ಅಯ್ಯೋ…ಕುಟುಕಿತಲ್ಲಾ ಕಣಜ!
“ಬಾನಿಗೊಂದು ಎಲ್ಲೆ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಯಿದೆ…..” ಹಾಡನ್ನು ಗುನುಗುತ್ತಾ ಒಗೆಯಬೇಕಿದ್ದ ಬಟ್ಟೆಗಳನ್ನು ವಾಶಿಂಗ್ ಮೆಷೀನಿಗೆ ಹಾಕುತ್ತಿದ್ದೆ. ಇದ್ದಕ್ಕಿದ್ದ ಹಾಗೆ ಎಡ ಅಂಗೈಯ ಬಳಿ ಸೂಜಿಯಿಂದ ಚುಚ್ಚಿದಂತೆ ಅನ್ನಿಸಿತು. ಏನಾಯ್ತಪ್ಪಾ ಅಂದ್ಕೊಂಡು ತಟ್ಟನೆ ನೋಡಿದಾಗ ಕಣಜಿಗವೊಂದು ಹಾರಿ ಹೋಗುತ್ತಿದ್ದುದನ್ನು ಕಂಡೆ. ಗಾಬರಿ ಆಗಲಿಲ್ಲ ನಂಗೆ. ಯಾಕೆ ಗೊತ್ತಾ? ಈ ವರ್ಷದಲ್ಲಿ ಕಣಜಿಗದಿಂದ ಕುಟುಕಿಸಿಕೊಂಡಿದ್ದು ಮೂರನೇ ಬಾರಿ. ಅಡುಗೆಮನೆಗೆ ಬಂದು, ತಣ್ಣನೆಯ ನೀರಲ್ಲಿ ಕುಟುಕಿಸಿಕೊಂಡ ಜಾಗವನ್ನು ತೊಳೆದು, ಬಳಿಕ ಉಪ್ಪಿನಿಂದ ಆ ಜಾಗವನ್ನು ತಿಕ್ಕಿ ಬಳಿಕ ಅರಿಶಿಣ ಹಚ್ಚಿದೆ. ಈ ಸಲ ಮಾನಸಿಕವಾಗಿ ಗಟ್ಟಿ ಆಗಿದ್ದೆ. ಆದರೆ ಆ ನೋವಿನಲ್ಲೂ ಪದ್ಯದ ಸಾಲುಗಳು ನೆನಪಾಯ್ತು “ಅವನ ನಿಯಮ ಮೀರಿ ಇಲ್ಲಿ ಏನೂ ಸಾಗದು. ನಾವು ನೆನೆಸಿದಂತೆ ಬಾಳಲೇನೂ ನಡೆಯದು”. ಬಹುಶಃ ಇವತ್ತಿನ ಭವಿಷ್ಯದಲ್ಲಿ “ಕಣಜಿಗದಿಂದ ಕಚ್ಚಿಸಿಕೊಳ್ಳುವ ಅಲ್ಲಲ್ಲ ಚುಚ್ಚಿಸಿಕೊಳ್ಳುವ ಭಾಗ್ಯ ಇದ್ದಿರಬೇಕು. ನನಗೂ ಕಣಜಿಗಕ್ಕೂ ಯಾವುದೋ ಜನ್ಮದ ನಂಟಿರಬೇಕು” ಅಂದ್ಕೊಂಡೆ.
ಮೊದಲ ಬಾರಿ ಚುಚ್ಚಿಸಿಕೊಂಡ ನೆನಪಾಯ್ತು. ಆ ದಿನ ಕೂಡಾ ಎಂದಿನಂತೆ ವಾಷಿಂಗ್ ಮೆಷೀನಿಗೆ ಬಟ್ಟೆ ಹಾಕುತ್ತಿದ್ದೆ. ಚೂಪಾದ ಸೂಜಿಯಿಂದ ಬಲ ಮುಂಗೈ ಮೇಲೆ ಚುಚ್ಚಿದಂತೆ ಆಯಿತು. ಒಮ್ಮೆಗೆ ಮೈಯೆಲ್ಲಾ ಬಿಸಿಯಾಗಿ, ಕಣ್ಣು ಕತ್ತಲಾದ ಹಾಗೆ ಅನ್ನಿಸಿತು. ವಾಸ್ತವವಾಗಿ ಹೇಳಬೇಕೆಂದರೆ, ನನಗೇನಾಗುತ್ತಿದೆ ಅಂತಲೇ ಗೊತ್ತಾಗಲಿಲ್ಲ. ಅಲ್ಲಿಯೇ ಕುಸಿದು ಕುಳಿತೆ. ಕೈ ಸಿಕ್ಕಾಪಟ್ಟೆ ಉರಿಯುತ್ತಿತ್ತು. ಅಲ್ಲದೆ ಊದಿಕೊಂಡಿತ್ತು. ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಸ್ವಲ್ಪ ಸುಧಾರಿಸಿಕೊಂಡ ನಂತರ, ನನ್ನ ಅತ್ತೆಗೆ ದೂರವಾಣಿ ಕರೆ ಮಾಡಿ “ನನ್ನ ಕೈಗೆ ಎಂತದೋ ಕೀಟ ಕಚ್ಚಿ, ಕೈ ಊದಿಕೊಂಡು ಉರಿಯುತ್ತಿದೆ. ಕಣ್ಣು ಕತ್ತಲಾದ ಹಾಗೆ ಅನ್ನಿಸ್ತಿದೆ. ಏನ್ಮಾಡ್ಲಿ?” ಅಂತ ಕೇಳಿದಾಗ “ಬಹುಶಃ ಕಂಚಿಕಾರ ಇರಬೇಕು. ಕಚ್ಚಿದಲ್ಲಿಗೆ ಸ್ವಲ್ಪ ಹೊತ್ತು ಐಸ್ ಇಡು, ನಂತರ ಅರಿಶಿನ ಹಚ್ಚು” ಅಂದರು ನನ್ನತ್ತೆ. ಕಚ್ಚಿಸಿಕೊಂಡ ಎರಡು ದಿನದ ನಂತರ, ಕೈಯ ಊತ ಕಡಿಮೆ ಆಗಿತ್ತು. ಮುಖಕ್ಕೇನಾದರೂ ಕಚ್ಚಿದ್ದರೆ ಹನುಮಂತನನ್ನು ಹೋಲುವ ಮುಖ ನನ್ನದಾಗುತ್ತಿತ್ತು! ಸದ್ಯ ಅದರಿಂದ ಬಚಾವಾದೆ ಅನ್ನುವ ಭಾವನೆ ಸ್ವಲ್ಪ ಸಮಾಧಾನ ನೀಡಿತ್ತು. ಆದರೆ ಎರಡು ವಾರದವರೆಗೂ, ಕಚ್ಚಿಸಿಕೊಂಡ ಜಾಗ ಆಗಾಗ ತುರಿಸುತ್ತಿತ್ತು.
ಅದಾಗಿ ಒಂದು ತಿಂಗಳೊಳಗೆ ಇನ್ನೊಮ್ಮೆ ಅದೇ ಅನುಭವ ಆಯ್ತು. ಬಹುಶಃ ವಾಷಿಂಗ್ ಮೆಷೀನ್ ಬಳಿ, ಕಣಜಿಗದ ವಾಸದ ಸ್ಥಾನ ಇರಬೇಕು ಅಂದ್ಕೊಂಡು ಹುಡುಕಿದಾಗ ಮೆಷೀನ್ ಕೆಳಗೆ ಜೇನುಗೂಡನ್ನು ಹೋಲುವ ಒಂದು ಪುಟ್ಟ ಗೂಡು ಕಾಣಿಸಿತು. ಯಾವುದೇ ಕೀಟಗಳು ಮನುಷ್ಯರಂತೆ ಸುಮ್ಮನೆ ಉಪದ್ರ ಕೊಡುವುದಿಲ್ಲ, ಅವುಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ಮಾತ್ರ ಕುಟುಕುತ್ತವೆ/ಕಚ್ಚುತ್ತವೆ ಎಂಬುದನ್ನು ಓದಿ/ಕೇಳಿ ಗೊತ್ತಿತ್ತು. ಬಟ್ಟೆ ಒಗೆಯುವುದು ಅನಿವಾರ್ಯ ಹಾಗಂತ ದಿನಾಲೂ ಕಚ್ಚಿಸಿಕೊಳ್ಳಲಾದೀತೇ? ಆ ದಿನ ನನ್ನ ಮಗನ ಹತ್ತಿರ “ಏನಾದ್ರೂ ಮಾಡಬೇಕು” ಅಂತ ಹೇಳಿದೆ. ಅವನು ಹೆಲ್ಮೆಟ್ ಹಾಕಿಕೊಂಡು, ಜಿರಲೆ ನಿವಾರಿಸಲು ಉಪಯೋಗಿಸುವ ಹಿಟ್ ದ್ರಾವಣವನ್ನು ಆ ಗೂಡಿನ ಬಳಿ ಸಿಂಪಡಿಸಿ ಬಂದನು. ಮರುದಿನ ಹೋಗಿ ನೋಡುವಾಗ, ಎಲ್ಲಾ ಕಣಜಿಗಗಳು ಸತ್ತು ಬಿದ್ದಿದ್ದವು.
ಕಣಜಿಗ, ಕಾಗದದ ಕಣಜ ಅಂದರೆ ಆಂಗ್ಲಭಾಷೆಯಲ್ಲಿ paper wasp , ತುಳುವಿನಲ್ಲಿ ಕಂಚಿಕಾರ ಎಂದು ಕರೆಯಲಾಗುವ ಕೀಟಗಳನ್ನು ನೋಡಿ ಗೊತ್ತಿತ್ತು. ಗೋಡೆ ಸಂದಿನಲ್ಲಿ, ಬಾಗಿಲ ಎಡೆಯಲ್ಲಿ ಮಣ್ಣಿನ ಗೂಡು ಕಟ್ಟುವ ಕಣಜಿಗಗಳನ್ನು ಕಂಡಿದ್ದೆ. ಮರದ ಗೆಲ್ಲಿನಲ್ಲಿ ನೇತಾಡುವ ಗೂಡುಗಳನ್ನು ಕಟ್ಟಿರುವ ಕಣಜದ ಹುಳುಗಳು ಹಾಗೂ ಅವುಗಳ ಧಾಳಿಗೆ ಸಿಕ್ಕಿದವರು ಮೃತರಾಗಿರುವ ಬಗ್ಗೆ ಕೇಳಿದ್ದೆ. ಆದರೆ ಜೇನುಗೂಡನ್ನೇ ಹೋಲುವ ಕಣಜದ ನೊಣಗಳ ಗೂಡನ್ನು ಮೊದಲ ಬಾರಿಗೆ ಕಂಡಿದ್ದು ನನ್ನ ವಾಷಿಂಗ್ ಮೆಷೀನ್ ಕೆಳಗಡೆಯೇ! ಈ ಸಲ ಕಣಜಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜಾಸ್ತಿ ಆಯ್ತು.
ರೋಪಲಿಡಿಯಾ ಮಾರ್ಜಿನೇಟಾ (Ropalidea Marginata) ಎಂದು ವೈಜ್ಞಾನಿಕವಾಗಿ ಕರೆಸಿಕೊಳ್ಳುವ ಸುಮಾರು 22 ಬಗೆಯ ಕಣಜಗಳನ್ನು ದಕ್ಷಿಣ ಭಾರತದಲ್ಲಿಯೇ ಗುರುತಿಸಲಾಗಿದೆ. ಇವುಗಳ ದೇಹವು ದೊಡ್ಡ ಗಾತ್ರದ ಇರುವೆಗಳಂತೆ ತೋರುತ್ತದೆ. ಆದರೆ ಜೇನುನೊಣಗಳಂತೆ ರೆಕ್ಕೆಗಳನ್ನು ಹೊಂದಿರುತ್ತದೆ. ಸಾಮಾಜಿಕ ಕಣಜ, ಕುಂಬಾರ ಕಣಜ, ಒಂಟಿ ಕಣಜ..ಬೇರೆ ಬೇರೆ ವಿಧಗಳು. ಹಾಗೆಯೇ ಅವುಗಳ ಗೂಡಿನ ರಚನೆಯೂ ಭಿನ್ನವಾಗಿರುತ್ತದೆ. ಜೇನುಗೂಡನ್ನು ಹೋಲುವ ಗೂಡಿನ ರಚನೆ ಹಾಗೂ ಕಣಜದ ಬಣ್ಣ ಹಾಗೂ ದೇಹವನ್ನು ನೋಡಿ, ನನಗೆ ಕುಟುಕಿದ ಕಣಜ ಸಾಮಾಜಿಕ ಕಣಜವೆಂದು ಗೊತ್ತಾಯಿತು. ಜೇನುನೊಣಗಳಂತೆ ಕಾಣುವ ಕಣಜಗಳು ತಮ್ಮ ಜೊಲ್ಲುರಸದ ಜೊತೆ ಮಣ್ಣು/ ಸೆಗಣಿ/ಸಸ್ಯಾವಶೇಷ ಬೆರೆಸಿ, ಗೂಡುಗಳನ್ನು ಕಟ್ಟುತ್ತವೆ. ಸಾಮಾಜಿಕ ಕಣಜಗಳ ಗೂಡು ಜೇನುಗೂಡನ್ನು ಹೋಲುತ್ತದೆ. ಕುಂಬಾರ ಕಣಜಗಳ ಗೂಡು ಮಣ್ಣಿನ ಮಡಕೆಯನ್ನು ಹೋಲುತ್ತದೆ.
ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಯಾಗಿರುವ ಡಾ. ರಾಘವೇಂದ್ರ ಗದಗ್ಕರ್ (Dr. Raghavendra Gadagkar) ಅವರು ಈ ಸಾಮಾಜಿಕ ಕಣಜಗಳ ಬಗ್ಗೆ ಸುಮಾರು ನಲ್ವತ್ತು ವರ್ಷಗಳ ಕಾಲ ದೀರ್ಘ ಅಧ್ಯಯನ ಮಾಡಿ, ಕಣಜಗಳ ಜೀವನಶೈಲಿ, ಕುಟುಂಬ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ ಅಲ್ಲದೇ ಒಂದು ಪಠ್ಯಪುಸ್ತಕವನ್ನೇ ಬರೆದಿದ್ದಾರೆ. ಸಾಮಾಜಿಕ ಕಣಜಗಳ ಬಗ್ಗೆ ನಡೆಸಿದ ಅಧ್ಯಯನದ ಅದ್ವಿತೀಯ ಸೇವೆಗಾಗಿ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ (ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ, ಜರ್ಮನಿ ಸರಕಾರದಿಂದ Cross of the Order of Merit ಪ್ರಶಸ್ತಿ,..ಇತ್ಯಾದಿ.).
ಜೇನುನೊಣಗಳ ಸಾಮಾಜಿಕ ವ್ಯವಸ್ಥೆಯಲ್ಲಿ ರಾಣಿಜೇನು ಇರುವ ಹಾಗೆ, ಸಾಮಾಜಿಕ ಕಣಜಗಳಲ್ಲಿ ಕೂಡಾ ರಾಣಿ ಕಣಜವಿದ್ದು, ಗಂಡು ಕಣಜಗಳೊಂದಿಗೆ ಮಿಲನ ಹೊಂದಿ ಗರ್ಭ ಧರಿಸಿದ ಬಳಿಕ, ಕೆಲಸಗಾರ ಕಣಜಗಳ ಜೊತೆಗೂಡಿ ಗೂಡು ಕಟ್ಟಿ ಮೊಟ್ಟೆ ಇಡುತ್ತದೆ. ಜೇನುನೊಣ ಅಥವಾ ಜೇಡಗಳನ್ನು ನಿಷ್ಕ್ರಿಯಗೊಳಿಸಿ, ಗೂಡಿನಲ್ಲಿ ಇಟ್ಟು ನಂತರ ಅದರ ಮೇಲೆ ಮೊಟ್ಟೆ ಇಡುತ್ತದೆ. ಗೂಡಿನೊಳಗಿರುವ ಮೊಟ್ಟೆ ಒಡೆದು ಹೊರ ಬಂದಾಗ, ಮರಿಕಣಜಕ್ಕೆ ಅಲ್ಲಿಯೇ ಆಹಾರ ಸಿದ್ಧವಾಗಿರುತ್ತದೆ. ಸರಿಯಾಗಿ ಬೆಳೆದ ನಂತರ ಗೂಡಿನಿಂದ ಹೊರಬರುತ್ತದೆ. ಇಲ್ಲಿಯೂ ಕೆಲಸಗಾರ ಕಣಜಗಳಿಗೆ ಕರ್ತವ್ಯ ಹಂಚಿಕೆಯಾಗಿರುತ್ತದೆ. ಗೂಡನ್ನು ಕಾಯುವ ಕೆಲಸ ಕೆಲವು ಕಣಜಗಳಿಗೆ, ಇನ್ನು ಕೆಲವಕ್ಕೆ ಆಹಾರ ತರುವ ಕೆಲಸ. ಇನ್ನೊಂದು ವಿಶೇಷವೆಂದರೆ ಕೆಲಸಗಾರ ಕಣಜಗಳೆಲ್ಲವೂ ಹೆಣ್ಣು ಕಣಜಗಳು. ವೈರಿಗಳಿಗೆ ಕುಟುಕಲು ಬೇಕಾದ ಮುಳ್ಳು (Sting), ಹೆಣ್ಣು ಕಣಜಗಳಿಗೆ ಮಾತ್ರ ಇರುವುದಂತೆ! ಸೃಷ್ಟಿಯ ವೈಚಿತ್ರ್ಯಗಳಿಗೆ ತಲೆದೂಗಲೇ ಬೇಕು, ತಲೆಬಾಗಲೇ ಬೇಕು.
ಬರೆಯಹೋದರೆ ಸಾಕಷ್ಟು ವಿಷಯಗಳಿವೆ. ಸಾಮಾಜಿಕ ಕಣಜಗಳು, ಹೂವಿನ ಮಕರಂದ ಹೀರುವುದರಿಂದ ಪರಾಗಸ್ಪರ್ಶ ಕ್ರಿಯೆಗೆ ನೆರವಾಗುತ್ತವೆ. ಹಾಗಾಗಿ ಪ್ರಕೃತಿಯ ಮಿತ್ರ ಎನ್ನಬಹುದು. ಅವುಗಳ ತಂಟೆಗೆ ಹೋಗದಿದ್ದರೆ, ಅವು ನಿರುಪದ್ರವಿಗಳೇ. ಆದರೂ ಕೆಲವೊಮ್ಮೆ ಗೊತ್ತಿಲ್ಲದೆ ಕಣಜಗಳಿಂದ ಕುಟುಕಿಸಿಕೊಳ್ಳಬಹುದು. ಅಂತಹ ಸಂದರ್ಭಗಳಲ್ಲಿ, ಕುಟುಕಿದ ಸ್ಥಳವನ್ನು ಸಾಬೂನಿನ ನೀರಿನಿಂದ ತೊಳೆದು ನಂತರ ಮಂಜುಗಡ್ಡೆಯ ತುಂಡುಗಳನ್ನು ಒತ್ತಿ ಹಿಡಿದರೆ, ಊತ ಕಡಿಮೆಯಾಗಿ, ಅರ್ಧ ಘಂಟೆಯೊಳಗೆ ನೋವು ಕಡಿಮೆ ಆಗಬಹುದು. ಹಾಗೆಯೇ ಕುಟುಕಿಸಿಕೊಂಡ ಜಾಗದಲ್ಲಿ ಮುಳ್ಳು(Sting) ಉಳಿದಿದ್ದರೆ, ಅದನ್ನು ಎಳೆದು ತೆಗೆಯಬಹುದು. ಅಥವಾ ಉಪ್ಪಿನಿಂದ ಉಜ್ಜಿದರೆ ಅಥವಾ ನೀರುಳ್ಳಿಯಿಂದ ತಿಕ್ಕಿದರೆ ಮುಳ್ಳು ಹೊರಗೆ ಬರಬಹುದು. ನಂತರ ಅರಿಶಿಣದ ಲೇಪ ಹಚ್ಚಬೇಕು. ಕುಟುಕುವಾಗ ಹೊರಬರುವ ಕಣಜದ ವಿಷ, ಮಾನವನಿಗೆ ಅಪಾಯಕಾರಿಯೇ. ಕೆಲವೊಮ್ಮೆ ಆ ವಿಷದಿಂದ ಉಂಟಾಗುವ ಅಲರ್ಜಿಯಿಂದಾಗಿ ನಿಶ್ಶಕ್ತಿ ಉಂಟಾಗಿ ಮಂಪರು ಆವರಿಸಬಹುದು. ವಾಂತಿ ಆಗಬಹುದು, ಮೂರ್ಛೆ ತಪ್ಪಿ ಬೀಳಬಹುದು, ಉಸಿರಾಟದ ಸಮಸ್ಯೆಯೂ ತಲೆದೋರಬಹುದು. ಇಂತಹ ಸಮಸ್ಯೆಗಳು ಕಂಡು ಬಂದರೆ, ವೈದ್ಯರನ್ನು ಭೇಟಿ ಆಗುವುದು ಉತ್ತಮ.
ಕಣಜದಿಂದ ಕುಟುಕಿಸಿಕೊಂಡ ನೋವಿನಲ್ಲಿಯೇ ಈ ಲೇಖನ!
-ಡಾ.ಕೃಷ್ಣಪ್ರಭಾ, ಎಂ. ಮಂಗಳೂರು
ಉತ್ತಮ ಲೇಖನ.. ಕಳೆದ ವಾರವಷ್ಟೇ ನಾನೂ ಕಚ್ಚಿಸಿಕೊಂಡೆ!! ಹೂಗಿಡು ಚಟ್ಟಿಗಳೂ ಅವುಗಳ ಸಾಮಾನ್ಯ ವಾಸಸ್ಥಾನ
ಮೆಚ್ಚುಗೆಗೆ ಧನ್ಯವಾದಗಳು…
ಚೆಂದದ ಬರಹ…ಕಣಜ ಕಡಿದ ನೋವಿನಲ್ಲಿ, ಅದರೆ ಬಗ್ಗೆಯೇ ಬರೆದು ‘ಸೇಡು’ ತೀರಿಸಿಕೊಂಡ ಪರಿ ಇಷ್ಟವಾಯಿತು.
ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು…
ಕಣಜ ಕಚ್ಚಿದ ನೆನಪಿಗಿರಲಿ ಅಂತ….ಈ ಲೇಖನ
ಕಣಜಹುಳದಬಗ್ಗೆ ಸೊಹಸಾಗಿಬರೆದಿರುವಿರಿ ನೋವಿನಲ್ಲೂ ,
ಎರಡು ದಿನ ಸಿಡಿತ… ಮೂರು ದಿನ ತುರಿಕೆ…ಬಹಳ ಕಿ,ರಿಕಿರಿ ಆಯ್ತು..ಕಡೆಗೆ ಕಚ್ಬಿದ ಜಾಗಕ್ಕೆ ಬಿಸಿ ಶಾಖ ಕೊಟ್ಟು ಕಡಿಮೆ ಆಯಿತು… ಪ್ರತಿಕ್ರಿಯೆಗೆ ಧನ್ಯವಾದಗಳು
ಓ.ಇಷ್ಟೆಲ್ಲಾ ಆಗುತ್ತಾ.ನಂಗೆ ಕಚ್ಚಲಿಲ್ಲ,ಆದರೆ ಕುಟುಕಿದ್ದು ನೋಡಿದ್ದೇನೆ.ಮಾಹಿತಿಗಾಗಿ ಧನ್ಯವಾದಗಳು ಒಂದು ಕಣಜದ ಕಥೆ ಅಂತ ಶೀರ್ಷಿಕೆ ಇದ್ದರೆ ಚೆನ್ನಾಗಿತ್ತು.ಕಣಜ ನಿಮ್ಮನ್ನು ಕುಟುಕು ನಿಮ್ಮ ಕೈಯಿಂದ ಎಷ್ಟೆಲ್ಲಾ ಬರೆಸಿತು.ಕಣಜಕ್ಕೆ ಥ್ಯಾಂಕ್ಸ್ ಹೇಳ್ಬೇಕು ನಾವು
ನಿಮ್ಮ ಪ್ರೋತ್ಸಾಹದ ಮಾತುಗಳೇ ನಮಗೆ ಬರೆಯಲು ಉತ್ಸಾಹ ತುಂಬುತ್ತವೆ…
ಧನ್ಯವಾದಗಳು
ಸೊಗಸಾಗಿದೆ ಬರಹ. ಕಣಜದ ಹುಳುಗಳ ನಿಮ್ಮ ಸಂಶೋಧನೆ ಯಿಂದ ನಮಗೂ ಸಾಕಷ್ಟು ಮಾಹಿತಿಗಳು ದೊರೆತವು.
ಗೊತ್ತಾದ ಮಾಹಿತಿ ಹಂಚಿಕೊಳ್ಳುವ ಮನಸ್ಸು ಆಯಿತು….
ಪ್ರೀತಿಯ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು
Neevu kachidaroo enoo maduvudilla annuva nambike kanajakke
ಆಕ್ರಮಣ ಮಾಡಿದವರ ಮೇಲೆ ಎರಗಲು ಸನ್ನದ್ಧ ಸೈನಿಕ ಕಣಜದಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ
ನಾನು ಕಣಜದ ಕೀಟಕ್ಕೆ ..ನನಗೆ ಕಡಿದುದಕ್ಕೆ
ಧನ್ಯವಾದ ಹೇಳುವೆ . ಕಚ್ಚಿಸಿಕೊಂಡು ೨..೩ ದಿನ ನೋವು ..ಮತ್ತೆ ಮರೆತೇ …ಆದರೆ ಹಲವು ದಿನ ಕಳೆದು ಕೀಟದ ಕೊಂಡಿ ಉಳಿದು ಗಟ್ಟಿಯಾಗಿದೆ ಎಂದು ಟೆಸ್ಟ್ ಮಾಡಿದರೆ ಅದೇ ಬೇರೆಯದಾಗಿ ಗೋತ್ತಾಗಿ ಚಿಕಿತ್ಸೆ ಪಡೆದು ನಾನೂ “ ಸಾಸಿವೆ ತಂದವಳಾದೆ “ .
Blessing in disguise…Glad to know that you recovered soon.
ಬಿಸಿ ಶಾಖ ಕೊಟ್ಟು ತುರಿಕೆಯಿಂದ ಮುಕ್ತಿ ಪಡೆದಿದ್ದು ಈ ಬಾರಿಯ ವಿಶೇಷ ಹೇಮಾ ಅವರೇ
ಈಗ ಆರಾಮಾಗಿದ್ದೀರಾ ತಾನೇ? ಅಲರ್ಜಿ ಇರುವವರಿಗೆ ಕಣಜದ ಕಡಿತವೂ ಸಮಸ್ಯೆ ಉಂಟು ಮಾಡುತ್ತದೆ
ಈಗ ಆರಾಮ ತಾನೇ? ಅಲರ್ಜಿ ಇರುವವರಿಗೆ ಕಣಜದ ಕಡಿತ ತುಂಬಾ ಸಮಸ್ಯೆ ಆಗುತ್ತದೆ
ಸುಂದರ ಬರಹ.
ಕುಂಬಾರಹುಳದಿಂದ ಬಾಲ್ಯದಲ್ಲಿ ಕಚ್ಚಿ ಸಿಕೊಂಡ ನೆನಪು.
ತಮ್ಮ ಈ ಹಿಂದಿನ ಲೇಖನ ಗಳ. ಹಾಗೆ ಇದೂ ವಿಷಯ ಆಧಾರಿತ
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು…
ನಮ್ಮಲ್ಲಿ ಅದಕ್ಕೆ ಕಡಂದೇಲು ಅನ್ತೇವೆ..ಅಬ್ಬಾ. ನನಗೆ ಹಲವು ವರ್ಷಗಳ ಹಿಂದೆ ಅದು ಕಡಿದ ನೋವು ಜ್ಞಾಪಿಸಿದಿರಿ. ಕಡಿದ ನೋವಿಗೆ ನೀವು ಅದರ ಅಮೂಲಾಗ್ರ ಜನ್ಮವನ್ನೇ ಜಾಲಾಡಿದಿರಿ, ಚೆನ್ನಾಗಿದೆ ಬರಹ.
ನನಗೆ ಗೊತ್ತಿಲ್ಲದ ಮಾಹಿತಿ ಗೊತ್ತಿರುವವರು ಹಂಚಿಕೊಂಡರೆ ನನಗೆ ಸಿಗುತ್ತದೆ ಎಂಬ ಉದ್ದೇಶದಿಂದ ನಾನು ಲೇಖನ ಬರೆಯುತ್ತೇನೆ.
ಕಡಂದೇಲು ಅಂತ ಕೇಳಿದ್ದೆ. ಕಂಚಿಕಾರದ ಇನ್ನೊಂದು ಹೆಸರೆಂದು ಗೊತ್ತಿರಲಿಲ್ಲ. ಮಾಹಿತಿಗೆ ಧನ್ಯವಾದಗಳು ಅಕ್ಕ
ಕಂಚುಕ ದಿಂದ ಕಚ್ಚಿಸಿಕೊಂಡು ಗೊತ್ತಿರುವ ನನಗೆ ಅದರ ಜೀವನಶೈಲಿ, ಅದರ ಮೇಲಿನ ಅಧ್ಯಯನ ಸವಿ ಸಂಕ್ಷಿಪ್ತವಾಗಿ ಲೇಖನದಲ್ಲಿ ಅತ್ಯುತ್ತಮವಾಗಿ ಮೂಡಿಬಂದಿದೆ.