ಬಸ್ ಪಯಣದಲ್ಲಿ ಚಿಂತನ ಮಂಥನ

Share Button

2020  ಮಾರ್ಚ್ 11 ರಂದು ಬೆಳಗ್ಗೆ   ತಿಂಡಿ ತಿಂದು 8 ಗಂಟೆಗೆ ಮೈಸೂರು ಮನೆಯಿಂದ ಹೊರಟು ಮಂಗಳೂರಿಗೆ ಹೋಗುವ ಬಸ್ ಹತ್ತಿದೆ. 8.30 ಕ್ಕೆ ಹೊರಟ ಬಸ್ಸಿನಲ್ಲಿ ಕಿಟಕಿ ಪಕ್ಕದ ಸೀಟೇ ಸಿಕ್ಕಿದ್ದು ಖುಷಿ ಎನಿಸಿತು. ಕಿಟಕಿಗೆ ತಲೆ ಆನಿಸಿ ಹೊರಗೆ ನೋಡುತ್ತಲಿದ್ದರೆ ಬೇರೊಂದು ಲೋಕ ಕಾಣುತ್ತದೆ. ಅಂಗಡಿಗಳ ಚಿತ್ರವಿಚಿತ್ರ ಫಲಕ ಓದುವಿಕೆ, ಹೊಲಗದ್ದೆಗಳು, ಮರಗಳು, ಹೊಲಗಳಲ್ಲಿ ಕೆಲಸ ಮಾಡುವ ರೈತರು, ಶಾಲೆಗೆ ಹೊರಟ ಮಕ್ಕಳು, ಕೆಲಸಕ್ಕೆ ಹೊರಟವರು, ಬಸ್ ಹತ್ತುವ ಪ್ರಯಾಣಿಕರ ಧಾವಂತ, ಇತ್ಯಾದಿ ನೋಟಗಳು ಕಾಣಸಿಗುತ್ತವೆ. ಹಗಲು ಬಸ್ಸಿನಲ್ಲಿ ಪ್ರಯಾಣ ನನಗೆ ಬಹಳ ಖುಷಿ. ಬಸ್ ಸಾಗುವಾಗ ಅಂಗಡಿಗಳ ಫಲಕ ಓದುತ್ತ, ಅದರ ಅರ್ಥ ಅನರ್ಥಗಳ ಬಗ್ಗೆ ಮಂಥನ ನಡೆಸುತ್ತ ಪಯಣ ಮಜವಾಗಿರುತ್ತದೆ.

ಕೆಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕೂರಲು ಬೆಂಚೇ ಇರಲಿಲ್ಲ.   ಮಕ್ಕಳೆಲ್ಲ ನೆಲದಲ್ಲಿ ಕೂತು ಪುಸ್ತಕ ಹರಗಿದ್ದು ಕಂಡಿತು. ಬಸ್ಸೊಳಗಿನ  ಪ್ರಯಾಣಿಕರ ತರಹೇವಾರಿ ನಡವಳಿಕೆಗಳ ಬಗ್ಗೆ ಹೇಳುವುದಾದರೆ, ಒಂದಿಬ್ಬರು ಪರಸ್ಪರ ದೊಡ್ಡ ಸ್ವರದಲ್ಲಿ ಮಾತಾಡಿಕೊಂಡಿದ್ದರು. ಅದು ಹಿಂದೆ ಕೂತವರಿಗೆ ಪಿತ್ಥ ನೆತ್ತಿಗೇರಿ, ಸಾಕಯ್ಯ ನಿಲ್ಲಿಸಿ. ಮೈಸೂರಿಂದ ಮಾತಾಡಲು ಹೊರಟಿದ್ದೀರಿ. ಒಂದು ಗಂಟೆಯಾದರೂ ಮುಗಿಯುವುದು ಕಾಣುತ್ತಿಲ್ಲ. ಮಾತು ನಿಲ್ಲಿಸಿ ಇಲ್ಲವೇ ಮೆತ್ತಗೆ ಮಾತಾಡಿ. ಎಂದು ಆವಾಸ್ ಹಾಕಿದರು. ಮಾತಾಡುವವರಿಗೆ ಅದೇನು ನಾಟಲಿಲ್ಲ. ಆವಾಸ್ ಹಾಕಿದವರು  ಸುಮ್ಮನಾದರು!

ಬಸ್ಸಿನಲ್ಲಿ ನಾಲ್ಜು ಆಸನಗಳು ಲೋಕ ಸಭಾ ಮತ್ತು ವಿಧಾನ ಸಭಾ ಸದಸ್ಯರಿಗೆ ಮೀಸಲು ಎಂಬ ಫಲಕ ಹಾಕಿದ್ದಾರೆ. ಈ ಸದಸ್ಯರು ಎಂದಾದರೂ ಬಸ್ ಹತ್ತುವ ಪ್ರಮೇಯ ಉಂಟೆ? ಎಂಬ ಸಂಶಯ ಆ ಬರಹ ನೋಡಿದಾಗ ಅನಿಸಿತು. ಸ್ವಾತಂತ್ರ್ಯ ಹೋರಾಟಗಾರರಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಎಂದು ಕೂಡ ಮೀಸಲು ಆಸನಗಳಿವೆ .ಅವುಗಳ ಉಪಯೋಗ ಆದೀತು.

ನಿರ್ವಾಹಕ ಚಿಲ್ಲರೆ ಕೊಡಲು ಸತಾಯಿಸುತ್ತಿದ್ದ. ಬಾಕಿ ಚಿಲ್ಲರೆ ಮೊತ್ತ ಟಿಕೆಟ್ ಹಿಂಬದಿ ಬರೆದು ಕೊಡುತ್ತಿದ್ದ. ಪ್ರಯಾಣಿಕರು ಇಳಿಯುವ ಸ್ಥಳ ಬಂದು ಅವರು ಇಳಿದು ಟಿಕೆಟ್ ತೋರಿಸಿದಾಗ ಹಣ ಕೊಡುತ್ತಿದ್ದ. ಎರಡು ಮೂರು ಮಂದಿ ಇಳಿದು  ಚಿಲ್ಲರೆ ಕೇಳಿದಾಗ ಒಬ್ಬರಿಗೆ ಎಲ್ಲ ಕೊಟ್ಟು ಅವರ ಬಳಿ ಪಡೆದುಕೊಳ್ಳಿ ಎಂದು ಜಾರಿಕೊಂಡು ಬಸ್ ಹತ್ತಿ ಪಾರಾಗುತ್ತಿದ್ದ. ಇಳಿಯುವಾಗ ಮರೆತು ಕೇಳದವರ ಹಣ ಸ್ವಾಹಾ . ನಾನು ಸರಿಯಾದ ಚಿಲ್ಲರೆ ಹುಡುಕಿ ಕೊಟ್ಟು ಬಾಕಿ ವಸೂಲು ಮಾಡಲು ಮರೆಯಲಿಲ್ಲ.

ಕುಶಾಲನಗರ ದಾಟುತ್ತಿದ್ದ ಹಾಗೆ ಮೂಗಿಗೆ ಘಮ ಘಮ ಪರಿಮಳ ಅಡರಿ ತು. ಕಾಫಿ ತೋಟದಲ್ಲಿ ಗಿಡ ಹೂ ಬಿಟ್ಟು ಮುತ್ತು ಪೋಣಿಸಿದಂತೆ ಕಂಡಿತು. ಸುಂದರ ನೋಟ.  ದಾರಿಯಲ್ಲಿ ಕಂಡ ಮಾವಿನಮರಗಳೆಲ್ಲ ಚಿಗುರಿ ನಳನಳಿಸಿರುವುದು ಕಂಡಿತು. ಈ ಸಲ ಮಾವು ಇಳುವರಿ ವಿರಳವಾಗಬಹುದು.   ಮಿಡಿ ಸಿಗದೆ  ಉಪ್ಪಿನಕಾಯಿ ಹಾಕುವ ಕೆಲಸವಿಲ್ಲ ಎನಿಸಿತು.

ಚಿತ್ರಕೃಪೆ: ಅಂತರ್ಜಾಲ

ಸಂಪಾಜೆ ದಾಟುತ್ತಿದ್ದ ಹಾಗೆ ಬಿಸಿಲ ಬೇಗೆ ಬಸ್ ಒಳಗೂ ಪ್ರಭಾವ ಬೀರಲು ತೊಡಗಿತು. ಸೂರ್ಯಪ್ಪ ನಡು ನೆತ್ತಿಗೆ ಬಂದ ಸಮಯವದು. 2 ಗಂಟೆಗೆ ಪುತ್ತೂರು ತಲಪಿ ಬಸ್ಸಿಳಿದು ಮತ್ತೊಂದು ಬಸ್ ಹತ್ತಿ ಸಾಗಿ ತವರು ಸೇರಿದಾಗ  ಸಂಜೆ  3.30  ಗಂಟೆ ದಾಟಿತ್ತು. ಸಂಜೆ ಅಕ್ಕನೂ ಬಂದು ಸೇರಿ, ನಾವು ತವರಲ್ಲಿ ಅಮ್ಮ ಹಾಗೂ ತಮ್ಮನ ಸಂಸಾರದೊಂದಿಗೆ ನಗು, ಮಾತು ಹರಟೆಯಲ್ಲಿ ಹೊತ್ತು ಸರಿದದ್ದೇ ಗೊತ್ತಾಗಲಿಲ್ಲ. ತವರೆಂದರೆ ತಂಪು ಉಲ್ಲಾಸ ಸಿಗುವ ಸ್ಥಳ.

ಕೊರೊನಾ ಹಾವಳಿಯಿಂದ ಇನ್ನು ಸ್ವಲ್ಪ ಸಮಯ ಬಸ್ಸಲ್ಲಿ ಪಯಣ ಸಾಧ್ಯವಿಲ್ಲ ಎಂದು ಯೋಚಿಸುತ್ತ ಕೂತಾಗ ಸದ್ಯ ಬಸ್ ಪ್ರಯಾಣ ಮಾಡಿದ ಈ ಘಟನೆ ನೆನಪಾಗಿ ಬರೆದೆ.

-ರುಕ್ಮಿಣಿಮಾಲಾ, ಮೈಸೂರು

.

10 Responses

  1. Anonymous says:

    ಚೆನ್ನಾಗಿ ಮೂಡಿಬಂದಿದೆ ರುಕ್ಮಿಣಿ ಮಾಲಾ ..

  2. ಬಿ.ಆರ್.ನಾಗರತ್ನ says:

    ಪ್ರಯಾಣದ ಒಂದು ಅನುಭವ ಚೆನ್ನಾಗಿ ಮೂಡಿ ಬಂದಿದೆ.ಅಭಿನಂದನೆಗಳು ರುಕ್ಮಿಣಿ ಮಾಲಾ.

  3. ನಯನ ಬಜಕೂಡ್ಲು says:

    ನಿಮ್ಮ ಬರಹ ಓದಿ ಬಸ್ಸಲ್ಲಿ ಪ್ರಯಾಣಿಸುವ ಆಸೆ ಆಗುತ್ತಿದೆ. ಚಂದದ ಬರಹ.

  4. Krishnaprabha says:

    ಚಂದದ ಬರಹ

  5. ಶಂಕರಿ ಶರ್ಮ says:

    ನನ್ನದೇ ಮನದ ಮಾತನ್ನು ಅಕ್ಷರರೂಪಕ್ಕೆ ತಾವು ಇಳಿಸಿದಂತಿರುವ ನಿಮ್ಮ ಲೇಖನವು ಬಹಳ ಆಪ್ತವಾಯಿತು. ನಾನು ವೃತ್ತಿಯಲ್ಲಿದ್ದಾಗಿನ ನೆನಪು ಮೂಡಿ ಸಂತಸವಾಯಿತು. ಪುತ್ತೂರಿನವಳಾದ ನನಗೆ ಮೈಸೂರಿನಲ್ಲಿ ಆರು ತಿಂಗಳ ಟ್ರೈನಿಂಗ್. ಪ್ರತೀ ಶುಕ್ರವಾರ ಸಂಜೆ ಮೈಸೂರು ಬಿಟ್ಟರೆ, ಪುನಃ ಆದಿತ್ಯವಾರ ಮಧ್ಯಾಹ್ನ ಮೈಸೂರಿಗೆ ಹೊರಡುತ್ತಿದ್ದೆ. ಕಿಟಿಕಿ ಬದಿಯ ಸೀಟ್ ಸಿಕ್ಕರೆ ಊರು ಸೇರಿದ್ದೇ ತಿಳಿಯುತ್ತಿರಲಿಲ್ಲ. ಈ ದೀರ್ಘ ಸಮಯದ ಪ್ರಯಾಣದಲ್ಲಿ ಎಂದೂ ಬೇಸರ ಬಂದದ್ದೇ ಇರಲಿಲ್ಲ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: