ಸಮಸ್ಯೆಗಳನ್ನು ಮೆಟ್ಟಿ ನಿಂತ ಮಹಿಳೆ
ಮಹಿಳೆ ಸಾವಿರ ಸಮಸ್ಯೆಗಳನ್ನು ಗೆದ್ದು ಬದುಕುವಳು. ಅವಳಿಗಿರುವ ತಾಳ್ಮೆ, ವಿಚಾರ ಶಕ್ತಿ, ಕ್ಷಮಾ ಗುಣ, ಅಮೋಘ. ಮನೆಗೆ ಮಹಾಲಕ್ಷ್ಮೀ ಯಾಗಿದ್ದರೂ, ಕೆಲವು ಕಡೆ ಅವಳಿಗೆ ಗೌರವ ಲಭಿಸುವುದಿಲ್ಲ. ನಿರಂತರವಾಗಿ ದುಡಿಯುತ್ತಿದ್ದರೂ ನೆಮ್ಮದಿ ಸಿಗುವುದಿಲ್ಲ. ಆದರೂ ಮೌನವಾಗಿ ಎಲ್ಲವನ್ನೂ ನುಂಗಿ ನಗುತ್ತಲೇ ಕಾಲ ಕಳೆಯುವಳು.
ಸಂಸಾರದಲ್ಲಿ ಬರುವ ತಾಪತ್ರಯಗಳು ಕಡಿಮೆಯೇ ? ಮಕ್ಕಳ ಲಾಲನೆ ಪಾಲನೆಯ ಜೊತೆಗೆ ಅವರ ಉಜ್ವಲ ಭವಿಷ್ಯಕ್ಕಾಗಿ ಮುಂದಾಲೋಚನೆ. ಮನೆಯವರ ಬೇಡಿಕೆಗಳನ್ನು ಪೂರೈಸುವುದರಲ್ಲಿ ತೃಪ್ತಳಾಗುವಳು. ಮಕ್ಕಳು ತಮ್ಮ ಚಿಕ್ಕ ಪುಟ್ಟ ಆಸೆಗಳನ್ನು ಅಮ್ಮನೊಂದಿಗೆ ಹೇಳಿ ಪೂರೈಸಿಕೊಳ್ಳುವರು. ಅಮ್ಮ ಸ್ವಲ್ಪ ಹಣ ಬೇಕಿತ್ತು, ಅಮ್ಮ ನನ್ನ ಫೀಸ್ ಕಟ್ಟಬೇಕು, ಅಮ್ಮ ಪುಸ್ತಕ ಬೇಕು, ಅಮ್ಮ ಸಾಕ್ಸ್ ಎಲ್ಲಿ, ಪೆನ್ನೆಲ್ಲಿ, ಕರ್ಚಿಪ್ ಕೊಡು, ಬೇಗ ಬಾಕ್ಸ್ ರೆಡಿಮಾಡು, ಇತ್ಯಾದಿ ಬೇಡಿಕೆಗಳು ಅಮ್ಮನಲ್ಲಿಯೇ ಕೇಳುವರು. ಇನ್ನು ಪತಿರಾಯರ ಅಪೇಕ್ಷೆಯ ಊಟ ತಿಂಡಿ. ಮನೆಯಲ್ಲಿ ಬರುವ ಸಮಸ್ಯೆಗಳನ್ನು ಕೂಲಂಕುಷವಾಗಿ ಯೋಚಿಸಿ, ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿ ನಿಟ್ಟುಸಿರನ್ನು ಬಿಟ್ಟು ಸಮಾಧಾನದ ನಗೆಯನ್ನು ಬೀರುವಳು.
ಮಕ್ಕಳು, ಪತಿ, ಹಿರಿಯರ ಆರೈಕೆಯ ಜೊತೆ ಜೊತೆಗೆ ಹೊರಗೂ ಹೋಗಿ ದುಡಿಯುತ್ತಿರುವಳು. ದುಡಿಮೆಯಲ್ಲಿಯೂ ಬಂದೊದಗುವ ಸಮಸ್ಯೆಗಳು ಕಡಿಮೆಯೇ. ಕೆಲವು ಕಡೆ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲಸ ಮಾಡುವಲ್ಲಿ ಅಲ್ಲಿಯ ಅಧಿಕಾರಿಯು ಸುಕಾ ಸುಮ್ಮನೆ ಕಿರುಕುಳ ನೀಡುವುದು, ಅಂದರೆ ಒತ್ತಡದ ಕೆಲಸ ಹಚ್ಚುವುದು. ಚಿಕ್ಕ ಪುಟ್ಟ ವಿಷಯಗಳನ್ನೇ ದೊಡ್ಡದಾಗಿ ಮಾಡಿ ಬೈಯುವದು ಇಲ್ಲ ಅಳಿಸುವುದು. ಕೆಲವರಿಗೆ ಹೆಣ್ಣು ಮಕ್ಕಳನ್ನು ಗೋಳಾಡಿಸುವುದೆಂದರೆ ತೃಪ್ತಿ ಸಿಗುತ್ತದೆ ಅನಿಸುತ್ತದೆ. ತಾವು ಅದೆಷ್ಟು ಕೆಲಸ ಮಾಡುತ್ತಾರೋ ಯಾರೂ ಪ್ರಶ್ನಿಸುವಂತಿಲ್ಲ. ಆದರೆ ಕೈ ಕೆಳಗೆ ಕೆಲಸ ಮಾಡುವ ಮಹಿಳೆಯರು ಮಾತ್ರ ಸದಾ ಬಿಡುವಿಲ್ಲದೆ ಕರ್ತವ್ಯದಲ್ಲಿರಬೇಕು. ಇನ್ನು ಕೆಲವು ಕಡೆ ಮಡದಿ ದುಡಿದ ಹಣದಲ್ಲೇ ಐಶಾರಾಮಿ ಜೀವನ ನಡೆಸುತ್ತಾರೆ.
ಆದರೂ ಮಹಿಳೆಯ ತಾಳ್ಮೆ ಅಮೋಘ. ಮೆಚ್ಚಲೇಬೇಕು. ಮನೆಯನ್ನು ತೂಗಿಸಿಕೊಂಡು ಸಂಸಾರ ಸಾಗರವನ್ನು ದಾಟುವಲ್ಲಿ ಪತಿಗೆ ಹೆಗಲು ಕೊಟ್ಟು ನಿಲ್ಲುವಳು ಮಹಿಳೆ. ಮಹಿಳೆಗೆ ವಿಶೇಷವಾದ ಗೌರವವಿದೆ. ಭೂಮಿ ತಾಯಿ ಹೆಣ್ಣು, ಜನ್ಮ ದಾತೆ ಹೆಣ್ಣು, ದಾರಿ ತೋರುವ ಮಮತಾಮಯಿ ಸಹೋದರಿ ಹೆಣ್ಣು, ಕೈ ಹಿಡಿದು ಸಂಸಾರವನ್ನು ಯಶಸ್ವಿ ಗೊಳಿಸುವವಳು ಹೆಣ್ಣು, ಪ್ರೀತಿಯ ಆರೈಕೆ ಮಾಡುವ ಮಗಳು ಹೆಣ್ಣು. ಹೆಣ್ಣು ಎಲ್ಲ ಪಾತ್ರವನ್ನೂ ನಿಭಾಯಿಸುವಳು. ಮಹಿಳೆಗೆ ಅವಳದೆಯಾದ ಸ್ಥಾನಮಾನವಿದೆ ಗೌರವವಿದೆ. ಇಂದಿನ ಶತಮಾನದ ಹೆಣ್ಣು ಎಲ್ಲ ರಂಗದಲ್ಲೂ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದಾಳೆ. ಸರ್ವ ಶಕ್ತಳಾಗಿ ಬೆಳೆಯುತ್ತಿರುವಳು. ಬೆಳೆಯುವ ಹುಮ್ಮಸ್ಸಿನಲ್ಲಿ ನಾವು ನಮ್ಮತನವನ್ನು ಬಿಡಬಾರದು. ತಾಯಿಯಾಗಿ, ತಂಗಿಯಾಗಿ, ಮಗಳಾಗಿ, ಸೊಸೆಯಾಗಿ, ಉದ್ಯೋಗಸ್ಥೆಯಾಗಿ, ನಿರ್ವಹಿಸುವ ಪಾತ್ರಕ್ಕೆ ಜೀವ ತುಂಬೋಣ.
– ಮಧುಮತಿ ರಮೇಶ್ ಪಾಟೀಲ್ , ಬಳ್ಳಾರಿ.
ಚಂದದ ಬರಹ. ಹೆಣ್ಣಿನ ಬಾಳ ಕಥೆ ಬರೆದಷ್ಟೂ ಮುಗಿಯದ ಕಾದಂಬರಿ.
ಹೆಣ್ಣು ಸಮಾಜದ ಕಣ್ಣು, ಭೂ ತೂಕದ ಸಹನಾಶೀಲೆ ,ಸಕಲವೂ ಅವಳೇ.. ಅವಳನ್ನು ಕಡೆಗಣಿಸುವುದೂ ಅದೇ ಸಮಾಜ.. ನಯನ ಮೇಡಂ ಅಂದಂತೆ ಹೆಣ್ಣಿನ ಜೀವನ ಮುಗಿಯದ ಅಧ್ಯಾಯ ಕೂಡಾ..ಸೊಗಸಾದ ಲೇಖನ
ಧನ್ಯವಾದಗಳು ಸರ್