ಕವಿ ನೆನಪು 22: ವರನಟ ಹಾಗೂ ಮಲ್ಲಿಗೆಯ ಕವಿ

Share Button

ಕವಿ ಕೆ ಎಸ್ ನ

1982ರಲ್ಲಿ ಮೈಸೂರ ಮಲ್ಲಿಗೆ ಧ್ವನಿಸುರುಳಿಯನ್ನು ವರನಟ  ಡಾ.ರಾಜ್ ಕುಮಾರ್ ಬಿಡುಗಡೆ ಮಾಡುವರೆಂದು ಸಂಗೀತ ನಿರ್ದೇಶಕರಾದ ಅಶ್ವಥ್ ನಮ್ಮ ತಂದೆಯವರಿಗೆ ತಿಳಿಸಿದಾಗ, ನಮ್ಮ ತಂದೆ ಅಚ್ಚರಿಯಿಂದ ಹೌದೇ? ಎಂದರು. ಅದಕ್ಕೆ ಅಶ್ವಥ್ ”ಕ್ಯಾಸೆಟ್ ಗೆ ಉತ್ತಮ ಪ್ರಚಾರ ಸಿಗಬೇಕಲ್ಲವೇ?“ ಎಂದರು .

ನಾನು ತಿಳಿದ ಮಟ್ಟಿಗೆ ನಮ್ಮ ತಂದೆ ಅಷ್ಟಾಗಿ ಸಿನಿಮಾಗಳಿಗೆ ಹೋದವರಲ್ಲ. ವಿಸೀ ಅವರ ಜತೆ ಪ್ಯಾಟನ್, ಬೆನಹರ್, ಇಂಥ ಒಂದೆರಡು ಸಿನಿಮಾ ನೋಡಿರಬಹುದು. ಅಪರೂಪಕ್ಕೆ ಎಂಬಂತೆ  ಒಮ್ಮೆ ನಮ್ಮ ತಾಯಿಯವರ ಜತೆ ‘ಬಿಳೀ ಹೆಂಡ್ತಿ’ ಸಿನಿಮಾಕ್ಕೆ ಹೋಗಿದ್ದರು. ರಾಜಕುಮಾರ್ ಅವರನ್ನಂತೂ ಒಮ್ಮೆಯೂ ನೋಡಿರಲಿಲ್ಲ.

ಮೈಸೂರ ಮಲ್ಲಿಗೆ ಧ್ವನಿಸುರುಳಿ ಬಿಡುಗಡೆ  ಸಮಾರಂಭ 1982ರ ಆಗಸ್ಟ್ ನ ಒಂದು ಭಾನುವಾರ ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅವಿಸ್ಮರಣೀಯವಾಗಿ ನೆರವೇರಿತು.ಶ್ರೀರಂಗರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮೋಹನ ಆಳ್ವ, ಎನ್ ಎಸ್ ಎಲ್ ಭಟ್ಟ ಮುಂತಾದದವರು ವೇದಿಕೆಯಲ್ಲಿದ್ದರು.

ಧ್ವನಿಸುರುಳಿಯನ್ನು  ಬಿಡುಗಡೆ ಮಾಡಿದ ರಾಜಕುಮಾರ್  ಆ  ದಿನ ಅಲ್ಲಿನ ಭಾವಗೀತೆಗಳ ಬಗ್ಗೆ ಸೊಗಸಾಗಿ ಮಾತನಾಡಿದರು.ರಾಯರು ಬಂದರು ಮಾವನ ಮನೆಗೆ ಹಾಡಿನ ಸಂದರ್ಭವನ್ನು ಕುತೂಹಲದಿಂದ,ಮೆಚ್ಚುಗೆಯಿಂದ ಹಾಗೂ ಅಭಿನಯಪೂರ್ಣವಾಗಿ ವಿಶ್ಲೇಷಿಸಿದರು. ಇಂಥ ಕವಿಯ ಗೀತೆಗಳ ಬಗ್ಗೆ ಇದುವರೆಗೆ  ತಾವು ತಿಳಿದುಕೊಳ್ಳದೆ ಹೋದುದಕ್ಕೆ ವಿಷಾದಿಸಿದರು. ಇನ್ನು ಮುಂದೆ ಪ್ರಸಿದ್ಧ ಕವಿಗಳ ಭಾವಗೀತೆಗಳನ್ನು ಹಾಡಿ ಒಂದು ಕ್ಯಾಸೆಟ್ ಹೊರತರುವುದಾಗಿ ಭರವಸೆ ನೀಡಿದರು. ಆದರೆ ಅದು ಪೊಳ್ಳು ಭರವಸೆಯಾಗಿರಲಿಲ್ಲ. ಕುವೆಂಪು,ಅಡಿಗ,ಪರಮೇಶ್ವರ ಭಟ್ಟ,ಕೆ ಎಸ್ ನ ಮುಂತಾದ ಕವಿಗಳ ಭಾವಗೀತೆಗಳನ್ನು ಹೊಂದಿದ್ದ ಕ್ಯಾಸೆಟ್ ಅನ್ನು ಸ್ವಲ್ಪ ಕಾಲದಲ್ಲೇ ಹೊರತಂದರು.

ಕ್ಯಾಸೆಟ್ ಬಿಡುಗಡೆ ಸಮಾರಂಭದಲ್ಲಿ ವರನಟ ಡಾ.ರಾಜಕುಮಾರ್ ಹಾಗೂ ಮೈಸೂರು ಮಲ್ಲಿಗೆ ಕವಿ ಕೆ ಎಸ್ ನ

ಆ ಸಂದರ್ಭದಲ್ಲಿ ರಾಜ್ ದಂಪತಿಗಳು ನಮ್ಮ ತಂದೆ ತಾಯಿಗಳಿಗೆ ಗೌರವ ಸಮರ್ಪಣೆ ಮಾಡಿದುದು ಒಂದು ಭಾವಪೂರ್ಣ ಸನ್ನಿವೇಶವಾಗಿತ್ತು. ನಮ್ಮ ತಂದೆಯವರಿಗೆ,ಶಾಲು,ಪಂಚೆ ನಮ್ಮ ತಾಯಿಗೆ ರೇಶಿಮೆ ಸೀರೆ, ಖಣ ,ಫಲ,ಪುಷ್ಪ,ನೀಡಿ ಗೌರವಿಸಿ, ರಾಜಕುಮಾರ್ ಟ್ರಸ್ಟ್ ವತಿಯಿಂದ ಐದು ಸಾವಿರ ರೂಪಾಯಿ ಗೌರವ ಸಂಭಾವನೆ ನೀಡಿ ನಮ್ಮ ತಂದೆತಾಯಿಗಳ ಕಾಲು ಮುಟ್ಟಿ ನಮಸ್ಕರಿಸಿದರು. ಕಾಲು ಮುಟ್ಟಿ ನಮಸ್ಕರಿಸಿದ್ದಕ್ಕೆ ನಮ್ಮ ತಂದೆ ಆಕ್ಷೇಪಿಸಿದಾಗ “ತಪ್ಪಿಲ್ಲ ಕವಿಗಳೇ, ನಿಮ್ಮಬ್ಬರಲ್ಲಿ ಇಂದು ನಾನು ನನ್ನ ತಂದೆ ತಾಯಿಗಳನ್ನು ಕಂಡೆ “ ಎಂದು ತಮ್ಮ ನಮ್ರತೆಯನ್ನು ಮೆರೆದರು. ಹೀಗೆ ಮೊದಲ ಭೇಟಿಯಲ್ಲೇ ಕೆ ಎಸ್ ನ ಮನ ಗೆದ್ದವರು ವರನಟ.

ಮುಂದೆ 1986 ರಲ್ಲಿ  ಅವರ ಸಂಸ್ಥೆಯ ಚಿತ್ರ ‘ರಥಸಪ್ತಮಿ’ಯ ಶತದಿನೋತ್ಸವ ಸಮಾರಂಭಕ್ಕೆ ನಮ್ಮ ತಂದೆ ಅತಿಥಿಗಳಾಗಿ ಬರಬೇಕೆಂದು ಆಶಿಸಿದರು ರಾಜ್. ಅದರಂತೆ ಆಹ್ವಾನ ನೀಡಲು ಚಿನ್ನೇಗೌಡರನ್ನು ಕಳುಹಿಸಿದ್ದರು. ಅವರು ಒಂದು ಹೊರೆ ಹಣ್ಣುಗಳ ಸಮೇತ ಮನೆಗೆ ಬಂದು ನಮ್ಮ ತಂದೆಯವರಿಗೆ ನಮಸ್ಕರಿಸಿ “ಭಾವ ನಿಮ್ಮನ್ನು ನೋಡಲು ಆಸೆಪಟ್ಟಿದ್ದಾರೆ. ಸಮಾರಂಭಕ್ಕೆ ನೀವು ಬರಲೇಬೇಕು” ಎಂದರು.

“ನಾನು ಆ ಸಿನಿಮಾ ನೋಡಿಲ್ಲವಲ್ಲಪ್ಪ “ ಎಂದು ನಮ್ಮ ತಂದೆ ಹೇಳಿದಾಗ, “ಅದಕ್ಕೆ ನಾನು ವ್ಯವಸ್ಥೆ ಮಾಡುತ್ತೇನೆ . ಎಷ್ಟು ಜನ ಬರುತ್ತೀರಿ ?”ಎಂದರು ಚಿನ್ನೇಗೌಡ. ಮಾರನೆಯ ದಿನ ಮನೆಗೆ ಕಾರು ಕಳಿಸಿದರು.ನಮ್ಮ ತಂದೆ ತಾಯಿ ಸಿನಿಮಾ ನೋಡಿ ಬಂದರು. ಸಮಾರಂಭದಲ್ಲಿ ನಮ್ಮ ತಂದೆ ಚಿತ್ರದ ಪ್ರೇಮ ಸನ್ನಿವೇಶಗಳನ್ನುಕನ್ನಡ ಕಾವ್ಯದ ಹಿನ್ನಲೆಯಲ್ಲಿ ವಿವರಿಸಿ ಚಿಕ್ಕ ಭಾಷಣ ಮಾಡಿದಾಗ ,ರಾಜಕುಮಾರ್ ಮೆಚ್ಚುಗೆ ಸೂಚಿಸಿದರಂತೆ.

‘ಜೀವನ ಚೈತ್ರ’  ಚಿತ್ರದಲ್ಲಿ ನಮ್ಮ ತಂದೆಯವರ ಯಾವುದೋ ಗೀತೆಯನ್ನು ಸಂಭಾಷಣೆ ಮಧ್ಯೆ ವಾಚಿಸುವ ಸಂದರ್ಭವಿದೆ. ಅದಕ್ಕೆ “ರಾಜಕುಮಾರರು ಕವಿಗಳ ಹಾಡನ್ನು ಉಪಯೋಗಿಸಿದ್ದೇನೆ.ಅವರಿಗೆ ಗೌರವಧನ ನೀಡಬೇಕು.” ಎಂದು ಅವರಿಗೆ  ಆಪ್ತರಾಗಿದ್ದ ಎಂ ಎನ್ ವ್ಯಾಸರಾವ್ (ನಮ್ಮ ಕುಟುಂಬಕ್ಕೂ ಅವರು ಆಪ್ತರೆ) ಅವರ ಹತ್ತಿರ ಎರಡು ಸಾವಿರ ರೂಪಾಯಿಗಳನ್ನು ಕಳುಹಿಸಿಕೊಟ್ಟಿದ್ದರು.

ನಮ್ಮ ತಂದೆಯವರು ನಿಧನರಾದಾಗ ಬಂದು ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿ ,ನಮ್ಮ ತಾಯಿಯವರಿಗೆ “ಅಮ್ಮ ನಿಮ್ಮ ದುಃಖದಲ್ಲಿ ನಾನೂ ಭಾಗಿ .ಏನಾದರೂ ಸಹಾಯ ಬೇಕಿದ್ದರೆ ನನಗೆ ಹೇಳಿಕಳಿಸಿ. ನಾನು ನಿಮ್ಮ ಮನೆಮಗ.” ಎಂದು ಸಾಂತ್ವನ ಹೇಳಿದ್ದರು. ಹಾಗೆಯೇ ನಮ್ಮೆಲ್ಲರನ್ನೂ ಪರಿಚಯಿಸಿಕೊಂಡು ಸಂತಾಪ ವ್ಯಕ್ತಪಡಿಸಿದ್ದರು.

ರಾಜಕುಮಾರ್ ರವರ ಪರಿಚಯ ಆಕಸ್ಮಿಕವಾದರೂ ಅವರ ಹೃದಯವಂತಿಕೆಯನ್ನು ನಮ್ಮ ತಂದೆ ಪದೇ ಪದೇ ನೆನೆಯುತ್ತಿದ್ದರು.

(ಮುಂದುವರಿಯುವುದು….)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:   http://surahonne.com/?p=30382

-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)

6 Responses

  1. km vasundhara says:

    ಅಪರೂಪದ ವಿಷಯ..! ತಿಳಿದು ಬಹಳ ಸಂತೋಷವಾಯ್ತು.

  2. ಮಹೇಶ್ವರಿ.ಯು says:

    .ಈ ಅಂಕಣವನ್ನು ತಪ್ಪದೆ ಓದುತ್ತೇನೆ. ಕೆ.ಎಸ್ ನ ಜೊತೆ ಅವರ ಒಡನಾಟವಿದ್ದ ಒಬ್ಬೊಬ್ಬ ಹಿರಿಯರ ವ್ಯಕ್ತಿತ್ವದ ಘನತೆಯನ್ನು. ನೀವು .ನಿರ್ದಿಷ್ಟ ಉದಾಹರಣೆಗಳೊಂದಿಗೆ ನಿರೂಪಿಸುವ ರೀತಿ ಸರಳ ಮತ್ತು ಚೆಂದ.

  3. ನಯನ ಬಜಕೂಡ್ಲು says:

    ಹೊಸ ಹೊಸ ವಿಚಾರಗಳನ್ನು ಓದುಗರ ಮುಂದೆ ತೆರೆದಿಡುತ್ತಿರುವ ಸರಣಿ ಲೇಖನ ಮಾಲೆ ಸೊಗಸಾಗಿ ಮೂಡಿ ಬರುತ್ತಿದೆ. ರಾಜಕುಮಾರ ಅವರ ಸರಳತೆಯ ಬಗ್ಗೆ ಬೇರೆ ಕಡೆಗಳಿಂದ ಸಾಕಷ್ಟು ತಿಳಿದಿತ್ತು, ಇಲ್ಲೂ ಅದರ ಪರಿಚಯ ಸಿಗುತ್ತಿರುವುದು ಅವರ ಮೇಲಿನ ಅಭಿಮಾನವನ್ನು ಹೆಚ್ಚಿಸಿದೆ.

  4. Anonymous says:

    ತುಂಬಾ ಆಪ್ತವಾಗಿದೆ ನಿಮ್ಮ ಲೇಖನ ಅಭಿನಂದನೆಗಳು ಸಾರ್.

  5. ಶಂಕರಿ ಶರ್ಮ says:

    ಮೇರುನಟ ರಾಜಕುಮಾರ್ ಅವರು ಅಷ್ಟೇ ಮೇರು ವ್ಯಕ್ತಿತ್ವವುಳ್ಳವರು ಎಂಬುದು ತಮ್ಮ ಆತ್ಮೀಯ ಲೇಖನದಿಂದ ಮತ್ತೊಮ್ಮೆ ಸಾಬೀತಾಯಿತು. ಅಪರೂಪದ ಈ ಲೇಖನಮಾಲೆಯು ಬಹಳ ಸೊಗಸಾಗಿ ಮೂಡಿಬರುತ್ತಿದೆ ಸರ್..ಧನ್ಯವಾದಗಳು.

  6. Krishnamurthy s says:

    ರಾಜಕುಮಾರ್ರ್ ರವರದು ದೊಡ್ಡಗುಣ ಪ್ರತಿಯೊಬ್ಬ ಕನ್ನಡದ ಸಾಹಿತಿಗಳು ,ನಟರು ,ರಂಗ ಕಲಾವಿದರು ,ಕನ್ನಡದ ಹಲವು ರಂಗಗಳಲ್ಲಿ ದುಡಿದವರ ಬಗ್ಗ ಅಪಾರ ಅಭಿಮಾನವಿಟ್ಟು ಸತ್ಕರಿಸುತ್ತಾರೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: