ಕೆ ಎಸ್‌ ನ ಕವಿನೆನಪು 43 : ಕವಿಪತ್ನಿಯ ನೆನಪು.. 1

Share Button
 

ಮದುವೆಯಾದಾಗಿನಿಂದ ನಮ್ಮ ತಂದೆಯ ಅವಸಾನದ ಕಾಲದವರೆಗೂ ಜತೆಯಾಗಿದ್ದ ನಮ್ಮ ಅಮ್ಮ ವೆಂಕಮ್ಮನವರ ಪ್ರಸ್ತಾಪವಿಲ್ಲದೆ  ಈ ಕವಿನೆನಪಿನ ಸರಣಿಗೆ  ಪೂರ್ಣತೆಯಿಲ್ಲ.

ನಮ್ಮ ತಾಯಿಯ ತಂದೆ ನಾಡಿಗ ಭೀಮರಾವ್ ಸರಕಾರಿ  ಹುದ್ದೆಯಲ್ಲಿ, ಹಳೆಯ ಮೈಸೂರಿನ ಹಲವೆಡೆ ಸೇವೆ ಸಲ್ಲಿಸಿ ಅಮಲ್ದಾರ್ ಆಗಿ ನಿವೃತ್ತರಾದವರು.ನಮ್ಮ ತಾಯಿಯ ತಾಯಿಯವರ ಹೆಸರು ಸೀತಮ್ಮ.ಅವರಿಗೆ ಇಬ್ಬರೇ ಮಕ್ಕಳು ನಮ್ಮ ತಾಯಿ ವೆಂಕಮ್ಮ ಹಾಗೂ ಅವರ ತಮ್ಮ ರಂಗನಾಥರಾವ್ ನಾಡಿಗ್.  ಭೀಮರಾವ್ ಅವರಿಗೆ ನಮ್ಮ ತಂದೆಯವರ ಕಾವ್ಯರಚನೆಯ ಚಟುವಟಿಕೆ ಅಷ್ಷಾಗಿ ಇಷ್ಟ ಇರಲಿಲ್ಲ.”ಏನೋ ಸರಕಾರಿ ಕೆಲಸದಲ್ಲಿ ಆಯ್ಕೆಯಾಗಿದ್ದಾನೆ ಅಂತ ಮಗಳನ್ನು ಕೊಟ್ಟಿದ್ದೇನೆ.ಈ ಕವಿತ್ವ ,ಕಪಿತ್ವಗಳಿಂದ ಸಂಸಾರ ನಡೆಯುವುದಿಲ್ಲ”ಎನ್ನುತ್ತಿದ್ದರು.

ನಮ್ಮ ತಂದೆ ತಾಯಿ ಮದುವೆ 1936 ರಲ್ಲಿ ತಿಪಟೂರಿನಲ್ಲಿ ನಡೆಯಿತು. ಕವಿತ್ವದ ವಿಚಾರದಲ್ಲಿ ಅಳಿಯನ ಮೇಲೆ ಮುನಿಸು ಇದ್ದರೂ ,ಸಂಸಾರಕ್ಕೆ ಒತ್ತಾಸೆ ನೀಡಿದವರು ಭೀಮರಾವ್.ನಮ್ಮ ದೊಡ್ಡ ಅಕ್ಕ ,ಹಾಗೂ ಅಣ್ಣನನ್ನು ಹಲವು ವರ್ಷ ಸಾಕಿದರು.ಇತ್ತ ನಮ್ಮ ತಂದೆ ಮನೆಯಲ್ಲೂ ಅಣ್ಣ ತಮ್ಮ ಇಬ್ಬರೇ ಇದ್ದ ಪುಟ್ಟ ಸಂಸಾರ.

ಸರಕಾರಿ ಅಧಿಕಾರದ ದರ್ಪದ ಹಿನ್ನಲೆಯ ಗುಂಗಿನಿಂದ ಹೊರಬರದಿದ್ದ ನಮ್ಮ ತಾಯಿಯವರಿಗೆ ಮದುವೆಯಾದ ನಂತರವೂ ಅದೇ ಭಾವ ಮುಂದುವರೆದಿದ್ದು ಸಹಜವೇ ಆಗಿತ್ತು.ಕಷ್ಟಗಳ ಉಳಿಪೆಟ್ಟಿಗೆ ಸಿಕ್ಕ ತಂದೆಯವರು ಬಂದದ್ದನ್ನು ಸ್ವೀಕರಿಸುವ ಮನೋಭಾವವನ್ನು ಕರಗತ ಮಾಡಿಕೊಂಡಿದ್ದರು. ಎಂಟು ಮಕ್ಕಳ ದೊಡ್ಡ  ಸಂಸಾರ ,ಸೀಮಿತ ವರಮಾನ,ಸಾಹಿತ್ಯ ಸೇವೆಯಿಂದಲೂ ಧನಾತ್ಮಕವಾಗಿ ಪ್ರಯೋಜನವಾಗಿಲ್ಲದ್ದು, ಇವೆಲ್ಲ ಅಮ್ಮನ ಮನೋಸ್ಥಿತಿ ಸ್ವಲ್ಪ ಗಡುಸಾಗಲು ಕಾರಣವಾಯಿತು.ಆದರೆ ನಮ್ಮ ತಂದೆ “ಅವಳ ಕೋಪಕ್ಕೆ ಕಾರಣ ಇದೆ” ಎನ್ನುತ್ತಿದ್ದುದು ನಮಗೆ ಆಶ್ಚರ್ಯ ಉಂಟುಮಾಡುತ್ತಿತ್ತು.

ಅಮ್ಮನೂ ಅಷ್ಟೆ ಯಾರಾದರೂ ಮಕ್ಕಳು ತಂದೆಯವರಿಗೆ ಎದುರು ವಾದಿಸಿದರೆ “ಅಪ್ಪನಿಗೆ ಎದುರುತ್ತರ ಕೊಡುತ್ತೀಯಾ?ಬೇರೆಯವರಾಗಿದ್ದರೆ ಮನೆ ಬಿಟ್ಟು ಓಡಿಸುತ್ತಿದ್ದರು” ಎಂದು ಗದರುತ್ತಿದ್ದರು. ಮನೆಗೆ ಯಾರು ಬಂದರೂ ಅಡುಗೆ ಮನೆಯಿಂದ ಹೊರಬಂದು ಪರಿಚಿತರಿದ್ದರೆ ಕ್ಷೇಮ ಸಮಾಚಾರ ವಿಚಾರಿಸಿ ,ಹೊಸಬರಿದ್ದರೆ ಪರಿಚಯ ಮಾಡಿಕೊಂಡು ಕೈಲಾದ ಸತ್ಕಾರ ಮಾಡುತ್ತಿದ್ದರು.”ನರಸಿಂಹಸ್ವಾಮಿಯವರನ್ನು ಸುಮ್ಮನೆ ನೋಡಲು ಹೋಗಬೇಕು,ಮಾತನಾಡಲು ವೆಂಕಮ್ಮನವರಿದ್ದೇ ಇರುತ್ತಾರೆ “ ಎಂಬುದು ನಮ್ಮ ಮನೆಯ ಸಂದರ್ಭದಲ್ಲಿ ಒಂದು ಗಾದೆ ಮಾತೇ ಆಗಿಬಿಟ್ಟಿತ್ತು.

ಅಮ್ಮನ ದಿನನಿತ್ಯದ ಗಟ್ಟಿಮಾತಿನ ಸ್ವಗತದ ನಡುವೆ ಹಲವಾರು ಗಾದೆಮಾತುಗಳು ಅವಿರತವಾಗಿ ಹರಿಯುತ್ತಿತ್ತು.ಮನೆಯ ಕೆಲಸದಲ್ಲಿ ಮನೆಯವರ ಸಹಕಾರ ಸಿಗದಿದ್ದಾಗ “ಮಕ್ಕಳೆಲ್ಲ ಮನೆವಾರ್ತೆ ಮಾಡಿದರೆ ಅಪ್ಪನಿಗೇಕೆ ಇಬ್ಬರು ಹೆಂಡಿರು” ಎನ್ನುತ್ತಿದ್ದರು.ಮನೆವಾರ್ತೆ ಎನ್ನುವುದಕ್ಕೆ ಆಧುನಿಕ ಭಾಷೆಯಲ್ಲಿ housekeeping ಎಂಬ ಅರ್ಥವಿದೆಯೆಂದು ಬ್ಯಾಂಕಿಂಗ್ ಕಮ್ಮಟದ ಸಂದಭದಲ್ಲಿ ಪ್ರಾ ಎಚ್ಚೆಸ್ಕೆಯವರಿಂದ ತಿಳಿಯಿತು.

ನಮ್ಮ ತಂದೆ ತಮ್ಮ ಹಿಂದಿನ ಸಾಧನೆಗಳ ಬಗ್ಗೆ ಹೇಳಿಕೊಳ್ಳುತ್ತಿದ್ದರೆ “ಸತ್ತೆಮ್ಮೆ ಸೇರು ಹಾಲು ಕೊಡುತ್ತಿತ್ತು ಎನ್ನುವಂತಿದೆ” ಎಂದು ಟೀಕಿಸುತ್ತಿದ್ದರು.  ಯಾರದಾದರೂ ಸಹಾಯ ಬಯಸಿ ಅವರು ಸಕಾಲದಲ್ಲಿ ಬರದಿದ್ದರೆ “ಐಶ್ಚರ್ಯವಂತ ಹಗೇವು ತೆಗೆಯೋ ಹೊತ್ತಿಗೆ ಬಡವನ ಪ್ರಾಣ ಹೋಯಿತು “ಎನ್ನುತ್ತಿದ್ದರು.

“ಒಬ್ಬ ತಾಯಿ ಹತ್ತು ಮಕ್ಕಳನ್ನು ಸಾಕಬಹುದು ,ಆದರೆ ಹತ್ತು ಮಕ್ಕಳು ಒಬ್ಬತಾಯಿಯನ್ನು ಸಾಕಲಾರರು”ಎಂದು ಅವರು ಪದೇ ಪದೇ ಹೇಳುತ್ತಿದ್ದ ಮಾತು ಕಠೋರ  ಹಾಗೂ ಸಾರ್ವಕಾಲಿಕ ಸತ್ಯವನ್ನು ಅನಾವರಣಗೊಳಿಸುವಂತೆ ಇತ್ತು.

(ಮುಂದುವರಿಯುವುದು)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:  http://surahonne.com/?p=32083

-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)

5 Responses

  1. km vasundhara says:

    ಸೊಗಸಾಗಿದೆ. ಬಹುತೇಕ ಕವಿಪತ್ನಿಯರು ತೆರೆ ಮರೆಯ ಸಾಧಕರೇ. ನಿಮ್ಮ ತಾಯಿಯವರಾದ ಶ್ರೀಮತಿ ವೆಂಕಮ್ಮನವರ ಕುರಿತು ಮತ್ತಷ್ಟು ಬರೆಯಿರಿ.

  2. Hema says:

    ಚೆಂದದ ಪ್ರಸ್ತುತಿ..ತಮ್ಮ ತಾಯಿಯವರ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲವಿದೆ.

  3. ನಯನ ಬಜಕೂಡ್ಲು says:

    ಪ್ರತಿ ವಾರ ಕುತೂಹಲಕಾರಿ ಲೇಖನಗಳನ್ನು ಹೊತ್ತು ಬರುವ ಲೇಖನ ಸರಣಿ ಸೊಗಸಾಗಿದೆ.

  4. Sayilakshmi S says:

    ವೆಂಕಮ್ಮನವರು ಆತ್ಮೀಯರಾಗಲು ಮುಖ್ಯ ಕಾರಣ ಅವರ ರೇಡಿಯೋ ಪ್ರೀತಿ ಮತ್ತು ಅವರ ವ್ಯವಹಾರ ಚತುರತೆ. ಕೆ ಎಸ ನ ಪತ್ನಿಗೆ ಕೊಡಿಸಿದ ರೇಡಿಯೋ ಕಾಣಿಕೆಗೆ ಅಡುಗೆಮನೆಯಲ್ಲಿ ಶಾಶ್ವತ ಸ್ಥಾನ. “ನೋಡಮ್ಮ ನಾನು ಗೀತಾರಾಧನಕ್ಕೆ ರೇಡಿಯೋ ಹಾಕಿದರೆ ರಾತ್ರಿಯ ಜೈಹಿಂದ್ ಗೆ ಆರಿಸೋದು” ಹೀಗೆನ್ನುವರು ವೆಂಕಮ್ಮ. ಅವರ ಅಡುಗೆ‌ ಉಪಚಾರ ಎಲ್ಲವೂ ವಿಶೇಷ ಹಾಗೆ‌ಮಾತು‌ಬಲು ಸ್ವಾರಸ್ಯಕರ. ನೇರ ಸ್ವಭಾವದ ವಿಶ್ವಾಸಿ ಹೆಂಗಸು. ಅವರನ್ನು‌ನಾನು ಹಾಸನ ಆಕಾಶವಾಣಿಗಾಗಿ ಪೋನ್ ‌ಮೂಲಕ ಕವಿಪತ್ನಿಯೊಡನೆ ಎಂಬ‌ಮಾಲಿಕೆಯಲ್ಲಿ ಹದುನೈದು ನಿಮಿಷ ಮಾತನಾಡಿಸಿ ‌ಪ್ರಸಾರ ಮಾಡಿದ್ದೆ. ಆ ರೆಕಾರ್ಡಿಂಗ್ ಬೆಂಗಳೂರಿಗೂ ತಂದಿದ್ದೆ. ವೇಳೆ ಧವಿಧ ವಿಷಯಕ್ಜೆ ಸಂಬಂಧಪಟ್ಟ ಗಾದೆ ಮಾತು ಅವರ ಬತ್ತಳಿಕೆಯಲ್ಲಿರುವುದು. ‘ದಡ್ಡನಾದರೂ ದಾಂಢಿಗನಾಗಿರಬೇಕು’ ದು ನನಗೆ ತಕ್ಷಣಕ್ಕೆ ನೆನಪಾಗುವ ಗಾದೆ. ನಾವು ನಡೆಸುತ್ತಿದ್ದ ಉಭಯಕುಶಲೋಪರಿಗೆ ಮುಕ್ತಾಯವೇ ಇರುತ್ತಿರಲಿಲ್ಕ. ಜೀವನಸಂಧ್ಯೆಯ ಅನೇಕ ಸಮಸ್ಯೆಗಳೊಡನೆ ದಂಪತಿ ಹೋರಾಡುತ್ತಿದ್ದರು. ಅದರಲ್ಲಿ ವೆಂಕಮ್ಮನವರು ನಿಭಾಯಿಸಿದ ರೀತಿ ಮೆಚ್ಚುವಂತಹದು
    ಲೇಖನ ಓದಿ ನೆನಪಿನ‌ ಪುಟಗಳು ತೆರೆದುಕೊಂಡವು. ಧನ್ಯವಾದ

  5. ಶಂಕರಿ ಶರ್ಮ says:

    ಅಪರೂಪದ ಈ ಲೇಖನಮಾಲೆಯು ಬಹಳ ಸೊಗಸಾಗಿ ಮೂಡಿಬರುತ್ತಿದೆ ಸರ್..ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: