ಪಾಶ್ಚಾತ್ಯ ಆಚರಣೆಗಳತ್ತ ಯುವ ಜನತೆ
“ಸರ್ವಜನಾಃ ಸುಖಿನೋಭವತು” ಎಂಬ ಮೂಲ ಮಂತ್ರವನ್ನು ಜಪಿಸುವ ರಾಷ್ಟ್ರ ಭಾರತ. “ವಸುದೈವ ಕುಟುಂಬ” ದ ಕಲ್ಪನೆಯಲ್ಲಿ, ಸಹೋದರತ್ವದ ನೆಲೆಯ ಮೇಲೆ ಕೂಡಿ ಬಾಳುತ್ತಿರುವ, ತನ್ನ ಸಂಸ್ಕೃತಿ-ಸಂಪ್ರದಾಯ, ಆಚಾರ-ವಿಚಾರ, ಜ್ಞಾನ-ವಿಜ್ಞಾನ, ತತ್ತ್ವಜ್ಞಾನ, ಪಾರಂಪರಿಕ ಹಿನ್ನೆಲೆ, ವಿವಿಧತೆಯಲ್ಲಿ ಏಕತೆಯ ಮೂಲಕ ವಿಶ್ವ ಗುರುವಾಗಿರುವ ಭಾರತ ದೇಶದಲ್ಲಿ ಹುಟ್ಟಿ ಬೆಳೆದು ಬಾಳುವ ನಾವುಗಳೇ ಪುಣ್ಯಶಾಲಿಗಳು.
ನಮ್ಮ ದೇಶವು ಅನಾದಿಕಾಲದಿಂದಲೂ ಪಾಶ್ಚಾತ್ಯ ದೇಶಗಳೊಡನೆ ಸಂಪರ್ಕವನ್ನು ಹೊಂದಿದ್ದು. ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ವಿಚಾರಗಳಲ್ಲಿ ಪ್ರಭಾವಕ್ಕೊಳಗಾಗಿದೆ. ಪಾಶ್ಚಾತ್ಯ ರಾಷ್ಟ್ರಗಳ ಮೇಲೆಯೂ ತನ್ನ ಪ್ರಭಾವವನ್ನು ಬೀರಿದೆ.
130 ಕೋಟಿಗೂ ಹೆಚ್ಚು ಜನಸಂಖ್ಯೆಯ ಹೊಂದಿರುವ ನಮ್ಮ ಭಾರತ ದೇಶದಲ್ಲಿ 56 ಕೋಟಿಗೂ ಹೆಚ್ಚು ಜನರು ಯುವ ಸಮುದಾಯವಿದ್ದು. ನಮ್ಮ ದೇಶದ ಭವ್ಯ ಪರಂಪರೆಯ ಸಂಸ್ಕೃತಿಯ ಹಬ್ಬ, ಹರಿದಿನ, ಜಾತ್ರೆ, ಜಯಂತಿ, ಆಚಾರ-ವಿಚಾರ, ಸಂಪ್ರದಾಯ-ಸಂಸ್ಕಾರದ ಆಚರಣೆಗಳ ಮರೆತ ಯುವ ಜನತೆಯು ಪಾಶ್ಚಾತ್ಯರ ಆಚರಣೆಗಳ ಪರಾಮರ್ಶಿಸದೇ, ಅನುಕರಣೀಯವಲ್ಲದ ಆಚರಣೆಗಳಾದ “ನ್ಯೂ ಇಯರ್, ವಾಲೆಂಟೈನ್ ಡೇ, ಫ್ರೆಂಡ್ಸ್ ಶಿಪ್ ಡೇ, ಬರ್ತ್ ಡೇ”, ಮುಂತಾದ ಡೇಗಳತ್ತ ವಾಲುತ್ತಿರುವುದು ದುರಂತದ ಸಂಗತಿ ಎನಿಸುತ್ತಿದೆ.
ಪ್ರಕೃತಿಯೇ ಹೊಸ ಉಡುಗೆ ತೊಟ್ಟು ಕಂಗೊಳಿಸುವ ಯುಗಾದಿಯಂದು ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಬೇವು ಬೆಲ್ಲ ಹೋಳಿಗೆ ಸವಿದು, ಚಂದ್ರದರ್ಶನ ಮಾಡಿ, ಹಿರಿಯರ ಕಾಲಿಗೆರಗಿ ಆರ್ಶೀವಾದ ಪಡೆದು ಖುಷಿ ಪಡಬೇಕಾದ ಯುವ ಜನತೆಯು ಪಾಶ್ಚಾತ್ಯರ ಆಚರಣೆಗಳ ಪ್ರಭಾವದಿಂದ ಕ್ಯಾಲೆಂಡರ್ ಬದಲಾವಣೆಯನ್ನೇ ನ್ಯೂ ಇಯರ್ ಎಂದು ಮಧ್ಯರಾತ್ರಿ ಮದ್ಯದ ಮತ್ತಿನಲ್ಲಿ, ತುಂಡುಡುಗೆಯಲ್ಲಿ ತೇಲಾಡುತ, ವಿಕೃತವಾಗಿ ಸಂಭ್ರಮಿಸುತ್ತಿರುವುದು ದುರಂತವಲ್ಲವೇ.
ಪರಸ್ಪರರನ್ನು ಪ್ರೀತಿಸುವುದಕ್ಕೇ ದಿನ ವಾರಗಳ ಲೆಕ್ಕವೇತಕೆ ಎನ್ನುವ ನಾವುಗಳೇ ಇಂದು ಪಾಶ್ಚಾತ್ಯ ಸಂಸ್ಕೃತಿಯ ಆಚರಣೆಗಳಿಂದಾಗಿ ಫೆಬ್ರವರಿ ತಿಂಗಳ ಎರಡನೇ ವಾರ ಆರಂಭವಾದೊಡನೆ ಚಾಕೊಲೇಟ್ ಡೇ, ಪ್ರೊಪೋಸ್ ಡೈ, ಹಗ್ ಡೇ, ಪ್ರಾಮಿಸ್ ಡೇ, ಕಿಸ್ ಡೇ, ಡಾಲ್ ಡೇ , ವಾಲೆಂಟೈನ್ ಡೇ ಅಂತ ಹಗಲಿರುಳು ಜಪಿಸುತ್ತ ಹಾದಿ ತಪ್ಪುತ್ತಿರುವುದು ವಿಷಾದನೀಯವಲ್ಲವೇ.
ಇನ್ನು ಬರ್ತ್ ಡೇ ಆಚರಣೆಯ ಸಂದರ್ಭದಲ್ಲಿ ಕ್ಯಾಂಡಲ್ ಹಚ್ಚಿ ಊದಿ ನಂದಿಸುವ, ಮುಖಕ್ಕೆ ಕೇಕ್ ಮೆತ್ತುವುದು. ಬರ್ತ್ ಡೇ ಸೆಲೆಬ್ರೆಷನ್ ಅಂತ ಹೇಳಿ ಗುಂಡು ತುಂಡು ಪಾರ್ಟಿ ಮಾಡುವ ಯುವ ಜನತೆಯು ಹುಟ್ಟು ಹಬ್ಬದ ದಿನದ ನಿಜವಾದ ಆಚರಣೆ ಮರೆತಿರುವುದು ದುರಂತ.
ಪಾಶ್ಚಾತ್ಯರ ಪ್ರತಿಯೊಂದು ಆಚರಣೆಗಳ ಹಿಂದಿರುವ ನಿಜಾಂಶವನ್ನು ಅರಿತು ಆಚರಿಸಬೇಕಾದ ನಾವುಗಳಿಂದು, ಪಾಶ್ಚಾತ್ಯರ ಕೊಳ್ಳುಬಾಕತನ, ಲಾಭಕೋರತನದ ಸಾಂಕ್ರಾಮಿಕ ರೋಗಕ್ಕೆ ಬಲಿಪಶುಗಳಾಗಿ ಅವರ ವ್ಯಾಪಾರೀಕರಣ, ಜಾಹೀರಾತುಗಳ ಹುನ್ನಾರವರಿಯದೇ ಪಾಶ್ಚಾತ್ಯ ಸಂಸ್ಕೃತಿಯೇ ಶ್ರೇಷ್ಠವೆಂಬ ಭ್ರಮೆಯಲ್ಲಿ ಮುಳುಗಿ, ಪೌರಾತ್ಯ, ಸನಾತನ ಸಂಸ್ಕೃತಿಯ ಮರೆತು ಯುವ ಜನತೆಯು ಹಾದಿ ತಪ್ಪುತ್ತಿರುವುದು ಮೂರ್ಖತನವೆನ್ನಬಹುದು.
ಮೊದಲು ನಮ್ಮತನವನ್ನು ನಾವು ಅರಿತುಕೊಂಡು ಉಳಿಸಿ ಬೆಳೆಸಬೇಕಾಗಿದೆ. ಪಾಶ್ಚಾತ್ಯರ ಆಚರಣೆಗಳ ಅನುಕರಣೆಗಳನ್ನು ಅಂಧಾನುಕರಣೆಗಳನ್ನಾಗಿ ಮಾಡಿಕೊಂಡು ಆಚರಿಸುವ ಬದಲಾಗಿ ನಮ್ಮ ಸಂಸ್ಕೃತಿ ಸಂಪ್ರದಾಯ ಸಂಸ್ಕಾರದ ಆಚರಣೆಗಳನ್ನು ನಾವು ಹೆಮ್ಮೆಯಿಂದ ಆಚರಿಸುವ ಮೂಲಕ ನಾವು ನಾವಾಗಿಯೇ ಉಳಿಯಬಹುದೆಂದನ್ನು ನಮ್ಮ ಯುವ ಜನತೆಯ ಅರಿಯಬೇಕಾಗಿದೆ.
-ಶಿವಮೂರ್ತಿ.ಹೆಚ್ , ದಾವಣಗೆರೆ.
ಹಾ ನೀವು ಹೇಳಿರುವುದು ತುಂಬಾ ಆಪ್ತವಾಗಿದೆ.ಆದರೆ ಅದರಂತೆ ಆಚರಣೆಗೆ ತರುವವರು ಎಷ್ಟು ಮಂದಿ.ಹಾಗೇನಾದರೂ ತಿಳಿಸಿ ಹೇಳಲು ಹೊರಟವರೇ ಓಬೀರಾಯನ ಕಾಲದವರೆಂದು ಬಿರುದು.ಒಟ್ಟಾರೆ ನಿಮ್ಮ ಲೇಖನ ಓದಿದ ನನಗೆ ಹೀಗನ್ನಿಸಿದ್ದು . ಅಭಿನಂದನೆಗಳು ಸಾರ್
ತುಂಬಾ ಚೆನ್ನಾಗಿ ಬರೆದಿದ್ದೀರಿ ಸರ್ ನಮ್ಮ ಸಂಸ್ಕೃತಿ ಸಂಸ್ಕಾರ ಹಾಗೂ ಯುವ ಜನತೆ ವಾಲುತ್ತಿರುವ ಪಾಶ್ಚಾತ್ಯ ಆಚರಣೆಗಳ ಕುರಿತಾಗಿ.
ಪಾಶ್ಚಾತ್ಯರಿಂದ, ನಿಯಮ ಪಾಲನೆ, ಸ್ವಚ್ಛತೆ ಇತ್ಯಾದಿ ಒಳ್ಳೆಯ ಕ್ರಮಗಳನ್ನು ಪಡೆಯದೆ, ಸ್ವೇಚ್ಛಾಚಾರವನ್ನು ಮಾತ್ರ ಪಾಲಿಸಲು ಹಾತೊರೆಯುತ್ತಿರುವುದು ನಿಜಕ್ಕೂ ಖೇದಕರ. ಕಣ್ತೆರೆಸುವ ಸೊಗಸಾದ ಲೇಖನ ಸರ್.