ಹಳದಿ ಹಸು
ಹೊಸ ವರುಷ ಬಂದಿತು
ಹಬ್ಬವ ಜೊತೆಗೇ ತಂದಿತು
ಸುಗ್ಗಿಯ ಹುಗ್ಗಿಯ ಹಬ್ಬ
ಎಲ್ಲರೂ ನಲಿಯುವ ಹಬ್ಬ
ಇದೇ ಸಂಕ್ರಾಂತಿ ಹಬ್ಬ
ರೈತರು ಕುಣಿಯುವ ಹಬ್ಬ
ಕಿಚ್ಚು ಹಾಯುವ ಹಬ್ಬ
ಬೆಚ್ಚುವ ಹಸು ಅಬ್ಬ!
ಸಂಕ್ರಾಂತಿ ಎಲ್ಲರಿಗೂ ಇಷ್ಟವಾದ ಹಬ್ಬ. ಆ ದಿನ ಚಿಕ್ಕ ಹೆಣ್ಣು ಮಕ್ಕಳಗಂತೂ ವಿಶೇಷ ಸಂಭ್ರಮ. ಬೆಳಿಗ್ಗೆ ಎಲ್ಲರೂ ಹುಗ್ಗಿಯನ್ನು ತಿನ್ನುತ್ತಾರೆ. ಸಿಹಿಯಾದ ಹುಗ್ಗಿ ಬಲು ರುಚಿ. ನಂತರ ಹೊಸ ಬಟ್ಟೆ ಧರಿಸಿ ಎಳ್ಳು ಬೀರುತ್ತಾರೆ. ಬಣ್ಣಬಣ್ಣದ ಬಟ್ಟೆ ಹಾಕಿಕೊಂಡು ಓಡಾಡುವ ಮಕ್ಕಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಕರ್ನಾಟಕದ ಅನೇಕ ಭಾಗಗಳಲ್ಲಿ ಈ ಸಂಪ್ರದಾಯ ಇದೆ. ಬೇರೆ ರಾಜ್ಯಗಳಲ್ಲಿ ಎಳ್ಳು ಬೀರುವ ಸಂಪ್ರದಾಯ ಇಲ್ಲ. ಎಲ್ಲ ಕಡೆ ಹೊಸ ಬೆಳೆ ಬಂದಿದೆ ಎಂದು ರೈತರು ಸಂತೋಷದಿಂದ ಸಂಭ್ರಮಿಸುವ ಹಬ್ಬ ಸಂಕ್ರಾಂತಿ. ತಮಿಳುನಾಡಿನಲ್ಲಿ ಸಂಕ್ರಾಂತಿಯನ್ನು ಪೊಂಗಲ್ ಎಂದು ಕರೆಯುತ್ತಾರೆ. ಮೂರು ದಿನಗಳ ಹಬ್ಬವಾಗಿ ಆಚರಿಸುತ್ತಾರೆ.
ಪೂಜಾ ಮತ್ತು ಪ್ರಿಯ ಇಬ್ಬರೂ ಅವಳಿ ಜವಳಿ ಮಕ್ಕಳು. ಸಂಕ್ರಾಂತಿಗೆ ಮೊದಲೇ ಅವರಮ್ಮ ಇಬ್ಬರಿಗೂ ಒಂದೇ ರೀತಿಯ ಹೊಸ ಲಂಗಗಳನ್ನು ಹೊಲಿಸಿದ್ದರು. ಕೆಂಪು ಜರತಾರಿ ಲಂಗಕ್ಕೆ ಹಸಿರು ಬಣ್ಣದ ರವಿಕೆ. ರವಿಕೆಯ ಮೇಲೆ ಕೆಂಪು ಮತ್ತು ಗುಲಾಬಿ ಬಣ್ಣದ ಗಿಳಿಗಳು. ಗಿಳಿಗಳ ಕಸೂತಿಯನ್ನು ಅಮ್ಮನೇ ಹಾಕಿದ್ದರು. ಮಧ್ಯಾಹ್ನ ಮೂರು ಗಂಟೆ ಆಗುವುದೇ ತಡ ಪೂಜಾ, ಪ್ರಿಯ ಇಬ್ಬರೂ ಅಮ್ಮನನ್ನು ಪೀಡಿಸತೊಡಗಿದರು. ಅಮ್ಮ ನಮಗೆ ಬೇಗ ಡ್ರೆಸ್ ಮಾಡು, ನಾವು ಎಳ್ಳು ಬೀರಲು ಹೋಗುತ್ತೇವೆ ಎಂದು. ಅಮ್ಮ ಹಿಂದಿನ ದಿನವೇ ಎಲ್ಲ ತಯಾರಿ ಮಾಡಿಕೊಂಡಿದ್ದರು. ಅಷ್ಟರಲ್ಲಿ ಅಮ್ಮ ‘ಸ್ವಲ್ಪ ಕೆಲಸ ಇದೆ ಮಕ್ಕಳೇ, ಮುಗಿಸಿ ಬರುತ್ತೇನೆ’ ಎಂದರು. ಅಮ್ಮ ಬಂದು ಇಬ್ಬರಿಗೂ ಹೊಸ ಬಟ್ಟೆ ಹಾಕಿ, ಮ್ಯಾಚಿಂಗ್ ಬಳೆ, ಸರ ಎಲ್ಲವನ್ನೂ ತೊಡಿಸಿದರು. ಅಮ್ಮನೂ ಇವರ ಜೊತೆ ಹೋಗಲು ತಯಾರಾದರು. ಸ್ಕೂಟರನ್ನು ಹೊರಗೆ ತೆಗೆದರು. ಎಳ್ಳು ಬೀರಲು ಬೇಕಾದ ವಸ್ತುಗಳಾದ ಕಬ್ಬು, ಹಣ್ಣು, ಎಳ್ಳು ಎಲ್ಲವನ್ನೂ ಚೀಲದಲ್ಲಿಟ್ಟುಕೊಂಡು ಹೊರಟರು. ಇದನ್ನೆಲ್ಲಾ ನೋಡಲು ತಾತ, ಅಜ್ಜಿ ಗೇಟಿನ ಬಳಿ ಬಂದಿದ್ದರು. ಪೂಜಾ, ಪ್ರಿಯಾ ಅವರಿಬ್ಬರಿಗೂ ಕೈಯಾಡಿಸಿ ಬೈ ಹೇಳಿದರು.
ದಾರಿಯಲ್ಲಿ ಇವರ ಹಾಗೆಯೇ ಎಳ್ಳು ವಿನಿಮಯಕ್ಕೆ ಹೊರಟ ಕೆಲವು ಮಕ್ಕಳು ಕಾಣಿಸಿದರು. ಸ್ವಲ್ಪ ದೂರ ಹೋದ ಮೇಲ ಪೂಜಾಳಿಗೆ ವಿಚಿತ್ರ ಎನಿಸುವ ಹಾಗೆ ಒಂದು ದೃಶ್ಯ ಕಾಣಿಸಿತು. ಅಮ್ಮಾ! ಅಲ್ಲಿ ನೋಡು, ಹಳದಿ ಬಣ್ಣದ ಹಸು! ಎಂದು ಪೂಜಾ ಕೂಗಿದಳು. ಪ್ರಿಯಾ ಕೂಡ ‘ನೋಡಮ್ಮಾ, ಹೇಗಿದೆ ಹಳದಿ ಹಸು!’ ಎಂದು ದನಿಗೂಡಿಸಿದಳು. ಅಮ್ಮನಿಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ‘ಸಂಕ್ರಾಂತಿಯಲ್ಲಿ ಗೋವಿಗೆ ಮೈತೊಳೆದು ಪೂಜೆ ಮಾಡಲಾಗುತ್ತದೆ. ಆ ಸಮಯದಲ್ಲಿ ಮೈಗೆಲ್ಲಾ ಅರಿಶಿನ ಹಚ್ಚುತ್ತಾರೆ. ಆದ್ದರಿಂದ ಹಸು ಹಳದಿಯಾಗಿ ಕಾಣಿಸುತ್ತದೆ ಎಂದು ಅಮ್ಮ ಹೇಳಿದರು. ‘ಅರಿಶಿನ ಅಂದರೆ ಏನಮ್ಮ? ಅದು ಹೇಗಿರುತ್ತದೆ?’ ಪ್ರಿಯ ಅಮ್ಮನನ್ನು ಕೇಳಿದಳು. ‘ಪುಟ್ಟಿ, ಅಡಿಗೆ ಮನೆಯಲ್ಲಿ ಅಡುಗೆಗೆಲ್ಲಾ ಹಾಕುತ್ತೇವಲ್ಲ, ಹಳದಿ ಬಣ್ಣವನ್ನು ಕೊಡುತ್ತದಲ್ಲ. ಅದೇ ಅರಿಶಿನ ಪುಡಿ’ ಅಮ್ಮ ಹೇಳಿದರು. ಯಾರಾದರೂ ಮನೆಗೆ ಬಂದಾಗ, ಪೂಜೆ ಮಾಡುವಾಗಲೂ ಅರಿಶಿನ ಕೊಡುತ್ತೀಯಾ ಅಲ್ಲವೇ ಅಮ್ಮ?’ ಪೂಜಾ ಕೇಳಿದಳು. ‘ಹೌದು ಮರಿ’ ಅಂದಳು ಅಮ್ಮ. ಅಷ್ಟರಲ್ಲಿ ಅಮ್ಮನ ಗೆಳತಿಯ ಮನೆಯ ಮುಂದೆ ಸ್ಕೂಟರ್ ನಿಂತಿತ್ತು. ಎಲ್ಲರೂ ಇಳಿದು ಎಳ್ಳು ಬೀರಲು ಮನೆಯ ಒಳಗೆ ನಡೆದರು. ಸಂಭ್ರಮದಿಂದ ಪೂಜಾ, ಪ್ರಿಯ ಎಳ್ಳು ಬೀರಿದರು.
ಅಲ್ಲಿಂದ ಮುಂದಕ್ಕೆ ಹೊರಟರು. ಸ್ವಲ್ಪ ದೂರ ಹೋಗುವಷ್ಟರಲ್ಲಿ ‘ಇನ್ನೊಂದು ಹಳದಿ ಹಸು’ ಎಂದು ಪ್ರಿಯಾ ತೋರಿಸಿದಳು. ಕಪ್ಪು ಚುಕ್ಕಿಗಳಿದ್ದ ಬಿಳಿ ಹಸು ಈಗ ನೋಡಿದರೆ ಕಪ್ಪು ಚುಕ್ಕಿಗಳ ಹಳದಿ ಹಸುವಾಗಿ ಕಾಣುತ್ತಿತ್ತು. ಅಮ್ಮ ಮತ್ತೆ ಅರಿಶಿನದ ಬಗ್ಗೆ ಹೇಳತೊಡಗಿದಳು. ಅರಿಶಿನಕ್ಕೆ ಬೇರೆ ಪದಾರ್ಥ ಅಥವಾ ರಾಸಾಯನಿಕವನ್ನು ಸೇರಿಸಿ ಕಲಬೆರಕೆ ಮಾಡುತ್ತಾರೆ. ಮೆಟಾನಿಲ್ ಎಲ್ಲೋ ಎನ್ನುವ ರಾಸಾಯನಿಕವನ್ನು ಬೆರಕೆ ಮಾಡುತ್ತಾರೆ. ಇದು ವಿಷಕಾರಿ ಮತ್ತು ಕ್ಯಾನ್ಸರ್ ಕಾಯಿಲೆಯನ್ನು ಉಂಟು ಮಾಡುತ್ತದೆ. ‘ಆದ್ದರಿಂದಲೇ ಅರಿಶಿನವನ್ನು ಕೊಳ್ಳುವಾಗ ಹುಷಾರಾಗಿರಬೇಕು’ ಎಂದು ಅಮ್ಮ ಹೇಳಿದಳು. ‘ಹಸುವಿಗೆ ವಿಷಕಾರಿ ಅಲ್ಲವೇನಮ್ಮ? ಪಾಪ’ ಎಂದಳು ಪೂಜಾ. ‘ಹೌದು, ಮಗಳೇ ಅದಕ್ಕೂ ವಿಷ ಇದು ಹಾಲಿನಲ್ಲಿಯೂ ಸೇರಬಹುದು. ಅದನ್ನು ನಾವೆಲ್ಲ ಕುಡಿಯುತ್ತೇವೆ’ ಯೋಚನೆ ಮಾಡು’ ಅಂದಳು ಅಮ್ಮ. ಹಳದಿ ಹಸಿರ ನೋಡಲು ಚೆನ್ನಾಗಿದೆ. ಆದರೆ ಕಲಬೆರಕೆ ಇಲ್ಲದ ಅರಿಶಿನ ಉಪಯೋಗಿಸಬೇಕು. ‘ನಾವು ತಿನ್ನುವ ಪದಾರ್ಥಗಳಿಗೂ ಬಣ್ಣ ಹಾಕುತ್ತಾರ ಅಮ್ಮ? ಎಂದು ಪ್ರಿಯ ಕೇಳಿದಳು. ‘ಹೌದು ಮರಿ, ಜಿಲೇಬಿ, ಜಹಾಂಗೀರ್, ಜ್ಯೂಸ್‌ಗಳು ಇವುಗಳಿಗೆಲ್ಲಾ ಬಣ್ಣ ಹಾಕುತ್ತಾರೆ. ಆದರೆ ವಿಷಕಾರಿಯಲ್ಲದ್ದನ್ನು ಹಾಕಬೇಕಷ್ಟೆ ಅಮ್ಮ ಉತ್ತರಿಸಿದಳು. ತಿನ್ನುವಾಗ ನಾವು ಉಷಾರಾಗಿರಬೇಕು. ಎಲ್ಲೆಂದರಲ್ಲಿ ಕೊಳ್ಳಬಾರದು. ಇಷ್ಟರಲ್ಲಿ ಪೂಜಾ ಪ್ರಿಯ ಅವರ ಗೆಳತಿ ಮೇಘನಾ ಮನೆ ಎದುರಾಯಿತು. ಮೇಘನ ಹೊಸ ಫ್ರಾಕ್ ಧರಿಸಿ ಹೊರಗೇ ನಿಂತಿದ್ದಳು. ಪೂಜಾ, ಪ್ರಿಯ ಓಡುತ್ತ ಅವಳ ಬಳಿಗೆ ಹೋದರು. ಎಲ್ಲರ ಮನೆಗೂ ಎಳ್ಳು ಬೀರಿ ಬರುವಷ್ಟರಲ್ಲಿ ಕತ್ತಲಾಗಿತ್ತು.
ಅಜ್ಜಿ, ತಾತ ಇವರಿಗೇ ಕಾಯುತ್ತಿದ್ದರು. ಅಪ್ಪ ಕೂಡ ಬಂದಿದ್ದರು. ಅಜ್ಜಿ ಇಬ್ಬರಿಗೂ ದೃಷ್ಟಿ ತೆಗೆದರು. ಅಜ್ಜಿ ನಾವೇನು ನೋಡಿದೆವು ಗೊತ್ತಾ? ಎಂದು ಪೂಜಾ ಹೇಳಿದಾಗ, ಪ್ರಿಯ ‘ಹಳದಿ ಹಸು, ನೋಡಿದ್ವಿ ಅಜ್ಜಿ’ ಎಂದು ಹೇಳಿದಳು. ಅದಕ್ಕೆ ಅಜ್ಜಿ ‘ಹೌದು ಅರಿಶಿನ ಹಚ್ಚುತ್ತಾರೆ’ ಎಂದರು. ಆದರೆ ಒಳ್ಳೆಯ ಅರಿಶಿನ ಹಚ್ಚಬೇಕು ಅಜ್ಜಿ, ಇಲ್ಲದಿದ್ದರೆ ಅಪಾಯ’ ಎಂದು ಅಮ್ಮ ಹೇಳಿದರು ಎಂದಳು ಪ್ರಿಯ. ‘ಹಾಗೇನಾ? ನನಗೆ ಗೊತ್ತಿರಲಿಲ್ಲ ! ಅಂದರು ಅಜ್ಜಿ. ‘ನಾಳೆ ಹಾಲಿನ ಹುಡುಗ ಅಶ್ವತ್ಥನಿಗೆ ಹೇಳುತ್ತೇನೆ ಎಂದರು. ‘ಹೌದಜ್ಜಿ, ಪ್ಲೀಸ್ ಹೇಳಿ’ ಎಂದರು ಪೂಜಾ ಮತ್ತು ಪ್ರಿಯ.
-ಡಾ ಎಸ್ ಸುಧಾ ರಮೇಶ್, ಮೈಸೂರು
Creative, novel
Very informative .
ಉಪಯುಕ್ತ ಮಾಹಿತಿಯನ್ನು ಒಳಗೊಂಡ ಲೇಖನ.ಅಭಿನಂದನೆಗಳು ಮೇಡಂ.
ಕಾಳಜಿ ತುಂಬಿದ, ಹಬ್ಬದ ಸಡಗರ ತುಂಬಿರುವ ಬರಹ. ಚೆನ್ನಾಗಿದೆ
ಸಂಕ್ರಾಂತಿ ಹಬ್ಬದ ಸಂಭ್ರಮದ ಜೊತೆಗೆ ಪ್ರಾಣಿಗಳ ಬಗೆಗಿನ ಕಾಳಜಿಯನ್ನು ಹೊಂದಿರುವ ಸೊಗಸಾದ ಲೇಖನ..ಧನ್ಯವಾದಗಳು ಮೇಡಂ.
ಚೆನ್ನಾಗಿದೆ