(ಅ)ಸತ್ಯ ಕರೆಗಳು!
ಆ ದಿನ ತಂಬಾ ಸುಸ್ತಾಗಿತ್ತು. ಮರುದಿನ ತೆಗೆದುಕೊಳ್ಳಬೇಕಾದ ತರಗತಿಗೆ ತಯಾರಿ ಮಾಡಿಕೊಳ್ಳಬೇಕಿತ್ತು. ಆದರೂ ನಿದ್ರಾದೇವಿಯ ಕರೆಯ ಸೆಳೆತವೇ ಜಾಸ್ತಿಯಾಗಿ, ಬೆಳಿಗ್ಗೆ ಬೇಗ ಎದ್ದು ಓದಿದರಾಯ್ತು ಅಂದುಕೊಂಡು ರಾತ್ರಿ 9 ಘಂಟೆಗೇ ಮಲಗಿಬಿಟ್ಟೆ. ಇನ್ನೇನು ನಿದ್ದೆ ಬರುತ್ತಿದೆ ಅನ್ನುವಾಗಲೇ ನನ್ನ ಚರ ದೂರವಾಣಿ ಮೊಳಗಲಾರಂಭಿಸಿತು. ಇಷ್ಟು ಹೊತ್ತಿಗೆ ಕರೆ ಮಾಡುವವರು ಯಾರಿರಬಹುದು ಅಂದುಕೊಂಡು, ಫೋನ್ ಮೇಲೆ ಕಣ್ಣಾಡಿಸಿದಾಗ ಯಾವುದೋ ಅಪರಿಚಿತ ಸಂಖ್ಯೆಯಿಂದ ಕರೆ. ನಿದ್ರೆ ಕಣ್ಣಿನಲ್ಲಿಯೇ ಕರೆ ಸ್ವೀಕರಿಸಿದೆ. ಅತ್ತ ಕಡೆಯಿಂದ ಒಂದು ಹುಡುಗಿಯ ದನಿ “ಅತ್ತೆ, ನಾನು ಭಾರತಿ”. “ಹಲೋ ಅಂತ ಕೂಡ ಹೇಳಿಲ್ಲ. ಯಾರಪ್ಪಾ ನನ್ನ ಸೊಸೆ ಭಾರತಿ! ಈ ಹೆಸರು ಎಲ್ಲೂ ಕೇಳಿದ ನೆನಪಿಲ್ಲ” ಅಂತ ಯೋಚಿಸುತ್ತಲೇ “ಭಾರತೀನಾ, ಯಾರು ಅಂತ ಗೊತ್ತಾಗ್ಲಿಲ್ಲ” ಅಂತ ತಡವರಿಸಿದೆ. ಆ ಹುಡುಗಿಯದು ಪುನಃ ಅದೇ ಮಾತು “ಅತ್ತೆ, ನಾನು ಭಾರತಿ”. ಆ ಧ್ವನಿಯಲ್ಲಿ ಒಂದು ಮುಗ್ಧತೆ ಇತ್ತು. ಎಲ್ಲೋ ಒತ್ತಿದ ಸಂಖ್ಯೆ ತಪ್ಪಿರಬೇಕು ಪಾಪ! “ನಿಮಗೆ ಯಾರು ಬೇಕಾಗಿತ್ತು?” ಅಂತ ಪ್ರಶ್ನಿಸಿದೆ. “ಪ್ರಭಾವತಿ ಅವರು ಅಲ್ವಾ?” ಅಂತ ಅವಳ ಪ್ರಶ್ನೆಗೆ “ಅಲ್ಲ” ಅಂತ ಉತ್ತರಿಸಿದಾಗ “Sorry” ಅಂತ ಹೇಳಿ ಕರೆಯನ್ನು ತುಂಡರಿಸಿದಳು. “ಪ್ರಭಾ ಅವರು ಅಲ್ವಾ?” ಅಂತ ಕೇಳಿದರೆ ಗೊಂದಲ ಇನ್ನೂ ಮುಂದುವರಿಯುತ್ತಿತ್ತು. ಸದ್ಯ ಪ್ರಭಾವತಿ ಅಂದ್ಳಲ್ಲಾ ಅಂದುಕೊಂಡೆ!
ಮೊಬೈಲ್ ಬಂದ ನಂತರ ನಮ್ಮ ಆತ್ಮೀಯರ ಹೆಸರು ಬರೆದು ಅವರ ಸಂಖ್ಯೆಯನ್ನು ಸೇವ್ ಮಾಡುವುದರಿಂದ, ಯಾರ ಕರೆ ಬಂದಿದೆ ಅಂತ ತಿಳಿದು ಬಿಡುತ್ತದೆ. ಇತ್ತೀಚಿನ ದಿನಗಳಲ್ಲಿ ಒಬ್ಬೊಬ್ಬರ ಬಳಿ ಎರಡು ಅಥವಾ ಮೂರು ಸಿಮ್ ಇರುವುದರಿಂದ, ಕೆಲವೊಮ್ಮೆ ಧ್ವನಿ ಕೇಳಿ ಯಾರು ಕರೆ ಮಾಡಿದರೆಂದು ಗುರುತು ಹಿಡಿಯಬೇಕಾಗುತ್ತದೆ. ನನ್ನ ದೂರದ ಸಂಬಂಧಿಯೊಬ್ಬರು ನನ್ನ ಸಂಖ್ಯೆಯನ್ನು ಅವರ ಅಕ್ಕನಿಂದ ಪಡೆದು ಕರೆ ಮಾಡಿದ್ದರು. ನಾನು ಅವರನ್ನು ಭೇಟಿ ಆಗದೇ ಸುಮಾರು ಇಪ್ಪತ್ತು ವರ್ಷಗಳ ಮೇಲಾಗಿತ್ತು. ನಾನು ಫೋನ್ ಕರೆ ಸ್ವೀಕರಿಸಿದ ಕೂಡಲೇ “ನಾನು ಯಾರೆಂದು ಹೇಳು ನೋಡುವಾ” ಅಂತ ನನಗೆ ಪ್ರಶ್ನೆ ಇಟ್ಟರು. ಆ ದಿನವೂ ನನ್ನ ನಿದ್ರೆಯ ಸಮಯ ಹತ್ತಿರವಾಗಿತ್ತು. ” ದಯವಿಟ್ಟು ಕ್ಷಮಿಸಿ. ಯಾರೆಂದು ಗೊತ್ತಾಗಲಿಲ್ಲ” ಅಂದೆ. ಅವರಿಗೇನನಿಸಿತೆಂದು ನನಗೆ ಗೊತ್ತಿಲ್ಲ. ಇಂತಹ ಅನುಭವಗಳು ಆಗಾಗ ಆಗುತ್ತಿರುತ್ತವೆ. ಕೆಲಸದಲ್ಲಿ ವ್ಯಸ್ತರಾಗಿರುವಾಗ ಧ್ವನಿಯನ್ನು ಗುರುತು ಹಿಡಿಯುವುದು ಸಾಧ್ಯವಾಗುವುದಿಲ್ಲ. ಕೆಲವರ ಧ್ವನಿಯಲ್ಲಿ ಸಾಮ್ಯತೆ ಇರುವ ಕಾರಣದಿಂದ, ನಿರ್ದಿಷ್ಟ ವ್ಯಕ್ತಿ ಯಾರಿರಬಹುದು ಅನ್ನುವುದನ್ನು ಗುರುತು ಹಿಡಿಯಲಾಗುವುದಿಲ್ಲ.
ಇನ್ನು ಕೆಲವರಿಗೆ ಆತ್ಮೀಯರನ್ನು ಗೋಳು ಹೊಯ್ದುಕೊಳ್ಳುವುದೆಂದರೆ ಏನೋ ಖುಷಿ. ಅಪರಿಚಿತ ಸಂಖ್ಯೆಯಂದ ಕರೆ ಮಾಡಿ, ಧ್ವನಿಯಲ್ಲಿ ಮಾರ್ಪಾಡು ಮಾಡಿಕೊಂಡು ಮಾತನಾಡಿ ಬೇಸ್ತು ಬೀಳಿಸುವುದು. ಹೇಳಿ ಕೇಳಿ ಅಧ್ಯಾಪನ ವೃತ್ತಿ. ಸಾಕಷ್ಟು ಸಂಖ್ಯೆಯ ಹಳೆಯ ವಿದ್ಯಾರ್ಥಿಗಳು ಹಾಗೆಯೇ ಪ್ರಸಕ್ತ ವಿದ್ಯಾರ್ಥಿಗಳು. ಯಾವುದೋ ಒಂದು ದಿನ ನೆನಪಾದಾಗ ಮೇಡಂ ಜೊತೆ ಮಾತನಾಡಲೇಬೇಕೆಂದು ಯಾರಿಂದಲೋ ನನ್ನ ಸಂಖ್ಯೆ ಸಂಪಾದಿಸಿ, ಕರೆ ಮಾಡುವ ಹಳೆಯ ವಿದ್ಯಾರ್ಥಿಗಳ ಸಂಖ್ಯೆಗೇನೂ ಕಡಿಮೆಯಿಲ್ಲ. ಪರಿಸ್ಥಿತಿ ಹೀಗಿರುವಾಗ “ನಾನು ನಿಮ್ಮ ಹಳೆಯ ವಿದ್ಯಾರ್ಥಿ” ಅಂತ ಪರಿಚಯಿಸಿಕೊಂಡು ಬೇಸ್ತು ಬೀಳಿಸುವ ಕೆಲವು ಸಂಬಂಧಿಕರೂ ಇದ್ದಾರೆ. ನಾನು ಅಧ್ಯಾಪನ ವೃತ್ತಿಗೆ ಸೇರಿದ ಆರಂಭದ ದಿನಗಳಲ್ಲಿ ಕೆಲವು ಆಪ್ತ ವಿದ್ಯಾರ್ಥಿಗಳ ಬಳಿ ಹೇಳಿದ್ದೆ “ನಿಮ್ಮ ಹೆಸರು, ನಿಮ್ಮ ರೋಲ್ ನಂಬರ್, ನಿಮ್ಮ ಹಸ್ತಾಕ್ಷರ, ನಿಮ್ಮ ಮುಖ ಹಾಗೆಯೇ ನಿಮ್ಮ ಧ್ವನಿಯಿಂದ ನಾನು ನಿಮ್ಮನ್ನು ಯಾವಾಗ ಬೇಕಾದರೂ ಗುರುತಿಸಬಲ್ಲೆ”. ನಾನು ಹೇಳಿದ್ದನ್ನು ನೆನಪಲ್ಲಿ ಇಟ್ಟುಕೊಂಡಿದ್ದ ಒಬ್ಬ ವಿದ್ಯಾರ್ಥಿ ಹತ್ತು ವರ್ಷದ ನಂತರ ಕರೆ ಮಾಡಿ “ನಾನು ನಿಮ್ಮ ಹಳೆ ವಿದ್ಯಾರ್ಥಿ. ನಾನ್ಯಾರೆಂದು ಹೇಳಿ ನೋಡುವ” ಅಂತ ಸವಾಲು ಒಡ್ಡಿದ್ದ. ಅವನ ಧ್ವನಿಯನ್ನು ಗುರುತಿಸಲು ಶಕ್ತಳಾಗಿದ್ದೆ. ಆದರೆ ಇಂತಹ ಸವಾಲುಗಳನ್ನು ಎದುರಿಸುವುದು ಕಷ್ಟಸಾಧ್ಯ ಅಂತ ಮನವರಿಕೆ ಆಯ್ತು ನೋಡಿ! ಯಾವ ವಿದ್ಯಾರ್ಥಿಗಳ ಬಳಿಯೂ ಆ ರೀತಿ ಹೇಳಲು ಹೋಗಿಲ್ಲ ಮಾರಾಯರೇ!
ಅಪರಿಚಿತ ಸಂಖ್ಯೆಗಳಿಂದ ಕರೆ ಬರುವಾಗ ಅದೆಷ್ಟೋ ಮೋಜಿನ ಪ್ರಸಂಗಗಳು, ಪೇಚಿನ ಪ್ರಸಂಗಗಳು ಎದುರಾಗುತ್ತವೆ. ಆದರೆ ಆ ಅಪರಿಚಿತ ಸಂಖ್ಯೆ ಪರಿಚಿತರದ್ದಾಗಿದ್ದರೆ ಸಮಸ್ಯೆ ಇಲ್ಲ. ತಮ್ಮ ಮೋಸದ/ವಂಚನೆಯ ಜಾಲಕ್ಕೆ ಸಿಲುಕಿಸಲು ಕೆಲವು ಅನಾಮಧೇಯ ವ್ಯಕ್ತಿಗಳು ಅಪರಿಚಿತ ಸಂಖ್ಯೆಯಿಂದ ಕರೆ ಮಾಡುತ್ತಾರೆ. “ಬ್ಯಾಂಕ್ ಖಾತೆಯ ವಿವರ ಕೇಳುವುದು, ಪಿನ್ ಸಂಖ್ಯೆ ಕೇಳುವುದು, ವಿಮೆಯ ಕಂತು ಪಾವತಿಯಾಗಿಲ್ಲ ಅನ್ನುವುದು, ನಿಮಗೆ ಬಹುಮಾನ ಬಂದಿದೆ, ಬಹುಮಾನ ಕಳುಹಿಸಲು ವಿಳಾಸ ಕಳುಹಿಸಿ ಅನ್ನುವುದು” ಹೀಗೆ ವಿಧ ವಿಧವಾಗಿ ಜನರನ್ನು ನಂಬಿಸಿ ಏಮಾರಿಸುವ ಹಲವು ಬೇನಾಮಿ ಸಂಸ್ಥೆಗಳಿವೆ. ಇಂತಹ ಕೆಟ್ಟ ಅನುಭವಗಳಿಂದ ರೋಸಿ ಹೋದ ಹಲವು ಜನರು ಅಪರಿಚಿತ ಸಂಖ್ಯೆಯಿಂದ ಬರುವ ಕರೆಗಳನ್ನು ಸ್ವೀಕರಿಸುವುದೇ ಇಲ್ಲ. ಕೆಲವೊಮ್ಮೆ ತುರ್ತು ಸಂದರ್ಭಗಳ ಸಮಯದಲ್ಲಿಯೂ, ಅಗತ್ಯ ಕರೆಗಳೇ ಆಗಿದ್ದರೂ ಅಪರಿಚಿತ ಸಂಖ್ಯೆ ಎಂದು ಕರೆ ಸ್ವೀಕರಿಸದೆ ಎಡವಟ್ಟುಗಳಾಗುತ್ತವೆ. ಕೆಲವರಿಗೆ ಫೋನ್ ಅಂದರೆ ಅಲರ್ಜಿ. ಇನ್ನು ಕೆಲವರಿಗೆ ಅಲಕ್ಷ್ಯ. ಫೋನಿನಲ್ಲಿ ತಪ್ಪಿದ ಕರೆ(ಮಿಸ್ಡ್ ಕಾಲ್) ಇದ್ದರೂ ವಾಪಸ್ ಕರೆ ಮಾಡಲು ಹೋಗುವುದಿಲ್ಲ. ಬೇಕಿದ್ದರೆ ಇನ್ನೊಮ್ಮೆ ಮಾಡುತ್ತಾರೆ ಅನ್ನುವ ಧೋರಣೆ.
ಅನಿವಾರ್ಯ ಸಂದರ್ಭ ಹೊರತು ಪಡಿಸಿ ತಡ ರಾತ್ರಿಯಲ್ಲಿ ಅಥವಾ ಬೆಳ್ಳಂಬೆಳಿಗ್ಗೆ ದೂರವಾಣಿ ಕರೆ ಮಾಡುವುದು ಸುಸಂಸ್ಕೃತರ ಲಕ್ಷಣವಲ್ಲ. ಯಾರಿಗಾದರೂ ಅಪರೂಪಕ್ಕೆ ದೂರವಾಣಿ ಕರೆ ಮಾಡಿದಾಗ ತಮ್ಮನ್ನು ತಾವು ಪರಿಚಯಿಸಿಕೊಂಡು ಮಾತುಕತೆ ಮುಂದುವರಿಸುವುದು ಉತ್ತಮ. ಎಷ್ಟೇ ಆತ್ಮೀಯರಿರಲಿ, ದೂರವಾಣಿ ಕರೆ ಸ್ವೀಕರಿಸಿದವರ ನೆನಪಿನ ಶಕ್ತಿಯನ್ನು ಪರೀಕ್ಷಿಸುವುದು ಯುಕ್ತವಲ್ಲ ಹಾಗೆಯೇ ಏಮಾರಿಸುವುದು ಅಥವಾ ಬೇಸ್ತು ಬೀಳಿಸುವುದು ಸಲ್ಲ. ಯಾಕೆಂದರೆ ದೂರವಾಣಿ ಕರೆ ಸ್ವೀಕರಿಸುವವರು ಕೆಲಸದಲ್ಲಿ ವ್ಯಸ್ತರಿರಬಹುದು, ದುಃಖದಲ್ಲಿರಬಹುದು, ನೋವಿನಲ್ಲಿರಬಹುದು, ಅನಾರೋಗ್ಯದಲ್ಲಿರಬಹುದು, ಮಗುವನ್ನು ಮಲಗಿಸುತ್ತಿರಬಹುದು ಅಲ್ವಾ? ಅಷ್ಟೊಂದು ಅನಿವಾರ್ಯ ಅಲ್ಲದಿರುವ ಸಮಯದಲ್ಲಿ ಒಮ್ಮೆ ಮಾಡಿದ ಕರೆ ಸ್ವೀಕರಿಸದಿದ್ದ ಪಕ್ಷದಲ್ಲಿ ಪದೇ ಪದೇ ಫೋನ್ ಮಾಡಿ ಸತಾಯಿಸಬಾರದು. ಇವೆಲ್ಲಾ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ಅನಿಸಿಕೆಗಳು. ನಿಮಗೂ ಕೆಲವೊಮ್ಮೆ ಇದೇ ರೀತಿ ಅನಿಸಿದ್ದಿರಬಹುದು ಅಲ್ವಾ?
-ಡಾ. ಕೃಷ್ಣಪ್ರಭ ಎಂ, ಮಂಗಳೂರು
ನಿಜ ಸಿಕ್ಕಿಸಿಕ್ಕಿದ ಕರೆಗಳು ನಮ್ಮನ್ನು ಪರೀಕ್ಷೆ ಮಾಡಿದ ಹಾಗೆ.ಉತ್ತರಿಸಲೇಬಾರದು ಅನ್ನಿಸ್ತದೆ. ಆಗ ಅಗತ್ಯವಿರುವ ಕಾಲ್ ಕೂಡ ಬದಿಗೆ ,ಅಲ್ವಾ
ಹೌದು…ಕೆಲವೊಮ್ಮೆ ಅಂತಹ ಕರೆಗಳ ಮಧ್ಯೆ ಅಗತ್ಯದ ಕರೆಗಳು ತಪ್ಪಿ ಹೋಗುತ್ತವೆ
ಖಂಡಿತಾ ಆಗಿದೆ ಪ್ರಭಾರವರೇ.ನನ್ನ ಯಜಮಾನರಿಗೆ ಆಗಿದೆ ಹೀಗೆ ಬಹುಮಾನ ಬಂದಿದೆ ನಿಮಗೆ 30.000ರೂ ಕಟ್ಟಿದ್ರೆ ನಿಮಗೆ 200000ರೂ ಗಿಫ್ಟ್ ಓಚರ್ ಎಂದು .ಇದೆಲ್ಲಾ ಮೋಸಂತ ಸುಮ್ಮನೆ ಕುಳಿತೆವು ..ಚಂದದ ಲೇಖನ
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು…ಬೇಸ್ತು ಬೀಳಿಸುವ ಕರೆಗಳಿಂದ ಮೋಸ ಹೋಗುವವರು ಇರುವರು
ಹೌದು ನಿಜವಾದ ಮಾತು
ಧನ್ಯವಾದಗಳು
ತುಂಬಾ ಸುಂದರ ಲೇಖನ
ಮೆಚ್ಚುಗೆಗೆ ಮನದಾಳದ ವಂದನೆಗಳು ಮೇಡಂ
ಸೊಗಸಾದ ಬರಹ ರ್ರಿ…ಧನ್ಯವಾದಗಳು
ತುಂಬಾ ಧನ್ಯವಾದಗಳು
ನೀವು ಹೇಳಿದಂತೆ ಬೇಸರದ ಕೆರೆಗಳು ತಪ್ಪಿದರೂ ಒಪ್ಪಿಕೊಳ್ಳಲು ತಯಾರಿಲ್ಲ ರೆ ಪದೇಪದೇ ಗೋಳು ಹೊಯ್ದು ಕೊಳ್ಳುವ ಕರೆಗಳಿಗೆ ಮುಕ್ತಿ…ನಾವು ಮೊಬೈಲ್ ಬಳಕೆ ಬಿಟ್ಟಾಗ ಮಾತ್ರ ಅದು.. ಸಾಧ್ಯವಿಲ್ಲ ದ ಮಾತು.ಚಂದದ ಅನುಭವದ ಲೇಖನ ಅಭಿನಂದನೆಗಳು ಮೇಡಂ
ಮೊಬೈಲ್ ಜೀವನಾಡಿ ಆಗಿಬಿಟ್ಟಿದೆ….ಹಾಗಾಗಿ ಅನಗತ್ಯ ಕರೆಗಳನ್ನು ಸಹಿಸಿಕೊಳ್ಳಬೇಕಾಗಿದೆ…ಮೆಚ್ಚುಗೆಗೆ ಮನದಾಳದ ವಂದನೆ
ಬಹಳ ಸುಂದರವಾದ ಲೇಖನ ಪ್ರಭಾ. ಎಲ್ಲದಕ್ಕಿಂತ ಮುಖ್ಯವಾಗಿ ನನಗೆ ತುಂಬಾ ಸಂತೋಷವಾಗಿದ್ದು ಮೊಬೈಲ್ ಫೋನಿಗೆ ಕನ್ನಡದಲ್ಲಿ ಏನು ಹೇಳುತ್ತಾರೆ ಅಂತ ನನಗೆ ಗೊತ್ತಿರಲಿಲ್ಲ. ಚರ ದೂರವಾಣಿ ಅಂದರೆ ಮೊಬೈಲ್ ಫೋನ್ ಅಂತ ಭಾವಿಸುತ್ತೇನೆ ಅಲ್ಲವಾ
ಹೌದು ಅಣ್ಣ…ಚರ ದೂರವಾಣಿ ಅಂದರೆ ಮೊಬೈಲ್…
ಮೆಚ್ಚುಗೆಗೆ ಧನ್ಯವಾದಗಳು
ಸೊಗಸಾದ ಬರಹ. ಇಂತಹ ಅನುಭವ ಬಹಳಷ್ಟು ಆಗಿದೆ.
ಹೌದು, ಇಂತಹ ಕರೆಗಳು ಮಾಮೂಲು. ಮೊಬೈಲ್ ಭರಾಟೆ ಇನ್ನೂ ಪ್ರಾರಂಭವಾಗಿರದಿದ್ದ ದಿನಗಳವು. ದೂರವಾಣಿ ಇಲಾಖೆಯಲ್ಲಿ ನೌಕರಿಯಲ್ಲಿದ್ದ ನನಗೆ, ಸ್ಥಿರ ದೂರವಾಣಿಗೆ ಕರೆಮಾಡಿ ತೊಂದರೆ ಕೊಡುವ ಬಗ್ಗೆ ದೂರುಗಳು ಬರುತ್ತಿದ್ದವು. ಅವುಗಳನ್ನು ಪರಿಶೀಲಿಸಿ, ಆ ಖದೀಮರನ್ನು ಆಫೀಸಿಗೆ ಕರೆಸಿ ಎಚ್ಚರಿಕೆ ಕೊಡುವ ಕೆಲಸವನ್ನೂ ಮಾಡಬೇಕಿತ್ತು. ಮೊಬೈಲ್ ಕಿರಿಕಿರಿಯ ಸೊಗಸಾದ ಲೇಖನ.
ಸದಾ ಲೇಖನ ಮೆಚ್ಚಿ ಪ್ರತಿಕ್ರಿಯಿಸುವ ನಯನಾಗೆ ಧನ್ಯವಾದಗಳು
ತುಂಬು ಹೃದಯದ ಧನ್ಯವಾದಗಳು ಶಂಕರಿ ಅಕ್ಕ…ನಿಮ್ಮ ಅನುಭವ ಕೂಡಾ ಹಂಚಿಕೊಂಡಿರುವಿರಿ
ಲೇಖನ ಓದುತ್ತಾ ನನ್ನ ಜೀವನದ ಲ್ಲಿ ನಡೆದ ಘಟನೆಯೊಂದು ನೆನಪಾಯಿತು. ನನ್ನ ಸಹಪಾಠಿ ಯೋರ್ವಳ ದೂರವಾಣಿ ಸಂಖ್ಯೆ, 2 ದಶಕ ಗಳ ನಂತರ ಸಿಕ್ಕಾಗ, ಕುತೂಹಲ ಮೂಡಿಸಲು ಸತಾಯಿಸುವ ಅನ್ನಿಸಿದರೂ, ಹಾಗೆ ಮಾಡುವುದು ಸರಿಕಾಣದೆ, ನೇರ ವಾ ಗಿ ಮಾತಾಡಿದ್ದೆ. ನಿಮ್ಮ್ಮ ಲೇಖನ ಓದಿದಾಗ ವಾಹ್ ಅನ್ನಿಸಿತು. ಯಾಕೆಂದರೆ, ಲೇಖನವೂ ಅದನ್ನೇ ಧ್ವನಿ ಸುತ್ತಿತ್ತು.
ಎಂದಿನಂತೆ ಸರಳ ಸುಂದರ ಲೇಖನ…ಪ್ರಭಾ! ಹೇಳಬೇಕಾದ ವಿಷಯವನ್ನು ನೇರವಾಗಿ ಹೇಳುವ, ತಮ್ಮ ಶೈಲಿ… ಅಪೂರ್ವ!!
ಕಾಯುವೆ ತಮ್ಮ ಮುಂದಿನ ಲೇಖನಕ್ಕೆ, ಕುತೂಹಲ ದೊಂದಿಗೆ…
ಸಂತೋಷ್ ಕುಮಾರ್ ಶೆಟ್ಟಿ
ಲೇಖನ ಮೆಚ್ಚಿ, ನಿಮ್ಮ ಅನುಭವ ಕೂಡಾ ಸೇರಿಸಿ ಪ್ರತಿಕ್ರಿಯೆ ನೀಡಿದ ನಿಮಗೆ ಧನ್ಯವಾದಗಳು ಸಂತೋಷ್
ನಿನ್ನೆ ಯಷ್ಟೇ ಕೆನರಾ ಬ್ಯಾಂಕ್ ಮ್ಯಾನೇಜರ್ ಅಂತ ಹೇಳಿ ಯಾರೋ ಅನಾಮಧೇಯ ಕರೆ ಮಾಡಿದ್ದರು ನನಗೆ ಬೆಳಿಗ್ಗೆ. ನಿಮ್ಮ ಲೇಖನ ಬಹಳ ಚೆನ್ನಾಗಿದೆ ಕೃಷ್ಣ ಪ್ರಭಾ. ಈ ರೀತಿಯ ಅನುಭವ ಅನೇಕರಿಗೆ ಆಗಿರಬಹುದು. ಸರಳ ಸುಂದರ ಸಕಾಲಿಕ ಬರಹ