ಒಣಕಾಷ್ಠದಲ್ಲರಳಿದ ಮೆಹಕ್‌ನ ಗೀತಾ..

Share Button

ಮುನೀರ್ ಅಹಮ್ಮದ್

ಮನುಷ್ಯನೆಂದ ಮೇಲೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಸಕ್ತಿಗಳು ಸಹಜ. ಆ ಆಸಕ್ತಿಗಳನ್ನು ವೃತ್ತಿಯನ್ನಾಗಿಯೋ, ಪ್ರವೃತ್ತಿಯನ್ನಾಗಿಯೋ ತೊಡಗಿಸಿಕೊಳ್ಳುವುದು ಮುಖ್ಯ. ಹವ್ಯಾಸಗಳು ಇರುವ ವ್ಯಕ್ತಿ ನಿಜವಾದ ಅರ್ಥದಲ್ಲಿ ಮನುಷ್ಯನಾಗುತ್ತಾನೆ. ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ ನಿರ್ಜೀವ ಮರದ ಕೊರಡುಗಳು ಒಲೆ ಉರಿಯಾಗುವುದನ್ನು ತಪ್ಪಿಸಿ ಅದರೊಳಗಿನಿಂದ ವಿಶಿಷ್ಠ ರೀತಿಯ ಕಲಾಕೃತಿಯನ್ನು ಹೊರ ತರುವಂತಹ ಅಪರೂಪದ ವ್ಯಕ್ತಿತ್ವದ ವ್ಯಕ್ತಿ ನಮ್ಮ ನಡುವೆ ಇದ್ದಾರೆ ಎಂಬುದು ಹೆಚ್ಚಿನವರಿಗೆ ತಿಳಿದಿರಲಾರದು. ಯಾವ ತರಬೇತಿ, ತರಗತಿಗಳಿಗೂ ಹೋಗದೆ ಸ್ವ ಇಚ್ಛೆಯಿಂದ ಸ್ವಯಂ ಕಲಿಕೆಯ ಮೂಲಕ ಕೊರಡನ್ನೂ ಕೊನರಿಸುವುದು ಸಾಮಾನ್ಯ ಸಂಗತಿಯಲ್ಲ. ಅಪಾರ ತಾಳ್ಮೆ, ಧ್ಯಾನಸ್ಥ ಮನೋಸ್ಥಿತಿ, ಮಾಡಿಯೇ ತೀರುತೇನೆಂಬ ಹಠ, ಎಲ್ಲಕ್ಕಿಂತ ಹೆಚ್ಚಾಗಿ ಆಸಕ್ತಿಯನ್ನು ದುಡಿಸಿಕೊಳ್ಳುವ ಛಲ ಇದ್ದರಷ್ಟೇ ಈ ರೀತಿಯಲ್ಲಿ ಕಲ್ಲರಳಿ ಹೂವಾದಂತೆ ಕೊರಡು ಕೊನರಿ ಅದರ ಮೆಹಕ್ ಮನದಲ್ಲರಳಿ ಮುದ ನೀಡಲು ಸಾಧ್ಯ.

ಈ ಸುಪ್ತ ಪ್ರತಿಭೆಗೆ ಅದೆಷ್ಟೋ ವರ್ಷಗಳಿಂದ ಜೀವ ತುಂಬುತ್ತಲೇ ಬಂದವರು ಮುನೀರ್ ಅಹಮ್ಮದ್. ಆದರೆ ಇವರೆಂದೂ ತಮ್ಮ ಪ್ರತಿಭೆಯ ಬಗ್ಗೆ ಪ್ರಚಾರ ಬಯಸಿದವರಲ್ಲ. ಮನೆಯ ಕೋಣೆ ಕೋಣೆಯನ್ನೂ ಅಲಂಕರಿಸಿರುವ ಇವರ ಕರಕುಶಲತೆಯ ಬಗ್ಗೆ ವಾಟ್ಸಾಪ್ ಗ್ರೂಪೊಂದರಿಂದ ಸೂಚ್ಯವಾಗಿ ತಿಳಿದು ಅದರ ಬೆನ್ನತ್ತಿದಾಗ ಈ ಅಮೋಘ ಕಲಾವಿದನ ಕಲೆಗೆ ತಲೆದೂಗಿದ್ದಂತೂ ನಿಜ. ಮರುಹುಟ್ಟು ಪಡೆದು ಜೀವಕಳೆಯಿಂದ ರೂಪುಗೊಂಡ ಆ ಜೀವಗಳೊಳಗೆ ಏನೇನಿಲ್ಲಾ? ಬೇಲಿ ಬದಿಯಲಿ ಬಿದ್ದು ಮಣ್ಣು ಪಾಲಾಗಬೇಕಿದ್ದ ಮರದ ತುಂಡು, ಗೆದ್ದಲು ತಿಂದ ಹಲಗೆ, ಒಲೆಗೆ ಸೇರಬೇಕಿದ್ದ ಒಣಮರದ ತುಂಡು, ಒಣಗಿದ ಹೊಂಬಾಳೆ, ಬೇರೆ ಬೇರೆ ಮರದ ಬೇರುಗಳು, ಬಿದಿರಿನ ತುಂಡು, ಮರವನ್ನಪ್ಪಿದ ಬಳ್ಳಿ, ಡಿಪ್ಪೋದಿಂದ ಹರಾಜಿನಲ್ಲಿ ತೆಗೆದುಕೊಂಡ ಗಟ್ಟಿ ಬೀಟೆಯ ಬೇರು ಹೀಗೆ ಇವರು ಆಯ್ದುಕೊಳ್ಳುವ ವಸ್ತುಗಳನ್ನು ಗಮನಿಸುತ್ತಾ ಹೋದರೆ ನಿಜಕ್ಕೂ ಅಚ್ಚರಿಯಾಗುತ್ತದೆ.

ಕೊರೋನ ಕಾಲದ ಈ ಲಾಕ್ಡೌನ್ ದಿನಗಳಲ್ಲಿ ಅದೆಷ್ಟೋ ಪ್ರತಿಭೆಗಳ ಸಾಮರ್ಥ್ಯದ ಅನಾವರಣಕ್ಕೆ ಕಾರಣವಾಗಿ ಅವರವರ ಅಭಿರುಚಿಯೆಡೆ ವಾಲಿ ತೊಡಗಿಸಿಕೊಂಡಿದ್ದಾರೆಂಬುದಕ್ಕೆ ಸಾಕಷ್ಟು ಮಂದಿಯ ಅನುಭವಗಳನ್ನು ಕೇಳಿದ್ದೇವೆ. ಇದೇ ಸೂಕ್ತ ಸಮಯವೆಂದು ಈ ಹೊತ್ತನ್ನು ಮುನೀರ್ ರವರು ಹಾಡು ಹೇಳುತ್ತಲೇ ರೂಪ ಕೊಡುವ ಆಕೃತಿಗೂ ಹಾಡ ಕಲಿಸುತ್ತಾರೆ. ಒಂದೊಮ್ಮೆ ಅವುಗಳ ಅಂದ ಹೆಚ್ಚಿಸಲೆಂದು ಪಾಲಿಶ್ ಮಾಡುವಾಗ ಮನದೊಳಗೆ ಮೌನ ಕವಿತೆಯೊಂದು ಹುಟ್ಟಿ ಅದನ್ನೂ ಕವಿಯಾಗಿಸುತ್ತಾರೆ. ಮತ್ತೊಮ್ಮೆ ಗಂಭೀರವಾಗುತ್ತಲೇ ಅತ್ಯಂತ ಸೂಕ್ಷ್ಮ ಕುಸುರಿಯಲ್ಲಿ ಮುಳುಗಿ ಚಿತ್ರಕಲೆಯ ಮೊರೆ ಹೋಗುತ್ತಲೇ ಅವುಗಳ ಮನರಂಜನೆಯ ಪ್ರಯತ್ನ ನಡೆಯುತ್ತದೆ. ಮಾಡಿದಷ್ಟೂ ಸಾಲದೆಂಬಂತೆ ಮೊಗೆದ ಕಲ್ಪನೆಯ ಕತೆ ಹೆಣೆಯುತ್ತಾ ತನ್ನ ಕೈಚಳಕದಿಂದ ಆಕೃತಿಗಳನ್ನು ರಂಗಾಗಿಸುತ್ತಾರೆ. ಹೀಗೆ ಹಾಡು, ಚಿತ್ರ, ಕವಿತೆ, ಕಲ್ಪನೆ, ಕತೆಗಳ ಉಸಿರಿನಿಂದ ವಿಶಿಷ್ಠ ರೂಪಗಳಾಗಿ ಹೊರಹೊಮ್ಮಿ ತಮಗೂ ಒಂದು ಸ್ಥಾನ ಗಿಟ್ಟಿಸಿಕೊಂಡು ಎಲ್ಲರ ಮನವನ್ನೂ ಸೂರೆಗೊಳ್ಳುವಂತೆ ಮೈದಳೆದು ಅರಳಿ ಮನೆಯೊಳಗೆ ಜೀವಂತಿಕೆ ತುಂಬುತ್ತವೆ. ಕಸದೊಳಗೆ ರಸವನ್ನು ಹುಡುಕುವ ಮುನೀರ್ ರವರು ನಾಜೂಕಿನ ಕಾಯಕಕ್ಕೆ ಧ್ಯಾನಸ್ಥ ಸ್ಥಿತಿಯಲ್ಲಿ ತಮ್ಮನ್ನು ಅರ್ಪಿಸಿಕೊಂಡು ಅವುಗಳು ಬೇಡುವ ತಾಳ್ಮೆಯನ್ನು ಅರ್ಥಮಾಡಿಕೊಳ್ಳುವುದರಿಂದ ಅವು ಕೂಡಾ ರಚ್ಚೆ ಹಿಡಿಯದೆ ಒಡೆಯನ ಇಂಗಿತಕ್ಕೆ ವಿಧೇಯತೆ ತೋರುತ್ತಿರುತ್ತವೆ. ಹೀಗಾಗಿ ತನ್ನಾಸೆಗೆ ತಕ್ಕಂತೆ ಪಳಗಿಸುವುದಕ್ಕೂ ಹಾಗೂ ಸುಂದರ ರೂಪದ ಅನಾವರಣಕ್ಕೂ ಕಾರಣವಾಗುತ್ತದೆ. ಅಲ್ಲದೆ ತಮ್ಮ ಕನಸನ್ನು ನನಸಾಗಿಸಿ ಹೊಸ ಸಾಧ್ಯತೆಗಳನ್ನು ಪಡೆದ ಸಾರ್ಥಕ್ಯ ಸಿದ್ಧಿಸುತ್ತದೆ.

ಇವರ ಕೈಯಲ್ಲರಳಿದ ಕಲಾಕೃತಿಗಳ ಮೂಲ ವಸ್ತು ಯಾವುದೆಂದು ಅವರಿಂದಲೇ ಕೇಳಿ ತಿಳಿಯ ಬೇಕಷ್ಟೆ. ಈ ಕಲಾವಿದನ ಕಲೆಯ ಜಾಡು ಹಿಡಿದು ಹೊರಟರೆ ನಿಜಕ್ಕೂ ಅಲ್ಲಿ ಸಂಶೋಧನೆ, ಅಧ್ಯಯನ, ಅರಿವು, ಆಳ ಎಲ್ಲವೂ ಏಕ ಕಾಲದಲ್ಲಿ ದಕ್ಕಿಬಿಡುತ್ತವೆ. ಎಲ್ಲವೂ ಎಲ್ಲರಿಗೂ ಸಿದ್ಧಿಸುವುದು ಸಾಧ್ಯವಿಲ್ಲ ಎಂಬುದಕ್ಕೆ ಇವರೊಂದು ಅಪರೂಪದ ಉದಾಹರಣೆ. “ಗೆದ್ದಲು ತುಂಬಿದ ಮನ ಕುರೂಪ, ಮರ ಬಹುರೂಪ” ಎಂಬಂತೆ ತನ್ನೊಳಗಿನ ಕಲೆಗಾರನ ಮೂಲಕ ಸದಾ ಹಿತ ಕೊಡುವ ಇವರ ಕಲಾಕೃತಿಗಳೊಳಗೆ ನಾವು ಕಣ್ಣಿಟ್ಟರೂ ನಮ್ಮೊಳಗೂ ಅದೆಷ್ಟೋ ಕತೆಗಳು ಹುಟ್ಟಬಲ್ಲವು.

ಈ ಅಮೋಘ ಪ್ರತಿಭೆಯನ್ನು ತನ್ನದಾಗಿಸಿಕೊಂಡ ಇವರ ವ್ಯಕ್ತಿತ್ವದ ಬಗೆ ಹೇಳುವುದಾದರೆ ಸ್ನೇಹ ಜೀವಿಯಾಗಿ, ಜನಾನುರಾಗಿಯಾಗಿ, ಉತ್ತಮ ವಾಗ್ಮಿಯಾಗಿ, ನಾಯಕತ್ವ ಗುಣವನ್ನೂ ಮೈಗೂಡಿಸಿಕೊಂಡು ಸಾಹಿತ್ಯ, ರಾಜಕೀಯ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ಮುಖಿಯಾಗಿ ಬೆಳೆದು ಬೆಳಗುತ್ತಿರುವುದು ಬಹಳ ಹೆಮ್ಮೆಯ ವಿಚಾರವೆನ್ನಲು ಖುಷಿಯಾಗುತ್ತದೆ.

ಇವರ ಕನಸಿನಲ್ಲಿ ಇನ್ನೂ ಮೊಗ್ಗಾಗಿರುವ ಮತ್ತಷ್ಟು ಕಲಾಕೃತಿಗಳು ಅರಳಿ ಜೀವ ತಳೆಯಲಿ. ನೋಡ ನೋಡುತ್ತಲೇ ನೋಡುಗರ ಕಣ್ಣನ್ನು ಅದೆಷ್ಟೋ ಹೊತ್ತು ಹಿಡಿದಿಟ್ಟು ಅವರದೇ ಕಲ್ಪನೆಯಲಿ ತೇಲಿಸಲಿ. ಈ ಕರ ಕುಶಲತೆಯ ಹಾದಿಯಲ್ಲಿ ತಮ್ಮನ್ನು ಆಶಾಭಾವನೆಗೆ ಒಡ್ಡಿಕೊಳ್ಳುವ ಮುನೀರ್ ಅಹಮ್ಮದ್ ರವರಿಗೆ ಮತ್ತಷ್ಟು ಹೊಳಪಿನ ಬಾಗಿಲು ತೆರೆದು ಹೊಸ ಸಾಧ್ಯತೆಗಳತ್ತ ಹೊರಳುವಂತಾಗಿ ಆ ಮೂಲಕ ಕೊರಡುಗಳು ಕೊನರಿಕೊಳ್ಳುತ್ತಲೇ ಅವುಗಳ ಮೆಹಕ್ ಎಲ್ಲರ ಮನಮುಟ್ಟುವಂತೆ ಪಸರಿಸಿ ಈ ಪ್ರತಿಭೆಯೆಡೆ ಖುಷಿಕೊಡುವ ಕೀರ್ತಿ ಹರಿದುಬರಲಿ.

ಹೀಗೆ ಶುಭ ಹಾರೈಸುತ್ತಿರುವಷ್ಟರಲ್ಲೇ ಭಾವಗೀತೆಯೊಂದನ್ನು ಗುನುಗುತ್ತಾ ಇವರು ಹೊಸ ಹೊಸ ಒಣಕಾಷ್ಠದ ಶೋಧದೆಡೆ ಹೆಜ್ಜೆ ಇಟ್ಟಿರಬಹುದೇ?

-ಸುನೀತ ಕುಶಾಲನಗರ

    

12 Responses

  1. Anonymous says:

    ಅದ್ಭುತವಾಗಿದೆ. ಸಾಧನೆ ನಿರಂತವವಾಗಿರಲಿ.

  2. ವಿನಿತಾ ಕೆ ರ್ says:

    ಕಸದಿಂದ ರಸ ಕಾಣುವ ಇವರು ನಮ್ಮ ನಡುವೆ ಇರುವುದು ನಿಜವಾಗಲೂ ಹೆಮ್ಮೆಯ ವಿಷಯವೇ ಸರಿ.. ಅದನ್ನು ತುಂಬಾ ಚೆನ್ನಾಗಿ ಮನತಟ್ಟುವಂತೆ ಬರೆದಿರುವ ಸುನಿತಾರವರಿಗೆ ಹೃದಯಪೂರ್ವಕ ಧನ್ಯವಾದಗಳು… ತುಂಬಾ ಚೆನ್ನಾಗಿದೆ

  3. Manali says:

    Good write up

  4. Sanjana S says:

    Well written

  5. Poorvika says:

    Good write-up!

  6. Kavitha A Y says:

    ಲೇಖನ ತುಂಬಾ ಚೆನ್ನಾಗಿದೆ. ಕಲಾಕೃತಿಗಳನ್ನು ಕಣ್ಣಾರೆ ನೋಡಬೇಕೆನಿಸಿತು.

  7. ವಿದ್ಯಾ ಶ್ರೀ ಎಸ್ ಅಡೂರ್ says:

    ಚೆನ್ನಾಗಿ ಬರೆದಿದ್ದೀರಿ….ಕಲೆಯ ಆಸ್ವದನೆಯೂ ಒಂದು ಕಲೆ…

  8. Nilma says:

    Such a great art, and very well written!!

  9. Pavithra says:

    Super akka

  10. Samatha.R says:

    Hatsoff to the artist and the writer who introduced him so beautifully

  11. ಶಂಕರಿ ಶರ್ಮ says:

    ತೆರೆಮರೆಯಲ್ಲಿರುವ ಈ ಅಪೂರ್ವ ಕಲಾವಿದರಿಗೆ ಅಭಿನಂದನೆಗಳು. ಕಾಫಿ ತೋಟಗಳಿರುವೆಡೆಗಳಲ್ಲಿ, ರಸ್ತೆ ಬದಿ ಮಾರಾಟಕ್ಕೆ ಇಟ್ಟಿರುವುದನ್ನು ಗಮನಿಸಿರುವೆ..ತುಂಬಾ ಚಂದ.

  12. ನಯನ ಬಜಕೂಡ್ಲು says:

    ಪ್ರತಿಭೆಯನ್ನು ಪರಿಚಯಿಸಿದ ರೀತಿ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: