ಕೆ ಎಸ್ ನ ಕವಿನೆನಪು 42 : ನೆಂಟರ ವಲಯದಲ್ಲಿ ಅಚ್ಚಣ್ಣ
“ಅದೇ ಕಣೋ ನಿಮ್ಮಪ್ಪ. ನಾವೆಲ್ಲ ಕೂಗೋದು ಅಚ್ಚಣ್ಣ ಅಂತಲೇ” ಅಂತ ವಿವರಿಸಿದರು.
ಹೌದು ನಮ್ಮ ತಂದೆಯವರ ನೆಂಟರ ವಲಯದಲ್ಲಿ ಅವರನ್ನು ಅಚ್ಚಣ್ಣ ಎಂದೇ ಕರೆಯುತ್ತಿದ್ದರು. ನಮಗೆಲ್ಲಾ ಅಚ್ಚಣ್ಣನ ಮಗ, ಸೊಸೆ, ಮಗಳು, ಅಳಿಯ ಎಂಬ ಅಭಿದಾನವೇ ಶಾಶ್ವತವಾಗಿತ್ತು.(ಇಂದು ಕೂಡ)
ನಮ್ಮ ತಂದೆಗೆ ಸ್ವಂತ ತಮ್ಮ ಒಬ್ಬರೇ ಸತ್ಯನಾರಾಯಣ. ಆದರೆ ಸೋದರ ಸಂಬಂಧಿಗಳು ಬಹಳ ಜನ ಇದ್ದರು.
ಅವರಲ್ಲಿ ನಮ್ಮ ತಂದೆಯ ಚಿಕ್ಕಪ್ಪ ನಾರಾಯಣರಾವ್ ಅವರ ಮಕ್ಕಳಾದ ಸುಬ್ಬನರಸಿಂಹಯ್ಯ ಹಾಗೂ ಲಕ್ಷ್ಮೀನಾರಾಯಣ ಮನೆಗೆ ಆಗಾಗ್ಗೆ ಬಹಳ ವಿಶ್ವಾಸದಿಂದ ಬಂದು ಹೋಗುತ್ತಿದ್ದರು . ಸುಬ್ಬನರಸಿಂಹಯ್ಯ ಮಿಲಿಟರಿ ಶಾಲೆಯಲ್ಲಿ ಶಿಕ್ಷಕರಾಗಿ ದೇಶದ ಹಲವೆಡೆ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದವರು. ಲಕ್ಷ್ಮೀನಾರಾಯಣ ಹೈಸ್ಕೂಲು ಶಿಕ್ಷಕರಾಗಿ ಮುಖ್ಯ ಶಿಕ್ಷಕರಾಗಿ ,ಮತ್ತು ಡಿ ಎಸ್ ಇ ಆರ್ ಟಿ ಯಲ್ಲಿ ಸಂಪನ್ಮೂಲ ಅಧಿಕಾರಿಯಾಗಿ ನಿವೃತ್ತರಾಗಿ ನಾಗಮಂಗಲದಲ್ಲಿ ನೆಲೆಸಿದ್ದರು.
ಇವರಿಬ್ಬರೂ ಬಂದರೆಂದರೆ ಸದಾ ಮೌನಕ್ಕೆ ಶರಣಾಗಿರುತ್ತಿದ್ದ ನಮ್ಮ ತಂದೆ ಇದ್ದಕ್ಕಿದ್ದಂತೆ ವಾಚಾಳಿಗಳಾಗಿಬಿಡುತ್ತಿದ್ದರು. ಮೂರು ತಲೆಮಾರಿನ ನೆಂಟರಿಷ್ಟರ ಯೋಗಕ್ಷೇಮ, ಅವರ ಮನೆ ಪರಿಸ್ಥಿತಿ, ಸ್ವಭಾವಗಳು ಎಲ್ಲ ವಿಷಯಗಳ ಪಾತಾಳಗರಡಿಯಾಗುತ್ತಿತ್ತು. ಲವಲವಿಕೆ ಮನೆಯ ವಾತಾವರಣವನ್ನು ಆವರಿಸಿಬಿಡುತ್ತಿತ್ತು. ಕಳೆದ ವರುಷ ತಮ್ಮ 94 ನೆಯ ವರುಷನಲ್ಲಿ ನಿಧನರಾದ ಚಿಕ್ಕಪ್ಪ ಲಕ್ಷ್ಮೀನಾರಾಯಣ ಇಂದೂ ಅದೇ ಬಗೆಯ ವಿಶ್ವಾಸದಿಂದ ಬೆಂಗಳೂರಿಗೆ ಬಂದಾಗಲೆಲ್ಲ ನಮ್ಮ ಮನೆಗೂ ಬಂದು ಹೋಗುತ್ತಿದ್ದರು.
ನಮ್ಮ ತಂದೆಯವರು ಅದೇ ಬಗೆಯಲ್ಲಿ ಮಾತಿಗೆ ತೊಡಗುತ್ತಿದ್ದುದು ನಮ್ಮ ತಾಯಿಯವರ ಏಕೈಕ ತಮ್ಮ ಹಾಗೂ ನಮ್ಮ ಸೋದರಮಾವ ರಂಗನಾಥರಾವ್ ನಾಡಿಗ್ ಅವರೊಂದಿಗೆ. ಅವರು ಶಿಕ್ಷಣತಜ್ಞರು. ಪಾಂಡವಪುರದ ವಿಜಯಾ ಹೈಸ್ಕೂಲಿನಲ್ಲಿ ಮುಖ್ಯ ಶಿಕ್ಷಕರಾಗಿ ಹಾಗೂ ವಿಜಯಾ ಜೂನಿಯರ್ ಕಾಲೇಜಿನ ಪ್ರಿನ್ಸಿಪಾಲರಾಗಿ ದ್ದವರು. ಗಣಿತದ ಪಠ್ಯಪುಸ್ತಗಳನ್ನೂ ಬರೆದಿದ್ದಾರೆ.
“ಭಾವಾ”ಎಂದು ಕೂಗುತ್ತಲೇ ಮನೆಯೊಳಗೆ ಬಂದು , ಚಾಪೆಯ ಮೇಲೆ ಕುಳಿತು ಬರೆಯುತ್ತಿದ್ದ ನಮ್ಮ ತಂದೆಯ ಪಕ್ಕದಲ್ಲೇ ಕುಳಿತುಕೊಳ್ಳುತ್ತಿದ್ದರು. ನಮ್ಮ ತಾಯಿ ಅವರಿಗೆ ಕಾಫಿ ಕೊಟ್ಟಾಗ “ಅಕ್ಕ ಭಾವನಿಗೆ ಕಾಫಿ ಕೊಟ್ಟೆಯಾ?”ಎಂದು ಕೇಳುತ್ತಿದ್ದರು.
ಅದಕ್ಕೆ ಅಮ್ಮ “ಬಂದವರ ಜತೆಯಲ್ಲಾ ಸಮಾರಾಧನೆ ಆಗ್ತಾ ಇದೆ. ಅದಕ್ಕೇನು ಬರವಿಲ್ಲ” ಎನ್ನುತ್ತಿದ್ದರು.
ಭಾವ ಭಾವಮೈದುನಬ್ಬರೂ ಮಾತನಾಡಲು ತೊಡಗಿದರೆ ಸೂರ್ಯನಡಿಯ ಎಲ್ಲ ವಿಚಾರಗಳೂ ಚರ್ಚೆಯ ಪರಿಧಿಯಲ್ಲಿ ಸಿಕ್ಕಿಬಿಡುತ್ತಿತ್ತು. ತಾವೇ ಶಿಕ್ಷಕರಾಗಿದ್ದರೂ ನಮ್ಮ ತಂದೆಯವರ ಮಾತುಗಳನ್ನ “ಕೇಳು ಜನಮೇಜಯ” ರೀತಿಯಲ್ಲಿ ಆಲಿಸುತ್ತಿದ್ದರು. ಆಪತ್ಕಾಲದ ಸನ್ನಿವೇಶಗಳಲ್ಲಿ ನೆರವಿಗೆ ಬರುತ್ತಿದ್ದ ಭಾವಮೈದುನನ ಬಗ್ಗೆ ನಮ್ಮ ತಂದೆಯವರಿಗೆ ಅಪಾರ ಮೆಚ್ಚುಗೆ ಇತ್ತು.
ಅದೇ ರೀತಿ ನಮ್ಮ ತಾಯಿಯ ನೆಂಟರಿದ್ದ ಶಿವಮೊಗ್ಗ, ಭದ್ರಾವತಿ, ಲಕ್ಕವಳ್ಳಿ ಮುಂತಾದ ಕಡೆಗಳಿಂದಲೂ ಹಲವರು ನೆಂಟಸ್ತಿಕೆಯ ಜತೆಗೆ ಕವಿಯ ಮೇಲಿನ ಅಭಿಮಾನದಿಂದ ಮನೆಗೆ ಬರುತ್ತಿದ್ದರು.ನಾವು ಅವರ ಮನೆಗಳಿಗೆ ಹೋದಾಗಲೂ ಅದೇ ಬಗೆಯ ಪ್ರೀತಿ ,ವಿಶ್ವಾಸ ತೋರಿಸುತ್ತಿದ್ದರು .ಅವರ ಮಕ್ಕಳು,ಮೊಮ್ಮಕ್ಕಳೂ ಇಂದೂ ಅದೇ ಬಗೆಯ ಭಾವನೆ ಹೊಂದಿದ್ದಾರೆ.
(ಮುಂದುವರಿಯುವುದು)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=31964
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)
ಇಂಟೆರೆಸ್ಟಿಂಗ್
ಹಿರಿಕವಿಗಳು ತಮ್ಮ ನೆಚ್ಚಿನ ಬಂಧುಗಳೊಡನೆ ವಾಚಾಳಿಯಾಗುತ್ತಿದ್ದುದು, ಅವರ ಪ್ರೀತಿಯ ದ್ಯೋತಕವಲ್ಲದೆ ಮತ್ತೇನು? ಲೇಖನವು ಬಹಳ ಆಪ್ತವೆನಿಸಿತು…ಧನ್ಯವಾದಗಳು ಸರ್.