ಗಣೇಶ ಬಂದ

Share Button

ಅಖಿಲ ಬೆಚ್ಚಗೆ ಹೊದ್ದುಕೊಂಡು ಇನ್ನೂ ನಿದ್ದೆ ಮಾಡುತ್ತಾ ಇದ್ದಳು. ಅವಳ ಅಮ್ಮ ವತ್ಸಲ ಬಂದು-

ಗಣೇಶ ಬಂದ
ಕಾಯಿ ಕಡುಬು ತಿಂದ
ಚಿಕ್ಕೆರೆಲಿ ಬಿದ್ದ
ದೊಡ್ಡಕೆರೆಲೆ ಎದ್ದ

ಎಂದು ಪದ್ಯ ಹೇಳುತ್ತಾ ಅವಳನ್ನು ಎಬ್ಬಿಸಿಯೇ ಬಿಟ್ಟಳು. ಬಲವಂತವಾಗಿ ಕಣ್ಣುಬಿಟ್ಟು ಅಖಿಲ ಏಳಬೇಕಾಯಿತು. ಅಮ್ಮ ಮುದ್ದು ಮಾಡಿ ‘ ಏಳಮ್ಮಾ ರಾಣಿ ಶಾಲೆಗೆ ಹೊತ್ತಾಗುತ್ತೆ’ ಎಂದಳು. ಗಣೇಶನ ಪದ್ಯ ಅಖಿಲಾಗೆ ಹೊಸದಾಗಿತ್ತು. ಹಲ್ಲುಜ್ಜಲು ಅಮ್ಮನೊಟ್ಟಿಗೆ ಹೋಗುತ್ತಾ ಮತ್ತೆ ಪದ್ಯ ಹೇಳು ಎಂದು ಅಮ್ಮನನ್ನು ಕೇಳಿದಳು. ಪದ್ಯ ಹೇಳಿ, ವತ್ಸಲ ಮರುದಿನ ಗಣಪತಿ ಹಬ್ಬ ಇದೆಯೆಂದೂ ಸಂಜೆ ಅಂಗಡಿಗೆ ಹೋಗಿ ಗಣೇಶನನ್ನು ತರಬೇಕೆಂದೂ ಹೇಳಿದಳು. ಅಖಿಲ ಶಾಲೆಯಿಂದ ಬಂದ ಮೇಲೆ ಅಪ್ಪ ಕೆಲಸ ಮುಗಿಸಿ ಬಂದ ಮೇಲೆ ಎಲ್ಲರೂ ಹೋಗಿ ತರೋಣ ಎಂದು ಅಮ್ಮ ಹೇಳಿದಳು. ಇಷ್ಟರಲ್ಲೇ ಅಖಿಲಳ ಅಕ್ಕ ಅನುಷ ಎದ್ದು ಹಾಲು ಕುಡಿದು ಹೋಂವರ್ಕ್ ಮಾಡುತ್ತಾ ಕುಳಿತಿದ್ದಳು. ಅವಳಿಗೂ ಅಮ್ಮ ಹೇಳಿದ ಚುಟುಕು ಪದ್ಯ ಇಷ್ಟವಾಯಿತು. ಅಮ್ಮನ ಹತ್ತಿರ ಮತ್ತೆ ಕೇಳಿ ಕಲಿತಳು. ಅಮ್ಮ ತಾವು ಚಿಕ್ಕ ವಯಸ್ಸಿನಲ್ಲಿ ಗಣೇಶನ ಹಬ್ಬ ಬಂದಾಗ ‘ಗಣೇಶ ಬಂದ………’ ಎಂದು ಹಾಡುತ್ತಿದ್ದುದನ್ನು ನೆನಪು ಮಾಡಿಕೊಂಡರು. ಗಣಪತಿಗೆ ಕಡುಬು ಅಥವಾ ಮೋದಕ ತುಂಬಾ ಇಷ್ಟವಂತೆ.

ಅಖಿಲ ಗಣೇಶ ಕೆರೆಯಲ್ಲಿ ಯಾಕೆ ಬಿದ್ದ ಅಮ್ಮ? ಎಂದು ವಿಚಾರಿಸಿದಳು. ಅದು ಅಮ್ಮನಿಗೂ ಗೊತ್ತಿರಲಿಲ್ಲ. ಬಹುಶಃ ಅವನ ಚಿಕ್ಕ ವಾಹನ ಇಲಿಯ ಮೇಲೆ ಕುಳಿತು ಕೆರೆಗೆ ಹೋಗಿದ್ದಿರಬೇಕು. ಬ್ಯಾಲೆನ್ಸ್ ಮಾಡಲೂ ಕಷ್ಟವಾಗಿ ಬಿದ್ದಿರಬಹುದು ಎಂದಳು ಅನುಷ. ಆದರೆ ದೊಡ್ಡಕೆರೆಯಲ್ಲಿ ಮತ್ತೆ ಎದ್ದು ಬಿಟ್ಟನಲ್ಲ ಎಂದಳು ಅಮ್ಮ. ಸಂಜೆಯಾಯಿತು, ಎಲ್ಲರೂ ಮನೆಗೆ ಬಂದರು. ಸ್ವಲ್ಪ ಹೊತ್ತಿನಲ್ಲೇ ಗಣೇಶನನ್ನು ತರಲು ಎಲ್ಲರೂ ಹೊರಟರು. ಸಾಮಾನ್ಯವಾಗಿ ಎಲ್ಲರೂ ಗಣಪತಿಯ ಮೂರ್ತಿಯನ್ನು ತಂದು ಹಬ್ಬದ ದಿನ ಅದನ್ನು ಇಟ್ಟು ಪೂಜೆ ಮಾಡುತ್ತಾರೆ. ಇದನ್ನು ಆವೆ ಅಥವಾ ಜೇಡಿ ಮಣ್ಣಿನಿಂದ ಮಾಡಿರುತ್ತಾರೆ. ಮುಷ್ಠಿಯ ಗಾತ್ರದ ಗಣೇಶನಿಂದ ಒಂದು ಕೋಣೆಯ ಎತ್ತರದವರೆಗೂ ತಯಾರು ಮಾಡುತ್ತಾರೆ. ಉದ್ದ ಸೊಂಡಿಲು, ಮೊರದ ಹಾಗೆ ಕಿವಿಗಳು ಇರುತ್ತವೆ. ಗಣಪತಿಯ ಮೂರ್ತಿಗೆ ಬಣ್ಣ ಹಚ್ಚಬಹುದು. ಗುಲಾಬಿ ಬಣ್ಣ, ಕೆಂಪು, ಹಸಿರು ಹೀಗೆ ಹಲವು ಬಣ್ಣಗಳನ್ನು ಹಚ್ಚುತ್ತಾರೆ. ಮಾರ್ಕೆಟ್‌ನಲ್ಲಿ ಈ ರೀತಿಯ ಗಣೇಶ ಮತ್ತು ಬಣ್ಣ ಹಚ್ಚದೆ ಮಣ್ಣಿನ ಬಣ್ಣದಲ್ಲೇ ಇರುವ ಗಣೇಶ ಎರಡೂ ರೀತಿಯವು ಇದ್ದವು. ಬಣ್ಣಬಣ್ಣವಾಗಿರುವ ಗಣೇಶ ಅಖಿಲ ಮತ್ತು ಅನುಷಾಗೆ ತುಂಬಾ ಇಷ್ಟವಾಯಿತು. ಆದರೆ ಅವರ ತಂದೆತಾಯಿ ಮಣ್ಣಿನ ಬಣ್ಣದ ಬಣ್ಣ ಹಚ್ಚದ ಗಣೇಶನನ್ನು ಕೊಂಡುಕೊಳ್ಳಲು ಮುಂದಾದರು. ಅದನ್ನೇ ತೆಗೆದುಕೊಂಡರು. ಮಕ್ಕಳಿಬ್ಬರೂ ಬಣ್ಣದ್ದೇ ಬೇಕೆಂದು ಒತ್ತಾಯ ಮಾಡಿದರು. ಆಗ ಅಪ್ಪ ಬಣ್ಣ ಹಾಕಿದ್ದು ನಮ್ಮ ಪರಿಸರಕ್ಕೆ ಹಾನಿ ಉಂಟುಮಾಡುತ್ತದೆ ಮನೆಗೆ ಹೋದಮೇಲೆ ಹೇಳುತ್ತೇನೆ ಆದ್ದರಿಂದ ಅದು ಬೇಡ ಎಂದರು.


ಸ್ವಲ್ಪ ದೂರದಲ್ಲಿ ಚಿಕ್ಕ ಮರಿ ಆನೆ ಗಾತ್ರದ ಗಣಪತಿಗಳನ್ನೂ ಮಾರಾಟಕ್ಕಿಟ್ಟಿದ್ದರು. ಇವು ನೋಡಲು ಬಹಳ ಚಂದವಾಗಿದ್ದವು. ಅಖಿಲ ಅವನ್ನು ನೋಡಿದ ಕೂಡಲೇ ‘ಅಬ್ಬ! ಎಷ್ಟು ದೊಡ್ಡ ಗಣಪತಿ! ಎಲ್ಲರೂ ನೋಡಿ’ ಎಂದು ಜೋರಾಗಿ ಅಪ್ಪ, ಅಮ್ಮ ಮತ್ತು ಅನುಷಳಿಗೆ ಚಪ್ಪಾಳೆ ತಟ್ಟುತ್ತಾ ಹೇಳಿದಳು. ಇವು ನೋಡಲು ಚೆನ್ನಾಗಿರುತ್ತವೆ. ಆದರೆ ಪರಿಸರಕ್ಕೆ ಹಾನಿಯುಂಟು ಮಾಡುತ್ತವೆ. ಪಿ‌ಓಪಿ ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿರುತ್ತಾರೆ ಎಂದು ಅಮ್ಮ ಹೇಳಿದರು. ‘ಹಾಗೆಂದರೇನು? ಎಂದು ಅನುಷ ಪ್ರಶ್ನೆ ಮಾಡಿದಳು. ಅದೊಂದು ರೀತಿಯ ಸಿಮೆಂಟಿನ ಹಾಗೆ. ಅದು ನೀರಿನಲ್ಲಿ ಹಾಕಿದರೂ ಹಾಗೆಯೇ ಇರುತ್ತದೆ. ಮಣ್ಣಿನ ಹಾಗೆ ಕರಗುವುದಿಲ್ಲ ಎಂದರು ಅಪ್ಪ. ಇಂತಹ ದೊಡ್ಡ ಗಣಪತಿಗಳನ್ನು ದೊಡ್ಡ ಚಪ್ಪರಗಳಲ್ಲಿ ಕೂರಿಸುತ್ತಾರೆ. ಪೂಜೆ ಮುಗಿದ ನಂತರ ಇವನ್ನು ನೀರಿನಲ್ಲಿ ಹಾಕಲು ದೊಡ್ಡ ಕೆರೆ ಅಥವಾ ನದಿಯೇ ಬೇಕು. ನೀರಿನಲ್ಲಿ ಇದು ಮುಳುಗದೆ ತೇಲಬಹುದು. ಅದಕ್ಕೆ ಹಾಕಿರುವ ಬಣ್ಣ ನೀರಿನಲ್ಲಿ ಸೇರಿ ನೀರನ್ನು ವಿಷಯುಕ್ತ ಮಾಡಬಹುದು ಎಂದು ಅಮ್ಮ ಹೇಳಿದರು.

ಇಷ್ಟರಲ್ಲಿ ಎಲ್ಲರೂ ಮನೆಗೆ ಬಂದಾಯಿತು. ಜೋಪಾನವಾಗಿ ಗಣೇಶನನ್ನು ಒಳಗೆ ತಂದಾಯಿತು. ಊಟದ ಸಮಯ ಬಂದಿತ್ತು. ಎಲ್ಲರೂ ಒಟ್ಟಿಗೆ ಊಟ ಮಾಡಲು ಕುಳಿತರು. ಅನುಷ ‘ಬಣ್ಣ ಹಚ್ಚಿದ ಗಣಪತಿ ಏಕೆ ಒಳ್ಳೆಯದಲ್ಲ? ಅದರ ಬಗ್ಗೆ ಹೇಳಿ’ ಎಂದು ಅಪ್ಪನನ್ನು ಕೇಳಿದಳು. ಅಪ್ಪ ಆಯಿತು ಹೇಳುತ್ತೇನೆ ಎಂದರು. ಮಣ್ಣಿನಲ್ಲಿ ಮಾಡಿದ ಗಣೇಶನ ಮೂರ್ತಿಗೆ ವಿಧವಿಧವಾದ ಬಣ್ಣಗಳನ್ನು ಬಳಿಯುತ್ತಾರೆ. ನೋಡಲೇನೋ ತುಂಬಾ ಸುಂದರವಾಗಿ ಕಾಣುತ್ತದೆ. ಹಬ್ಬ ಮುಗಿದ ಮೇಲೆ ಗಣೇಶನ ಮೂರ್ತಿಯನ್ನು ಕೆರೆ, ಬಾವಿ, ಸಮುದ್ರ ಇವುಗಳಲ್ಲಿ ವಿಸರ್ಜನೆ ಮಾಡುತ್ತಾರೆ. ಮಣ್ಣಿನಲ್ಲಿ ಮಾಡಿರುವುದರಿಂದ ಇದು ನೀರಿನಲ್ಲಿ ಕರಗುತ್ತದೆ. ಆದರೆ ಇದರ ಮೇಲೆ ಇರುವ ಬಣ್ಣ ನೀರಿನ ಜೊತೆ ಸೇರುತ್ತದೆ. ಬಣ್ಣಗಳು ರಾಸಾಯನಿಕಗಳು. ಇವುಗಳನ್ನು ತಯಾರಿಸಲು ಅನೇಕ ಹಾನಿಕಾರಕ, ವಿಷಕಾರಕ ವಸ್ತುಗಳನ್ನು ಉಪಯೋಗಿಸುತ್ತಾರೆ. ಬಣ್ಣಗಳಲ್ಲಿ ಸೀಸ ಅಥವಾ ಲೆಡ್ ಕೂಡ ಇರುತ್ತದೆ. ಇವೆಲ್ಲಾ ಮನುಷ್ಯನಿಗೆ ಪ್ರಾಣಿ ಪಕ್ಷಿಗಳಿಗೆ, ನೀರಿನಲ್ಲಿರುವ ಮೀನುಗಳಿಗೆ ಮತ್ತು ಗಿಡ ಮರಗಳಿಗೆ ಕೆಟ್ಟದ್ದು. ಆಗ ಅನುಷಳಿಗೆ ಒಂದು ಸಂದೇಹ ಬಂದಿತು. ನೀರಿನಲ್ಲಿದ್ದ ಮಾತ್ರಕ್ಕೇ ಈ ರಾಸಾಯನಿಕಗಳು ಹೇಗೆ ಹಾನಿ ಮಾಡುತ್ತವೆ? ಎಂದು ಪ್ರಶ್ನೆ ಹಾಕಿದಳು. ನೀರಿನಲ್ಲಿರುವ ವಿಷದ ರಾಸಾಯನಿಕಗಳು ಭೂಮಿಗೂ ಇಳಿದು ಗಿಡಮರಗಳ ಬೇರುಗಳು ಹೀರಿಕೊಳ್ಳುತ್ತದೆ. ನೀರಿನಲ್ಲಿರುವ ಮೀನು ಮುಂತಾದ ಪ್ರಾಣಿಗಳು ದೇಹದ ಮೇಲ್ಮೈಯಿಂದಲೇ ವಿಷವನ್ನು ಹೀರಿಕೊಳ್ಳಬಹುದು. ಇಲ್ಲಾ ಪಾಚಿ ಅಥವಾ ಇನ್ನಿತರ ಆಹಾರ ಮೂಲದಿಂದ ದೇಹವನ್ನು ಸೇರುತ್ತವೆ.

ಒಟ್ಟಿನಲ್ಲಿ ವಿಷದ ರಾಸಾಯನಿಕಗಳು ಯಾವ ಹಂತದಲ್ಲಿಯಾದರೂ ಜೀವಿಗಳನ್ನು ಸೇರಬಹುದು. ವಿಷವಿರುವ ಮೀನು, ತರಕಾರಿ ಇವುಗಳನ್ನು ನಾವು ಸೇವಿಸಿದಾಗ ನಮ್ಮ ದೇಹವನ್ನೂ ವಿಷಪೂರಿತವನ್ನಾಗಿ ಮಾಡುತ್ತವೆ. ಕೆಲಸಮಯ ವಿಷದ ಪ್ರಮಾಣ ಜಾಸ್ತಿಯಾದರೆ, ಕೆರೆ, ನದಿಗಳಲ್ಲಿಯೇ ಮೀನುಗಳು ಸಾಯಬಹುದು. ಒಟ್ಟಿನಲ್ಲಿ ಎಲ್ಲವೂ ವಿಷಮಯವಾಗುತ್ತದೆ. ಬಣ್ಣಗಳಲ್ಲಿರುವ ಸೀಸ ಬಲು ಅಪಾಯಕಾರಿ. ಇದು ನಮ್ಮ ಮೂತ್ರಪಿಂಡಗಳನ್ನು ಹಾಳುಮಾಡುತ್ತದೆ. ನರಮಂಡಲಕ್ಕೂ ಅಪಾಯಕರಿ, ಇನ್ನು ಕೆಲವು ರಾಸಾಯನಿಕಗಳು ಕ್ಯಾನ್ಸರ್ ಉಂಟುಮಾಡಬಹುದು. ಇಷ್ಟೆಲ್ಲಾ ವಿಷಯಗಳನ್ನು ಅನುಷಳಿಗೆ ಅಮ್ಮ ಅಪ್ಪ ತಿಳಿಸಿದರು. ಮಾತನಾಡುತ್ತಾ ಇದ್ದಾಗ ಮೆಲ್ಲಗೆ ಅಖಿಲ ಪಲ್ಯವನ್ನು ತಿನ್ನದೆ ಪಕ್ಕಕ್ಕೇ ಇಟ್ಟಿದ್ದಳು. ಅಮ್ಮ ಇದನ್ನು ನೋಡಿ ತರಕಾರಿಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು, ಆದ್ದರಿಂದ ತಿನ್ನದೆ ಇರುವ ಹಾಗಿಲ್ಲ ಎಂದು ಅವಳಿಗೆ ಜೋರು ಮಾಡಿದರು! ಊಟ ಮುಗಿಯಿತು. ಎಲ್ಲರೂ ಗಣಪತಿಯ ಮಂಟಪ ತಯಾರು ಮಾಡಲು ಹೊರಟರು. ಹಬ್ಬದ ಸಂಭ್ರಮವನ್ನು ಶುರುಹಚ್ಚಿಕೊಂಡರು.

-ಡಾ.ಸುಧಾ ರಮೇಶ್, ಮೈಸೂರು

6 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ ಮೇಡಂ ಲೇಖನ. ಹಬ್ಬಗಳು ಮುಖ್ಯ, ಅದರ ಜೊತೆಗೆ ಆ ಹಬ್ಬಗಳ ಆಚರಣೆಯಿಂದ ನಮ್ಮ ಪರಿಸರಕ್ಕೆ ತೊಂದರೆ ಆಗದಂತೆ ಆಚರಿಸಬೇಕು ಅನ್ನುವ ಪ್ರಜ್ಞೆಯೂ ನಮ್ಮಲ್ಲಿರಬೇಕಾದದ್ದು ಬಹಳ ಮುಖ್ಯ.

  2. ಬಿ.ಆರ್.ನಾಗರತ್ನ says:

    ಹಬ್ಬಗಳ ಆಚರಣೆಯ ಜೊತೆಗೆ ಪರಿಸರದ ಕಾಳಜಿಯನ್ನು ಪಾತ್ರ ಗಳು ಮೂಲಕ ತಿಳಿಸುವ ನಿಮ್ಮ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ ಅಭಿನಂದನೆಗಳು.

  3. Vatsala says:

    Very well written Sudha. People should take care of the environment and the health issues involved in buying coloured ganeshas.

  4. ಶಂಕರಿ ಶರ್ಮ says:

    ಪರಿಸರಕ್ಕೆ ಪೂರಕವಾದ ಗಣಪನ ವಿಗ್ರಹದ ಪೂಜೆ ಇಂದು ಅತ್ಯಗತ್ಯವಾಗಿದೆ. ಸಕಾಲಿಕ ಸುಂದರ ಕಥಾಲೇಖನ..ಧನ್ಯವಾದಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: