ಸುಗ್ಗಿಯ ಹಬ್ಬ ‘ಸಂಕ್ರಾಂತಿ’

Share Button

         ಸುಗ್ಗಿ ಹಬ್ಬ ಎಂದೇ ಪ್ರಸಿದ್ಧವಾದ ನಮ್ಮ ಸಂಸ್ಕೃತಿಯ ಆಚರಣೆಯ ಪ್ರಮುಖ ಹಬ್ಬ. ಸಂಕ್ರಾಂತಿ ಬದಲಾವಣೆಯ ಪ್ರತೀಕವಾದ ಹಬ್ಬ. ಸೂರ್ಯ ತನ್ನ ಪಥವನ್ನು ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಚಲಿಸುವ ಪರ್ವಕಾಲ. ಅಂದರೆ ಧನುರಾಶಿಯಿಂದ ಮಕರ ರಾಶಿಗೆ ಸೂರ್ಯ ಪ್ರವೇಶವಾಗುವ ಸುಸಮಯ. ಪ್ರಕೃತಿಯ ಈ ಬದಲಾವಣೆಯಿಂದ ಹಗಲು ರಾತ್ರಿಗಳ ಸಮಯದಲ್ಲಿ ವ್ಯತ್ಯಾಸಗಳಾಗುತ್ತವೆ. ಅಲ್ಲದೇ ಚಳಿ ಕಡಿಮೆಯಾಗಿ ಬಿಸಿಲು ಜಾಸ್ತಿ ಆಗುವ, ಗಿಡ ಮರಗಳು ಎಲೆಗಳನ್ನು ಉದುರಿಸಿ ಹೊಸ ಚಿಗುರನ್ನು ಬಿಡುವ ಕಾಲ. ಅಲ್ಲದೆ ರೈತಾಪಿ ಬದುಕಿನ ಸುಗ್ಗಿಯ ಸಂಭ್ರಮವನ್ನು ಕಣ್ತುಂಬಿಕೊಳ್ಳುವ ಹಬ್ಬ. ವರ್ಷವಿಡೀ ಬೆಳೆದ ಫಸಲನ್ನು ಕಣಕ್ಕೆ ಹಾಕಿ ಅದನ್ನು ವಕ್ಕಣೆ ಮಾಡಿ ರಾಶಿ ಮಾಡಿ ಆ ರಾಶಿಯನ್ನು ಪೂಜೆ ಮಾಡಿ ಅದರಲ್ಲಿ ಸ್ವಲ್ಪ ಭಾಗವನ್ನು ದಾನ ಮಾಡಿ ನಂತರ ಉಳಿದ ಧಾನ್ಯಗಳನ್ನು ಸಂಗ್ರಹಿಸಿಕೊಳ್ಳುವುದು ಸಂಪ್ರದಾಯ.
.
ಪ್ರಕೃತಿಯಲ್ಲಿ ಉಂಟಾಗುವ ಚಳಿ ಮತ್ತು ಶಾಖದ ಪರಿಣಾಮವಾಗಿ ದೇಹದ ಚರ್ಮದಲ್ಲಿ ಜಿಡ್ಡಿನ ಅಂಶ ಕಡಿಮೆಯಾಗಿ ಚರ್ಮ ಒಣಗಿದಂತಾಗುತ್ತದೆ. ಇಂತಹ ಸಮಸ್ಯೆಯಿಂದ ದೂರ ಆಗುವುದಕ್ಕಾಗಿ ನಮ್ಮ ಹಿರಿಯರು ಹೊಸದಾಗಿ ಬೆಳೆದ ಎಳ್ಳು ಅದರೊಟ್ಟಿಗೆ ಬೆಲ್ಲ ಬೆರೆಸಿ ಹಂಚುವ ಮೂಲಕ ದೇಹದ ಸಮತೋಲನ ಕಾಪಾಡಿಕೊಳ್ಳಲು, ಆ ಮೂಲಕ ಪರಸ್ಪರ ಬಾಂಧವ್ಯಗಳನ್ನು ಬೆಸೆಯಲು ಈ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದರು. ಪರಸ್ಪರ ಎಳ್ಳುಬೆಲ್ಲ ಹಂಚುವುದರಿಂದ ಸಮಾಜದ ಸ್ವಾಸ್ಥ್ಯವನ್ನು ಕಾಪಾಡವ ಮೂಲಕ ನಮ್ಮ ಹಿರಿಯರ ಸೌಹಾರ್ದ ಮನೋಭಾವನೆಗೆ ಸಾಕ್ಷಿಯಾಗಿದೆ. ಎಳ್ಳು ಬೆಲ್ಲದ ಜೊತೆಗೆ ಹೊಸದಾಗಿ ಬೆಳೆದ ಕಬ್ಬು, ಸಕ್ಕರೆ, ಕಡಲೆ, ಶೇಂಗಾ ಬೀಜ ಇತ್ಯಾದಿ ರೈತ ತಾವೇ ಬೆಳೆದ ವಸ್ತುಗಳನ್ನು ಬಳಸಿ ತಿನ್ನುವುದರಿಂದ ಆರೋಗ್ಯದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.
         ರೈತಾಪಿ ಜನ ತಮ್ಮ ಫಸಲು ಬಂದ ಖುಷಿಯಲ್ಲಿ ಸುಗ್ಗಿ ಹಬ್ಬ ಎಂದು ಆಚರಿಸುತ್ತಾರೆ. ತಮಗೆ ಅನ್ನವನ್ನು ಕೊಟ್ಟ ಭೂಮಿತಾಯಿಗೆ ಪೂಜೆಯ ಮೂಲಕ ಕೃತಜ್ಞತೆ ಸಲ್ಲಿಸುವ ಮೂಲಕ ಋಣ ಸಮರ್ಪಣೆ ಮಾಡಿಕೊಳ್ಳುವರು. ಗಂಡಸರು ಕಿಚ್ಚು ಹಾಯಿಸುವ ಮೂಲಕ ದನಕರುಗಳ ಆರೋಗ್ಯದ ಕಡೆಗೂ ಗಮನ ಹರಿಸಿದರೆ, ಹೆಂಗಸರು ಒಬ್ಬಟ್ಟು ಹೋಳಿಗೆ ಸಿಹಿ ತಿಂಡಿಗಳನ್ನು ಮಾಡಿ ಹೊಸ ಬಟ್ಟೆ ತೊಟ್ಟು ಮನೆ ಮನೆಗೆ ತೆರಳಿ ಎಳ್ಳು-ಬೆಲ್ಲ ಹಂಚುವ ಸಂಭ್ರಮವನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಅಲ್ಲದೆ ನವ ತರುಣಿಯರು ಜೋಕಾಲಿಯನ್ನು ಹಾಕಿಕೊಂಡು ಉಯ್ಯಾಲೆ ಆಡುವುದು, ಮಕ್ಕಳು ಮತ್ತು ಯುವಕರು ಗಾಳಿಪಟ ಹಾರಿಸುವುದು ಈ ಹಬ್ಬದ ಇನ್ನೊಂದು ವಿಶೇಷವಾಗಿದೆ.
.
        ಒಟ್ಟಿನಲ್ಲಿ ಸಂಕ್ರಾಂತಿ ಹಬ್ಬ ಶ್ರಮಜೀವಿಗಳ ದಣಿವನ್ನು ನೀಗಿಸಿ ಹೊಸ ಹುರುಪನ್ನು ತುಂಬುವ ಕೆಲಸ ಮಾಡಿದರೆ, ಪ್ರಕೃತಿ ಚಳಿಗಾಲ ಕಳೆದು ಬೇಸಿಗೆ ಕಾಲಕ್ಕೆ ಅಡಿಯಿಡುವ ಈ ಸಂದರ್ಭದಲ್ಲಿ ಸೂರ್ಯನ ಪಥ ಬದಲಾವಣೆ ಮಹತ್ವವನ್ನು ಪಡೆದಿದೆ ಈ ಸಂಭ್ರಮದಲ್ಲಿ ಜನ-ಜಾನುವಾರುಗಳ ಜೊತೆಗೆ ಇಡೀ ಪ್ರಕೃತಿಯು  ಪಾಲ್ಗೊಳ್ಳುವುದು ನಮ್ಮ ಭಾರತೀಯ ಸಂಸ್ಕೃತಿಯ ಹಬ್ಬಗಳ ಆಚರಣೆಯ ಸಂಪ್ರದಾಯಗಳ ಅರ್ಥಪೂರ್ಣ ಒಳಗೊಳ್ಳುವಿಕೆಯಾಗಿದೆ. ಪ್ರಕೃತಿ ಹೊಸ ಚಿಗುರಿನಿಂದ ಮತ್ತೊಂದು ವರ್ಷದ ಹರ್ಷಕ್ಕೆ ನಾಂದಿ ಹಾಡಲು ಸಜ್ಜಾಗಿರುವ ಅತ್ಯಂತ ಪುಣ್ಯದ ಕಾಲ. ಈ ಸಂದರ್ಭದಲ್ಲಿ ಜನರು ಹಳ್ಳ-ಕೊಳ್ಳಗಳ ಬಳಿಗೆ ಹೋಗಿ ಪುಣ್ಯಸ್ನಾನ ಮಾಡಿ ಸೂರ್ಯದೇವರಿಗೆ ಪ್ರಕೃತಿ ಮಾತೆಗೆ ಭೂತಾಯಿಗೆ ಪೂಜೆ ಸಲ್ಲಿಸುವ ಮೂಲಕ ನಿಸರ್ಗ ನಮಗೆ ಎಲ್ಲವನ್ನೂ ಕೊಟ್ಟಿದೆ ಹಾಗಾಗಿ ನಾವದಕ್ಕೆ ಕೃತಜ್ಞತೆಯಿಂದ ಪೂಜೆ ಸಲ್ಲಿಸೋಣ ಎಂಬ ಸಂಪ್ರದಾಯವನ್ನು ಈ ಹಬ್ಬ ನಮಗೆ ಕಲಿಸುತ್ತದೆ.
.
       ಇಂತಹ ಉಲ್ಲಾಸಮಯವಾದ, ಬದುಕಿನ ಭಾಗವೇ ಆಗಿರುವ ಸಂಕ್ರಾಂತಿ ಎಲ್ಲರ ಬಾಳಲ್ಲೂ ಸಂ ಕ್ರಾಂತಿಯನ್ನು ತಂದು ಎಲ್ಲರ ಏಳಿಗೆಗೆ ಸಹಕಾರಿಯಾಗುವಂತ ಸನ್ನಿವೇಶಗಳೊದಗಿಬರಲಿ ಎಂದು ಆಶಿಸುತ್ತಾ ಪರಸ್ಪರ ಸಾಮರಸ್ಯದ ಬದುಕನ್ನು ಬಾಳುತ್ತಾ, ಮಾನವರು ಮಾನವೀಯತೆಯನ್ನು ಆಚರಣೆಯಲ್ಲಿ ತಂದು ಸಕಲ ಜೀವರಾಶಿಗಳನ್ನು ಗೌರವಾದರಗಳಿಂದ ಕಂಡು ಪ್ರಕೃತಿಯ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾ ಸುಖದುಃಖಗಳನ್ನು ಸಮನಾಗಿ ಸ್ವೀಕರಿಸೋಣ. ಸರ್ವೇಜನ ಸುಖಿನೋ ಭವಂತು ಎಳ್ಳು ಬೆಲ್ಲ ಹಂಚಿ ಒಳ್ಳೆ ಮಾತುಗಳನ್ನಾಡೋಣ.
.
ಎಲ್ಲರಿಗೂ ಸುಗ್ಗಿಹಬ್ಬ ಸಂಕ್ರಾಂತಿಯ ಶುಭಾಶಯಗಳು.
..
.
-ಅಮು ಭಾವಜೀವಿ ಮುಸ್ಟೂರು

3 Responses

  1. ಶಿವಮೂರ್ತಿ ಹೆಚ್ says:

    ಬಹಳ ಚೆನ್ನಾಗಿದೆ ಸರ್

  2. ನಯನ ಬಜಕೂಡ್ಲು says:

    ಎಳ್ಳು ಬೆಲ್ಲವ ತಿಂದು ಒಳ್ಳೆಯ ಮಾತಾಡಿ. ರೈತ, ವ್ಯವಸಾಯ, ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸೋ ರೀತಿ, ದನ ಕರುಗಳು ಎಲ್ಲಾ ಅಂಶಗಳನ್ನು ಒಳಗೊಂಡ ಬರಹ, ಚೆನ್ನಾಗಿದೆ

  3. Shankari Sharma says:

    ಪ್ರಕೃತಿಯೊಂದಿಗೆ ಬೆರೆತು ಜೀವಿಸುವ ಅನಿವಾರ್ಯತೆ ಬಗೆಗಿನ ಸುಂದರ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: