ಕಣ್ಣಿನ ಕಾಗುಣಿತ…

Share Button

ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ, ಇವುಗಳು ತಮ್ಮದೇ ರೀತಿಯಲ್ಲಿ ಸಂವೇದನೆಗಳನ್ನು ನರತಂತುಗಳ ಮೂಲಕ ಮೆದುಳಿಗೆ ಮುಟ್ಟಿಸುತ್ತವೆ. ಇದರ ಮೂಲಕ ಬಾಹ್ಯ ವಸ್ತುಗಳ, ವ್ಯಕ್ತಿಗಳ, ಪರಿಸರದ ವಾಸ್ತವ ಪರಿಚಯ ವ್ಯಕ್ತಿಗೆ ಆಗುವುದು. ಅದರಲ್ಲೂ ಪಂಚೇಂದ್ರಿಯಾಣಾಂ ನಯನಂ ಪ್ರಧಾನಂ ಎಂದು ಕಣ್ಣೇ ಪಂಚೇಂದ್ರಿಯಗಳಲ್ಲಿ ಬಹುಮುಖ್ಯವಾದದ್ದು ಎಂದಿದ್ದಾರೆ. ವ್ಯಕ್ತಿ ವ್ಯಕ್ತಿಯ ನಡುವೆ ಭಾವನೆಗಳನ್ನು ಹಂಚಿಕೊಳ್ಳಲು ಸಂವಹನದ ಮಾಧ್ಯಮವೇ ಬಾಷೆ. ಭಾಷೆಯೆಂದಮೇಲೆ ಅದಕ್ಕೊಂದು ರೀತಿನೀತಿ, ನಿಯಮ ಕಟ್ಟುಪಾಡು ಇರುತ್ತದೆ. ಅದನ್ನೇ ಭಾಷೆಗೊಂದು ವ್ಯಾಕರಣವೆನ್ನುವರು. ಅದರಂತೆ ಕಣ್ಣುಗಳೂ ಸಂವಹನಕ್ಕಾಗಿ ಮಾಧ್ಯಮವಾಗಿ ತಮ್ಮ ನೋಟವನ್ನು ಬಳಸುತ್ತವೆ. ಕಣ್ಣಿನ ನೋಟದ ಬಾಷೆ ಮಾತಿನ ಭಾಷೆಗಿಂತಲೂ ಎಷ್ಟೋ ಬಾರಿ ಶಕ್ತಿಯುತವಾಗಿರುವುದುಂಟು. ಈ ನೋಟಕ್ಕೂ ಸಂದರ್ಭಾನುಸಾರವಾಗಿ ವೈವಿಧ್ಯತೆಯಿದೆ. ಅದನ್ನು ನಾವು ಕಣ್ಣಿನ ಕಾಗುಣಿತವೆನ್ನಲಡ್ಡಿಯಿಲ್ಲ.

ಕಣ್ಣುಗಳ ರಚನೆಯಲ್ಲೂ ಬಹುವಿಧಗಳಿವೆ. ಕವಿಗಳು ತಮ್ಮ ಕಾವ್ಯದಲ್ಲಿ ಕಣ್ಣುಗಳ ವಿವಿಧ ರೂಪಗಳನ್ನು ಕಮಲನಯನೆ, ಜಲಜಾಕ್ಷಿ, ಪಂಕಜಾಕ್ಷಿ, ಮೀನನೇತ್ರೆ, ಹರಿಣಾಕ್ಷಿ, ಚಿಗರೆಕಂಗಳು, ಮುಂತಾಗಿ ವರ್ಣಿಸಿರುವುದುಂಟು. ಇವೆಲ್ಲವೂ ಕಣ್ಣುಗಳ ಸೊಬಗನ್ನು ಹೊಗಳಲು ಬಳಸಿದ್ದಾರೆ. ಅದೇರೀತಿ ಸಾಮಾನ್ಯರು ತಮ್ಮ ಮಾತುಗಳಲ್ಲಿ ದಪ್ಪನಾಗಿರುವ ಗುಡ್ಡೆಗಳಿದ್ದರೆ ಗೆಡ್ಡೆಗಣ್ಣ, ಸಣ್ಣದಾದ ಕಣ್ಣುಗಳಿದ್ದರೆ ಆನೆಯಂತ ಕಿರುಗಣ್ಣು, ಒಂದೇ ಕಣ್ಣಿದ್ದರೆ ಒಕ್ಕಣ್ಣ, ಪಕ್ಕಕ್ಕೆ ದೃಷ್ಟಿ ಹರಿಯುವಂತಿದ್ದರೆ ವರ್ಚುಗಣ್ಣು, ಹುಟ್ಟುವಾಗಲೇ ಕಣ್ಣುಗಳು ಪಕ್ಕಕ್ಕೇ ನೋಡುವಂತಿದ್ದರೆ ಮಾಲುಗಣ್ಣು, ಮುಂತಾಗಿ ಅನ್ವರ್ಥ ಪದಗಳಿಂದಲೂ ಕರೆಯುವುದುಂಟು.

ನೋಟಗಳಲ್ಲಿ ಬಹುರೀತಿಯ ನೋಟಗಳುಂಟು. ಮಗುವಿನ ಮುಗ್ಧ ನೋಟ, ಲಲನೆಯರ ಓರೆನೋಟ, ಉಪಕೃತಿಯ ಭಾರದಿಂದ ಕುಗ್ಗಿದ ದೈನ್ಯನೋಟ, ಅಪರಾಧಿ ಭಾವದ ಕಳ್ಳನೋಟ, ಕ್ರೋಧಭರಿತ ಕ್ರೂರನೋಟ, ಆತ್ಮೀಯತೆಯ ಸ್ನೇಹದ ನೋಟ, ಪ್ರೇಮಿಗಳ ಅನುರಾಗ ತುಂಬಿದ ನೋಟ, ತಾಯಿಯ ಮಮತೆಯ ನೋಟ ಹೀಗೆ ಸಾಂದರ್ಭಿಕವಾಗಿ ಬಳಕೆಯಾಗುತ್ತವೆ. ಅಂತರಂಗದ ಭಾವನೆಗಳಿಗೆ ಮಾತುಗಳಿಲ್ಲದೆ ಬಳಸಲ್ಪಡುವ ಕಣ್ಣೋಟದ ಕಾಗುಣಿತದ ಸಾಧ್ಯತೆಗಳ ಬಗ್ಗೆ, ಅಂತಹ ನೋಟಗಳ ಪರಿಣಾಮಗಳ ಬಗ್ಗೆ ಸ್ವಲ್ಪ ದೃಷ್ಟಿ ಹರಿಸೋಣ.

PC: Internet

ಮುದ್ದಾದ ಮಗುವಿನ ಮನಸ್ಸಿನಲ್ಲಿ ಯಾವ ಕಪಟವೂ ಇಲ್ಲ. ಎಲ್ಲರೂ ಪ್ರೀತಿಸುವಂತಹ ನಿಷ್ಕಲ್ಮಶ ನೋಟವದು. ಮುಗ್ಧತೆಯಿಂದ ಕೂಡಿರುತ್ತದೆ. ಆದರೆ ಮಗುವಿನ ತಾಯಿಗೆ ಮಾತ್ರ ಅದರ ಕಾಗುಣಿತ ಸುಲಭವಾಗಿ ತಿಳಿಯುತ್ತದೆ. ಅದಕ್ಕೇನಾದರೂ ನೋವು ಅಥವಾ ದೈಹಿಕ ತೊಂದರೆಯಾಗಿದೆಯೇ? ಹಸಿವಾಗಿದೆಯೇ? ಇನ್ನೇನಾದರೂ ತೊಂದರೆಯಿದೆಯೇ? ಎಂಬುದನ್ನು ಕ್ಷಣಾರ್ಧದಲ್ಲಿ ಗುರುತಿಸಿ ಅದನ್ನು ಪರಿಹರಿಸುವತ್ತ ಗಮನ ಹರಿಸುತ್ತಾಳೆ.

ಕೂಡುಕುಂಟುಂಬದ ಮನೆಗಳಲ್ಲಿ ಮೂರು ತಲೆಮಾರಿನ ಸದಸ್ಯರೂ ಇರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಅವರ ನಡುವೆ ಇರುವ ನವದಂಪತಿಗಳ ಪರಸ್ಪರ ಮನಬಿಚ್ಚಿ ಸಲ್ಲಾಪ ನಡೆಸಲು ಹೆಚ್ಚು ಅವಕಾಶಗಳಿರುವುದಿಲ್ಲ. ಅಲ್ಲಿ ಅವರಿಬ್ಬರ ನಡುವೆ ಎದುರುಬದುರಾಗುವ ಕೆಲವೇ ಕ್ಷಣಗಳಲ್ಲಿ ಕಣ್ಣೋಟಗಳೇ ತಾಕಲಾಡಿ ಮಾತನಾಡುತ್ತವೆ. ಅವೆಷ್ಟು ಮಧುರವಾಗಿರುತ್ತವೆಂದರೆ ಅನುಭವಿಸಿದವರಿಗೆ ಮಾತ್ರವೇ ವೇದ್ಯ. ಅದೇ ರೀತಿ ಮನೆಗೆ ಹೊರಗಿನಿಂದ ಅತಿಥಿ, ಅಭ್ಯಾಗತರ್‍ಯಾರಾದರೂ ಬಂದರೆ ಮನೆಯಲ್ಲಿರುವ ಸಣ್ಣಮಕ್ಕಳನ್ನು ಶಿಸ್ತಿನಲ್ಲಿಡಲು ಹಿರಿಯರು ಕಣ್ಸನ್ನೆಗಳಲ್ಲಿಯೇ ಎಚ್ಚರಿಕೆಯನ್ನು ನೀಡುತ್ತಾರೆ. ಮನೆಯ ಯಜಮಾನ, ಯಜಮಾನಿಯರ ನಡುವೆ ಕೂಡ ಸೂಕ್ಷ್ಮನೋಟದಿಂದಲೇ ಉಚಿತ ಮಾತುಕತೆಗಳ ಆದೇಶ ವಿನಿಮಯವಾಗುತ್ತವೆ.  ವಿವಾಹ  ಪೂರ್ವದಲ್ಲಿ ವಧೂವರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಮೊದಲಕಾಲದಲ್ಲಿ ಪರಿಚಿತವಾಗಿತ್ತು. ಇಬ್ಬರ ಜಾತಕಗಳು ಹೊಂದಾಣಿಕೆಯಾದ ನಂತರ ವಧೂವರರು ಪರಸ್ಪರ ನೋಡಿಮೆಚ್ಚುವ ಪ್ರಕ್ರಿಯೆ ನಡೆಯುತ್ತಿತ್ತು. ಎರಡೂ ಕುಟುಂಬದ ಹಿರಿಯರ ಸಮ್ಮುಖದಲ್ಲೇ ಇದು ನಡೆಯುತ್ತಿತ್ತು. ಹೀಗಾಗಿ ವಧೂವರರು ಪರಸ್ಪರರನ್ನು ಕಣ್ಣೋಟದಿಂದಲೇ ಮೆಚ್ಚಿಕೊಳ್ಳಬೇಕಾಗಿತ್ತು. ಈಗಿನಂತೆ ಜೊತೆಜೊತೆಯಾಗಿ ಓಡಾಡುವ ಅವಕಾಶವೇ ಇರುತ್ತಿರಲಿಲ್ಲ. ಎಲ್ಲರಿಗೂ ಒಪ್ಪಿಗೆಯಾದರೆ ನಂತರ ಸಂಭಾಷಣೆಗೆ ಅವಕಾಶ ಸಿಗುತ್ತಿತ್ತು. ಆಗಿನ ಒಂದು ನೋಟಕ್ಕೆ ಎಷ್ಟು ಸಾಮರ್ಥ್ಯವಿತ್ತೆಂಬುದನ್ನು ಊಹಿಸಿಕೊಳ್ಳಬಹುದು.

ಕೆಲವರು ಪರಸ್ಪರರ ಭೇಟಿಯನ್ನು ಇಷ್ಟಪಡದಿದ್ದರೂ ಔಪಚಾರಿಕವಾಗಿ ಮಾತನಾಡಬೇಕಾದ ಸಂದರ್ಭದಲ್ಲಿ ಅವರ ಕಣ್ಣುಗಳಲ್ಲಿ ಉಪೇಕ್ಷೆಯ ನೋಟ ಎದ್ದುಕಾಣುತ್ತಿರುತ್ತದೆ. ಬಾಯಲ್ಲಿ ಮಾತ್ರ ಉಭಯ ಕುಶಲೋಪರಿ ನಡೆದಿದ್ದರೂ ಕಣ್ಣಿನಲ್ಲಿನ ತಿರಸ್ಕಾರ ಅರ್ಥವಾಗುವಂತಿರುತ್ತದೆ. ಇನ್ನು ಕೆಲವರಲ್ಲಿ ವಿಚಿತ್ರ ಅಸೂಯಾ ಸ್ವಭಾವವಿರುತ್ತದೆ. ಯಾರಾದರೂ ಪರಿಚಿತ ವ್ಯಕ್ತಿಯೊಬ್ಬ ತನ್ನ ಶ್ರಮದಿಂದ ಉನ್ನತಿಗೇರಿದರೂ ಅದನ್ನವರು ಸಹಿಸರು. ಮನಸ್ಸಿನಲ್ಲೇ ಆ ವ್ಯಕ್ತಿಗೆ ಯಾವುದಾದರೂ ಒಂದು ರೀತಿಯಲ್ಲಿ ಹಾನಿಯುಂಟು ಮಾಡುವ ಹುನ್ನಾರವನ್ನು ರೂಪಿಸುತ್ತಿರುತ್ತಾರೆ. ಆದರೆ ಬಾಹ್ಯದಲ್ಲಿ ಅವನ ಕೈಕುಲುಕಿ ಶುಭಾಶಯ ಹೇಳಿ ಹಾರೈಸುವಂತೆ ನಟಿಸುತ್ತಾರೆ. ಅವರ ಕಣ್ಣೋಟದಲ್ಲಿ ಮಾತ್ರ ಈರ್ಷೆ, ಅಸೂಯೆ ಮಡುಗಟ್ಟಿರುತ್ತದೆ.

ಉತ್ತಮರ ಬಳಿಯಲ್ಲಿ ಸಂಕಷ್ಟದಲ್ಲಿರುವ ವ್ಯಕ್ತಿ ನೆರವನ್ನು ಅಪೇಕ್ಷಿಸಿ ಬಂದಾಗ ಆತನ ಕಣ್ಣುಗಳಲ್ಲಿ ದೈನ್ಯ, ವಿನಯಗಳು ತುಂಬಿದ ಕೃತಜ್ಞತೆಯ ನೋಟವನ್ನು ಕಾಣಬಹುದು. ಇನ್ನು ಕೆಲವು ಮೂಢ ನಂಬಿಕೆಗಳ ಪ್ರಕಾರ ಕೆಲವರ ಕಣ್ಣುಗಳ ನೋಟ ಇನ್ನೊಬ್ಬರಿಗೆ ಕೆಡುಕನ್ನು ಮಾಡುತ್ತವೆ. ಇದು ಎಷ್ಟರ ಮಟ್ಟಿಗೆ ನಿಜವೋ ತಿಳಿಯದು. ಆದರೆ ದೃಷ್ಟಿಯಾಗಿದೆಯೆಂದು ಹೆಚ್ಚು ಅಲಂಕಾರ ಮಾಡಿಕೊಂಡು ಹೊರಗಡೆಗೆ ಹೋಗಿಬಂದ ಹೆಣ್ಣುಮಗಳಿಗೆ, ಹತ್ತಾರು ವ್ಯಕ್ತಿಗಳ ಕೈಯಲ್ಲಿ ಎತ್ತಿಸಿಕೊಂಡು ಸುತ್ತಾಡಿ ಮನೆ ಬಂದ ಪುಟ್ಟ ಮಗುವಿಗೆ, ನೂತನ ವಧೂವರರು ಮನೆಗೆ ಆಗಮಿಸಿದಾಗ ಅವರಿಗೆ, ಯುದ್ಧದಲ್ಲಿ ಜಯಶಾಲಿಯಾಗಿ ಹಿಂದಿರುಗುವ ರಾಜನಿಗೆ ಒಳಬಂದ ತಕ್ಷಣ ಸುಮಂಗಳೆಯರು ದೃಷ್ಟಿ ನೀವಾಳಿಸಿ ಯಾವುದೇ ಕೆಡುಕು ದುಷ್ಟ ಕಣ್ಣೋಟಗಳಿಂದ ಆಗದಿರಲಿ ಎಂದು ಹಾರೈಸುತ್ತಾರೆ. ಕಾಕತಾಳ ನ್ಯಾಯದಂತೆ ಇವು ಕೆಲವೊಮ್ಮೆ ನಿಜವೇನೋ ಎಂದೆನಿಸಿ ಬಿಡುವುದೂ ಉಂಟು.

ಶಾಸ್ತ್ರೀಯ ನೃತ್ಯಕಲಾವಿದರು ಆಂಗಿಕ ಅಭಿನಯಕ್ಕೆ ಪೂರಕವಾಗಿ ಭಾವದ ಅಭಿವ್ಯಕ್ತಿಯನ್ನು ಕಣ್ಣುಗಳ ನೋಟಗಳ ವೈವಿಧ್ಯತೆಯಿಂದ ಸಮರ್ಥವಾಗಿ ಬಳಸುತ್ತಾರೆ. ನವರಸಗಳಾದ ಶೃಂಗಾರ, ಕರುಣ, ಹಾಸ್ಯ, ಅದ್ಭುತ, ವೀರ, ರೌದ್ರ, ಭಯಾನಕ, ಭೀಭತ್ಸ, ಶಾಂತ ಮುದ್ರೆಗಳೊಂದಿಗೆ ಕಣ್ಣಿನ ಕಾಗುಣಿತವೂ ಸೇರಿ ನಯನ ಮನೋಹರ ಅನುಭವವನ್ನು ನೀಡುತ್ತವೆ. ನಮ್ಮ ಇಂದಿನ ಸಿನಿಮಾ ಗೀತೆಗಳ ಸಾಹಿತ್ಯದಲ್ಲಿ ಕಣ್ಣೋಟದ ಪ್ರಸ್ತಾಪವು ಅನೇಕ ಬಾರಿ ಬಂದಿದೆ. ಉದಾಹರಣೆಗೆ ‘ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ’, ‘ಕಣ್ಣಮಿಂಚು ನೋಟದಲ್ಲಿ ಕಂಡೆ ಪ್ರೇಮದೀಪ’, ‘ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ’, ‘ಕಣ್ಣಿನ ನೋಟಗಳು ಕೋಲ್ಮಿಂಚಿನ ಬಾಣಗಳು’, ‘ಕಣ್ಣಿನ ಮಾತುಗಳು ಬಿಡಿಸಲಾಗದ ಒಗಟುಗಳು’, ‘ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ ಗಡಗಡ ನಡುಗಿದೆ ಗಂಗಮ್ಮಾ’ ಮುಂತಾಗಿ ಕಣ್ಣೋಟದ ವಿವಿಧ ಆಯಾಮಗಳನ್ನು ಉಪಯೋಗಿಸಲಾಗಿದೆ.

ನಮ್ಮ ಪುರಾಣಗಳ ಕೆಲವು ಪ್ರಸಂಗಗಳಂತೂ ಬಹಳ ಸ್ವಾರಸ್ಯಕರವಾಗಿವೆ. ತಾಪಸಿಗಳಾದ ಋಷಿಮುನಿಗಳು ಭಗವಂತನನ್ನು ಕುರಿತು ಬಹಳ ಕಾಲ ತಪ್ಪಸ್ಸಿನಲ್ಲಿ ಕೂಡುತ್ತಿದ್ದರು. ಅವರ ತಪಸ್ಸನ್ನು ಭಂಗಪಡಿಸಲು ಅಪ್ಸರಸ್ತ್ರೀಯರು ಸ್ವರ್ಗದಿಂದ ಧರೆಗಿಳಿದು ಬರುತ್ತಿದ್ದರು. ವಿಶ್ವಾಮಿತ್ರರು ಅನೇಕ ಬಾರಿ ಉಗ್ರ ತಪಸ್ಸು ಮಾಡಿದವರು. ಒಮ್ಮೆ ಅವರ ತಪಸ್ಸನ್ನು ಭಂಗಪಡಿಸಲು ಮೇನಕೆಯೆಂಬ ಅಪ್ಸರೆಯ ಕಣ್ಣೋಟವೇ ಸಾಕಾಯಿತು. ಇದರ ಫಲವಾಗಿ ‘ಶಕುಂತಲೆಯ’ ಜನ್ಮಕ್ಕೆ ಕಾರಣವಾಯಿತು. ಉಗ್ರತಾಪಸಿ, ಶೀಘ್ರಕೋಪಿ ವಿಶ್ವಾಮಿತ್ರರೇ ಕಣ್ಣೋಟದಿಂದ ಪಾರಾಗಲಿಲ್ಲ. ಅದೇರೀತಿ ದುಷ್ಯಂತ ಮಹಾರಾಜನೊಮ್ಮೆ ಅಕಸ್ಮಾತ್ತಾಗಿ ಕಣ್ವಮುನಿಗಳ ಆಶ್ರಮಕ್ಕೆ ಆಗಮಿಸಿದನು. ಅಲ್ಲಿ ಕಂಡದ್ದೇ ಲೋಕೋತ್ತರ ಸುಂದರಿ ಶಕುಂತಲೆಯನ್ನು. ಇಬ್ಬರ ನಡುವೆ ಕಲೆತದ್ದೇ ಕಣ್ಣೋಟಗಳು. ಮುಂದಿನದ್ದು ತಿಳಿದೇ ಇದೆ. ಅವಳಿಗೆ ವಶನಾದ ದೊರೆ ಅವಳನ್ನು ತಕ್ಷಣವೇ ಗಾಂಧರ್ವ ವಿವಾಹವಾದನು.

ತ್ರಿಮೂರ್ತಿಗಳಲ್ಲಿ ಉರಿಗಣ್ಣುಳ್ಳ ಪರಶಿವನು ತನ್ನ ಪತ್ನಿ ದಾಕ್ಷಾಯಿಣಿ ಅಗ್ನಿಕುಂಡದಲ್ಲಿ ಪ್ರಾಣತ್ಯಾಗ ಮಾಡಿದ ನಂತರ ಮನಶ್ಶಾಂತಿಗಾಗಿ ಅತ್ಯಂತ ಉಗ್ರವಾದ ತಪಸ್ಸಿನಲ್ಲಿ ನಿರತನಾಗಿದ್ದನು. ಸಮಾಧಿ ಸ್ಥಿತಿಯಲ್ಲಿ ಬಾಹ್ಯದ ಅರಿವನ್ನೇ ಕಳೆದುಕೊಂಡು ಕುಳಿತಿದ್ದ. ಅವನನ್ನೇ ವರಿಸುವುದಾಗಿ ಕಠಿಣನಿರ್ಧಾರ ಮಾಡಿದ್ದ ಪಾರ್ವತಿ ಸದಾ ಅವನ ಸೇವೆಯಲ್ಲೇ ನಿರತಳಾಗಿದ್ದಳು. ಅವನ ಕೃಪೆಗಾಗಿ ಕಾಯುತ್ತಿದ್ದಳು. ಅವರಿಬ್ಬರ ಮಿಲನವಾಗಿ ಹುಟ್ಟುವ ಮಗುವಿನಿಂದಲೇ ಲೋಕಕಲ್ಯಾಣವಾಗಬೇಕಾದ ಕಾರಣ ದೇವತೆಗಳೆಲ್ಲರೂ ಹೇಗಾದರೂ ಶಿವನನ್ನು ಬಹಿರಂಗಸ್ಥಿತಿಗೆ ತರಲು ಉಪಾಯ ಮಾಡುವರು, ಅದಕ್ಕಾಗಿ ಮದನನನ್ನು ಪ್ರೇರೇಪಿಸಿ ಶಿವನ ಮೇಲೆ ಕುಸುಮಶರಗಳನ್ನು ಪ್ರಯೋಗಿಸುವಂತೆ ಮಾಡುತ್ತಾರೆ. ಆದರೆ ತಪೋಭಂಗವಾಗಿ ಉರಿಗಣ್ಣು ತೆರೆದಾಗ ಮದನ ಭಸ್ಮವಾಗಿಬಿಡುತ್ತಾನೆ. ಆದರೆ ಪರಶಿವನ ಪ್ರಶಾಂತದೃಷ್ಟಿ ಪಾರ್ವತಿಯ ಮೇಲೆ ನಾಟುತ್ತದೆ. ಇದರಿಂದ ಮೋಹಪರವಶನಾಗಿ ಆಕೆಯನ್ನು ಪತ್ನಿಯಾಗಿ ಅಂಗೀಕರಿಸುತ್ತಾನೆ. ಇಬ್ಬರ ಮಿಲನದಿಂದ ಕುಮಾರಸಂಭವವಾಗಿ ಲೋಕಕಲ್ಯಾಣವಾಗುತ್ತದೆ. ಇಲ್ಲಿ ಕಣ್ಣೋಟ ದಹಿಸುವಂತಹ, ಪ್ರೇಮಸುಧೆಯನ್ನು ಸುರಿಸುವಂತಹ ಎರಡೂ ಬಗೆಯಲ್ಲಿ ಕೆಲಸ ಮಾಡಿದೆ.

ಆದಿಕವಿ ಪಂಪನ ಆದಿಪುರಾಣದಲ್ಲಿ ರಾಜ್ಯದ ಪ್ರಭುತ್ವಕ್ಕಾಗಿ ಭರತಚಕ್ರವರ್ತಿ, ತಮ್ಮ ಬಾಹುಬಲಿಯೊಡನೆ ದ್ವಂದ್ವ ಯುದ್ಧ ಮಾಡುವ ಪ್ರಸಂಗವಿದೆ. ಎಲ್ಲವನ್ನೂ ಗೆದ್ದಿಹೆನೆಂಬ ಭರತನಿಗೆ ಚಕ್ರಾಯುಧವೂ ವಶವಾಗಿರುತ್ತದೆ. ಆದರೆ ತಮ್ಮ ಬಾಹುಬಲಿ ಮಾತ್ರ ಅವನಿಗೆ ಶರಣಾಗುವುದಿಲ್ಲ. ಅನ್ಯಾಯವಾಗಿ ಸೈನಿಕರೇಕೆ ಬಲಿಯಾಗಬೇಕೆಂದು ಇಬ್ಬರೇ ದ್ವಂದ್ವಯುದ್ಧಕ್ಕೆ ಸಿದ್ದೃರಾಗುತ್ತಾರೆ. ಅದರಲ್ಲಿ ಒಂದುಭಾಗ ದೃಷ್ಟಿಯುದ್ಧ ವಾಗಿರುತ್ತದೆ. ಒಬ್ಬರಿನ್ನೊಬ್ಬರ ವಿರುದ್ಧ ಕ್ರೂರದೃಷ್ಟಿಗಳನ್ನು ಕಣ್ಣು ಪಿಳುಕಿಸದೇ ಪ್ರಯೋಗಿಸುತ್ತಾರೆ. ಅಂತರಂಗದಲ್ಲಿರುವ ಕ್ರೋಧಾಗ್ನಿಯ ಜ್ವಾಲೆಯನ್ನು ಕಣ್ಣೋಟದಿಂದಲೇ ಹೊರಹಾಕುತ್ತಾರೆ. ಅಂತಿಮವಾಗಿ ಬಾಹುಬಲಿ ವಿಜಯಶಾಲಿಯಾಗುತ್ತಾನೆ. ಆಯುಧಗಳಿಲ್ಲದೆ ಕಣ್ಣೋಟವನ್ನೇ ಆಯುಧದಂತೆ ಬಳಸಬಹುದೆಂಬುದಕ್ಕೆ ಇದೊಂದು ಉದಾಹರಣೆ.

ಮಹಾಭಾರತದ ಕೃಷ್ಣಸಂಧಾನದ ಸಂದರ್ಭ. ಕೃಷ್ಣನು ಪಾಂಡವರ ರಾಯಭಾರಿಯಾಗಿ ಕೌರವೇಶ್ವರನ ಆಸ್ಥಾನಕ್ಕೆ ಆಗಮಿಸಿದಾಗ ದುರ್ಯೋಧನ ಅವನ ಸಂಧಾನದ ಮಾತುಗಳನ್ನು ಪುರಸ್ಕರಿಸುವುದಿಲ್ಲ. ಅಲ್ಲದೆ ಕೃಷ್ಣನನ್ನು ಅವಮಾನಿಸುತ್ತಾನೆ. ಹಿರಿಯರು ಶ್ರೀಕೃಷ್ಣನು ಮಹಾತ್ಮನೆಂದು ಹೊಗಳಿದರೂ ಅವರ ಮಾತನ್ನವನು ಕೇಳುವುದಿಲ್ಲ. ಆಗ ಸರ್ವಶಕ್ತನು ತಾನೆಂಬುದನ್ನು ತೋರ್ಪಡಿಸುವ ಸಲುವಾಗಿ ಶ್ರೀಕೃಷ್ಣನು ತನ್ನ ವಿಶ್ವರೂಪದರ್ಶನ ಮಾಡಿಸುತ್ತಾನೆ. ಹುಟ್ಟುಗುರುಡನಾದ ದೃತರಾಷ್ಟ್ರನೂ ಆ ದೃಶ್ಯವನ್ನು ವಿಶೇಷ ದೃಷ್ಟಿ ಪಡೆದು ಈಕ್ಷಿಸುತ್ತಾನೆ. ಅಲ್ಲದೆ ಮುಂದೆ ಅವನ ಅನುಚರನಾದ ಸಂಜಯನಿಗೆ ಮಹರ್ಷಿ ವೇದವ್ಯಾಸರು ವಿಶೇಷ ದೃಷ್ಟಿದಾನ ನೀಡುತ್ತಾರೆ. ಅದರ ಫಲವಾಗಿ ಕುರುಕ್ಷೇತ್ರದಲ್ಲಿ ಪ್ರತಿದಿನ ನಡೆಯುವ ಆಗುಹೋಗುಗಳನ್ನು ಪ್ರತ್ಯಕ್ಷವಾಗಿ ಕುಳಿತಲ್ಲಿಂದಲೇ ವೀಕ್ಷಿಸಿ ದೃತರಾಷ್ಟ್ರನಿಗೆ ವರದಿ ಮಾಡುವನವನು. ಇಂತಹ ವಿಶೇಷ ಸಾಮರ್ಥ್ಯ ಕಣ್ಣಿನ ನೋಟಕ್ಕಿತ್ತು. ಇದರಿಂದಾಗಿ ವಿಶ್ವದ ಮೊತ್ತಮೊದಲನೆಯ ವೀಕ್ಷಕ ವಿವರಣೆಕಾರನಾಗಿದ್ದಾನೆ ಸಂಜಯ.

ಮಹಾಭಾರತ ಯುದ್ಧ ಮುಗಿದು ಕೌರವರೆಲ್ಲರೂ ಮಡಿದನಂತರ ಯುಧಿಷ್ಠಿರ ಮತ್ತು ಸೋದರರು ದೊಡ್ಡಪ್ಪ, ದೊಡ್ಡಮ್ಮರನ್ನು ಕಾಣಲು ಬಂದ ಪ್ರಸಂಗ. ಜೊತೆಯಲ್ಲಿ ಕೃಷ್ಣನೂ ಇರುತ್ತಾನೆ. ಮಕ್ಕಳನ್ನೆಲ್ಲ ಕಳೆದುಕೊಂಡ ಗಾಂಧಾರಿಯ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಗಿರುತ್ತದೆ. ಜೀವನ ಪೂರ್ತಿಯಾಗಿ ಹೊರ ಪ್ರಪಂಚವನ್ನು ನೋಡುವುದಿಲ್ಲವೆಂದು ತಾನೇ ಕಣ್ಣುಗಳಿಗೆ ಪಟ್ಟಿ ಕಟ್ಟಿಕೊಂಡಿದ್ದ ಅವಳ ಕ್ರೋಧಜ್ವಾಲೆ ಹೊರಗೆ ಪ್ರಕಟವಾಗದು. ಆದರೆ ಕುರುಕ್ಷೇತ್ರ ಯುದ್ಧಕ್ಕೆ, ಎಲ್ಲ ಅನಾಹುತಗಳಿಗೆ ಶ್ರೀಕೃಷ್ಣನೇ ಕಾರಣನೆಂಬುದು ಆಕೆಯ ನಂಬುಗೆ. ಕ್ರೋಧವನ್ನೆಲ್ಲ ಒಟ್ಟುಗೂಡಿಸಿ ಕಣ್ಣುಗಳಿಂದಲೇ ಜ್ವಾಲೆಯನ್ನು ಹರಿಸುತ್ತಾಳೆ. ಮುಂದೆ ಪಟ್ಟಿಯಿದ್ದ ಕಾರಣ ಅದರ ಕೆಳಗಿನ ಸಂದಿನಿಂದ ಅದು ಹೊರಹರಿದು ಶ್ರೀಕೃಷ್ಣನ ಕಾಲ್ಬೆರಳುಗಳ ಉಗುರುಗಳನ್ನು ಸುಟ್ಟುಹಾಕುತ್ತದೆ. ನೋಟದ ಸಾಮರ್ಥ್ಯಕ್ಕಿದು ಉತ್ತಮ ಉದಾಹರಣೆಯಾಗಿದೆ.

ಇನ್ನು ಕಣ್ಣಿನ ಸಹಾಯವಿಲ್ಲದೆ ಉಳಿದ ಅಂಗಗಳಿಂದಲೇ ವಾಸ್ತವವನ್ನು ಅರಿಯಲಾಗದು ಎಂಬುದಕ್ಕೊಂದು ಉದಾಹರಣೆಯಿಲ್ಲಿದೆ. ಯುವರಾಜನಾಗಿದ್ದ ದಶರಥ ತಾನು ಗುರುಗಳಿಂದ ಕಲಿತುಕೊಂಡಿದ್ದ ‘ಶಬ್ದವೇಧಿ’ ತಂತ್ರವನ್ನು ಪರೀಕ್ಷಿಸಲೋಸುಗ ಅರಣ್ಯದಲ್ಲಿ ನದೀತೀರದಲ್ಲಿದ್ದ ಪೊದೆಗಳ ಹಿಂದೆ ಅವಿತಿಟ್ಟುಕೊಂಡು ಕುಳಿತು ಯಾವುದಾದರೂ ಕಾಡುಪ್ರಾಣಿ ನದಿಯಲ್ಲಿ ನೀರುಕುಡಿಯಲು ಬರುವುದನ್ನು ನಿರೀಕ್ಷಿಸುತ್ತಿದ್ದ. ಆಗ ನದಿಯಿಂದ ಗುಳುಗುಳು ಶಬ್ಧ ಕೇಳಿಸಿತು. ದಶರಥನು ಯಾವುದೋ ಪ್ರಾಣಿಯೆಂದು ಶಬ್ಧವೇಧಿ ಪ್ರಯೋಗ ಮಾಡಿದ. ಮರುಕ್ಷಣದಲ್ಲೇ ಮನುಷ್ಯನೊಬ್ಬನ ಮಾರಣಾಂತಿಕ ಆಕ್ರಂದನ ಕೇಳಿಬಂತು. ಏನೋ ಅನಾಹುತವಾಯಿತೆಂದು ನದಿಯ ಬಳಿಗೆ ಓಡಿದ. ಅವನು ಪ್ರಯೋಗಿಸಿದ್ದ ಬಾಣ ಮುನಿಕುಮಾರನೊಬ್ಬನಿಗೆ ನಾಟಿತ್ತು. ಅವನು ಧರಾಶಾಯಿಯಾಗಿದ್ದ. ಅವನು ತನ್ನ ವೃದ್ಧರೂ, ಅಂಧರೂ, ಅಸಹಾಯಕರೂ ಆಗಿದ್ದ ತನ್ನ ಮಾತಾಪಿತೃಗಳಿಗೆ ನೀರನ್ನು ಕೊಂಡೊಯ್ಯಲು ನದಿಗೆ ಬಂದಿದ್ದನು. ವಿನಾಕಾರಣ ಮುನಿಕುಮಾರನನ್ನು ಕೊಂದ ಪಾಪಕೃತ್ಯದಿಂದ ಅವನ ತಂದೆತಾಯಿಗಳ ಕೋಪಕ್ಕೆ ಗುರಿಯಾದ. ಆ ಋಷಿಯು ದಶರಥನೂ ಅವರಂತೆಯೇ ಪುತ್ರಶೋಕದಿಂದ ಮರಣಿಸುವಂತೆ ಶಾಪಕೊಟ್ಟನು. ಕಣ್ಣಿನ ನೋಟವಿಲ್ಲದೆ ವಾಸ್ತವವನ್ನು ಗುರುತಿಸಲಾಗದ ಈ ಪ್ರಮಾದ ದಶರಥನ ಅಂತ್ಯಕ್ಕೆ ಕಾರಣವಾಯಿತು.

ಭಗವಾನ್ ಬುದ್ಧನೊಮ್ಮೆ ಅಂಗುಲಿಮಾಲನೆಂಬ ಭಯಂಕರ ಕೊಲೆಗಡುಕನಿರುವ ದಟ್ಟ ಕಾಡಿನಲ್ಲಿ ಹೋಗಬೇಕಾಗಿ ಬಂದಿತು. ಮೊದಲೇ ಜನರೆಲ್ಲ ಅವನು ತುಂಬ ಕ್ರೂರಿ, ಜನರನ್ನು ಕೊಂದು ಅವರ ಬೆರಳುಗಳ ಮಾಲೆ ಹಾಕಿಕೊಂಡಿದ್ದಾನೆ ಎಂದೆನ್ನುತ್ತಾ ಅಲ್ಲಿಗೆ ಹೋಗಬೇಡಿರೆಂದು ಎಚ್ಚರಿಸಿದರು. ಬುದ್ಧನೇನೂ ವಿಚಲಿತನಾಗಲಿಲ್ಲ. ತನ್ನ ಪಾಡಿಗೆ ತಾನು ಮುಂದುವರೆದ. ಅಂಗುಲಿಮಾಲನೇ ಅವನಿದಿರು ಬಂದುನಿಂತ. ಬುದ್ಧನ ಧೈರ್ಯವನ್ನು ಕಂಡು ಅವನಿಗೆ ಅಚ್ಚರಿಯಾಯಿತು. ತನ್ನ ಹಿರಿಮೆಯನ್ನು ಹೇಳಿಕೊಂಡು ಅವನನ್ನು ಹೆದರಿಸಿದ. ಬುದ್ಧ ಪ್ರೀತಿಭರಿತ ಶಾಂತ ನೋಟವನ್ನು ಅಂಗುಲಿಮಾಲನತ್ತ ಬೀರಿದ. ಆ ರಾಕ್ಷಸಾಕಾರನಲ್ಲೂ ಒಂದು ವಿಶೇಷ ಸ್ಪಂದನವಾಯಿತು. ಅವನಿಂದ ಬುದ್ಧ ಭಿಕ್ಷೆ ಬೇಡಿದ. ಅಂಗುಲಿಮಾಲ ಅಟ್ಟಹಾಸದಿಂದ ನಕ್ಕು ನಾನು ಜನರ ತಲೆ ಹೊಡೆಯುವವನು. ನನ್ನ ಬಳಿ ಏನು ತಾನೆ ಕೊಡಲು ಸಾಧ್ಯ? ಎಂದು ಪ್ರಶ್ನಿಸಿದ. ಬುದ್ಧನು ಶಾಂತನಾಗಿ ನಿನ್ನಲ್ಲಿರುವ ಕ್ರೌರ್ಯವನ್ನೇ ನನಗೆ ದಾನನೀಡು ಎಂದು ಬೇಡಿದ. ಇಬ್ಬರ ಕಣ್ಣುಗಳ ನೋಟ ಸಂಧಿಸಿದವು. ಅಂಗುಲಿಮಾಲನ ಹೃದಯದಲ್ಲಿದ್ದ ಕ್ರೌರ್ಯ ಬುದ್ಧನ ಕರುಣಾಪೂರ್ಣ ನೋಟದಿಂದ ಕರಗತೊಡಗಿತು. ಮರುಕ್ಷಣದಲ್ಲಿ ಅವನು ಬುದ್ಧನ ಪಾದದಲ್ಲಿ ಬಿದ್ದು ಶರಣಾಗತನಾದ. ಒಂದು ಕರುಣಾಪೂರ್ಣ ದೃಷ್ಟಿಯಲ್ಲಿ ಎಂತಹ ಮಹತ್ತಾದ ಶಕ್ತಿ ಅಡಗಿದೆ ಎಂಬುದಕ್ಕೆ ಇದಕ್ಕಿಂತಲೂ ಉದಾಹರಣೆ ಬೇಕೆ?

ಕಣ್ಣೋಟಕ್ಕೆ ಅದರದ್ದೇ ಭಾಷೆಯಿದೆ ಎಂಬುದನ್ನು, ಅದಕ್ಕಿರುವ ಶಕ್ತಿ ಸಾಮರ್ಥ್ಯಗಳನ್ನು ಮೇಲೆ ತಿಳಿಸಿದ ಪ್ರಸಂಗಗಳಿಂದ ಅರಿಯಬಹುದಾಗಿದೆ. ಕಣ್ಣಿನ ಕಾಗುಣಿತ ಭಾಷೆಯ ಕಾಗುಣಿತದಷ್ಟೇ ಸಶಕ್ತವಾಗಿದೆ. ಇಂತಹ ನೋಟವನ್ನು ಬೀರಬಲ್ಲ ಕಣ್ಣಗಳು ವ್ಯಕ್ತಿಯ ಅವಸಾನದನಂತರ ವ್ಯರ್ಥವಾಗಿ ಹೋಗಬಾರದಲ್ಲವೇ? ಅವುಗಳನ್ನು ದಾನಮಾಡುವ ಪದ್ಧತಿ ಈಗ ಎಲ್ಲರಿಗೂ ಪರಿಚಿತವಾಗಿದೆ. ದಯವಿಟ್ಟು ನಮ್ಮ ಅಮೂಲ್ಯವಾದ ಕಣ್ಣುಗಳು ನಮ್ಮ ನಂತರವೂ ಮತ್ತೊಬ್ಬರಿಗೆ ನಿರಂತರ ಬೆಳಕನ್ನೀಡುವ ದೀವಿಗೆಗಳಾಗಲಿ ಎಂಬುದೇ ನಮ್ಮ ಆಶಯ.

-ಬಿ.ಆರ್.ನಾಗರತ್ನ, ಮೈಸೂರು.

17 Responses

  1. ನಯನ ಬಜಕೂಡ್ಲು says:

    ಮೇಡಂ, ಚಂದದ ಲೇಖನ. ವಿಭಿನ್ನವಾಗಿದೆ.

  2. ಬಿ.ಆರ್.ನಾಗರತ್ನ says:

    ಧನ್ಯವಾದಗಳು ಮೇಡಂ

  3. ಸುಮ ಕೃಷ್ಣ says:

    ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ.. ದೃಷ್ಟಿ ಬಗ್ಗೆ ಇಷ್ಟು ದೂರ ದೃಷ್ಟಿ ಇಟ್ಟುಕೊಂಡು ಲೇಖನ ಬರೆದ ನಿಮಗೆ ಕಣ್ ನಮನಗಳು (ಹೃನಮನಗಳು )

  4. ಬಿ.ಆರ್.ನಾಗರತ್ನ says:

    ಧನ್ಯವಾದಗಳು ಗೆಳತಿ ಸುಮ

  5. Padma Anand says:

    ಕಣ್ಣುಗಳ ಮಹತ್ವವನ್ನು ಸೊಗಸಾಗಿ ನಿರೂಪಿಸಿದ್ದೀರಿ. ಪವಿತ್ರವಾದ ನೇತ್ರದಾನದ ಬಗ್ಗೆ ಹೇಳುತ್ತಾ ಲೇಖನ ಮುಕ್ತಾಯಗೊಂಡದ್ದು ಅತ್ಯಂತ್ಯ ಸಮಂಜಸವಾಗಿದೆ.

  6. ಬಿ.ಆರ್.ನಾಗರತ್ನ says:

    ಧನ್ಯವಾದಗಳು ಗೆಳತಿ

  7. ಶಂಕರಿ ಶರ್ಮ says:

    ಕಣ್ಮನಗಳಿಗೆ ನಾಟುವಂತಹ ಕಣ್ಣಿನ ಲೇಖನ ಕಣ್ಣುಗಳನ್ನು ಸೆಳೆಯಿತು. ಕಣ್ಣುಗಳ ಮಹತ್ವದ ಅರಿವಿನೊಂದಿಗೆ ಅವುಗಳ ಆರೋಗ್ಯದ ಬಗ್ಗೆಯೂ ಗಮನ ಹರಿಸಿದರೆ ಬಹಳ ಉತ್ತಮ. ಸೊಗಸಾದ ಲೇಖನಕ್ಕಾಗಿ ಧನ್ಯವಾದಗಳು ಮೇಡಂ.

  8. ಬಿ.ಆರ್.ನಾಗರತ್ನ says:

    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ

  9. sudha says:

    Very nice article. ended in a great message

  10. ಲಾವಣ್ಯ ಪ್ರಭಾ says:

    ತುಂಬಾ ಸೊಗಸಾದ ಲೇಖನ , ಮಹಾಭಾರತ ಪುರಾಣ ಪಂಪಭಾರತ ಮೊದಲಾದ ಕಡೆಯಿಂದ ಕಣ್ಣಿಗೆ ಸಂಬಂಧಿಸಿದ ಕತೆಗಳನ್ನು ವಿವರವಾಗಿ ಅತ್ಯಂತ ಸುಂದರವಾಗಿ ಮಾಹಿತಿಯ ಸಮೇತ ನೀಡಿದ್ದೀರಿ ಮೇಡಂ.

  11. Hema says:

    ಬಹಳ ರಸವತ್ತಾದ, ಅರ್ಥವತ್ತಾದ, ಪ್ರಾಚೀನ ಮತ್ತು ಆಧುನಿಕ ಕಾಲದ ಕಣ್ಣೋಟಗಳನ್ನು ವಿಶ್ಲೇಷಿಸುತ್ತಾ, ಪ್ರಮುಖ ಸಂದೇಶವನ್ನೂ ಕೊಡುತ್ತಿರುವ ಬರಹ..ತುಂಬಾ ಇಷ್ಟವಾಯಿತು.

  12. ಬಿ.ಆರ್.ನಾಗರತ್ನ says:

    ನನ್ನ ಲೇಖನ ಓದಿ ಪ್ರತಿಕ್ರಿಯಿಸಿದ ಸಾಹಿತ್ಯ ಸಹೃದಯರಿಗೆ ನನ್ನ ಧನ್ಯವಾದಗಳು.

  13. Malathi says:

    ಕಣ್ಣಿನ ಸಂಭಾಷಣೆ, ಕಣ್ಣಿನ ವಿವಿಧ ರೂಪಗಳು, ಕಣ್ಣಿನಲ್ಲಿ ತೋರಿಸುವ ನವರಸಗಳು, ಕಣ್ಪಿಗೆ ಸಂಬಂಧಿಸಿದಂತೆ ಪೌರಾಣಿಕ ಕಥೆಗಳು …..ಕಣ್ಮನಗಳನ್ನು ತಂಪುಗೊಳಿಸಿದವು.

  14. ಬಿ.ಆರ್.ನಾಗರತ್ನ says:

    ಧನ್ಯವಾದಗಳು ಗೆಳತಿ ಮಾಲತಿ

  15. ಪದ್ಮಾ ವೆಂಕಟೇಶ್ says:

    ಕಣ್ಣೋಟ, ಕಣ್ಣಿನ ಸಂಭಾಷಣೆ, ಕಣ್ಣಿನ ಬಗ್ಗೆ ಪುರಾಣ ಇತಿಹಾಸದ ದೃಷ್ಟಾಂತ ಕಣ್ಣಿಗೆ ಕಟ್ಟುವಂತೆ, ನಮ್ಮ ಕಣ್ಮುಂದೆ ಹಾದು ಹೋದಂತಹ ಅನುಭವ, ಜೊತೆಗೆ ಕಣ್ಣಿನ ಬಗ್ಗೆ ಚಿತ್ರಗೀತೆಗಳು ಹೀಗೆ ಕಣ್ಮನ ಸೆಳೆದು, ಕಣ್ಣು ಮಿಟುಗಿಸದೇ ಕಣ್ಣಿನ ಕಾಗುಣಿತ ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಗುವಂತೆ ಒಂದೂ ಸಾಲು ಸಹ ಕಣ್ತಪ್ಪದಂತೆ ಹಿಡಿದಿಟ್ಟ ನಿಮ್ಮ ಬರಹದ ಶೈಲಿಗೆ ಅಭಿನಂದನೆಗಳು ,ಗೆಳತಿ.

  16. ಬಿ.ಆರ್.ನಾಗರತ್ನ says:

    ಧನ್ಯವಾದಗಳು ಗೆಳತಿ ಪದ್ಮಾ

  17. ಕಣ್.. ಕಣ್ಣ ಭಾಷೆಯ, ಭಾವನೆಯ ವಿವಿಧ ರೂಪಾಂತರಗಳ ಅನಾವರಣ. ತುಂಬಾ ಸೊಗಸಾಗಿ ಮೂಡಿ ಬಂದಿದೆ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: