ಹೀಗೂ ನಡೆಯುತ್ತದೆ
ಸುಮಾರು ಹತ್ತು ವರ್ಷಗಳ ಹಿಂದಿನ ಘಟನೆ. ಪ್ರತಿಷ್ಟಿತ ಬ್ಯಾಂಕೊಂದು ಗೃಹಸಾಲ ಮೇಳವೊಂದನ್ನು ಹಮ್ಮಿಕೊಂಡಿತ್ತು. ಅಲ್ಲಿಗೆ ಬರುವ ಜನರಿಗೆ ಮನರಂಜನೆ ಸಿಗಲೆಂದೋ ಏನೋ, ಚಲನಚಿತ್ರ ಹಾಡುಗಳ ಗಾಯನ ಸ್ಪರ್ಧೆಯನ್ನು ಕೂಡಾ ಏರ್ಪಡಿಸಲಾಗಿತ್ತು. ನಾನು ಎಂಟನೆಯ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗ ಹಾಗೂ ಆರನೆಯ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗಳನ್ನು ಕರೆದುಕೊಂಡು ಅಲ್ಲಿಗೆ ಹೋಗಿದ್ದೆ. ಸ್ಪರ್ಧೆಗಳು 18 ವರ್ಷ ಮೇಲ್ಪಟ್ಟ ಹಾಗೂ 18 ವರ್ಷ ಒಳಗಿನವರಿಗೆ ಎಂದು ಎರಡು ವಿಭಾಗಗಳಲ್ಲಿ ನಡೆಸುವುದಾಗಿ ಆಯೋಜಕರು ತೀರ್ಮಾನಿಸಿದ್ದರು. ಕನಿಷ್ಟ ಐದು ಸ್ಪರ್ಧಿಗಳು ಇಲ್ಲದಿದ್ದಲ್ಲಿ ಆ ವಿಭಾಗದ ಸ್ಪರ್ಧೆಗಳನ್ನು ನಡೆಸಲಾಗುವುದಿಲ್ಲ ಅನ್ನುವ ಸೂಚನೆಯೂ ಇತ್ತು. 18 ವರ್ಷದ ಕೆಳಗಿನ ವಿಭಾಗದಲ್ಲಿ ಸ್ಪರ್ಧಿಸಲು ಸುಮಾರು 20 ರಷ್ಟು ಸ್ಪರ್ಧಿಗಳು ಬಂದಿದ್ದರೆ, 18 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಕೇವಲ ಎರಡು ಹೆಸರುಗಳು ಮಾತ್ರವೇ ಬಂದಿದ್ದವು. ಮೊದಲೇ ಹೇಳಿದ್ದಂತೆ, 18 ವರ್ಷ ಮೇಲ್ಪಟ್ಟ ವಿಭಾಗದ ಸ್ಪರ್ಧೆಗಳನ್ನು ನಡೆಸುವಂತಿರಲಿಲ್ಲ. ಆದರೆ ಆಯೋಜಕರು ಆ ಇಬ್ಬರನ್ನು ಕೆಳಗಿನ ವಿಭಾಗದೊಂದಿಗೆ ಸೇರಿಸಿಯೇ ಬಿಟ್ಟರು.
ಸ್ಪರ್ಧೆಗಳು ಆರಂಭವಾದುವು. ಬಂದಿದ್ದ ಹಲವರು ಬಹಳ ಉತ್ತಮವಾಗಿ ಹಾಡಿದರು. ಕೆಲವರು ಕರೋಕೆ ಟ್ರಾಕಿನ ಜೊತೆಯಲ್ಲಿ ಹಾಡಿದರೆ, ಕೆಲವರು ಹಾಗೆಯೇ ಹಾಡಿದರು. ಸ್ಪರ್ಧೆಗಳು ಆರಂಭವಾಗುವ ಮೊದಲು ಆಯೋಜಕರು ಇನ್ನೊಂದು ಘೋಷಣೆಯನ್ನು ಮಾಡಿದರು “ಉತ್ತಮವಾಗಿ ಹಾಡುವ ಆರು ಜನರನ್ನು ಆಯ್ಕೆ ಮಾಡುತ್ತೇವೆ. ಅವರು ಸಂಜೆಯ ಕಾರ್ಯಕ್ರಮದಲ್ಲಿ ವಾದ್ಯವೃಂದದ (Orchestra) ಜೊತೆಯಲ್ಲಿ ಹಾಡಬೇಕಾಗುವುದು. ಆದ ಕಾರಣ ಬಂದಿರುವ ಎಲ್ಲಾ ಸ್ಪರ್ಧಿಗಳು ಆಯ್ಕೆ ಪ್ರಕ್ರಿಯೆ ಮುಗಿಯುವವರೆಗೆ ಕಡ್ಡಾಯವಾಗಿ ಹಾಜರಿರಬೇಕು. ಒಂದು ವೇಳೆ ಆಯ್ಕೆಯಾದರೆ ಸಂಜೆ ಯಾವ ಹಾಡು ಹಾಡುವಿರೆಂದು ಹೇಳಿ ಮನೆಗೆ ಹೋಗಬೇಕು”.ಎಲ್ಲಾ ಸ್ಪರ್ಧಿಗಳು ಹಾಡಿ ಮುಗಿದಾಗ ಮಧ್ಯಾಹ್ಣ ಒಂದು ಘಂಟೆ. ಹತ್ತು ನಿಮಿಷಗಳ ಬಳಿಕ ಫಲಿತಾಂಶ ಹೇಳಿದಾಗ, ನಾಲ್ಕು ಮಕ್ಕಳನ್ನು ಹಾಗೂ 18 ವರ್ಷ ಮೇಲ್ಪಟ್ಟ ಇಬ್ಬರನ್ನು ಆರಿಸಿದ್ದರು. ನನ್ನಿಬ್ಬರು ಮಕ್ಕಳು ಆಯ್ಕೆಯಾಗಿದ್ದರು.
ಮನೆಗೆ ಬಂದು ಸ್ವಲ್ಪ ವಿಶ್ರಾಂತಿ ಪಡೆದು, ಆಯೋಜಕರ ಸೂಚನೆಯಂತೆ ಸಂಜೆ ಐದು ಘಂಟೆಗೆ ಹಾಜರಾದೆವು. ಸ್ಪರ್ಧೆಗಳು ಆರಂಭಗೊಂಡಾಗ ಸಂಜೆ ಆರೂವರೆಯಾಗಿತ್ತು. ನಾಲ್ಕು ಮಕ್ಕಳು ವಾದ್ಯವೃಂದದ ಜೊತೆಯಲ್ಲಿ ಅಭ್ಯಾಸ ಮಾಡದೆಯೂ ಚೆನ್ನಾಗಿ ಹಾಡಿದರು. ಆದರೆ ಹದಿನೆಂಟು ವರ್ಷ ಮೇಲ್ಪಟ್ಟ ಸ್ಪರ್ಧಿಗಳಲ್ಲಿ ಒಬ್ಬ ಯುವಕನಿಗೆ ವಾದ್ಯವೃಂದದವರ ಜೊತೆಯಲ್ಲಿ ಹಾಡಲಾಗದೇ, ವಾದ್ಯವೃಂದದವರು ಬಾರಿಸುವುದನ್ನು ಮಧ್ಯದಲ್ಲಿಯೇ ನಿಲ್ಲಿಸಿಬಿಟ್ಟರು. ಅಂತೂ ಸ್ಪರ್ಧೆ ಮುಗಿಯಿತು. ಅಷ್ಟು ಹೊತ್ತು ಅಲ್ಲಿದ್ದು, ಫಲಿತಾಂಶ ಕೇಳಿ ಹೋಗುವುದೇ ಉತ್ತಮ ಅಂತ ನಾವು ಕಾದೆವು. ಆ ನಡುವೆ ಗಂಡನಿಗೆ ಫೋನಾಯಿಸಿ “ಮಕ್ಕಳಿಬ್ಬರೂ ಚೆನ್ನಾಗಿ ಹಾಡಿದ್ದಾರೆ. ಒಬ್ಬರಿಗಾದರೂ ಬಹುಮಾನ ಬರಬಹುದು ಅನ್ನುವ ನಿರೀಕ್ಷೆ. ನಾವು ಬರುವಾಗ ತಡ ಆಗಬಹುದು” ಅಂದಿದ್ದೆ. ಆ ಸ್ಪರ್ಧೆಯ ನಿರ್ಣಾಯಕರಾಗಿ ಬಂದಿದ್ದವರು ಹಾಡಲೇಬೇಕು ಅನ್ನುವ ಒತ್ತಾಯ ಜನರಿಂದ ಬಂದಾಗ, ನಿರ್ಣಾಯಕರಿಬ್ಬರು ಹಾಡಬೇಕಾಯ್ತು. ಒಂದು ನಿರ್ಣಾಯಕಿ ಆ ಬ್ಯಾಂಕಿನ ಉದ್ಯೋಗಿಯೊಬ್ಬರ ಪತ್ನಿ ಎಂಬುದು ಗೊತ್ತಾಯಿತು. ಅವರು ಹಾಡಿದ ಹಾಡು ಶ್ರುತಿಯಲ್ಲಿಯೇ ಇರಲಿಲ್ಲ ಹಾಗೂ ತುಂಬಾ ನೀರಸವಾಗಿತ್ತು.
ಕೊನೆಗೂ ಫಲಿತಾಂಶ ಘೋಷಣೆಯಾದಾಗ ಗೊತ್ತಾಗಿದ್ದು ವಾದ್ಯವೃಂದದ ಜೊತೆ ಹಾಡಲಿಕ್ಕಾಗದೆ ಕಂಗಾಲಾಗಿದ್ದ ಯುವಕನಿಗೆ ದ್ವಿತೀಯ ಬಹುಮಾನ, ಇನ್ನೊಂದು ಹತ್ತು ವರ್ಷದ ಹುಡುಗಿಗೆ ಪ್ರಥಮ ಬಹುಮಾನ. ಉಳಿದ ಪೋಷಕರು ಹಾಗೂ ಅಲ್ಲಿದ್ದ ಪ್ರೇಕ್ಷಕರಿಗೂ ನಿರಾಸೆ ಆಗಿತ್ತು. ಕೆಲವರಂತೂ ನನ್ನ ಬಳಿ ಬಂದು, “ಇದೇನು ಅನ್ಯಾಯ. ಮಕ್ಕಳಿಗೆ ಈ ತರಹ ಅನ್ಯಾಯ ಮಾಡೋದಾ. ಸೀದಾ ಸ್ಟೇಜಿಗೆ ಹೋಗಿ ಕೇಳಿ” ಅಂದರು. ನನ್ನಿಬ್ಬರು ಮಕ್ಕಳಿಗೂ ಚಿಕ್ಕಂದಿನಲ್ಲಿಯೇ ನಾನು ಹೇಳಿಕೊಟ್ಟಿದ್ದೆ “ಭಾಗವಹಿಸುವುದು ಮುಖ್ಯ. ಬಹುಮಾನ ಬರದಿದ್ದರೆ ಬೇಸರ ಪಡಬಾರದು” ಎಂದು. ಆದರೂ, ಅಂದಿನ ಫಲಿತಾಂಶ ನ್ಯಾಯಸಮ್ಮತವಾಗಿರಲಿಲ್ಲ. ಕಣ್ಣೆದುರಲ್ಲೇ ಅಂತಹ ಅನ್ಯಾಯ ನಡೆದಾಗ, ನನಗೆ ಸಹಿಸಲಾಗಲಿಲ್ಲ. ಆದರೂ ಏನೂ ಮಾತನಾಡದೆ ಅಲ್ಲಿಂದ ನಮ್ಮ ಕಾರಿನ ಬಳಿ ಬರುವಾಗ ಮಹಿಳಾ ತೀರ್ಪುಗಾರರು ಎದುರು ಸಿಕ್ಕಿ “ಮಕ್ಕಳು ಚೆನ್ನಾಗಿ ಹಾಡಿದ್ದಾರೆ” ಅಂದರು. ನನಗೆ ತಡೆಯಲಾಗದೆ ಅಂದುಬಿಟ್ಟೆ “ಇವತ್ತು ನೀವು ಮಾಡಿದ್ದು ಸಂಗೀತ ಶಾರದೆಯ ಕೊಲೆ”. ಆಗ ಅವರು ಹೇಳಿದ ಮಾತು “ಮಕ್ಕಳಲ್ವಾ, ಈಗ ಸೋತರೆ ಮುಂದೆ ಗೆಲ್ತಾರೆ”. ನಾನು ಹೇಳಿದೆ “ಸೋಲು ಸೋಲಿನ ಹಾಗೆ ಇರಬೇಕು. ಗೆಲ್ಲಬೇಕಾದವರನ್ನು ತೀರ್ಪುಗಾರರೇ ಸೋಲಿಸಿದರೆ ಏನೂ ಮಾಡಲು ಸಾಧ್ಯವಿಲ್ಲ”. ಅವರೇನೂ ಮಾತನಾಡಲಿಲ್ಲ.
ಇಂತಹ ಕಹಿ ಅನುಭವಗಳು ಅದೆಷ್ಟೋ ನಮಗಾಗಿವೆ. ಹಾಗೆಯೇ ಸುಮಾರು ಕಡೆ ನಿಷ್ಪಕ್ಷಪಾತ ಫಲಿತಾಂಶಗಳು ಬಂದಿವೆ. ಹಾಡುವ ಸ್ಪರ್ಧೆಗಳಿಗೆ ನಾನು ತೀರ್ಪುಗಾರಳಾಗಿ ಹೋದಾಗ ಸಹ ತೀರ್ಪುಗಾರರು ಮಾಡುವ ಪಕ್ಷಪಾತ ಧೋರಣೆಯನ್ನು ಕಂಡಿದ್ದೇನೆ. ಇನ್ನೊಮ್ಮೆ ಒಂದು ಕೊಳಲುವಾದನ ಸ್ಪರ್ಧೆಯನ್ನು ಸಂಘಟಿಸುವಾಗ ನೋಡಿದ ವಿಷಯ. ಯುವ ಕೊಳಲುವಾದಕನೊಬ್ಬನು ತೀರ್ಪುಗಾರನಾಗಿ ಬಂದಿದ್ದ. ಅಲ್ಲಿ ಸ್ಪರ್ಧಿಯಾಗಿ ಬಂದಿದ್ದ ಒಬ್ಬ ಹುಡುಗ (ಅವನು ಪ್ರಸಿದ್ಧಿಗೆ ಬರುತ್ತಿದ್ದ) ಚೆನ್ನಾಗಿ ಬಾರಿಸಿದರೂ ಅವನಿಗೆ ಕಡಿಮೆ ಅಂಕಗಳನ್ನು ನೀಡಿ ಆಗಷ್ಟೇ ಕೊಳಲು ಅಭ್ಯಾಸ ಆರಂಭ ಮಾಡಿದ್ದ ಇನ್ನೊಂದು ಹುಡುಗಿಗೆ ಜಾಸ್ತಿ ಅಂಕ ನೀಡಿದ್ದ. ಬರೆಯಲು ಹೋದರೆ ಅನುಭವಗಳ ಬುತ್ತಿ ಖಾಲಿಯಾಗದಷ್ಟಿದೆ. ಆದರೂ ಯಾವುದೇ ಸ್ಪರ್ಧೆಗಳ ಸಂಘಟಕರು ಹೇಳುವ ವಾಕ್ಯ ಒಂದೇ “ಸಂಘಟಕರ ತೀರ್ಮಾನವೇ ಅಂತಿಮ”. ಪರದೆಯ ಹಿಂದೆ ನಡೆಯುವ ಆಟಗಳು, ಗೋಲ್ಮಾಲುಗಳು ಕೆಲವರಿಗೆ ಮಾತ್ರ ಗೊತ್ತಿರುತ್ತದೆ.
-ಡಾ.ಕೃಷ್ಣಪ್ರಭಾ, ಮಂಗಳೂರು
ಹೌದು ಮೇಡಂ, ಬಹಳಷ್ಟು ಕಡೆ ಇವತ್ತಿಗೂ ಇದೆ ಪರಿಸ್ಥಿತಿ , ಆದರೆ ನೀವು ಮಕ್ಕಳಿಗೆ ಹೇಳಿ ಕೊಟ್ಟ ಸ್ಪರ್ಧೆಯಲ್ಲಿ ಗೆಲ್ಲುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಅನ್ನುವ ಪಾಠ ಪ್ರಶಂಸನೀಯ.
Nayana Bajakudlu ಹೆತ್ತ ಮಕ್ಕಳಿಗೂ, ವಿದ್ಯೆ ಕಲಿಸುವ ವಿದ್ಯಾರ್ಥಿಗಳಿಗೂ ನಾನು ಹೇಳುವ ಮಾತು ಇದೇ.. ಶೂನ್ಯ ಅಂಕ ತೆಗೆದ ವಿದ್ಯಾರ್ಥಿಯನ್ನು ಸಹಾ ದಡ್ಡ ಎಂದು ಪರಿಗಣಿಸುವುದಿಲ್ಲ
ಪಕ್ಷಪಾತ ಮತ್ತು ಪೂರ್ವನಿಗದಿತ ಫಲಿತಾಂಶಗಳಿಂದ ಅಸಲಿ ಪ್ರತಿಭೆಗಳು ಮೂಲೆಗುಂಪಗುತ್ತಿರುವುದು ವಿಷಾದನೀಯ..ಇವುಗಳನ್ನು ನಿಮ್ಮ ಸ್ವಾನುಭವದ ಉದಾಹರಣೆಯ ಮೂಲಕ ಲೇಖನದಲ್ಲಿ ಉತ್ತಮವಾಗಿ ತಿಳಿಸಿದ್ದೀರಿ ಮೇಡಮ್
ನಿಜ…ಕಹಿ ಅನುಭವಗಳು ಆಗಾಗ ಮರುಕಳಿಸಿದರೆ, ಕೆಲವು ಮಕ್ಕಳು ಆಸಕ್ತಿ ಕಳೆದುಕೊಂಡು ಬಿಡುತ್ತಾರೆ
Nija … Nanagu anubhavavagidhe Krishna prabha Avare .. super article..
Thank you Geetha…
The one who wins without troubles : is just victory. The one who wins with lot of troubles: creates history. Don’t worry madam. It happens.
It has happened 10 years back…What you said is true…Thank you for compliments
SUPER
ಸಮಾಜದ ಹೊಲಸುಗಳಲ್ಲಿ ಇದೂ ಒಂದು. ಸಾಮಾನ್ಕಯರು ಕಣ್ಣಿದ್ದೂ ಕುರುಡರಾಗುವ ಪರಿಸ್ಥಿತಿ!