ಇವು ಬರೀ ಚಿಲ್ಲರೆ ವಿಷಯಗಳಲ್ಲ!
ನನ್ನವಳು ದಿನಸಿ ಸಾಮಾನುಗಳನ್ನು ತರಲು ಹೇಳಿದ್ದಳು. ಆ ದಿನ ಶೆಟ್ಟರ ಅಂಗಡಿಗೆ ಹೊರಟಾಗ ಅಪ್ಪಾ ನಾನೂ ಬರ್ತೀನೆಂದು ಮಗಳು ಜೊತೆಯಾದಳು. ನನ್ನವಳು ಪಟ್ಟಿ ಮಾಡಿಕೊಟ್ಟಿದ್ದ ಎಲ್ಲವನ್ನೂ ಕೊಂಡ ನಂತರ ಕೊನೆಯಲ್ಲಿ ಶೆಟ್ಟರಿಗೆ ಹಣವನ್ನು ಕೊಟ್ಟು, ಮಗಳಿಗಿಷ್ಟದ ಚಾಕೊಲೇಟನ್ನು ಮಗಳ ಕೈಗಿಟ್ಟೆ. ಚಾಕೊಲೇಟ್ ಸಿಗುತ್ತಲೇ ‘ಬಾರಪ್ಪ ಮನೆಗೆ ಹೋಗೋಣ’ವೆಂದು ಅವಸರಿಸಿದಳು. ‘ಇರಮ್ಮ ಚಿಲ್ಲರೆ ಹಣ ಪಡೆದು ಹೋಗೋಣ’ವೆಂದು ಹೊರಟು ನಿಂತವಳನ್ನು ತಡೆದೆ. ಶೆಟ್ಟರು ಹತ್ತಿಪ್ಪತ್ತರ ನೋಟುಗಳನ್ನ ಎಣಿಸಿ ಚಿಲ್ಲರೆ ಹಣವನ್ನು ಕೈಗಿಟ್ಟರು. ನಾನು ಕಿಸೆಗೆ ತುರುಕಿಕೊಂಡು ಹೊರಟು ನಿಂತೆ. ಮಗಳು ‘ಎಲ್ಲಪ್ಪಾ ಅವರು ಚೇಂಜ್ ಕೊಡಲೇ ಇಲ್ಲ’ ಎಂದಳು. ‘ಕೊಟ್ಟಿದ್ದಾರಲ್ಲ, ಇಲ್ನೋಡು’ ನಾನು ಕಿಸೆಯಲ್ಲಿಟ್ಟ ಹತ್ತಿಪ್ಪತ್ತರ ನೋಟುಗಳನ್ನ ಹೊರಗೆಳೆದು ತೋರಿಸಿದೆ. ‘ಅಯ್ಯೋ ದಡ್ಡ ಅಪ್ಪ, ಚೇಂಜ್ ಅಂದ್ರೆ ಹೀಗಿರಲ್ಲ; ರೌಂಡಾಗಿರುತ್ತೆ, ಸರ್ಕಲ್ ತರ’ ಎಂದು ಹೇಳುತ್ತಲೇ ‘ಹೀಗೆಂದು’ ತನ್ನ ಪುಟ್ಟ ಬೆರಳಿನಿಂದ ಗಾಳಿಯಲ್ಲಿ ಸಣ್ಣ ವೃತ್ತವನ್ನು ಬರೆದು ತೋರಿಸಿದಳು.
ಒಂದೆರಡು ನಿಮಿಷದ ನಂತರ ಮಗಳು ಏನು ಹೇಳುತ್ತಿದ್ದಾಳೆಂದು ಅರ್ಥವಾಯಿತು. ನಮಗೆ ಹತ್ತಿಪ್ಪತ್ತು ರೂಪಾಯಿಗಳು ಸಹ ಚೇಂಜ್ ಅಂದರೆ ಚಿಲ್ಲರೆ. ಐನೂರು ರೂಪಾಯಿಯ ನೋಟಿಗೆ ಐವತ್ತು ನೂರು ರೂಗಳ ನೋಟುಗಳು ಸಹ ಚೇಂಜ್ ಅಥವಾ ಚಿಲ್ಲರೆ! ಎರಡು ಸಾವಿರದ ನೋಟಿನ ಎದುರು ನಾಲ್ಕು ಐನೂರು ರೂಪಾಯಿ ನೋಟುಗಳು ಸಹ ಚಿಲ್ಲರೆ!! ಆದರೆ ಮಗಳ ಲೆಕ್ಕವೇ ಬೇರೆ. ಅದು ಹತ್ತು ಇಪ್ಪತ್ತು ರೂಪಾಯಿಯ ನೋಟೆ ಆಗರಲಿ ಅದು ನೋಟಷ್ಟೇ. ನೋಟು ನೋಟೆ! ಒಂದು ಎರಡು ಐದು ರೂಪಾಯಿಯ ಯಾವುದೇ ನಾಣ್ಯವಿದ್ದರು ಅದು ಚಿಲ್ಲರೆ. ಯಾವುದೇ ನೋಟಾದರೂ ಅದು ನೋಟಷ್ಟೇ. ಮತ್ತು ನಾಣ್ಯಗಳು ಮಾತ್ರವೇ ಚಿಲ್ಲರೆ. ಈಗ ಹೇಳಿ ಯಾರ ಲೆಕ್ಕ ಸರಿ?
ಮಗಳು ಇಷ್ಟೆಲ್ಲ ಹೇಗೆ ಕಲಿತಳೆಂದರೆ, ಮೇಲಿನ ಚಿಲ್ಲರೆ ಘಟನೆ ನಡೆಯುವ ಎರಡು ವಾರಗಳ ಮೊದಲಷ್ಟೇ ಮಗಳಿಗೆ ‘ಕಾಯಿನ್ ಬ್ಯಾಂಕ್’ ತಂದುಕೊಟ್ಟಿದ್ದೆ. ಅಪ್ಪ ಅಮ್ಮ ಅಜ್ಜ ಎಲ್ಲರಿಂದಲೂ ಬೆಳಗ್ಗೆ ಮಧ್ಯಾಹ್ನ ಸಂಜೆ ಎನ್ನದೇ ಮೂರು ಹೊತ್ತು ನಾಣ್ಯಗಳನ್ನು ಕೇಳಿ ಕೇಳಿ ಪಡೆದು ಒಂದೇ ವಾರದಲ್ಲಿ ಅವಳ ಪುಟ್ಟ ಕಾಯಿನ್ ಬ್ಯಾಂಕನ್ನು ತುಂಬಿಸಿಕೊಂಡಳು. ಆ ಸಮಯದಲ್ಲಿ ನೋಟುಗಳನ್ನು ಕೊಡುವಂತೆ ಕೇಳುತ್ತಿದ್ದಳು. ಆದರೆ ಚಿಲ್ಲರೆ ಜೊತೆಯಲ್ಲಿ ನೋಟುಗಳನ್ನು ಹಾಕಿ ತುಂಬಿಸಿದರೆ, ಕೊನೆಯಲ್ಲಿ ಹಣವನ್ನು ಹೊರಗೆ ತೆಗೆಯುವಾಗ ನೋಟುಗಳು ಹರಿಯುವ ಸಂಭವವಿತ್ತು. ಆದ್ದರಿಂದ ಅಮ್ಮ ಮಗಳಿಗೆ ಹೀಗೆ ಹೇಳಿಕೊಟ್ಟಳು. “ನೋಡು ಜಾಣೆ, ಇದು ಕಾಯಿನ್ ಬ್ಯಾಂಕ್. ಅಂದ್ರೆ ಕಾಯಿನ್ ಅಷ್ಟೇ ಹಾಕ್ಬೇಕು. ನೋಟುಗಳನ್ನ ಹಾಕಿದ್ರೆ ಹೊರಗೆ ತೆಗೆಯುವಾಗ ನೋಟುಗಳೆಲ್ಲ ಹರಿದುಹೋಗುತ್ತವೆ. ಆಮೇಲೆ ಇವನ್ನೆಲ್ಲ ಯಾರೂ ತಗೊಳ್ಳೋದಿಲ್ಲ. ನಿನಗೆ ಚಾಕೊಲೇಟ್ ಕೊಡಿಸುವುದಕ್ಕೂ ನಮ್ಮ ಬಳಿ ಹಣ ಇರುವುದಿಲ್ಲ. ಇನ್ಮೇಲೆ ಚೇಂಜು ಚಿಲ್ಲರೆ ಮಾತ್ರ ಇಸ್ಕೊಂಡು ಇದಕ್ಕೆ ಹಾಕ್ಬೇಕು. ನೋಟುಗಳನ್ನೆಲ್ಲ ಕೇಳಬಾರದು”. ಅಮ್ಮನ ಇದೊಂದು ಮಾತು ಸಾಕಾಯ್ತು. ದುಂಡಗಿರುವ ನಾಣ್ಯಗಳು ಮಾತ್ರವೇ ಚೇಂಜ್ ಅಥವಾ ಚಿಲ್ಲರೆ ಎಂದು ಮಗಳು ನಂಬಲು.
ಚಿಲ್ಲರೆ ಎಂದಾಗ ನನ್ನ ಮನಸ್ಸಿನಲ್ಲಿ ಹಸಿರಾಗಿ ಉಳಿದಿರುವ ಮೂರ್ನಾಲ್ಕು ಘಟನೆಗಳು ನೆನಪಿಗೆ ಬರುತ್ತವೆ. ನನ್ನ ಪ್ರಾಥಮಿಕ ಶಿಕ್ಷಣವೆಲ್ಲ ಕಳೆದದ್ದು ನನ್ನಮ್ಮನ ತವರುಮನೆಯಲ್ಲಿ. ಅಮ್ಮನ ಚಿಕ್ಕಪ್ಪ ಒಬ್ಬರಿದ್ದರು. ನಾವು ‘ಯೋಗಪ್ಪ ತಾತಾ’ ಅಂತಿದ್ದೆವು. ಆ ಯೋಗಪ್ಪ ತಾತ ನಮ್ಮ ಕೈಗೆ ಹಣ ಕೊಟ್ಟು, ‘ಒಂದು ಕಟ್ಟು ನಂದಿ ಬೀಡಿ ಒಂದು ಬೆಂಕಿಪಟ್ಣ. ಮಿಕ್ಕಿದ ಚಿಲ್ಲರೆಗೆ ನೀವು ಏನಾದ್ರು ತಗೊಳ್ಳಿ’ ಅಂತಿದ್ದರು. ಸಿದ್ದನಾಯಕನ ಗಲ್ಲಿಯಿಂದ ಚಿಕ್ಕಪೇಟೆಯ ಶೆಟ್ಟರಂಗಡಿ ಸಿಗುವವರೆಗೂ ‘ಒಂದ್ ಕಟ್ಟು ನಂದಿ ಬೀಡಿ, ಒಂದ್ ಬೆಂಕಿಪಟ್ಣ. ಮಿಕ್ಕಿದ್ ಚಿಲ್ರೆಗೆ….’ ಮನಸ್ಸಿನಲ್ಲಿಯೇ ಹೀಗೆ ಹೇಳಿಕೊಂಡು ಹೋಗುತ್ತಿದ್ದೆ.
ಆಗೆಲ್ಲ ಐದು ಹತ್ತು ಇಪ್ಪತ್ತು ಪೈಸೆಗಳು ಚಲಾವಣೆಯಲ್ಲಿದ್ದ ಕಾಲ. ನಾಲ್ಕಾಣೆ ಎಂಟಾಣೆಗಳು ಸಹ ನಮಗೆ ದೊಡ್ಡ ಮೊತ್ತವೆ! ಇಪ್ಪತ್ತು ಪೈಸೆಗೊಂದು ಸ್ಪೆಷಲ್ ಬ್ರೆಡ್ ಸಿಗುತ್ತಿತ್ತು. ಇನ್ನೂ ಚಾಕೊಲೇಟ್ ಪೆಪ್ಪರಮೆಂಟ್ ಜೊತೆಗೆ ಆಟಿಕೆಗಳು ಉಡುಗೊರೆಯಾಗಿ ಸಿಗುತ್ತಿದ್ದ ಮಕ್ಕಳಿಗೆಂದೇ ಸಿದ್ಧಪಡಿಸಿದ ತಿನಿಸುಗಳು ಬೇಕಾದಷ್ಟಿದ್ದವು. ನಾವು ಖಾಯಂ ಗಿರಾಕಿಯಾದ್ದರಿಂದ ನಂದಿ ಬೀಡಿ ಬೆಂಕಿಪೊಟ್ಟಣ ಕೈಗಿಟ್ಟ ನಂತರ ಶೆಟ್ಟರು ಚಿಲ್ಲರೆಯನ್ನು ಕೊಡುವ ಬದಲು ಇನ್ನೇನ್ ಬೇಕೆಂದು ಕೇಳುತ್ತಿದ್ದರು. ನಾನು ಅಂಗಡಿಯಲ್ಲಿದ್ದ ಬ್ರೆಡ್ಡು, ಬಿಸ್ಕತ್ತು, ಪೆಪ್ಪರಮಿಂಟು, ಚಾಕೊಲೆಟ್, ಸಣ್ಣಪುಟ್ಟ ಆಟಿಕೆಗಳತ್ತ ಕೈತೋರಿಸುತ್ತಾ ‘ಅದೆಷ್ಟು? ಇದೆಷ್ಟು?’ ಎಂದು ಪ್ರಶ್ನಿಸಿ ಕೊನೆಗೆ ಉಳಿದ ಚಿಲ್ಲರೆಗೆ ಏನು ಬರುತ್ತೋ ಆ ತಿನಿಸನ್ನ ಕೊಂಡು ಮನೆಯತ್ತ ಹಿಂತಿರುಗುತ್ತಿದ್ದೆ.
ಆ ದಿನಗಳಲ್ಲಿ ಮಧುಗಿರಿಯಲ್ಲಿ ಶಂಕರ್ ಮತ್ತು ಶಾಂತಲಾ ಎಂಬ ಎರಡು ಚಿತ್ರಮಂದಿರಗಳಿದ್ದವು. (ಈಗಲೂ ಇವೆ) ಅಲ್ಲಿ ವಿಷ್ಟುವರ್ಧನ್, ಶಂಕರ್ ನಾಗ್, ಅಂಬರೀಶ್, ರವಿಚಂದ್ರನ್, ಪ್ರಭಾಕರ್, ಶಶಿಕುಮಾರ್ ಈ ನಟರುಗಳ- ಎಸ್. ಪಿ ಸಾಂಗ್ಲಿಯಾನ, ನ್ಯಾಯಕ್ಕಾಗಿ ನಾನು, ಕಲಿಯುಗ ಭೀಮ, ಲಯನ್ ಜಗಪತಿ ರಾವ್- ಇನ್ನೂ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇವೆ. ಅಮ್ಮ ಆಗಾಗ ನಮ್ಮನ್ನು ಸಿನಿಮಾಗಳಿಗೆ ಕರೆದುಕೊಂಡು ಹೋಗುತ್ತಿದ್ದಳು. ಹೆಚ್ಚಿನ ಸಲ ಸೆಕೆಂಡ್ ಕ್ಲಾಸ್ ಟಿಕೆಟ್ ಕೊಳ್ಳುತ್ತಿದ್ದಳು. ಬಾಲ್ಕನಿಗಿಂತಲೂ ಸೆಕೆಂಡ್ ಕ್ಲಾಸ್ ನಲ್ಲಿ ಕುಳಿತರೆ ನನಗೆ ಖುಷಿಯಾಗುತ್ತಿತ್ತು. ಆಗೆಲ್ಲ ಸಿನಿಮಾ ಎಂದರೆ ಜನರಿಗೆ ಅದೆಷ್ಟು ಅಭಿಮಾನ, ಅದೆಂಥಾ ಹುಚ್ಚು!! ಸಾಹಸದ ದೃಶ್ಯ ಹಾಡು ಇಲ್ಲವೇ ನಾಯಕನ ಅದ್ಭುತ ಸಂಭಾಷಣೆ ಬಂತೆಂದರೆ ಪ್ರೇಕ್ಷಕರು ಕಿಸೆಯಿಂದ ಚಿಲ್ಲರೆ ನಾಣ್ಯಗಳನ್ನ ತೆಗೆದು ಪರದೆ ಕಡೆಗೆ ಎಸೆಯುತ್ತಿದ್ದರು. ಜೊತೆಗೆ ಶಿಳ್ಳೆ, ಕೇಕೆ, ಚಪ್ಪಾಳೆ!! ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಬೀದಿ ಬೀದಿಗಳಲ್ಲಿ ಮುತ್ತು ರತ್ನಗಳನ್ನ ಮಾರುತ್ತಿದ್ದರಂತೆ. ಅಂತಹ ವೈಭವದ ದಿನಗಳನ್ನು ನೋಡಿದವರೇ ಪುಣ್ಯವಂತರು. ಆಗಿನ ಜನ ಸಿನಿಮಾವನ್ನ ಅದೆಷ್ಟು ಎಂಜಾಯ್ ಮಾಡುತ್ತಿದ್ದರು. ಈಗ ವಿಶ್ರಮಿಸಲು ಕುಳಿತವರಂತೆ, ಯಾವುದೇ ಭಾವೋದ್ವೇಗ ಇಲ್ಲದೇ ಸಿನಿಮಾ ನೋಡಲು ಕುಳಿತವರನ್ನು ಕಂಡಾಗೆಲ್ಲ, ಸಿನಿಮಾ ಪ್ರೇಕ್ಷಕರು ತೆರೆಗೆ ಚಿಲ್ಲರೆ ನಾಣ್ಯಗಳನ್ನು ಎಸೆಯುವ ಆ ದಿನಗಳನ್ನು ಕಂಡ ನಾನು ಸಹ ಒಂದು ರೀತಿಯಲ್ಲಿ ಪುಣ್ಯವಂತನೇ ಅನ್ನಿಸುತ್ತೆ. ಬಾಲ್ಕನಿಯಿಂದ ಎಸೆಯುತ್ತಿದ್ದ ಚಿಲ್ಲರೆ ನಾಣ್ಯಗಳು ಹಲವು ಸಲ ಸೆಕೆಂಡ್ ಕ್ಲಾಸ್ ನಲ್ಲಿ ಕುಳಿತ ನಮ್ಮ ಮೇಲೆ ಬೀಳುತ್ತಿದ್ದವು. ಹಾಗೆ ಬಿದ್ದ ಚಿಲ್ಲರೆ ನಾಣ್ಯಗಳನ್ನೆಲ್ಲ ನಾನು ಜೇಬಿಗಿಟ್ಟುಕೊಳ್ಳುತ್ತಿದ್ದೆ. ಮನೆಗೆ ಹಿಂತಿರುಗಿದ ನಂತರ ಆ ಚಿಲ್ಲರೆ ನಾಣ್ಯಗಳು ಶೆಟ್ಟರ ಅಂಗಡಿ ಸೇರುತ್ತಿದ್ದವು. ನನ್ನ ಮೈಮೇಲೆ ಬಿದ್ದ ನಾಣ್ಯಗಳನ್ನು ನಾನು ಜೇಬಿಗಿಟ್ಟುಕೊಂಡರೆ, ಅಕ್ಕಪಕ್ಕದವರು ಮಾತ್ರ ಮೇಲಿಂದ ತೂರಿಬಂದ ನಾಣ್ಯಗಳು ತಮ್ಮ ಮೇಲೆ ಬಿದ್ದಾಗ ಕಿಸೆಗಿಟ್ಟುಕೊಳ್ಳದೇ, ಪರೆದೆಯತ್ತ ಎಸೆಯುವುದರ ಮೂಲಕ ನಾಣ್ಯವನ್ನು ತೂರಿದ ಅಭಿಮಾನಿಯ ಅಭಿಲಾಷೆಯನ್ನು ಈಡೇರಿಸುತ್ತಿದ್ದರು. ಆದರೆ ಮಧ್ಯಂತರ ವಿರಾಮದಲ್ಲಿ ಪರದೆಯ ಮುಂದೆ ಬಿದ್ದಿದ್ದ ನಾಣ್ಯಗಳನ್ನೆಲ್ಲ ಇವು ತಮ್ಮ ಸ್ವತ್ತೆಂಬಂತೆ ಆ ಟಾಕೀಸಿನ ನೌಕರರು ಆಯ್ದುಕೊಳ್ಳುತ್ತಿದ್ದರು. ಇದನ್ನೆಲ್ಲ ನೋಡಿದ ನನಗಾಗ ಒಂದಾಸೆ ಹುಟ್ಟಿತ್ತು. ದೊಡ್ಡವನಾದ ಮೇಲೆ ನಾನು ಚಿತ್ರಮಂದಿರದಲ್ಲಿ ಕೆಲಸ ಮಾಡಬೇಕು. ಆಗ ಪ್ರತಿದಿನ ಹೀಗೆ ಪರದೆಯ ಮುಂದೆ ಬೀಳುವ ಚಿಲ್ಲರೆಗಳನ್ನೆಲ್ಲ ಆಯ್ದುಕೊಳ್ಳಬಹುದು. ಅದರಿಂದ ಶೆಟ್ಟರ ಅಂಗಡಿಯಲ್ಲಿ ಸಾಕಷ್ಟು ತಿನಿಸುಗಳನ್ನು ಕೊಂಡು ತಿನ್ನಬಹುದೆಂದು ಯೋಚಿಸಿದ್ದೆ.
ಮೊಳೆತ ಬೀಜ ನಂತರ ಚಿಗುರಿ ಬೆಳೆದು ಮುಂದೊಂದು ದಿನ ಹೂ ಹಣ್ಣು ನೀಡಬಹುದು. ಬಾಲ್ಯದಲ್ಲಿ ಮೊಳೆತಿದ್ದ ಆ ಆಸೆಯೊಂದು ನನ್ನ ಯೌವನದಲ್ಲಿ ಈಡೇರಿತು. ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲೂ ಶಾಲೆಯಲ್ಲಿ ಮಾತ್ರವಲ್ಲದೆ, ಬಹಳ ಮುಖ್ಯವಾಗಿ ಹರೆಯದ ದಿನಗಳಲ್ಲಿಯೂ ಉತ್ತಮ ಗುರು ಇರಬೇಕು. ಸರಿಯಾದ ಮಾರ್ಗದರ್ಶನ ಬೇಕು. ಬಹುಶಃ ಅವೆರಡು ನನಗೆ ಸರಿಯಾದ ಸಮಯದಲ್ಲಿ ದೊರೆಯಲಿಲ್ಲ. ಆದ್ದರಿಂದ ಉತ್ತಮವಾಗಿ ಕಟ್ಟಿಕೊಳ್ಳಬೇಕಾದ ಬದುಕು ಹಾಳಾಯ್ತು ಅಂದುಕೊಳ್ಳುವುದರ ಜೊತೆಜೊತೆಗೆ ಆದರೇನು ನನ್ನ ಬದುಕು ಹಲವು ಅನುಭವಗಳಿಂದ ಕೂಡಿದ ವೈವಿಧ್ಯಮಯವೆಂಬ ಸಮಾಧಾನವು ನನಗಿದೆ.
ನನ್ನ ಯೌವನದ ಆರಂಭದ ದಿನಗಳಲ್ಲಿ ಬದುಕು ಹರಸುತ್ತಾ ಹೊರಟವನು ಅದೊಂದು ದಿನ ಬೆಂಗಳೂರಿನ ಮಡಿಲಿಗೆ ಬಿದ್ದೆ. ಹೆಚ್ಚೇನು ಓದಿಕೊಂಡಿರದ ನನಗೆ ಕರೆದು ಕೊಡುವಂತ ದೊಡ್ಡ ಉದ್ಯೋಗವಂತೂ ದೊರಕುವುದಿಲ್ಲವೆಂದು ನನಗೆ ತಿಳಿದಿತ್ತು. ಮತ್ತು ನನ್ನ ನೌಕರಿಯನ್ನು ನಾನೇ ಹುಡುಕಿಕೊಳ್ಳಬೇಕೆಂದು ನನ್ನನ್ನು ಜೊತೆಯಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋದವರಿಂದ ಗೊತ್ತಾಯ್ತು. ಈಗಿನಂತೆ ಬೆಂಗಳೂರಿನಲ್ಲಿ ಆಗಿನ್ನೂ ಕಾರ್ಖಾನೆಗಳು ಉದ್ಯಮಗಳು ಬೆಳೆದಿರಲಿಲ್ಲ. ಕೆಲಸ ಸಿಗುವುದು ಕಷ್ಟವೇ ಆಗಿತ್ತು. ಒಂದು ವಾರಗಳ ಕಾಲ ಫ್ಯಾಕ್ಟರಿಯ ಗೇಟುಗಳನ್ನು ನೋಡಿ ಬಂದಿದ್ದವನಿಗೆ ಅದೊಂದು ದಿನ ತೆಲುಗು ಸಿನಿಮಾದ ಪೋಸ್ಟರ್ ಕಣ್ಣಿಗೆ ಬಿತ್ತು. ಆ ಸಮಯದಲ್ಲಿ ನನಗೆ ವಿಪರೀತ ಸಿನಿಮಾ ಹುಚ್ಚಿತ್ತು. ಅಲ್ಲಿಯೇ ಇದ್ದ ಅಂಗಡಿಯವರ ಬಳಿ ಆ ಚಿತ್ರಮಂದಿರದ ವಿಳಾಸ ವಿಚಾರಿಸಿದೆ. ಆಟೋದಲ್ಲಿ ಅಥವಾ ಬಸ್ಸಿನಲ್ಲಿ ಹೋಗಬೇಕೆಂದರು. ನಾನು ಹಾದಿಯುದ್ದಕ್ಕೂ ವಿಳಾಸ ಕೇಳಿಕೊಂಡೆ ಆರೇಳು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಬಂದು ಅಂತಿಮವಾಗಿ ಥಿಯೇಟರ್ ಮುಂದಿದ್ದೆ. ಅದಾಗಲೇ ಸಿನಿಮಾ ಶುರುವಾಗಿತ್ತು. ಟಿಕೆಟ್ ಪಡೆದು ಪ್ರೇಕ್ಷಕರಲ್ಲಿ ನಾನು ಒಬ್ಬನಾದೆ. ಚಿತ್ರಮಂದಿರದೊಳಗೆ ಚಪ್ಪಾಳೆ ಕೇಕೆಗಳಿದ್ದವು, ಆದರೆ ಚಿಲ್ಲರೆ ಎಸೆಯುವ ಯಾರೊಬ್ಬರೂ ಇರಲಿಲ್ಲ. ನನ್ನ ಬಾಲ್ಯದ ದಿನಗಳು ನೆನಪಾದವು. ಚಿತ್ರಮಂದಿರದಲ್ಲಿ ಕೆಲಸಕ್ಕೆ ಸೇರಬೇಕೆಂದು ಬಯಸಿದ್ದು ನೆನಪಿಗೆ ಬಂತು.
ಸಿನಿಮಾ ಮುಗಿದು ಹೊರಬರುವಾಗ ಗೇಟಿನ ಬಳಿಯಿದ್ದವರ ಬಳಿ ಕೆಲಸದ ಕುರಿತು ವಿಚಾರಿಸಿದೆ. ಆ ಹುಡುಗ ನನ್ನನ್ನು ದಪ್ಪ ಮೀಸೆಯ ದಡೂತಿ ವ್ಯಕ್ತಿಯ ಬಳಿ ಕರೆದುಕೊಂಡು ಹೋದ. ಆ ದಪ್ಪ ಮೀಸೆಯ ವ್ಯಕ್ತಿ ‘ಸತೀ, ಲೋ ಸತೀ’ ಎಂದು ಕರೆದಾಗ ಒಬ್ಬಾತ ವಿನಮ್ರತೆಯಿಂದ ದಪ್ಪ ಮೀಸೆಯವನ ಎದುರಿಗೆ ನಿಂತ. ಇಬ್ಬರು ಪರಸ್ಪರ ತೆಲುಗಿನಲ್ಲಿ ಮಾತಾಡಿಕೊಂಡರು. ಅವರ ಸಂಭಾಷಣೆ ಅಲ್ಪಸ್ವಲ್ಪ ಅರ್ಥವಾಯ್ತು. ಬಾಲ್ಕನಿಯಲ್ಲಿ ಕೆಲಸ ಮಾಡುತ್ತಿದ್ದಾತ ಊರಿಗೆಂದು ಹೋದವನು ವಾಪಸ್ಸು ಬಂದಿರಲಿಲ್ಲ. ಬಾಲ್ಕನಿಗೆ ಇವನನ್ನು ಕೆಲಸಕ್ಕೆ ಸೇರಿಸಿಕೊಳ್ಳೋಣವೆಂದ ದಪ್ಪ ಮೀಸೆಯ ವ್ಯಕ್ತಿ ವಿನಮ್ರತೆಯಿಂದ ನಿಂತವನ ಬಳಿ ಕೇಳಿದ. ಆ ವಿನಮ್ರ ವ್ಯಕ್ತಿ ಹೊಸ ಹುಡುಗ ಎಂದು ಅನುಮಾನಿಸಿದ. ಎರಡು ದಿನ ಜೊತೆಗಿದ್ದು ಹೇಳಿಕೊಡೆಂದು ದಪ್ಪ ಮೀಸೆಯ ವ್ಯಕ್ತಿ ತಾಕೀತು ಮಾಡಿದ. ವಿನಮ್ರ ವ್ಯಕ್ತಿ ಆಯ್ತೆಂದು ತಲೆಯಾಡಿಸಿದ. ಅಂತೂ ಆ ದಿನ ನನ್ನ ಬಾಲ್ಯದಾಸೆಯೊಂದು ನೆರವೇರಿತು. ಟಾಕೀಸಿನಲ್ಲಿ ನನ್ನ ಪಾಲಿನ ಕೆಲಸವನ್ನು ಸತೀ ಎಂಬಾತ ಎರಡು ದಿನ ನನ್ನ ಜೊತೆಗಿದ್ದು ಹೇಳಿಕೊಟ್ಟ. ನಾನಲ್ಲಿ ಮಾಡಬೇಕಿದ್ದ ಕೆಲಸವಿಷ್ಟೇ. ಸಿನಿಮಾ ಶುರುವಾಗುವ ಮೊದಲು ಬಾಲ್ಕನಿಯ ಬಾಗಿಲಿನಲ್ಲಿ ನಿಂತು ಟಿಕೆಟ್ ಹರಿಯುವುದು. ಬೆಲ್ ಹೊಡೆಯುತ್ತಿದ್ದಂತೆ ಲೈಟುಗಳನ್ನ ಆರಿಸಿ, ಫ್ಯಾನುಗಳನ್ನು ಚಾಲೂ ಮಾಡಿ ಪರದೆ ಎಳೆದು ಬಾಗಿಲು ಮುಚ್ಚುವುದು. ತಡವಾಗಿ ಬರುತ್ತಿದ್ದವರಿಗೆ ಟಾರ್ಚ್ ಬೆಳಗಿಸಿ ಕುರ್ಚಿಯಲ್ಲಿ ಕೂರುವುದಕ್ಕೆ ದಾರಿ ತೋರಿಸುವುದು. ಇನ್ನುಳಿದ ಸಮಯವೆಲ್ಲ ಖಾಲಿ ಕುರ್ಚಿಯಲ್ಲಿ ಕುಳಿತು ಮೂರೊತ್ತು ಸಿನಿಮಾ ನೋಡುವುದು. ಅದೂ ಬೇಸರವಾದರೆ ಪ್ರೊಜೆಕ್ಟರ್ ರೂಮಿನಲ್ಲಿ ಆಪರೇಟರ್ ಜೊತೆ ಕುಳಿತು ಮಾತಾಡುವುದು. ಈಗಿನಂತೆ ಆಗಿನ್ನೂ ಸ್ಯಾಟಲೈಟ್ ಮೂಲಕ ಸಿನಿಮಾ ಪ್ರದರ್ಶನವಾಗುತ್ತಿರಲಿಲ್ಲ. ರೀಲುಗಳಿದ್ದವು. ಪ್ರತಿ ಪ್ರದರ್ಶನದ ನಂತರ ರೀಲುಗಳನ್ನ ಸುತ್ತಬೇಕಿತ್ತು. ತೆರೆಯ ಮೇಲೆ ಸಿನಿಮಾ ಮೂಡಬೇಕೆಂದರೆ ಪ್ರೊಜೆಕ್ಟರ್ ಯಂತ್ರದೊಳಗೆ ಕಾರ್ಬನ್ ಉರಿಯಬೇಕಿತ್ತು. ಬೇಸರ ಕಳೆಯಲೆಂದು ಆಪರೇಟರ್ ಜೊತೆ ಮಾತಿಗೆ ಕೂರುತ್ತಿದ್ದೆ. ರೀಲಿನ ಕ್ಯಾನುಗಳನ್ನ ಸುತ್ತಿಕೊಡುತ್ತಿದ್ದೆ. ಯಂತ್ರದೊಳಗೆ ರೀಲಿನ ಕ್ಯಾನಿಡುವುದನ್ನು ಹೇಳಿಕೊಟ್ಟ ಆಪರೇಟರ್ ಆಗೀಗ ಜೊತೆಗೆ ಕಡ್ಡಿಗೀರಿ ಗೋಲ್ಡ್ ಪ್ಲೇಕ್ ಸಿಗರೆಟ್ ಸೇದುವುದನ್ನು ಕಲಿಸಿ ಬಿಟ್ಟ. ಊಟ ತಿಂಡಿಗೆಂದು ಪಕ್ಕದಲ್ಲಿದ್ದ ಹೋಟೆಲ್ಲಿನಲ್ಲಿ ಅಕೌಂಟ್ ಮಾಡಿಸಿಕೊಟ್ಟಿದ್ದರು. ರಾತ್ರಿ ಮಲಗಲು ಟಾಕೀಸಿನವರ ಕಡೆಯಿಂದಲೇ ವ್ಯವಸ್ಥೆಯಾಗಿತ್ತು. ಪ್ರತಿ ಶುಕ್ರವಾರ ಹೊಸ ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿದ್ದವು. ಆದ್ದರಿಂದ ಗುರುವಾರದ ದಿನ ಮಾತ್ರ ಸ್ವಲ್ಪ ಕೆಲಸ ಹೆಚ್ಚಿರುತ್ತಿತ್ತು. ಆ ದಿನ ಸಂಜೆಯೇ ಸೈಕಲ್ ಶಾಪಿನಿಂದ ಬಾಡಿಗೆಗೆ ಸೈಕಲ್ ತರಬೇಕಿತ್ತು. ಟಾಕೀಸಿನ ಹಿಂಬದಿಯಲ್ಲೇ ಒಲೆಯುರಿಸಿ ಅದೇನೋ ಹಿಟ್ಟಿನ ಪುಡಿಯಲ್ಲಿ ಅಂಟು ತಯಾರಿಸಿಕೊಳ್ಳಬೇಕಿತ್ತು. ಗುರುವಾರದ ಪ್ರದರ್ಶನದಗಳೆಲ್ಲ ಮುಗಿದ ನಂತರ ನಡುರಾತ್ರಿಯಲ್ಲಿ ಅಂಟಿನ ಬಕೆಟ್ಟು ವಾಲ್ ಪೋಸ್ಟರಿನ ಬಂಡಲ್ಲಿನ ಜೊತೆ ಸೈಕಲ್ ಏರಿ ಹೊರಟು, ಒಂದಷ್ಟು ದೂರದವರೆಗೂ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಬೇಕಿತ್ತು.
ಪ್ರತಿದಿನ ಬೆಳಿಗ್ಗೆ ಇಬ್ಬರು ಹೆಂಗಸರು ಬರುತ್ತಿದ್ದರು. ಆಫೀಸು ಮತ್ತು ಟಾಕೀಸನ್ನೆಲ್ಲ ಗುಡಿಸಿ ಒರೆಸಿ ಶೌಚಾಲಯವನ್ನೆಲ್ಲ ತೊಳೆದು ಸ್ವಚ್ಛಗೊಳಿಸಿ ಹೋಗುತ್ತಿದ್ದರು. ಅದೊಂದು ದಿನ ಆ ಹೆಂಗಸರು ಬಾಲ್ಕನಿಯಲ್ಲಿ ಕಸಗುಡಿಸುವಾಗ ‘ಚಣ್ ಚಣ್’ ಎಂಬ ಶಬ್ದ ನನ್ನ ಕಿವಿಗೆ ಬಿತ್ತು. ಅಲ್ಲೊಂದು ನಿಧಿ ಇರುವ ಸತ್ಯ ನನಗೆ ಗೊತ್ತಾಯಿತು. ಕೆಳಗಿನ ಸೆಂಕೆಂಡ್ ಕ್ಲಾಸಿನಲ್ಲಿ ಪ್ಲಾಸ್ಟಿಕ್ ನಂತಹ ಕುರ್ಚಿಯ ಸಾಲುಗಳಿದ್ದರೆ, ಬಾಲ್ಕನಿಯಲ್ಲಿ ಮೆತ್ತನೆಯ ಕುರ್ಚಿಗಳಿದ್ದವು. ಆ ಕುರ್ಚಿಯಲ್ಲಿ ಆರಾಮವಾಗಿ ಕುಳಿತಾಗ ಅವರ ಗಮನಕ್ಕೆ ಬರದಂತೆ ಪ್ಯಾಂಟಿನ ಕಿಸೆಯಲ್ಲಿದ್ದ ನಾಣ್ಯಗಳು ಜಾರಿ ಕುರ್ಚಿಯ ಅಡಿಯಲ್ಲಿ ಸದ್ದಾಗದಂತೆ ಬೀಳುತ್ತಿದ್ದವು. ಈ ಸತ್ಯ ಗೊತ್ತಾದ ದಿನದಿಂದ ಶುರುವಾಯಿತು. ಬೆಳಗ್ಗೆ ಗುಡಿಸಿ ಒರೆಸಲಿಕ್ಕೆಂದು ಹೆಂಗಸರು ಬರುವ ಮೊದಲೇ ಟಾರ್ಚ್ ಹಿಡಿದು ಸಾಲು ಸಾಲು ಸೀಟುಗಳ ಅಡಿಯಲ್ಲಿ ಬಾಗಿ ಎದ್ದು ಚಿಲ್ಲರೆ ಕಾಸುಗಳನ್ನೆಲ್ಲ ಸಂಗ್ರಹಿಸಿಕೊಳ್ಳುತ್ತಿದ್ದೆ. ಅವು ಆ ದಿನದ ‘ಗೋಲ್ಡ್ ಪ್ಲೇಕ್’
ಖರ್ಚಿಗಾಗುತ್ತಿದ್ದವು.
ನನ್ನ ಬದುಕನ್ನು ಒಂದು ದೊಡ್ಡ ನೋಟಿನಂತೆ ನೋಡುವುದಾದರೆ ಇವು ಚಿಲ್ಲರೆ ನೆನಪುಗಳು. ಆದರೆ ಇವು ಬರೀ ಚಿಲ್ಲರೆ ವಿಷಯಗಳಲ್ಲ!
ಎರಡು ವಾರಗಳ ಹಿಂದೆ ಪುಸ್ತಕ ಪ್ರಾಧಿಕಾರದಿಂದ ಬಂದ ಪತ್ರದಿಂದಾಗಿ ಬೆಂಗಳೂರಿಗೆ ಹೋಗಬೇಕಾಗಿ ಬಂತು. ಎಲ್ಲರ ಬದುಕಿನಲ್ಲಿರುವಂತೆ ನನ್ನ ಬದುಕಿನಲ್ಲಿಯೂ ಸಹ ಅನೇಕ ನೆನಪುಗಳಿವೆ. ಯಾರೆಲ್ಲ ಹೇಗೋ ಗೊತ್ತಿಲ್ಲ. ಆದರೆ ನಾನು ಮಾತ್ರ ಬದುಕಿನ ಸಂತೆಯಲ್ಲಿ ಖಷಿಯೆಂಬ ಸರಕು ಕೊಳ್ಳುವ ಸಲುವಾಗಿ ಸಣ್ಣಪುಟ್ಟ ಚಿಲ್ಲರೆ ನೆನಪುಗಳನ್ನು ಸಹ ಕೂಡಿಟ್ಟುಕೊಂಡಿದ್ದೇನೆ. ಒಬ್ಬನೇ ಬೆಂಗಳೂರಿಗೆ ಹೋದಾಗೆಲ್ಲ ನಾನು ಅವಳು ಜೊತೆಯಲ್ಲಿ ಓಡಾಡಿದ ಬೀದಿಗಳಲೆಲ್ಲ ನೆನಪುಗಳ ಕೈಹಿಡಿದು ನಡೆದಾಡುತ್ತೇನೆ. ನಾವು ಮೊದಲ ಸಲ ಒಟ್ಟಿಗೆ ಮಸಾಲೆದೋಸೆ ತಿಂದ ಹೋಟೆಲ್ಲಿನಲ್ಲಿ ಒಬ್ಬನೇ ಕುಳಿತು ಮಸಾಲೆದೋಸೆ ತಿನ್ನುತ್ತೇನೆ. ಈ ಬಾರಿಯೂ ಓಡಾಡಿದ್ದು, ತಿಂದಿದ್ದು ಎಲ್ಲವೂ ಮುಗಿಸಿ ಊರಿನ ಬಸ್ಸು ಹತ್ತಿದೆ. ಅವಳದೇ ನೆನಪುಗಳ ಬಲೆಯಲ್ಲಿ ಸಿಕ್ಕಿಬಿದ್ದವನು ನಿರ್ವಾಹಕರಿಂದ ಚಿಲ್ಲರೆ ಪಡೆಯುವುದನ್ನು ಮರೆತಿದ್ದೆ. ಮನೆಗೆ ಬಂದು ನೋಡಿದರೆ ಎರಡು ಟಿಕೆಟ್ ಗಳ ಹಿಂಬದಿಯಲ್ಲೂ ಹಿಂತಿರುಗಿ ಪಡೆಯಬೇಕಾದ ಚಿಲ್ಲರೆ ಬರೆದಿತ್ತು… ಕೂಡಲೇ ಡೈರಿಯಲ್ಲಿ ನಾನು ಬರೆದ ಸಾಲುಗಳು:
ಸಾರಿಗೆ ವಾಹನಗಳಲ್ಲಿ
ಚಿಲ್ಲರೆ ಮರೆಯುವ
ಪ್ರಯಾಣಿಕ ನಾನು
ಬದುಕಿಡೀ ನಿನ್ನ ನೆನಪುಗಳ
ಹೊತ್ತು ತಿರುಗುತ್ತಿರುವೆ
– ನವೀನ್ ಮಧುಗಿರಿ
ನೆನಪುಗಳಿಂದ ತುಂಬಿರುವ ಸುಂದರ ಬರಹ ಅಂತ ಇದನ್ನು ಹೇಳುವುದಕ್ಕಿಂತಲೂ, ನವೀನ್ ರವರೇ ನಾನು ಇದನ್ನು ನಿಮ್ಮ ಬದುಕಿನ ಚಿತ್ರಣವನ್ನೊಳಗೊಂಡ ಪ್ರಾಮಾಣಿಕ ಬರಹ ಅನ್ನುತ್ತೇನೆ.
ಬರೀ ಚಿಲ್ಲರೆ ವಿಷಯಗಳಲ್ಲ ಲೇಖನ ನಮ್ಮನ್ನು ನಮ್ಮ ನೆನಪುಗಳನ್ನು ಕೆದಕುವಂತಿದೆ.ಉತ್ತಮ ಬರಹ ಸಾರ್ ಅಭಿನಂದನೆಗಳು.
ಚಿಲ್ಲರೆಯಿಂದಲೇ ಅರಂಭಿಸಿ, ಸಿನಿಮಾ ಥಿಯೇಟರ್ ನಲ್ಲಿ ಸುತ್ತಾಡಿಸಿ, ಚಿಲ್ಲರೆಯಿಂದಲೇ ಕೊನೆಗೊಂಡ ತಮ್ಮ ಜೀವನಾನುಭವದ ಲೇಖನ ಬಹಳ ಚೆನ್ನಾಗಿದೆ...ಧನ್ಯವಾದಗಳು.
ಚೆಂದ ಬರಹ…’ಚಿಲ್ಲರೆ ಬರಹ’ ಅಲ್ಲವೇ ಅಲ್ಲ!