ಪುಸ್ತಕ ಅನುಭವ-‘ಹೇಳದೇ ಹೋದ ಮಗಳಿಗೆ’
ಕೊರೊನಾ ರಜೆಯಲ್ಲಿ ಸಮಯದ ಸದುಪಯೋಗಕ್ಕೆಂದು ಈ ಹಿಂದೆ ಪೇರಿಸಿಟ್ಟ ಪುಸ್ತಕಗಳನ್ನು ಓದುವ ಸಮಯ.ಹಾಗೆ ಕೈಗೆತ್ತಿಕೊಂಡ ಪುಸ್ತಕಗಳಲ್ಲಿ ಯಾವುದನ್ನು ಓದಲಿ ಎಂಬ ಗೊಂದಲದ ನಡುವೆ ಚಂದದ ಮುಖಪುಟ ಹೊಂದಿರುವ ಪುಸ್ತಕವೊಂದ ಕೈಗೆತ್ತಿಕೊಂಡೆ.ಪುಸ್ತಕದ ಹೊದಿಕೆ ನೋಡಿ ನಿರ್ಧರಿಸಬಾರದಾದರೂ ಅದ್ಯಾಕೋ ಓದೋಣವೆಂದು ಮುಖಪುಟದಲ್ಲಿರುವ ಹುಡುಗಿ ಈ ಪುಸ್ತಕವನ್ನೇ ಓದು ಎಂದು ಹೇಳಿದಂತಾಯಿತು. ನಾನು ಓದಿದ ನರೇಂದ್ರ ಎಸ್ ಗಂಗೊಳ್ಳಿ ಅವರ ‘ಹೇಳದೆ ಹೋದ ಮಗಳಿ’ಗೆ ಕೃತಿಯ ಬಗ್ಗೆ ನನ್ನ ಸಣ್ಣ ಅನಿಸಿಕೆ ನಿಮ್ಮ ಮುಂದೆ.ಅವರ ಪುಸ್ತಕಗಳು ಬದುಕಿಗೊಂದು ಪ್ರೇರಣೆಯನ್ನು ನೀಡಬೇಕು ಎಂಬ ಆಶಯದೊಂದಿಗೆ ಪ್ರಕಟಿಸಿರುವ ಈ ಪುಸ್ತಕದಲ್ಲಿ ಉತ್ತಮ ಪ್ರೇರಣಾತ್ಮಕ ಮತ್ತು ಚಿಂತನಾರ್ಹ ಬರಹಗಳು ನಮ್ಮ ಮುಂದಿವೆ. ಅಕ್ಷರಗಳಲ್ಲ ಲೇಖಕರದು ಆದರೂ ಭಾವವು ಓದುಗರ ಆಗಲಿ ಎನ್ನುವ ಆಶಯವೂ ಕೂಡ ಅವರದು.ಸಂಜೀವ ಪಾರ್ವತಿ ಪ್ರಕಾಶನದಿಂದ ಪ್ರಕಟವಾದ ಲೇಖಕರ ಚೊಚ್ಚಲ ಕೃತಿ.ಲೇಖಕರು ಈಗಾಗಲೇ ನಾಡಿನ ಪ್ರಸಿದ್ಧ ದಿನಪತ್ರಿಕೆ,ವಾರಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದು ಜನರಿಗೆ ಚಿರಪರಿಚಿತರು.
ಶೀರ್ಷಿಕೆ ಲೇಖನದಲ್ಲಿ ಮನೆಯಲ್ಲಿ ‘ಹೇಳದೆ ಹೋದ ಮಗಳ’ ಅಪ್ಪನ ಜಾಗದಲ್ಲಿ ನಿಂತು ಲೇಖಕರು ಅವರ ಮನಸ್ಥಿತಿಯನ್ನು ಮನತಟ್ಟುವಂತೆ ನಮ್ಮ ಮುಂದಿಟ್ಟಿದ್ದಾರೆ. ಚಿಕ್ಕಂದಿನಲ್ಲಿ ತುಂಬಾ ಪ್ರೀತಿಯಿಂದ ಮಗಳನ್ನು ಬೆಳೆಸಿ ಅವಳು ಹೋದಾಗ ಅವಳಿಲ್ಲದೆ ತಿಂಡಿ-ಊಟ ,ನಿದ್ರೆ ಎಲ್ಲ ಯಾಂತ್ರಿಕವಾಗಿ ಬಿಟ್ಟಿದೆ ಎಂದು ಹೇಳುವ ತಂದೆ ಅಪ್ಪಿತಪ್ಪಿ ಹೊಸಜೀವನ ತೀರಾ ತೊಂದರೆ ಎನಿಸಿದಲ್ಲಿ ಸಹಾಯಕ್ಕೆ ನಾವಿದ್ದೇವೆ ಎಂಬ ಮಾತನ್ನು ಹೇಳುತ್ತಾರೆ.
ವಿಕಲಚೇತನ ಮಗುವಾಗಿ ಒಂದೊಂದು ಕೈಯಲ್ಲಿ ಎರಡೇ ಬೆರಳು ಇದ್ದರೂ ಪಿಯಾನೋ ನುಡಿಸುವ ದಕ್ಷಿಣ ಕೊರಿಯಾದ ಲೀ, ಹಾಕಿ ಮಾಂತ್ರಿಕ ಧ್ಯಾನಚಂದ್, ಬಡತನದಿಂದ ಬರಿಗಾಲಲ್ಲಿ ಓಡುತ್ತಾ ಸಾಧನೆ ಮಾಡಿದ ಹಿಮಾದಾಸ್,ಬ್ಯಾಡ್ಮಿಂಟನ್ ನಲ್ಲಿ ಸಾಧನೆಮಾಡಿರುವ ಓಲಿಂಪಿಕ್ ತಾರೆ ಪಿ.ವಿ.ಸಿಂಧು,ಕ್ರಿಕೆಟ್ ದಿಗ್ಗಜೆ ಮಿಥಾಲಿ ರಾಜ್, ಕಾಲು ಕಳೆದುಕೊಂಡರೂ ಛಲ ಬಿಡದೇ ಪ್ಯಾರಾ ಬ್ಯಾಂಡ್ಮಿಟನ್ ಚಾಂಪಿಯನ್ ಆದ ಮಾನಸಿ ಜೋಶಿ,ಮಹಾರಾಷ್ಟ್ರದ ಕಾಂಚನಮಾಲಾ ಕಣ್ಣಿಲದಿರೇನಂತೆ ಈಜಲು ಅದು ಸಮಸ್ಯೆಯಲ್ಲವೇ ಅಲ್ಲ ಎಂದು ವಿಶ್ವ ಪ್ಯಾರಾ ಸ್ವಿಮಿಂಗ ಚಾಂಪಿಯನ್ಷಿಪನಲ್ಲಿ ಗೆಲ್ಲುವ ಪರಿ,ಎವರೆಸ್ಟ್ ಏರಿದ ಪ್ರಥಮ ಅಂಗವಿಕಲ ಪರ್ವತಾರೋಹಿ ಅರುಣಿಮಾ ಇವರ ಬದುಕನ್ನೆಲ್ಲ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಎತ್ತಿ ತೋರಿಸಿದ್ದಾರೆ. ಅಯ್ಯೋ ಈ ಕಥೆಯನ್ನೆಲ್ಲ ಗೂಗಲಿನಲ್ಲಿ ಓದಬಹುದು ಎಂದು ಅಂದುಕೊಂಡರೆ ಎಲ್ಲ ಗೂಗಲ್ ಕಥೆಗಳು ನಮ್ಮ ಮನ ತಟ್ಟುವುದಿಲ್ಲವಲ್ಲ, ಮುನ್ನುಡಿಯಲ್ಲಿ ಡಾಕ್ಟರ್ ಪಾರ್ವತಿ ಜಿ ಅವರು ಹೇಳಿರುವಂತೆ ಅಕ್ಷರಗಳನ್ನು ಅರ್ಥವಾಗುವಂತೆ ಪ್ರೀತಿಯಲ್ಲಿ ಹೇಳುವುದು ಸುಲಭವಲ್ಲ ಎಂಬುದನ್ನು ಮರೆಯದಿರಿ.
ವೈಯಕ್ತಿಕ ಆಕಾಂಕ್ಷೆಗಳನ್ನು ದೂರವಿರಿಸಿ ದೇಶಭಕ್ತಿ ದೇಶದ ಆಲೋಚನೆಗಳನ್ನು ಹೊಂದಿದ್ದ ಶಾಸ್ತ್ರಿಜಿ,ಕೇವಲ ಫ್ಯಾಕ್ಟರಿಯಿಂದ ಬರುತ್ತಿದ್ದ ಯಂತ್ರಗಳ ಶಬ್ದಗಳನ್ನು ಗ್ರಹಿಸಿ ಅದನ್ನೇ ಆಧಾರವಾಗಿಟ್ಟುಕೊಂಡು ತಂತ್ರಜ್ಞಾನವನ್ನು ಅರಿತು ಭಾರತದಲ್ಲಿ ಶ್ರೀಗಂಧದ ಎಣ್ಣೆಯನ್ನು ತೆಗೆದ ಸರ್ ಎಂ ವಿಶ್ವೇಶ್ವರಯ್ಯನವರ ಬಗ್ಗೆ ,ಅಪ್ರತಿಮ ದೇಶ ಭಕ್ತಿಗೆ ಹೆಸರಾದ ಭಗತ್ ಸಿಂಗ್ ರಾಜಗುರು ಸುಖದೇವ್ ಅವರ ಚರಿತ್ರೆ ಕಥೆ, ಭಾರತದ ಪ್ರಪ್ರಥಮ ಮಹಿಳಾ ಸೇನೆ ಸೇನಾಪಡೆ ಎಂದೇ ಗುರುತಿಸಲ್ಪಟ್ಟ ದಂಡನಾಯಕ ಲಕ್ಷ್ಮಿ ಸೆಹಗಲ್ ಅವರ ಜೀವನ ಚರಿತ್ರೆ ಇವುಗಳನ್ನು ನಮ್ಮ ಮುಂದಿಡುವ ಮೂಲಕ ಇಂದಿನ ತಂತ್ರಜ್ಞಾನ ಸ್ವತಂತ್ರ ಭಾರತ ನಮ್ಮ ಕೈಗೆ ಸಿಗುವ ಮುಂಚಿನ ಮಾದರಿ ದಿನಗಳನ್ನು ನಾವು ಕಾಣುವಂತಾಗಿದೆ.
ಇಂಗ್ಲಿಷ್ ಬಾರದೇ ಸಹಪಾಠಿಗಳಿಂದ ಅಪಹಾಸ್ಯ ಮಾಡಿಸಿಕೊಂಡ ಆ್ಯನಿ ದಿವ್ಯಾ ಇಂದು ಬೋಯಿಂಗ್ 777 ವಿಮಾನವನ್ನು ಚಲಾಯಿಸಬಲ್ಲ ಜಗತ್ತಿನ ಕಿರಿಯ ಕಮಾಂಡರ್ ಆಗಿದ್ದಾರೆ,ಅವರ ಬದುಕಿನ ಚಿತ್ರಣ ನಮ್ಮ ಮುಂದಿಡುವ ಲೇಖಕರು,ಏವಿಯೇಷನ್ ಇನ್ನಿತರ ಉನ್ನತ ಶಿಕ್ಷಣ ಕೊಡಿಸುವ ನೆಪದಲ್ಲಿ ಹಣದೋಚುವ ವಂಚಕ ಜಾಲವಿರುವ ಸಾಧ್ಯತೆಗಳಿವೆ ಎಂಬ ಎಚ್ಚರವನ್ನೂ ನೀಡುತ್ತಾರೆ.ಹೌದಲ್ಲವೇ ಈ ಸದ್ಯ ದುಬಾಯಿ ಕನಸು ಕಾಣಿಸಿ ಮೋಸಹೋದವರ ಸುದ್ದಿಯನ್ನೂ ಓದಿದ್ದೇವಲ್ಲ. ಹೆಣ್ಣುಮಕ್ಕಳ ಶಿಕ್ಷಣದ ಹಕ್ಕುಗಳ ಬಗ್ಗೆ ಧನಿಯೆತ್ತಿ ಅದಕ್ಕಾಗಿ ಹೋರಾಟ ನಡೆಸಿ,ವಿಶ್ವಶಾಂತಿಗಾಗಿ ನೊಬೆಲ್ ಪ್ರಶಸ್ತಿಯನ್ನು ಜಂಟಿಯಾಗಿ ಭಾರತದ ಕೈಲಾಶ್ ಸತ್ಯಾರ್ಥಿಯವರೊಂದಿಗೆ ಪಡೆದ ಅತ್ಯಂತ ಕಿರಿವಯಸ್ಸಿನ ಮಲಾಲಾ ಅವರ ಕುರಿತು ಹೇಳುವ ಲೇಖಕರು,ಶಿಕ್ಷಣವು ಸಮಾಜದ ನಡುವೆ ತಲೆಎತ್ತಿ ಧೈರ್ಯದಿಂದ ಬದುಕುವುದನ್ನು ಕಲಿಸಬೇಕು ಎಂಬ ಮಾತನ್ನೂ ಹೇಳುತ್ತಾರೆ.
ಪ್ರೀತಿ ಎಂಬುದು ಬರೀ ಮನುಷ್ಯರಿಗಷ್ಟೇ ಅಲ್ಲದೆ ನಾಯಿಮರಿಯಲ್ಲಿಯೂ ಇರುತ್ತದೆ ಎಂಬುದನ್ನು ಹಾಚಿಕೊ ಕಥೆ ಮೂಲಕ ನಾವು ಕಾಣಬಹುದು.ಆಹಾರ ಉತ್ಪನ್ನ,ಔಷಧಿ ಇನ್ನಿತರ ವಸ್ತುಗಳನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡುವ ನೆಪದಲ್ಲಿ ಅವುಗಳ ಹಿಂಸೆಯನ್ನು ನಿಲ್ಲಿಸಬೇಕೆಂದು ಕರೆನೀಡುವ ಮೂಲಕ ಅಲ್ಲದೇ ಪ್ರಾಣಿಯ ಜೀವ ಪ್ರಕೃತಿ ಮತ್ತು ನಮ್ಮ ದೇಹ ಪ್ರಕೃತಿ ಬೇರೆಯದೇ ಆಗಿರುವುದರಿಂದ ಆ ಪ್ರಯೋಗಗಳು ನಿಷ್ಪ್ರಯೋಜಕವೆಂದು ಎತ್ತಿ ಹಿಡಿದು ಹೇಳಿರುವ ಲೇಖಕರು ಪ್ರತಿ ಓದುಗ ಇದನ್ನು ಒಪ್ಪುವಂತೆ ಮಾಡುತ್ತಾರೆ.ಸಹಾರಾ ಮರುಭೂಮಿಯಲ್ಲಿದ್ದ ಒಂಟಿ ಮರ ಬಿದ್ದು ಹೋದ ಕತೆಯನ್ನು ಹೇಳುತ್ತಾ,ಮರಗಳನ್ನು ಏಕಾಂಗಿಯಾಗಿಸದೇ ಮತ್ತಷ್ಟು ಮಗದಷ್ಟು ಮರಗಳನ್ನು ನೆಡಲು ಕರೆನೀಡುತ್ತಾರೆ.ಗೋವುಗಳ ಮೇಲೆ ಪ್ರೀತಿಯಿಂದ ಗೋಶಾಲೆ ನಡೆಸುವ ಸುದೇವಿದಾಸಿ,ಹೆತ್ತ ಮಕ್ಕಳಂತೆ ಅವುಗಳನ್ನು ಸಾಕುವ ಪರಿಯು ಅದ್ಭುತ.
ಆಮೇಲೆ ಕಿರುಚುತ್ತೇನೆ ಎಂದು ಪುಸ್ತಕ ಬರೆದಿರುವ ಮಾರ್ಲೀ ಮಾಟ್ಲಿನ್ ಹುಟ್ಟಾ ಕಿವುಡಾಗಿದ್ದರೂ ಸಿನಿಮಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಕಡಿಮೆಯೇನು. ಪಥೇರ್ ಪಾಂಚಾಲಿ ಚಿತ್ರಕ್ಕಾಗಿ ಹೆಂಡತಿಯ ಒಡವೆ ಒತ್ತೆಯಿಟ್ಟು ಅರ್ಪಣಾ ಭಾವದಿಂದ ದುಡಿದ ಸತ್ಯಜಿತ್ ರೇಯವರಿಗೊಂದು ಶರಣು. ಸಿನಿಮಾ ಅಂದೇ ಅಲ್ಲವೇ ಸಿನಿಮಾ ಬದುಕಿಗೂ ಹೊರತು ಪಡಿಸಿ ಸಿನಿಮಾದೊಂದಿಗೆ ಬದುಕಲ್ಲಿ ಇನ್ನಿತರ ಕನಸುಕಂಡು ಇಂದಿನ ಕಂಟ್ರಿ ಕ್ಲಬ್,ಸಂಕೇತ್ ಸ್ಟುಡಿಯೋ,ರಂಗಶಂಕರವನ್ನು ಬೆಳೆಸಿದ ಕನಸುಗಾರ ಶಂಕರನಾಗ್ ಅವರ ಬದುಕು,ಕನಸುಗಳನ್ನು ನಮ್ಮ ಮುಂದಿಡುವ ಲೇಖಕರು ಅವರು ಇಂದು ನಮ್ಮೊಂದಿಗಿದ್ದರೆ ಚಿತ್ರರಂಗ ಸಾಗುವ ಹಾದಿಯೇ ಬೇರೆಯಿತ್ತು ಎಂಬುದನ್ನು ಹೇಳುತ್ತಾರೆ.ಎಲ್ಲರ ಬದುಕಿಗೊಂದು ಕ್ರಿಯಾಶೀಲ ಆದರ್ಶವನ್ನು ಶಂಕರ್ನಾಗ್ ನಮ್ಮ ಪಾಲಿಗೆ ಬಿಟ್ಟುಹೋಗಿದ್ದಾರೆ ಎಂಬುದನ್ನು ತಿಳಿಸಿ ಹೇಳುತ್ತಾರೆ.
ದುಷ್ಟರ ನಡುವಿದ್ದರೂ ಸ್ನೇಹವನ್ನು ಬಿಡದೇ ನಮಗೆ ಇಷ್ಟವಾಗುವ ಪುರಾಣಿಕ ಪಾತ್ರ ಯಾರದು ಎಂದರೆ ಕರ್ಣನ ಹೆಸರೇ ಜ್ಞಾಪಕ ಬರುವುದಲ್ಲವೇ.ಕರ್ಣನ ಅದ್ಭುತ ವ್ಯಕ್ತಿತ್ವ,ದಾನಗುಣಗಳನ್ನು ಬರೆದಿರುವ ಲೇಖಕರು,ಮುದ್ದಣ ಎಂದೇ ನಮ್ಮೆಲ್ಲರ ಮನಸ್ಸಲ್ಲಿರುವ ನಂದಳಿಕೆ ಲಕ್ಷ್ಮೀ ನಾರಾಣಪ್ಪ ಹೇಗೆ ಎಲೆಮರೆ ಕಾಯಿಯಾಗೇ ಉಳಿದರು,ಅಲ್ಲದೇ ಅವರ ಪಾಂಡಿತ್ಯದ ಅರಿವಿಲ್ಲದೇ ಅವರ ಮನೆಯವರಿಂದ ನದಿಗೆ ಎಸೆಯಲ್ಪಟ್ಟ ಅವರ ಕೃತಿಗಳು,ಅವರ ಕಡುಬಡತನವನ್ನೆಲ್ಲ ತೋರಿಸುವ ಲೇಖಕರು,ಮುದ್ದಣನ ಲೇಖನಗಳ ಕುರಿತು ಅಧ್ಯಯನ ನಡೆಸಿ ಸೂಕ್ತದಾಖಲೆಗಳನ್ನು ನೀಡಿ ಅವನದೇ ರಚನೆಗಳೆಂದು ದೃಢಿಕರೀಸಿದ ಸಂಶೋಧಕ ಗೋವಿಂದ ಪೈಯವರಿಗೆ ನಮನವನ್ನೂ ಸಲ್ಲಿಸುತ್ತಾರೆ.
ತೃತೀಯ ಲಿಂಗಿಗಳಿಗಾಗಿ ಹೋರಾಡಿ ಪೋಲಿಸ್ ಇಲಾಖೆಯಲ್ಲಿ ಅವರಿಗೂ ಸ್ಥಾನ ನೀಡಬೇಕೆಂದು ಕೇಳಿ ಗೆದ್ದು ಐ.ಪಿ.ಎಸ್ ಕನಸು ಕಾಣುತ್ತಿರುವ ತಮಿಳುನಾಡಿನ ಪ್ರೀತಿಕಾ,ಮಹಾರಾಷ್ಟ್ರದಲ್ಲಿ ಅನಾಥೆಯರಿಗೆ ಮೀಸಲಾತಿ ಪಡೆಯುವ ಹೋರಾಟ ನಡೆಸಿ ಗೆದ್ದ ಅಮೃತಾ ಕರವಂದೆ,ಮಹಿಳೆಯರು ಯಾವ ಕ್ಷೇತ್ರದಲ್ಲಾದರೂ ಸಾಧಿಸಬಲ್ಲರು ಎಂದು ಎತ್ತಿ ತೋರಿಸುತ್ತ ಅಪ್ಪನ ಹೇರ್ ಕಟ್ಟಿಂಗ್ ಕ್ಷೇತ್ರಕ್ಕೆ ಕಾಲಿಟ್ಟು ಅದನ್ನೇ ಮುಂದುವರಿಸುತ್ತ ಸಚಿನ್ ತೆಂಡೂಲ್ಕರ್ ಅವರಿಗೆ ಶೇವ್ ಮಾಡಿ ದಾಖಲೆ ಬರೆದಿರುವ ಉತ್ತರ ಪ್ರದೇಶದ ನೇಹಾ ಮತ್ತು ಜ್ಯೋತಿ,ಹೀಗೆ ಮನಸ್ಸಿದ್ದರೆ ಮಾರ್ಗ ಎಂಬ ನಾಣ್ಣುಡಿಯಂತೆ ಯಶಸ್ಸು ಕಂಡವರ ಬದುಕಿನ ಚಿತ್ರಣವನ್ನು ಮನ ತಟ್ಟುವಂತೆ ನಮ್ಮ ಮುಂದಿಟ್ಟಿದ್ದಾರೆ ಲೇಖಕರು.
ಇಂದಿನ ಯುಗದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನವಾಗಿ ಶಿಕ್ಷಣ ದೊರೆತು,ದುಡಿಯುವ ಸ್ಥಿತಿಯಲ್ಲಿ ಗೆಳೆಯರ ಬಳಗದಲ್ಲಿ ಗೆಳತಿಯರು,ಅಲ್ಲದೇ ಮಹಿಳೆಯ ಸ್ನೇಹಿತ ಪುರುಷನಾಗಿರುವುದು ಸಾಮಾನ್ಯವಾಗಿರುವುದರಿಂದ ಗಂಡ ಹೆಂಡತಿಯ ನಡುವೆ ಸಂಶಯಗಳನ್ನು ತೊರೆದು ಸ್ನೇಹಭಾವದಿಂದಿರಲು ಹೇಳುತ್ತ ಅತಿಯಾದರೆ ಅಮೃತವೂ ವಿಷವೆಂಬಂತೆ ಮದುವೆಯ ನಂತರ ಪರ ಪುರುಷ/ಸ್ತ್ರೀ ಯೊಂದಿಗೆ ಚಲ್ಲುಚಲ್ಲಾಗಿ ಮಾತನಾಡುವುದು ತರವಲ್ಲವೇನೋ ಎಂಬುದನ್ನು ಹೇಳುತ್ತಾರೆ.
.
ಪ್ರಕಟಣೆಗಾಗಿ ಧನ್ಯವಾದಗಳು
SUPER .
ಧನ್ಯವಾದಗಳು ಸಾವಿತ್ರಿ ಮೇಡಂ ನನ್ನ ಪುಸ್ತಕವನ್ನು ಚಂದಗೆ ಪರಿಚಯ ಮಾಡಿದ್ದ ಕ್ಕೆ. ಪ್ರಕಟಸಿಸ ಸುರ ಹೊನ್ನೆ ಬಳಗಕ್ಕೂ ಅಭಾರಿ.
ಚೆನ್ನಾಗಿದೆ ಪುಸ್ತಕ ವಿಮರ್ಶೆ. ಪುಸ್ತಕ ಪಡೆಯಲು ಸಂಪರ್ಕಿಸಬೇಕಾದ ಕೊಂಡಿಯನ್ನು ನೀಡಿದ್ದು ಆಸಕ್ತರಿಗೆ ಪುಸ್ತಕ ಪಡೆಯುವಲ್ಲಿ ಸಹಾಯಕ.
ಧನ್ಯವಾದಗಳು
ಪುಸ್ತಕ ಪರಿಚಯ ಚೆನ್ನಾಗಿದೆ.