ಕೆ ಎಸ್‌ ನ ಕವಿನೆನಪು 35: ಕಹಿನೆನಪುಗಳೂ ಉಂಟು ……

Share Button

ಬಾಲ್ಯದ ದಿನಗಳ ನೆನಪುಗಳ ಬಗ್ಗೆ ಯಾರಾದರೂ ನಮ್ಮ ತಂದೆಯವರ ಹತ್ತಿರ ವಿಚಾರಿಸಿದರೆ “ಎಲ್ಲರಂತೆ ನನ್ನ ಬಾಲ್ಯವೂ ಕಳೆಯಿತು,ಅದರಲ್ಲೇನೂ ವಿಶೇಷವಿಲ್ಲ ಬಹಳ ಸಾಧಾರಣವಾದ ಜೀವನ” ಎನ್ನುತ್ತಿದ್ದರು.”ಯಾರಾದರೂ ಬಾಲ್ಯ ಸ್ನೇಹಿತರಿದ್ದರೆ?” ಎಂದು ಕೇಳಿದರೆ “ನೆಪೋಲಿಯನ್ ,ಶುದ್ಧೋದನ ಎನ್ನುವವರಿದ್ದರು ಎಂದರೂ ಅವರಿಬ್ಬರ ಬಗ್ಗೆ ಹೆಚ್ಚಿನ ವಿವರ ದೊರೆಯುತ್ತಿರಲಿಲ್ಲ.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ವರ್ಗದಲ್ಲಿ ಪಾಸಾದ ಕೆ ಎಸ್ ನ, ಪಿ ಯು ಸಿಯಲ್ಲಿ ‘ಸೈನ್ಸ್ ಲೀಡಿಂಗ್ ಟು ಇಂಜನಿಯರಿಂಗ್ ವಿಭಾಗಕ್ಕೆ ಸೇರಿಕೊಂಡರು.ಮುಂದೆ ಇಂಜನಿಯರಿಂಗ್ ಓದಬಯಸುವವರು ಆಗ ಈ ವಿಭಾಗಕ್ಕೆ ಸೇರಿಕೊಳ್ಳಬೇಕಾಗಿತ್ತು. 1933ರಲ್ಲಿ ಈ ಪರೀಕ್ಷೆಯಲ್ಲಿ ಪಾಸಾದರು.

ಈ ಅವಧಿಯಲ್ಲಿ ಎ ಆರ್ ಕೃ, ಕುವೆಂಪು, ತೀ ನಂ ಶ್ರೀ ಅವರ ಪ್ರೋತ್ಸಾಹದಿಂದ ಕಾವ್ಯಾಸಕ್ತಿ ಬೆಳೆದು, ಕೆಲವು ಕವನಗಳು “ಪ್ರಬುದ್ಧ ಕರ್ನಾಟಕ” ಪತ್ರಿಕೆಯಲ್ಲಿ  ಪ್ರಕಟವಾಗತೊಡಗಿದರಿಂದ, ಕವಿ ಬಿ ಎ ಪದವಿಗೆ ಸೇರಬಯಸಿದರು. ಆದರೆ ಕನ್ನಡ ಅಥವಾ ಇಂಗ್ಲಿಷ್ ಐಚ್ಛಿಕ ವಿಷಯವಾಗದೆ ಸಂಸ್ಕೃತವನ್ನು ಭಾಷೆಯಾಗಿ ಓದಿದ್ದರಿಂದ ಪ್ರವೇಶ ಸಾಧ್ಯವಿಲ್ಲವೆಂದು ಮಹಾರಾಜ ಕಾಲೇಜಿನ ಪ್ರಿನ್ಸಿಪಾಲ್ ಜೆ ಸಿ ರಾಲೋ ಅವರು ತಿಳಿಸಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ಆರಂಭವಾಗಿದ್ದ ಇಂಗ್ಲಿಷ್,ಫಿಸಿಕ್ಸ್ ,
ಮಾಥಮ್ಯಾಟಿಕ್ಸ್ (ಇ ಪಿ ಎಂ)ಕೋರ್ಸ್ ಗೆ ಸೇರಲು ಸಲಹೆ ನೀಡಿದರು.

ಅದರಂತೆ ಬೆಂಗಳೂರಿಗೆ ಬಂದು ಇ ಪಿ ಎಮ್ ಕೋರ್ಸ್ ಗೆ ಸೇರಿಕೊಂಡರು. ಹೀಗೆ ಕವಿಗೆ ಆಗ ಅಲ್ಲಿ ಪ್ರಾಧ್ಯಾಪಕರಾಗಿದ್ದ ಬಿ ಎಮ್ ಶ್ರೀ ಅವರ ಶಿಷ್ಯನಾಗುವ ಯೋಗ ಬಂದಿತು. ಕೆ ಎಸ್ ನ ಅವರ ತಂದೆ ಸುಬ್ಬರಾವ್ ಅವರಿಗೆ ಮಗ ಸಂಗೀತ ಕಲಿಯಲೆಂಬ ಆಸೆಯಿತ್ತು. (ಅವರೂ ಆ ಕಾಲದ ಪ್ರಸಿದ್ಧ ವಯಲಿನ್ ವಾದಕರೇ. ವಾಸುದೇವಾಚಾರ್ಯ ಅವರ ಕಛೇರಿಗೆ ಪಕ್ಕವಾದ್ಯ ನುಡಿಸುತ್ತಿದ್ದರು) ಆದರೂ ಮಗನ ಕಾವ್ಯಾಸಕ್ತಿಗೆ ಅಡ್ಡಿ ಬರಲಿಲ್ಲ.

ಆದರೆ ಕವಿಗೆ ಮೊದಲನೆಯ ವರ್ಷದ ಪದವಿ ಮುಗಿಸುವ ಹೊತ್ತಿಗೆ ತಂದೆ ಸುಬ್ಬರಾವ್ ತೀರ ಅಸ್ವಸ್ಥರಾಗಿ, ದುಡಿಯುವ ಸಾಮರ್ಥ್ಯವನ್ನು ಕಳೆದುಕೊಂಡರು.ಅವರ ಚಿಕ್ಕಪ್ಪನವರ ಸಲಹೆಯಂತೆ ಓದನ್ನು ಅಲ್ಲಿಗೇ ನಿಲ್ಲಿಸಲು ತೀರ್ಮಾನಿಸಿ, ಬಿ ಎಂಶ್ರೀ ಯವರಿಗೆ ಈ ವಿಷಯ ತಿಳಿಸಿದರು. ಅವರು ”ನೀನೊಬ್ಬ ಪ್ರತಿಭಾಶಾಲಿ ವಿದ್ಯಾರ್ಥಿ. ಇನ್ನು ಆರು ತಿಂಗಳು ಕಾದಿದ್ದರೆ ಸ್ಕಾಲರಶಿಪ್‌ ದೊರೆಯುತ್ತಿತ್ತು. ಆದರೆ ಈಗ ನೀನು ಹೇಳುವುದನ್ನು ಕೇಳಿದರೆ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತದೆ. ಧೈರ್ಯವಾಗಿರು” ಎಂದು ಆಶೀರ್ವದಿಸಿದರು. ಕವಿ ಕಣ್ಣೀರೊರೆಸಿಕೊಂಡು ಮೈಸೂರಿನತ್ತ ಪ್ರಯಾಣ ಬೆಳಸಿದರು.

ಮುಂದೆ ಅವರ ತಂದೆಯವರು ಕೆಲಸ ಮಾಡುತ್ತಿದ್ದ ಚಿನ್ನ,ಬೆಳ್ಳಿ ಸೆಟ್ಟರ ಅಂಗಡಿಯಲ್ಲೇ ದುಡಿಯತೊಡಗಿದರು.ಅದೇ ವರ್ಷ ಕೆ ಎಸ್‌ ನ ಅವರ ತಂದೆ ತೀರಿಕೊಂಡರು. ತಾಯಿ ಹಾಗೂ ತಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಈಗ ಇತ್ತು. ನಂತರ ರೆವಿನ್ಯೂ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ಮೈಸೂರು, ನಂಜನಗೂಡುಗಳಲ್ಲಿ ಸೇವೆ ಸಲ್ಲಿಸಿದರು. 1954ರಲ್ಲಿ ಮೈಸೂರು ಗೃಹಮಂಡಳಿ ಸ್ಥಾಪನೆಯಾದಾಗ ಅಲ್ಲಿಗೆ ಶಾಶ್ವತ ಪ್ರತಿನಿಯುಕ್ತಿ(permanent deputation)ಯಾಗಿ ಬೆಂಗಳೂರಿಗೆ ಬಂದು 1970ರ ಜನವರಿಯಲ್ಲಿ ನಿವೃತ್ತರಾದರು.

ಆದರೂ ವಿಶ್ವವಿದ್ಯಾಲಯ ಪದವಿಗಳು ಇಲ್ಲದ್ದರಿಂದ ಅಕೆಡಮಿಕ್ ವಲಯದ ಹುದ್ದೆ, ಪದವಿಗಳನ್ನು ನಿರ್ವರ್ಹಿಸುವ ಅವಕಾಶಗಳಿಂದ ವಂಚಿತರಾಗಬೇಕಾಯಿತು.ಇದೇ ಕಾರಣದಿಂದ, ಕೆಲವು ವಿಮರ್ಶಕರು ಕೆ ಎಸ್ ನ ಅವರನ್ನು ಪ್ರಧಾನ ಕವಿ (ಮೇಜರ್ ಪೊಯೆಟ್) ಎಂದು ಪರಿಗಣಿಸಲೂ ತಾರತಮ್ಯ ತೋರಿದರು.

ಈ ಸಂಗತಿಯನ್ನು ಅವರ ಅಭಿಮಾನಿಗಳು ನಮ್ಮ ತಂದೆಯವರ ಹತ್ತಿರ ಪ್ರಸ್ತಾಪಿಸಿದಾಗ “ಏನು ಮಾಡುವುದು. ಆ ಸಮಯದಲ್ಲಿ ನಾನು ತೆಗೆದುಕೊಂಡ ನಿರ್ಧಾರ ಸರಿಯಿತ್ತು.ಕಾವ್ಯರಚನೆಯಿಂದ ಯಾರಿಗೂ ಸಿಕ್ಕದ ಜನಪ್ರೀತಿ ನನಗೆ ಸಿಕ್ಕಿದೆ ನನಗಷ್ಟೇ ಸಾಕು “ಎಂದು ಒಮ್ಮೆ ಉತ್ತರಿಸಿದ್ದರು.

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:   http://www.surahonne.com/?p=31491


-ಕೆ ಎನ್ ಮಹಾಬಲ

(ಕೆ ಎಸ್ ನ ಪುತ್ರ, ಬೆಂಗಳೂರು)

2 Responses

  1. ನಯನ ಬಜಕೂಡ್ಲು says:

    ಇದ್ದುದರಲ್ಲಿ ತೃಪ್ತಿ ಹೊಂದುವ ಭಾವವೇ ಕವಿವರ್ಯರನ್ನು ಎತ್ತರದ ಸ್ಥಾನದಲ್ಲಿ ಇರಿಸುತ್ತದೆ. ಕೆ. ಎಸ್. ನ ಅವರಬದುಕಿನ ಪ್ರತಿಯೊಂದು ನಡೆಯೂ ಸಹಜತೆಯಿಂದ ಕೂಡಿತ್ತು ಅನ್ನುವುದಿಲ್ಲಿ ಸ್ಪಷ್ಟ.

  2. ಶಂಕರಿ ಶರ್ಮ says:

    ಜೀವನದಲ್ಲಿ ಬರುವ ಕಷ್ಟಗಳನ್ನು ಬಂದಂತೆಯೇ ಎದುರಿಸಿದ ಪೂಜ್ಯ ಕವಿಗಳ ಜೀವನಾನುಭವ ಅಗಣಿತ. ಜನರ ಪ್ರೀತಿಯ ಕವಿಗಳಿಗೆ ಸಮಾಜದಲ್ಲಿ ಉಚ್ಚಮಟ್ಟದ ಮನ್ನಣೆ ದೊರೆಯದುದು ಮಾತ್ರ ದುರಂತ ಎನ್ನಬಹುದು. ಲೇಖನ ಮಾಲೆಯು ಅದ್ಭುತವಾಗಿ ಮೂಡಿಬರುತ್ತಿದೆ. ಧನ್ಯವಾದಗಳು ಸರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: