ಹುಟ್ಟಿದರು ಮಹಾತ್ಮಾ…!!

Share Button

*ಮಹಾತ್ಮಾ ಗಾಂಧೀಜಿಯವರು ಹುಟ್ಟಿದ ದಿನ 1869 ಅಕ್ಟೋಬರ್ 2 ಅಲ್ಲ, 1893 ಜೂನ್6*  ಎಂದು ಹಿರಿಯ ಚಿಂತಕರಾದ ಲಕ್ಷೀಶ ತೋಳ್ಪಾಡಿಯವರು *ಬಹುವಚನಂ*ನಲ್ಲಿಯ, ಅವರ ಗಾಂಧಿ-150 ವಿಶೇಷ ಉಪನ್ಯಾಸದಲ್ಲಿ ಹೇಳಿದಾಗ, ಎಲ್ಲರಿಗೂ ಆಶ್ಚರ್ಯ! ತೋಳ್ಪಾಡಿಯವರು ಎಂದೂ ತಪ್ಪು ಮಾತಾಡುವವರಲ್ಲ..ಇದು ಹೇಗೆಂದು ಕುತೂಹಲ. ಇದರ ಹಿನ್ನೆಲೆಯನ್ನು ಅವರು ಈ ರೀತಿ ವಿವರಿಸಿದರು.

1865ರಲ್ಲಿ ಅಮೇರಿಕದಲ್ಲಿ ನೀಗ್ರೋ ಜನಾಂಗದವರ ಗುಲಾಮಗಿರಿ ನಿಷೇಧದ ಬಗ್ಗೆ ಕಾನೂನು ಜಾರಿಯಾಗಿತ್ತು.1873ರಲ್ಲಿ ಪುಣೆಯ ಜ್ಯೋತಿರಾವ ಪುಳೆಯವರು ಈ ಬಗ್ಗೆ ಬರೆದ ಪುಸ್ತಕ *Slavery* ಪ್ರಕಟವಾಗಿ ಪ್ರಸಿದ್ಧವಾಯಿತು.ಆ ದಿನಗಳಲ್ಲಿ ನಮ್ಮ ದೇಶವು ಅತ್ಯಂತ ಬಡತನದ ದೇಶವೆಂದು ತಿಳಿಯಲಾಗಿತ್ತು. ಆದರೆ ನಮ್ಮ ದೇಶ ಶ್ರೀಮಂತವಾಗಿಲ್ಲದಿದ್ದರೆ ನೂರಾರು ಸಲ ಹೊರಗಿನವರ ಆಕ್ರಮಣಕ್ಕೇಕೆ ಒಳಗಾಗುತ್ತಿತ್ತು? ಹೊರಗಿನವರ ಆಕ್ರಮಣದಿಂದಲೇ ಅಲ್ಲವೇ ದೇಶ ಜರ್ಜರಿತವಾದುದು? ಈ ದೇಶದಿಂದ ಕೊಳ್ಳೆಹೊಡೆದ ಸಂಪತ್ತಿನಿಂದಲೇ ಅಲ್ಲವೇ ಬ್ರಿಟಿಷರು ಶ್ರೀಮಂತರಾಗಿರುವುದು? ಅದರ ತಿಳುವಳಿಕೆ ಇಲ್ಲದ ಇಲ್ಲಿಯ ಜನ, ಮುಂದುವರಿದ ಶ್ರೀಮಂತ ರಾಷ್ಟ್ರವೆಂದು ಅಮೇರಿಕ ಕಡೆ ಮುಖ ಮಾಡಿದರು. ಅದು ಅಂದೂ ಹಾಗೆ..ಇಂದೂ ಹಾಗೆ. ಪಶ್ಚಿಮ ದೇಶಗಳ ಕನಸು ಎಲ್ಲರಲ್ಲೂ ಇದೆ. ಮಹಾನ್  ಸಂತ ಸ್ವಾಮಿ ವಿವೇಕಾನಂದರನ್ನೂ ಅದು ಬಿಟ್ಟಿರಲಿಲ್ಲ. ಪಶ್ಚಿಮ ಮತ್ತು ಪೂರ್ವ ದೇಶಗಳ ಬಗ್ಗೆ ಸಮಾನ ಅಭಿಮಾನಿಯಾಗಿದ್ದ ಅವರು, ಪಾಶ್ಚಿಮಾತ್ಯ ರಾಷ್ಟ್ರಗಳಿಗೆ, ನಮ್ಮ ದೇಶದ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಲು ಕರೆ ನೀಡಿದರೆ, ನಮ್ಮ ದೇಶದವರಿಗೆ ಪಾಶ್ಚಿಮಾತ್ಯರ ವೈಜ್ಞಾನಿಕತೆಯನ್ನು ಕಲಿತು ಅಳವಡಿಸಿಕೊಳ್ಳುವ ಮಹತ್ತತೆಯನ್ನು ವಿವರಿಸುತ್ತಿದ್ದರು.

ಇವುಗಳೆಲ್ಲದರ ನಡುವೆ, ವಿಚಿತ್ರವೆಂಬಂತೆ, ಜರ್ಮನಿಯ ಪ್ರಸಿದ್ಧ ಭಾಷಾ ಶಾಸ್ರಜ್ಞ ಮ್ಯಾಕ್ಸ್ ಮುಲ್ಲರ್, ನಮ್ಮಲ್ಲಿನ ಆಧ್ಯಾತ್ಮದ ಆಳಕ್ಕಿಳಿದು, ಕೂಲಂಕುಷ ಆಧ್ಯಯನ ಮಾಡಿ, ವೇದಗಳನ್ನು ಇಂಗ್ಲಿಷ್ ಗೆ ಭಾಷಾಂತರಿಸಿದರು. ಇದು ತುಂಬಾ ಮೆಚ್ಚುಗೆಯ ವಿಷಯವೇನೋ ಹೌದು. ಆದರೆ ಒಳಗುಟ್ಟು ಮಾತ್ರ ಬೇರೆಯೇ ಇತ್ತು. 1865ರಲ್ಲಿ, ಅವರು ಸೆಕ್ರೆಟರಿ ಆಫ್ ಸ್ಟೇಟ್ ಗೆ ಒಂದು ಪತ್ರ ಬರೆಯುತ್ತಾರೆ..ಅದರರ್ಥ ಹೀಗಿದೆ.. “ಆಳವಾಗಿ ಇಳಿದಿರುವ ಭಾರತೀಯ ಧರ್ಮದ ಮೂಲ ಬೇರನ್ನು ಅಧ್ಯಯನ ಮಾಡಿರುವೆ, ಯಾಕೆಂದರೆ ಆ ಬೇರನ್ನು ಕಿತ್ತೊಗೆಯಲು. ಆ ದೇಶದಲ್ಲಿ ಹಿಂದೂ ಧರ್ಮ ಮುಳುಗುತ್ತಾ ಇದೆ.. ಕಾಲವೀಗ ಪಕ್ವವಾಗಿದೆ. ಆದ್ದರಿಂದ ಅಲ್ಲಿ ಕ್ರೈಸ್ತ ಧರ್ಮ ಹರಡಲು ಇದು ಸಕಾಲ!”

ಸಾಧಾರಣ 1874ರ ಸುಮಾರಿಗೆ, ಮಹಾನ್ ಅವಧೂತ ಶ್ರೀ ರಾಮಕೃಷ್ಣ ಪರಮಹಂಸರಿಗೆ ಒಮ್ಮೆ ಕ್ರೈಸ್ತ ಧರ್ಮದ ಬಗ್ಗೆ ಅಧ್ಯಯನ ಮಾಡಿ, ಸಾಧನೆ ಮಾಡುವ ಮನಸ್ಸಾಯಿತು. ಅದಕ್ಕಾಗಿ ಬೈಬಲ್ ನ್ನು ತರಿಸಿ ಅದನ್ನು ಇಂಗ್ಲಿಷ್ ನಿಂದ ಬಂಗಾಲಿ ಭಾಷೆಗೆ ಭಾಷಾಂತರಿಸಿ ಅಧ್ಯಯನ ಮಾಡಿದಾಗ ರೋಮಾಂಚನಗೊಂಡರಂತೆ!   ಏಸುಕ್ರಿಸ್ತನಲ್ಲಿ ತಮ್ಮ ಇಷ್ಟ ದೇವತೆ ಕಾಳಿಕಾದೇವಿಯನ್ನು ಕಂಡರು. ಒಮ್ಮೆ, ಒಬ್ಬರ ಮನೆಯಲ್ಲಿ ಮಾತೆ ಮೇರಿಯೊಂದಿಗಿರುವ ಬಾಲ ಏಸುವಿನ ಚಿತ್ರ ನೋಡಿ, ಭಾವಪೂರ್ಣರಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದರಂತೆ! ಅದನ್ನು ಕಂಡವರೊಬ್ಬರು, ಮೇಣದಬತ್ತಿ ಹೊತ್ತಿಸಲು ಸೂಚಿಸಿದ್ದೂ ಕಾಕತಾಳೀಯವಾಗಿರಬಹುದೇನೋ!

ಮೋಹನದಾಸ ಕರಮಚಂದ ಗಾಂಧಿಯವರು ವಕಾಲತ್ತು ಕಲಿತು, ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಅಭ್ಯಾಸವನ್ನು ಮಾಡುತ್ತಿದ್ದ ಕಾಲ. 1893 ಜೂನ್6ರಂದು, ಪ್ರಥಮ ದರ್ಜೆಯ ಟಿಕೇಟು ಪಡೆದು ಅಲ್ಲಿಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಬಿಳಿ ವರ್ಣೀಯನಾಗಿದ್ದ. ಗಾಂಧಿಯವರನ್ನು, ಕಪ್ಪು ವರ್ಣೀಯನೆಂದು, ಅಲ್ಲಿ ಕುಳಿತುಕೊಳ್ಳುವ ಯೋಗ್ಯತೆ ಅವರಿಗಿಲ್ಲವೆಂಬಂತೆ “ಇಳಿ ಕೆಳಗೆ” ಎಂದು ಘರ್ಜಿಸಿದ. ಗಾಂಧೀಜಿಯವರು ಮೌನವಾಗಿದ್ದರೂ, ಆಶ್ಚರ್ಯ ಚಕಿತರಾದರು. ತಾನೂ ಹಣ ತೆತ್ತು ಮೊದಲ ದರ್ಜೆಯ ಬೋಗಿಯಲ್ಲಿ ಕುಳಿತುಕೊಳ್ಳುವ ಅರ್ಹತೆ ಪಡೆದಿರುವಾಗ ಇವನದೇನು ಮಾತು ಎಂದುಕೊಂಡು ಸುಮ್ಮನಿದ್ದರು. ಎರಡು ಸಲ ಹಾಗೆಂದಾಗಲೂ ಗಾಂಧೀಜಿಯವರು ಏನೂ ಪ್ರತಿಕ್ರಿಯಸದಿದ್ದಾಗ ಅವನು ಕೋಪದಿಂದ ಗಾಂಧೀಜಿಯವರನ್ನು ರೈಲಿನಿಂದ ಹೊರಕ್ಕೆ ತಳ್ಳಿದನು. ಕಂಗೆಟ್ಟ ಪರಿಸ್ಥಿತಿ.. ಕಾಪಾಡುವವರಿಲ್ಲ, ಅರ್ಥ ಮಾಡಿಕೊಳ್ಳುವವರು ಮೊದಲೇ ಇಲ್ಲ. ಇಂತಹುದೆಲ್ಲ ಅಲ್ಲಿ ಸಾಮಾನ್ಯವಾಗಿತ್ತು. ಗಾಂಧೀಜಿಯವರು ಅಂತಹ ಅಸಹಾಯಕ ಪರಿಸ್ಥಿತಿಯಲ್ಲಿಯೂ ತೀವ್ರ ಯೋಚನೆಯಲ್ಲಿ ಮುಳುಗಿದರು. ಉತ್ಕಟ ನೋವುಂಟು ಮಾಡಿದ ಈ ಘಟನೆಯಿಂದಲೇ ನಿಜವಾದ *ಮಹಾತ್ಮ* ರೊಬ್ಬರ ಜನನವಾಯಿತು.  ಮಾನವ ಗುಣವನ್ನು ಮೂಲದಲ್ಲಿಯೇ ಹೇಗೆ ಸರಿಪಡಿಸಬಹುದೆಂಬುದರ ಬಗ್ಗೆ ಚಿಂತನೆ ಪ್ರಾರಂಭವಾಯಿತು.

ಎಲ್ಲದಕ್ಕೂ ಒಂದು ನಿಯಮವಿರುತ್ತದೆ.. ಮನೆಯ ಯಜಮಾನನಾದರೂ ತನ್ನ ಮನೆಗೆ ಮುಂಬಾಗಿಲಿನಿಂದಲೇ ಹೋಗಬೇಕೇ ವಿನಃ ಮನೆ ಹಿಂದಿನ ಗೋಡೆಯನ್ನು ಹಾರಿ ಹೋಗುವುದು ಸರಿಯಲ್ಲ.. ಅದು ಅಕ್ರಮ ಪ್ರವೇಶವೆನಿಸುತ್ತದೆ.  ದಬ್ಬಾಳಿಕೆ ಮಾಡುವವನನ್ನು ಬದಲಾಯಿಸುವುದು ಹೇಗೆ? ದ್ವೇಷದಿಂದ ಸಾಧಿಸಲು ಸಾಧ್ಯವಿಲ್ಲವೆಂಬುದು ಅವರ ತರ್ಕ. ಗಾಂಧೀಜಿಯವರು, ತಮ್ಮ ನಡೆ ನುಡಿಗಳನ್ನು ಯಾವದಕ್ಕೂ ರಾಜಿ ಮಾಡಿಕೊಂಡವರಲ್ಲ. ಅಪಮಾನ ಹೊಂದಿದಾಗಲೇ ನೈತಿಕ ಕರ್ತವ್ಯ ಜಾಗೃತವಾಗುವುದು..ಅಂತೆಯೇ ಗಾಂಧೀಜಿಯವರ ಮನದಲ್ಲೂ ಆ ಪ್ರಜ್ಞೆ ಜಾಗೃತವಾಯಿತು. ವರ್ಗ ಕಲಹವೇ ಇತಿಹಾಸದ ಮುಖ್ಯ ಕೇಂದ್ರ. ಮಹಾಭಾರತ ಯುದ್ಧ ನಡೆದಾಗ, ಕೃಷ್ಣ ಅರ್ಜುನನ ಕಾರ್ಯಗಳಿಗೆ  ಒಂದಕ್ಕಿಂತ ಹೆಚ್ಚು ಮಾರ್ಗಗಳನ್ನು ತೋರಿದಾಗ, ಅರ್ಜುನನಿಗೆ ಗೊಂದಲವಾಗಿ, ಯಾವುದಾದರೂ ಒಂದೇ ಮಾರ್ಗವನ್ನು ಸೂಚಿಸುವಂತೆ ಬೇಡುವನು. ಆಗ ಕೃಷ್ಣನು ಅರ್ಜುನನಿಗೆ, ತಾನೇ ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವಂತೆ ಹೇಳುವನು.

ಹಾಗೆಯೇ ಗಾಂಧೀಜಿಯವರು, ತನ್ನದೇ ಮಾರ್ಗವನ್ನು ತೀರ್ಮಾನಿಸಿ, *ಏಸುವಿನಂತೆ ನೋವು ತಿಂದರೆ ಮಾತ್ರ ಸರಿ, ದೀನರ ಜೀವನವೇ ನಿಜವಾದ ಸತ್ಯ* , ಎಂದು ನಿಶ್ಚೈಸಿದರು. ಅವರು ಸದಾ ನಿರ್ಭಯರು..ಯಾರಿಗೂ, ಯಾವುದಕ್ಕೂ ಭಯ ಪಡುವವರಲ್ಲ. ಸತ್ಯವು ಹೆಚ್ಚಾಗಿ ಜಡವಾಗಿರುತ್ತದೆ..ಇದು ವಿಚಿತ್ರವೆನಿಸಿದರೂ ಸತ್ಯ! ಸತ್ಯವನ್ನು ಪ್ರಯೋಗಕ್ಕೆ ಒಡ್ಡಿದರೆ ಮಾತ್ರ ಕ್ರಿಯಾಶೀಲವಾಗುತ್ತದೆ. ಅಲ್ಲಿಂದಲೇ ಪ್ರಾರಂಭವಾಯಿತು ಅವರ ಮಹಾನ್ ಕೃತಿ, *My Experiments with truth..ಸತ್ಯ ಶೋಧನೆ* ಯೇ ಅವರ ಮುಂದಿನ ಗುರಿಯಾಗಿತ್ತು. ವಿಜ್ಞಾನದಲ್ಲಿ ಇಲಿಯಂತಹ ಜೀವಿಗಳ ಮೇಲೆ ಪ್ರಯೋಗ ಮಾಡಿ ಸತ್ಯ ಶೋಧನೆಯನ್ನು ಮಾಡಿದರೆ, ಆಧ್ಯಾತ್ಮದಲ್ಲಿ ತಮ್ಮ ಮೇಲೆಯೇ ಪ್ರಯೋಗ.. ತಮಗೆ ತಾವೇ ಪ್ರಯೋಗ ಪಶುಗಳು. ಬಹು ಚಿಕ್ಕ ಉದಾಹರಣೆಯೆಂದರೆ, ನಮ್ಮ ಜಿಹ್ವಾ ಚಾಪಲ್ಯವನ್ನು ಉಪವಾಸದಿಂದ ಮಾತ್ರ ಗೆಲ್ಲಬಹುದು. ಇದನ್ನು ಗಾಂಧೀಜಿಯವರು ತಮ್ಮ ಇಪ್ಪತ್ತೆಂಟು ದಿನಗಳ ಉಪವಾಸ ಸತ್ಯಾಗ್ರಹದಲ್ಲಿ ಕಂಡುಕೊಂಡರು.

ಗಾಂಧೀಜಿಯವರ ಭೌತಿಕ ಶರೀರವು ಜನ್ಮ ತಾಳಿದ ದಿನವಾದ ಅಕ್ಟೋಬರ್ 2ನ್ನು, ಅವರ ಹುಟ್ಟು ಹಬ್ಬವಾಗಿ, ಪ್ರತೀ ವರುಷ  ವಿಶೇಷ ರೀತಿಯಲ್ಲಿ ಎಲ್ಲಾ ಕಡೆ ಆಚರಿಸುವುದು ರೂಢಿ. ಆದರೆ ಮಹಾತ್ಮರೊಬ್ಬರ ಜನ್ಮದಿನವನ್ನು ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆದು , ಸಫಲತೆಯನ್ನು ಪಡೆದರೆ ಮಾತ್ರ, ಅವರ ಜೀವನದಿಂದ ಪಾಠ ಕಲಿತ ಸಾರ್ಥಕ್ಯ ಭಾವ ಮೂಡಬಹುದು. ಸತ್ಯ ಶೋಧನೆ ಸುಲಭವಲ್ಲ.. ಹಾಗೆಯೇ ಅಸಾಧ್ಯವೂ ಅಲ್ಲ, ನಮ್ಮಲ್ಲಿ ಮಾನಸಿಕ ದೃಢತೆ ಇದ್ದರೆ.

(ಮಾಹಿತಿ ಕೃಪೆ: ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರ ಉಪನ್ಯಾಸದ ಸಾರ ಸಂಗ್ರಹ)

-ಶಂಕರಿ ಶರ್ಮ, ಪುತ್ತೂರು.

2 Responses

  1. ನಯನ ಬಜಕೂಡ್ಲು says:

    ಉತ್ತಮ ಮಾರ್ಗದರ್ಶನ, ಪಾಠಗಳನ್ನೊಳಗೊಡಂತಹ ಬರಹ .

  2. Shankari Sharma says:

    ಧನ್ಯವಾದಗಳು ನಿಮಗೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: