ಬೆಳಕಿನ ಕಣ್ಣುಗಳು
ನಮ್ಮ ಬಾಲ್ಯದ ದಿನಗಳ ನೆನಪು. ಬಾನಂಗಳದಲ್ಲಿ ಚುಕ್ಕಿಗಳು ಮೂಡುವ ವೇಳೆಗೆ ಮನೆ ಅಂಗಳದಲ್ಲಿ ಚಾಪೆ ಹಾಕಿ ಮಕ್ಕಳೆಲ್ಲ ಅಲ್ಲಿ ಹಾಜರಿ ಇರುತ್ತಿದ್ದೆವು. ಅಡಿಕೆಲೆ ಚೀಲದಿಂದ ಒಂದೆರಡು ಪೇಡಡಿಕೆ ತೆಗೆದು ಬಾಯಿಗೆ ಹಾಕಿಕೊಂಡು, ತೋರು ಬೆರಳಲ್ಲಿ ಸುಣ್ಣದ ಡಬ್ಬಿಯಿಂದ ತೆಗೆದ ಸುಣ್ಣವನ್ನ ವೀಳ್ಯದೆಲೆಗೆ ಸವರಿ, ಎಲೆಮುದುರಿ ಬಾಯಿಗಿಟ್ಟು ಅಗಿದು, ಕಟಬಾಯಿಗೆ ಬಂದ ಕೆಂಪು ರಂಗಿನ ತಾಂಬೂಲದ ರಸವನ್ನ ಸೆರಗಿನಿಂದ ಒರೆಸಿಕೊಳ್ಳುತ್ತ ಅಜ್ಜಿ ಕತೆ ಹೇಳಲು ಆರಂಭಿಸುತ್ತಿದ್ದಳು.
ಎಂತೆಂಥಹ ಕಥೆಗಳು ಅಜ್ಜಿಯ ನೆನಪಿನ ಬತ್ತಳಿಕೆಯಲ್ಲಿದ್ದವು! ಅಜ್ಜಿಗೆ ಹನ್ನೆರಡೊರುಷಕ್ಕೆ ಮದುವೆ ಮಾಡಿದ್ದು, ಹದಿನಾರಕ್ಕೆ ಚೊಚ್ಚಲ ಹೆರಿಗೆ. ಗಿರಣಿಗಳಿಲ್ಲದ ಆ ಕಾಲದಲ್ಲಿ ಭತ್ತವನ್ನು ಒರಳು ಒನಕೆಯಿಂದ ಕುಟ್ಟಿ ಅಕ್ಕಿಯಾಗಿಸುವುದು, ರಾಗಿಯನ್ನು ಬೀಸಿ ಹಿಟ್ಟಾಗಿಸುವುದು. ಬೇಸಾಯಕ್ಕೆ ಬಾವಿಯಲ್ಲಿ ನೀರು ಮೇಲೆತ್ತಲು ಎತ್ತು, ಏತಗಳ ಅವಲಂಭಿಸಿದ್ದು. ಇನ್ನೂ ಅನೇಕ ಸಂಗತಿಗಳಿವೆ. ಅವೆಲ್ಲ ಅಜ್ಜಿಯ ನೆನಪಿನ ಬುತ್ತಿಯ ಗಂಟುಗಳು.
ಶಾಲೆಯೇ ಓದಿರದ ಅಜ್ಜಿಗೆ ಮಹಾಭಾರತ ರಾಮಾಯಣದ ಕತೆಗಳು ಬಾಯಿಪಾಠ. ಪುರಾಣದ ಎಲ್ಲಾ ಕತೆಗಳು ಗೊತ್ತಿದ್ದವು. ಪ್ರತಿದಿನ ಒಂದೆರಡು ಕತೆ ಹೇಳುತ್ತಿದ್ದಳು. ಮಾತ್ರವಲ್ಲದೇ ಜಾನಪದ ಕತೆಗಳು ಸಹ ಅಜ್ಜಿಯ ನಾಲಗೆ ತುದಿಯಲ್ಲಿದ್ದವು. ಇಷ್ಟೆಲ್ಲವು ಆಕೆ ಪುಸ್ತಕ ಓದಿ ಕಲಿತದ್ದಲ್ಲ. ಅವರ ಹಿರಿಯರ ಬಾಯಿಂದ ಕೇಳಿದ್ದ ಕತೆಗಳು. ಅಜ್ಜಿಯ ನೆನಪಿನ ಶಕ್ತಿ ಅಪಾರ.
ಈಗ ವೇಗವಾಗಿ ಕಾಲ ಬದಲಾಗಿದೆ. ಎಲ್ಲರಿಗೂ ಕೈಯ ಅಳತೆಯಲ್ಲಿ ತಂತ್ರಜ್ಞಾನ ಲಭ್ಯವಿದೆ. ಕಥೆಗಳಿಗೇನು ಬರವೇ? ಕಿರುತೆರೆಯಲ್ಲಿ ಪ್ರತಿದಿನ ನೂರಾರು ಧಾರಾವಾಹಿಗಳು ಪ್ರಸಾರವಾಗುತ್ತವೆ. ಇವುಗಳ ನಡುವೆ ನಿಮಿಷಕ್ಕೊಮ್ಮೆ ನ್ಯೂಸ್ ಚಾನೆಲ್ಲುಗಳು ಬಿತ್ತರಿಸುವ ಬ್ರೇಕಿಂಗ್ ನ್ಯೂಸುಗಳು ಬೇರೆ. ನಮ್ಮ ಬಾಲ್ಯದ ಕಾಲದಲ್ಲಿ ಸಂಜೆಯಾದರೆ ಅಜ್ಜಿ ಹೇಳುವ ಕತೆಗಾಗಿ ಮನೆಯ ಮಕ್ಕಳೆಲ್ಲ ಅಂಗಳದಲ್ಲಿ ಕೂತರೆ, ಕೇರಿಯ ಹೆಂಗಸರು ತಮ್ಮ ಪಾಲಿನ ಅಡಿಗೆ ಮುಸುರೆ ಕೆಲಸವನ್ನು ಮುಗಿಸಿ ಅಂಗಳದಲ್ಲಿ ಒಂದೆಡೆ ಕಲೆತು ಮಾತಿಗೆ ಕೂರುತ್ತಿದ್ದರು. ತವರಿನ ಕತೆಗಳು, ಜಾತ್ರೆಯ ಸುದ್ದಿಗಳು, ಹೊಲ ಕೆಲಸ, ಹಿಟ್ಟು ಎಸರು ಇತ್ಯಾದಿ ಮಾತುಕತೆಗಳು ಕೇರಿಯ ಎಲ್ಲರ ಮನೆ ಮನಸ್ಸುಗಳನ್ನು ಬೆಸೆಯುತ್ತಿದ್ದವು.
ಈಗ ಕಥೆ ಹೇಳುವ ಅಜ್ಜಿಯರಿಲ್ಲ. ಅಂಗಳದಲ್ಲಿ ಹಿಟ್ಟು ಎಸರಿನ ಮಾತಿಗೆ ಕೂರುವ ಮಹಿಳೆಯರಿಲ್ಲ. ಅವರೆಲ್ಲರನ್ನು ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಸೆಳೆದಿವೆ. ಮಕ್ಕಳು ಮರಿಗಳು ಸಹ ಓದು, ಹೋಂವರ್ಕು, ಮೋಬೈಲ್, ಕಂಪ್ಯೂಟರಿನತ್ತ ಮುಖ ತಿರುಗಿಸಿದ್ದಾರೆ. ನಮ್ಮ ತಲೆಮಾರಿನ ಮಕ್ಕಳಿಗೆ ಅಜ್ಜ ಅಜ್ಜಿ ಕಥೆಗಳ ಮುಖಾಂತರ ಸತ್ಯ, ನ್ಯಾಯ, ನೀತಿ, ಧರ್ಮಗಳ ಬಗ್ಗೆಯೂ ತಿಳಿ ಹೇಳುತ್ತಿದ್ದರು. ಈಗಿನ ತಲೆಮಾರಿಗೆ ಅವುಗಳನ್ನು ತಿಳಿಸುವವರು ಯಾರು?
ಇದನ್ನೇ ಯೋಚಿಸುತ್ತಾ ಕುಳಿತಿದ್ದೆ. ಕರೆಂಟ್ ಹೋಗಿ ಮನೆಯ ತುಂಬೆಲ್ಲ ಕತ್ತಲಾವರಿಸಿತು. ಕತ್ತಲಲ್ಲಿ ತಡಕಿ ಹುಡುಕಿ ಟಾರ್ಚ್ ಬೆಳಗಿಸಿದ ನನ್ನಾಕೆ ದೇವರ ಗೂಡಿನ ದೀಪಕ್ಕೆ ಎಣ್ಣೆ ಎರೆದು ಬತ್ತಿ ಸರಿಮಾಡಿ ಕಡ್ಡಿಗೀರಿ ದೀಪ ಬೆಳಗಿಸಿದಳು. ದೀಪದ ಮಂದ ಬೆಳಕು ಕೋಣೆಯನ್ನಾವರಿಸಿತು. ಸೆಕೆಯ ಕಾರಣ ಮನೆಯಿಂದ ಹೊರಗೆ ಅಂಗಳಕ್ಕೆ ಬಂದೆ. ಆಕಾಶದ ತುಂಬಾ ಅಸಂಖ್ಯ ತಾರೆಗಳು. ಅವುಗಳ ನಡುವೆ ಒಬ್ಬನೇ ಚಂದಿರ. ಆದರೂ ಎಲ್ಲಾ ಊರುಗಳಿಗೂ ಬೆಳದಿಂಗಳ ಚೆಲ್ಲುವ ಚೆಲುವ ಅವನು. ಇದೇ ಆಲೋಚನೆಯಲ್ಲಿದ್ದವನ ಮನದಲ್ಲಿ ಕಿರುಗವಿತೆ ಒಂದರ ಬೆಳಕು ಬೆಳದಿಂಗಳು..
ಕತ್ತಲ ಕೋಣೆಯೊಳಗೆ
ಹಚ್ಚಿಟ್ಟ ಹಣತೆ
ನೋಡುತ್ತಿದೆ ಸುತ್ತಲೂ
ಬೆಳಕಿಗೆ ಕಣ್ಣುಗಳೆಷ್ಟು
-ನವೀನ್ ಮಧುಗಿರಿ.
ಚೆನ್ನಾಗಿದೆ. ತೆರೆಮರೆಗೆ ಸರಿದ ಕಾಲ ಹಾಗೂ ಇಂದಿನ ತುಲನೆ. ಹೌದು ಸಾಕಷ್ಟು ವಿಚಾರಗಳು ಬದಲಾಗಿವೆ ಇವತ್ತು.
ಬದಲಾದ ಕಾಲಘಟ್ಟದಲ್ಲಿರುವ ನಮ್ಮಂತಹವರಿಗೆ ಎಲ್ಲವೂ ಆಯೋಮಯ…ಸರಿ ತಪ್ಪುಗಳ ತುಲನೆ ಕಷ್ಟ. ನಮ್ಮನ್ನು ಬಾಲ್ಯದೆಡೆಗೆ ಒಯ್ದ ಸೊಗಸಾದ ಲೇಖನ.