ಕೆ ಎಸ್ ನ ಕವಿನೆನಪು 38: ಪ್ರಶಸ್ತಿಗಳ ಪ್ರಸಂಗ
ಪ್ರಶಸ್ತಿ, ಮನ್ನಣೆ ,ಪುರಸ್ಕಾರಗಳತ್ತ ಅಷ್ಟಾಗಿ ಗಮನ ಹರಿಸದೆ ತಮ್ಮ ಪಾಡಿಗೆ ತಾವು ಕಾವ್ಯ,ಗದ್ಯ ಅನುವಾದಗಳತ್ತ ಗಮನ ಹರಿಸಿದ್ದ ನಮ್ಮ ತಂದೆಯವರಿಗೆ ಬಹುಪಾಲು ಎಲ್ಲ ಪ್ರಮಖ ಗೌರವಗಳೂ ಅರಸಿ ಬಂದವು. (ಅವುಗಳ ವಿವರವನ್ನು ಅಂತಿಮ ಭಾಗದಲ್ಲಿ ನೀಡಲಾಗುವುದು) ಅರ್ಜಿ ಹಾಕುವುದು ,ಒಬ್ಬರ ಹತ್ತಿರ ಶಿಫಾರಸು ಮಾಡಿಸುವುದು ತಮ್ಮ ಸ್ವಾಭಿಮಾನಕ್ಕೆ ಪೆಟ್ಟು ಎಂದೇ ಭಾವಿಸಿದ್ದರು.ಆ ಕಾಲದ ಅಂದಿನ ಕಾಲದ ಬಹುತೇಕ ಸಾರಸ್ವತಗಣ್ಯರು ಹೀಗೇ ಇದ್ದರು. 1972 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕೊಡಿ ಎಂದು ಮನೆಗೆ ಬಂದ ಸರಕಾರಿ ಇಲಾಖೆಯ ನೌಕರನಿಗೆ ಶವರ್ ಬಾತ್ ಮಾಡಿಸಿ ಕಳುಹಿಸಿದ ಪ್ರಸಂಗ ಇದು.
ಬಂದ ಆ ವ್ಯಕ್ತಿ ರಾಜ್ಯೋತ್ಸವ ಪ್ರಶಸ್ತಿಗೆ ನಿಮ್ಮ ಅರ್ಜಿ ಬರೆದುಕೊಡಿ ಎಂದ. ನಾನು ಶಿಕ್ಷಣ ಇಲಾಖೆಯಲ್ಲಿದ್ದೇನೆ. ನಿಮ್ಮಿಂದ ಅರ್ಜಿ ಬರೆಸಿಕೊಂಡು ಬರಲು ಸಾಹೇಬರು ಹೇಳಿದ್ದಾರೆ ಎಂದು ಸರಕಾರಿ ಭಾಷೆಯಲ್ಲೇ ಮಾತನಾಡಿದ. ನಮ್ಮ ತಂದೆ “ಯಾರು ನಿಮ್ಮ ಸಾಹೇಬ?” ಎಂದು ತಣ್ಣಗೆ ಕೇಳಿದರು.ಅವನು ಹೆಸರು, ಹುದ್ದೆ ಎಲ್ಲ ತಿಳಿಸಿದ. “ಅರ್ಜಿ ಕೊಟ್ಟು ಪ್ರಶಸ್ತಿ ತೊಗೋಳ್ಳೊ ದುಸ್ಥಿತಿ ಇನ್ನೂ ಬಂದಿಲ್ವಂತೆ ನಾಡಿನ ಕವಿಗಳಿಗೆ ಅಂತ ಅವರಿಗೆ ಹೇಳು ಹೋಗು “ಎಂದು ಖಾರವಾಗಿ ಹೇಳಿದರು.
ಅವನು ಮತ್ತೊಮ್ಮೆ ವಿನಂತಿಸಿದ ಆಗಲೂ ಅದೇ ಉತ್ತರ. ವಿಧಿಯಿಲ್ಲದೆ ಕಛೇರಿಗೆ ಹೋಗಿ ನಡೆದದ್ದನ್ನು ವರದಿ ಮಾಡಿದ. ವಾಸ್ತವವೆಂದರೆ ಆಗ ಮುಖ್ಯಮಂತ್ರಿಗಳಾಗಿದ್ದ ದೇವರಾಜು ಅರಸು ಅವರೇ ನಮ್ಮ ತಂದೆ ಹೆಸರು ಪ್ರಶಸ್ತಿಗೆ ಸೂಚಿಸಿದ್ದರಂತೆ. ಮೈಸೂರಿನ ಶೈಕ್ಷಣಿಕ ದಿನಗಳಿಂದ ಹಾಗೂ ಅವರು ಪೌರಾಡಳಿತ ಸಚಿವರಾಗಿದ್ದ ಕಾಲದಿಂದ (ನಮ್ಮ ತಂದೆಯವರೂ ಸ್ವಲ್ಪ ಸಮಯ ಇಲಾಖೆಯಲ್ಲಿ ಕೆಲಸ ಮಾಡಿದ್ದರು) ಪರಿಚಿತರೇ. ಅರಸು ಅವರಿಗೂ ಈ ವಿಷಯ ತಿಳಿದು “ಇಂಥ ವಿಷಯದಲ್ಲಿ ಅವನು ನಿಜಕ್ಕೂ ನರಸಿಂಹನೇ,ಅರ್ಜಿ ಅಂತ ಕೇಳಬೇಡಿ,ಬಯೋಡಾಟಾ ನೀವೇ ಬರೆದುಕೊಂಡು ಸಹಿ ತೆಗೆದುಕೊಳ್ಳಿ.” ಎಂದು ಸೂಚಿಸಿದರಂತೆ.
ಕಚೇರಿಯವರು ಹಾಗೆ ಮಾಡಿದರು.ಅದೇ ವರುಷ ರಾಜ್ಯೋತ್ಸವ ಪ್ರಶಸ್ತಿ ಬಂತು.ಪ್ರಶಸ್ತಿ ಪ್ರದಾನ ಮಾಡಿದ ಅರಸು ಅವರು ನಮ್ಮ ತಂದೆ ನೋಡಿ ಒಂದು ಸಾರಿ ನಕ್ಕು, ”ನಿಧಾನವಾಗಿ ಮಾತನಾಡೋಣ.” ಎಂದರಂತೆ.
2003 ರ ಡಿಸೆಂಬರ್ ನಲ್ಲಿ ಜ್ಞಾನಪೀಠ ಪ್ರಶಸ್ತಿ ಯ ಸಲಹಾ ಸಮಿತಿಯ ಸದಸ್ಯರಾಗಿದ್ದ ನಮ್ಮ ತಂದೆಯವರ ಆತ್ಮೀಯ ಸ್ನೇಹಿತರೂ ಆಗಿದ್ದ ಪ್ರೊ ಎನ್ ಬಸವಾರಾಧ್ಯ ಅವರು ನಮ್ಮ ಮನೆಗೆ ಬಂದು ನಮ್ಮ ತಂದೆಯವರನ್ನು ಮಾತನಾಡಿಸಿ ”ನರಸಿಂಹಸ್ವಾಮಿ ಆರೋಗ್ಯ ಸುಧಾರಿಸಬೇಕು, ನಿನ್ನ ಹೆಸರು ಜ್ಞಾನಪೀಠ ಪ್ರಶಸ್ತಿಗೆ ಶಿಫಾರಸು ಆಗ್ತಾ ಇದೆ ಎಂದರು. (ಜ್ಞಾನಪೀಠ ಪ್ರಶಸ್ತಿ ಮರಣೋತ್ತರವಾಗಿ ನೀಡಲಾಗುವುದಿಲ್ಲ) ಆಗ ನಮ್ಮ ತಂದೆ ವಿಷಾದದಿಂದ ನಕ್ಕು,”ನನ್ನ ಪರಿಸ್ಥಿತಿ ನೀನೇ ನೋಡ್ತಾ ಇದ್ದೀಯೆ. ಪ್ರಶಸ್ತಿಗಾಗಿ ಜೀವ ಇಟ್ಟುಕೋ ಅಂತೀಯಾ” ಎಂದರು.
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)
ಮನ ಕಟ್ಟಿದ ಪ್ರಸಂಗಗಳು
ಅರ್ಥಪೂರ್ಣವಾಗಿದೆ. ರ್ರಿ
ಕವಿಗಳ ಪ್ರತಿ ಹೆಚ್ಚುತ್ತಿರುವ ಹೆಮ್ಮೆ, ಅಭಿಮಾನದ ಭಾವ.
ಬಹಳ ಸ್ವಾಭಿಮಾನಿಗಳಾಗಿದ್ದ ಹಿರಿಯ ಸಾಹಿತಿಗಳ ಬಗೆಗೆ ಗೌರವ, ಅಭಿಮಾನ ನೂರ್ಮುಡಿಸಿದುದು ಸತ್ಯ. ಇಂತಹವರೂ ಇದ್ದರೆಂಬುದು ಇಂದು ಪ್ರಶಸ್ತಿ, ಸನ್ಮಾನಗಳಿಗಾಗಿ ಹಪಹಪಿಸುವ ಜನಗಳಿಗೆ ಅರ್ಥವಾಗಲಾರದು.. ಕಣ್ಣು ತೆರೆಸುವ ಲೇಖನ.. ಧನ್ಯವಾದಗಳು ಸರ್.