ದುರಿತಕಾಲದ ಸಪ್ತಸ್ವರಗಳು
*ಕರೋನಾ ಕಾಲದಲ್ಲೊಂದು ಸಂಸಾರ ಸರಿಗಮ*
ಕರೋನಾ ಒಂದು ಮಾಹಾಮಾರಿಯಾಗಿ ಎರಗುವ ಮುನ್ನಾದಿನಗಳು ನಾನೂ ನಿಮ್ಮೆಲ್ಲರ ಹಾಗೇ ತಮಾಷೆ ಮಾಡಿಕೊಂಡಿದ್ದೆ. ಮನೆಯವರು ಹತ್ತಿರ ಬಂದಾಗ ‘ಸಾಮಾಜಿಕ ಅಂತರ!’ ಎಂದು ನಕ್ಕಿದ್ದೆ. ನಗುನಗುತ್ತಲೇ ಒಳಗೊಳಗೇ ನನ್ನ ತಯಾರಿ ನಾನು ಮಾಡಿದ್ದೆ. ಅದಾಗಲೇ ಎರಡು ದಿನ ಮೊದಲೇ ನಾನು ಒಂದು ತಿಂಗಳ ಅಗತ್ಯ ವಸ್ತುಗಳ ಪಟ್ಟಿ ಮಾಡಿಟ್ಟಿದ್ದೆ. ಸ್ಯಾನಿಟೈಸರ್, ಸೋಪು ಅಗತ್ಯದ ಔಷಧಿಗಳು ಎಲ್ಲವೂ ಮನೆಯಲ್ಲಿದ್ದವು. ಇದ್ದಕ್ಕಿದ್ದಂತೆ ಆ ದಿನ ಕರ್ಫ್ಯೂ ಆಯಿತು. ಮರುದಿನದಿಂದಲೇ ಎಲ್ಲವೂ ಒಂದೊಂದಾಗಿ ಮುಚ್ಚತೊಡಗಿದವು. ಹಾಗೆ ಸುತ್ತಲಿನ ಪ್ರಪಂಚ ನಿಧಾನವಾಗಿ ಒಂದು ಸ್ಮಶಾನ ಮೌನಕ್ಕೆ ಜಾರಿತು. ಮನೆಗೆ ಒಂದು ತಿಂಗಳ ಸರಂಜಾಮು ಬಂದು ಬಿದ್ದಾಗಿತ್ತು. ದಿನದ ಹಾಲಿಗೆ ವ್ಯವಸ್ಥೆ ಮಾಡಿ ಆಗಿತ್ತು. ದಿನಪತ್ರಿಕೆ ಬಂದ್ ಆಯಿತು ಹಾಗೂ ನಮ್ಮ ಮನೆಯಲ್ಲಿ ದೂರದರ್ಶನ ದೂರವೇ ಇರುವ ಕಾರಣ ಮೊಬೈಲ್ ಲೈವ್ ನ್ಯೂಸ್ ಹಾಗೂ ಪ್ರಸಾರ ಭಾರತಿಯ ವಾರ್ತೆಯ ಮೇಲೆ ಆಧಾರಪಟ್ಟುಕೊಂಡೆವು. ಕರ್ಫ್ಯೂ ಗೆ ಮೊದಲೇ ಸಾಮಾನು ತಂದಿಡಲು ಗೊಣಗುತ್ತಾ ಹೊರಟಿದ್ದ ನನ್ನ ವರ್ಕೋಹಾಲಿಕ್ ಪತಿರಾಯ, ಮರಳಿ ಬರುವಾಗ ನನ್ನ ಜಾಣ್ಮೆಯ ಬಗೆಗೆ ಒಂದು ಮೆಚ್ಚುಗೆಯ ನೋಟ ಬೀರಿ, ‘ಪರ್ವಾಗಿಲ್ಲ ನನ್ ಗೂಬೆಮರಿ, ಅದಾಗ್ಲೇ ಸಖತ್ ಪ್ಲಾನ್ ಮಾಡಿದೆ..!’ ಅಂದಾಗ ಹಲವು ವರ್ಷಗಳ ನಂತರ ನಮ್ಮಿಬ್ಬರ ನಡುವೆ ಹಳೆಯ ಘಮಲಿನ ನಗುವೊಂದು ಮಿಂಚಿ ಮರೆಯಾಯಿತು.
ದಿನಗಳೆಯುತ್ತಾ ಲಾಕ್ ಡೌನ್ ಮನೆಯ ಪರಿಸರವನ್ನೇ ಬದಲಾಯಿಸಿತು. ನಮ್ಮ ಪುಟ್ಟ ಸಂಸಾರ ಹೀಗೆ ದಿನಗಟ್ಟಲೇ ಒಬ್ಬರನ್ನೊಬ್ಬರು ನೋಡುತ್ತಾ ಕೂತು ಕಾಲ ಕಳೆದು ಅದ್ಯಾವುದೋ ಕಾಲವಾಗಿತ್ತು. ಮಗಳು ಬೆಳೆದು ಎದೆಯುದ್ದ ನಿಂತ ಮೇಲೆ ಇಷ್ಟು ಸಮಯವೇ ನಮ್ಮಿಬ್ಬರಿಗೂ ದೊರೆತಿರಲಿಲ್ಲ. ಒಂದೆರಡು ದಿನ ಉತ್ಸಾಹದಲ್ಲೇ ಕಳೆಯಿತು. ಮನೆ ತುಂಬಾ ನಗು, ಕಿಚಿಕಿಚಿ, ದೂರದಲ್ಲಿರುವವರ ಜೊತೆ ಮಾತುಕಥೆ-ಕ್ಷೇಮ ಸಮಾಚಾರ, ಇನ್‌ಡೋರ್ ಗೇಮ್ಸ್ ಎಲ್ಲವೂ ಚೆನ್ನಾಗೇ ನಡೆಯಿತು. ಇಪ್ಪತ್ತೊಂದು ದಿನ ಹಾಗೇ ಫಟಾಫಟ್ ಕಳೆದುಬಿಡುವೆವು ಎಂಬ ರಣೋತ್ಸಾಹ ಮೂವರಿಗೂ ಮೂಡಿಬಿಟ್ಟಿತು.
ಆದರೆ ಅಸಲೀ ಕತೆ ಆಮೇಲೆ ಶುರುವಾಯಿತು. ಹೊರಗಿನಿಂದ ಒಂದು ಕಡಲೇಬೀಜವೂ ಹುಟ್ಟುವುದಿಲ್ಲ, ಮೂರೂ ಮತ್ತೊಂದು ಹೊತ್ತಿಗೂ ನಾವೇ ಬೇಯಿಸಿಕೊಳ್ಳದ ಹೊರತು ಅನ್ಯಮಾರ್ಗವಿಲ್ಲ. ಈಗ ಸಹಾಯಕ್ಕೂ ಯಾರೂ ಧಾವಿಸುವವರಿಲ್ಲ. ಒಂದು ವೇಳೆ ಖಡಕ್ ಜಗಳವಾದರೆ ಸಿಟ್ಟು ಆರುವವರೆಗೂ ಯಾರೊಬ್ಬರೂ ಮನೆಯಿಂದ ಆಚೆ ಹೋಗುವ ಹಾಗಿಲ್ಲ (ಅಬ್ಬಬ್ಬಾಂದ್ರೆ ಮನೆಯ ಟೆರೇಸ್ ಬಿಟ್ಟು). ಗಂಡುಮಗನಿಗೆ ಸ್ನೇಹಿತರಿಲ್ಲ ಪಾರ್ಟಿಗಳಿಲ್ಲ. ಹೆಣ್ಣುಮಕ್ಕಳಿಗೆ ಶಾಪಿಂಗ್ ಇಲ್ಲ ಪಾರ್ಲರ್ ಹೋಟೇಲುಗಳಿಲ್ಲ. ಭಾವನಾತ್ಮಕ ಏರುಪೇರುಗಳ ಸಾಲು ಸಾಲೇ ಬಂದು ನಮ್ಮ ಮುಂದೆ ಕುಣಿದು ಹೋದವು. ಎಲ್ಲವೂ ತಾತನ ಕಾಲದಲ್ಲಿ ಎಷ್ಟು ನ್ಯಾಚುರಲ್ ಆಗಿತ್ತೋ ಅಷ್ಟೇ ಹಗುರವಾಗಿ ನಡೆದು ತೀರಬೇಕಾಗಿ ಬಂತಲ್ಲಾ. ಬಂಧವಿಲ್ಲದ ಪ್ರೀತಿಯೂ… ಪರಸ್ಪರ ಗೌರವವಿಲ್ಲದ ಸಂಬಂಧಗಳೂ… ತಾಳ್ಮೆಯಿಲ್ಲದ ನಡವಳಿಕೆಯೂ… ಸಂಸಾರವೆಂದರೆ ಉಸಿರುಗಟ್ಟುತ್ತದೆಂಬ ಸುಳ್ಳು ಸ್ವಾತಂತ್ರ್ಯದ ಬಯಕೆಗಳೂ… ಇಂತಹ ಹಲವು ಭೂತಗಳನ್ನು ಈ ಒಂದು ಕರೋನಾ ಎಂಬ ಕ್ರಿಮಿಯು ಕರಗಿಸಿಬಿಟ್ಟಿತು. ಒಟ್ಟಾಗಿ ಬಾಳಲು ಬೇಕಾದ ಅನುಸರಿಸಿಕೊಳ್ಲುವ ತಾಳ್ಮೆ, ಪರಸ್ಪರ ಗೌರವ, ಹಿತವಾದ ಪ್ರೀತಿ ಎಲ್ಲವನ್ನೂ ಈ ಲಾಕ್‌ಡೌನ್ ಇನ್ಸೆಂಟಿವ್ ನಮಗೆ ನೀಡಿದೆ ಅನಿಸುತ್ತಿದೆ. ಮರೆತು ಹೋದ ಆ ಬಾಂಧವ್ಯದ ಮೌಲ್ಯಗಳು, ಒಟ್ಟಿಗೆ ಇರಲೇಬೇಕಾದ ಅನಿವಾರ್ಯತೆಯಲ್ಲಿ ಹುಟ್ಟಿಕೊಳ್ಳುವ ‘ಚಲೇಗಾ..’ ಸೂತ್ರಗಳು ಸ್ವಲ್ಪವಾದರೂ ನಮ್ಮ ‘ಕುಟುಂಬ’ ಎನ್ನುವ ಸಾಮಾಜಿಕ ವ್ಯವಸ್ಥೆಯ ಬುಡವನ್ನು ಭದ್ರಪಡಿಸುವಲ್ಲಿ ಮುಖ್ಯಪಾತ್ರ ವಹಿಸಬಹುದು.
ಹೆಣ್ಣಾಗಿ ಇಲ್ಲಿ ನನ್ನ ಪಾತ್ರವೇನೂ ಕಡಿಮೆಯದ್ದಲ್ಲ. ಇದ್ದಕ್ಕಿದ್ದಂತೆ ಮನೆಯವರಿಗೆ ಆಗುವ ಸಮಚಿತ್ತದ ಏರುಪೇರುಗಳು, ಲಾಕ್‌ಡೌನ್ ಸೈಡ್ ಎಫೆಕ್ಟ್‌ಗಳಾದ ಆತಂಕ ಬೇಸರ ತಿರಸ್ಕಾರ ಕಡೆಗೆ ತಡೆಯಲಾರದೇ ಒಬ್ಬರ ಮೇಲೊಬ್ಬರು ರೇಗುವಿಕೆ… ಇವೆಲ್ಲಾ ನನಗೂ ಅನ್ನಿಸಿದರೂ, ಇವರನ್ನೆಲ್ಲಾ ತಣ್ಣಗಿಡುವ ದೊಡ್ಡ ಜವಾಬ್ದಾರಿ ನಾನೇ ಹೊರುವುದರಿಂದ, ನನ್ನ ಬಗ್ಗೆಯೇ ಹೇಳಿಕೊಳ್ಳಲಾಗದ ನನ್ನ ಸ್ಥಿತಿ! ಅಬ್ಬಬ್ಬಾ!! ಹೆಣ್ಣಿಗಿರುವ ಸಹನೆಯ ಅಗಾಧತೆ ಎಂತದ್ದು ಅನ್ನುವುದು ನನಗೆ ಅರ್ಥವಾಗಿದ್ದೇ ಈಗ! ಹೆಚ್ಚು ಕಡಿಮೆ ಒಬ್ಬ ಸೈಕಾಲಜಿಸ್ಟ್ ಆಗಿಯೇ ಎಲ್ಲವನ್ನೂ ನಿಭಾಯಿಸುವ ದಾರ್ಢ್ಯತೆಯೇ ಹೆಣ್ಣನ್ನು ಹೆಣ್ಣಾಗಿಸಿರುವುದು ಮತ್ತು ಇದಕ್ಕಾಗಿ ನಾನು ಹೆಮ್ಮೆ ಪಡಬೇಕಾಗಿರುವುದು!
ಈ ಕರೋನಾ ಲಾಕ್‌ಡೌನ್ ಹೀಗೆ ನನಗಾಗಿ ನಾನು ಹೆಮ್ಮೆಪಡಲು ಹಲವು ಕಾರಣಗಳನ್ನು ನನಗೆ ನೀಡಿದೆ. ಅಡುಗೆ ಕೌಶಲ್ಯ ಇದರಲ್ಲೊಂದು. ಇರುವಷ್ಟೇ ಸಾಮಗ್ರಿ ಬಳಸಿ, ರುಚಿಯಾಗಿಯೂ ಪೌಷ್ಟಿಕವಾಗಿಯೂ ದಿನದ ಮೂರು ಹೊತ್ತೂ ಬೇಯಿಸುತ್ತಿರುವ ನಾನು ಹಾಗೂ ಹೀಗೂ ಹೊರಗೆ ಹಸಿದವರ ಬಾಯಿಗೂ ಒಂದು ತುತ್ತು ನೀಡದೇ ಕಳಿಸುತ್ತಿಲ್ಲ. ಮನೆಯವರೂ ಕಡಿಮೆಯಿಲ್ಲ! ಈಗವರು ನಾನು ಬೇಯಿಸಿಟ್ಟಿದ್ದನ್ನು ಒಂದಕ್ಷರ ತಕರಾರಿಲ್ಲದೇ ತಿಂದು ಏಳುತ್ತಾರೆ, ಹಾಗೂ ನನಗೇ ಆಹಾರ ಉಳಿಸಿ ಎಸೆಯಬಾರದೆಂದು ತಾಕೀತು ಮಾಡುತ್ತಾರೆ. ಎಂದೂ ರಾಗಿಮುದ್ದೆಯ ಕಡೆಗೂ ನೋಡದಿದ್ದ ಯಜಮಾನಪ್ಪನವರು ಇಂದು ರಾತ್ರಿ ಮುದ್ದೆ ಮಾಡೆಂದು ಅವರೇ ಹೇಳುತ್ತಾರೆ! ಜಂಕ್ ಫುಡ್ ಪದವೇ ಮಾಯವಾಗಿ ನೆಮ್ಮದಿಯ ನಿಟ್ಟುಸಿರಿನೊಂದಿಗೆ ಹಪ್ಪಳ ಸಂಡಿಗೆ ಉಂಡೆ ಚಕ್ಲಿ ಕೋಡುಬಳೆ ಹೀಗೆ ಹಲವು ತೆರೆಮರೆಗೆ ಸರಿದ ಪಾತ್ರಗಳು ಈಗ ಮುಖ್ಯಭೂಮಿಕೆಗೆ ಬಂದಿವೆ. ಇದಲ್ಲದೇ ಮನೆಯ ಮುಂದೆ ಮತ್ತೆ ಪ್ರತ್ಯಕ್ಷವಾಗಿರುವ ಬಾಲ್ಯದ ಗೆಳೆಯರು..! ಗುಬ್ಬಿ ಗೊರವಂಕ ಹಾಗೂ ಇತರ ಪಕ್ಷಿಗಳ ದಂಡಿಗೆ ಸಮಾರಾಧನೆ ಬೇರೆ! ಹೀಗೇ ಹಲವು ಪ್ರಾಣಿಪಕ್ಷಿಗಳು ತಂತಮ್ಮ ಜಾಗಕ್ಕೆ ಮರಳಿವೆಯಂತೆ. ಕೇಳಿ ಖುಷಿಯಾಯಿತು. ಬೆಳಗಾಗೆದ್ದು ರಾತ್ರಿವರೆಗೂ ಅಮ್ಮನೂ ಅಜ್ಜಿಯೂ ದೊಡ್ಡಮ್ಮನೂ ಆಳುತ್ತಿದ್ದಂತೆ ಈ ಮನೆಯೆಂಬ ಸಾಮ್ರಾಜ್ಯಕ್ಕೆ ನಾನೇ ರಾಣಿಯಾಗಿ ಆಳುತ್ತಿರುವ ಅನುಭವವಾಗುತ್ತಿದ್ದರೆ ಕರೋನಾವನ್ನು ಜರಿಯಬೇಕೋ ಅಭಿನಂದಿಸಬೇಕೋ ಗೊತ್ತಾಗುತ್ತಿಲ್ಲ.
– ಮಧುರಾಣಿ ಎಚ್ ಎಸ್
ಸಕಾಲಿಕ ಬರಹ ಇಷ್ಟವಾಯಿತು.
Thank u madam.
ಈ ಸಂದರ್ಭದಲ್ಲಿ ಹೆಚ್ಚಿನ ಎಲ್ಲಾ ಮಂದಿಗೂ ಆಗುತ್ತಿರುವ ಅನುಭವವನ್ನು ಚೆನ್ನಾಗಿ ಭಟ್ಟಿ ಇಳಿಸಿದ್ದೀರಿ ಮೇಡಂ. ಕಠೋರ ವಾಸ್ತವವನ್ನು ಒಪ್ಫಿಕೊಳ್ಳಲಾಗದಿದ್ದರೂ, ಬಲವಂತವಾಗಿ ಆ ಹಾದಿಯಲ್ಲಿ ಸಾಗುತ್ತಿರುವುದು ಸತ್ಯ. ಸಕಾಲಿಕ ಬರಹ ಚೆನ್ನಾಗಿದೆ ಮೇಡಂ.
ಅರಗಿಸಿಕೊಳ್ಳಲಾಗದ ಕಟು ವಾಸ್ತವದ ಮುಂದಿರುವ ನಮ್ಮೆಲ್ಲರ ಧ್ವನಿಯಾಗಿದೆ ನಿಮ್ಮ ಚೊಕ್ಕ ಲೇಖನ.