ಮಾಸದ ಅಜ್ಜಿಯ ಪ್ರೀತಿ.
ಸುಮಾರು ಐದು ದಶಕಗಳ ಹಿಂದಿನ ಒಂದು ಪ್ರಸಂಗ. ನಾನಾಗ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದೆ. ಆಗೆಲ್ಲಾ ಈಗಿನಂತೆ ಹೆಚ್ಚು ಶಾಲೆಗಳಾಗಲೀ, ವಾಹನ ಸೌಕರ್ಯಗಳಾಗಲೀ, ದೂರವಾಣಿ ಸಂಪರ್ಕವಾಗಲೀ ಇರಲಿಲ್ಲ. ನಟರಾಜಾ ಸರ್ವೀಸೇ ಬಹುತೇಕ ಶಾಲಾ ಹುಡುಗರ ಪಾಲಿಗಿದ್ದದ್ದು. ಅದರಂತೆ ನಮ್ಮ ಮನೆಗೂ ಶಾಲೆಗೂ ಸುಮಾರು ಎರಡು ಕಿಲೋಮೀಟರ್ ದೂರ ನಡೆದೇ ಹೋಗುತ್ತಿದ್ದೆವು. ಬೆಳಗ್ಗೆ ಶಾಲೆಗೆ ಹೊರಡುವಾಗಲೇ ಮಧ್ಯಾನ್ಹದ ಊಟಕ್ಕಾಗಿ ಬುತ್ತಿಯನ್ನು ಮನೆಯಿಂದ ತೆಗೆದುಕೊಂಡು ಹೋಗುವುದು ಅನಿವಾರ್ಯವಾಗಿತ್ತು.
ಒಂದು ದಿನ ಬೆಳಗಿನ ತಿಂಡಿಯಾದ ನಂತರ ಶಾಲೆಗೆ ಹೊರಡುವವರೆಗೂ ನಾನು ಹೊರಗೇ ನೆರೆಮನೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದೆ. ನಂತರ ಸಮಯವಾಯಿತೆಂದು ಅವಸರದಿಂದ ಚೀಲಕ್ಕೆ ಪುಸ್ತಕಗಳನ್ನು ಸೇರಿಸಿದೆ. ಊಟದ ಡಬ್ಬಿಗಾಗಿ ಅಡುಗೆ ಮನೆಗೆ ನುಗ್ಗಿದೆ. ಅಮ್ಮ ಆಹಾ ಈಗ ಬಂದೆಯಾ, ಗಂಡುಬೀರಿಯಂತೆ ಮೂರುಹೊತ್ತೂ ಬೀದಿಯಲ್ಲೇ ಇರುತ್ತೀಯಾ. ಸ್ವಲ್ಪ ನನಗೆ ಬೆಳಗಿನ ಹೊತ್ತು ಚಿಕ್ಕಪುಟ್ಟ ಸಹಾಯ ಮಾಡಬಾರದೇ? ಎಂದು ಮುಖಕ್ಕೆ ಮಂಗಳಾರತಿ ಮಾಡಿದರು. ಇವತ್ತು ಸ್ವಲ್ಪ ಏಳುವುದು ತಡವಾಯ್ತು. ಅನ್ನ, ಸಾರು ಬಿಸಿಯೆಂದು ಆರಲಿಕ್ಕೆ ಇಟ್ಟಿದ್ದೇನೆ. ತಣ್ಣಗಾಗಿರಬಹುದು. ಅಲ್ಲೇ ಮೊಸರಿನ ಪಾತ್ರೆಯೂ ಇದೆ. ಕಲೆಸಿಕೊಂಡು ಡಬ್ಬಿಗಳಿಗೆ ಹಾಕಿಕೋ ಎಂದರು. ಅಷ್ಟರಲ್ಲಿ ಹೊರಗಿನಿಂದ ನನ್ನ ಗೆಳತಿಯರು ಹೊತ್ತಾಯಿತೆಂದು ಕೂಗಿ ಅವಸರ ಮಾಡಿದರು. ಅಮ್ಮ ನನಗೆ ಬೈದು ಕೆಲಸ ಹೇಳಿದರೆಂದು ಸಿಟ್ಟಿನಿಂದ ಡಬ್ಬಿಯನ್ನೂ ತುಂಬಿಸಿಕೊಳ್ಳದೇ ಪುಸ್ತಕದ ಚೀಲವನ್ನಷ್ಟೇ ಹೆಗಲಿಗೇರಿಸಿ ಕಾಯುತ್ತಿದ್ದ ಗೆಳತಿಯರ ಜೊತೆ ಶಾಲೆಗೆ ಹೊರಟುಹೋದೆ.
ಮಧ್ಯಾನ್ಹದ ಊಟದ ಬಿಡುವಿನಲ್ಲಿ ಗೆಳತಿಯರೆಲ್ಲ ತಮ್ಮ ತಮ್ಮ ಡಬ್ಬಿಗಳನ್ನು ಹಿಡಿದು ಹೊರನಡೆದರು. ನನಗೂ ಹೊಟ್ಟೆ ತಾಳ ಹಾಕುತ್ತಿತ್ತು. ಆದರೆ ಏನು ಮಾಡುವುದು. ಅಮ್ಮನ ಮೇಲೆ ಏಕಾದರೂ ಸಿಟ್ಟು ಮಾಡಿಕೊಂಡೆನೋ ಎಂದು ಪಶ್ಚಾತ್ತಾಪವಾಯಿತು. ಇನ್ನು ಸಾಯಂಕಾಲದವರೆಗೂ ಖಾಲಿ ಹೊಟ್ಟೆಯಲ್ಲೇ ಇದ್ದು ಮನೆಗೆ ಅಷ್ಟು ದೂರ ನಡೆದುಕೊಂಡು ಹೋಗಬೇಕಲ್ಲಾ ಎಂದು ಯೋಚನೆಯಾಯಿತು. ಅಷ್ಟರಲ್ಲಿ ಯಾರೊ ನನ್ನನ್ನು ಭುಜ ಹಿಡಿದು ಮುಟ್ಟಿದರು. ಅಚ್ಚರಿಯಿಂದ ಹಿಂದಿರುಗಿ ನೋಡಿದೆ. ನಮ್ಮ ಅಜ್ಜಿ ! ಇವರು ಹೇಗೆ ಬಂದರು? ಎಂದು ಚಿಂತಿಸುವಷ್ಟರಲ್ಲಿ ಉತ್ತರ ಅಜ್ಜಿಯಿಂದಲೇ ಬಂದಿತು. ‘ನಾನು ಆಗಲೇ ಬಂದೆ. ಟೀಚರಮ್ಮನನ್ನು ಕೇಳಿದರೆ ಅವರು ನಿನ್ನನ್ನು ಕರೆಸಿ ಬೈಯಬಹುದೆಂದು ಆ ಮರದ ಕೆಳಗೇ ಕಾಯುತ್ತಿದ್ದೆ. ಈಗ ನಿನ್ನನ್ನು ಕಂಡು ಇಲ್ಲಿಗೆ ಬಂದೆ ‘ ಎಂದರು. ನಮ್ಮಜ್ಜಿ ತೊಂಬತ್ತರ ಆಸುಪಾಸಿನವರು. ಅವರ ಶರೀರ ಬಾಗಿತ್ತು. ನನಗಾಗಿ ಊಟದ ಡಬ್ಬಿಯನ್ನು ತೆಗೆದುಕೊಂಡು ಎರಡು ಕಿಲೋಮೀಟರ್ ನಡೆದುಕೊಂಡು ಬಂದಿದ್ದರು.
ಬೆಳಗಿನ ನನ್ನ ವರ್ತನೆಯಿಂದ ನನಗೇ ನಾಚಿಗೆಯಾಯಿತು. ಅಜ್ಜಿಗೆ ಕಷ್ಟ ಕೊಟ್ಟೆನಲ್ಲಾ ಎಂದು ಅಳು ಬಂದಿತು. ಅಜ್ಜಿಯನ್ನು ತಬ್ಬಿಕೊಂಡು ಅತ್ತುಬಿಟ್ಟೆ. ಅಜ್ಜಿಯೇ ನನ್ನನ್ನು ಸಂತೈಸಿ ನಿಮ್ಮಮ್ಮ ಹೇಳಿದ್ದರಲ್ಲಿ ಏನು ತಪ್ಪಿದೆ? ಅವಳೇನು ನಿನ್ನನ್ನು ಅಡುಗೆ ಮಾಡು ಎಂದಳೇ? ಊಟವನ್ನು ಕಲೆಸಿ ಡಬ್ಬಿಗೆ ಹಾಕಿಕೋ ಎಂದಷ್ಟೇ ಹೇಳಿದಳು. ಅಷ್ಟಕ್ಕೇ ಸಿಟ್ಟು ಮಾಡಿಕೊಂಡು ಬಂದು ಬಿಟ್ಟೆಯಲ್ಲಾ. ನೀನು ಉಪವಾಸ ಇರುವುದನ್ನು ಕಂಡು ನನಗೆ ಗಂಟಲಲ್ಲಿ ತುತ್ತೇ ಇಳಿಯಲಿಲ್ಲ. ಅದಕ್ಕೇ ತಡೆಯಲಾರದೇ ನಾನೇ ಡಬ್ಬಿ ತೆಗೆದುಕೊಂಡು ನಿಧಾನವಾಗಿ ಇಲ್ಲಿಗೇ ಬಂದುಬಿಟ್ಟೆ ಎಂದಂದು ನನ್ನ ಕೈಹಿಡಿದು ಮರದ ನೆರಳಿಗೆ ಕರೆದುಕೊಂಡು ಹೋಗಿ ಊಟ ಮಾಡು ಎಂದರು. ಇಬ್ಬರೂ ಅದರಲ್ಲಿಯೇ ಊಟ ಮಾಡಿದೆವು.
ಅಂದು ನನ್ನ ಅಜ್ಜಿ ತೋರಿದ ಪ್ರೀತಿಯನ್ನು, ನನ್ನನ್ನು ಅವರು ತಿದ್ದಿದ ರೀತಿಯನ್ನು ನಾನಿನ್ನೂ ಮರೆಯಲಾರೆ.
-ಬಿ.ಆರ್.ನಾಗರತ್ನ. ಮೈಸೂರು.
ಹೃದಯ ಸ್ಪರ್ಶಿ ಘಟನೆ. ಹೌದು ಅಜ್ಜಿ ಎಂಬ ಜೀವ ಯಾವಾಗಲೂ ಆಪ್ತ. ಹೆತ್ತವರಿಗಿಂತ ಆ ಹಿರಿ ಜೀವವೇ ಹತ್ತಿರವಾಗುವುದು.
ವಾತ್ಸಲ್ಯ,
ನಿಮ್ಮ ಈ ಘಟನೆ ಓದಿದಾಗ, ಅಜ್ಜಿ ತಾತ ಅವರುಗಳಿಗೆ, ಮೊಮ್ಮಕ್ಕಳ ಮೇಲಿರುವ ಪ್ರೀತಿಯನ್ನು, ಅಸಲಿಗಿಂತ ಬಡ್ಡಿಯ ಮೇಲೇ ಪ್ರೀತಿ ಜಾಸ್ತಿ, ಎನ್ನುವ ನಿದರ್ಶನದೊಂದಿಗೆ ಬಣ್ಣಿಸುವುದು ನೆನಪಾಯಿತು. ಚಂದದ ಬರಹ, ಮಧುರ ನೆನಪು
ನನ್ನ ಬರವಣಿಗೆಯನ್ನು ಓದಿ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸಿದವರೆಲ್ಲರಿಗೂ. ಧನ್ಯವಾದಗಳು
ಪ್ರೀತಿಯ ನೆನಪು ಮಧುರ.ಬರವಣಿಗೆ ಯೂ ಸುಂದರ
ಅಮ್ಮನಿಗಿಂತಲೂ ಒಂದು ಕೈ ಜಾಸ್ತಿಯಾಗಿಯೇ ಅಕ್ಕರೆ ತೋರುವವರೆಂದರೆ ಅದು ಅಜ್ಜಿ ಮಾತ್ರ. ತಮ್ಮ
ಅನುಭವದ ನಿರೂಪಣೆ ಚೆನ್ನಾಗಿದೆ
ಅಜ್ಜಅಜ್ಜಿಯಂದಿರಿಗೆ ಮಕ್ಕಳಿಗಿಂತಲೂ ಮೊಮ್ಮಕ್ಕಳ ಮೇಲೆ ಅಕ್ಕರೆ ಹೆಚ್ಚಂತೆ. ನಾನೂ ಅದನ್ನು ಕಾಣುತ್ತಿರುವೆ. ನಿಮ್ಮ ಬರಹ ಚೆನ್ನಾಗಿರುತ್ತೆ.
ನಿಮ್ಮ ಕಥೆ ಓದಿ ನಂಗು ಅಜ್ಜಿ ಪ್ರೀತಿ, ಮಮಕಾರ ನೆನಪಾಯಿತು. ಇನ್ನಿಲ್ಲದ ಅಜ್ಜಿ ಜೊತೆ ಫೋನ್ ಮಾಡಿ ಮಾತಾಡ ಬೇಕು ಅನ್ನಿಸಿತು.
ಅಚ್ಚಿ ,ಅಜ್ಜಿಯ ಮನೆ ಬಾಲ್ಯ ದೊಂದಿಗೆ ಬಾಲ್ಯದ ಸವಿನೆನಪುಗಳು ಒಂದಿಗೆ ಹಾಲು-ಜೇನಿನಂತೆ ಬೆರೆತುಕೊಂಡಿದೆ ಆ ದಿನಗಳು ಎಷ್ಟು ನೆಮ್ಮದಿಯಿಂದ ಸಂತೋಷದಿಂದ ನಿರಮ್ಮಳವಾಗಿ ಇದ್ದವು ಎಂದನಿಸುತ್ತದೆ