ಭಲೇ ಭಲೇ ಎಲೆ ಕಳ್ಳಿ! ಔಷಧಿಯ ಭಂಡಾರ ಈ ಮಳ್ಳಿ

Share Button

ಕಾಲೇಜಿನ ಕೈತೋಟದಲ್ಲಿ ಅರಳಿದ್ದ ಆ ಹೂವನ್ನು ಜೀವನದಲ್ಲಿ ಮೊದಲ ಬಾರಿಗೆ ಕಂಡಿದ್ದೆ. ಗಿಡಸಮೇತ ಹೂವಿನ ಚಿತ್ರವನ್ನು ಕೈಲಿದ್ದ ಮೊಬೈಲಿನಲ್ಲಿ ಸೆರೆ ಹಿಡಿದು, “ಹೂವಿನ ಚೆಲುವಿಗೆ ಮನಸೋತೆ” ಎಂಬ ಶೀರ್ಷಿಕೆಯೊಂದಿಗೆ ಹಾಕಿದ ವಾಟ್ಸಾಪ್ ಸ್ಟೇಟಸ್ ನೋಡಿ “ಇದು ಯಾವ ಹೂವು?” ಎಂದು ಕೇಳಿದವರ ಪ್ರಶ್ನೆಗೆ  ಉತ್ತರ ಹುಡುಕಲು ಅಂತರ್ಜಾಲ ಪ್ರಪಂಚದ ಮೊರೆ ಹೊಕ್ಕಾಗ, ಸಿಕ್ಕ ಹೆಸರು “ಎಲೆ ಕಳ್ಳಿ”  ಅಥವಾ ಪೆರೆಸ್ಕಿಯಾ. ಹದಿನಾರನೆಯ ಶತಮಾನದ ಫ್ರೆಂಚ್ ಸಸ್ಯಶಾಸ್ತ್ರಜ್ಞ ನಿಕೋಲಾಸ್ ಫೇಬ್ರ್  ದ ಪೆರೆಸ್ಕ್ (Nicolas Fabre de Peiesc) ಗೌರವಾರ್ಥ ಈ ಗಿಡಕ್ಕೆ ‘ಪೆರೆಸ್ಕಿಯಾ’ ಎಂಬ ಹೆಸರು ಇಡಲಾಯಿತು.  ಕ್ಯಾಕ್ಟೇಸಿ ಕುಟುಂಬಕ್ಕೆ ಸೇರಿದ ಪೆರೆಸ್ಕಿಯಾ, ಉಳಿದ ಕಳ್ಳಿ ಸಸ್ಯಗಳಿಂದ ವಿಭಿನ್ನವಾಗಿದೆ, “ಕಳ್ಳಿ ಜಾತಿಗೆ ಸೇರಿದ ಸಸ್ಯವೇ?” ಅನ್ನುವ ಸಂಶಯ ಮೂಡಿದರೂ ಆಶ್ಚರ್ಯವೇನಿಲ್ಲ.. ಹೆಚ್ಚಾಗಿ ನೀರಿಲ್ಲದ ಪ್ರದೇಶಗಳಲ್ಲಿ ಬೆಳೆಯುವ ಕಳ್ಳಿ ಸಸ್ಯಗಳು ಎಲೆರಹಿತವಾಗಿದ್ದರೆ, ಪೆರೆಸ್ಕಿಯಾ ಜಾತಿಗೆ ಸೇರಿದ ಕಳ್ಳಿ ಸಸ್ಯಗಳ ತುಂಬಾ ಎಲೆಗಳಿರುತ್ತವೆ. ಈ ಸಸ್ಯಗಳು ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಕೂಡಾ ಬೆಳೆಯುತ್ತವೆ. ಗಿಡದ ತುಂಬಾ ಎಲೆಗಳಿರುವುದರಿಂದ  ಎಲೆ ಕಳ್ಳಿ (Leaf cactus) ಎಂದೂ, ಈ ಗಿಡದಲ್ಲಿ ಅರಳುವ ಹೂವು ಗುಲಾಬಿ ಹೂವಿನ ಎಸಳುಗಳನ್ನು ಹೋಲುವುದರಿಂದ ಗುಲಾಬಿ ಕಳ್ಳಿ (Rose cactus) ಎಂದೂ ಹೇಳಲ್ಪಡುತ್ತದೆ. Wax rose, Cactus bleo, Seven Star needle ಎಂದೆಲ್ಲಾ ಕರೆಯಲ್ಪಡುತ್ತದೆ.

ಮಧ್ಯ ಅಮೇರಿಕಾದ ಪನಾಮಾ ಮತ್ತು ದಕ್ಷಿಣ ಅಮೇರಿಕಾದ ಕೊಲಂಬಿಯಾ ದೇಶಗಳು ಈ ಸಸ್ಯದ ತವರು. ಪ್ರಾಚೀನದಿಂದಲೂ ಬ್ರೆಝಿಲ್, ಮಲೇಷಿಯಾ, ಸಿಂಗಾಪುರ, ಚೀನಾ ದೇಶಗಳಲ್ಲಿ ಜನಜನಿತವಾಗಿರುವ ಈ ಸಸ್ಯ ಭಾರತದಲ್ಲಿಯೂ ಕಂಡುಬರುತ್ತದೆ. ಸುಮಾರು 6 ರಿಂದ 8 ಮೀಟರ್ ಎತ್ತರ ಬೆಳೆಯಬಲ್ಲ, ಉದ್ದನೆಯ ಎಲೆಗಳಿಂದ ಕೂಡಿದ ಒಂದು ರೀತಿಯ ಪೊದೆಸಸ್ಯ. ಹೂವಿನ ಬಣ್ಣ, ಎಲೆ ಹಾಗೂ ಮುಳ್ಳುಗಳಲ್ಲಿ ಕಂಡುಬರುವ ವ್ಯತ್ಯಾಸಕ್ಕನುಗುಣವಾಗಿ, ಸುಮಾರು ಹದಿನೇಳು ವಿಧದ ಪೆರೆಸ್ಕಿಯಾ ಸಸ್ಯಗಳನ್ನು ಗುರುತಿಸಲಾಗಿದೆ. ಪೆರೆಸ್ಕಿಯಾ ಬ್ಲಿಯೋ, ಪೆರೆಸ್ಕಿಯಾ ಗ್ರಾಂಡಿಫೋಲಿಯಾ,. ಇತ್ಯಾದಿ.

ಪೆರೆಸ್ಕಿಯಾ ಬ್ಲಿಯೋ:  ಕೇಸರಿ ಕೆಂಪು ವರ್ಣದ ಹೂಗಳನ್ನು ಬಿಡುವ ಈ ಗಿಡದ ಮೇಲೆ ಹಲವು ಚೂಪಾದ ಮುಳ್ಳುಗಳಿದ್ದು, ಗಿಡದ ಎಲೆಗಳು ಸ್ವಲ್ಪ ತೆಳುವಾಗಿ ಸುಕ್ಕುಗಟ್ಟಿದ ರೀತಿಯಿರುತ್ತವೆ.

ಪೆರೆಸ್ಕಿಯಾ ಗ್ರಾಂಡಿಫೋಲಿಯಾ: ನೇರಳೆಗುಲಾಬಿ ಬಣ್ಣ್ಣದ ಹೂಗಳನ್ನು ಬಿಡುವ  ಈ ಗಿಡವು ಕಡಿಮೆ ಮುಳ್ಳುಗಳನ್ನು ಹೊಂದಿ, ಸುಕ್ಕುಗಟ್ಟದ ದಪ್ಪನಾದ ಎಲೆಗಳನ್ನು ಹೊಂದಿರುತ್ತದೆ.

ಬಹೂಪಯೋಗಿ ಸಸ್ಯ- ಔಷಧೀಯ ಗುಣಗಳ ಭಂಡಾರ

ಬೇಲಿ ಗಿಡವಾಗಿ, ಅಲಂಕಾರಿಕ ಸಸ್ಯವಾಗಿ ಬೆಳೆಸಲ್ಪಡುವ ಎಲೆ ಕಳ್ಳಿ ಗಿಡದ ಎಲೆಗಳನ್ನು ತರಕಾರಿಯಂತೆ, ನೀರನ್ನು ಶುದ್ಧೀಕರಿಸಲು ಹಾಗೆಯೇ ಕೀಟವಿಕರ್ಷಕವಾಗಿ  ಬಳಸುವ ಬಗ್ಗೆ ಹಲವು ಮಾಹಿತಿಗಳು ಲಭ್ಯವಿವೆ. ಮಲೇಶಿಯಾ ಹಾಗೂ ಸಿಂಗಾಪುರದ ಮೂಲನಿವಾಸಿಗಳ ಪಾಲಿಗೆ ಇದು ಕ್ಯಾನ್ಸರ್ ನಿವಾರಕ ಸಸ್ಯ ಜರೂಮ್ ತುಜುಹ್ ಬಿಲಾಹ್ (Jarum Tujuh Bilah) ಎಂದು ಕರೆಯಲ್ಪಡುವ ಈ ಗಿಡ,  ಸಾಂಪ್ರದಾಯಿಕ ಗಿಡಮೂಲಿಕಾ ಔಷಧಿಗಳಲ್ಲಿ ತುಂಬಾ ಮಹತ್ವ ಪಡೆದ ಎಲೆ ಕಳ್ಳಿ ಗಿಡದ  ಹಸಿ ಎಲೆಗಳ ಅಥವಾ ಎಲೆಗಳನ್ನು ಕುದಿಸಿ ತಯಾರಿಸಿದ  ಕಷಾಯದ ನಿಯಮಿತ ಸೇವನೆಯಿಂದ, ಕ್ಯಾನ್ಸರ್ ಗುಣವಾಗುವುದು ಹಾಗೆಯೇ ತಡೆಗಟ್ಟಬಹುದು ಅನ್ನುವ ಧೃಢ ನಂಬಿಕೆ ಅಲ್ಲಿನ ಜನರದ್ದು. ಗರ್ಭಕೋಶ, ಕರುಳು, ಯಕೃತ್, ಅಂಡಾಶಯ ಮತ್ತು ಗರ್ಭಕೊರಳು ಕ್ಯಾನ್ಸರ್ ಉಲ್ಭಣಿಸುವುದನ್ನು ಎಲೆ ಕಳ್ಳಿ ಗಿಡದ ಎಲೆಯಿಂದ ತಡೆಹಿಡಿಯಬಹುದೆಂದು ಸಂಶೋಧನೆಗಳ ಮೂಲಕ ಸಾಬೀತಾಗಿದೆ. National University of Singaporeನಲ್ಲಿ ನಡೆಸಿದ ಇತ್ತೀಚಿನ ಸಂಶೋಧನೆಯು (ಮೇ 2019), ಎಲೆ ಕಳ್ಳಿ ಗಿಡದ ಎಲೆಗಳ ಆಂಟಿಕ್ಯಾನ್ಸರ್ ಗುಣವನ್ನು ಪ್ರಯೋಗಗಳ ಮೂಲಕ ಧೃಢಪಡಿಸಿ ದೆ.

ಎಲೆಕಳ್ಳಿ ಗಿಡದ ಎಲೆಗಳನ್ನು ಸರ್ವವ್ಯಾಧಿ ನಿವಾರಕವಾಗಿ ಬಳಸುತ್ತಾರೆ  ಎಂದರೂ ತಪ್ಪಿಲ್ಲ. ಮೂಲವ್ಯಾಧಿ, ಅಧಿಕ ರಕ್ತದೊತ್ತಡ, ಮಧುಮೇಹ, ಸೋಂಕು, ಗ್ಯಾಸ್ಟ್ರಿಕ್ ಸಂಬಂಧಿ ಸಮಸ್ಯೆಗಳು, ತಲೆನೋವು, ಅಲ್ಸರ್, ಸಂಧಿವಾತ, ಅಸ್ತಮಾ ಮುಂತಾದ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಎಲೆಕಳ್ಳಿ ಗಿಡದ ಎಲೆಗಳನ್ನು ನೀರಿನಲ್ಲಿ ಕುದಿಸಿ ತಯಾರು ಮಾಡಿದ ಕಷಾಯವನ್ನು ಬಿಸಿಯಾಗಿ ಅಥವಾ ತಣ್ಣಗೆ ಸೇವಿಸುವುದರಿಂದ, ದೇಹದಲ್ಲಿ ಸೇರಿರುವ ವಿಷವನ್ನು ನಿವಾರಿಸಬಹುದು ಹಾಗೂ ಬಳಲಿದ ದೇಹಕ್ಕೆ ಶಕ್ತಿಯನ್ನು ತುಂಬಲು ಸಹಕಾರಿಯಾಗುವುದು. ಗಿಡದ ಹಸಿ ಎಲೆ, ಹೂವು, ಹಣ್ಣು ಸೇವನೆಯಿಂದ ರೋಗನಿರೋಧಕ ಶಕ್ತಿ ಜಾಸ್ತಿಯಾಗಿ, ಆರೋಗ್ಯರಕ್ಷಣೆ ಸಾಧ್ಯ.  ಸ್ನಾಯುಗಳ ಬಳಲಿಕೆಯನ್ನು ದೂರ ಮಾಡಲು, ಸ್ನಾಯುಗಳ ನೋವನ್ನು ನಿವಾರಿಸಲು ಬಳಸುವರು. ಪ್ರೋಟೀನ್, ಕ್ಯಾಲ್ಸಿಯಂ, ಪೊಟ್ಯಾಸಿಯಂ, ಕಭ್ಭಿಣದಂಶಗಳು, ವಿಟಮಿನ್ “ಇ”, ನಾರಿನಂಶ  ಹೇರಳವಾಗಿರುವ  ಎಲೆಕಳ್ಳಿ ಗಿಡದ ಎಲೆಗಳನ್ನು ಹಸಿ ತರಕಾರಿಯಾಗಿಯೂ ಬಳಸುತ್ತಾರಂತೆ.  ಎಲೆಯಲ್ಲಿ ವಿಟಮಿನ್ “ಇ” ಹೇರಳವಾಗಿರುವುದರಿಂದ ಆಂಟಿ ಓಕ್ಸಿಡಾಂಟ್ ಗುಣಗಳಿರುತ್ತವೆ. ಅತ್ಯಧಿಕ ಪೊಟಾಶಿಯಂ (ಟೊಮ್ಯಾಟೋ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಅಂಶದ ದುಪ್ಪಟ್ಟು) ಅಂಶ ಇರುವುದರಿಂದ  ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ.

ನಮ್ಮ ದೇಶದಲ್ಲಿ, ಎಲೆಕಳ್ಳಿ ಗಿಡವನ್ನು ಇತ್ತೀಚಿಗೆ ಅಲಂಕಾರಿಕ ಉದ್ದೇಶಗಳಿಗಾಗಿ ಬೆಳೆಸಲ್ಪಡುತ್ತಿದೆಯಾದರೂ,  ಅದರ ಔಷಧೀಯ ಉಪಯುಕ್ತತೆಯ ಬಗ್ಗೆ ಅಷ್ಟೊಂದು ಮಾಹಿತಿಗಳು ಲಭ್ಯವಿಲ್ಲ. ಪನಾಮಾ, ಬ್ರೆಝಿಲ್, ಮಲೇಶಿಯಾ, ಸಿಂಗಾಪುರ ದೇಶಗಳಲ್ಲಿ ಎಲೆಕಳ್ಳಿ ಗಿಡದ ಉಪಯುಕ್ತತೆಯ ಬಗ್ಗೆ ಹಲವು ಸಂಶೋಧನೆಗಳು ನಡೆದಿವೆ, ನಡೆಯುತ್ತಿವೆ. ನಮ್ಮ ದೇಶದಲ್ಲಿಯೂ ಎಲೆಕಳ್ಳಿ ಗಿಡದ ಬಗ್ಗೆ ಸಂಶೋಧನೆಗಳು ನಡೆಯಲಿ ಅನ್ನುವ ಸದಾಶಯ.

-ಡಾ. ಕೃಷ್ಣಪ್ರಭ ಎಂ, ಮಂಗಳೂರು

13 Responses

  1. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಲೇಖನ.

  2. ಬಿ.ಆರ್.ನಾಗರತ್ನ says:

    ಅತ್ಯಂತ ಉಪಯುಕ್ತ ಮಾಹಿತಿಯನ್ನು ಒಳಗೊಂಡ ಲೇಖನ ಚೆನ್ನಾಗಿದೆ.ಅಭಿನಂದನೆಗಳು ಮೇಡಂ.

    • Dr. Krishnaprabha M says:

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು

  3. Samatha.R says:

    ಮಾಹಿತಿ ಪೂರ್ಣ ಉಪಯುಕ್ತ ಲೇಖನ..ಚೆನ್ನಾಗಿದೆ..

  4. ಲೇಖನ ಮಾಹಿತಿಪೂರ್ಣವಾಗಿದೆ ಧನ್ಯವಾದಗಳು

    • ಡಾ. ಕೃಷ್ಣಪ್ರಭ ಎಂ says:

      ಮೆಚ್ಚುಗೆಗೆ ಧನ್ಯವಾದಗಳು ಗಾಯತ್ರಿ ಅವರೇ

  5. Anonymous says:

    ಉತ್ತಮ ಮಾಹಿತಿಗಾಗಿ ಧನ್ಯವಾದಗಳು

  6. Anonymous says:

    ಹಲವು ಬಗೆಗಳ ಮಾಹಿತಿ ಇರುತ್ತದೆ ನಿಮ್ಮ ಲೇಖನದಲ್ಲಿ.ಈ ಸಲ ಎಲೆ ಕಳ್ಳಿಯ ಬಗ್ಗೆ ತುಂಬಾ ಚಂದದ ಮಾಹಿತಿ ಪ್ರಭಾ

  7. sudha says:

    Very informative article.

  8. Dr. Krishnaprabha M says:

    ಲೇಖನ ಮೆಚ್ಚಿದ, ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು

  9. ಶಂಕರಿ ಶರ್ಮ says:

    ಅಪರೂಪದ ಎಲೆ ಕಳ್ಳಿಯ ಬಗ್ಗೆ ಈ ತನಕ ಕೇಳಿರಲಿಲ್ಲ. ವಿಶೇಷ ಔಷಧೀಯ ಗುಣಗಳನ್ನು ಹೊಂದಿದ ಈ ಸಸ್ಯದ ಪೂರಕ ಫೊಟೋಗಳು ಮತ್ತು ವಿವರವಾದ ಮಾಹಿತಿಯೊಂದಿಗಿನ ಬರಹ ಬಹಳ ಚೆನ್ನಾಗಿವೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: