೀಯಾ?’ ಎಂದು ಯಾರೋ ಕೇಳಿದಂತಾಯ್ತು.
‘ಶ್..ಜೋರಾಗಿ ಮಾತನಾಡಬೇಡಿ ಬಾಸ್, ಇಲ್ಲೇ ಎಲ್ಲೋ ಮನೆಯ ಯಜಮಾನಿಯಿರಬೇಕು. ಬಾಗಿಲು ತೆಗೆದ ಸದ್ದು ಕೇಳಿಸಿತು. ನೀವಂದುಕೊಂಡಂತೆ ನಾನು ಕುಡಿದಿಲ್ಲ. ನೆನ್ನೆ ರಾತ್ರಿ ಬೆನ್ನಿಗೆ ಬಿದ್ದ ಹೊಡೆತದಿಂದ ಬದುಕುಳಿದದ್ದೇ ಹೆಚ್ಚು. ಕಾಲುಗಳಲ್ಲಿ ಚೈತನ್ಯವೇ ಉಡುಗಿದಂತಾಗಿದೆ. ಹೀಗೇ ದಿನವೂ ಮುಂದುವರೆದರೆ ನಮ್ಮ ವಂಶದ ಗತಿಯೇನು? ಎಂಬ ಚಿಂತೆ ಬಹಳವಾಗಿದೆ.’ ಎಂದಿತು.
‘ಹೇ ! ಹೇ ! ನೀವುಗಳೇ ಧೈರ್ಯ ಕಳೆದುಕೊಂಡು ಹೀಗಂದುಬಿಟ್ಟರೆ ಹೇಗೆ? ಭಗವಂತ ಆಪತ್ತಿಗಂತಾನೇ ನಮಗೆ ಹಾರಿಹೋಗುವ ಶಕ್ತಿ ಕೊಟ್ಟಿದ್ದಾನೆ. ತಪ್ಪಿಸಿಕೊಳ್ಳದೇ ಪೆಟ್ಟು ತಗುಲಿದೆ ಅಂತ ಹೇಳುತ್ತಿದ್ದೀರಾ. ನಮ್ಮಲ್ಲಿ ಈ ಶಕ್ತಿಯಿದ್ದರೂ ಬಹುತೇಕರಿಗೆ ಹರಿದಾಡುವುದೇ ಅಭ್ಯಾಸವಾಗಿದೆ. ಆಗ ತಪ್ಪಿಸಿಕೊಳ್ಳುವ ಛಾನ್ಸೇ ಕಡಿಮೆ’.
‘ಈಗಂತೂ ಮನುಷ್ಯರು ಅದೆಂಥದ್ದೋ ‘ಹಿಟ್-ಪಟ್’ ತಂದಿದ್ದಾರೆ. ಅದರ ಆವಿಯನ್ನು ಸೊಯ್ ಅಂತ ಸ್ಪ್ರೇ ಮಾಡಿಬಿಡುತ್ತಾರೆ. ಅದರ ವಾಸನೆಗೆ ಹೊಟ್ಟೆ ತೊಳಸಿದಂತಾಗುತ್ತದೆ, ತಲೆ ಚಕ್ಕರ್ ಬಂದು ಬಿದ್ದು ಹಿಂದಕ್ಕೆ ಮುಂದಕ್ಕೆ ಚಲಿಸಲು ಸಹಾ ಆಗದು. ಸಾಲದ್ದಕ್ಕೆ ನಾವು ಖಾಲಿ ಜಾಗದಲ್ಲೇನಾದರೂ ಕಣ್ಣಿಗೆ ಬಿದ್ದರೆ ಕೂಡಲೇ ಕೋಲು, ಪೊರಕೆ, ಕೊನೆಗೆ ಏನೂ ಸಿಗದಿದ್ದರೆ ನ್ಯೂಸ ಪೇಪರನ್ನೇ ಸುರುಳಿ ಸುತ್ತಿಕೊಂಡು ಹೊಡೆದು ಸಾಯಿಸಿ ಆಚೆಗೆ ಬಿಸಾಡುತ್ತಾರೆ. ಜೀವನ ತುಂಬ ಕಷ್ಟವಾಗಿಬಿಟ್ಟಿದೆ’ ಎಂದಿತು ಜಿರಲೆಯೊಂದು.
ಮತ್ತೊಂದು ‘ಅರೇ,..ಗೆಳೆಯರಾದ ಸೊಳ್ಳೆಯಣ್ಣಾ, ಜೇಡಣ್ಣಾ, ಇರುವೆತಾತ ನೀವೂ ಬಂದಿರಾ ! ಇಲ್ಲಿ ಕೇಳಿ, ಈಗಂತೂ ನಾವು ಎಲ್ಲಿ ಸುರಕ್ಷಿತವಾಗಿ ವಾಸಮಾಡಬೇಕು ಎಂಬ ಸಂದಿಗ್ಧತೆಯುಂಟಾಗಿ ತಲೆ ಬಿಸಿಯಾಗಿದೆ. ಹಿಂದೆ ನಮ್ಮ ಅದ್ಭುತ ವಾಸನಾಗ್ರಂಥಿಗಳಿಂದ ಅಹಾರವಿರುವ ಸ್ಥಳಗಳ ಸುಳಿವನ್ನು ಕಂಡುಹಿಡಿದುಕೊಳ್ಳುತ್ತಿದ್ದೆವು. ಹಿಂಡುಹಿಂಡಾಗಿ ಬಂದು ಅಲ್ಲಲ್ಲಿ ಅಡಗಿಕೊಳ್ಳುತ್ತಿದ್ದೆವು.. ರಾತ್ರಿಯ ಕಾಲದಲ್ಲಿ, ಅಥವಾ ಯಾರೂ ಇಲ್ಲದಿರುವ ಹೊತ್ತಿನಲ್ಲಿ ನಮಗೆ ಬೇಕಾದ್ದನ್ನು ತಿಂದುಕೊಂಡು ಸುಖವಾಗಿರುತ್ತಿದ್ದೆವು. ಈಗ ನಮಗೆ ದಿಗ್ಭಂದನ ಹಾಕುತ್ತಾರೆ. ಎಂತದ್ದೋ ‘ಲಕ್ಷ್ಮಣರೇಖಾ’ ಅಂತ ಗೆರೆ ಬರೆಯುತ್ತಾರೆ, ‘ಬೇಗಾನ್’ ಎಂಬ ಪುಡಿಯನ್ನು ಅಂಚುಗಳಸುತ್ತ ಉದುರಿಸುತ್ತಾರೆ, ಸಾಲದ್ದಕ್ಕೆ ನಾವು ಓಡಾಡಬಹುದಾದ ಜಾಗಗಳಿಗೆಲ್ಲ ವಾಸನೆಯ ಸ್ಪ್ರೇ ಮಾಡುತ್ತಾರೆ. ಮಿಕ್ಕ ತಿಂಡಿ ತಿನಿಸುಗಳನ್ನು ತಂಗಳು ಪೆಟ್ಟಿಗೆ ಅದೇ ‘ಫ್ರಿಜ್’ ನಲ್ಲಿಡುತ್ತಾರೆ. ಹೀಗಾಗಿ ನಾವು ತಪ್ಪಿಸಿಕೊಂಡು ಓಡಾಡುವುದು ತುಂಬ ಕಷ್ಟ’ ಎಂದಿತು.
‘ಹಾಂ, ನಿಮ್ಮದಿರಲಿ ಒತ್ತಟ್ಟಿಗೆ, ನಮ್ಮ ಕಥೆ ಕೇಳಿ. ನಾವುಗಳು ಎಲ್ಲೆಂದರಲ್ಲಿ ಬಹಳ ಶೀಘ್ರವಾಗಿ ಯಾವ ಹೊರಗಿನ ಸಹಾಯವಿಲ್ಲದೆ ಸ್ವಂತ ಶಕ್ತಿಯಿಂದಲೇ ಅಚ್ಚುಕಟ್ಟಾದ ಬಲೆ ಹೆಣೆದು ಮಿಕಗಳಿಗಾಗಿ ಕಾಯ್ದು ಕುಳಿತುಕೊಳ್ಳುತ್ತಿದ್ದೆವು. ಕುಳಿತಲ್ಲಿಗೇ ಬಲೆಯಲ್ಲಿ ಸಿಕ್ಕಿಕೊಂಡ ಕ್ರಮಿಕೀಟಗಳ ಆಹಾರ ನಮಗೆ ದೊರಕುತ್ತಿತ್ತು. ಹೇಗೋ ಸಂಸಾರ ನಡೆಯುತ್ತಿತ್ತು. ಆದರೆ ಈಗ ..’ ಮುಂದೆ ಮಾತನಾಡಲಾಗದೇ ಬಿಕ್ಕಿತು.
‘ಬಲೆಗಳೇನಾದರೂ ಕಣ್ಣಿಗೆ ಬಿದ್ದರೆ ಸಾಕು ತಕ್ಷಣವೇ ಪೊರಕೆಗಳಿಂದ, ಕಸ ತೆಗೆಯುವ ಗಳುಗಳಿಂದ ತೆಗೆದುಹಾಕಿ ನಮ್ಮನ್ನೂ ಬಡಿದಾಕಿಬಿಡುತ್ತಾರೆ. ಮೇಲ್ಚಾವಣಿಯಲ್ಲೂ ನಾವು ಸುರಕ್ಷಿತವಿಲ್ಲ’ ಎಂದಿತು ಜೇಡಣ್ಣಾ.
‘ನಾವು ಹೇಗಿದ್ದೋ ! ಹೇಗಾಗಿದ್ದೀವಿ. ಎಲ್ಲ ಈ ಕೊರೋನಾ ಎಂಬ ಹೆಮ್ಮಾರಿಯಿಂದ ನಮ್ಮ ಪಾಡು ನಾಯಿಪಾಡಾಯ್ತು. ಇದ್ದ ಕಡೆ ಇರಲೂ ಆಗದೇ, ಬೇರೆ ಕಡೆಗೆ ಹೋಗಲೂ ಆಗದೇ ಹುಚ್ಚರಂತೆ ಅಲೆದಾಡುತ್ತಿದ್ದೇವೆ’ ಎಂದವು ಬಹಳಷ್ಟು ಒಕ್ಕೊರಲಿನಿಂದ.
‘ಬಾಸ್ ವಿಚಲಿತನಾಗದೇ ಅಂಥಾದ್ದೇನಾಗಿದೆ? ಆಗಿರುವುದೆಲ್ಲಾ ಮನುಷ್ಯರಿಗೆ. ನಮಗಲ್ಲ’ ಎಂದಿತು.
‘ಅಯ್ಯೋ, ನಾವೆಲ್ಲ ನೀವು ತುಂಬ ಬುದ್ಧಿವಂತರೆಂದು ನಮ್ಮ ಬಾಸ್ ಮಾಡಿಕೊಂಡೆವು. ನಮ್ಮ ಸುಖದುಃಖಗಳಿಗೆ ಸ್ಪಂದಿಸಿ ಏನಾದರೂ ಉತ್ತಮ ಸಲಹೆ ಸೂಚನೆಗಳನ್ನು ಕೊಟ್ಟು ಕಾಪಾಡುತ್ತೀರೆಂದು ಭರವಸೆಯಿಟ್ಟುಕೊಂಡಿದ್ದೆವು. ಆದರೇಕೋ ನಮ್ಮ ನಿರೀಕ್ಷೆ ಸುಳ್ಳಾಯಿತೆ?’
‘ಏಕೆ? ನಿಲ್ಲಿಸಿಬಿಟ್ಟಿರಿ ಮುಂದಕ್ಕೆ ನಿಮ್ಮ ಮನಸ್ಸಿನಲ್ಲಿರೋದನ್ನು ಹೇಳಿ’ ಎಂದಿತು ಬಾಸ್.
ನಾನು ಅದ್ಯಾರಿರಬಹುದೆಂದು ಅದರತ್ತ ಕಣ್ಣನ್ನು ಹಿರಿದಾಗಿಸಿ ನೋಡಿದೆ. ಅದೊಂದು ವಿಚಿತ್ರಾಕಾರ. ಸೊಳ್ಳೆಯಂತೆ ರೆಕ್ಕೆ,, ಜಿರಲೆಯಂತೆ ದೇಹ, ಕೋರೆಮೀಸೆಗಳು, ಇರುವೆಗೊದ್ದಗಳಂತೆ ಉದ್ದವಾಗಿದ್ದು ಮೂತಿಯ ಮುಂದೆ ಒಂದು ಕೊಂಡಿ, ಜೇಡದಂತೆ ಮೈಮೇಲೆ ಬಲೆಯಂತಹದ್ದು, ಇತ್ತು. ಇದುವರೆಗೆ ನಾನಿಂತಹ ವಿಚಿತ್ರ ಕೀಟವನ್ನು ನೋಡಿಯೇ ಇರಲಿಲ್ಲ. ನನಗೆ ವಿಷ್ಣುವಿನ ದಶಾವತಾರ ನೆನಪಾಯಿತು. ದಾನವರನ್ನು ಸದೆಬಡೆಯಲು ವಿಚಿತ್ರ ರೂಪದಲ್ಲಿ, ವಿಚಿತ್ರ ಆಯುಧಪಾಣಿಯಾಗಿ ಬರುತ್ತಿದ್ದನೆಂದು ಪುರಾಣಗಳಲ್ಲಿ ಕೇಳಿದ್ದೆ. ಹಾಗೆಯೇ ಈ ಪ್ರಾಣಿಗೂ ಪ್ರತಿಯೊಂದು ಕೀಟದ ಒಂದೊಂದು ಅಂಶಗಳನ್ನು ಒಂದೇ ಜೀವಿಯಲ್ಲಿ ಮೇಳೈಸಿ ಈ ವಿಚಿತ್ರ ‘ಬಾಸ್’ ಸೃಷ್ಟಿಯಾಗಿರಬಹುದೆನ್ನಿಸಿತು.
‘ಈ ತಕ್ಷಣಕ್ಕೆ ನೀವು ಏನು ಹೇಳುತ್ತಿದ್ದೀರಾ? ನಿಮಗೇನು ಕಷ್ಟ ಬಂದಿದೆ ವಿವರವಾಗಿ ಹೇಳಿ’ ಎಂದಿತು ಬಾಸ್.
‘ಸರಿಯಾಗಿ ಗಮನವಿಟ್ಟು ಕೇಳಿಸಿಕೊಳ್ಳಿ, ಕೊರೋನಾ ಖಾಯಿಲೆಗೆ ಪ್ರಪಂಚದಲ್ಲಿನ್ನೂ ಯಾವುದೇ ಪರಿಹಾರದ ಲಸಿಕೆ ದೊರಕಿಲ್ಲ. ಅದಕ್ಕಾಗಿ ಎಲ್ಲ ದೇಶಗಳ ವಿಜ್ಞಾನಿಗಳು ಕಷ್ಟ ಪಡುತ್ತಿದ್ದಾರೆ. ಅದು ಹೆಚ್ಚಾಗಿ ಹರಡದಂತೆ ‘ಲಾಕ್‌ಡೌನ್’, ‘ಸಾಮಾಜಿಕ ಅಂತರ’, ಮುಖಕ್ಕೆ ಮಾಸ್ಕ್ ಧರಿಸುವುದು’ ಯೋಜನೆಗಳನ್ನು ತಂದಿದ್ದಾರೆ. ನೌಕರರು ಮನೆಗಳಿಂದಲೇ ಕೆಲಸ ಮಾಡುತ್ತಿದ್ದಾರೆ, ಮಕ್ಕಳಿಗೆ ಸ್ಕೂಲಿಲ್ಲ. ಅವರೂ ಮನೆಯಲ್ಲಿಯೇ. ಮಹಿಳೆಯರ ಚಟುವಟಿಕೆಯೆಲ್ಲಾ ಮನೆಯೊಳಗೇ. ಮನೆಗೆಲಸದವರು ಬರುತ್ತಿಲ್ಲ. ಎಲ್ಲರೂ ಮನೆಯಲ್ಲಿದ್ದು ಕೆಲಸಗಳನ್ನು ಹಂಚಿಕೊಂಡು ಮಾಡಿಕೊಳ್ಳುತ್ತಿದ್ದಾರೆ’.
‘ಅದರಿಂದ ನಿಮಗೇನಾಯ್ತು? ನಿಮ್ಮ ಪಾಡು ನಿಮ್ಮದಲ್ಲವೇ?’
‘ಹಾಂ..ಇಲ್ಲೇ ಇರೋದು ಬಾಸ್ ಸಮಸ್ಯೆ. ಎಲ್ಲರೂ ತಲೆಗೊಂದರಂತೆ ಹಂಚಿಕೊಂಡು ಕೆಲಸ ಮಾಡುವರು. ಮೂಲೆಮುಡುಕು, ಸಂದಿಗೊಂದಿಗಳನ್ನೊಂದೂ ಬಿಡದಂತೆ ಗುಡಿಸಿ ಗುಡ್ಡೆ ಹಾಕುತ್ತಾರೆ. ಅದಲ್ಲದೆ ನೆಲ ಒರೆಸಲಿಕ್ಕೆ ಎಂಥದ್ದೋ ಲಿಕ್ವಿಡ್ ಹಾಕಿ ಮಾಪ್ ಕೋಲಿನಿಂದ ತಿವಿದು ತಿವಿದು ಒರೆಸುತ್ತಾರೆ. ನಾವೆಲ್ಲಿ ಅಡಗಿಕೊಳ್ಳೋಣ ಹೇಳಿ ಬಾಸ್?’
‘ಇವೆಲ್ಲಾ ಎಲ್ಲಾ ಕಾಲದಲ್ಲೂ ಇದ್ದದ್ದೇ. ಅವೆಲ್ಲವನ್ನೂ ನಿವಾರಿಸಿಕೊಂಡು ಬದುಕು ನಡೆಸುವ ಕಲೆ ನಿಮಗೆ ಗೊತ್ತಿದೆಯಲ್ಲಾ?’
‘ಅಯ್ಯೋ ಬಾಸ್, ಮೊದಲು ಮನೆಗೆಲಸದವರು ಹತ್ತಾರು ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಅವರುಗಳು ಇಷ್ಟೆಲ್ಲಾ ಸೂಕ್ಷ್ಮವಾಗಿ ನೋಡಿಕೊಂಡು ಕ್ಲೀನ್ ಮಾಡುತ್ತಾರಾ. ನಾವು ಸುಲಭವಾಗಿ ಅವರ ಕಣ್ಣುತಪ್ಪಿಸಿ ಸುಖವಾಗಿದ್ದೆವು. ಜೊತೆಗೆ ಗಂಡಹೆಂಡಿರಿಬ್ಬರೂ ಹೊರಗೆ ದುಡಿಯುವವರು. ಬೆಳಗ್ಗೆದ್ದು ಹೋದರೆ ಬರುವುದು ರಾತ್ರಿಗೇ. ಅದಕ್ಕಾಗಿ ಬೇಗ ಕೆಲಸ ಮುಗಿಸುವಂತೆ ಕೆಲಸದವರಿಗೆ ಒತ್ತಾಯಿಸುತ್ತಿದ್ದರು. ಅಷ್ಟರಲ್ಲಿ ಅಡುಗೆ, ತಿಂಡಿ ಮುಗಿಸಿ ಡಬ್ಬಿಗಳನ್ನು ತುಂಬಿಸಿ ಹೋಗುತ್ತಿದ್ದರು. ಬರುವಷ್ಟರಲ್ಲಿ ಸುಸ್ತೋ ಸುಸ್ತು. ಯಾವಾಗಲಾದರೊಮ್ಮೆ ತೀರ ಕೆಟ್ಟದಾಗಿದೆಯೆನ್ನಿಸಿದರೆ ಕ್ಲೀನಿಂಗ್ ಮಾಡುತ್ತಿದ್ದರು. ಇಲ್ಲವಾದರೆ ಇಲ್ಲ. ಈಗ ಇಬ್ಬರೂ ಸೇರಿ, ಅಬ್ಬಾ ! ಹೇಳಲಿಕ್ಕಾಗದು. ಹುಡುಗರಿದ್ದ ಮನೆಯಲ್ಲಿ ನಮಗೆ ರಸಕವಳ ದಕ್ಕುತ್ತಿತ್ತು. ಮನೆಯದಲ್ಲದೆ ಹೊರಗಿನಿಂದ ತರುತ್ತಿದ್ದ ತಿಂಡಿತಿನಿಸುಗಳ ಪ್ಯಾಕೆಟ್ಗಳನ್ನು ಡಸ್ಟ್‌ಬಿನ್ನಿಗೆ ಹಾಕುವುದನ್ನು ಮರೆತರೆ ಅಮ್ಮ ಬೈಯುತ್ತಾಳೆಂದು ಅಟ್ಟದಮೇಲಕ್ಕೋ, ಚಜ್ಜಾದ ಮೇಲಕ್ಕೋ ಕಾಣಿಸದಂತೆ ಎಸೆಯುತ್ತಿದ್ದರು. ಆ ಚೀಲಗಳನ್ನು ತೆಗೆದು ಯಾವಾಗಲೊ ಬಿಸಾಡುವ ವರೆಗೂ ನಮಗೆ ಅದೇ ಆಶ್ರಯತಾಣ. ಅದಕ್ಕಂಟಿಕೊಂಡಿದ್ದ ತಿನಿಸಿನ ಚೂರುಗಳೂ ದಕ್ಕುತ್ತಿದ್ದವು. ಈಗ ಅವೆಲ್ಲಾ ಕನಸಿನ ಮಾತು. ಜೊತೆಗೆ ಕೊರೊನಾ ಸಮಯದಲ್ಲಿ ಬೇರೆ ಊರಿನಿಂದ ಮನೆಗೆ ಬಂದ ಅತಿಥಿಗಳು ಕೆಲವರಿಗೆ ವಾಪಸಾಗಲು ಸಾಧ್ಯವಾಗದೇ ಇರುವಲ್ಲಿಯೇ ಝಾಂಡಾ ಹೂಡಿದ್ದಾರೆ. ಅವರು ಯಜಮಾನನನ್ನು ಪ್ರಸನ್ನಗೊಳಿಸಲು ಪಾತ್ರೆ ತಿಕ್ಕೋದೇನು, ಮನೆ ಸ್ವಚ್ಛಗೊಳಿಸುವುದೇನು, ಬಟ್ಟೆ ತೊಳೆಯೋದೇನು, ಅವರ ಆರ್ಭಟದಲ್ಲಿ ನಾವು ಕಣ್ಣಿಗೆ ಬಿದ್ದರೆ ಮುಗಿಯುತು. ಇದರಿಂದಾಗಿ ನಮ್ಮ ಬಂಧುಗಳಲ್ಲಿ ಸಾಕಷ್ಟು ಜನ, ಇರುವೆಯಣ್ಣನ ಸಂಸಾರದಲ್ಲಿ ಹಲವರು, ಜಿರಲೆ ತಾತನ ಸಂಬಂಧಿಕರಲ್ಲಿ ಕೆಲವರು ನಿರ್ನಾಮವಾಗಿದ್ದಾರೆ. ನಾನು ಹೇಗೋ ತಪ್ಪಿಸಿಕೊಂಡು ಜೀವ ಹಿಡಿದಿದ್ದೇನೆ. ಹೀಗೇ ಆದರೆ ಇಷ್ಟರಲ್ಲೇ ಅವರ ಕೈಗೆ ಸಿಕ್ಕಿ ನಜ್ಜುಗುಜ್ಜಾಗುತ್ತೇನೆ’ .
‘ಓ..ಈ ನಿಟ್ಟಿನಲ್ಲಿ ನಾನು ಆಲೋಚಿಸಿರಲೇ ಇಲ್ಲ. ನಾನು ಇರೋ ಏರಿಯಾದಲ್ಲಿ ಇವ್ಯಾವ ಕಾಟಗಳೂ ಇಲ್ಲ. ಅದೊಂದು ದೊಡ್ಡ ಸ್ಲಂ ಏರಿಯ. ಇಂತಹವು ಪಟ್ಟಣದಲ್ಲಿ ಇನ್ನು ಎಷ್ಟೊ ಕಡೆ ಇವೆ. ಅಲ್ಲಿ ಏನೇ ಔಷಧಿ ಸಿಂಪಡಿಸಿದರೂ ನಮ್ಮನ್ನು ಅಲ್ಲಾಡಿಸಲಿಕ್ಕಾಗುವುದಿಲ್ಲ. ಈ ಕೊರೋನಾ ಪೀಡೆ ಮುಗಿಯುವವರೆಗೂ ನಾನು ನಿಮಗೆ ಯಾವಯಾವ ಏರಿಯಾ ಬೇಕೋ ಅಲ್ಲಿಗೆ ಇರಲು ಸಹಾಯಮಾಡುತ್ತೇನೆ. ಅಲ್ಲಿ ನೆಮ್ಮದಿಯಾಗಿದ್ದುಬಿಡಿ. ಆನಂತರ ನಿಮ್ಮ ಸ್ವಸ್ಥಾನಕ್ಕೆ ಹಿಂದಿರುಗಬಹುದು. ನೀವು ಹುಟ್ಟಿ ಬೆಳೆದು, ಬಾಳಿದ ಜಾಗದಿಂದ ಬೇರೆ ಕಡೆ ಹೋಗಿ ಅಡ್ಜಸ್ಟ್ ಆಗೋದು ಸ್ವಲ್ಪ ಕಷ್ಟ ಆಗುವುದು ಸಹಜ. ಸ್ವಲ್ಪಕಾಲ ಹೇಗೋ ಅನುಸರಿಸಿ. ಇದರ ಮಧ್ಯೆ ಯಾರಾದರೂ ದೇವರ ಪಾದ ಸೇರಿದರೆ ಅವರ ಆಯುಸ್ಸು ಅಷ್ಟೇ ಇತ್ತು ಅಂದುಕೊಳ್ಳೋದು ಎಂದಿತು’ ಬಾಸ್.
‘ನಿಮ್ಮ ಐಡಿಯಾ ಚೆನ್ನಾಗಿದೆ ಬಾಸ್, ಆದರೆ ಬಹಳಷ್ಟು ಮನೆಯಲ್ಲಿ ಕೆಲಸದವರೇ ಇಲ್ಲದೆ ಪಾತ್ರೆ ತೊಳೆಯುವ , ಬಟ್ಟೆ ತೊಳೆಯುವ, ಮೆಷಿನ್ನುಗಳಿವೆ. ಇತ್ತೀಚೆಗೆ ಮನೆಯನ್ನು ಕ್ಲೀನ್ ಮಾಡುವ ‘ರೋಬೋ’ ಕೂಡ ತಯಾರಿಸಿದ್ದಾರಂತೆ’.
‘ಅಯ್ಯೋ ಹುಚ್ಚಪ್ಪಗಳಿರಾ, ಇವೆಲ್ಲ ಅಭಾವ ವೈರಾಗ್ಯದ ಮಾತುಗಳು. ಈ ಖಾಯಿಲೆ ಒಂದು ಹಂತಕ್ಕೆ ನಿವಾರಣೆಯಾದರೆ ಮತ್ತೆ ಮನುಷ್ಯರೆಲ್ಲರೂ ಮೊದಲಿನ ಜಾಡಿಗೇ ಬರುತ್ತಾರೆ. ಚಿಂತೆ ಮಾಡಬೇಡಿ. ನೆಮ್ಮದಿಯಾಗಿ ಬದುಕುವುದನ್ನು ಕಲಿತುಕೊಳ್ಳಿ ಜಯವಿರುವವರೆಗೂ ಭಯವಿಲ್ಲ ನೆನಪಿಟ್ಟುಕೊಳ್ಳಿ. ಈಸಬೇಕು ಇದ್ದು ಜೈಸಬೇಕು ಎಂದಿತು’ ಬಾಸ್.
‘ಲೇ..ಏಳೇ ಮಹಾರಾಯ್ತೀ, ಗಂಟೆ ಏಳಾಯ್ತು. ಕೆಲಸದವಳೂ ಇಲ್ಲ. ಅದೇನೋ ಮನೆಯ ಧೂಳುದುಂಬು ತೆಗೆಯಬೇಕೆಂದು ಹೇಳ್ತಾ ಇದ್ದೆ. ಧೂಳು ತೆಗೆಯೋ ಗಳ ಎಲ್ಲಿದೆ? ನಾನೂ ಸ್ವಲ್ಪ ಸಹಾಯ ಮಾಡ್ತೀನಿ’ ಎಂದು ನನ್ನನ್ನು ಅಲುಗಾಡಿಸಿದರು ನನ್ನ ಪತಿದೇವರು.
‘ಹಾಗಾದರೆ ನಾನು ಇಷ್ಟೊತ್ತೂ ಕಂಡಿದ್ದು ಕನಸೇ’ ಎಂದುಕೊಂಡು ಕಣ್ಣುಜ್ಜಿಕೊಂಡು ಮೇಲಕ್ಕೆದ್ದೆ.
-ಬಿ.ಆರ್. ನಾಗರತ್ನ, ಮೈಸೂರು
ಹ್ಹ… ಹ್ಹ… ಹ್ಹ… ಚೆನ್ನಾಗಿದೆ ಕನಸು. Beautiful Narration.
ಲಘುಬರಹ ಚೆನ್ನಾಗಿದೆ.
ಮಲಗಿದಾಗ ನಾಳೆಗೆ ಏನು ಅಡಿಗೆ ಮಾಡಲಿ ಎಂದು ಯೋಚಿಸಿ ಮಲಗುವ ನಮಗೆ ಇತರ ಕನಸು ಬೀಳುವುದು
ಆಶ್ಚರ್ಯ ವಲ್ಲ
ನಮ್ಮ ಮನೆಯ ಎಲ್ಲಾ ಫ್ರೆಂಡ್ಸಿಗೆ ಮಾತು ಬರಿಸಿ ಬಿಟ್ಟಿದ್ದೀರಲ್ಲಾ..ಚೆನ್ನಾಗಿದೆ ಕನಸು!
ಧನ್ಯವಾದಗಳು ಸಾಹಿತ್ಯ ಸಹೃದಯರಿಗೆ
ಧನ್ಯವಾದಗಳು ಮೇಡo
ಕೀಟಗಳ ಹರಟೆಕೂಟ… ಚೆನ್ನಾಗಿತ್ತು..
ಕೀಟಗಳ ಮಹಾ ಸಮಾವೇಶದ ನಿರೂಪಣೆ ಸೃಜನಾತ್ಮಕ
ವಾಗಿ ಮೂಡಿಬಂದಿದೆ. ನಗುವೆ ಕಮ್ಮಿಯಾಗಿರುವ ಈ
ಸಮಯದಲ್ಲಿ ಒಂದು ಒಳ್ಳೆ ಕಾಮಿಡಿ.
ನಿಮ್ಮ ಪ್ರತಿಕ್ರಿಯೆ ಗೆ ಧನ್ಯವಾದಗಳು ವತ್ಸಲಾ ಮತ್ತು ಅನಿತ ಲಕ್ಷ್ಮೀ ಯವರಿಗೆ
ಪರಕಾಪ್ರವೇಶದಲ್ಲಿ ಅನುಕಂಪದ ಮಹಾಪೂರವೇ ಹರಿದಿದೆ. ಲಘು ಬರಹ ಮುದ ನೀಡಿತು.
ಧನ್ಯವಾದಗಳು ಪ್ರಿಯ ಗೆಳತಿ ಪದ್ಮಾ
Nice article. who is the boss? it is a cricket.