ವಿಶ್ವ ರಕ್ತದಾನಿಗಳ ದಿನ-ಸುರಕ್ಷಿತ ರಕ್ತ ಸುರಕ್ಷಿತ ಪ್ರಾಣ
ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದ ದಾನ ರಕ್ತದಾನ. ಮಾನವನ ರಕ್ತ ಅಮೃತಕ್ಕೆ ಸಮಾನ. ನಮ್ಮೆಲ್ಲರ ಧಮನಿಯಲ್ಲೂ ಹರಿಯುತ್ತಿರುವ ರಕ್ತ ಒಂದೇ ಅಲ್ಲವೇ ? ವಿಶ್ವದಲ್ಲೆಡೆ ಪ್ರತಿಕ್ಷಣ ಲಕ್ಷಾಂತರ ಜನ ರಕ್ತದ ಅಗತ್ಯದಲ್ಲಿರುತ್ತಾರೆ. ಲಕ್ಷಾಂತರ ಮಂದಿ ತಮಗೆ ಬೇಕಾದವರಿಗೆ ರಕ್ತವನ್ನು ಹುಡುಕಿಕೊಂಡು ದುಗುಡದಿಂದ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿರುವ ದೃಶ್ಯ ಮನಕಲುಕುವಂತಿರುತ್ತದೆ.
ವಿಶ್ವದಾದ್ಯಂತ ರಕ್ತದ ಬೇಡಿಕೆ ಮತ್ತು ಪೂರೈಕೆಯ ನಡುವೆ ಅಗಾಧ ಪ್ರಮಾಣದ ಅಂತರವಿದೆ. ನಮ್ಮ ದೇಶದಲ್ಲಿ ಸುಮಾರು 4.5 ಕೋಟಿ ಯೂನಿಟ್ ಅವಶ್ಯಕತೆ ಇದೆ ಆದರೆ ವಿಪರ್ಯಾಸ ನಮ್ಮ ಬಳಿ ಇರುವುದು ಕೇವಲ 50 ರಿಂದ 60 ಲಕ್ಷ ಯೂನಿಟ್ ಮಾತ್ರ. ತತ್ಪರಿಣಾಮವಾಗಿ ಸಕಾಲದಲ್ಲಿ ರೋಗಿಗಳಿಗೆ ರಕ್ತ ಪೂರೈಕೆಯಾಗದೆ ಲಕ್ಷಾಂತರ ಜನರು ಅಸುನೀಗಿದ್ದಾರೆ. ಈ ಸಂದಿಗ್ದ ಪರಿಸ್ಥಿತಿಯನ್ನು ಪರಿಹರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಹಲವಾರು ಅಂತರಾಷ್ರ್ಟೀಯ ಸಂಘಟನೆಗಳೊಂದಿಗೆ ಸ್ವಯಂಪ್ರೇರಿತ ರಕ್ತದಾನವನ್ನು ಪ್ರೋತ್ಸಾಹಿಸುವ ಸಲುವಾಗಿ ಜೂನ್ 14 ರಂದು ವಿಶ್ವರಕ್ತದಾನಿಗಳ ದಿನವನ್ನಾಗಿ ಪ್ರತಿವರ್ಷ ಆಚರಿಸಲಾಗುತ್ತಿದೆ. ಈ ದಿನದಂದು ಸ್ವಯಂಪ್ರೇರಿತ ರಕ್ತದಾನಿಗಳಿಗೆ ಕೃತಜ್ಙತೆ ಸಲ್ಲಿಸಲು ಹಾಗೂ ರಕ್ತದಾನದ ಬಗ್ಗೆ ಜನಜಾಗೃತಿ ಮೂಡಿಸಲು ಪ್ರತಿವರ್ಷವೂ ಒಂದೊಂದು ಥೀಮ್‌ನೊಂದಿಗೆ ಆಚರಿಸಲಾಗುತ್ತದೆ. 2020ರ ಈ ವರ್ಷದಂದು ಸುರಕ್ಷಿತ ರಕ್ತ-ಸುರಕ್ಷಿತ ಜೀವ ಎಂಬ ಸಂದೇಶದೊಂದಿಗೆ ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ.
ಪ್ರಾಣಾಪಾಯದ ಸ್ಥಿತಿಯಲ್ಲಿರುವವರನ್ನು ಬದುಕಿಸಲು ನೀವು ವೈದ್ಯರೇ ಆಗಬೇಕೆಂದಿಲ್ಲಾ. ನೀವು ಸ್ವಯಂಪ್ರೇರಿತರಾಗಿ ನೀಡುವ ಜೀವದ್ರವ್ಯದ ಒಂದು ಯೂನಿಟ್ ರಕ್ತವು ಮೂರು ಜನರ ಅಮೂಲ್ಯವಾದ ಜೀವವನ್ನು ಉಳಿಸಬಲ್ಲದು. ರಕ್ತದಾನ ಮಾಡಲು ಹಣಬೇಕಾಗಿಲ್ಲ. ಬೇಕಾಗಿರುವುದು ನೊಂದಿರುವ ಜೀವಗಳಿಗೆ ಮಿಡಿಯುವ ಹಿರಿದಾದ ಮನಸ್ಸು.
ಜೂನ್ 14 ರಂದೇ ಏಕೆ ಆಚರಿಸಲಾಗುತ್ತಿದೆ?
ಆಸ್ಟ್ರಿಯಾದ ವೈದ್ಯ ಕಾರ್ಲ್ ಲ್ಯಾಂಡ್ ಸ್ಟೇನರ್ ಅವರು 1901 ರಲ್ಲಿ ಮಾನವನ ರಕ್ತದ ಮೊದಲ ಮೂರು ಗುಂಪುಗಳನ್ನು ಸಂಶೋಧಿಸಿದರು.ಅವರ ಜನ್ಮದಿನವಾದ ಜೂನ್ 14 (1868)ಅನ್ನು ವಿಶ್ವರಕ್ತದಾನಿಗಳ ದಿನವೆಂದು 2005 ರಿಂದ ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಇವರ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಇವರ ಜನ್ಮದಿನವನ್ನು ರಕ್ತದಾನಿಗಳ ದಿನವನ್ನಾಗಿ ಆಚರಿಸುವ ಮೂಲಕ ಗೌರವಿಸಲಾಗಿದೆ.
ರಕ್ತದಾನ ಯಾರು ಮಾಡಬಹುದು- 18 ರಿಂದ 60 ವರ್ಷದೊಳಗಿನ ಆರೋಗ್ಯವಂತ ಯಾವುದೇ ವ್ಯಕ್ತಿಗಳಾದರೂ ರಕ್ತದಾನ ಮಾಡಬಹುದು. ಆದರೆ ದಾನಿಗಳ ದೇಹದ ತೂಕ 45 ಕೆಜಿ ಮೇಲ್ಪಟ್ಟಿದ್ದು ಹೀಮೋಗ್ಲೋಬಿನ್ ಅಂಶ 12.5 ಗ್ರಾಂಗಿಂತ ಹೆಚ್ಚಿರಬೇಕು. ರಕ್ತದ ಒತ್ತಡ 70/140 ಸಾಮಾನ್ಯವಾಗಿರಬೇಕು.
ರಕ್ತದಾನ ಯಾರು ಮಾಡಬಾರದು
ಅನಾರೋಗ್ಯದಿಂದ ಬಳಲುತ್ತಿರುವವರು, ನಿರಂತರವಾಗಿ ಔಷಧಿ ಸೇವಿಸುತ್ತಿರುವವರು, ಹೃದ್ರೋಗದಿಂದ ಬಳಲುತ್ತಿರುವರು, ಧೀರ್ಘಕಾಲೀನ ರೋಗಗಳಾದ ಲಿವರ್, ಕಿಡ್ನಿ ಸಮಸ್ಯೆ, ಮಧುಮೇಹಿಗಳು, ಏಡ್ಸ್, ಕಡಿಮೆ ತೂಕ ಹೊಂದಿರುವವರು ರಕ್ತದಾನ ಮಾಡುವಂತಿಲ್ಲ. ಈಗಾಗಲೇ ಬದಲಿ ರಕ್ತ ಹಾಕಿಸಿಕೊಂಡವರು, ಮೈಮೇಲೆ ಹಚ್ಚೆ ಹಾಕಿಸಿಕೊಂಡವರು ಸುಮಾರು ಆರು ತಿಂಗಳುಗಳ ಕಾಲ ರಕ್ತದಾನ ಮಾಡಬಾರದು.
ರಕ್ತದಾನ ಮಾಡುವುದರಿಂದ ಪ್ರಯೋಜನಗಳು
ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸರಕ್ತ ಉತ್ಪತ್ತಿಯಾಗುತ್ತದೆ,ಜೊತೆಗೆ ಉತ್ತಮ ಆರೋಗ್ಯ ಹೊಂದಬಹುದು. ಇದರಿಂದ ದಾನಿಯ ಕಾರ್ಯತತ್ಪರತೆ, ಜ್ಞಾಪಕಶಕ್ತಿ ಹೆಚ್ಚಾಗುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುವುದರ ಮೂಲಕ ಶೇ.80ರಷ್ಟು ಹೃದಯಘಾತ ಕಡಿಮೆಯಾಗುತ್ತದೆ. ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ನೋವು ಆಗುವುದಿಲ್ಲ. ಕೇವಲ 20 ನಿಮಿಷ ವಿಶ್ರಾಂತಿ ಪಡೆದರೆ ಸಾಕು, 48 ಗಂಟೆಯೊಳಗಾಗಿ ಅಷ್ಟೇ ಪ್ರಮಾಣದ ರಕ್ತ ಉತ್ಪಾದನೆಯಾಗುತ್ತದೆ.
ಮಾನವನ ರಕ್ತ ಅಮೃತಕ್ಕೆ ಸಮಾನ. ಮಾನವನ ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾದ್ಯವಿಲ್ಲ. ರಕ್ತಕ್ಕೆ ಪರ್ಯಾಯವಾದ ಯಾವುದೇ ವಸ್ತುವಿಲ್ಲ. ರಕ್ತವನ್ನು ಮನುಷ್ಯರ ದಾನದಿಂದ ಮಾತ್ರ ಪಡೆಯಬಹುದು.ರಕ್ತವನ್ನು ನೀಡಿ ಇನ್ನೊಬ್ಬರ ಪ್ರಾಣವನ್ನು ಉಳಿಸಬಹುದು.ದೇಹದಲ್ಲಿ ಆರೋಗ್ಯವಂತ ರಕ್ತವಿದ್ದರೆ ಸಾಲದು ,ರಕ್ತದಾನ ಮಾಡಿ ಜೀವ ಉಳಿಸಬಲ್ಲ ಉದಾರ ಮನಸ್ಸು ಪ್ರತಿಯೊಬ್ಬರಿಗೂ ಬೇಕು.
ಬನ್ನಿ ಗೆಳೆಯರೇ ನಾವೆಲ್ಲಾ ಒಂದಾಗೋಣ.ಜಾತಿ,ಮತ ಧರ್ಮ ಲಿಂಗಭೇಧವನ್ನು ಬದಿಗಿರಿಸಿ ನಾವೆಲ್ಲಾ ಒಂದೇ ಎಂಬ ವಿಶ್ವಮಾನವತ್ವವನ್ನು ಸಾರೋಣ. ನಾವೆಲ್ಲರೂ ವಿಶ್ವ ರಕ್ತದಾನಿಗಳ ದಿನದಂದು ಎಲ್ಲಾ ದಾನಗಳಿಗಿಂತ ಮಿಗಿಲಾದ ಶ್ರೇಷ್ಠವಾದ ದಾನ ಎನಿಸಿಕೊಂಡಿರುವ ರಕ್ತದಾನ ಮಾಡೋಣ,ಅಮೂಲ್ಯವಾದ ಜೀವಗಳನ್ನು ಉಳಿಸೋಣ.
– ಮಹೇಶ್.ಕೆ.ಎನ್ , ಚಿತ್ರದುರ್ಗ
ಉಪಯುಕ್ತ ಮಾಹಿತಿಯುಳ್ಳ ಸಕಾಲಿಕ ಲೇಖನ..ಧನ್ಯವಾದಗಳು.
Thank you very much sir